ಜಪಾನಿಯರು ಅತ್ಯಂತ ವಿನಯಶೀಲರು, ಸುಸಂಸ್ಕೃತರು ಎಂಬುದು ಗೊತ್ತಿತ್ತು. ನೈತಿಕತೆ, ಶಿಷ್ಟಾಚಾರ ಮತ್ತು ಪರಸ್ಪರ ಗೌರವಕ್ಕೆ ವಿಶೇಷ ಮಹತ್ವ ನೀಡುವವರು ಎಂಬುದು ಸಹ ತಿಳಿದಿತ್ತು. ಆದರೆ ತಮ್ಮಿಂದಾಗುವ ತಪ್ಪುಗಳಿಗೆ ಪದೇ ಪದೆ ಕ್ಷಮೆಯಾಚಿಸುವ ‘ಸೀತಾಪತಿ’ ಮನೋಭಾವದವರು ಎಂಬುದು ಗೊತ್ತಿರಲಿಲ್ಲ.
ಜಪಾನಿಯರು ಕ್ಷಮೆಯಾಚನೆ (Apology)ಗೆ ಅತ್ಯಂತ ಪ್ರಾಮುಖ್ಯ ನೀಡುವವರು. ತಮ್ಮಿಂ ದಾದ ಸಣ್ಣ ತಪ್ಪಿಗೂ ಅತೀವ ವಾಗಿ ನೊಂದುಕೊಳ್ಳುವ ಸ್ವಭಾವದವರು. ಅವರಿಗೆ ‘ತಪ್ಪಾ ಯ್ತು, ಮನ್ನಿಸಿ’ ಎಂದು ಒಂದು ಸಲ ಹೇಳಿದರೆ ಸಮಾಧಾನವಾಗುವುದಿಲ್ಲ. ಪದೇ ಪದೆ ಹೇಳಿದಾಗಲೇ ಸಂತೃಪ್ತಿ. ಜಪಾನಿಯರ ಸಂಸ್ಕೃತಿಯಲ್ಲಿ, ಕ್ಷಮಾಯಾಚನೆ ಒಬ್ಬ ವ್ಯಕ್ತಿಯ ನೈತಿಕತೆ, ಶ್ರದ್ಧೆ, ವಿಶ್ವಾಸ ಮತ್ತು ಹೊಣೆಗಾರಿಕೆಯನ್ನು ತೋರಿಸುವ ಸಂಕೇತ.
ಇದನ್ನೂ ಓದಿ: Vishweshwar Bhat Column: ಗಂಡನನ್ನು ಹೇಗೆ ಕರೆಯುವುದು ?
ಈ ಕಾರಣದಿಂದ ಆ ದೇಶದ ಜನರು ಸುಮಾರು 20 ಬೇರೆ ಬೇರೆ ರೀತಿಗಳಲ್ಲಿ ಕ್ಷಮೆಯಾಚಿಸು ತ್ತಾರೆ. ‘ಸೊಮಿಮಸೆನ್’ ( Sumimasen ) ಎಂಬುದು ಸಾಮಾನ್ಯ ಕ್ಷಮೆಯಾಚನೆ ಪದ ವಾಗಿದೆ. ಇದು ಕ್ಷಮಿ ಸಿರಿ ಅಥವಾ ಕ್ಷಮಿಸಿ ಎಂಬ ಅರ್ಥ ಹೊಂದಿದೆ. ನಮ್ಮಲ್ಲಿ sorry ಎಂದು ಹೇಳಿದಂತೆ.
