Dr Sadhanashree Column: ರೋಗಿಗಳು ಕೇಳಿದ ಐದು ಪ್ರಶ್ನೆಗಳು, ಆಯುರ್ವೇದ ಹೇಳಿದ ಐದು ಉತ್ತರಗಳು
ಚಿಕಿತ್ಸಾಲಯದಲ್ಲಿ ಇಂತಹ ಸಂಭಾಷಣೆಗಳು ಹೊಸದೇನಲ್ಲ. ಆರೋಗ್ಯದ ಬಗ್ಗೆ ನಾವು ನಂಬಿ ಕೊಂಡಿರುವ ಅನೇಕ ಸಂಗತಿಗಳು ವಾಸ್ತವದಲ್ಲಿ ಅರ್ಧಸತ್ಯಗಳಾಗಿರುತ್ತವೆ ಅಥವಾ ಕೆಲವೊಮ್ಮೆ ಸಂಪೂರ್ಣ ಭ್ರಮೆಗಳಾಗಿರುತ್ತವೆ. ಯಾರೋ ಹೇಳಿದ್ದು, ಎಲ್ಲೋ ಓದಿದ್ದು, ಸಾಮಾಜಿಕ ಜಾಲತಾಣ ದಲ್ಲಿ ನೋಡಿದ್ದು, ಅಥವಾ ವರ್ಷಗಳಿಂದ ಮನೆಯಲ್ಲಿ ಕೇಳಿಕೊಂಡು ಬಂದದ್ದು- ಇವೆಲ್ಲ ಸೇರಿ ನಮ್ಮ ಆರೋಗ್ಯದ ಕುರಿತ ಅನೇಕ ನಂಬಿಕೆಗಳನ್ನು ರೂಪಿಸಿವೆ.
-
ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಡಾಕ್ಟರ್, ನಾನು ತುಪ್ಪವನ್ನು ಮುಟ್ಟುವುದೇ ಇಲ್ಲ. ಏಕೆ? ತುಪ್ಪ ತಿಂದರೆ ದಪ್ಪವಾಗುತ್ತೇವೆ, ಅಂತಾರೆ. ನಾನು ಅವರ ಕಡತವನ್ನು ನೋಡಿದೆ. ತೂಕ 92 ಕೆಜಿ. ಸರಿ. ತುಪ್ಪವನ್ನು ಎಷ್ಟು ವರ್ಷಗಳಿಂದ ಬಿಟ್ಟಿದ್ದೀರಿ? ಸುಮಾರು ಹತ್ತು ವರ್ಷ. ಹಾಗಾದರೆ ನಿಮ್ಮ ತೂಕವನ್ನು ಹೆಚ್ಚಿಸಿದ್ದು ತುಪ್ಪವಲ್ಲ ಅನ್ನೋದು ಈಗಾಗಲೇ ಸಾಬೀತಾಗಿದೆಯಲ್ಲ! ಒಂದು ಕ್ಷಣ ಅವರು ನನ್ನತ್ತ ನೋಡಿ ದರು. ನಂತರ ಇಬ್ಬರೂ ನಕ್ಕೆವು.
ಚಿಕಿತ್ಸಾಲಯದಲ್ಲಿ ಇಂತಹ ಸಂಭಾಷಣೆಗಳು ಹೊಸದೇನಲ್ಲ. ಆರೋಗ್ಯದ ಬಗ್ಗೆ ನಾವು ನಂಬಿ ಕೊಂಡಿರುವ ಅನೇಕ ಸಂಗತಿಗಳು ವಾಸ್ತವದಲ್ಲಿ ಅರ್ಧಸತ್ಯಗಳಾಗಿರುತ್ತವೆ ಅಥವಾ ಕೆಲವೊಮ್ಮೆ ಸಂಪೂರ್ಣ ಭ್ರಮೆಗಳಾಗಿರುತ್ತವೆ. ಯಾರೋ ಹೇಳಿದ್ದು, ಎಲ್ಲೋ ಓದಿದ್ದು, ಸಾಮಾಜಿಕ ಜಾಲತಾಣ ದಲ್ಲಿ ನೋಡಿದ್ದು, ಅಥವಾ ವರ್ಷಗಳಿಂದ ಮನೆಯಲ್ಲಿ ಕೇಳಿಕೊಂಡು ಬಂದದ್ದು- ಇವೆಲ್ಲ ಸೇರಿ ನಮ್ಮ ಆರೋಗ್ಯದ ಕುರಿತ ಅನೇಕ ನಂಬಿಕೆಗಳನ್ನು ರೂಪಿಸಿವೆ.
