Yagati Raghu Naadig Column: ಹೀಗೊಬ್ಬ ಮಹಾನ್ ಜ್ಞಾನಿ !
ಅದೊಂದು ಹುಚ್ಚಾಸ್ಪತ್ರೆ. ಡಾ.ಪ್ರಕೋಪ ರಾವ್ ಅಲ್ಲಿನ ಮುಖ್ಯ ವೈದ್ಯರು. ತಮ್ಮ ಆಸ್ಪತ್ರೆ ಯಲ್ಲಿ ದಾಖಲಾಗಿರುವ ರೋಗಿಗಳಿಗೆ ನೀಡಲಾದ ನಿರಂತರ ಚಿಕಿತ್ಸೆಯ ನಂತರ, ಹಿಡಿದಿರುವ ಹುಚ್ಚು ಬಿಟ್ಟಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಡಾ.ಪ್ರಕೋಪ ರಾವ್ ತಮ್ಮದೇ ಆದ ವಿಭಿನ್ನ ಅಳತೆಗೋಲನ್ನು ಸಿದ್ಧಪಡಿಸಿಕೊಂಡಿದ್ದರು.


ವಿವಿಧ ವಿನೋದಾವಳಿ...
ಯಗಟಿ ರಘು ನಾಡಿಗ್
ಅದೊಂದು ಹುಚ್ಚಾಸ್ಪತ್ರೆ. ಡಾ.ಪ್ರಕೋಪ ರಾವ್ ಅಲ್ಲಿನ ಮುಖ್ಯ ವೈದ್ಯರು. ತಮ್ಮ ಆಸ್ಪತ್ರೆ ಯಲ್ಲಿ ದಾಖಲಾಗಿರುವ ರೋಗಿಗಳಿಗೆ ನೀಡಲಾದ ನಿರಂತರ ಚಿಕಿತ್ಸೆಯ ನಂತರ, ಹಿಡಿದಿ ರುವ ಹುಚ್ಚು ಬಿಟ್ಟಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಡಾ.ಪ್ರಕೋಪ ರಾವ್ ತಮ್ಮದೇ ಆದ ವಿಭಿನ್ನ ಅಳತೆಗೋಲನ್ನು ಸಿದ್ಧಪಡಿಸಿಕೊಂಡಿದ್ದರು. ಅದೆಂದರೆ, ಟ್ರೀಟ್ ಮೆಂಟ್ ಮುಗಿದ ಹುಚ್ಚರಲ್ಲಿ ಒಬ್ಬೊಬ್ಬನನ್ನೂ ಕರೆದು, ತಮ್ಮ ಕಣ್ಣು-ಮೂಗು-ಕಿವಿ ಇತ್ಯಾದಿಗಳನ್ನು ಮುಟ್ಟಿಕೊಂಡು ತೋರಿಸುತ್ತಾ, ಮಕ್ಕಳನ್ನು ಕೇಳುವ ರೀತಿಯಲ್ಲಿ, ಇದೇನ್ ಹೇಳು ನೋಡೋಣಾ?" ಅಂತ ಕೇಳುವುದು; ಅವರು ಸರಿಯಾಗಿ ಗುರುತಿಸಿ ಹೇಳಿದರೆ ಅವರ ಹುಚ್ಚು ಬಿಟ್ಟುಹೋಗಿದೆ ಎಂದೂ, ಸರಿಯಾಗಿ ಹೇಳದಿದ್ದರೆ ಹುಚ್ಚು ಇನ್ನೂ ಠಿಕಾಣಿ ಹೂಡಿದೆಯೆಂದೂ ನಿರ್ಧರಿಸುವುದು ಅವರ ವಿಧಾನವಾಗಿತ್ತು.
