64 ಗಂಟೆಗಳಲ್ಲಿ 1.20 ಲಕ್ಷ ಚ.ಅಡಿ ಕಟ್ಟಡ ನಿರ್ಮಾಣ!
ತುಮಕೂರು ಮೂಲದ ಮೌಂಟ್ ರೂಫಿಂಗ್ ಆ್ಯಂಡ್ ಸ್ಟ್ರಕ್ಚರ್ಸ್ ಕಂಪನಿಯು ಪಿಯುಎಫ್ ಪ್ಯಾನಲ್ ನಿರ್ಮಾಣ ಕಂಪನಿಯಾಗಿದ್ದು, ನಿರ್ಮಾಣ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳ ಸಂಶೋ ಧನೆಯಲ್ಲಿ ಮುಂಚೂಣಿಯಲ್ಲಿದೆ. ಕಂಪನಿಯ ಈ ವಿಶ್ವದಾಖಲೆಯು ಭವಿಷ್ಯದ ಜಾಗತಿಕ ನಿರ್ಮಾಣ ಕ್ಷೇತ್ರದಲ್ಲಿ ಪ್ರಭಾವ ಬೀರುವ ನಿರೀಕ್ಷೆ ಇದೆ.

-

* ತುಮಕೂರಿನ ಮೌಂಟ್ ರೂಫಿಂಗ್ ಆ್ಯಂಡ್ ಸ್ಟ್ರಕ್ಚರ್ಸ್ ಸಾಧನೆ
* 24 ಗಂಟೆಗಳಲ್ಲಿ 1.20 ಲಕ್ಷ ಚ.ಅಡಿ ಪಿಯುಎಫ್ ಪ್ಯಾನಲ್ ಉತ್ಪಾದನೆ.
* ಲಂಡನ್ ಸಂಸತ್ ನಲ್ಲಿ ಕರ್ನಾಟಕದ ಕಂಪನಿಗೆ ವಿಶ್ವ ದಾಖಲೆ ಗೌರವ
ಲಂಡನ್: ಕಟ್ಟಡವೊಂದರ ನಿರ್ಮಾಣ ಮಾಡಬೇಕು ಎಂದರೆ ಹಲವು ತಿಂಗಳು, ಕೆಲವು ಬಾರಿ ವರ್ಷಗಳೇ ಕಳೆಯುತ್ತವೆ. ಆದರೆ, ರಾಜ್ಯದ ಕಂಪನಿಯೊಂದು 64 ಗಂಟೆಗಳಲ್ಲಿ ಕಟ್ಟಡ ನಿರ್ಮಾಣ ಮಾಡಿ, ದಾಖಲೆ ಬರೆದಿದ್ದು, ವಿಶ್ವದ ಗಮನ ಸೆಳೆದಿದೆ.
ತುಮಕೂರಿನ ಮೌಂಟ್ ರೂಫಿಂಗ್ ಆ್ಯಂಡ್ ಸ್ಟ್ರಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು 64 ಗಂಟೆಗಳಲ್ಲಿ 1.20 ಲಕ್ಷ ಚದರ ಅಡಿ ಕಟ್ಟಡ ನಿರ್ಮಾಣ ಮಾಡಿ, ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದುಕೊಂಡಿದೆ.
ಲಂಡನ್‌ನ ಐತಿಹಾಸಿಕ ಯುಕೆ ಸಂಸತ್ ಭವನದಲ್ಲಿ ನಡೆದ 8ನೇ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನ ಭವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೌಂಟ್ ರೂಫಿಂಗ್ ಆ್ಯಂಡ್ ಸ್ಟ್ರಕ್ಚರ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶೇರ್ ಸಿಂಗ್ ಅವರಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.
ಉಗಾಂಡಾ ದೇಶದ ಉಪ ಪ್ರಧಾನಿ ರೆಬೆಕ್ಕಾ ಕಡಾಗಾ, ಇಂಧನ ಹಾಗೂ ಖನಿಜ ಅಭಿವೃದ್ಧಿ ಸಚಿವ ರೂತ್ ನಂಕಬಿರುವಾ, ಇಂಗ್ಲೆಂಡ್ ನ ಸಂಸದೀಯ ಸದಸ್ಯ ಲಾರ್ಡ್ ರಾಮೀ ರೇಂಜರ್, ಆಂಧ್ರಪ್ರದೇಶ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಲೋಕೇಶ್ ನಾರಾ ಇದ್ದರು.
ಇದನ್ನೂ ಓದಿ: Vishweshwar Bhat Column: ಅಂದು ಜತ್ತಿ ಹಾಗೆ ಯೋಚಿಸಿದ್ದರಾ ?
ವಿಶ್ವ ದಾಖಲೆ ಮಾಡಿದ್ದು ಹೇಗೆ..?
ಕಳೆದ ಮಾರ್ಚ್ ತಿಂಗಳಲ್ಲಿ ತುಮಕೂರು ಜಿಲ್ಲೆಯ ಶಿರಾದ ಕೈಗಾರಿಕಾ ಪ್ರದೇಶದಲ್ಲಿ ಕಂಪನಿಯು ಈ ಕಟ್ಟಡ ನಿರ್ಮಿಸಿದೆ. ಮಾರ್ಚ್ 22 ರಂದು ಐತಿಹಾಸಿಕ ದಾಖಲೆ ಕಟ್ಟಡ ನಿರ್ಮಾಣ ಪೂರ್ಣ ಗೊಂಡಿತು.
