Roopa Gururaj Column: ಅವಶೇಷಗಳ ನಡುವೆ ಅರಳಿದ ಸಹೋದರತ್ವ
ಅಂದು ಆ ವಲಯದಲ್ಲಿ ಬದುಕುಳಿದವರು ಕೇವಲ 18 ಜನರು. ಅಂದಿನ ರಾತ್ರಿ ಸ್ಟಾನ್ಲಿ ಫೋನ್ ಮಾಡಿದಾಗ ಇಬ್ಬರ ಕಣ್ಣಲ್ಲೂ ಆನಂದ ಬಾಷ್ಪವಿತ್ತು. 9/11ರ ದುರಂತದ ನಂತರ, ಬ್ರಿಯಾನ್ ಮತ್ತು ಸ್ಟಾನ್ಲಿ ಕೇವಲ ಸ್ನೇಹಿತರಾಗಿ ಉಳಿಯಲಿಲ್ಲ. ಅವರು ಜಗತ್ತಿನಾದ್ಯಂತ ಸಂಚರಿಸಿ ತಮ್ಮ ಬದುಕಿನ ಕಥೆಯನ್ನು ಹಂಚಿಕೊಂಡರು.
-
ಒಂದೊಳ್ಳೆ ಮಾತು
ಸ್ಥಳ: ದಕ್ಷಿಣ ಟವರ್ (South Tower), ವಿಶ್ವ ವ್ಯಾಪಾರ ಕೇಂದ್ರ, ನ್ಯೂಯಾರ್ಕ್. ದಿನಾಂಕ: 2001ರ ಸೆಪ್ಟೆಂಬರ್ 11. ಆ ಸುಂದರ ಬೆಳಗ್ಗೆ ನ್ಯೂಯಾರ್ಕ್ ನಗರ ಎಂದಿನಂತೆ ಚಟುವಟಿಕೆ ಯಿಂದ ಕೂಡಿತ್ತು. ಸ್ಟಾನ್ಲಿ ಪ್ರೇಮ್‌ನಾಥ್ ಅವರು ದಕ್ಷಿಣ ಟವರ್‌ನ 81ನೇ ಮಹಡಿಯಲ್ಲಿ ರುವ ತಮ್ಮ ‘ಫುಜಿ ಬ್ಯಾಂಕ್’ ಕಚೇರಿಯಲ್ಲಿ ಕೆಲಸ ಆರಂಭಿಸಿದ್ದರು. ಆದರೆ 8.46ರ ಸಮಯಕ್ಕೆ ನಡೆದ ಮೊದಲ ಸ್ಫೋಟ ಇಡೀ ಜಗತ್ತನ್ನೇ ನಡುಗಿಸಿತು.
ಪಕ್ಕದ ಉತ್ತರ ಟವರ್‌ಗೆ ವಿಮಾನವೊಂದು ಅಪ್ಪಳಿಸಿತ್ತು. ಗಾಬರಿ ಗೊಂಡ ಸ್ಟಾನ್ಲಿ ಕೆಳಗೆ ಓಡಲು ಯತ್ನಿಸಿದಾಗ, ಭದ್ರತಾ ಸಿಬ್ಬಂದಿ ‘ದಕ್ಷಿಣ ಟವರ್ ಸುರಕ್ಷಿತವಾಗಿದೆ, ವಾಪಸ್ ಹೋಗಿ’ ಎಂದು ಸೂಚಿಸಿದರು. ಆ ಒಂದು ತಪ್ಪು ನಿರ್ಧಾರ ಸ್ಟಾನ್ಲಿಯನ್ನು ಸಾವಿನ ದವಡೆಗೆ ದೂಡಲಿತ್ತು.
ಸ್ಟಾನ್ಲಿ ಕಚೇರಿಗೆ ಮರಳಿದ ಮರುಕ್ಷಣವೇ ಚಿಕಾಗೋದಲ್ಲಿದ್ದ ಅವರ ಸಹೋದ್ಯೋಗಿ ಫೋನ್ ಮಾಡಿ, ‘ತಕ್ಷಣ ಅಲ್ಲಿಂದ ಹೊರಡು!’ ಎಂದು ಕಿರುಚಿದರು. ಸ್ಟಾನ್ಲಿ ಕಿಟಕಿಯತ್ತ ನೋಡಿದಾಗ ಬೃಹತ್ ಬೋಯಿಂಗ್ 767 ವಿಮಾನವೊಂದು ನೇರವಾಗಿ ತಮ್ಮತ್ತಲೇ ಧಾವಿಸುತ್ತಿರುವುದು ಕಂಡಿತು.