ಅಂದು ಡಾ.ಪ್ರಕೋಪರಾವ್ ಒಂದಷ್ಟು ರೋಗಿಗಳನ್ನು ಹೀಗೆಯೇ ‘ತಾಳೆ ನೋಡಿ’, ‘ಒರೆ ಹಚ್ಚಿ’ ಪರೀಕ್ಷಿಸಿ ತೀರ್ಮಾನ ಕೈಗೊಳ್ಳುವುದಿತ್ತು. ಸರಿ, ಅವರು ಮೊದಲನೆಯವನನ್ನು ಕರೆದರು. ತಮ್ಮ ಮೂಗು ಮುಟ್ಟಿಕೊಂಡು ತೋರಿಸಿ, “ಇದೇನು ಹೇಳು ನೋಡೋಣಾ?" ಎಂದು ಕೇಳಿದರು.
“ಕಿವಿ‘’ ಎಂದುತ್ತರಿಸಿದ ಆ ಬ್ರಹ್ಮಜ್ಞಾನಿ! (ಪ್ರಾಯಶಃ ಆ ವೈದ್ಯರ ಮೂಗು ಅಷ್ಟೊಂದು ಅಗಲವಾಗಿತ್ತು ಅನ್ಸುತ್ತೆ... ಪಾಪ ಅವನದ್ದೂ ತಪ್ಪಿಲ್ಲ ಬಿಡಿ..!). ಈ ಮಾತು ಕೇಳಿ ಹಣೆ ಚಚ್ಚಿಕೊಂಡ ಡಾ.ಪ್ರಕೋಪರಾವ್, “ಇವನಿಗಿನ್ನೂ ಹುಚ್ಚು ಬಿಟ್ಟಿಲ್ಲ; ವಾಪಸ್ ವಾರ್ಡಿಗೆ ಸೇರಿಸಿ" ಅಂತ ತಮ್ಮ ಸಹಾಯಕರಿಗೆ ಹೇಳಿದರು.
ಮತ್ತೊಬ್ಬ ಹುಚ್ಚ ಮುಂದೆ ಬಂದು ನಿಂತ. ಡಾ.ಪ್ರಕೋಪರಾವ್ ತಮ್ಮ ಮೀಸೆಯನ್ನು ಅವನಿಗೆ ತೋರಿಸಿ, “ಇದೇನು ಅಂತ ಹೇಳು ನೋಡೋಣಾ...?" ಅಂದ್ರು. ಅದಕ್ಕೆ ಆ ಮಹಾ ನುಭಾವ, “ಹೆ... ಹ್ಹೆ... ಹ್ಹೇ... ನಂಗೇನು ಅಷ್ಟೂ ಗೊತ್ತಿಲ್ವಾ? ಮೂಗಿನ ಎರಡೂ ತೂತಿ ನಿಂದ ಎರಡು ಕಂಬಳಿಹುಳಗಳು ಹೊರಗ್ಬಂದು, ಆ ಕಡೆ ಒಂದು ಈ ಕಡೆ ಪಾಚ್ಕೊಂಡಿವೆ ಎಂದು ಉತ್ತರಿಸಿದ!
ಈ ಮಾತು ಕೇಳಿ, “ಇವನನ್ನು ಸ್ಪೆಷಲ್ ವಾರ್ಡಿಗೆ ಹಾಕ್ರೀ ಬೇಗಾ" ಎಂದು ಉದ್ವೇಗ ಕ್ಕೊಳಗಾದ ನಮ್ಮ ‘ವೈದ್ಯೋನಾರಾಯಣೋ ಹರಿಃ’ ಜೋರುದನಿಯಲ್ಲಿ “ನೆಕ್ಸ್ಟ್ ನೆಕ್ಸ್ಟ್" ಎಂದರು. ಮಗದೊಬ್ಬ ರೋಗಿ ‘ಷೋಲೆ’ ಚಿತ್ರದ ಗಬ್ಬರ್‌ಸಿಂಗ್ ಸ್ಟೈಲ್‌ನಲ್ಲಿ ಬಂದು ನಿಂತ, “ಕಿತನೇ ಕ್ವೆಶ್ಚನ್ ಹೈ ರೇ?" ಎಂದು ಕೇಳುವ ಶೈಲಿಯಲ್ಲಿ! ವೈದ್ಯರು ತಮ್ಮ ತಲೆಗೂದಲನ್ನು ಅವನಿಗೆ ತೋರಿಸಿ, “ಇದೇನು ಹೇಳು ನೋಡೋಣಾ?" ಎಂದು ಕೇಳಿದರು. ಅದಕ್ಕೆ ಆ ಹುಚ್ಚ ಗಬ್ಬರ್‌ಸಿಂಗ್ ಶೈಲಿಯಲ್ಲೇ ಗಹಗಹಿಸಿ ನಗುತ್ತಾ, “ನಾನು ಸಾವಿರ ಸಲ ಬಡ್ಕೊಂಡೆ, ಜಾಸ್ತಿ ತಲೆಬಿಸಿ ಮಾಡ್ಕೋಬೇಡೀ ಡಾಕ್ಟರೇ ಅಂತ.
