Kaggere Prakash Column: ದೇವೇಗೌಡರ ರಾಜಕೀಯ ಬದುಕಿನ ಕಥನ
ದೇವೇಗೌಡರ ಸಂಬಂಧಿತ ಹಲವು ಗ್ರಂಥಗಳ ಅಧ್ಯಯನ, ಹಲವಾರು ವ್ಯಕ್ತಿಗಳ ಭೇಟಿ ಮಾಡಿ ವಿಷಯ ಸಂಗ್ರಹಿಸಿ ರುವುದಲ್ಲದೆ ಸೂಕ್ತ ವ್ಯಕ್ತಿಗಳಿಂದ ಲೇಖನಗಳನ್ನು ಬರೆಸಿರುವುದು

ಕಗ್ಗೆರೆ ಪ್ರಕಾಶ್
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳು, ಕನ್ನಡಪರ ಚಿಂತಕರೂ ಆದ ನೇ.ಭ. ರಾಮಲಿಂಗಶೆಟ್ಟರು ಮಾಜಿ ಪ್ರಧಾನಿ ಎಚ್ .ಡಿ. ದೇವೇಗೌಡರ ಕುರಿತು ‘ಮಣ್ಣಿನ ಮಗ ನಾನು ಕಂಡಂತೆ ಮತ್ತು ನಾಡು ಕಂಡಂತೆ’ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಬಹುವಿಷಯ ವಿಸ್ತಾರದ ಈ ಕೃತಿಯಲ್ಲಿ ಹಲವು ಸತ್ಯಸಂಗತಿಗಳು ದಾಖಲಾಗಿವೆ.
ದೇವೇಗೌಡರ ಸಂಬಂಧಿತ ಹಲವು ಗ್ರಂಥಗಳ ಅಧ್ಯಯನ, ಹಲವಾರು ವ್ಯಕ್ತಿಗಳ ಭೇಟಿ ಮಾಡಿ ವಿಷಯ ಸಂಗ್ರಹಿಸಿ ರುವುದಲ್ಲದೆ ಸೂಕ್ತ ವ್ಯಕ್ತಿಗಳಿಂದ ಲೇಖನಗಳನ್ನು ಬರೆಸಿರುವುದು ಅಪರೂಪವಾಗಿದೆ. ದೇವೇಗೌಡರ ಬದುಕು, ರಾಜಕೀಯ, ಜೀವನ ವೃತ್ತಾಂತ ಕುರಿತಂತೆ ಕೇವಲ ಏಕಮುಖವಾಗಿ ವಿಷಯಗಳು ಇಲ್ಲಿ ದಾಖಲಾಗಿಲ್ಲ.
ದೇವೇಗೌಡರ ಏಳುಬೀಳುಗಳು, ಟೀಕೆ-ಟಿಪ್ಪಣಿಗಳು, ನೋವು-ಹತಾಶೆ, ದುಃಖ-ದುಮ್ಮಾನಗಳು, ರಾಜಕೀಯ ಸ್ಥಿತ್ಯಂತರಗಳು, ನಾಡು-ನುಡಿ, ರೈತರ ಹಾಗೂ ಮಣ್ಣಿನ ಬಗ್ಗೆ ಇರುವ ಕಾಳಜಿ, ಗೌಡರ ಸಿಟ್ಟು-ಸೆಡವು, ಹಸನ್ಮುಖತೆಎಲ್ಲ ವಿಚಾರಗಳೂ ಪುಸ್ತಕದಲ್ಲಿ ಅಡಕವಾಗಿವೆ. ಹಾಗಾಗಿ ಈ ಪುಸ್ತಕ ವಿಶಿಷ್ಟ, ವಿಭಿನ್ನ ಕೃತಿಯಾಗಿ ನಿಲ್ಲುತ್ತದೆ.ಸಾಮಾನ್ಯವಾಗಿ ದೇವೇಗೌಡರ ನಿದ್ದೆ ಮುದ್ದೆಗೂ ಅವಿನಾಭಾವ ಸಂಬಂಧವಿದೆ. ಅದೊಂದು ರಾಜಕೀಯ ಕಾರ್ಯಕ್ರಮ. ಅಲ್ಲಿ ಗೌಡರು ನಿದ್ದೆಯ ಮಂಪರಿನಲ್ಲೇ ಇದ್ದರು. ಶುರುವಾಯಿತು, ದೇವೇಗೌಡರ ನಿದ್ದೆ ಮುದ್ದೆಯಗೊರಕೆ ಎಂದು ಯಾರೋ ಹಾಸ್ಯ ಚಟಾಕಿ ಹಾರಿಸಿದರು.
ತಕ್ಷಣವೇ ದೇವೇಗೌಡರ ಅಭಿಮಾನಿ ‘ಹೀಗೆಲ್ಲ ಅಪಹಾಸ್ಯ ಮಾಡುವುದು ಸರಿಯಲ್ಲ. ಅವರೊಬ್ಬ ರಾಜಕೀಯ ಸಂತರು. ಕಣ್ಮುಚ್ಚಿ ಗೌಡರು ನಿದ್ದೆ ಮಾಡುತ್ತಿಲ್ಲ. ಮಹಾಮೌನಿಯಾಗಿ ಧ್ಯಾನಸ್ಥ ಸ್ಥಿತಿಯಲ್ಲಿ ಎಲ್ಲ ಆಗುಹೋಗು ಗಳನ್ನು ಗಮನಿಸುತ್ತಾರೆ, ಕೇಳುತ್ತಾರೆ’ ಎಂದು ವೇದಿಕೆಯ ಮೇಲೆಯೇ ಹೇಳುತ್ತಾರೆ. ಆಗ ತಕ್ಷಣವೇ ದೇವೇಗೌಡರು ಕಣ್ಣು ಬಿಟ್ಟು ‘ಏನಾಯಿತ್ರಿ, ಯಾಕಿಷ್ಟು ಸಲ್ಲದ ವಿಚಾರಗಳು ವೇದಿಕೆ ಮೇಲೆ ಬರುತ್ತಿವೆ. ಏಕೆ ಇದಕ್ಕೆಲ್ಲ ನಾವುತಲೆಕೆಡಿಸಿಕೊಳ್ಳಬೇಕು? ಈ ಜನರು ಯಾರನ್ನು ತಾನೇ ಅನ್ನದೇ ಬಿಟ್ಟಿದ್ದಾರೆ. ನೀವು ಕಾರ್ಯಕ್ರಮ ಮುಂದುವರಿಸಿ’ಅಂತ ಸಂಘಟಕರಿಗೆ ಸೂಚಿಸುತ್ತಾರೆ.
ಇಂಥ ಹಾಸ್ಯ ಪ್ರಸಂಗಗಳು, ಗಂಭೀರ ಚಿಂತನೆಗಳು, ಗೌಡರ ಕಾಲದ ಅಭಿವೃದ್ಧಿ ಕಾರ್ಯಗಳು ಪುಸ್ತಕದಲ್ಲಿ ದಾಖಲಾಗಿರುವುದು ವಿಶೇಷವಾಗಿದೆ.