ದೈನಂದಿನ ಸಾಮಾನ್ಯ ಪರಿಸ್ಥಿತಿಯಲ್ಲಿ, ಉದಾಹರಣೆಗೆ, ಯಾರಿಗಾದರೂ ಅಜಾಗರೂಕತೆ ಯಿಂದ ತೊಂದರೆಯಾದರೆ, ಆ ಪದವನ್ನು ಬಳಸುತ್ತಾರೆ. ‘ಸೊಮಿಮಸೆನ್’ ಎಂದು ಹೇಳಿ ದರೂ ಸಮಾಧಾನ ವಾಗದಿದ್ದರೆ, ಗೊಮೆನ್ನಸೈ ( Gomen Nasai ) ಅಂತ ಹೇಳುತ್ತಾರೆ. ಹೀಗಂದರೆ ‘ನಾನು ಅತ್ಯಂತ ವಿನೀತನಾಗಿ ಕ್ಷಮೆ ಕೇಳುತ್ತೇನೆ’ ಎಂದರ್ಥ. ಇದು ಆತ್ಮೀಯ ಸಂಬಂಧಗಳಲ್ಲಿ ಬಳಸುವ ಮತ್ತು ಗಂಭೀರ ತಪ್ಪುಗಳನ್ನು ಒಪ್ಪಿಕೊಳ್ಳಲು ಬಳಸುವ ಪದ.
ಸ್ನೇಹಿತರು ಅಥವಾ ಪರಿಚಿತರು ತಮ್ಮ ನಡುವಿನ ಸಣ್ಣ-ಪುಟ್ಟ ತಪ್ಪುಗಳಿಗೆ ‘ಗೊಮೆನ್ನಸೈ’ ಎಂದು ಹೇಳುತ್ತಾ ಕ್ಷಮೆ ಯಾಚಿಸುತ್ತಾರೆ. ಆಫೀಸಿನಲ್ಲಿ ಮಾಡಿದ ತಪ್ಪುಗಳಿಗೆ ‘ಮೊಶಿವಕೇ ಅರಿಮಸೇನ್’ (MMshiwake Arimasen) ಎಂದು ಹೇಳಿ ಕ್ಷಮೆ ಯಾಚಿಸುತ್ತಾರೆ. ‘ಮೊಶಿ ವಕೇ ಗೊಮೆನ್ನಸೈ’ ಅಂದ್ರೆ ದೊಡ್ಡ ಪ್ರಮಾದ ಮಾಡಿದಾಗ ಹೇಳುವ ಅತ್ಯಂತ ವಿನೀತ ಪದ. ‘ನನ್ನಿಂದ ದೊಡ್ಡ ತಪ್ಪಾಗಿದೆ, ನಾನು ಅತ್ಯಂತ ಗಾಢ ಭಾವದಿಂದ ಕ್ಷಮೆ ಯಾಚಿಸು ತ್ತೇನೆ’ ಎಂಬ ಅರ್ಥವನ್ನು ಆ ಪದ ವ್ಯಕ್ತ ಪಡಿಸುತ್ತದೆ. ಅಸಭ್ಯ ವರ್ತನೆ ತೋರಿದಾಗ ‘ಶಿಟ್ಸುರೆ ಇಟಾಶಿಮಾಶಿತಾ’ ಎಂದು ಹೇಳುತ್ತಾರೆ. ಉದಾಹರಣೆಗೆ, ಏನಾದರೂ ಅಜಾಗರೂ ಕತೆಯಿಂದ ಯಾರಿಗಾದರೂ ತೊಂದರೆಯುಂಟು ಮಾಡಿ ದಾಗ, ತಪ್ಪು ಅರಿವಿಗೆ ಬಂದಾಕ್ಷಣ ಹಾಗೆ ಹೇಳುತ್ತಾರೆ. ‘ನನ್ನಿಂದ ತಪ್ಪಾಗಿದೆ, ಆದರೆ ನೀವು ನನ್ನನ್ನು ಕ್ಷಮಿಸಲೇ ಬೇಕು’ ಎಂದು ಗಟ್ಟಿಯಾಗಿ ಕ್ಷಮೆಯಾಚಿಸುವುದುಂಟು.
