ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr Sadhanashree Column: ಡೆಂಘೀ ಜ್ವರ: ಆಯುರ್ವೇದದ ಅರಿವು, ಆರೋಗ್ಯದ ಕಾಳಜಿ

ಯಜ್ಞದಲ್ಲಿ ಎಲ್ಲ ದೇವತೆಗಳಿಗೂ ಹವಿಸ್ಸನ್ನು ನೀಡಿದ ದಕ್ಷನು ಶಿವನಿಗೆ ಸಲ್ಲಬೇಕಾದ ರುದ್ರಭಾಗ ವನ್ನು ನೀಡುವುದಿಲ್ಲ. ಇದರಿಂದ ಯಜ್ಞ ಅಪೂರ್ಣವಾಗುವುದಲ್ಲದೆ, ಯಜ್ಞಕರ್ತೃವಿಗೂ ದೋಷ ಉಂಟಾಗುತ್ತದೆ ಎಂದು ಸತಿಯು ಭಾವಿಸುತ್ತಾಳೆ. ತಂದೆಗೆ ದೋಷ ಬರಬಾರದು, ಯಜ್ಞ ಸಂಪನ್ನವಾಗಬೇಕು ಹಾಗೂ ಪತಿಯ ಮಾತನ್ನು ಮೀರಿದ ತಪ್ಪಿಗೆ ಪ್ರಾಯಶ್ಚಿತ್ತವಾಗಬೇಕು ಎಂಬ ಭಾವನೆಯಿಂದ ಸತಿಯು ಯಜ್ಞ ಕುಂಡಕ್ಕೆ ಹಾರುತ್ತಾಳೆ.

ಡೆಂಘೀ ಜ್ವರ: ಆಯುರ್ವೇದದ ಅರಿವು, ಆರೋಗ್ಯದ ಕಾಳಜಿ

-

ಸ್ವಾಸ್ಥ್ಯದಿಂದ ಸ್ವಾತಂತ್ರ್ಯ

ಆಯುರ್ವೇದದಲ್ಲಿ ಜ್ವರವನ್ನು ‘ರೋಗಪತಿ’ ಎಂದು ಕರೆಯಲಾಗಿದೆ. ರೋಗಗಳಲ್ಲಿ ಜ್ವರಕ್ಕೆ ಅತ್ಯಂತ ಪ್ರಮುಖ ಸ್ಥಾನವನ್ನು ನೀಡಿರುವುದಲ್ಲದೆ, ರೋಗದ ತೀವ್ರತೆಯನ್ನು ಸೂಚಿಸುವ ಲಕ್ಷಣವಾಗಿಯೂ ಪರಿಗಣಿಸಲಾಗಿದೆ. ಜಗತ್ತಿನಲ್ಲಿ ಯಾರನ್ನೂ ಬಿಡದೆ ಕಾಡುವ ಜ್ವರವು ಮೊಟ್ಟಮೊದಲ ಬಾರಿಗೆ ಹೇಗೆ ಉತ್ಪತ್ತಿಯಾಯಿತು ಎಂಬ ಪ್ರಶ್ನೆಗೆ ದಕ್ಷಯಜ್ಞದ ಕಥೆಯಲ್ಲಿ ಒಂದು ಸ್ವಾರಸ್ಯಕರವಾದ ವಿವರಣೆಯಿದೆ.

ನಾವೆಲ್ಲರೂ ಕೇಳಿರುವ ದಕ್ಷಯಜ್ಞದ ಪ್ರಸಂಗದಲ್ಲಿ, ದಕ್ಷಪ್ರಜಾಪತಿಯು ಶಿವನನ್ನು ಅವಮಾನಿಸುವ ಉದ್ದೇಶದಿಂದ ಯಜ್ಞವನ್ನು ಆಯೋಜಿಸುತ್ತಾನೆ. ತನ್ನ ಮಗಳು ಸತಿ ಮತ್ತು ಅಳಿಯ ಶಿವನಿಗೆ ಆಮಂತ್ರಣ ನೀಡುವುದಿಲ್ಲ. ಆದರೂ ತವರುಮನೆಯ ವ್ಯಾಮೋಹದಿಂದ ಸತಿಯು ಶಿವನ ಒಪ್ಪಿಗೆ ಇಲ್ಲದಿದ್ದರೂ ಯಜ್ಞಕ್ಕೆ ತೆರಳುತ್ತಾಳೆ. ಅಲ್ಲಿ ದಕ್ಷಪ್ರಜಾಪತಿಯು ಸತಿ ಮತ್ತು ಶಿವನನ್ನು ಹೀನಾಯವಾಗಿ ನಿಂದಿಸಿ ಅವಮಾನಿಸುತ್ತಾನೆ.

ಒಂದೆಡೆ ಪತಿಯ ಮಾತನ್ನು ಕೇಳದೆ ಬಂದ ತಪ್ಪಿನ ಅರಿವು, ಮತ್ತೊಂದೆಡೆ ತಂದೆಯ ಕಠೋರ ಮಾತು ಗಳನ್ನು ಸಹಿಸಲಾಗದ ನೋವು ಸತಿಯನ್ನು ಸಂದಿಗ್ಧ ಸ್ಥಿತಿಗೆ ದೂಡುತ್ತದೆ.

