Roopa Gururaj Column: ಚಿಂತೆಯ ಚೀಲ
ಕೆಲಸ ಮುಗಿದ ಹಾಗೆ ಇಡೀ ದಿನದ ಚಿಂತೆಗಳನ್ನು ಆ ಚೀಲದಲ್ಲಿ ತುಂಬಿಸುತ್ತೇನೆ. ಮನೆಗೆ ಬರುವಾಗ ಚಿಂತೆಯ ಭಾರದಿಂದ ತುಂಬಿರುವ ಚೀಲವನ್ನು ಮರಕ್ಕೆ ನೇತುಹಾಕಿ ಮನೆಯೊಳಗೆ ಸಂತೋಷ ದಿಂದ ಹೋಗುತ್ತೇನೆ. ಹೆಂಡತಿ-ಮಕ್ಕಳೊಂದಿಗೆ ನಗುನಗುತ್ತಾ ಕಳೆಯುತ್ತೇನೆ. ರಾತ್ರಿ ಮಲಗಿ ಬೆಳಗ್ಗೆ ಹೊರಡು ವಾಗ ಕೈಚೀಲ ತೆಗೆದುಕೊಂಡರೆ ಚಿಂತೆಗಳೆಲ್ಲ ಕರಗಿ ಚೀಲ ಹಗುರವಾಗಿರುತ್ತದೆ

-

ಒಂದೊಳ್ಳೆ ಮಾತು
ಆತನದು ಚಿಕ್ಕ ಕುಟುಂಬ. ಬಡ ಕುಟುಂಬವಾದರೂ ಮನೆಯವರೆಲ್ಲರೂ ಯಾವಾಗಲೂ ಸಂತೋಷದಿಂದ ಇರುತ್ತಿದ್ದರು. ಆತ ನಿತ್ಯವೂ ಪಟ್ಟಣಕ್ಕೆ ಕೆಲಸಕ್ಕೆ ಹೋಗುತ್ತಿದ್ದ. ಭಾರಿ ಸಂಬಳದ ಕೆಲಸವೇನೂ ಅಲ್ಲ. ಅಂದೇ ದುಡಿದು ಬಂದ ಹಣದಿಂದ ಅವತ್ತಿಂದವತ್ತಿಗೆ ಮನೆಗೆ ಬೇಕಾದುದನ್ನು ತರಬೇಕು. ಆತ ಒಂದು ದಿನವೂ ಅತೃಪ್ತಿ, ಸಿಟ್ಟು, ಬೇಸರ ಮಾಡಿಕೊಂಡಿರಲಿಲ್ಲ.
ಆತ ಕೆಲಸಕ್ಕೆ ಹೋಗುವಾಗ ಹೆಗಲಲ್ಲಿ ಒಂದು ಕೈಚೀಲವನ್ನು ಹಾಕಿಕೊಂಡು ಹೋಗುತ್ತಿದ್ದ. ಕೆಲಸ ಮುಗಿಸಿ ಸಂಜೆ ಮನೆಗೆ ಬರುವಾಗ ಮನೆಯ ಮುಂದಿರುವ ಒಂದು ಮರಕ್ಕೆ ಅದನ್ನು ನೇತು ಹಾಕಿ ಮನೆಯೊಳಗೆ ಬರುತ್ತಿದ್ದ. ಮರುದಿನ ಮನೆಯಿಂದ ಕೆಲಸಕ್ಕೆ ಹೋಗುವಾಗ ನೇತು ಹಾಕಿದ್ದ ಕೈಚೀಲವನ್ನು ಮತ್ತೆ ಹೆಗಲಿಗೆ ಹಾಕಿಕೊಂಡು ಹೋಗುತ್ತಿದ್ದ. ಆ ಚೀಲವನ್ನು ಯಾವತ್ತೂ ಮನೆಯೊಳಗೆ ತರುತ್ತಿರಲಿಲ್ಲ.