ಇದನ್ನೂ ಓದಿ: Roopa Gururaj Column: ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಸೂರ್ಯ ನಮಸ್ಕಾರ
ಸಾಕ್ಷಾತ್ ಯಮನನ್ನೇ ನೋಡಿದಂತಾದ ಸ್ಟಾನ್ಲಿ, ದೇವರನ್ನು ಸ್ಮರಿಸುತ್ತಾ ಉಕ್ಕಿನ ಮೇಜಿನ ಅಡಿಯಲ್ಲಿ ಅವಿತುಕೊಂಡರು. 9.03ಕ್ಕೆ ವಿಮಾನವು 77 ಮತ್ತು 85ನೇ ಮಹಡಿಗಳ ನಡುವೆ ಅಪ್ಪಳಿಸಿತು. ಗೋಡೆಗಳು ಪುಡಿಯಾದವು, ಬೆಂಕಿ ಆವರಿಸಿತು. ಸ್ಟಾನ್ಲಿ ಅವಶೇಷಗಳ ಅಡಿ ಯಲ್ಲಿ ರಕ್ತಸಿಕ್ತರಾಗಿ ಸಿಲುಕಿಕೊಂಡರು.
ದೇವದೂತನಂತೆ ಬಂದ ಬ್ರಿಯಾನ್: ಅದೇ ಸಮಯದಲ್ಲಿ ಮೂರು ಮಹಡಿಗಳ ಮೇಲೆ (84ನೇ ಮಹಡಿ) ಬ್ರಿಯಾನ್ ಕ್ಲಾರ್ಕ್ ಎಂಬುವವರು ತಮ್ಮ ಸಹೋದ್ಯೋಗಿಗಳೊಂದಿಗೆ ಕೆಳಗೆ ಇಳಿಯುತ್ತಿದ್ದರು. 81ನೇ ಮಹಡಿಗೆ ಬಂದಾಗ ಮಾರ್ಗವು ಬೆಂಕಿ ಮತ್ತು ಹೊಗೆಯಿಂದ ಆವೃತ್ತವಾಗಿತ್ತು.
‘ಕೆಳಗೆ ಹೋಗಲು ಸಾಧ್ಯವಿಲ್ಲ, ಮೇಲೆ ಹೋಗೋಣ’ ಎಂದು ಬ್ರಿಯಾನ್ ಅವರ ಜತೆಗಿ ದ್ದವರು ವಾದಿಸಿದರು. ಆದರೆ ಬ್ರಿಯಾನ್‌ಗೆ ಯಾವುದೋ ಒಂದು ಒಳಗಿನ ಧ್ವನಿ ‘ಕೆಳಗೆ ಹೋಗು’ ಎಂದು ಪ್ರೇರೇಪಿಸಿತು. ಅದೇ ಸಮಯದಲ್ಲಿ ಸ್ಟಾನ್ಲಿ ಕತ್ತಲೆಯಲ್ಲಿ ಸಹಾಯಕ್ಕಾಗಿ ಅತೀವವಾಗಿ ಕಿರುಚುತ್ತಿದ್ದರು.
‘ಸಹಾಯ ಮಾಡಿ! ಯಾರಾದರೂ ಇದ್ದೀರಾ?’ ಎಂಬ ಆರ್ತನಾದ ಕೇಳಿದ ಬ್ರಿಯಾನ್, ಸಾವಿನ ಭಯವಿದ್ದರೂ ಧ್ವನಿ ಬಂದ ಕಡೆಗೆ ಓಡಿದರು. ಅವಶೇಷಗಳ ನಡುವೆ ಕೈ ಚಾಚಿದ ಬ್ರಿಯಾನ್, ಸ್ಟಾನ್ಲಿಯನ್ನು ಸುರಕ್ಷಿತವಾಗಿ ಹೊರಗೆಳೆದರು. ಆ ಕ್ಷಣ ಇಬ್ಬರೂ ಅಪರಿಚಿತರು ಪರಸ್ಪರ ಅಪ್ಪಿಕೊಂಡರು.