ಇದನ್ನೂ ಓದಿ: Dr Sadhanashree Column: ಋತುವಿಗೆ ತಕ್ಕ ಆಹಾರವೇ ಆರೋಗ್ಯದ ಆಧಾರ

ಯಜ್ಞದಲ್ಲಿ ಎಲ್ಲ ದೇವತೆಗಳಿಗೂ ಹವಿಸ್ಸನ್ನು ನೀಡಿದ ದಕ್ಷನು ಶಿವನಿಗೆ ಸಲ್ಲಬೇಕಾದ ರುದ್ರಭಾಗ ವನ್ನು ನೀಡುವುದಿಲ್ಲ. ಇದರಿಂದ ಯಜ್ಞ ಅಪೂರ್ಣವಾಗುವುದಲ್ಲದೆ, ಯಜ್ಞಕರ್ತೃವಿಗೂ ದೋಷ ಉಂಟಾಗುತ್ತದೆ ಎಂದು ಸತಿಯು ಭಾವಿಸುತ್ತಾಳೆ. ತಂದೆಗೆ ದೋಷ ಬರಬಾರದು, ಯಜ್ಞ ಸಂಪನ್ನವಾಗಬೇಕು ಹಾಗೂ ಪತಿಯ ಮಾತನ್ನು ಮೀರಿದ ತಪ್ಪಿಗೆ ಪ್ರಾಯಶ್ಚಿತ್ತವಾಗಬೇಕು ಎಂಬ ಭಾವನೆಯಿಂದ ಸತಿಯು ಯಜ್ಞಕುಂಡಕ್ಕೆ ಹಾರುತ್ತಾಳೆ.

ಈ ಘಟನೆಯಿಂದ ಅತ್ಯಂತ ಕ್ರೋಧಿತನಾದ ಶಿವನು ತನ್ನ ಅಂಶದಿಂದ ವೀರಭದ್ರನನ್ನು ಸೃಷ್ಟಿಸಿ, ದಕ್ಷಯಜ್ಞವನ್ನು ಧ್ವಂಸಗೊಳಿಸಲು ಕಳುಹಿಸುತ್ತಾನೆ. ವೀರಭದ್ರನು ಯಜ್ಞದ ಸ್ಥಳಕ್ಕೆ ಧಾವಿಸಿ ಅಲ್ಲಿದ್ದವರನ್ನು ಧ್ವಂಸಗೊಳಿಸಿ, ಯಜ್ಞವನ್ನು ಅಸ್ತವ್ಯಸ್ತಗೊಳಿಸುತ್ತಾನೆ. ಬಳಿಕ ಶಿವನ ಬಳಿಗೆ ಮರಳಿ ಬಂದು ತನ್ನ ಕಾರ್ಯವನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿ, ಮುಂದೇನು ಮಾಡಬೇಕೆಂದು ಕೇಳುತ್ತಾನೆ. ಆಗ ಶಿವನು ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಇನ್ನು ಮುಂದೆ ‘ಜ್ವರ’ ಎಂಬ ರೂಪವನ್ನು ತಾಳುವಂತೆ ವೀರಭದ್ರನಿಗೆ ಆeಪಿಸುತ್ತಾನೆ ಎಂಬುದು ಈ ಕಥೆಯ ಸಾರ.

ಈ ರೀತಿಯಾಗಿ ಜ್ವರವು ದಕ್ಷಯಜ್ಞದ ಧ್ವಂಸದ ಸಂದರ್ಭದಲ್ಲಿ ಶಿಕ್ಷೆಯ ರೂಪದಲ್ಲಿ ಉದ್ಭವಿಸಿ, ನಂತರ ಎಲ್ಲ ಕಾಲಗಳಲ್ಲಿಯೂ ಮನುಷ್ಯರನ್ನು ಕಾಡುವ ಮಹಾರೋಗವಾಗಿ ಪರಿಣಮಿಸಿತು ಎಂಬ ಪೌರಾಣಿಕ ಹಿನ್ನೆಲೆಯನ್ನು ನಾವು ಕಾಣಬಹುದು. ನಮ್ಮ ಆಹಾರ, ವಿಹಾರ ಮತ್ತು ವಿಚಾರಗಳಲ್ಲಿ ತಿಳಿದೋ ತಿಳಿಯದೆಯೋ ಮಾಡುವ ತಪ್ಪುಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಈ ಕಥೆಯ ಮೂಲಕವೂ ಅರ್ಥೈಸಿಕೊಳ್ಳಬಹುದು.