ಇದನ್ನೆಲ್ಲ ಬಹಳ ದಿನಗಳಿಂದ ಗಮನಿಸುತ್ತಿದ್ದ ನೆರೆಮನೆಯ ವ್ಯಕ್ತಿ ಆತನ ಹತ್ತಿರ ಬಂದು, “ನೀನು ನಿತ್ಯವೂ ಆ ಖಾಲಿಚೀಲವನ್ನು ಹೊರಗೆ ಹೋಗುವಾಗ ತೆಗೆದುಕೊಂಡು ಹೋಗಿ ಬಂದ ಮೇಲೆ ಅದೇ ಮರಕ್ಕೆ ನೇತು ಹಾಕುತ್ತಿ. ಮನೆಯೊಳಗೆ ಏಕೆ ತೆಗೆದುಕೊಂಡು ಹೋಗುವುದಿಲ್ಲ?" ಎಂದು ಕೇಳಿದ. ಅದಕ್ಕಾತ “ಹೌದು, ಅದು ಹೊರಗಿನ ಚಿಂತೆಗಳನ್ನು ಮನೆಯೊಳಗೆ ತೆಗೆದುಕೊಂಡು ಹೋಗಬಾರ ದೆಂಬ ಉದ್ದೇಶಕ್ಕೆ. ನಾನು ಕೆಲಸಕ್ಕೆ ಹೋಗುವಾಗ ಖಾಲಿಚೀಲವನ್ನು ತೆಗೆದುಕೊಂಡು ಹೋಗುತ್ತೇನೆ.
ಇದನ್ನೂ ಓದಿ: Roopa Gururaj Column: ತಂದೆ-ತಾಯಿಯರ ಸೇವೆಗಿಂತ ಮಿಗಿಲಾದ ಪುಣ್ಯ ಯಾವುದೂ ಇಲ್ಲ
ಕೆಲಸ ಮುಗಿದ ಹಾಗೆ ಇಡೀ ದಿನದ ಚಿಂತೆಗಳನ್ನು ಆ ಚೀಲದಲ್ಲಿ ತುಂಬಿಸುತ್ತೇನೆ. ಮನೆಗೆ ಬರುವಾಗ ಚಿಂತೆಯ ಭಾರದಿಂದ ತುಂಬಿರುವ ಚೀಲವನ್ನು ಮರಕ್ಕೆ ನೇತುಹಾಕಿ ಮನೆಯೊಳಗೆ ಸಂತೋಷ ದಿಂದ ಹೋಗುತ್ತೇನೆ. ಹೆಂಡತಿ-ಮಕ್ಕಳೊಂದಿಗೆ ನಗುನಗುತ್ತಾ ಕಳೆಯುತ್ತೇನೆ. ರಾತ್ರಿ ಮಲಗಿ ಬೆಳಗ್ಗೆ ಹೊರಡುವಾಗ ಕೈಚೀಲ ತೆಗೆದುಕೊಂಡರೆ ಚಿಂತೆಗಳೆಲ್ಲ ಕರಗಿ ಚೀಲ ಹಗುರವಾಗಿರುತ್ತದೆ" ಎಂದನು.
ಮಾತು ಮುಂದುವರಿಸಿದ ಆತ, “ನನಗೆ ಹೆಚ್ಚಿನ ಆದಾಯ ಇಲ್ಲದಿರಬಹುದು, ಆದರೆ ನನ್ನ ಹೆಂಡತಿ ಮಕ್ಕಳಿಗೆ ನನ್ನ ಚಿಂತೆ ಇಲ್ಲದ ನಗುಮುಖವೇ ನಾನು ಕೊಡುವ ಉಡುಗೊರೆ. ಸದ್ಯಕ್ಕೆ ನನ್ನ ಕೈಲಿ ಕೊಡಲಾಗುವುದು ಇದೊಂದೇ. ಬೆಳೆದು ದೊಡ್ಡವರಾದ ಮೇಲೆ ನನ್ನ ಮಕ್ಕಳು ಸದಾ ನಾವೆಷ್ಟು ಸಂತೋಷವಾಗಿದ್ದೆವು ಎಂದು ನೆನಪಿಸಿಕೊಳ್ಳುತ್ತಾರೆ.
