ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Weather: ಕಡಿಮೆಯಾಯ್ತು ಹಿಂಗಾರು ಮಳೆ ಅಬ್ಬರ; ಹೆಚ್ಚಾಯ್ತು ಉಷ್ಣಾಂಶ

ಕರ್ನಾಟಕ ಹವಾಮಾನ ವರದಿ: ಶುಕ್ರವಾರ ರಾಜ್ಯಾದ್ಯಂತ ಮಳೆ ಬರುವ ಸಾಧ್ಯತೆ ತೀರಾ ಕಡಿಮೆ. ಇನ್ನು ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ಮಂಜು ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ರಾಜ್ಯಾದ್ಯಂತ ಕಡಿಮೆಯಾಯ್ತು ಹಿಂಗಾರು ಮಳೆ ಅಬ್ಬರ

ಸಾಂದರ್ಭಿಕ ಚಿತ್ರ -

Ramesh B
Ramesh B Nov 28, 2025 6:00 AM

ಬೆಂಗಳೂರು, ನ. 28: ರಾಜ್ಯದಲ್ಲಿ ಹಿಂಗಾರು ಮಳೆ ಅಬ್ಬರ ಕಡಿಮೆಯಾಗಿದ್ದು, ಬಹುತೇಕ ಎಲ್ಲ ಕಡೆ ಒಣ ಹವೆ (Karnataka Weather) ಕಂಡು ಬರುತ್ತಿದೆ. ಶುಕ್ರವಾರ (ನವೆಂಬರ್‌ 28) ಕೂಡ ಮಳೆ ಬರುವ ಸಾಧ್ಯತೆ ತೀರಾ ಕಡಿಮೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇನ್ನು ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ಮಂಜು ಬೀಳುವ ಸಾಧ್ಯತೆ ಇದೆ. ಕನಿಷ್ಠ ಮತ್ತು ಗರಿಷ್ಠ ತಾಪಮಾನ ಕ್ರಮವಾಗಿ 18°C ಹಾಗೂ 28°C ಇರಲಿದೆ.

ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಮಳೆ ಸಾಧ್ಯತೆ ಇಲ್ಲದ ಕಾರಣ ಮೀನುಗಾರರಿಗೆ ಯಾವುದೇ ಮುನ್ನೆಚ್ಚರಿಕೆ ನೀಡಲಾಗಿಲ್ಲ. ಮುಂದಿನ ಕೆಲವು ಗಂಟೆಗಳ ಕಾಲ ಕನಿಷ್ಠ ತಾಪಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳಿಲ್ಲ. ಮುಂದಿನ ದಿನಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆ ಇರುವ ಸಾಧ್ಯತೆ ಇದೆ ಎಂದು ಪ್ರಕಟಣೆ ತಿಳಿಸಿದೆ.

ತಮಿಳುನಾಡಿಗೆ ಎಚ್ಚರಿಕೆ

ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ ಸೆನ್ಯಾರ್ ಚಂಡಮಾರುತದ ಪರಿಣಾಮ ಭಾರತದಲ್ಲಿ ಗೋಚರಿಸುವ ಸಾಧ್ಯತೆ ಇದೆ. ತಮಿಳುನಾಡು, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ, ಆಂಧ್ರದ ಕರಾವಳಿ ಹಾಗೂ ಪುದುಚೇರಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ನವೆಂಬರ್‌ 27ರಂದು ಆರಂಭವಾಗುವ ಮಳೆ 28ರಂದೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ಕೆಲವು ದಿನಗಳ ವಾತಾವರಣದ ವಿವರ:



ಚಂಡಮಾರುತ ಕರ್ನಾಟಕದ ಮೇಲೆ ಪರಿಣಾಮ ಬೀರುತ್ತಾ?

ಡಿಸೆಂಬರ್ 1ರಿಂದ 4ರವರೆಗೆ ಕರಾವಳಿ ಕರ್ನಾಟಕ, ಉತ್ತರ ಕೇರಳ ಹಾಗೂ ತಮಿಳುನಾಡಿನ ಉತ್ತರ ಕರಾವಳಿ ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ವೇಳೆ ಗಾಳಿಯ ವೇಗ ಗಂಟೆಗೆ 50-60 ಕಿ.ಮೀ. ತಲುಪುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಭಾರತಕ್ಕೆ ಅಪ್ಪಳಿಸಲಿದೆ ಸೆನ್ಯಾರ್ ಚಂಡಮಾರುತ; ಭಾರಿ ಮಳೆಯ ಮುನ್ನೆಚ್ಚರಿಕೆ

ನಾಳೆ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ

ನವೆಂಬರ್‌ 29ರಂದು ಕರಾವಳಿ ಮತ್ತು ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆ ಇದೆ. ಹಾಗೆಯೇ ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಗುರುವಾರದ ವಾತಾವರಣ ಹೇಗಿತ್ತು?

ಇನ್ನು ಗುರುವಾರ ರಾಜ್ಯಾದ್ಯಂತ ಒಣ ಹವೆ ಕಂಡು ಬಂತು. ಕನಿಷ್ಠ ತಾಪಮಾನ ಬೀದರ್‌ ಮತ್ತು ವಿಜಯಪುರದಲ್ಲಿ 14°C ದಾಖಲಾಯಿತು. ರಾಜ್ಯದ ಬಹುತೇಕ ಕಡೆ ಮಂಜು ಮುಸುಕಿದ ವಾತಾವಣ ಇದ್ದರೆ, ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇತ್ತು. ಇನ್ನು ರಾಜ್ಯಾದ್ಯಂತ ಹಗಲು ಹೊತ್ತು ನಿಧಾನವಾಗಿ ಉಷ್ಣಾಂಶ ಏರಿಕೆಯಾಗುತ್ತಿದೆ.