dengue lead

ಶರೀರ, ಇಂದ್ರಿಯಗಳು ಮತ್ತು ಮನಸ್ಸುಗಳು ಒಟ್ಟಾಗಿ ತಾಪ ಹಾಗೂ ಚಡಪಡಿಕೆಗೆ ಒಳಗಾಗುವ ಸ್ಥಿತಿಯನ್ನು ‘ಜ್ವರ’ ಎಂದು ಕರೆಯಲಾಗುತ್ತದೆ. ಆಯುರ್ವೇದ ಗ್ರಂಥಗಳಲ್ಲಿ ಜ್ವರದ ಕುರಿತು ಸವಿವರ ವಾದ ವಿವರಣೆಯಿದ್ದು, ಅದರ ವಿವಿಧ ಪ್ರಕಾರಗಳು ಹಾಗೂ ಅವುಗಳಿಗೆ ಅನುಗುಣವಾದ ಚಿಕಿತ್ಸಾ ವಿಧಾನಗಳನ್ನು ತಿಳಿಸಲಾಗಿದೆ. ಇಂತಹ ಅನೇಕ ವಿಧದ ಜ್ವರಗಳಲ್ಲಿ ಇಂದು ಜನರನ್ನು ಹೆಚ್ಚಾಗಿ ಕಾಡುತ್ತಿರುವ ಮತ್ತು ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಜ್ವರವೆಂದರೆ ಡೆಂಘೀ. ಇದು ಹೊಸದಾಗಿ ಕಾಣಿಸಿಕೊಂಡ ಕಾಯಿಲೆಯಲ್ಲ. ಸಾಂಕ್ರಾಮಿಕ ಜ್ವರಗಳ ಕುರಿತು ಆಯುರ್ವೇದ ಗ್ರಂಥಗಳಲ್ಲಿ ವಿವರಗಳಿವೆ. ಆಯುರ್ವೇದದ ಚೌಕಟ್ಟಿನಲ್ಲಿ ಈ ಜ್ವರದ ಸ್ವರೂಪ ಮತ್ತು ಆರೋಗ್ಯ ಕಾಪಾಡಿ ಕೊಳ್ಳುವ ವಿಧಾನಗಳನ್ನು ತಿಳಿದುಕೊಳ್ಳೋಣ.

ಮಳೆಗಾಲದಲ್ಲಿ ಜ್ವರದ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುವುದನ್ನು ನಾವು ಗಮನಿಸುತ್ತೇವೆ. ಡೆಂಘೀ ಕೂಡ ಅಂತಹ ಜ್ವರಗಳಲ್ಲಿ ಒಂದು. ಮಳೆಗಾಲದಲ್ಲಿ ಜೀರ್ಣಶಕ್ತಿ, ದೈಹಿಕ ಬಲ ಮತ್ತು ರೋಗನಿರೋಧಕ ಸಾಮರ್ಥ್ಯ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ವಾತಾವರಣದ ಬದಲಾವಣೆಗಳಿಂದ ಆಹಾರದ ಜೀರ್ಣ ಕ್ರಿಯೆಯಲ್ಲಿಯೂ ವ್ಯತ್ಯಾಸಗಳು ಉಂಟಾಗಬಹುದು. ಆಯುರ್ವೇದದ ದೃಷ್ಟಿಯಲ್ಲಿ ಈ ಕಾಲದಲ್ಲಿ ದೇಹದ ದೋಷಗಳಲ್ಲಿ ಅಸಮತೋಲನ ಉಂಟಾಗುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

ಉಷ್ಣವಲಯ ಮತ್ತು ಅರೆಉಷ್ಣವಲಯದ ಪ್ರದೇಶಗಳಲ್ಲಿ ಡೆಂಘೀ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ‘ಏಡಿಸ್ ಈಜಿಪ್ಟಿ’ ಎಂಬ ಸೊಳ್ಳೆಯು ಡೆಂಗ್ಯೂ ವೈರಾಣುವಿನ ಪ್ರಮುಖ ವಾಹಕವಾಗಿದೆ. ಸೋಂಕಿತ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆಯು ಮತ್ತೊಬ್ಬ ವ್ಯಕ್ತಿಯನ್ನು ಕಚ್ಚಿದಾಗ ವೈರಾಣು ಹರಡಬಹುದು.

ಡೆಂಘೀ ಜ್ವರಕ್ಕೆ ಕಾರಣವಾಗಬಹುದಾದ ಆಹಾರ-ವಿಹಾರದ ತಪ್ಪುಗಳು: ಜೀರ್ಣವಾಗಲು ಕಷ್ಟವಾದ ಆಹಾರವನ್ನು ಸೇವಿಸುವುದು, ಅಜೀರ್ಣವನ್ನು ನಿರ್ಲಕ್ಷಿಸುವುದು, ಹಸಿವಿಲ್ಲದಿದ್ದರೂ ಮನಬಂದಂತೆ ತಿನ್ನುವುದು, ಹುಳಿತೇಗು, ಎದೆಉರಿ ಮತ್ತು ಹೊಟ್ಟೆಉಬ್ಬರದಂತಹ ಲಕ್ಷಣ ಗಳಿದ್ದರೂ ಆಹಾರ ಸೇವನೆಯನ್ನು ಮುಂದುವರಿಸುವುದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ತಡರಾತ್ರಿಯವರೆಗೆ ಎಚ್ಚರವಾಗಿರುವುದು, ರಾತ್ರಿ ಜಾಗರಣೆ ಮಾಡುವುದು, ಹಗಲು ನಿದ್ರಿಸುವುದು, ತಂಗಳು ಮತ್ತು ಅತಿಯಾಗಿ ತಂಪಾದ ಆಹಾರಗಳನ್ನು ಸೇವಿಸುವುದು, ದೇಹದ ಸಾಮರ್ಥ್ಯವನ್ನು ಪರಿಗಣಿಸದೆ ವ್ಯಾಯಾಮ ಅಥವಾ ಕೆಲಸ ಮಾಡುವುದು ಹಾಗೂ ಗಾಳಿ, ಮಳೆ ಮತ್ತು ಶೀತಕ್ಕೆ ಮೈಯೊಡ್ಡಿ ಪ್ರಯಾಣಿಸುವುದು ಕೂಡ ಆಯುರ್ವೇದದ ದೃಷ್ಟಿಯಲ್ಲಿ ಅನುಚಿತ ವಾದ ಅಭ್ಯಾಸಗಳು.