ಕೇಳಿದ್ರಾ ನನ್ ಮಾತೂ? ಈಗ ನೋಡಿ, ನೀವು ಹೊಸೆದು ಹೊಸೆದು ತಲೆಮೇಲೆ ಹಾಕ್ಕೊಂ ಡಿದ್ದ ‘ಒತ್ತುಶಾವಿಗೆ’ ಎಲ್ಲಾ ಹ್ಯಾಗೆ ಕರ್ರಗೆ ಸೀದುಹೋಗಿದೆ ಅಂತ.." ಎಂದು ಹೇಳುತ್ತಾ ತನ್ನ ಸಾಮಾಜಿಕ ಕಳಕಳಿಯನ್ನೂ, ವೈದ್ಯರೆಡೆಗಿನ ತನ್ನ ಭ್ರಾತೃಪ್ರೇಮವನ್ನೂ ಒಟ್ಟೊ ಟ್ಟಿಗೇ ಪ್ರದರ್ಶಿಸಿದ. ಒತ್ತುಶಾವಿಗೆಗೆ ಹೋಲಿಸಿದ್ದರಿಂದ ವೈದ್ಯರ ತಲೆಗೂದಲುಗಳೆಲ್ಲಾ ‘ರೋಮಾಂಚನ’ಗೊಂಡು ನೆಟ್ಟಗೆ ನಿಂತವು.
“ಮೊದ್ಲು ಇವನನ್ನ ಇಂಟೆನ್ಸಿವ್ ಕೇರ್ ಯುನಿಟ್‌ಗೆ ದಬ್ರೀ..." ಅಂತ ಎದೆ ಹಿಡಿದು ಕೊಂಡು ಗೋಡೆಗೆ ಒರಗಿಕೊಂಡರು ಡಾ.ಪ್ರಕೋಪರಾವ್! ಈ ಪರಿಪಾಠ ಹೀಗೇ ಮುಂದು ವರಿಯಿತು. ನಂತರ ಡಾ. ಪ್ರಕೋಪರಾವ್, “ಇನ್ನೂ ಎಷ್ಟು ಜನ ಇದ್ದಾರ್ರೀ?" ಎಂದು ಕೇಳಿದರು ತಮ್ಮ ಬಿ.ಪಿ. ಚೆಕ್ ಮಾಡುತ್ತಿದ್ದ ಸಹಾಯಕ ವೈದ್ಯ ಡಾ.ಆವೇಶರಾವ್ ಅವ ರನ್ನು. “ಇನ್ನು ಒಬ್ನೇ ಒಬ್ಬ ಉಳ್ಕಂಡಿದ್ದಾನೆ ಸಾರ್..." ಎಂದರು ಡಾ. ಆವೇಶರಾವ್. ಸರಿ, ಅವನನ್ನೂ ಕರೆಯಲಾಯಿತು. ಎಂದಿನ ವರಸೆ ಶುರುಮಾಡಿಕೊಂಡ ಡಾ. ಪ್ರಕೋಪರಾವ್ ತಮ್ಮ ಮೂಗನ್ನು ಮುಟ್ಟಿಕೊಂಡು ಅವನನ್ನುದ್ದೇಶಿಸಿ, “ಇದೇನು?" ಅಂತ ಕೇಳಿದ್ರು. “ಮೂಗು" ಅಂದ ಆ ಹುಚ್ಚ. ಗೆಲುವಾದ ವೈದ್ಯರು ತಮ್ಮ ಕಿವಿಯನ್ನು ಮುಟ್ಟಿಕೊಂಡು, “ಇದೇನು ಅಂತ ಹೇಳು ನೋಡೋಣಾ?" ಅಂತ ಕೇಳಿದ್ದಕ್ಕೆ ಆತ “ಕಿವಿ" ಅಂತ ಉತ್ತರಿಸಿದ.