ಪ್ರತಿದಿನ ನನ್ನ ಚಿಕಿತ್ಸಾಲಯಕ್ಕೆ ಬರುವ ರೋಗಿಗಳು ಕೇಳುವ ಪ್ರಶ್ನೆಗಳೂ ಇದೇ ರೀತಿಯವು. ಹಣ್ಣಿನ ಜ್ಯೂಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದೇ?, ದಿನಕ್ಕೆ ಮೂರು ಲೀಟರ್ ನೀರು ಕುಡಿಯಲೇಬೇಕೇ?, ಹಸಿವಿಲ್ಲದಿದ್ದರೂ ಸಮಯಕ್ಕೆ ಊಟ ಮಾಡಬೇಕೇ?, ತುಪ್ಪ ನಿಜವಾಗಿಯೂ ದಪ್ಪ ಮಾಡುತ್ತದೆ ಯೇ?, ಸಲಾಡ್ ಯಾವಾಗಲೂ ಬೇಯಿಸಿದ ಆಹಾರಕ್ಕಿಂತ ಉತ್ತಮವೇ? ಇಂತಹ ಪ್ರಶ್ನೆಗಳು ಪದೇ ಪದೆ ಕೇಳಿ ಬರುತ್ತಲೇ ಇರುತ್ತವೆ.
ಆಶ್ಚರ್ಯವೆಂದರೆ, ಈ ಪ್ರಶ್ನೆಗಳಿಗೆ ಆಯುರ್ವೇದವು ಕೇವಲ ‘ಹೌದು’ ಅಥವಾ ‘ಇಲ್ಲ’ ಎಂದು ಉತ್ತರಿಸುವುದಿಲ್ಲ. ವ್ಯಕ್ತಿಯ ಪ್ರಕೃತಿ, ವಯಸ್ಸು, ಋತು, ಜೀವನಶೈಲಿ ಮತ್ತು ಮುಖ್ಯವಾಗಿ ಜೀರ್ಣಾಗ್ನಿಯನ್ನು ಪರಿಗಣಿಸಿ ಉತ್ತರ ನೀಡುತ್ತದೆ. ಏಕೆಂದರೆ ಆಯುರ್ವೇದದ ಪ್ರಕಾರ ಆರೋಗ್ಯದ ರಹಸ್ಯವು ಕೇವಲ ನಾವು ಏನು ತಿನ್ನುತ್ತೇವೆ ಎನ್ನುವುದರಲ್ಲಿ ಅಲ್ಲ, ಅದನ್ನು ಹೇಗೆ ಜೀರ್ಣಿಸಿಕೊಳ್ಳು ತ್ತೇವೆ ಎನ್ನುವುದರಲ್ಲಿಯೂ ಅಡಗಿದೆ.
ಇದನ್ನೂ ಓದಿ: Dr Sadhanashree Column: ಮಗು ಆಗುವುದೋ ? ಅಥವಾ ಮಗು ಮಾಡಿಕೊಳ್ಳುವುದೇ ?
ಹಾಗಾಗಿ, ಇಂದು ನನ್ನ ಚಿಕಿತ್ಸಾಲಯದಲ್ಲಿ ನಡೆದ ಇಂತಹ ಐದು ಆಸಕ್ತಿದಾಯಕ ಸಂಭಾಷಣೆ ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಈ ಪ್ರಶ್ನೆಗಳು ಕೆಲವೇ ರೋಗಿಗಳದ್ದಲ್ಲ, ನಮ್ಮಲ್ಲಿ ಅನೇಕರ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳೇ ಆಗಿವೆ.