ಇದರೊಂದಿಗೆ ಅತಿಯಾದ ಉಪ್ಪು, ಖಾರ ಮತ್ತು ಹುಳಿ ಇರುವ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸುವುದು, ಅತಿಯಾದ ಚಿಂತೆ, ಕೋಪ ಮತ್ತು ಅಸೂಯೆಯಲ್ಲಿ ತೊಡಗಿರುವುದು ಕೂಡ ದೇಹದ ಸಹಜ ಸಮತೋಲನದ ಮೇಲೆ ಪರಿಣಾಮ ಬೀರಬಹುದು.

ಡೆಂಘೀ ಜ್ವರದ ಸಾಮಾನ್ಯ ಲಕ್ಷಣಗಳು: ಡೆಂಘೀ ಜ್ವರದಲ್ಲಿ ತೀವ್ರವಾದ ಜ್ವರ, ಬೆನ್ನುನೋವು, ತಲೆನೋವು, ಸೊಂಟ ಮತ್ತು ಇತರ ಸಂಧಿಗಳಲ್ಲಿ ನೋವು, ಕಣ್ಣುಗುಡ್ಡೆಯ ಹಿಂಭಾಗದಲ್ಲಿ ನೋವು, ಮಾಂಸಖಂಡಗಳು ಹಾಗೂ ಸ್ನಾಯುಗಳಲ್ಲಿ ಸೆಳೆತ, ಹಸಿವಾಗದಿರುವುದು, ಹೊಟ್ಟೆನೋವು, ವಾಂತಿ, ಭೇದಿ, ಮೈಯಲ್ಲಿ ತುರಿಕೆ ಮತ್ತು ತೀವ್ರ ಸುಸ್ತು ಕಾಣಿಸಿಕೊಳ್ಳಬಹುದು.

ರೋಗದ ತೀವ್ರತೆ ಹೆಚ್ಚಾದಾಗ ವಸಡು ಅಥವಾ ಮೂಗಿನಿಂದ ರಕ್ತಸ್ರಾವವಾಗುವುದು, ಚರ್ಮದ ಮೇಲೆ ದದ್ದುಗಳು ಅಥವಾ ಗುಳ್ಳೆಗಳು ಕಾಣಿಸಿಕೊಳ್ಳುವುದು, ಅತಿಯಾದ ತುರಿಕೆ ಮತ್ತು ರಕ್ತಸ್ರಾವ ನಿಯಂತ್ರಿಸಲು ಕಷ್ಟವಾಗುವಂತಹ ಲಕ್ಷಣಗಳು ಉಂಟಾಗಬಹುದು. ಇವುಗಳನ್ನು ನಿರ್ಲಕ್ಷಿಸ ಬಾರದು.

ಜ್ವರ ಬಂದಾಗ ಅನುಸರಿಸಬೇಕಾದ ಕ್ರಮಗಳು: ಸೊಳ್ಳೆ ಕಚ್ಚಿದ ಪ್ರತಿಯೊಬ್ಬರಿಗೂ ಡೆಂಘೀ ಜ್ವರ ಬರಬೇಕೆಂದಿಲ್ಲ. ದೇಹದ ಆಂತರಿಕ ವ್ಯವಸ್ಥೆ, ಜೀರ್ಣಕ್ರಿಯೆ, ದೈಹಿಕ ಬಲ ಮತ್ತು ರೋಗನಿರೋಧಕ ಸಾಮರ್ಥ್ಯವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಆದ್ದರಿಂದ ಸೋಂಕಿನ ತೀವ್ರತೆ ಮತ್ತು ಲಕ್ಷಣಗಳೂ ವಿಭಿನ್ನವಾಗಿರಬಹುದು. ಸೂಕ್ತ ಸಮಯದಲ್ಲಿ ಸರಿಯಾದ ಆಹಾರ, ವಿಶ್ರಾಂತಿ ಮತ್ತು ವೈದ್ಯಕೀಯ ಆರೈಕೆಗೆ ಆದ್ಯತೆ ನೀಡುವುದು ಅಗತ್ಯ.

ಜ್ವರ ಕಾಣಿಸಿಕೊಂಡ ಕೂಡಲೇ ಆರೋಗ್ಯಕ್ಕೆ ಆದ್ಯತೆ ನೀಡಿ ಸಂಪೂರ್ಣ ವಿಶ್ರಾಂತಿ ಪಡೆಯಬೇಕು. ದೇಹದ ಜೊತೆಗೆ ಇಂದ್ರಿಯಗಳು ಮತ್ತು ಮನಸ್ಸಿಗೂ ವಿಶ್ರಾಂತಿ ನೀಡುವುದು ಮುಖ್ಯ. ಮೊಬೈಲ್ ಫೋನ್, ಲ್ಯಾಪ್ಟಾಪ್ ಮತ್ತು ಟಿವಿಗಳ ಬಳಕೆಯನ್ನು ಕಡಿಮೆ ಮಾಡಿ, ಮನಸ್ಸಿಗೆ ನೆಮ್ಮದಿ ನೀಡುವ ಸಂಗೀತವನ್ನು ಆಲಿಸಬಹುದು ಅಥವಾ ವಿಷ್ಣು ಸಹಸ್ರನಾಮದಂತಹ ಸ್ತೋತ್ರಗಳನ್ನು ಕೇಳಬಹುದು.

