ಬ್ರಿಸ್ಬೇನ್ ಟೆಸ್ಟ್‌ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಕಮ್ಮಿನ್ಸ್, ಹ್ಯಾಜಲ್‌ವುಡ್ ಅಲಭ್ಯ
Brisbane Test: ಐದು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದ್ದು, ಇನ್ನೂ ನಾಲ್ಕು ಟೆಸ್ಟ್ ಪಂದ್ಯಗಳು ಬಾಕಿ ಉಳಿದಿವೆ. ತಂಡವು ಭಾನುವಾರ (ನವೆಂಬರ್ 30) ಬ್ರಿಸ್ಬೇನ್‌ನಲ್ಲಿ ಅಭ್ಯಾಸ ಆರಂಭಿಸಲಿದೆ. ಎರಡನೇ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿದೆ.
ಕಮಿನ್ಸ್ ಮತ್ತು ಹ್ಯಾಜಲ್‌ವುಡ್ -
ಬ್ರಿಸ್ಬೇನ್, ನ.28: ಆಶಸ್ ಸರಣಿಯ(Ashes Test) ಎರಡನೇ ಟೆಸ್ಟ್(Brisbane Test) ಪಂದ್ಯಕ್ಕೆ ಆಸ್ಟ್ರೇಲಿಯಾ ಶುಕ್ರವಾರ ತನ್ನ ತಂಡವನ್ನು ಪ್ರಕಟಿಸಿದ್ದು ಯಾವುದೇ ಬದಲಾವಣೆ ಮಾಡಿಲ್ಲ. ಖಾಯಂ ನಾಯಕ ಪ್ಯಾಟ್ ಕಮಿನ್ಸ್(Pat Cummins) ಮತ್ತು ಜೋಶ್ ಹ್ಯಾಜಲ್‌ವುಡ್(Josh Hazlewood) ಈ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ. ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಟೀವನ್ ಸ್ಮಿತ್ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ.
ಕಮಿನ್ಸ್ ಈ ವಾರ ಸಿಡ್ನಿಯಲ್ಲಿ ಬೌಲಿಂಗ್ ಅಭ್ಯಾಸ ನಡೆಸಿದ್ದರು. ಆದರೆ ಟೆಸ್ಟ್‌ನಲ್ಲಿ ಭಾಗವಹಿಸಲು ಅವರು ಫಿಟ್ ಆಗಿಲ್ಲ ಎಂದು ಘೋಷಿಸಲಾಗಿದೆ. ಗಾಯಗಳಿಂದಾಗಿ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಸೀನ್ ಅಬಾಟ್ ಮತ್ತು ಜೋಶ್ ಹ್ಯಾಜಲ್‌ವುಡ್ ಕೂಡ ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಎರಡನೇ ಟೆಸ್ಟ್ ಡಿಸೆಂಬರ್ 4 ರಿಂದ ಆರಂಭವಾಗಲಿದ್ದು, ಕಮ್ಮಿನ್ಸ್ ತಮ್ಮ ಚೇತರಿಕೆ ಪ್ರಕ್ರಿಯೆಯನ್ನು ಚುರುಕುಗೊಳಿಸಲು ತಂಡದೊಂದಿಗೆ ಪ್ರಯಾಣಿಸಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಹೇಳಿಕೆ ತಿಳಿಸಿದೆ.
ಏತನ್ಮಧ್ಯೆ, ಉಸ್ಮಾನ್ ಖವಾಜಾ ಅವರ ಬೆನ್ನು ನೋವು ಮತ್ತು ಪರ್ತ್‌ನಲ್ಲಿ ನಡೆದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ರನ್ ಗಳಿಸಿದ್ದರೂ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಎಡವಟ್ಟಾಗಿ ಬಿದ್ದ ಕಾರಣ ಗಾಯ ಇನ್ನಷ್ಟು ಹದಗೆಟ್ಟ ನಂತರ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿರಲಿಲ್ಲ.
ಇದನ್ನೂ ಓದಿ IND vs SA: ರಾಂಚಿಯಲ್ಲಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ ಕೊಹ್ಲಿ, ರೋಹಿತ್
ಹೀಗಾಗಿ ಟ್ರಾವಿಸ್ ಹೆಡ್ ಅವರನ್ನು ಅಗ್ರ ಕ್ರಮಾಂಕಕ್ಕೆ ಬಡ್ತಿ ನೀಡಲು ಕಾರಣವಾಯಿತು. ಅವರು 83 ಎಸೆತಗಳಲ್ಲಿ 123 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಆದಾಗ್ಯೂ, ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಖವಾಜಾ ಅವರನ್ನು ಅಗ್ರ ಸ್ಥಾನದಲ್ಲೇ ಆಡಿಸಿ ಹೆಡ್ ಅವರನ್ನು 6 ನೇ ಕ್ರಮಾಂಕದಲ್ಲಿ ಆಡಿಸಲಿದೆಯೇ ಎಂದು ಕಾದು ನೋಡಬೇಕಾಗಿದೆ.
ಐದು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದ್ದು, ಇನ್ನೂ ನಾಲ್ಕು ಟೆಸ್ಟ್ ಪಂದ್ಯಗಳು ಬಾಕಿ ಉಳಿದಿವೆ. ತಂಡವು ಭಾನುವಾರ (ನವೆಂಬರ್ 30) ಬ್ರಿಸ್ಬೇನ್‌ನಲ್ಲಿ ಅಭ್ಯಾಸ ಆರಂಭಿಸಲಿದೆ. ಎರಡನೇ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿದೆ.
ಆಸ್ಟ್ರೇಲಿಯಾ ತಂಡ
ಸ್ಟೀವ್ ಸ್ಮಿತ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಬ್ರೆಂಡನ್ ಡಾಗೆಟ್, ಕ್ಯಾಮರೂನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ನಾಥನ್ ಲಿಯಾನ್, ಮೈಕೆಲ್ ನೇಸರ್, ಮಿಚೆಲ್ ಸ್ಟಾರ್ಕ್, ಜೇಕ್ ವೆದರಾಲ್ಡ್, ಬ್ಯೂ ವೆಬ್‌ಸ್ಟರ್.