ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Jayashree Kalkundri Column: ಕೋಪವೆಂಬ ಪರಿತಾಪ

ಎಷ್ಟೋ ಬಾರಿ ಇವರು, ತಮ್ಮ ಕೋಪಕ್ಕೆ ಕಾರಣರಾದವರ ಮೇಲೆ ಮನಸ್ಸಿನಲ್ಲಿಯೇ ರೇಗುತ್ತಾ ತೃಪ್ತಿಯನ್ನನುಭವಿಸುತ್ತಿರುತ್ತಾರೆ. ಒಂದು ಹಂತದಲ್ಲಿ ಇವರ ಸಹನೆಯ ಕಟ್ಟೆಯೊಡೆದಾಗ ಇದ್ದಕ್ಕಿದ್ದಂತೆ ಆಸ್ಪೋಟಿಸುತ್ತಾರೆ. ಇನ್ನು ಕೆಲವರು, ದೂರ್ವಾಸ ಮುನಿಯಂತೆ, ಯಾವುದೇ ಚಿಕ್ಕ ಕಾರಣವಾದರೂ ಸರಿ, ಆಸ್ಪೋಟಿಸಿ ಬಿಡುತ್ತಾರೆ

Jayashree Kalkundri Column: ಕೋಪವೆಂಬ ಪರಿತಾಪ

ಜಯಶ್ರೀ ಕಾಲ್ಕುಂದ್ರಿ ಬೆಂಗಳೂರು

ಸಿಟ್ಟು ಅಥವಾ ಕೋಪ ಮಾಡಿಕೊಳ್ಳುವುದು ಮನುಷ್ಯನ ಹುಟ್ಟುಗುಣ. ಇದಕ್ಕೆ ವಯಸ್ಸಿ ನ ನಿಬಂಧವಿಲ್ಲ. ಲಿಂಗ ತಾರತಮ್ಯವಿಲ್ಲ. ಚಿಕ್ಕ ಮಗುವಿನಿಂದ ಹಿಡಿದು, ವಯೋವೃದ್ಧ ರವರೆಗೂ ಪ್ರತಿಯೊಬ್ಬರೂ ಒಂದಲ್ಲ ಒಂದು ಸಂದರ್ಭದಲ್ಲಿ ಸಿಟ್ಟಿಗೆ ಶರಣಾಗೇ ಇರುತ್ತಾರೆ. ಇನ್ನು ಕಡಿಮೆ ಮಾತನಾಡುವವರು, ತಮ್ಮ ಸಮಸ್ಯೆಗಳನ್ನು, ಅಸಮಾಧಾನಗಳನ್ನು ಹಂಚಿಕೊಳ್ಳಬಹುದಾದ ಸಂಗಾತಿ ಅಥವಾ ಸ್ನೇಹಿತರಿಲ್ಲದೆ, ಒಳಗೆ ಕುದಿಯುತ್ತಿರುತ್ತಾರೆ. ಎಷ್ಟೋ ಬಾರಿ ಇವರು, ತಮ್ಮ ಕೋಪಕ್ಕೆ ಕಾರಣರಾದವರ ಮೇಲೆ ಮನಸ್ಸಿನಲ್ಲಿಯೇ ರೇಗುತ್ತಾ ತೃಪ್ತಿಯನ್ನನುಭವಿಸುತ್ತಿರುತ್ತಾರೆ. ಒಂದು ಹಂತದಲ್ಲಿ ಇವರ ಸಹನೆಯ ಕಟ್ಟೆ ಯೊಡೆದಾಗ ಇದ್ದಕ್ಕಿದ್ದಂತೆ ಆಸ್ಪೋಟಿಸುತ್ತಾರೆ. ಇನ್ನು ಕೆಲವರು, ದೂರ್ವಾಸ ಮುನಿ ಯಂತೆ, ಯಾವುದೇ ಚಿಕ್ಕ ಕಾರಣವಾದರೂ ಸರಿ, ಆಸ್ಪೋಟಿಸಿ ಬಿಡುತ್ತಾರೆ.