ಜ್ವರದ ಸಮಯದಲ್ಲಿ ದೇಹದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಬೆಚ್ಚಗಿನ ನೀರಿನಲ್ಲಿ ಅದ್ದಿದ ಮೃದುವಾದ ಬಟ್ಟೆಯಿಂದ ಮೈಯನ್ನು ಒರೆಸಬಹುದು. ತಲೆಗೆ ತುಪ್ಪದಲ್ಲಿ ಅದ್ದಿದ ಹತ್ತಿಯನ್ನು ಪಿಚುವಿನಂತೆ ಇಡುವುದು, ನೆಲ್ಲಿಕಾಯಿ ಪುಡಿಯನ್ನು ಮಜ್ಜಿಗೆಯೊಂದಿಗೆ ಬೆರೆಸಿ ತಲೆಗೆ ಲೇಪಿಸು ವುದು, ಹಣೆಗೆ ತಣ್ಣೀರಿನ ಬಟ್ಟೆ ಅಥವಾ ಶ್ರೀಗಂಧದ ಶೀತಲ ಲೇಪವನ್ನು ಬಳಸುವುದು ಮುಂತಾದ ವಿಧಾನಗಳನ್ನು ಸಾಂಪ್ರದಾಯಿಕವಾಗಿ ಉಲ್ಲೇಖಿಸಲಾಗಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಜ್ವರಹರ ಮತ್ತು ಇತರ ಔಷಧಗಳನ್ನು ಸ್ವಯಂಪ್ರೇರಿತವಾಗಿ ಸೇವಿಸದೆ, ವೈದ್ಯರ ಸಲಹೆಯಂತೆ ಮಾತ್ರ ಬಳಸಬೇಕು. ಆಯುರ್ವೇದ ಚಿಕಿತ್ಸೆಯಲ್ಲಿಯೂ ರೋಗಿಯ ಸ್ಥಿತಿ, ದೋಷಗಳ ಸ್ವರೂಪ ಮತ್ತು ದೈಹಿಕ ಸಾಮರ್ಥ್ಯವನ್ನು ಪರಿಶೀಲಿಸಿ ಚಿಕಿತ್ಸೆಯನ್ನು ನಿರ್ಧರಿಸುವುದು ಮುಖ್ಯ. ರೋಗಿಯ ಚೇತರಿಕೆಯ ಹಂತದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಬಲವರ್ಧಕ ಹಾಗೂ ರಸಾಯನ ಚಿಕಿತ್ಸೆಗಳ ಕುರಿತು ವೈದ್ಯರು ನಿರ್ಧರಿಸಬಹುದು.

ಜ್ವರದ ಸಮಯದಲ್ಲಿ ಆಹಾರದ ಮಹತ್ವ: ಜ್ವರ ಬಂದಾಗ ಪ್ರತಿದಿನ ಸೇವಿಸುವ ಸಾಮಾನ್ಯ ಆಹಾರವು ಜೀರ್ಣವಾಗಲು ಕಷ್ಟವಾಗಬಹುದು. ಆದ್ದರಿಂದ ಹಸಿವಿನ ಪ್ರಮಾಣವನ್ನು ಗಮನಿಸಿ, ಹಗುರವಾಗಿ ಜೀರ್ಣವಾಗುವ ಆಹಾರವನ್ನು ಆಯ್ಕೆ ಮಾಡಬೇಕು. ಆಯುರ್ವೇದದಲ್ಲಿ ‘ಲಂಘನಂ ಪರಮೌಷಧಮ’ ಎಂಬ ಮಾತಿದೆ. ಇದರ ಆಶಯವು ಜ್ವರದ ಸಮಯದಲ್ಲಿ ಜೀರ್ಣಶಕ್ತಿಗೆ ಅನುಗುಣವಾಗಿ ಆಹಾರವನ್ನು ನಿಯಂತ್ರಿಸುವುದಾಗಿದೆ. ಆದರೆ ಇದನ್ನು ಎಲ್ಲರೂ ಸಂಪೂರ್ಣ ಉಪವಾಸ ಮಾಡಬೇಕೆಂಬ ಸಲಹೆಯಾಗಿ ಪರಿಗಣಿಸಬಾರದು.

ಹಸಿವು ಕಡಿಮೆಯಾಗಿರುವಾಗ ಆಹಾರದ ಪ್ರಮಾಣವನ್ನು ಕಡಿಮೆ ಮಾಡಿ, ದೇಹಕ್ಕೆ ಅಗತ್ಯವಾದ ದ್ರವ ಮತ್ತು ಪೋಷಕಾಂಶಗಳು ದೊರೆಯುವಂತೆ ನೋಡಿಕೊಳ್ಳಬೇಕು. ಸ್ವಲ್ಪ ಹಸಿವು ಕಾಣಿಸಿ ಕೊಂಡಾಗ ಭತ್ತದ ಅರಳಿನ ಪುಡಿ, ಜೋಳದ ಪುಡಿ ಅಥವಾ ರವೆಯನ್ನು ಗಂಜಿಯ ರೂಪದಲ್ಲಿ ಸೇವಿಸಬಹುದು. ಅಕ್ಕಿ ಮತ್ತು ಹೆಸರುಬೇಳೆಯನ್ನು ಹುರಿದು ತಯಾರಿಸಿದ ಗಂಜಿಯನ್ನೂ ಬಳಸಬಹುದು. ಅರಳಿನ ಪುಡಿಗೆ ಬೀಜಗಳನ್ನು ತೆಗೆದ ದಾಳಿಂಬೆ ರಸವನ್ನು ಸೇರಿಸುವುದು, ಹೆಸರುಬೇಳೆ ಬೇಯಿಸಿದ ನೀರಿಗೆ ಚಿಟಿಕೆ ಸೈಂಧವ ಲವಣವನ್ನು ಸೇರಿಸುವುದು ಮುಂತಾದ ಆಹಾರ ವಿಧಾನಗಳನ್ನು ಉಲ್ಲೇಖಿಸಲಾಗಿದೆ.