1 ಡಾಕ್ಟರ್, ನಾನು ಪ್ರತಿದಿನ ಬೆಳಗ್ಗೆ ಹಣ್ಣಿನ ಜ್ಯೂಸ್ ಕುಡಿಯುತ್ತೇನೆ. ಅದಕ್ಕಿಂತ ಆರೋಗ್ಯ ಕರವಾದುದು ಇನ್ನೇನಿದೆ?
ಒಂದು ದಿನ ಮಧ್ಯವಯಸ್ಕ ರೋಗಿಯೊಬ್ಬರು ಹೆಮ್ಮೆಯಿಂದ ಹೇಳಿದರು, ನಾನು ಆರೋಗ್ಯಕ್ಕಾಗಿ ಚಹಾ, ಕಾಫಿ ಬಿಟ್ಟಿದ್ದೇನೆ. ಈಗ ಪ್ರತಿದಿನ ತಿಂಡಿಯ ನಂತರ ದೊಡ್ಡ ಗ್ಲಾಸ್ ಹಣ್ಣಿನ ಜ್ಯೂಸ್ ಕುಡಿಯುತ್ತೇನೆ.ನಾನು ಕೇಳಿದೆ, ಹಣ್ಣನ್ನೇ ತಿನ್ನುವುದಿಲ್ಲವೇ? ಇಲ್ಲ ಡಾಕ್ಟರ್, ಜ್ಯೂಸ್ ಮಾಡಿದರೆ ಬೇಗ ಆಗುತ್ತದೆ!
ಇದು ಇತ್ತೀಚೆಗೆ ಬಹಳ ಸಾಮಾನ್ಯವಾಗಿ ಕೇಳುವ ಮಾತು. ಆರೋಗ್ಯದ ಬಗ್ಗೆ ಕಾಳಜಿ ಇರುವ ಅನೇಕರು ಹಣ್ಣಿನ ಜ್ಯೂಸ್ ಅನ್ನು ಅತ್ಯುತ್ತಮ ಆಯ್ಕೆ ಎಂದು ಭಾವಿಸುತ್ತಾರೆ. ಆದರೆ, ಹಣ್ಣು ಮತ್ತು ಹಣ್ಣಿನ ಜ್ಯೂಸ್ ಎರಡೂ ಒಂದೇ ಅಲ್ಲ. ಹಣ್ಣನ್ನು ತಿನ್ನುವಾಗ ನಾವು ಅದನ್ನು ಜಗಿಯ ಬೇಕು, ಅದರ ಸ್ವಾಭಾವಿಕ ರಚನೆ (ಮುಖ್ಯವಾಗಿ ನಾರಿನಾಂಶ) ಹಾಗೆಯೇ ಉಳಿದಿರುತ್ತದೆ ಮತ್ತು ದೇಹವು ಅದನ್ನು ನಿಧಾನವಾಗಿ ಸ್ವೀಕರಿಸುತ್ತದೆ. ಆದರೆ, ಜ್ಯೂಸ್ ರೂಪದಲ್ಲಿ ಹಣ್ಣು ಸೇವಿಸಿದಾಗ ಈ ಸಹಜ ಪ್ರಕ್ರಿಯೆ ಬಹುತೇಕ ಕಣ್ಮರೆಯಾಗುತ್ತದೆ. ಇದರ ಜತೆಗೆ ಇನ್ನೊಂದು ಮುಖ್ಯ ವಿಷಯವಿದೆ.
ಒಂದು ಗ್ಲಾಸ್ ಜ್ಯೂಸ್ ತಯಾರಿಸಲು ಸಾಮಾನ್ಯವಾಗಿ ಹಲವು ಹಣ್ಣುಗಳನ್ನು ಬಳಸಲಾ ಗುತ್ತದೆ. ಮೂರು ಸೇಬು ಅಥವಾ ನಾಲ್ಕು ಕಿತ್ತಳೆಗಳನ್ನು ಕುಳಿತು ತಿನ್ನುವುದು ಕಷ್ಟವಾಗಬಹುದು. ಆದರೆ, ಅವುಗಳ ರಸವನ್ನು ಕೆಲವೇ ನಿಮಿಷಗಳಲ್ಲಿ ಕುಡಿಯಬಹುದು. ಹೀಗಾಗಿ ಅಜಾಗರೂಕತೆಯಿಂದಲೇ ಹೆಚ್ಚು ಪ್ರಮಾಣದ ಸಿಹಿ ಅಂಶವನ್ನು ನಾವು ಸೇವಿಸುತ್ತೇವೆ. ಹಾಗಾಗಿ ಹಣ್ಣನ್ನು ತಿನ್ನುವುದೇ ಸದಾ ಪಥ್ಯ!
