ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಣ್ಣಿನಲ್ಲಿ ಮೂಡುವ ಗಣಪತಿ: ಬದುಕು ಕಟ್ಟುವ ಕಂಬಾರ

ಕುಂಬಾರನ ಬದುಕು ಹೊರಗಿನಿಂದ ನೋಡಿದಷ್ಟು ಸುಲಭವಲ್ಲ. ಮಣ್ಣನ್ನು ಹುಡುಕಿ ತರುವುದು, ಅದನ್ನು ಹದ ಮಾಡುವುದು, ಕಲಸಿ ಮೂರ್ತಿ ರೂಪಿಸು ವುದು, ಒಣಗಿಸುವುದು, ಬಣ್ಣ ಹಚ್ಚುವುದು, ಅಲಂಕರಿಸುವುದು- ಪ್ರತಿಯೊಂದು ಹಂತದಲ್ಲೂ ಅವನ ಶ್ರಮ ಅಡಗಿದೆ. ಒಂದು ಮೂರ್ತಿ ಸಿದ್ಧವಾಗು ವಷ್ಟರಲ್ಲಿ ಅವನ ಕೈಗಳು ಮಣ್ಣಿನಿಂದ ತುಂಬಿರುತ್ತವೆ; ದೇಹ ಬೆವರಿನಿಂದ ತೋಯುತ್ತದೆ. ಆದರೆ ಆ ಮಣ್ಣಿನ ಅವನ ಬದುಕಿನ ಭರವಸೆಯೂ ಅಡಗಿರುತ್ತದೆ.

ಮಣ್ಣಿನಲ್ಲಿ ಮೂಡುವ ಗಣಪತಿ: ಬದುಕು ಕಟ್ಟುವ ಕಂಬಾರ

-

Profile
Ashok Nayak Sep 12, 2026 6:02 PM

ವಾಣಿ ಮೈಸೂರು

ಹಬ್ಬ ಎಂದರೆ ಎಲ್ಲಿಲ್ಲದ ಸಡಗರ, ಸಂಭ್ರಮ. ಅದರಲ್ಲೂ ಗಣಪತಿ ಹಬ್ಬದ ವಿಶೇಷತೆಯೇ ಬೇರೆ. ಮನೆಮನೆ ಗಳಲ್ಲಿ ಗಣಪತಿ. ಇತ್ತೀಚೆಗೆ ಮಣ್ಣಿನ ಗಣಪತಿ ಹೆಚ್ಚುತ್ತಿದೆ. ಸರಕಾರವೂ ಮಣ್ಣಿನ ಗಣಪತಿಗೆ ಆದ್ಯತೆ ನೀಡಿದೆ. ಈ ಪರಿಸರ ಸ್ನೇಹಿ ಗಣಪತಿಯ ಹಿಂದೆ, ಮಣ್ಣಿನಲ್ಲಿ ಬೆವರು ಸುರಿಸುವ ಕಲಾವಿದನ ಬದುಕಿದೆ. ವರ್ಷಗಟ್ಟಲೆ ಮಣ್ಣಿನೊಂದಿಗೆ ಬೆರೆತು, ತನ್ನ ಕೈಚಳಕದಿಂದ ಗಣಪತಿಗೆ ರೂಪ ನೀಡುವ ಕುಂಬಾರನ ಪರಿಶ್ರಮವಿದೆ.

ಕುಂಬಾರನ ಬದುಕು ಹೊರಗಿನಿಂದ ನೋಡಿದಷ್ಟು ಸುಲಭವಲ್ಲ. ಮಣ್ಣನ್ನು ಹುಡುಕಿ ತರುವುದು, ಅದನ್ನು ಹದ ಮಾಡುವುದು, ಕಲಸಿ ಮೂರ್ತಿ ರೂಪಿಸು ವುದು, ಒಣಗಿಸುವುದು, ಬಣ್ಣ ಹಚ್ಚುವುದು, ಅಲಂಕರಿಸುವುದು- ಪ್ರತಿಯೊಂದು ಹಂತದಲ್ಲೂ ಅವನ ಶ್ರಮ ಅಡಗಿದೆ. ಒಂದು ಮೂರ್ತಿ ಸಿದ್ಧವಾಗು ವಷ್ಟರಲ್ಲಿ ಅವನ ಕೈಗಳು ಮಣ್ಣಿನಿಂದ ತುಂಬಿರುತ್ತವೆ; ದೇಹ ಬೆವರಿನಿಂದ ತೋಯುತ್ತದೆ. ಆದರೆ ಆ ಮಣ್ಣಿನ ಅವನ ಬದುಕಿನ ಭರವಸೆಯೂ ಅಡಗಿರುತ್ತದೆ.