ಹಸಿವು ಹೆಚ್ಚಾದಂತೆ ಹುರಿದ ಅಕ್ಕಿಯಿಂದ ತಯಾರಿಸಿದ ಮೆತ್ತಗಿನ ಅನ್ನದೊಂದಿಗೆ ಕಟ್ಟುಸಾರು ಗಳನ್ನು ಸೇವಿಸಬಹುದು. ನೆಲ್ಲಿಕಾಯಿ ಸಾರು, ದಾಳಿಂಬೆ ಸಾರು ಮತ್ತು ಹೆಸರುಬೇಳೆಯ ಕಟ್ಟುಸಾರು ಗಳನ್ನು ಬಳಸುವ ಪದ್ಧತಿಯೂ ಇದೆ. ಜೀರ್ಣಶಕ್ತಿ ಸುಧಾರಿಸಿದಂತೆ ಆಹಾರದ ಪ್ರಮಾಣ ಮತ್ತು ಸ್ವರೂಪವನ್ನು ನಿಧಾನವಾಗಿ ಬದಲಿಸಬಹುದು. ಬೆಣ್ಣೆಯಂತಹ ಪದಾರ್ಥಗಳ ಬಳಕೆಯನ್ನೂ ವ್ಯಕ್ತಿಯ ಜೀರ್ಣಶಕ್ತಿ ಹಾಗೂ ಆರೋಗ್ಯಸ್ಥಿತಿಗೆ ಅನುಗುಣವಾಗಿ ನಿರ್ಧರಿಸಬೇಕು.

ಬಾಯಾರಿಕೆಯನ್ನು ಶಮನಗೊಳಿಸಲು ಮತ್ತು ದೇಹದಲ್ಲಿ ದ್ರವಾಂಶವನ್ನು ಕಾಪಾಡಿಕೊಳ್ಳಲು ಕುದಿಸಿ ಆರಿಸಿದ ನೀರನ್ನು ಸೇವಿಸುವುದು ಮುಖ್ಯ. ಧನಿಯಾ, ಶ್ರೀಗಂಧ, ಲಾವಂಚ, ಒಣದ್ರಾಕ್ಷಿ ಮತ್ತು ಹೊನ್ನಾರಿ ಗೆಡ್ಡೆಯಂತಹ ದ್ರವ್ಯಗಳನ್ನು ಬಳಸಿ ತಯಾರಿಸಿದ ಪಾನೀಯಗಳನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಔಷಧಿಯ ದ್ರವ್ಯಗಳನ್ನು ಬಳಸುವಾಗಲೂ ವೈದ್ಯರ ಸಲಹೆ ಪಡೆಯಬೇಕು.

ಜ್ವರದ ಸಮಯದಲ್ಲಿ ಅತಿಯಾದ ಖಾರ, ಹುಳಿ ಮತ್ತು ಉಪ್ಪಿರುವ ಪದಾರ್ಥಗಳು, ಎಣ್ಣೆಯಲ್ಲಿ ಕರಿದ ಖಾದ್ಯಗಳು, ಮೊಸರು, ಉದ್ದಿನ ಪದಾರ್ಥಗಳು ಹಾಗೂ ಜೀರ್ಣಿಸಲು ಕಷ್ಟವಾಗುವ ಆಹಾರಗಳನ್ನು ಕಡಿಮೆ ಮಾಡುವುದು ಸೂಕ್ತ. ಬ್ರೊಕೋಲಿ, ಪಪ್ಪಾಯ, ಪಪ್ಪಾಯ ಎಲೆ, ಹುಳಿ ಹಣ್ಣುಗಳ ರಸ ಮತ್ತು ಇತರ ಆಹಾರಗಳ ಕುರಿತು ಅಂತರ್ಜಾಲದಲ್ಲಿ ಸಿಗುವ ಮಾಹಿತಿಯನ್ನು ಪರಿಶೀಲಿಸದೆ ಅನುಸರಿಸಬಾರದು. ಡೆಂಗ್ಯೂ ಜ್ವರಕ್ಕೆ ಪಪ್ಪಾಯ ಎಲೆ ಅಥವಾ ನಿರ್ದಿಷ್ಟ ಆಹಾರಗಳು ಚಿಕಿತ್ಸೆಯಾಗುತ್ತವೆ ಎಂಬುದಕ್ಕೆ ಅವಲಂಬಿಸುವುದು ಸರಿಯಲ್ಲ.