ಮೂರು ದಿನಗಳಿಗೂ ಮುಂಚೆ ಎಂದರೆ 64 ಗಂಟೆಗಳಲ್ಲಿ 1.20 ಲಕ್ಷ ಚದರ ಅಡಿ ಪ್ರೀ-ಎಂಜಿನಿಯರ್ಡ್ ಬಿಲ್ಡಿಂಗ್ (ಪಿಇಬಿ) ಕಟ್ಟಡ ನಿರ್ಮಿಸಲಾಯಿತು.
ಮಾತ್ರವಲ್ಲ 24 ಗಂಟೆಗಳಲ್ಲಿ ಪಾಲಿಯೂರಿತೇನ್ ಫೋಮ್ (PUF) ಪ್ಯಾನ್ ಗಳನ್ನು ನಿರ್ಮಿಸಲಾಯಿತು.
ಕೈಗಾರಿಕೆಯಲ್ಲಿ ಹೊಸ ಕ್ರಾಂತಿ
"ಪ್ರೀ-ಎಂಜಿನಿಯರ್ಡ್ ಬಿಲ್ಡಿಂಗ್ ತಂತ್ರಜ್ಞಾನವು ಕೈಗಾರಿಕಾ ನಿರ್ಮಾಣದಲ್ಲಿ ಹೊಸ ಕ್ರಾಂತಿ ತರಲಿದೆ. ಅದಕ್ಕೆ ನಮ್ಮ ಕಂಪನಿಯ ಈ ಸಾಧನೆ ಆರಂಭಿಕ ಹೆಜ್ಜೆಯಾಗಿದೆ" ಎಂದು ಮೌಂಟ್ ರೂಫಿಂಗ್ ಆ್ಯಂಡ್ ಸ್ಟ್ರಕ್ಚರ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶೇರ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"6 ಲಕ್ಷ ಚದರ ಮೀಟರ್ ವರೆಗೆ ಪ್ಯಾನಲ್ ತಯಾರಿಕಾ ಸಾಮರ್ಥ್ಯವನ್ನು ವಿಸ್ತರಿಸುತ್ತಿದ್ದೇವೆ. ಅದರಿಂದ ದೇಶದಾದ್ಯಂತ ಉದ್ದಿಮೆಗಳು ಮತ್ತು ಮೂಲಸೌಕರ್ಯ ಯೋಜನೆಗಳಿಗೆ ವೇಗವಾಗಿ ಪ್ಯಾನಲ್ ಗಳನ್ನು ಪೂರೈಸಲು ಸಾಧ್ಯವಾಗುತ್ತದೆ" ಎಂದಿದ್ದಾರೆ.
ಎಂ.ಬಿ.ಪಾಟೀಲ್ ಶ್ಲಾಘನೆ
ಮೌಂಟ್ ರೂಫಿಂಗ್ ಆ್ಯಂಡ್ ಸ್ಟ್ರಕ್ಚರ್ಸ್ ಕಂಪನಿಯ ಸಾಧನೆಯನ್ನುವ ರಾಜ್ಯ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಶ್ಲಾಘಿಸಿದ್ದಾರೆ.
“ಹೊಸ ತಂತ್ರಜ್ಞಾನ ಅಳವಡಿಕೆ ಹಾಗೂ ವೇಗದ ಮೂಲಸೌಕರ್ಯ ನಿರ್ಮಾಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಮೌಂಟ್ ರೂಫಿಂಗ್ ಸಾಧನೆ ನಮ್ಮ ರಾಜ್ಯದ ತಾಂತ್ರಿಕ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ ಎಂದಿದ್ದಾರೆ.
ಕಂಪನಿಯ ಬಗ್ಗೆ
ತುಮಕೂರು ಮೂಲದ ಮೌಂಟ್ ರೂಫಿಂಗ್ ಆ್ಯಂಡ್ ಸ್ಟ್ರಕ್ಚರ್ಸ್ ಕಂಪನಿಯು ಪಿಯುಎಫ್ ಪ್ಯಾನಲ್ ನಿರ್ಮಾಣ ಕಂಪನಿಯಾಗಿದ್ದು, ನಿರ್ಮಾಣ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳ ಸಂಶೋ ಧನೆಯಲ್ಲಿ ಮುಂಚೂಣಿಯಲ್ಲಿದೆ. ಕಂಪನಿಯ ಈ ವಿಶ್ವದಾಖಲೆಯು ಭವಿಷ್ಯದ ಜಾಗತಿಕ ನಿರ್ಮಾಣ ಕ್ಷೇತ್ರದಲ್ಲಿ ಪ್ರಭಾವ ಬೀರುವ ನಿರೀಕ್ಷೆ ಇದೆ. ನಿರ್ಮಾಣ ಕ್ಷೇತ್ರದಲ್ಲಿ, ವೇಗ, ಗುಣಮಟ್ಟದ ಕಾಮಗಾರಿ, ಪರಿಸರ ಸ್ನೇಹಿ ನಿರ್ಮಾಣ ಮತ್ತು ಸಂಪನ್ಮೂಲಗಳ ಸಮರ್ಪಕ ಬಳಕೆ ವಿಷಯದಲ್ಲಿ ಹೊಸ ಗುರುತನ್ನು ಛಾಪಿಸಲು ಈ ಸಾಧನೆ ಸಾಧ್ಯವಾಗಿದೆ.