ಇದನ್ನೂ ಓದಿ: Sowthadka Ganapathi Temple: ಈ ಗಣಪತಿಗೆ ಘಂಟೆ ಕೊಟ್ಟರೆ ಸಾಕು ಸಮಸ್ಯೆಗಳೆಲ್ಲಾ ಮಾಯ! ದೇವಸ್ಥಾನದ ವಿಶೇಷತೆ ಏನು?

ಗಣಪತಿ ಹಬ್ಬಕ್ಕೆ ತಿಂಗಳುಗಳ ಮುಂಚೆಯೇ ಅವನ ಕೆಲಸ ಆರಂಭವಾಗುತ್ತದೆ. ಇತರರು ಹಬ್ಬದ ದಿನಗಳನ್ನು ಎಣಿಸುತ್ತಿದ್ದರೆ, ಕುಂಬಾರನ ಮನಸ್ಸಿನಲ್ಲಿ ಮೂರ್ತಿ ಗಳ ಸಂಖ್ಯೆಯ ಲೆಕ್ಕಾಚಾರ ನಡೆಯುತ್ತಿರುತ್ತದೆ. ಎಷ್ಟು ಮೂರ್ತಿಗಳನ್ನು ತಯಾರಿಸ ಬೇಕು? ಎಷ್ಟು ಗಾತ್ರಗಳಲ್ಲಿ ಮಾಡಬೇಕು? ಮಣ್ಣು, ಬಣ್ಣ, ಅಲಂಕಾರ ಸಾಮಗ್ರಿಗಳಿಗೆ ಎಷ್ಟು ಖರ್ಚಾಗಬಹುದು? ಮೂರ್ತಿಗಳು ಮಾರಾಟ ವಾಗಬಹುದೇ? ಹಾಕಿದ ಬಂಡವಾಳ ಮರಳಬಹುದೇ? ಎಂಬ ಪ್ರಶ್ನೆಗಳು ಅವನನ್ನು ಕಾಡುತ್ತಲೇ ಇರುತ್ತವೆ.

ಒಂದು ಕಡೆ ಕಚ್ಚಾ ವಸ್ತುಗಳ ಖರ್ಚು, ಮತ್ತೊಂದು ಕಡೆ ಸಾರಿಗೆ ಮತ್ತು ಅಲಂಕಾರದ ವೆಚ್ಚ. ಇವೆಲ್ಲವನ್ನೂ ಭರಿಸಿ ಮೂರ್ತಿಯನ್ನು ತಯಾರಿಸಿದ ನಂತರ ಅದರ ಬೆಲೆಯನ್ನು ನಿಗದಿಪಡಿಸು ವುದೂ ಸುಲಭವಲ್ಲ. ತನ್ನ ಪರಿಶ್ರಮಕ್ಕೆ ತಕ್ಕ ಬೆಲೆ ಕೇಳಿದರೆ ಗ್ರಾಹಕರು ಹಿಂಜರಿಯಬಹುದು; ಕಡಿಮೆ ಬೆಲೆಗೆ ಮಾರಿದರೆ ಹಾಕಿದ ಬಂಡವಾಳವೇ ಮರಳದ ಪರಿಸ್ಥಿತಿ. ಆದರೂ ಬದುಕಿನ ಅನಿವಾರ್ಯತೆ ಅವನನ್ನು ಮುಂದುವರಿಯುವಂತೆ ಮಾಡುತ್ತದೆ. ಮಣ್ಣಿನ ಒಂದು ಉಂಡೆ ಅವನ ಕೈ ಸೇರಿದಾಗ ನಿಧಾನವಾಗಿ ಗಣಪತಿಯ ರೂಪ ಪಡೆಯುತ್ತದೆ.