ಇದನ್ನೂ ಓದಿ: Harish Kera Column: ನಗರದ ಚೈತ್ರಕ್ಕೊಂದು ಕುಸುಮಾಂಜಲಿ

ಇಷ್ಟಕ್ಕೂ ಕೋಪವೆಂದರೇನು? ಹತಾಶೆ, ನೋವು, ತಪ್ಪು ಗ್ರಹಿಕೆ, ಮರೀಚಿಕೆಯಾದ ಯಶಸ್ಸು, ಇತರರು ನೀಡಿದ ಗಾಯಕ್ಕೆ ಪ್ರತಿಕ್ರಿಯೆಯಾಗಿ ಉತ್ತರಿಸಲಾಗದೆ ಅಸಮಾಧಾ ನಗಳು ಕಾಡಿದಾಗ, ನಮ್ಮನ್ನು ನಾವು ನಮ್ಮಿಂದ ಪ್ರತ್ಯೇಕಿಸಿಕೊಂಡು ಹೊರಹೊಮ್ಮುವ ಪ್ರಕ್ರಿಯೆಯೇ ಕೋಪ ವೆನ್ನಲಾಗಿದೆ.

ಕೋಪವನ್ನು ಪ್ರಚೋದಿಸುವ ಅಂಶಗಳು

ನಾವು ಬಯಸುವಂತಹ ಬದುಕು ನಮ್ಮದಾಗಲು ಅಸಾಧ್ಯವೆನಿಸಿದಾಗ ನಮಗೆ ಕೋಪ ಬರುತ್ತದೆ. ಬಾಲ್ಯದಲ್ಲಿ, ತಂದೆ-ತಾಯಿಗಳು ಶತ್ರುಗಳಂತೆ ತೋರುತ್ತಾರೆ. ಅವರ ಬಿಗಿಹಿಡಿತ ಮತ್ತು ಹಿತೋಪದೇಶಗಳು ಮರುಪ್ರಸಾರವಾಗುತ್ತಿರುವ ಧಾರಾವಾಹಿಗಳೆನಿಸಿ, ಕೋಪ ಬರುತ್ತದೆ.

ಆಧುನಿಕ ಜೀವನ ಶೈಲಿಯ ಪರಿಣಾಮವಾಗಿ ಹೆಚ್ಚುತ್ತಿರುವ ಕೆಲಸದ ಒತ್ತಡ, ಸಮಯದ ಅಭಾವದಿಂದ ನಿರ್ಧಾರಿತ ಕೆಲಸಗಳನ್ನು, ನಿಗದಿತ ಸಮಯದಲ್ಲಿ ಪೂರೈಸಲಾಗದ ಅಸಹಾ ಯಕತೆ, ಕುಟುಂಬದ ಸದಸ್ಯರಿಂದ ಸಿಗಲಾರದ ಸಹಕಾರಗಳು ಸಹ ಕೋಪಕ್ಕೆ ಕಾರಣ ವಾಗುತ್ತವೆ. ನಾಲ್ಕು ಜನರ ಎದುರಿಗೆ ಆವಮಾನವಾದರೆ ಕೋಪ ಬರುತ್ತದೆ.

ಮೇಲಧಿಕಾರಿಗಳಾಗಿದ್ದರೆ, ತಮ್ಮ ಆದೇಶಕ್ಕಗನುಗುಣವಾಗಿ ಕೆಲಸ ಮಾಡದ ಸಿಬ್ಬಂದಿಯ ಮೇಲೆ ಕೋಪ ಬರುತ್ತದೆ. ಮೇಲಧಿಕಾರಿಗಳ ನಿರಂತರ ಕಿರಿಕಿರಿಯಿಂದ ಕಚೇರಿಯಲ್ಲಿ ಕೆಲಸ ಮಾಡುವ ಇತರ ನೌಕರರಿಗೆ ಕೋಪ ಬರುತ್ತದೆ.