ಬ್ರಿಯಾನ್ ಮೆಲ್ಲಗೆ ಹೇಳಿದರು- ‘ನನ್ನ ಜೀವನದುದ್ದಕ್ಕೂ ನನಗೆ ಒಬ್ಬ ಸಹೋದರ ಬೇಕೆಂದು ಬಯಸಿದ್ದೆ, ಇಂದು ಅವನು ನನಗೆ ಸಿಕ್ಕಿದ. ಬಾ ಗೆಳೆಯ, ಮನೆಗೆ ಹೋಗೋಣ’. ಹೊಗೆ ಮತ್ತು ಧೂಳಿನ ನಡುವೆ ಇಬ್ಬರೂ ಮೆಟ್ಟಿಲುಗಳ ಮೂಲಕ ಕೆಳಗೆ ಇಳಿಯತೊಡಗಿ ದರು.
ದಾರಿಯಲ್ಲಿ ಅವರು ಅನೇಕರನ್ನು ಕಂಡರು, ಕೆಲವರು ಮೇಲೆ ಹೋಗುತ್ತಿದ್ದರು, ಇನ್ನು ಕೆಲವರು ಅ ಕುಳಿತಿದ್ದರು. 68ನೇ ಮಹಡಿಯಲ್ಲಿ ಭೇಟಿಯಾದ ಒಬ್ಬ ವ್ಯಕ್ತಿ ಸಹಾಯ ನಿರಾಕರಿಸಿ ಅ ಉಳಿದರು, ಅವರು ಮತ್ತೆಂದೂ ಹಿಂತಿರುಗಲಿಲ್ಲ. 9.56ಕ್ಕೆ ಸ್ಟಾನ್ಲಿ ಮತ್ತು ಬ್ರಿಯಾನ್ ಹೇಗೋ ಕಟ್ಟಡದಿಂದ ಹೊರ ಬಂದರು. ಎರಡು ಬ್ಲಾಕ್ ದೂರ ಹೋದಾಗ ಕಟ್ಟಡ ಕುಸಿಯಲು ಪ್ರಾರಂಭಿಸಿತು. ಕೇವಲ ಮೂರು ನಿಮಿಷಗಳ ಮುಂಚೆ ಅವರು ಅಲ್ಲಿಂದ ಹೊರಬಂದಿದ್ದರು!
ಅಂದು ಆ ವಲಯದಲ್ಲಿ ಬದುಕುಳಿದವರು ಕೇವಲ 18 ಜನರು. ಅಂದಿನ ರಾತ್ರಿ ಸ್ಟಾನ್ಲಿ ಫೋನ್ ಮಾಡಿದಾಗ ಇಬ್ಬರ ಕಣ್ಣಲ್ಲೂ ಆನಂದ ಬಾಷ್ಪವಿತ್ತು. 9/11ರ ದುರಂತದ ನಂತರ, ಬ್ರಿಯಾನ್ ಮತ್ತು ಸ್ಟಾನ್ಲಿ ಕೇವಲ ಸ್ನೇಹಿತರಾಗಿ ಉಳಿಯಲಿಲ್ಲ. ಅವರು ಜಗತ್ತಿನಾದ್ಯಂತ ಸಂಚರಿಸಿ ತಮ್ಮ ಬದುಕಿನ ಕಥೆಯನ್ನು ಹಂಚಿಕೊಂಡರು.
ಧರ್ಮ, ದೇಶ ಮತ್ತು ಜನಾಂಗದ ಭೇದವಿಲ್ಲದೆ ಮಾನವೀಯತೆ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಇವರು ಮಾದರಿಯಾದರು. ಇವರ ಕಥೆಯನ್ನು ಆಧರಿಸಿ ಅನೇಕ ಸಾಕ್ಷ್ಯಚಿತ್ರ ಗಳು ನಿರ್ಮಾಣವಾಗಿವೆ. ರಾಜಕೀಯ ಪ್ರೇರಿತವಾಗಿ ಧರ್ಮ, ಭಾಷೆ, ಜಾತಿ ವಿಷಯಗಳಲ್ಲಿ ದಿನ ಬೆಳಗಾದರೆ ಹೊಡೆದಾಡುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ವಿಷ ಕಾರುವ ಅನೇಕ ರಿಗೆ ಇಂಥ ಘಟನೆಗಳು ಪಾಠವಾಗಲಿ. ಮನುಷ್ಯಕುಲಕ್ಕೆ ಶತ್ರುವೆಂದರೆ ಅದು ಆತಂಕವಾದ ಮಾತ್ರವೇ; ಮಿಕ್ಕಿದ್ದೆಲ್ಲ ನಾವು ಮಾಡಿ ಕೊಂಡಂಥವು.