Surendra Pai Column: ಬಣಗಳ ಸಂಘರ್ಷ: ಬಣಗೆಟ್ಟ ಜನಸಾಮಾನ್ಯರ ಬದುಕು !
ಇಂದಿನ ಪ್ರಸ್ತುತ ವಿದ್ಯಮಾನಗಳಲ್ಲಿ ಅತ್ಯಂತ ಆತಂಕಕಾರಿ ಸಂಗತಿಯೆಂದರೆ ತಟಸ್ಥ ನಿಲುವಿಗೆ ಜಾಗವೇ ಇಲ್ಲದಂತಾಗಿರುವುದು. ನೀನು ನನ್ನನ್ನು ಬೆಂಬಲಿಸದಿದ್ದರೆ, ನೀನು ನನ್ನ ಶತ್ರು ಎಂಬ ಕಟು ಸತ್ಯ ಇಂದಿನ ಸಮಾಜವನ್ನು ಆಳುತ್ತಿದೆ. ಸಾಮಾನ್ಯ ಮನುಷ್ಯನೊಬ್ಬ ಸರಕಾರವನ್ನೋ ಅಥವಾ ಯಾವುದೇ ವ್ಯವಸ್ಥೆಯನ್ನೋ ಪ್ರಶ್ನಿಸಿದರೆ, ಆತನಿಗೆ ತಕ್ಷಣವೇ ಯಾವುದಾದರೊಂದು ಪಂಥದ ‘ಲೇಬಲ್’ ಹಚ್ಚಲಾಗುತ್ತದೆ.
-
ಒಡಲಾಳ
ಸುರೇಂದ್ರ ಪೈ, ಭಟ್ಕಳ
ಪ್ರಕೃತಿಗೆ ಯಾವ ಪಂಥಗಳೂ ಇಲ್ಲ. ಬೆಳಗುವ ಸೂರ್ಯನಿಗೆ, ಹರಿಯುವ ನದಿಗೆ, ಕಷ್ಟದಲ್ಲಿ ಜತೆಯಾಗುವ ನೆರೆಹೊರೆಯವರಿಗೆ ಎಡ ಬಲಗಳ ಭೇದವಿಲ್ಲ. ಹಸಿದ ಹೊಟ್ಟೆಗೆ ಅನ್ನ, ತುತ್ತು ನೀಡುವ ಕೈಗೆ ಯಾವ ಸಿದ್ಧಾಂತದ ಬಣವೂ ಇರುವುದಿಲ್ಲ. ರಾಜಕೀಯ ಚದುರಂಗ ದಾಟದಲ್ಲಿ ಎಡ-ಬಲಗಳು ಅವರವರ ಬೇಳೆ ಬೇಯಿಸಿಕೊಳ್ಳುವ ದಾಳಗಳಷ್ಟೇ.
ಇಂದಿನ ಭಾರತೀಯ ರಾಜಕೀಯ ಸನ್ನಿವೇಶಗಳನ್ನು ಗಮನಿಸಿದರೆ ಒಂದು ಅಂಶ ಸ್ಪಷ್ಟವಾಗುತ್ತಿದೆ. ಇಡೀ ಸಮಾಜವು ‘ಬಲಪಂಥ’ ಮತ್ತು ‘ಎಡಪಂಥ’ ಎಂಬ ಎರಡು ಧ್ರುವಗಳಾಗಿ ವಿಭಜನೆ ಗೊಂಡಿದೆ. ಟಿವಿ ಮಾಧ್ಯಮಗಳ ಚರ್ಚೆಗಳಿಂದ ಹಿಡಿದು, ಸಾಮಾಜಿಕ ಜಾಲತಾಣಗಳ ಟ್ರೋಲ್ ಗಳವರೆಗೆ, ಚಹಾ ಅಂಗಡಿಯ ಹರಟೆಯಿಂದ ಹಿಡಿದು ಸಂಸತ್ತಿನವರೆಗೂ ಈ ಸೈದ್ಧಾಂತಿಕ ಸಂಘರ್ಷ ವೇ ಪ್ರಮುಖವಾಗಿ ರಾರಾಜಿಸುತ್ತಿದೆ. ಆದರೆ, ಈ ಭಾಷಣಗಳು, ಸಿದ್ಧಾಂತಗಳು ಮತ್ತು ಟ್ವಿಟರ್(ಎಕ್ಸ್) ಯುದ್ಧಗಳ ನಡುವೆ ಯಾರಿಗೂ ಕಾಣದಂತೆ ನಲುಗಿಹೋಗುತ್ತಿರುವುದು ಮಾತ್ರ ‘ಸಾಮಾನ್ಯ ಜನರ ಬದುಕು.’