ಹೆಚ್ಚಿನ ಅರ್ಹತೆಯಿದ್ದರೂ ತನಗೆ ಸಿಗಬೇಕಾದ ಪದೋನ್ನತಿ ಬೇರೆಯವರ ಪಾಲಾದಾಗ, ಏನೂ ಮಾಡಲಾಗುತ್ತಿಲ್ಲವೆಂಬ ಅಸಹಾಯಕತೆ ಕೋಪಕ್ಕೆ ಕಾರಣವಾಗುತ್ತದೆ.

ಮಕ್ಕಳು ಮಾತು ಕೇಳದಿದ್ದರೆ, ಅವರು ಕಲಿಕೆಯಲ್ಲಿ ಹಿಂದುಳಿದಿದ್ದರೆ ಮತ್ತು ಅವರ ನಡವಳಿಕೆ ಸಮಾಧಾನಕರವಾಗಿರದಿದ್ದರೆ ಪೋಷಕರು ಕೋಪಗೊಳ್ಳುತ್ತಾರೆ.

ಇನ್ನು ವಯಸ್ಸಾದವರು, ಮಕ್ಕಳು ಬೆಳೆದು ದೊಡ್ಡವರಾಗಿ ಸ್ವಾವಲಂಬಿಗಳಾಗಿದ್ದರೂ ಕುಟುಂಬದ ಸದಸ್ಯರು ತಮ್ಮ ಮಾತಿಗೆ ಗೌರವ ನೀಡುತ್ತಿಲ್ಲವೆಂಬ ವೇದನೆಯಿಂದ ಬಳಲು ತ್ತಾರೆ. ಅವರಿಗೆ, ಮನೆಯ ವಿಷಯಗಳಲ್ಲಿ ತನ್ನ ಅಭಿಪ್ರಾಯಕ್ಕೆ ಮನ್ನಣೆಯಿಲ್ಲವೆಂಬ ನೇತ್ಯಾತ್ಮಕ ಭಾವ ಮೂಡಿರುತ್ತದೆ. ಇಷ್ಟು ಮಾತ್ರವಲ್ಲ, ತನ್ನ ಬಗ್ಗೆ ಕುಟುಂಬದ ಸದಸ್ಯರು ಅಸಡ್ಡೆ ತೋರುತ್ತಿದ್ದಾರೆಂದು ಕಲ್ಪಿಸಿಕೊಂಡು, ಚಿಕ್ಕ ಚಿಕ್ಕ ವಿಷಯಗಳಿಗೂ ಕೋಪಗೊಳ್ಳುತ್ತಾರೆ.

ವಿವೇಚನೆಯಿಲ್ಲದೆ ಕೋಪಗೊಂಡರೆ, ರಿಪೇರಿ ಮಾಡಲಾಗದಂತಹ ಅನಾಹುತಗಳು ಘಟಿಸಿ ಬಿಡುತ್ತವೆ. ಇನ್ನೊಬ್ಬರ ಮೇಲೆ ನಾವು ಕೋಪಗೊಳ್ಳುವಾಗ ನಾವು ತಾಳ್ಮೆಯನ್ನು ಕಳೆದು ಕೊಳ್ಳುತ್ತೇವೆ. ಕೋಪವು ವಾಗ್ವಾದಗಳಿಗೆ, ಮತ್ತು ಕಾನೂನು ಸಮಸ್ಯೆಗಳಿಗೆ ಕಾರಣವಾಗ ಬಹುದು. ಶೀಘ್ರ ಕೋಪಿಗಳೆಂದು ಬಿರುದಾಂಕಿ ತವಾಗಿರುವ ಕೋಪಾವಿಷ್ಟರ ಕೆಂಪಾದ ಮುಖ, ನಡುಗುವ ಶರೀರ, ಕಣ್ಣುಗಳಲ್ಲಿ ಆಕ್ರೋಶವನ್ನು ನೋಡಿದರೆ, ಅವರ ಎದುರಿನಲ್ಲಿ ನಿಲ್ಲಲು ಮತ್ತು ಅವರ ಉದ್ವೇಗದ ಮಾತುಗಳಿಗೆ ಉತ್ತರಿಸಲು ಭಯವೆನಿಸುತ್ತದೆ.