2 ಡಾಕ್ಟರ್, ದಿನಕ್ಕೆ ಮೂರು ಲೀಟರ್ ನೀರು ಕುಡಿಯಲೇಬೇಕು ಅಂತಾರೆ. ನಾನು ಬಲವಂತ
ವಾಗಿ ಕುಡಿಯುತ್ತಿದ್ದೇನೆ.
ಒಬ್ಬ ಯುವಕ ದಿನಪೂರ್ತಿ ನೀರಿನ ಬಾಟಲಿ ಹಿಡಿದುಕೊಂಡೇ ಬಂದಿದ್ದ. ಏಕೆ ಇಷ್ಟು ನೀರು ಕುಡಿಯುತ್ತೀರಿ?ಎಂದು ಕೇಳಿದೆ. ಆರೋಗ್ಯಕ್ಕಾಗಿ ಡಾಕ್ಟರ್. ದಿನಕ್ಕೆ ಮೂರು ಲೀಟರ್ ಮುಗಿಸಲೇ ಬೇಕು. ನಾವು ಕಾರಿಗೆ ಪೆಟ್ರೋಲ್ ತುಂಬುವಂತೆ ದೇಹಕ್ಕೆ ನೀರು ತುಂಬಲು ಸಾಧ್ಯವಿಲ್ಲ. ನೀರಿನ ಅಗತ್ಯ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ವಯಸ್ಸು, ಋತು, ಕೆಲಸದ ಸ್ವರೂಪ, ಬೆವರು, ಆಹಾರ-ಇವೆಲ್ಲ ಅದರ ಮೇಲೆ ಪರಿಣಾಮ ಬೀರುತ್ತವೆ. ಆಯುರ್ವೇದದಲ್ಲಿ ತೃಷೆ ಅಥವಾ ದಾಹವು ದೇಹದ ಒಂದು ಸಹಜ ಸಂಕೇತ.
ದಾಹವಾಗುವಾಗ ನೀರು ಕುಡಿಯುವುದು ಮುಖ್ಯ. ದಾಹವಿಲ್ಲದಿದ್ದರೂ ಬಲವಂತ ವಾಗಿ ಅತಿಯಾಗಿ ನೀರು ಕುಡಿಯುವುದು ಜೀರ್ಣಾಗ್ನಿ ಯನ್ನು ಮಂದಗೊಳಿಸಬಹುದು. ನೀರು ಅತ್ಯಗತ್ಯ, ಆದರೆ ಅದರ ಪ್ರಮಾಣ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.
ಆಯುರ್ವೇದದಲ್ಲಿ ಊಟದ ಸಮಯದಲ್ಲಿ ಮತ್ತು ಊಟದ ಸುತ್ತಮುತ್ತ ನೀರು ಕುಡಿಯುವ ಕ್ರಮದ ಬಗ್ಗೆಯೂ ವಿವರಣೆ ಇದೆ. ಅತಿಯಾಗಿ ನೀರು ಕುಡಿಯುವುದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ. ಬಾಯಾರಿಕೆಯ ಸಂಕೇತವನ್ನು ಗೌರವಿಸುವುದು ಮುಖ್ಯ. ದೇಹದ ಅವಶ್ಯಕತೆಯನ್ನು ಅರಿತು ನೀರು ಕುಡಿಯುವುದು ಆರೋಗ್ಯಕರ ಅಭ್ಯಾಸ. ಲೀಟರ್‌ಗಳ ಲೆಕ್ಕಾಚಾರವನ್ನು ಬೆನ್ನಟ್ಟುವುದು ಅಲ್ಲ.