ಧ್ರುವೀಕರಣದ ರಾಜಕಾರಣವು ದಿನನಿತ್ಯದ ಬದುಕನ್ನು ಪ್ರಭಾವಿಸುತ್ತಿದೆ. ಪ್ರಸ್ತುತ ದಿನಗಳಲ್ಲಿ ಬಲ ಮತ್ತು ಎಡಪಂಥಗಳ ಹೋರಾಟ ಕೇವಲ ವೈಚಾರಿಕವಾಗಿ ಉಳಿದಿಲ್ಲ. ಅದು ಜನರ ಭಾವನೆಗಳನ್ನು ಕೆರಳಿಸುವ ಅಸ್ತ್ರವಾಗಿದೆ. ಒಂದೆಡೆ ಬಲಪಂಥ ರಾಷ್ಟ್ರೀಯತೆ, ಸಂಸ್ಕೃತಿ, ಧರ್ಮ ಮತ್ತು ಭದ್ರತೆಯ ಹೆಸರಿನಲ್ಲಿ ಜನರನ್ನು ಸೆಳೆಯಲು ಯತ್ನಿಸುತ್ತಿದೆ. ಇನ್ನೊಂದೆಡೆ ಎಡಪಂಥ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಹಕ್ಕುಗಳ ಹೋರಾಟದ ಹೆಸರಿನಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ.
ಈ ಎರಡು ಸಿದ್ಧಾಂತಗಳ ನಡುವಿನ ‘ಅಹಂ’ ಮತ್ತು ‘ಅಧಿಕಾರದ ಹಪಾಹಪಿ’ಯ ಮಧ್ಯೆ ಸಾಮಾನ್ಯ ನಾಗರಿಕನ ಮೂಲಭೂತ ಅಗತ್ಯಗಳು ಮೂಲೆಗುಂಪಾಗಿವೆ. ದಿನಬೆಳಗಾದರೆ ತೈಲ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವುದು, ನಿರುದ್ಯೋಗ ಮತ್ತು ಭ್ರಷ್ಟಾಚಾರದಂತಹ ನೈಜ ಕಷ್ಟಗಳಿಂದ ಬಳಲುತ್ತಿರುವ ಜನಸಾಮಾನ್ಯನಿಗೆ ಯಾವ ಸಿದ್ಧಾಂತವೂ ತಕ್ಷಣದ ಪರಿಹಾರ ನೀಡುತ್ತಿಲ್ಲ.
ಇಂದಿನ ಪ್ರಸ್ತುತ ವಿದ್ಯಮಾನಗಳಲ್ಲಿ ಅತ್ಯಂತ ಆತಂಕಕಾರಿ ಸಂಗತಿಯೆಂದರೆ ತಟಸ್ಥ ನಿಲುವಿಗೆ ಜಾಗವೇ ಇಲ್ಲದಂತಾಗಿರುವುದು. ನೀನು ನನ್ನನ್ನು ಬೆಂಬಲಿಸದಿದ್ದರೆ, ನೀನು ನನ್ನ ಶತ್ರು ಎಂಬ ಕಟು ಸತ್ಯ ಇಂದಿನ ಸಮಾಜವನ್ನು ಆಳುತ್ತಿದೆ. ಸಾಮಾನ್ಯ ಮನುಷ್ಯನೊಬ್ಬ ಸರಕಾರವನ್ನೋ ಅಥವಾ ಯಾವುದೇ ವ್ಯವಸ್ಥೆಯನ್ನೋ ಪ್ರಶ್ನಿಸಿದರೆ, ಆತನಿಗೆ ತಕ್ಷಣವೇ ಯಾವುದಾದರೊಂದು ಪಂಥದ ‘ಲೇಬಲ್’ ಹಚ್ಚಲಾಗುತ್ತದೆ.