ದಾಳಿಂಬೆ ಮತ್ತು ಒಣದ್ರಾಕ್ಷಿಯಂತಹ ಆಹಾರಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯಕ್ಕೆ ಅನುಗುಣ ವಾಗಿ ಬಳಸಬಹುದು. ಪಡವಲಕಾಯಿ, ಸೋರೆಕಾಯಿ, ಹೀರೆಕಾಯಿ ಮತ್ತು ಬೂದುಗುಂಬಳ ಕಾಯಿಯಂತಹ ಬಳ್ಳಿ ತರಕಾರಿಗಳನ್ನು ಚೆನ್ನಾಗಿ ಬೇಯಿಸಿ, ಜೀರ್ಣಶಕ್ತಿಗೆ ಅನುಗುಣವಾಗಿ ಆಹಾರದಲ್ಲಿ ಸೇರಿಸಬಹುದು. ಆಹಾರದ ಆಯ್ಕೆಯು ರೋಗಿಯ ಸ್ಥಿತಿ ಮತ್ತು ವೈದ್ಯರ ಸಲಹೆಗೆ ಅನುಗುಣವಾಗಿರಬೇಕು.

ಸೊಳ್ಳೆಗಳಿಂದ ರಕ್ಷಣೆ ಮತ್ತು ಜ್ವರದ ತಡೆಗಟ್ಟುವಿಕೆ: ಡೆಂಘೀ ತಡೆಗಟ್ಟಲು ಸೊಳ್ಳೆಗಳಿಂದ ರಕ್ಷಿಸಿಕೊಳ್ಳು ವುದು ಅತ್ಯಂತ ಮುಖ್ಯ. ಮನೆಯ ಸುತ್ತಮುತ್ತ ನೀರು ನಿಂತುಕೊಳ್ಳದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುವ ಸ್ಥಳಗಳನ್ನು ಸ್ವಚ್ಛವಾಗಿರಿಸಬೇಕು. ಸೊಳ್ಳೆ ಪರದೆಗಳನ್ನು ಬಳಸುವುದು ಮತ್ತು ಸೊಳ್ಳೆ ಕಚ್ಚದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಮನೆಯ ಪರಿಸರವನ್ನು ಸ್ವಚ್ಛವಾಗಿಟ್ಟು ಕೊಳ್ಳುವುದರ ಜೊತೆಗೆ, ಧೂಪನದಂತಹ ಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸುವಾಗಲೂ ಹೊಗೆ ಆರೋಗ್ಯಕ್ಕೆ ತೊಂದರೆ ಉಂಟುಮಾಡದಂತೆ ಎಚ್ಚರಿಕೆ ವಹಿಸಬೇಕು.

ಜ್ವರ ಬಾರದಂತೆ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತವಾದ ದಿನಚರಿಯನ್ನು ರೂಢಿಸಿ ಕೊಳ್ಳುವುದು ಮುಖ್ಯ. ಆಹಾರ ಸೇವನೆಯ ಸಮಯವನ್ನು ನಿಯಮಿತಗೊಳಿಸಿ, ಹಿತಕರವಾದ ಮತ್ತು ತಾಜಾ ಆಹಾರವನ್ನು ಸೇವಿಸಬೇಕು. ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ರಾತ್ರಿ ಬೇಗ ಮಲಗಿ, ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಏಳುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ದೇಹದ ಸಾಮರ್ಥ್ಯಕ್ಕೆ ಅನುಗುಣವಾಗಿ ವ್ಯಾಯಾಮ ಮಾಡಬೇಕು. ಬೆಚ್ಚಗಿನ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಸ್ನಾನ ಮಾಡುವಂತಹ ಸಾಂಪ್ರದಾಯಿಕ ಅಭ್ಯಾಸಗಳನ್ನು ವೈಯಕ್ತಿಕ ಆರೋಗ್ಯಸ್ಥಿತಿಗೆ ಅನುಗುಣವಾಗಿ ರೂಢಿಸಿಕೊಳ್ಳಬಹುದು. ಮಾನಸಿಕ ನೆಮ್ಮದಿಗೆ ಆದ್ಯತೆ ನೀಡಿ, ಸಂತೋಷದಿಂದ ಬದುಕುವ ಅಭ್ಯಾಸವನ್ನೂ ಬೆಳೆಸಿಕೊಳ್ಳಬೇಕು.

ಡೆಂಘೀ ಜ್ವರದ ಸಂದರ್ಭದಲ್ಲಿ ತೀವ್ರ ಹೊಟ್ಟೆನೋವು, ನಿರಂತರ ವಾಂತಿ, ಮೂಗು ಅಥವಾ ವಸಡು ಗಳಿಂದ ರಕ್ತಸ್ರಾವ, ರಕ್ತವಾಂತಿ, ಕಪ್ಪು ಮಲ, ಅತಿಯಾದ ಸುಸ್ತು, ಅಶಾಂತಿ ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ಆಸ್ಪತ್ರೆಗೆ ತೆರಳಬೇಕು. ಪ್ಲೇಟ್ಲೆಟ್ಗಳ ಸಂಖ್ಯೆ ಕಡಿಮೆಯಾಗುವುದು ಅಥವಾ ರಕ್ತಸ್ರಾವದ ಲಕ್ಷಣಗಳು ಕಂಡುಬಂದಾಗ ಮನೆಮದ್ದುಗಳನ್ನೇ ಅವಲಂಬಿಸದೆ ಸೂಕ್ತ ವೈದ್ಯಕೀಯ ಮೇಲ್ವಿಚಾರಣೆಗೆ ಒಳಗಾಗುವುದು ಅತ್ಯಗತ್ಯ.