3 ಡಾಕ್ಟರ್, ನನಗೆ ಹಸಿವಿಲ್ಲ. ಆದರೂ ಸಮಯ ಆಯಿತು ಎಂದು ಊಟ ಮಾಡುತ್ತೇನೆ. ಅದು ಒಳ್ಳೆಯದಲ್ಲವೇ?
ಒಬ್ಬ ಮಹಿಳೆ ಅಜೀರ್ಣ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆಯೊಂದಿಗೆ ಬಂದಿದ್ದರು. ಹಸಿವಾಗುತ್ತದೆಯೇ? ಎಂದು ಕೇಳಿದೆ. ಇಲ್ಲ. ಆದರೆ ಸಮಯ ಆಯಿತು ಅಂದರೆ ಊಟ ಮಾಡಿ ಬಿಡುತ್ತೇನೆ.ಆಯುರ್ವೇದದಲ್ಲಿ ಹಸಿವು ಎಂದರೆ ಕೇವಲ ಹೊಟ್ಟೆ ಖಾಲಿಯಾಗಿರುವುದಲ್ಲ. ಅದು ಜೀರ್ಣಾಗ್ನಿ ಸಿದ್ಧವಾಗಿದೆ ಎಂಬ ಸಂಕೇತ. ಹಿಂದಿನ ಆಹಾರ ಸಂಪೂರ್ಣವಾಗಿ ಜೀರ್ಣವಾಗುವ ಮುನ್ನ ಮತ್ತೊಮ್ಮೆ ಆಹಾರವನ್ನು ಹಾಕಿದರೆ ಅದು ದೇಹಕ್ಕೆ ಭಾರವಾಗಬಹುದು.ಇದರಿಂದ ಎಲ್ಲರೂ ಹಸಿವಾಗುವವರೆಗೂ ಉಪವಾಸ ಮಾಡಬೇಕು ಎಂಬ ಅರ್ಥವಲ್ಲ. ಆದರೆ, ಪದೇಪದೆ ಹಸಿವಿಲ್ಲದಿದ್ದರೂ ಊಟ ಮಾಡುವ ಅಭ್ಯಾಸ ಜೀರ್ಣಕ್ರಿಯೆಯ ಮೇಲೆ ಒತ್ತಡ ಉಂಟುಮಾಡ ಬಹುದು.
ಹಸಿವು, ಲಘುತ್ವ ಮತ್ತು ಉತ್ಸಾಹ-ಇವು ಉತ್ತಮ ಅಗ್ನಿಯ ಲಕ್ಷಣಗಳು ಎಂದು ಆಯುರ್ವೇದ ಹೇಳುತ್ತದೆ.ನಿಜವಾದ ಹಸಿವು ಮತ್ತು ಕೇವಲ ತಿನ್ನುವ ಆಸೆ ಎರಡೂ ಒಂದೇ ಅಲ್ಲ. ಕೆಲವೊಮ್ಮೆ ಬೇಸರ, ಒತ್ತಡ, ಅಭ್ಯಾಸ ಅಥವಾ ಸಾಮಾಜಿಕ ಸಂದರ್ಭಗಳಿಂದಲೂ ನಾವು ಆಹಾರ ಸೇವಿಸುತ್ತೇವೆ. ಆಯುರ್ವೇದವು ಆಹಾರವನ್ನು ಔಷಧಿಯಷ್ಟೇ ಮಹತ್ವದಿಂದ ನೋಡುತ್ತದೆ. ಆದ್ದರಿಂದ ಆಹಾರ ಸೇವಿಸುವ ಮೊದಲು ನನಗೆ ನಿಜವಾಗಿಯೂ ಹಸಿವಿದೆಯೇ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದು ಒಳ್ಳೆಯ ಅಭ್ಯಾಸ.
4 ಡಾಕ್ಟರ್, ತುಪ್ಪ ತಿಂದರೆ ದಪ್ಪವಾಗುತ್ತೇವೆ ಅಲ್ವಾ?