ಇದನ್ನೂ ಓದಿ: Surendra Pai Column: ʼಶಿವ ಡಂಗುʼರದ ಅಂತರಂಗ ಬಲ್ಲವರಾರು?
ಬಲಪಂಥೀಯರನ್ನು ಪ್ರಶ್ನಿಸಿದರೆ ‘ದೇಶದ್ರೋಹಿ’ ಅಥವಾ ‘ಎಡಪಂಥೀಯ’ ಎನ್ನಲಾಗುತ್ತದೆ; ಅದೇ ರೀತಿ ಎಡಪಂಥೀಯರ ನಿಲುವುಗಳನ್ನು ಒಪ್ಪದಿದ್ದರೆ ‘ಕೋಮುವಾದಿ’ ಎಂದು ಬಿಂಬಿಸಲಾಗುತ್ತದೆ. ಈ ಸೈದ್ಧಾಂತಿಕ ಕತ್ತರಿ ಮಧ್ಯೆ ಸಿಲುಕಿದ ಸಾಮಾನ್ಯ ಜನ ನೆಮ್ಮದಿಯ ಜೀವನ ನಡೆಸುವುದೇ ದುಸ್ತರ ವಾಗಿದೆ. ನೆರೆಹೊರೆಯವರ ನಡುವೆ, ಸ್ನೇಹಿತರ ಮಧ್ಯೆ, ಅಷ್ಟೇ ಏಕೆ ಕುಟುಂಬದ ಒಳಗೂ ರಾಜಕೀಯ ಸಿದ್ಧಾಂತಗಳು ಗೋಡೆಗಳನ್ನು ನಿರ್ಮಿಸುತ್ತಿವೆ.
ಇಂದಿನ ಮುಖ್ಯವಾಹಿನಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಈ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿವೆ. ಸಾಮಾನ್ಯ ಜನರಿಗೆ ಬೇಕಿರುವುದು ಗುಣಮಟ್ಟದ ಶಿಕ್ಷಣ, ಕೈಗೆಟುಕುವ ಆರೋಗ್ಯ ಸೇವೆ, ಉದ್ಯೋಗ ಮತ್ತು ಉತ್ತಮ ರಸ್ತೆಗಳು. ಆದರೆ, ಬೆಳಗಿನಿಂದ ಸಂಜೆಯವರೆಗೆ ಮಾಧ್ಯಮಗಳಲ್ಲಿ ಬಿತ್ತರವಾಗುವುದು ಧರ್ಮ, ಜಾತಿ, ಇತಿಹಾಸದ ವಿವಾದಗಳು ಮತ್ತು ಸೈದ್ಧಾಂತಿಕ ಕೆಸರೆರಚಾಟಗಳು ಮಾತ್ರ. ನೈಜ ಸಮಸ್ಯೆಗಳ ಚರ್ಚೆಯಿಂದ ಜನರ ಗಮನ ವನ್ನು ಬೇರೆಡೆಗೆ ಸೆಳೆಯಲು ಈ ಬಲ ಎಡಗಳ ವಿವಾದವನ್ನು ಒಂದು ಉಪಕರಣವಾಗಿ ಬಳಸಲಾಗುತ್ತಿದೆ ಎಂಬುದು ಸದ್ಯದ ಕಹಿ ಸತ್ಯ.
