ಪಾಕಿಸ್ತಾನದ ದಾಳಿ; ಅಫ್ಘಾನಿಸ್ತಾನಕ್ಕೆ ಭಾರತದ ಬೆಂಬಲ
Pakistani Airstrikes: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ವಾಯು ದಾಳಿಯನ್ನು ಭಾರತ ಭಾನುವಾರ (ಫೆಬ್ರವರಿ 22) ಖಂಡಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) ಈ ದಾಳಿಯನ್ನು ʼಪಾಕಿಸ್ತಾನವು ತನ್ನ ಆಂತರಿಕ ವೈಫಲ್ಯಗಳನ್ನು ಮುಚ್ಚಿಡಲು ಯತ್ನಿಸಿದ ಮತ್ತೊಂದು ಕೃತ್ಯʼ ಎಂದು ಬಣ್ಣಿಸಿದ್ದಾರೆ.
ಪಾಕಿಸ್ತಾನದ ವಾಯು ದಾಳಿ -
ದೆಹಲಿ, ಫೆ. 22: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ವಾಯು ದಾಳಿಯನ್ನು (Pakistani Airstrikes) ಭಾರತ ಭಾನುವಾರ (ಫೆಬ್ರವರಿ 22) ಖಂಡಿಸಿದೆ. ಪವಿತ್ರ ರಂಜಾನ್ ತಿಂಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರು ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) ಈ ದಾಳಿಯನ್ನು ʼಪಾಕಿಸ್ತಾನವು ತನ್ನ ಆಂತರಿಕ ವೈಫಲ್ಯಗಳನ್ನು ಮುಚ್ಚಿಡುವ ಮತ್ತೊಂದು ಪ್ರಯತ್ನʼ ಎಂದು ಬಣ್ಣಿಸಿದ್ದಾರೆ. ಅಫ್ಘಾನಿಸ್ತಾನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯಕ್ಕಾಗಿ ಭಾರತದ ಬೆಂಬಲವನ್ನು ಅವರು ಪುನರುಚ್ಚರಿಸಿದರು.
"ಪವಿತ್ರ ರಂಜಾನ್ ತಿಂಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರ ಸಾವುನೋವುಗಳಿಗೆ ಕಾರಣವಾದ ಅಫ್ಘಾನ್ ಭೂ ಪ್ರದೇಶದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯನ್ನು ಭಾರತ ಬಲವಾಗಿ ಖಂಡಿಸುತ್ತದೆ. ಇದು ತನ್ನ ಆಂತರಿಕ ವೈಫಲ್ಯಗಳನ್ನು ಮುಚ್ಚಿಡುವ ಪಾಕಿಸ್ತಾನದ ಮತ್ತೊಂದು ಕೃತ್ಯ. ಅಫ್ಘಾನಿಸ್ತಾನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯಕ್ಕೆ ಭಾರತ ತನ್ನ ಬೆಂಬಲವನ್ನು ಪುನರುಚ್ಚರಿಸುತ್ತದೆ" ಎಂದು ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ರಣಧೀರ್ ಜೈಸ್ವಾಲ್ ಎಕ್ಸ್ ಪೋಸ್ಟ್:
Our response to media queries about Pakistan’s airstrikes on Afghanistan ⬇️
— Randhir Jaiswal (@MEAIndia) February 22, 2026
🔗 https://t.co/gUXTbNQjVg pic.twitter.com/A6W4wxXBpV
ಪಾಕಿಸ್ತಾನದಿಂದ ದಾಳಿ
ಪಾಕಿಸ್ತಾನ ಸೇನೆಯು ನೆರೆಯ ಅಫ್ಘಾನಿಸ್ತಾನದ ಗಡಿಯಲ್ಲಿ ಶನಿವಾರ ಮಧ್ಯರಾತ್ರಿ (ಫೆಬ್ರವರಿ 21) ರಾತ್ರಿ ಹಲವು ವಾಯು ದಾಳಿ ನಡೆಸಿತು. ಜತೆಗೆ ಇದು ಉಗ್ರರ ಅಡಗು ತಾಣಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಸಮರ್ಥಿಸಿಕೊಂಡಿತ್ತು. ಈ ದಾಳಿಯಲ್ಲಿ ಮಕ್ಕಳು ಸೇರಿದಂತೆ ಹಲವು ಮಂದಿ ಮೃತಪಟ್ಟಿದ್ದಾರೆ ಎಂದು ಅಫ್ಘಾನಿಸ್ತಾನ ಸರ್ಕಾರ ವರದಿ ಮಾಡಿದೆ.