ಮತ್ತೂ ಗೆಲುವಾಗಿ ಬಿ.ಪಿ.ಯನ್ನು ನಾರ್ಮಲ್‌ಗೆ ತಂದುಕೊಂಡ ಡಾ. ಪ್ರಕೋಪರಾವ್ ರಿಪೀಟೆಡ್ಡಾಗಿ ಹೀಗೆ ಒಂದೊಂದು ಅಂಗವನ್ನೂ ಮುಟ್ಟಿಕೊಂಡು ತೋರಿಸುತ್ತಾ ಕೇಳು ತ್ತಲೇ ಹೋದರು. ಆತನೂ ಅಷ್ಟೇ ವೇಗವಾಗಿ ಉತ್ತರಿಸುತ್ತಲೇ ಹೋದ. ಡಾ. ಪ್ರಕೋಪ ರಾವ್ ಗೆ ತಡೆಯಲಾರದಷ್ಟು ಖುಷಿಯಾಯ್ತು. “ಅಬ್ಬಾ.... ಇಷ್ಟು ದಿನದ ತಪಸ್ಸಿಗೆ ಇವತ್ತು ಫಲ ಸಿಕ್ಕಿದಂತಾಯ್ತು..." ಎಂದು ಹೇಳಿಕೊಂಡು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು, ಎಲ್ಲದಕ್ಕೂ ಸರಿಯಾದ ಉತ್ತರ ಹೇಳಿದ ಆ ಕೊನೆಯ ಹುಚ್ಚನ ಬಳಿಗೆ ಬಂದು ಕೇಳಿದರು: “ಅಲ್ಲಾ ಮಾರಾಯಾ... ನಾನು ತೋರಿಸಿದ ನನ್ನ ಪ್ರತಿಯೊಂದು ಅಂಗವನ್ನೂ ಎಷ್ಟು ಕರೆಕ್ಟಾಗಿ ಗುರುತಿಸಿ ಹೇಳಿದೆ; ಇದು ನಿನಗೆ ಹೇಗೆ ಸಾಧ್ಯವಾಯಿತು?"ವೈದ್ಯರ ಈ ಮೆಚ್ಚುಗೆ ಮಾತನ್ನು ಕೇಳಿದ್ದೇ ಕೇಳಿದ್ದು, ತನ್ನ ಕಾಲಿನ ಮೇಲೆ ಕಾಲು ಹಾಕಿಕೊಂಡು ಕೂತ ಆ ಹುಚ್ಚ ತನ್ನ ಎಡಗೈಯನ್ನು ಸೊಂಟದ ಮೇಲಿಟ್ಟುಕೊಂಡು, ಬಲಗೈನ ತೋರುಬೆರಳಿನಲ್ಲಿ ತನ್ನ ತಲೆಯನ್ನು ತೋರಿಸುತ್ತಾ ಹೇಳಿದ: “ಹಾಗೆ ಸರಿಯುತ್ತರ ಹೇಳೋದು ಅಷ್ಟು ಸುಲಭ ವಲ್ಲಾರೀ... ಅದಕ್ಕೂ ಬೇಕ್ರೀ ಕಿಡ್ನೀ..!!"
ಈ ಮಾತು ಕೇಳಿ ಕುಸಿದು ಬಿದ್ದ ಡಾ. ಪ್ರಕೋಪರಾವ್‌ರವರನ್ನು ಎಮರ್ಜೆನ್ಸಿ ವಾರ್ಡಿಗೆ ಸೇರಿಸಲಾಯಿತು...!