ಯಾವ ಸಿದ್ಧಾಂತವೂ ಹಸಿದ ಹೊಟ್ಟೆಗೆ ಅನ್ನ ನೀಡುವುದಿಲ್ಲ. ಬಲಪಂಥದ ಸಾಂಸ್ಕೃತಿಕ ಹೆಮ್ಮೆ ಅಥವಾ ಎಡಪಂಥದ ಕ್ರಾಂತಿಕಾರಿ ಭಾಷಣಗಳು ಸಾಮಾನ್ಯ ಜನರಿಗೆ ನೆಮ್ಮದಿಯ ಬದುಕನ್ನು ಗ್ಯಾರಂಟಿ ಮಾಡಲಾರವು. ಸಾಮಾನ್ಯ ಜನರಿಗೆ ಸಿದ್ಧಾಂತಗಳಿಗಿಂತ ಮುಖ್ಯವಾಗಿ ಬೇಕಿರುವುದು ಆರ್ಥಿಕ ಭದ್ರತೆಯಡಿ ಸ್ಥಿರವಾದ ಉದ್ಯೋಗ ಮತ್ತು ನ್ಯಾಯೋಚಿತ ಆದಾಯ. ಉತ್ತಮ ಶಿಕ್ಷಣ, ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳೆಂಬ ಮೂಲಭೂತ ಸೌಕರ್ಯ. ಜಾತಿ, ಧರ್ಮ, ಸಿದ್ಧಾಂತಗಳ ಹೆಸರಿನಲ್ಲಿ ದ್ವೇಷವಿಲ್ಲದ ಸಾಮಾಜಿಕ ಜೀವನ.
ಬಲ ಮತ್ತು ಎಡಪಂಥಗಳ ವಿಚಾರಧಾರೆಗಳು ಪ್ರಜಾಪ್ರಭುತ್ವದ ವೈವಿಧ್ಯತೆಗೆ ಪೂರಕವಾಗಿರ ಬೇಕಿತ್ತೇ ಹೊರತು, ಸಮಾಜವನ್ನು ಒಡೆಯುವ ಕಟು ಅಸ್ತ್ರಗಳಾಗಬಾರದಿತ್ತು. ಸದ್ಯದ ಪರಿಸ್ಥಿತಿ ಯಲ್ಲಿ ಸಿದ್ಧಾಂತಗಳ ಅಂಧಾಭಿಮಾನದಿಂದ ಹೊರಬಂದು, ಸಾಮಾನ್ಯ ಜನರ ದಿನನಿತ್ಯದ ನೈಜ ಕಷ್ಟಗಳಿಗೆ ಕಿವಿಯಾಗುವ ತುರ್ತು ಅಗತ್ಯವಿದೆ.
ರಾಜಕಾರಣಿಗಳು ಮತ್ತು ಬುದ್ಧಿಜೀವಿಗಳು ತಮ್ಮ ಸೈದ್ಧಾಂತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು, ‘ಮಾನವೀಯತೆ’ ಮತ್ತು ‘ಜನಕಲ್ಯಾಣ’ವನ್ನೇ ಪರಮ ಸಿದ್ಧಾಂತವನ್ನಾಗಿ ಸ್ವೀಕರಿಸಿದಾಗ ಮಾತ್ರ ಸಾಮಾನ್ಯರ ಬದುಕು ನಲುಗುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯ.
ಸಿದ್ಧಾಂತಗಳು ಮನುಷ್ಯನಿಗಾಗಿ ಇರಬೇಕೇ ಹೊರತು, ಮನುಷ್ಯ ಸಿದ್ಧಾಂತಗಳಿಗಾಗಿ ಅಲ್ಲ. ಇಂದಿನ ತೀವ್ರ ಧ್ರುವೀಕರಣಕ್ಕೆ ಮುಕ್ತಿ ಸಿಗಬೇಕಾದರೆ ಸಮಾಜದಲ್ಲಿ ‘ಸಾಂವಿಧಾನಿಕ ದೇಶಪ್ರೇಮ’ ಹೆಚ್ಚಾಗ ಬೇಕು. ಯಾವುದೇ ಸಿದ್ಧಾಂತಕ್ಕಿಂತ ಸಂವಿಧಾನದ ಆಶಯಗಳಾದ ಸಮಾನತೆ, ಭ್ರಾತೃತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡಬೇಕು.
