Mangaluru Rains: ಹವಾಮಾನ ವೈಪರೀತ್ಯ; ಮಂಗಳೂರಿನಲ್ಲಿ ಆಕಾಶದಲ್ಲೇ ಅರ್ಧ ಗಂಟೆ ಗಿರಕಿ ಹೊಡೆದ ವಿಮಾನಗಳು!
ಹವಾಮಾನ ವೈಪರೀತ್ಯದ ಹಿನ್ನೆಲೆ ಮಂಗಳೂರಿನ ವಿಟ್ಲದ ಬಳಿ ಗುರುವಾರ ಸಂಜೆ ವಿಮಾನಗಳು ಆಕಾಶದಲ್ಲೇ ಗಿರಕಿ ಹೊಡೆದಿವೆ. ತೀರ ಕೆಳಭಾಗದಲ್ಲೇ ವಿಮಾನಗಳು ಹಾರಾಟ ನಡೆಸಿದ್ದರಿಂದ ವಿಟ್ಲದ ಜನರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ಸುಮಾರು ಅರ್ಧ ಗಂಟೆ ಬಳಿಕ ವಿಮಾನಗಳು ಸುರಕ್ಷಿತವಾಗಿ ಲ್ಯಾಂಡ್ ಆಗಿವೆ.
ಮಂಗಳೂರಿನ ವಿಮಾನ ನಿಲ್ದಾಣದ ಬಳಿ ಆಗಸದಲ್ಲಿ ಸುತ್ತಾಡಿದ ವಿಮಾನ. -
ಮಂಗಳೂರು: ನಗರದ ವಿಮಾನ ನಿಲ್ದಾಣಕ್ಕೆ ಬಂದಿದ್ದ ಎರಡು ವಿಮಾನಗಳು ಹವಾಮಾನ ವೈಪರೀತ್ಯದಿಂದಾಗಿ ಅರ್ಧಗಂಟೆ ಕಾಲ ಆಕಾಶದಲ್ಲೇ ಸುತ್ತಾಡಿ, ತಡವಾಗಿ ಲ್ಯಾಂಡ್ ಆದ ಘಟನೆ ಗುರುವಾರ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆಯಾಗಿದೆ. ಏರ್‌ಪೋರ್ಟ್ ಬಳಿಯೂ ಮಳೆಯಾಗುತ್ತಿದ್ದ ಹಿನ್ನೆಲೆ ವಿಮಾನಗಳು ಲ್ಯಾಂಡ್ ಆಗಲು ಸಾಧ್ಯವಾಗದೆ ಆಕಾಶದಲ್ಲೇ ಸುತ್ತಾಡಿವೆ.
ಬೆಂಗಳೂರಿನಿಂದ ಆಗಮಿಸಿದ್ದ ವಿಮಾನಗಳು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ವಿಟ್ಲ ಆಕಾಶ ಭಾಗಕ್ಕೆ ಬರುತ್ತಿದ್ದಂತೆ ವಿಮಾನಗಳು ಅತ್ಯಂತ ಕೆಳಮಟ್ಟದಲ್ಲಿ ವೃತ್ತಾಕಾರದಲ್ಲಿ ನಿರಂತರ ಸುತ್ತು ಹೊಡೆಯಲಾರಂಭಿಸಿದೆ. ಇದರಿಂದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರಬಹುದು ಎಂದು ಭಾವಿಸಿ ಜನರು ತೀವ್ರ ಆತಂಕಗೊಂಡಿದ್ದಾರೆ.
ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಪೈಲಟ್‌ಗಳು ವಿಮಾನಗಳನ್ನು ಕೆಲ ಹೊತ್ತು ಆಕಾಶದಲ್ಲೇ 12 ಸುತ್ತು ಹಾರಾಡಿ, ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ಭಾರಿ ಮಳೆ ಸಾಧ್ಯತೆ
ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಿಗೆ ಶುಕ್ರವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆ ಇದೆ. ರಾಯಚೂರು, ಯಾದಗಿರಿ, ವಿಜಯಪುರ, ಕಲಬುರಗಿ, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
Health Tips: ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡ್ತಿದ್ದೀರಾ? ಈ ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರ!
ದಕ್ಷಿಣ ಒಳನಾಡಿನ ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಕೆಲವೆಡೆ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಬಿರುಗಾಳಿ ಸಹಿತ (30-40 ಕಿಮೀ) ಲಘು ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.