ಒಬ್ಬ ರೋಗಿ ತಮ್ಮ ಊಟದ ಪಟ್ಟಿಯನ್ನು ತೋರಿಸುತ್ತಾ ಹೇಳಿದರು, ಎಲ್ಲವನ್ನೂ ತಿನ್ನುತ್ತೇನೆ. ಆದರೆ, ತುಪ್ಪ ಮಾತ್ರ ಮುಟ್ಟುವುದಿಲ್ಲ. ಏಕೆ? ಎಂದು ಕೇಳಿದೆ. ತುಪ್ಪ ತಿಂದರೆ ದಪ್ಪವಾಗುತ್ತೇವೆ ಅಂತಾರೆ! ಇದು ಬಹಳ ಜನಪ್ರಿಯವಾದ ಭ್ರಮೆ. ವಾಸ್ತವವಾಗಿ ಯಾವುದೇ ಆಹಾರವನ್ನು ಅತಿಯಾಗಿ ಸೇವಿಸಿದರೆ ಅದು ಸಮಸ್ಯೆ ಉಂಟುಮಾಡಬಹುದು. ತುಪ್ಪವೂ ಅದಕ್ಕೆ ಹೊರತಲ್ಲ. ಆಯುರ್ವೇದದಲ್ಲಿ ಘೃತವನ್ನು ಅತ್ಯಂತ ಮಹತ್ವದ ಆಹಾರ ಪದಾರ್ಥವೆಂದು ಪರಿಗಣಿಸಲಾಗಿದೆ.
ಸರಿಯಾದ ಪ್ರಮಾಣದಲ್ಲಿ, ಸರಿಯಾದ ವ್ಯಕ್ತಿಗೆ, ಸರಿಯಾದ ಸಂದರ್ಭದಲ್ಲಿ ಬಳಸಿದರೆ ಅದು ದೇಹಕ್ಕೆ ಸ್ನಿಗ್ಧತೆ, ಪೋಷಣೆ ಮತ್ತು ಬಲವನ್ನು ನೀಡುತ್ತದೆ. ಸಮಸ್ಯೆ ತುಪ್ಪದಲ್ಲ, ಅತಿಯಾದ ಸೇವನೆ, ಚಟುವಟಿಕೆಯ ಕೊರತೆ ಮತ್ತು ದುರ್ಬಲ ಜೀರ್ಣಕ್ರಿಯೆಯಲ್ಲಿ ಇರುತ್ತದೆ.
ನಮ್ಮ ಸಂಪ್ರದಾಯದ ಅಡುಗೆಯಲ್ಲಿ ತುಪ್ಪಕ್ಕೆ ವಿಶೇಷ ಸ್ಥಾನಮಾನ ಇತ್ತು. ಬಿಸಿ ಅನ್ನದ ಮೇಲೆ ಒಂದು ಚಮಚ ಕರಗಿಸಿದ ತುಪ್ಪ, ಜತೆಗೆ ಕುಡಿಯಲು ಬಿಸಿನೀರಿನ ಬಳಕೆ ಸಾಮಾನ್ಯವಾಗಿತ್ತು. ಹೀಗೆ ನಿಯಮಬದ್ಧವಾಗಿ ಬಳಸಿದಾಗ ತುಪ್ಪವು ಅಮೃತಸಮಾನವಾಗುವುದು ನಿಸ್ಸಂಶಯ!
ಸಾವಿರಾರು ವರ್ಷಗಳಿಂದ ಬಳಸಿಕೊಂಡು ಬಂದಿರುವ ಈ ಆಹಾರವನ್ನು ಆಧಾರವಿಲ್ಲದ ಭಯ ದಿಂದ ಸಂಪೂರ್ಣವಾಗಿ ತ್ಯಜಿಸುವುದು ಸರಿಯಲ್ಲ. ಪ್ರಮಾಣ, ಜೀರ್ಣಶಕ್ತಿ ಮತ್ತು ವ್ಯಕ್ತಿಯ ಸ್ಥಿತಿ- ಇವೇ ಇಲ್ಲಿ ಮುಖ್ಯ.
5 ಡಾಕ್ಟರ್, ನಾನು ಆರೋಗ್ಯಕ್ಕಾಗಿ ಪ್ರತಿದಿನ ಸಲಾಡ್ ತಿನ್ನುತ್ತೇನೆ. ಬೇಯಿಸಿದ ಆಹಾರಕ್ಕಿಂತ ಅದು ಉತ್ತಮವಲ್ಲವೇ?