ಸಾಮಾನ್ಯ ಜನರ ರಾಜಕೀಯ ಪಕ್ಷಗಳನ್ನು ಅವುಗಳ ‘ಸಿದ್ಧಾಂತ’ಗಳ ಆಧಾರದ ಮೇಲೆ ಅಳೆಯುವು ದನ್ನು ನಿಲ್ಲಿಸಿ, ಮತ್ತು ನೀಡುವ ‘ಆಡಳಿತ’ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಪ್ರಗತಿಯ ಆಧಾರದ ಮೇಲೆ ಪ್ರಶ್ನಿಸಲು ಆರಂಭಿಸಿದಾಗ ಮಾತ್ರ ಈ ಬಲ-ಎಡಗಳ ನಲುಗುವಿಕೆ ಯಿಂದ ಜನಸಾಮಾನ್ಯರು ಮುಕ್ತಿ ಪಡೆಯಲು ಸಾಧ್ಯ. ವೈಚಾರಿಕತೆ ಸಮಾಜವನ್ನು ಬೆಳಗಿಸುವ ದೀಪವಾಗ ಬೇಕು, ಸಮಾಜವನ್ನು ಸುಡುವ ಕಿಚ್ಚಾಗಬಾರದು.
ಒಂದು ದೇಶದ ನಿಜವಾದ ಪ್ರಗತಿ ಎಂದರೆ ಕೇವಲ ಜಿಡಿಪಿ ಅಂಕಿ-ಅಂಶಗಳ ಏರಿಕೆಯಲ್ಲ. ಬದಲಾಗಿ ನಾಗರಿಕರ ಜೀವನಮಟ್ಟದ ಸುಧಾರಣೆ, ಗುಣಮಟ್ಟದ ಶಿಕ್ಷಣ, ಕೈಗೆಟುಕುವ ಆರೋಗ್ಯ, ಆಧುನಿಕ ಮೂಲಸೌಕರ್ಯ ಮತ್ತು ಸಾಮಾಜಿಕ ಸಾಮರಸ್ಯವನ್ನು ಹೊಂದುವುದಾಗಿದೆ. ಆದರೆ, ಇಂದಿನ ಎಡ ಮತ್ತು ಬಲ ಬಣಗಳ ವಿಪರೀತ ಮನೋಭಾವನೆಯು ನಿಜವಾದ ಪ್ರಗತಿಯ ಹಾದಿಗೆ ಅಡ್ಡಗೋಡೆ ಯಾಗುತ್ತಿದೆ.
ಭಾರತವು ‘ರಾಜ್ಯಗಳ ಒಕ್ಕೂಟ’. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸೈದ್ಧಾಂತಿಕ ಭಿನ್ನಾಭಿಪ್ರಾಯ ಗಳಿದ್ದರೂ ದೇಶದ ಪ್ರಗತಿಗಾಗಿ ಜತೆಯಾಗಿ ಕೆಲಸ ಮಾಡಬೇಕು ಸಂವಿಧಾನವು ಸ್ಪಷ್ಟವಾದ ಚೌಕಟ್ಟನ್ನು ನಿರ್ಮಿಸಿದೆ.