ಬೆರಳ ತುದಿಯ ಸ್ಪರ್ಶಕ್ಕೆ ಸೊಂಡಿಲು, ಕಿವಿ, ಕಣ್ಣು, ಕಿರೀಟ ಹೀಗೆ ಒಂದೊಂದೇ ಅಂಗಗಳು ಮೂಡುತ್ತವೆ. ಸಾಮಾನ್ಯ ಮನುಷ್ಯನಿಗೆ ಅದು ಮಣ್ಣು; ಕುಂಬಾರನಿಗೆ ಅದರಲ್ಲಿ ಈಗಾಗಲೇ ಒಂದು ರೂಪ ಅಡಗಿರುತ್ತದೆ. ತನ್ನ ಅನುಭವ ಮತ್ತು ಕಲ್ಪನೆಯಿಂದ ಆ ರೂಪವನ್ನು ಹೊರತರುತ್ತಾನೆ. ಈ ಕಲೆ ಅವನಿಗೆ ನಿನ್ನೆ-ಮೊನ್ನೆ ಬಂದ ದ್ದಲ್ಲ. ತಲೆತಲಾಂತರದಿಂದ ಬಂದ ಕಸುಬು ಅದು. ತಂದೆ ಯಿಂದ ಮಗನಿಗೆ, ಕುಟುಂಬ ದಿಂದ ಕುಟುಂಬಕ್ಕೆ ಹರಿದುಬಂದ ಕಲೆ.

ಮಣ್ಣಿನ ಗುಣ ಅರಿಯುವುದು, ಅದಕ್ಕೆ ತಕ್ಕ ಹದ ನೀಡುವುದು, ಮೂರ್ತಿಯ ಆಕಾರವನ್ನು ಸಮತೋಲನದಿಂದ ರೂಪಿಸು ವುದು-ಇವೆಲ್ಲವೂ ಅನುಭವದಿಂದ ಬಂದ ಜ್ಞಾನ. ಶಾಲೆಯಲ್ಲಿ ಕಲಿಯಲಾಗದ, ಪುಸ್ತಕದಲ್ಲಿ ಸಂಪೂರ್ಣವಾಗಿ ಸಿಗದ ಬದುಕಿನ ಪಾಠ ಇದು. ಕುಂಬಾರನ ಮನೆಯಲ್ಲೂ ಗಣಪತಿ ಹಬ್ಬದ ಸಂಭ್ರಮವಿರುತ್ತದೆ. ಆದರೆ ಆ ಸಂಭ್ರಮದ ಹಿಂದೆ ದುಡಿಮೆಯ ಒತ್ತಡವೂ ಇರುತ್ತದೆ. ಮನೆಯ ಸದಸ್ಯರೂ ಅವನ ಕೆಲಸದಲ್ಲಿ ಕೈಜೋಡಿಸುತ್ತಾರೆ. ಯಾರೋ ಮಣ್ಣು ಹದ ಮಾಡುತ್ತಾರೆ, ಇನ್ನೊಬ್ಬರು ಬಣ್ಣ ಹಚ್ಚುತ್ತಾರೆ, ಮತ್ತೊಬ್ಬರು ಅಲಂಕಾರ ಮಾಡುತ್ತಾರೆ.

ಹಬ್ಬದ ಸಂದರ್ಭದಲ್ಲಿ ಒಂದು ಕುಟುಂಬವೇ ಮಣ್ಣಿನೊಂದಿಗೆ ಬದುಕು ಕಟ್ಟಿಕೊಳ್ಳಲು ದುಡಿಯು ತ್ತದೆ. ಆದರೂ ಈ ಪರಿಶ್ರಮಕ್ಕೆ ಪ್ರತಿ-ಲ ಸಿಗುತ್ತದೆ ಎಂಬ ಖಾತರಿ ಇರುವುದಿಲ್ಲ. ಹಬ್ಬದ ದಿನಗಳು ಹತ್ತಿರವಾಗುತ್ತಿದ್ದಂತೆ ಮೂರ್ತಿಗಳು ಮಾರಾಟವಾಗುವ ನಿರೀಕ್ಷೆಯಲ್ಲಿ ಕುಂಬಾರ ಮಾರುಕಟ್ಟೆಯತ್ತ ಮುಖ ಮಾಡುತ್ತಾನೆ. ಜನರು ಮೂರ್ತಿಗಳನ್ನು ಆಯ್ಕೆಮಾಡುವುದನ್ನು ದೂರದಿಂದಲೇ ಗಮನಿಸುತ್ತಾನೆ.