ಒಬ್ಬ ಯುವತಿ ಹೆಮ್ಮೆಯಿಂದ ಹೇಳಿದರು, ನಾನು ಈಗ ಬಹುತೇಕ ಬೇಯಿಸಿದ ಆಹಾರ ಕಡಿಮೆ ಮಾಡಿ ಸಲಾಡ್ ಹೆಚ್ಚು ತಿನ್ನುತ್ತಿದ್ದೇನೆ. ನಾನು ಕೇಳಿದೆ, ಅದಾದ ಮೇಲೆ ಹೊಟ್ಟೆ ಹಗುರ ವಾಗಿದೆಯೇ? ಇಲ್ಲ ಡಾಕ್ಟರ್, ಗಾಳಿ, ಉಬ್ಬರ ಸ್ವಲ್ಪ ಹೆಚ್ಚಾಗಿದೆ, ನಿದ್ದೆಯಲ್ಲಿ ಏರುಪೇರಾಗಿದೆ, ಮನಸ್ಸಿನಲ್ಲಿ ಯಾಕೋ ಕಿರಿಕಿರಿ.
ಇಂದಿನ ಆರೋಗ್ಯ ಚರ್ಚೆಗಳಲ್ಲಿ ಸಲಾಡ್‌ಗೆ ವಿಶೇಷ ಸ್ಥಾನವಿದೆ. ಆದರೆ ಎಲ್ಲರಿಗೂ, ಎಲ್ಲ ಕಾಲದಲ್ಲೂ, ಎಲ್ಲ ಪ್ರಮಾಣದಲ್ಲೂ ಅದು ಸೂಕ್ತವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ಆಯುರ್ವೇದದ ಪ್ರಕಾರ ಬೇಯಿಸಿದ ಆಹಾರ ಸಾಮಾನ್ಯವಾಗಿ ಜೀರ್ಣಿಸಲು ಸುಲಭ. ಕಚ್ಚಾ ಆಹಾರಗಳಲ್ಲಿ ಕೆಲವು ಪೌಷ್ಟಿಕ ಅಂಶಗಳು ಹೆಚ್ಚು ಉಳಿದರೂ, ಅವುಗಳನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯವೂ ಅಷ್ಟೇ ಮುಖ್ಯ. ಬಲವಾದ ಅಗ್ನಿಯುಳ್ಳವರು, ದೈಹಿಕ ಶ್ರಮ ಪಡುವವರು, ಕೆಲವು ಋತುಗಳಲ್ಲಿ ಸಲಾಡ್‌ನಿಂದ ಲಾಭ ಪಡೆಯಬಹುದು. ಆದರೆ, ದುರ್ಬಲ ಜೀರ್ಣಶಕ್ತಿ ಇರುವವರು ಇದನ್ನು ವರ್ಜಿಸುವುದೇ ಒಳಿತು.
ಕೆಲವರು ಸಲಾಡ್ ತಿಂದ ನಂತರ ಹಗುರವಾಗಿ ಅನುಭವಿಸಬಹುದು, ಮತ್ತೆ ಕೆಲವರಿಗೆ ಹೊಟ್ಟೆ ಉಬ್ಬರ, ಗಾಳಿ ಅಥವಾ ಅಸ್ವಸ್ಥತೆ ಉಂಟಾಗಬಹುದು. ಇದೇ ಕಾರಣಕ್ಕೆ ಆಯುರ್ವೇದವು ‘ಒಂದು ಆಹಾರ ಎಲ್ಲರಿಗೂ’ ಎಂಬ ತತ್ವವನ್ನು ಒಪ್ಪುವುದಿಲ್ಲ. ಯಾವ ಆಹಾರವನ್ನು ಸೇವಿಸಿದ ನಂತರ ದೇಹ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಗಮನಿಸುವುದು ಅತ್ಯಂತ ಮುಖ್ಯ. ಆರೋಗ್ಯಕರ ಆಹಾರ ಎಂದರೆ ಕೇವಲ ಪೌಷ್ಟಿಕವಾಗಿರುವುದಲ್ಲ, ಅದು ಸುಲಭವಾಗಿ ಜೀರ್ಣವಾಗುವುದೂ ಆಗಿರಬೇಕು.