ಕೋಪದಿಂದಾಡುವ ಬಿರುನುಡಿಗಳಿಂದ ಸಂಬಂಧಗಳಲ್ಲಿ ಬಿರುಕು ಮೂಡಿ, ಒಂಟಿ ಯಾಗುವ ಸಾಧ್ಯತೆಯಿದೆ. ಕೋಪದ ಪರಿಣಾಮವಾಗಿ ಕೆಲಸದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು, ದೀರ್ಘಕಾಲದ ಕೋಪವು ಅಧಿಕ ರಕ್ತದೊತ್ತಡ, ಹೃದಯ, ರಕ್ತನಾಳದ ಕಾಯಿಲೆ ಮತ್ತು ಜೀರ್ಣಕಾರಿ ಸಮಸ್ಯೆಗಳಂತಹ ದೈಹಿಕ ಆರೋಗ್ಯ ಸಮಸ್ಯೆ ಗಳಿಗೆ ಕಾರಣವಾಗಬಹುದು. ರೋಗ ನಿರೋಧಕ ಶಕ್ತಿ ಕುಂದುವ ಸಾಧ್ಯತೆಯಿದೆ. ಕೋಪವು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು, ಸದಾ ಕೋಪಗೊಳ್ಳುವವರು ಆತಂಕ, ಖಿನ್ನತೆಗೆ ಜಾರುವ ಸಂಭವವಿದೆ.

ನಿಯಂತ್ರಣ ಹೇಗೆ?: ತಾಳ್ಮೆಯಿರುವವರು ಕೋಪ ಬಂದಾಗ ಒಂದು ಕ್ಷಣ ನಿಂತು, ತಾವು ಕೋಪಗೊಂಡಿರುವುದಕ್ಕಾಗಿ ಕಾರಣವನ್ನು ಹುಡುಕಲು ಯತ್ನಿಸುತ್ತಾರೆ. ಅಷ್ಟು ಹೊತ್ತಿಗೆ ಕೋಪ ಅರ್ಧಶಮನವಾಗಿರುತ್ತದೆ. ಕೋಪ ಬಂದಾಗ, ಸಾಧ್ಯವಾದಷ್ಟು ಮನಸ್ಸನ್ನು ಶಾಂತ ವಾಗಿಟ್ಟುಕೊಳ್ಳಲು ಪ್ರಯತ್ನಿಸಿ, ಒಂದರಿಂದ ಹತ್ತರವರೆಗೆ ಎಣಿಸಲು ಪ್ರಾರಂಭಿಸಿ, ಆಳವಾಗಿ ಉಸಿರಾಡಿದರೆ, ಕೋಪವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ.

ಕೋಪ ಬಂದಾಗ, ಸಾಧ್ಯವಾದ ಮಟ್ಟಿಗೆ ಅನುಚಿತ ಮಾತುಗಳನ್ನಾಡದಂತೆ ಜಾಗೃತೆ ವಹಿಸ ಬೇಕು. ಕೋಪಕ್ಕೆ ಕಾರಣವಾದ ಸನ್ನಿವೇಶಗಳು ಪುನರಾವರ್ತನೆಯಾಗದಂತೆ ಪ್ರಯತ್ನಿಸ ಬೇಕು. ಅತಿಯಾದ ಕೋಪವನ್ನು ನಿಗ್ರಹಿಸಲು ಅಗತ್ಯವೆನಿಸಿದಲ್ಲಿ ಆಪ್ತ ಸಮಾ ಲೋಚಕರ ನೆರವನ್ನು ಪಡೆಯಬಹುದು. ಕೋಪವೆಂಬ ಶತ್ರು ನಮ್ಮೊಳಗೆ ಅಡಕ ವಾಗಿದ್ದಾನೆ. ಕೋಪ ಗೊಂಡಾಗ ವಿವೇಕ ನಷ್ಟವಾಗಿ ಸರಿ ಮತ್ತು ತಪ್ಪುಗಳ ಮಧ್ಯೆ ವ್ಯತ್ಯಾಸ ತಿಳಿಯಲು ಸಾಧ್ಯ ವಾಗದು. ಆಕ್ರಮಣಕಾರಿ ಕೋಪವಿರುವವರು, ನೇರವಾಗಿ ಬಿರು ನುಡಿಗಳಾಡಿ ಇತರರಿಗೆ ಶಾಶ್ವತ ನೋವು ನೀಡುವುದರಿಂದ, ಇವರ ಕೋಪಕ್ಕೆ ಸಿಲುಕಿದ ವ್ಯಕ್ತಿಗಳ ಮನಸ್ಸು ಕಹಿಯಾಗಿ ಬಿಡುತ್ತದೆ. ಇನ್ನೂ ಕೆಲವರು, ತಮ್ಮ ಕೋಪವನ್ನು ನಿಯಂತ್ರಿಸಿಕೊಂಡು, ಸೂಕ್ತ ಸಮಯ ಬಂದಾಗ ಪ್ರಕಟಿಸುತ್ತಾರೆ.