ನಮ್ಮ ಮನೆಯಲ್ಲಿ ಏನಿತ್ತು ಏನಿಲ್ಲ ಎನ್ನುವುದು ಎಂದಿಗೂ ಅವರಿಗೆ ನೆನಪಾಗುವುದಿಲ್ಲ. ನನ್ನ ಹೆಂಡತಿಗೂ ಎಲ್ಲಾ ಕಷ್ಟಗಳ ನಡುವೆ ಕೂಡ ನಾವು ಸಂತೋಷದಿಂದ ಹೊಂದಿಕೊಂಡು ಬದುಕಿ ದೆವು ಎನ್ನುವ ಸಮಾಧಾನ ಇರುತ್ತದೆ. ಸಾರ್ಥಕ ಬದುಕಿಗೆ ಬೇಕಾಗಿರುವುದು ಇಷ್ಟೇ ಅಲ್ಲವೇ?" ಎಂದು ಕೇಳಿದ. ನೆರೆಮನೆಯವನು ಇವನ ಜಾಣತನದ ಮಾತುಗಳಿಗೆ ತಲೆದೂಗುತ್ತಾ, “ನಿಜ ಒಂದೊಳ್ಳೆಯ ಬದುಕಿಗೆ ಬೇಕಾಗಿರುವುದು ಹಣ, ಪ್ರಾಪಂಚಿಕ ವಸ್ತುಗಳಲ್ಲ. ಎಲ್ಲಕ್ಕಿಂತ ಮುಖ್ಯ ವಾದದ್ದು ನೆಮ್ಮದಿ, ಸಂತೋಷ ಮತ್ತು ಮನೆಯವರೆಲ್ಲ ಜತೆಯಾಗಿ ಕಳೆದ ಕ್ಷಣಗಳು" ಎಂದನು.
ಒಮ್ಮೆ ಯೋಚಿಸಿ ನೋಡಿ- ಬಾಲ್ಯದಲ್ಲಿ ನಮ್ಮ ತಂದೆ ತಂದುಕೊಟ್ಟ ಚಿಕ್ಕಪುಟ್ಟ ಉಡುಗೊರೆಗಳು ನಮ್ಮಲ್ಲಿ ಎಷ್ಟು ಸಂಭ್ರಮವನ್ನ ತುಂಬಿದ್ದವು. ನಾವು ಅದರ ಬೆಲೆಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರ ಲಿಲ್ಲ. ಅವರು ಸಂತೋಷದಿಂದ ನಮ್ಮ ಜತೆ ಕಾಲ ಕಳೆಯುವುದು ನಮಗೆ ದೊಡ್ಡ ಸಂಭ್ರಮ ವಾಗಿತ್ತು.
ಸಂಜೆ ಆಗುತ್ತಲೇ ತಂದೆ ಆಫೀಸಿನಿಂದ ಬಂದು ಮಕ್ಕಳ ಜತೆ ಒಂದಷ್ಟು ಆಟವಾಡಿ ನಂತರ ಮಕ್ಕಳು ಒಂದೆರಡು ಗಂಟೆ ಓದುವುದು, ಎಲ್ಲರೂ ಜತೆಗೆ ಕೂತು ಮಾತನಾಡುತ್ತಾ ಊಟ ಮಾಡುವುದು ಹಾಲಿನಲ್ಲಿ ಸಾಲಾಗಿ ಹಾಸಿಗೆ ಹಾಸಿ ಒಟ್ಟಿಗೆ ಮಾತು ತಮಾಷೆಯೊಡನೆ ನಿzಗೆ ಜಾರುವುದು ನಡೆಯು ತ್ತಿತ್ತು.
ಇಂಥ ಬಾಲ್ಯದ ದಿನಗಳು ಇಂದಿಗೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಇರುವ ಅದ್ಭುತ ನೆನಪುಗಳು. ನಾವು ಅದೆಂಥ ದೊಡ್ಡ ದೊಡ್ಡ ಮನೆಗಳಲ್ಲಿ ಇದ್ದೇವೆ? ಎಷ್ಟು ಕಾರುಗಳಿವೆ? ಎಷ್ಟು ದುಡಿಯುತ್ತೇವೆ? ಎನ್ನುವುದು ಮುಖ್ಯವಲ್ಲ.
ಹೊರಗಿನ ಜಂಜಾಟವನ್ನೆಲ್ಲ ಮರೆತು ಮನೆಯವರೊಡನೆ ಮಕ್ಕಳೊಡನೆ ಎಷ್ಟು ಸಮಯ ಕೊಟ್ಟು ಕಾಲ ಕಳೆಯುತ್ತೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ಇನ್ನಾದರೂ ನಮ್ಮ ಮುಗಿಯದ ಕೆಲಸಗಳ ಚಿಂತೆಯ ಚೀಲವನ್ನು ಮನೆಯ ಹೊರಗೇ ಬಿಟ್ಟು, ಒಂದು ಪುಟ್ಟ ಮುಗುಳ್ನಗುವನ್ನು ಹೊತ್ತು ಮನೆಯ ಒಳಗೆ ಹೋಗೋಣ. ಮನೆಯವರಿಗೆ ಇದಕ್ಕಿಂತ ದೊಡ್ಡದಾದ ಉಡುಗೊರೆ ಮತ್ತಾವುದೂ ಇಲ್ಲ.