ಪಾಕಿಸ್ತಾನವು ಡುರಾಂಡ್ ರೇಖೆಯ ಉದ್ದಕ್ಕೂ ಅನೇಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಶಂಕಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (TTP) ಅಡಗುತಾಣಗಳ ಮೇಲೆ ದಾಳಿ ನಡೆಸಿದವು ಎಂದು ಸಿಎನ್‌ಎನ್-ನ್ಯೂಸ್ 18 ವರದಿ ಮಾಡಿದೆ. ಪೂರ್ವ ಮತ್ತು ಆಗ್ನೇಯ ಅಫ್ಘಾನಿಸ್ತಾನದಾದ್ಯಂತ ನಡೆದ ದಾಳಿಗಳಲ್ಲಿ ಕನಿಷ್ಠ 28 ಟಿಟಿಪಿ ಹೋರಾಟಗಾರರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ನೆರೆಯ ಅಫ್ಘಾನಿಸ್ತಾನದ ಮೇಲಿನ ವೈಮಾನಿಕ ದಾಳಿಯಲ್ಲಿ 80ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ಭದ್ರತಾ ಮೂಲವೊಂದು ಎಎಫ್‌ಪಿಗೆ ಮಾಹಿತಿ ನೀಡಿದೆ.
ಅಫ್ಘಾನ್ ಗಡಿಯಲ್ಲಿ ಪಾಕಿಸ್ತಾನ ವೈಮಾನಿಕ ದಾಳಿ, 28 ಟಿಟಿಪಿ ಸದಸ್ಯರು ಸಾವು
ಅಫ್ಘಾನಿಸ್ತಾನದ ಖಡಕ್ ಪ್ರತಿಕ್ರಿಯೆ
ಅಫ್ಘಾನಿಸ್ತಾನವು ಈ ದಾಳಿಗಳನ್ನು ತನ್ನ ಸಾರ್ವಭೌಮತ್ವ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಖಂಡಿಸಿದೆ. ದೇಶದ ಗಡಿಗಳು ಮತ್ತು ನಾಗರಿಕರನ್ನು ರಕ್ಷಿಸುವುದು ಪವಿತ್ರ ಧಾರ್ಮಿಕ ಮತ್ತು ರಾಷ್ಟ್ರೀಯ ಕರ್ತವ್ಯ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ ಮತ್ತು ನಿರಂತರ ಗಡಿಯಾಚೆಗಿನ ನಿಯಮ ಉಲ್ಲಂಘನೆಗಳ ವಿಚಾರದಲ್ಲಿ ಅಫ್ಘಾನಿಸ್ತಾನ ಮೌನವಾಗಿರುವುದಿಲ್ಲ ಎಂದು ಪ್ರತಿಪಾದಿಸಿದೆ. ಈ ದಾಳಿಗಳು ನಾಗರಿಕ ಮತ್ತು ಧಾರ್ಮಿಕ ಸ್ಥಳಗಳನ್ನು ಗುರಿಯಾಗಿರಿಸಿಕೊಂಡಿವೆ ಮತ್ತು ಇವು ಪಾಕಿಸ್ತಾನದ ಗುಪ್ತಚರ ವೈಫಲ್ಯಗಳಿಗೆ ಸಾಕ್ಷಿ ಎಂದು ಬಣ್ಣಿಸಿದೆ.
![]()
ಅಫ್ಘಾನಿಸ್ತಾನ ನಂಗರ್ಹಾರ್ ಮತ್ತು ಪಕ್ತಿಕಾದಲ್ಲಿನ ಧಾರ್ಮಿಕ ಮತ್ತು ವಸತಿ ಪ್ರದೇಶಗಳ ಮೇಲೆ ಪಾಕಿಸ್ತಾನದ ದಾಳಿ ನಡೆದಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಡಜನ್‌ಗಟ್ಟಲೆ ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ.
ಜಬಿಹುಲ್ಲಾ ಮುಜಾಹಿದ್, ಅಫ್ಘಾನಿಸ್ತಾನದ ಸರ್ಕಾರಿ ವಕ್ತಾರ