ಆಗ ‘ಒಯುರೆ ಇಟಾಶಿಮಾಸು’ ಅಂತಾರೆ. ಹೀಗೆ ಹೇಳಿದಾಗ ಕ್ಷಮಿಸದೇ ಬೇರೆ ಮಾರ್ಗವೇ ಇರುವು ದಿಲ್ಲ. ಯಾರಿಗಾದರೂ ಆಘಾತವನ್ನುಂಟು ಮಾಡಿದಾಗ ‘ಸೊರೇವಾ ಶಿಟ್ಸುರೆ ದೆಶಿತಾ’ ಎಂದು ಹೇಳುತ್ತಾರೆ. ‘ಸೂಮನ್’ ಅಂದ್ರೆ ಅಪ್ರಜ್ಞಾಪೂರ್ವಕವಾಗಿ ಆದ ತಪ್ಪಿಗೆ ಕ್ಷಮೆಯಾಚಿಸುವ ಪದ. ಅಧಿಕೃತ ವ್ಯಾಪಾರ- ವ್ಯವಹಾರಗಳಲ್ಲಿ ತಪ್ಪಾದಾಗ, ‘ಫುನ್ಕೀ’ ಎಂದು ಹೇಳುವುದುಂಟು.
ಸ್ನೇಹಿತನೊಬ್ಬ ಮಿತ್ರದ್ರೋಹದಂಥ ಗಂಭೀರ ಪ್ರಮಾದ ಎಸಗಿದರೆ ‘ಅಟಾಮಾ ಸಾಗೇರು’ ಅಂತಾರೆ. ಹಾಗೆ ಹೇಳಿ, ತಲೆ ತಗ್ಗಿಸುವುದು ವಾಡಿಕೆ. ಇದು ಗಂಭೀರ ಕ್ಷಮೆಯಾಚನೆಗೆ ಶ್ರದ್ಧೆ ಯಿಂದ ಬಳಸುವ ವಿಧಾನ. ದೈನಂದಿನ ಜೀವನದಲ್ಲಿ ಸಣ್ಣ-ಪುಟ್ಟ ಪ್ರಮಾದಗಳಾದಾಗ ‘ಉಕ್ಯೋ ’ ಎಂದು ಹೇಳುವು ದುಂಟು. ‘ಫುಮಾಂ’ ಎಂದರೆ ಅಸಮಾಧಾನಕ್ಕೆ ಸಂಬಂಧಿಸಿದ ಕ್ಷಮೆಯಾಚನೆ. ಅರಿಫೋಟೋ ನಮುಸ್’ ಅಂದರೆ ಒಂದಕ್ಕಿಂತ ಹೆಚ್ಚು ತಪ್ಪು ಮಾಡಿ ಸಿಕ್ಕಿ ಬಿದ್ದಾಗ ಅಥವಾ ತಪ್ಪಿನ ಅರಿವಾದಾಗ ಬಳಸುವ ಪದ.
ಜಪಾನಿನಲ್ಲಿ ಕ್ಷಮೆಯಾಚನೆಯೂ ಒಂದು ಮುಖ್ಯ ಕಸುಬು ಇರಬಹುದೇನೋ ಎಂಬಂತೆ ಭಾಸ ವಾದರೆ ಆಶ್ಚರ್ಯವಿಲ್ಲ. ಕೇವಲ ಶಬ್ದಗಳ ಮೂಲಕವೇ ಅಲ್ಲ, ಶಾರೀರಿಕ ಚಲನೆ ಗಳಿಂದಲೂ ಅವರು ಕ್ಷಮೆಯಾಚಿಸುತ್ತಾರೆ. ಇದರಿಂದ ಆ ದೇಶದ ನೈತಿಕತೆ ಮತ್ತು ಶಿಷ್ಟಾ ಚಾರವನ್ನು ಒಳಗೊಂಡ ಸಮೃದ್ಧ ಸಂಸ್ಕೃತಿಯ ದರ್ಶನವಾಗುವುದು ಮಾತ್ರ ನಿಜ.