ಸಿಜೆಪಿ ಪ್ರತಿಭಟನಾಕಾರರ ಮೇಲೆ ಹಲ್ಲೆ ಪ್ರಕರಣ: ಇನ್‌ಫ್ಲುಯೆನ್ಸರ್ ಸ್ವತಂತ್ರ ಭಾರದ್ವಾಜ್ ಬಂಧನ, ಪೋಕ್ಸೋ ಪ್ರಕರಣ ದಾಖಲು
Influencer Swatantra Bhardwaj Arrested: ಜೂನ್ 23ರಂದು ತನ್ನ ಮಗಳೊಂದಿಗೆ ಪ್ರತಿಭಟನೆಗೆ ಹೋಗಿದ್ದ 38 ವರ್ಷದ ಸಂಜಯ್ ಆಜಾದ್ ಮೇಲೆ 21 ವರ್ಷದ ಸ್ವತಂತ್ರ ಭಾರದ್ವಾಜ್ ಮತ್ತು ಇತರರು ಹಲ್ಲೆ ನಡೆಸಿದ ಆರೋಪ ಹೊರಿಸಲಾಗಿದೆ. ಪಟಿಯಾಲ ಹೌಸ್ ನ್ಯಾಯಾಲಯವು ಸ್ವತಂತ್ರ ಭಾರದ್ವಾಜ್‌ನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಇನ್‌ಫ್ಲುಯೆನ್ಸರ್ ಸ್ವತಂತ್ರ ಭಾರದ್ವಾಜ್ (ಸಂಗ್ರಹ ಚಿತ್ರ) -
ನವದೆಹಲಿ, ಸೆ. 5: ಜೂನ್‌ನಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ (Delhi Protest) ಸಂದರ್ಭದಲ್ಲಿ 38 ವರ್ಷದ ವ್ಯಕ್ತಿಯೊಬ್ಬರಿಗೆ ತೀವ್ರವಾಗಿ ಥಳಿಸಿ ಗಾಯಗೊಳಿಸಿದ ಆರೋಪ ಹೊತ್ತಿರುವ, ಇನ್‌ಫ್ಲುಯೆನ್ಸರ್ ಸ್ವತಂತ್ರ ಭಾರದ್ವಾಜ್‌ನನ್ನು ಬಂಧಿಸಲಾಗಿದೆ (Influencer Swatantra Bhardwaj Arrested). ಬಂಧಿತನನ್ನು ಒಂದು ದಿನದ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಪಟಿಯಾಲ ಹೌಸ್ ನ್ಯಾಯಾಲಯವು ಭಾರದ್ವಾಜ್‌ನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೌರಭ್ ಪ್ರತಾಪ್ ಸಿಂಗ್ ಲಾಲರ್ ಈ ಆದೇಶವನ್ನು ಹೊರಡಿಸಿದ್ದಾರೆ. ಜೂನ್ 23ರಂದು ತನ್ನ ಮಗಳೊಂದಿಗೆ ಪ್ರತಿಭಟನೆಗೆ ಹೋಗಿದ್ದ 38 ವರ್ಷದ ಸಂಜಯ್ ಆಜಾದ್ ಮೇಲೆ 21 ವರ್ಷದ ಭಾರದ್ವಾಜ್ ಮತ್ತು ಇತರರು ಹಲ್ಲೆ ನಡೆಸಿದ ಆರೋಪ ಹೊರಿಸಲಾಗಿದೆ.
ಕ್ರಮಕ್ಕೆ ಆಗ್ರಹಿಸಿ ಸೆಪ್ಟಂಬರ್ 4ರಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕಾರ್ಯಕರ್ತರು ಮತ್ತು ಇತರ ರಾಜಕಾರಣಿಗಳು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆ ಎದುರು ಬೃಹತ್ ಪ್ರತಿಭಟನೆ ನಡೆಸಿದ ಕೆಲವೇ ಗಂಟೆಗಳ ನಂತರ ದೆಹಲಿ ಪೊಲೀಸರು ಸ್ವತಂತ್ರ ಭಾರದ್ವಾಜ್‌ನನ್ನು ಬಂಧಿಸಿದ್ದಾರೆ. ಹಲ್ಲೆಯಿಂದ ದಲಿತ ಸಮುದಾಯಕ್ಕೆ ಸೇರಿದ ಸಂತ್ರಸ್ತನ ತಲೆಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.