ತಾಳ್ಮೆಯುಳ್ಳವವರು, ಕೋಪಗೊಂಡಿದ್ದರೂ ಆಕ್ರಮಣಕಾರಿ ಮನೋಭಾವ ತೋರದೆ, ತಮ್ಮ ಕೋಪವನ್ನು ನಿಯಂತ್ರಿಸಿಕೊಂಡು ಹಿತನುಡಿಗಳಿಂದ ಸಮಸ್ಯೆಯನ್ನು ಬಗೆಹರಿಸಿ ಕೊಳ್ಳುತ್ತಾರೆ. ಕೋಪ ಬಿಟ್ಟು ಚುಕ್ಕಿಗಳೆಷ್ಟು ಎಣಿಸಿ!

ನೋಟ್ ಬುಕ್ ತಂತ್ರ

ಕೋಪ ಬರಲು ಕಾರಣವಾದ ಅಹಿತಕರ ಸನ್ನಿವೇಶಗಳನ್ನು ಗುರುತಿಸಿ, ಅದಕ್ಕುತ್ತರವಾಗಿ ನಾವು ತೋರಿದ ಪ್ರತಿಕ್ರಿಯೆಯನ್ನು ಒಂದು ನೋಟ್‌ಬುಕ್ ಅಥವಾ ಪುಸ್ತಕದಲ್ಲಿ ದಾಖಲಿಸ ಬೇಕು. ಎಷ್ಟೋ ಬಾರಿ, ತಪ್ಪು ನಮ್ಮ ಕಡೆಯಿಂದಲೂ ನಡೆದಿರಲು ಸಾಧ್ಯ. ತಪ್ಪು ನಮ್ಮ ದಾಗಿದ್ದರೆ, ಒಪ್ಪಿಕೊಂಡು ಕ್ಷಮೆ ಯಾಚಿಸಿದರೆ ನಮ್ಮ ಮನಸ್ಸಿಗೆ ಸಮಾಧಾನವಾಗುವುದರ ಜೊತೆಗೆ, ಬಾಂಧವ್ಯದಲ್ಲಿ ಬಿರುಕು ಮೂಡುವುದು ತಪ್ಪುತ್ತದೆ. ಈ ರೀತಿ ಟಿಪ್ಪಣಿಗಳನ್ನು ಒಳಗೊಂಡ ನೋಟ್‌ಬುಕ್‌ನ್ನು ಕೆಲವು ತಿಂಗಳಿಗೊಮ್ಮೆ ತಿರುವಿ ಹಾಕಿದಾಗ, ಆ ಕ್ಷಣದ ಕೋಪವು ಎಷ್ಟು ಕ್ಷುಲ್ಲಕ ಎಂದು ನಂತರ ಅರಿವಾಗುತ್ತದೆ. ಇದು, ನಮ್ಮನ್ನು ತಿದ್ದಿಕೊಳ್ಳಲು ಸಹಕಾರಿ.