ಈ ಐದು ಪ್ರಶ್ನೆಗಳಿಗೆ ಉತ್ತರ ನೀಡಿದ ನಂತರ ನನ್ನ ರೋಗಿಗಳು ಸಾಮಾನ್ಯವಾಗಿ ಹೇಳುವ ಒಂದು ಮಾತಿದೆ - ಡಾಕ್ಟರ್, ಇದನ್ನು ಈ ದೃಷ್ಟಿಯಲ್ಲಿ ನಾವು ಎಂದೂ ಯೋಚಿಸಿರಲಿಲ್ಲ. ವಾಸ್ತವವಾಗಿ ಆರೋಗ್ಯದ ಬಗ್ಗೆ ಇರುವ ಬಹುತೇಕ ಗೊಂದಲಗಳು ತಪ್ಪು ಆಹಾರದಿಂದ ಅಲ್ಲ, ಆಹಾರದ ಬಗ್ಗೆ ಇರುವ ತಪ್ಪು ಕಲ್ಪನೆಗಳಿಂದ ಉಂಟಾಗುತ್ತವೆ. ಕೆಲವೊಮ್ಮೆ ನಾವು ಒಂದು ಆಹಾರವನ್ನು ಅನಗತ್ಯ ವಾಗಿ ಹೆದರುತ್ತೇವೆ, ಮತ್ತೆ ಕೆಲವೊಮ್ಮೆ ಒಂದು ಆಹಾರ ಅಥವಾ ಅಭ್ಯಾಸವನ್ನು ಅತಿಯಾಗಿ ಹೊಗಳಿ ಅದರ ಮೇಲೆ ಸಂಪೂರ್ಣ ಅವಲಂಬಿತರಾಗುತ್ತೇವೆ. ಈ ಎರಡೂ ಅತಿಗಳು ಆರೋಗ್ಯಕ್ಕೆ ಸಹಾಯಕವಾಗುವುದಿಲ್ಲ.
ಆಯುರ್ವೇದವು ನಮಗೆ ಮಧ್ಯಮ ಮಾರ್ಗವನ್ನು ಕಲಿಸುತ್ತದೆ. ಅದು ಭಯವನ್ನು ಸೃಷ್ಟಿಸುವು ದಿಲ್ಲ, ಅಂಧ ನಂಬಿಕೆಯನ್ನೂ ಪ್ರೋತ್ಸಾಹಿಸುವುದಿಲ್ಲ. ಬದಲಿಗೆ ವಿವೇಕದಿಂದ ಆಯ್ಕೆ ಮಾಡುವುದು, ದೇಹದ ಪ್ರತಿಕ್ರಿಯೆಗಳನ್ನು ಗಮನಿಸುವುದು ಮತ್ತು ಪ್ರಕೃತಿಯೊಂದಿಗೆ ಹೊಂದಾಣಿಕೆ ಯಲ್ಲಿ ಬದುಕುವುದನ್ನು ಕಲಿಸುತ್ತದೆ. ಮುಂದಿನ ಬಾರಿ ಆರೋಗ್ಯದ ಬಗ್ಗೆ ಯಾವುದಾದರೂ ಹೊಸ ಸಲಹೆ ನಿಮ್ಮ ಕಿವಿಗೆ ಬಿದ್ದಾಗ, ಅದನ್ನು ಕುರುಡಾಗಿ ಅನುಸರಿಸುವ ಮೊದಲು, ಒಂದು ಪ್ರಶ್ನೆಯನ್ನು ಕೇಳಿ, ಇದು ನಿಜವಾಗಿಯೂ ನನ್ನ ದೇಹಕ್ಕೆ ಸೂಕ್ತವೇ? ಈ ಒಂದು ಪ್ರಶ್ನೆಯೇ ನಿಮ್ಮನ್ನು ಉತ್ತಮ ಆರೋಗ್ಯದತ್ತ ಕೊಂಡೊಯ್ಯುವ ಮೊದಲ ಹೆಜ್ಜೆಯಾಗಬಹುದು.