Weather Forecast: ಬಿಸಿಲಿನಿಂದ ಬಸವಳಿದವರಿಗೆ ಗುಡ್‌ನ್ಯೂಸ್; ರಾಜ್ಯದ ಹಲವೆಡೆ ತಂಪೆರೆಯಲಿದೆ ಬೇಸಗೆ ಮಳೆ
Weather Forecast: ರಾಜ್ಯದಾದ್ಯಂತ ಒಣ ಹವೆ ಮುಂದುವರಿದಿದೆ. ಈ ಮಧ್ಯೆ ಬುಧವಾರ (ಮಾ. 12) ಹಲವೆಡೆ ಬೇಸಗೆ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ 1 ಅಥವಾ 2 ಸ್ಥಳಗಳಲ್ಲಿ ಹಗುರ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ರಾಜ್ಯದಾದ್ಯಂತ ಒಣ ಹವೆ ಮುಂದುವರಿದಿದೆ. ಈ ಮಧ್ಯೆ ಮಂಗಳವಾರ ಹಲವೆಡೆ ಮಳೆ ಸುರಿದು ಕೆಂಡದಂತಹ ಬಿಸಿಲಿನಿಂದ ಬಸವಳಿದಿದ್ದ ಜನತೆ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಬೆಂಗಳೂರು ನಗರದ ಹಲವೆಡೆ ದಿಢೀರ್ ಮಳೆಯಾಗಿದೆ. ಶಾಂತಿನಗರ, ಕಾರ್ಪೊರೇಷನ್, ರಿಚ್ಮಂಡ್ ಸರ್ಕಲ್, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್ ಸೇರಿದಂತೆ ವಿವಿಧೆಡೆ ವರ್ಷಧಾರೆಯಾಗಿದೆ. ಇನ್ನು ಬುಧವಾರ (ಮಾ. 12)ವೂ ಹಲವೆಡೆ ಬೇಸಗೆ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ (Weather Forecast). ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ 1 ಅಥವಾ 2 ಸ್ಥಳಗಳಲ್ಲಿ ಹಗುರ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಕರ್ನಾಟಕದ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ರಾಜ್ಯದ ಉಳಿದ ಭಾಗಗಳಲ್ಲಿ ಒಣ ಹವಾಮಾನ ಇರಲಿದೆ. ಬೆಂಗಳೂರಿನಲ್ಲಿ ಮುಂದಿನ 24 ಗಂಟೆಯಲ್ಲಿ ಶುಭ್ರ ಆಕಾಶ ಇರಲಿದೆ. ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 33°C ಮತ್ತು 19°C ಇರುವ ಸಾಧ್ಯತೆ ಇದೆ.
ಈ ಸುದ್ದಿಯನ್ನೂ ಓದಿ: Actress Ranya Rao: ನಟಿ ರನ್ಯಾ ರಾವ್ ಮನೆ ಮೇಲೆ ಸಿಬಿಐ ದಾಳಿ, ಪರಿಶೀಲನೆ
ಕರಾವಳಿಯ ಹವಾಮಾನ ಹೇಗಿರಲಿದೆ?
ಇತ್ತ ಕರಾವಳಿ ಕರ್ನಾಟಕದಲ್ಲಿ ಮುಂದಿನ 2 ದಿನಗಳವರೆಗೆ ಬಿಸಿ ಮತ್ತು ತೇವಾಂಶದ ವಾತಾವರಣ ಇರುವ ಸಾಧ್ಯತೆ ಇದೆ. ಮೀನುಗಾರರಿಗೆ ಯಾವುದೇ ಮುನ್ನೆಚ್ಚರಿಕೆ ಇಲ್ಲ.
ಗರಿಷ್ಠ ತಾಪಮಾನದಲ್ಲಿ ಯಥಾಸ್ಥಿತಿ
ಮುಂದಿನ 2 ದಿನಗಳವರೆಗೆ ಉತ್ತರ ಒಳನಾಡಿನಲ್ಲಿ ಗರಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಕಂಡು ಬರುವುದಿಲ್ಲ. ಮುಂದಿನ 3 ದಿನಗಳವರೆಗೆ ತಾಪಮಾನ 2-3°C ಏರಿಕೆಯಾಗಲಿದೆ. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂದಿನ 5 ದಿನಗಳವರೆಗೆ ಗರಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆಯಾಗುವುದಿಲ್ಲ. ಕರ್ನಾಟಕದಲ್ಲಿ ಮುಂದಿನ 5 ದಿನಗಳವರೆಗೆ ಕನಿಷ್ಠ ತಾಪಮಾನವೂ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.
2025ರ ಮಾರ್ಚ್ 3ನೇ ವಾರದಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಉಷ್ಣ ವಲಯ ಮತ್ತು ಪೂರ್ವ ಟ್ರಫ್‌ನಿಂದ ಹಗುರ/ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಂಗಳವಾರ ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಹೆಚ್ಚು ಉಷ್ಣಾಂಶ 37.8 ಡಿ.ಸೆ. ಕಲಬುರ್ಗಿಯಲ್ಲಿ ದಾಖಲಾಗಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣಾಂಶ 15.5 ಡಿ.ಸೆ. ಚಾಮರಾಜನಗರದಲ್ಲಿ ದಾಖಲಾಗಿದೆ.
ವಾಯುಭಾರ
ತಮಿಳುನಾಡು ಕರಾವಳಿಯ ನೈಋತ್ಯ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡವಿದ್ದು, ಇದು ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ.ವರೆಗೆ ವಿಸ್ತರಿಸಿದೆ. ಹಿಂದೂ ಮಹಾಸಾಗರದ ಸಮಭಾಜಕ ವೃತ್ತ ಮತ್ತು ಅದಕ್ಕೆ ಹೊಂದಿಕೊಂಡಿರುವ ನೈಋತ್ಯ ಬಂಗಾಳಕೊಲ್ಲಿಯಲ್ಲಿ ಸಮುದ್ರ ಮಟ್ಟದಿಂದ 1.5 ಕಿ.ಮೀ. ಎತ್ತರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ರಾಜ್ಯಾದ್ಯಂತ ಕೆಳ ಉಷ್ಣವಲಯ ಮಟ್ಟದಲ್ಲಿ ಪೂರ್ವ/ಪೂರ್ವ-ಆಗ್ನೇಯ/ಪೂರ್ವ-ಈಶಾನ್ಯ ದಿಕ್ಕುಗಳಲ್ಲಿ ಹಗುರದಿಂದ ಮಧ್ಯಮ ವಾಯುಭಾರ ಇರಲಿದೆ.