ತನ್ನ ಕೈಯಿಂದ ಮೂಡಿದ ಮೂರ್ತಿಯ ಮುಂದೆ ಒಬ್ಬ ಗ್ರಾಹಕ ನಿಂತಾಗ ಅವನ ಕಣ್ಣಲ್ಲಿ ನಿರೀಕ್ಷೆ ಮೂಡುತ್ತದೆ. ಯಾರಾದರೂ ಆ ಮೂರ್ತಿಯನ್ನು ಖರೀದಿಸಿ ಮನೆಗೆ ಕೊಂಡೊಯ್ದಾಗ, ಅದು ಕೇವಲ ಒಂದು ಮಾರಾಟವಲ್ಲ-ಅವನ ಹಲವು ದಿನಗಳ ಪರಿಶ್ರಮಕ್ಕೆ ಸಿಕ್ಕ ಸಣ್ಣ ಗೆಲುವು. ಆದರೆ ಎಲ್ಲ ಮೂರ್ತಿಗಳಿಗೂ ಅಂತಹ ಭಾಗ್ಯ ಸಿಗುವುದಿಲ್ಲ. ಕೆಲವು ಮೂರ್ತಿಗಳು ಮಾರಾಟವಾಗದೆ ಉಳಿಯುತ್ತವೆ. ಹಬ್ಬ ಮುಗಿದ ಮೇಲೂ ತನ್ನ ಮುಂದೆ ಉಳಿದಿರುವ ಗಣಪತಿ ಮೂರ್ತಿಗಳನ್ನು ನೋಡಿದಾಗ ಅವನ ಮನಸ್ಸಿನಲ್ಲಿ ಹಲವು ಭಾವನೆಗಳು ಮೂಡುತ್ತವೆ.

ಹಾಕಿದ ಹಣ, ಸುರಿಸಿದ ಬೆವರು, ಕಳೆದ ದಿನಗಳು- ಎಲ್ಲವೂ ನೆನಪಾಗುತ್ತವೆ. ಆದರೂ ಅವನು ತನ್ನ ಕಲೆಯನ್ನು ತ್ಯಜಿಸುವುದಿಲ್ಲ. ಮಾರಾಟವಾಗದೆ ಉಳಿದ ಮೂರ್ತಿ ಯಲ್ಲೂ ಅವನು ನಷ್ಟವನ್ನಷ್ಟೇ ಕಾಣು ವುದಿಲ್ಲ. ಅಲ್ಲಿ ತನ್ನ ಕೈಚಳಕವಿದೆ. ತನ್ನ ಸಮಯವಿದೆ. ತನ್ನ ಕುಟುಂಬದ ಪರಿಶ್ರಮ ವಿದೆ. ಮುಖ್ಯವಾಗಿ, ತನ್ನ ಭಕ್ತಿಯಿದೆ. ನನ್ನ ಕೈಯಿಂದ ಗಣಪತಿ ರೂಪ ಪಡೆದಿzನೆ ಎಂಬ ಸಾರ್ಥಕ ಭಾವ ಅವನ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಮೂರ್ತಿ ಮಾರಾಟ ವಾಗದಿದ್ದರೂ ಅದರಲ್ಲಿರುವ ಗಣಪತಿ ಯನ್ನು ಅವನು ಭಕ್ತಿಯಿಂದ ಕಾಣುತ್ತಾನೆ. ಅವನ ಬದುಕು ಹೀಗೆ ಮಣ್ಣಿನೊಂದಿಗೆ ಬೆಸೆದು ಕೊಂಡಿದೆ.

ಬೆಳಗ್ಗೆ ಮಣ್ಣಿನೊಂದಿಗೆ ಆರಂಭವಾಗುವ ದಿನ, ಸಂಜೆ ಮಣ್ಣಿನ ಕಲೆಗಳಿಂದ ತುಂಬಿದ ಕೈಗಳೊಂದಿಗೆ ಮುಗಿಯುತ್ತದೆ. ಮಣ್ಣಿನಿಂದ ಬದುಕು ಕಟ್ಟಿಕೊಂಡಿರುವ ಈ ಕಲಾವಿದನಿಗೆ ಮಣ್ಣೇ ಅನ್ನ, ಮಣ್ಣೇ ಕಲೆ, ಮಣ್ಣೇ ಜೀವನ. ಇಂದು ದೊಡ್ಡ ದೊಡ್ಡ ಮೂರ್ತಿಗಳು, ಆಕರ್ಷಕ ಅಲಂಕಾರಗಳು, ಬಣ್ಣಬಣ್ಣದ ವಿನ್ಯಾಸಗಳು ಜನರನ್ನು ಸೆಳೆಯುತ್ತಿವೆ. ಆ ವೈಭವದ ನಡುವೆ ಸಣ್ಣ ಪ್ರಮಾಣದಲ್ಲಿ ಮಣ್ಣಿನ ಗಣಪತಿ ತಯಾರಿಸುವ ಕುಂಬಾರನ ಬದುಕು ಮರೆಯಾಗ ಬಾರದು.