ಸ್ನೇಹಿತರೇ, ಒಂದು ದೀಪವು ನಿರಂತರವಾಗಿ ಉರಿಯುತ್ತಿರಬೇಕಾದರೆ ಎರಡು ಸಂಗತಿಗಳು ಅತ್ಯ ವಶ್ಯಕ. ಮೊದಲನೆಯದಾಗಿ, ಹುಳಹುಪ್ಪಟೆಗಳು, ಜೋರಾಗಿ ಬೀಸುವ ಗಾಳಿ ಮತ್ತು ಮಳೆಯಿಂದ ಅದನ್ನು ರಕ್ಷಿಸಬೇಕು. ಎರಡನೆಯದಾಗಿ, ದೀಪದಲ್ಲಿ ಎಣ್ಣೆ ಮತ್ತು ಬತ್ತಿ ಸಾಕಷ್ಟು ಇರುವಂತೆ ನೋಡಿಕೊಳ್ಳಬೇಕು.

ದೀಪದಂತೆಯೇ ನಮ್ಮ ದೇಹವೂ ಕೂಡ. ಅನೇಕ ಬಗೆಯ ಬ್ಯಾಕ್ಟೀರಿಯಾಗಳು ಮತ್ತು ವೈರಾಣುಗಳು ಸಾಂಕ್ರಾಮಿಕ ಜ್ವರಗಳಿಗೆ ಕಾರಣವಾಗುತ್ತವೆ. ದೀಪದ ಉರಿಯನ್ನು ಹಾಳುಮಾಡುವ ಒಂದು ಹುಳವನ್ನು ಓಡಿಸಿದರೆ, ಸ್ವಲ್ಪ ಹೊತ್ತಿನ ಮತ್ತೊಂದು ಹುಳ ಬಂದು ಸೇರಬಹುದು. ಹೀಗೆ ಎಷ್ಟು ಹೊತ್ತು, ಎಷ್ಟು ಬಾರಿ ಕ್ರಿಮಿ-ಕೀಟಗಳನ್ನು ಓಡಿಸುತ್ತಾ ಕೂರಲು ಸಾಧ್ಯ? ಅದರ ಬದಲಿಗೆ, ಕ್ರಿಮಿ-ಕೀಟಗಳು ದೀಪದ ಸಮೀಪವೇ ಬರದಂತೆ ಗಾಜಿನ ರಕ್ಷಾಕವಚವನ್ನು ಒದಗಿಸಿದರೆ ದೀಪವನ್ನು ನಿರಂತರವಾಗಿ ರಕ್ಷಿಸಬಹುದು.

ಅದೇ ರೀತಿ, ನಮ್ಮ ಸುತ್ತಮುತ್ತಲೂ ಅಸಂಖ್ಯಾತ ಸೂಕ್ಷ್ಮಜೀವಿಗಳಿರುವಾಗ, ಅವುಗಳನ್ನೆಲ್ಲ ಒಂದೊಂದಾಗಿ ತಡೆಯುತ್ತಾ ಕೂರುವುದು ಅಸಾಧ್ಯ. ಅದರ ಬದಲಿಗೆ, ಅವುಗಳು ನಮ್ಮ ಶರೀರ ವನ್ನು ಪ್ರವೇಶಿಸದಂತೆ ಸೂಕ್ತ ಮುನ್ನೆಚ್ಚರಿಕೆಗಳನ್ನು ವಹಿಸುವುದು ಜಾಣತನ!

ಇದರ ಜೊತೆಗೆ, ದೀಪದಲ್ಲಿ ಎಣ್ಣೆ ಖಾಲಿಯಾಗದಂತೆಯೂ ನೋಡಿಕೊಳ್ಳಬೇಕು. ನಮ್ಮ ಆರೋಗ್ಯದ ವಿಷಯದಲ್ಲಿಯೂ ಇದೇ ತತ್ವ ಅನ್ವಯಿಸುತ್ತದೆ. ಆರೋಗ್ಯಕರ ಜೀವನಶೈಲಿಯ ಮೂಲಕ ದೇಹವನ್ನು ಸದೃಢವಾಗಿಟ್ಟುಕೊಳ್ಳುವುದು, ಆಹಾರ ಮತ್ತು ಸಕಾರಾತ್ಮಕ ವಿಚಾರಗಳ ಮೂಲಕ ದೇಹ ಹಾಗೂ ಮನಸ್ಸಿಗೆ ನಿರಂತರ ಪೋಷಣೆಯನ್ನು ನೀಡುವುದು ಅತ್ಯಂತ ಮುಖ್ಯ.

ಸೋಂಕುಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಮುನ್ನೆಚ್ಚರಿಕೆ ಮತ್ತು ದೇಹದ ಆರೋಗ್ಯವನ್ನು ಕಾಪಾಡುವ ಸಮತೋಲಿತ ಜೀವನಶೈಲಿ - ಈ ಎರಡನ್ನೂ ಸಮರ್ಥವಾಗಿ ಪಾಲಿಸಿದರೆ ಡೆಂಗ್ಯೂ ಮಾತ್ರವಲ್ಲದೆ, ಮುಂದೆ ಎದುರಾಗಬಹುದಾದ ಅನೇಕ ಸಾಂಕ್ರಾಮಿಕ ಜ್ವರಗಳ ಅಪಾಯವನ್ನೂ ಕಡಿಮೆ ಮಾಡಬಹುದು. This is the best health insurance!