ಪಾಕಿಸ್ತಾನದ ಜತೆ ಸಿಜೆಪಿ ಸಂಬಂಧ; ಸೋನಮ್ ವಾಂಗ್‌ಚುಕ್ ಬಿಚ್ಚಿಟ್ಟ ರಹಸ್ಯವೇನು?
ಶುಕ್ರವಾರದ ಸಿಜೆಪಿ ಪ್ರತಿಭಟನೆಯ ಬಳಿಕ ಪೊಲೀಸರು ಈ ಪ್ರಕರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಈ ಕುರಿತು ಮಹತ್ವದ ಹೇಳಿಕೆ ನೀಡಿದ್ದು, ಸ್ವತಂತ್ರ ಭಾರದ್ವಾಜ್ ಜತೆ ತಾನು ಮಾತನಾಡಿಯೇ ಇಲ್ಲ ಎಂದು ಹೇಳಿ ಅಂತರ ಕಾಯ್ದುಕೊಂಡಿದ್ದಾರೆ.
ಅಪ್ರಾಪ್ತ ಬಾಲಕಿಗೆ ಅತ್ಯಾಚಾರ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಭಾರದ್ವಾಜ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಈ ಸಂಬಂಧ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಸಂಬಂಧಿತ ಬಿಎನ್ಎಸ್ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಭಾರದ್ವಾಜ್ ಮತ್ತು ಇತರರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂಜಯ್ ಆಜಾದ್ ಆರೋಪಿಸಿದ್ದಾರೆ. “ನನ್ನ ತಲೆಗೆ ಏಳು ಹೊಲಿಗೆಗಳಿವೆ. ಆದರೆ ಪೊಲೀಸರು ನನಗೆ ಸಹಾಯ ಮಾಡಲು ನಿರಾಕರಿಸಿದರು. ಒಬ್ಬ ವ್ಯಕ್ತಿ ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು. ಈ ವೇಳೆ ನನ್ನ ಮಗಳಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ. ಅವರು ನನ್ನನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ. ನಮ್ಮ ಜಾತಿಯ ಬಗ್ಗೆ ಕೆಳಮಟ್ಟದಲ್ಲಿ ಮಾತನಾಡಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
ನುಡಿದಂತೆ ನಡೆದ ಕೇಂದ್ರ ಸರ್ಕಾರ: ಸೆಪ್ಟೆಂಬರ್ 5ರಂದು ನಡೆಯಲಿದ್ದ ಪ್ರತಿಭಟನೆ ಹಿಂಪಡೆದ ಸಿಜೆಪಿ
ಸ್ವತಂತ್ರ ಭಾರದ್ವಾಜ್ ಆರೋಪಗಳನ್ನು ತಿರಸ್ಕರಿಸಿದ್ದು, ತಮ್ಮ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ. “ನಾನು ಆತ್ಮರಕ್ಷಣೆಗಾಗಿ ಅವರ ಮೇಲೆ ದಾಳಿ ಮಾಡಿದೆ. ಇಲ್ಲದಿದ್ದರೆ ಗುಂಪು ನನ್ನ ಮೇಲೆ ದಾಳಿ ಮಾಡುತ್ತಿತ್ತು. ನಾನು ಆರು ಸ್ನೇಹಿತರೊಂದಿಗೆ ಸಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲು ಅಲ್ಲಿಗೆ ಹೋಗಿದ್ದೆ” ಎಂದು ಅವರು ತಿಳಿಸಿದರು.
ಘಟನೆ ನಡೆದ ದಿನದಂದು ಭಾರದ್ವಾಜ್‌ನನ್ನು ಸ್ವಲ್ಪ ಸಮಯದವರೆಗೆ ಬಂಧಿಸಲಾಯಿತು. ಆದರೆ ಕೆಲವೇ ಗಂಟೆಗಳ ನಂತರ ಬಿಡುಗಡೆ ಮಾಡಲಾಯಿತು. ನಂತರ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಿರಿಯ ರಾಜಕಾರಣಿಯು ತನ್ನ ಸ್ನೇಹಿತ ಎಂದು ಹೇಳಿಕೊಂಡರು. ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮತ್ತು ದೆಹಲಿ ಸಚಿವ ಕಪಿಲ್ ಮಿಶ್ರಾ ತನ್ನ ಉತ್ತಮ ಸ್ನೇಹಿತರು ಎಂದು ಹೇಳಿದ್ದರು. ಆದರೀಗ ಸ್ವತಂತ್ರ ಭಾರದ್ವಾಜ್‌ಗೂ ತನಗೂ ಸಂಬಂಧವೇ ಇಲ್ಲ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.