ಇಂದು ಕೇಂದ್ರದಲ್ಲಿ ಒಂದು ಸಿದ್ಧಾಂತದ ಪಕ್ಷ ಮತ್ತು ರಾಜ್ಯದಲ್ಲಿ ಮತ್ತೊಂದು ಸಿದ್ಧಾಂತದ ಪಕ್ಷ ಅಧಿಕಾರದಲ್ಲಿದ್ದರೆ, ಅವರ ನಡುವೆ ಆರೋಗ್ಯಕರ ಸ್ಪರ್ಧೆ ಇರುವ ಬದಲಿಗೆ ರಾಜಕೀಯ ಸೈದ್ಧಾಂತಿಕ ಯುದ್ಧವೇ ನಡೆಯುತ್ತಿದೆ. ಗವರ್ನರ್ ಹುದ್ದೆಯ ದುರ್ಬಳಕೆ, ಬರಗಾಲ ಅಥವಾ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ, ಮತ್ತು ಕೇಂದ್ರ ತನಿಖಾ ಸಂಸ್ಥೆಗಳನ್ನು ರಾಜ್ಯಗಳ ಮೇಲೆ ರಾಜಕೀಯ ದಾಳವಾಗಿ ಬಳಸುವಿಕೆ ಇವೆಲ್ಲವೂ ಸಂವಿಧಾನ ರೂಪಿಸಿದ ಒಕ್ಕೂಟ ವ್ಯವಸ್ಥೆಯ ಚೌಕಟ್ಟನ್ನು ಧೂಳಿಪಟ ಮಾಡುತ್ತಿವೆ.
ಸೈದ್ಧಾಂತಿಕ ಭಾಷಣಗಳು ಮತ್ತು ವಿವಾದಗಳ ಚರ್ಚೆಯಲ್ಲಿ ಮುಳುಗಿರುವ ಯುವಕರು, ತಮ್ಮ ವೃತ್ತಿ ಜೀವನ ಕಟ್ಟಿಕೊಳ್ಳಲು ಬೇಕಾದ ತಾಂತ್ರಿಕ ಜ್ಞಾನ ಮತ್ತು ಉದ್ಯಮಶೀಲತೆಯ ಕಡೆಗೆ ಗಮನ ಹರಿಸುತ್ತಿಲ್ಲ. ರಾಜಕೀಯ ಪಕ್ಷಗಳು ಇವರನ್ನು ಕೇವಲ ತಮ್ಮ ರ‍್ಯಾಲಿಗಳಿಗೆ, ಐಟಿ ಸೆಲ್‌ಗಳಿಗೆ, ವೋಟ್‌ಬ್ಯಾಂಕ್‌ಗಾಗಿ ಬಳಸಿಕೊಳ್ಳುತ್ತಿವೆ.
ಇಂದಿನ ಯುವಕರು ತಮ್ಮ ತಂತ್ರಜ್ಞಾನವನ್ನು, ಕೌಶಲವನ್ನು ದೇಶದ ಪ್ರಗತಿಗೆ ಬಳಸುವುದರ ಬದಲಾಗಿ, ಜಾಲತಾಣಗಳಲ್ಲಿ ತಮ್ಮ ಸಿದ್ಧಾಂತವನ್ನು ಸಮರ್ಥಿಸಲು ಎದುರಾಳಿ ಪಂಥವನ್ನು ಟ್ರೋಲ್ ಮಾಡಲು ಬಳಸುತ್ತಿದ್ದಾರೆ. ಇದರಿಂದ ಯುವಕರಲ್ಲಿ ಸಕಾರಾತ್ಮಕ ಆಲೋಚನೆಗಳು ಕಡಿಮೆಯಾಗಿ, ಸದಾ ಆಕ್ರೋಶ, ನಕಾರಾತ್ಮಕತೆ ಮತ್ತು ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ.
ಎಡ ಅಥವಾ ಬಲಪಂಥೀಯ ಸಿದ್ಧಾಂತಗಳು ಕೇವಲ ಐದು-ಹತ್ತು ವರ್ಷಗಳ ಅಧಿಕಾರದ ಅವಧಿ ಯನ್ನು ಹೊಂದಿರಬಹುದು. ಆದರೆ, ಸಂವಿಧಾನ ಸಾಮಾಜಿಕ ನ್ಯಾಯ ಒದಗಿಸುತ್ತದೆ. ದೇಶದ ನೈಜ ಪ್ರಗತಿಯಾಗಬೇಕಾದರೆ, ಸಿದ್ಧಾಂತಗಳ ಅತಿರೇಕವನ್ನು ಬದಿಗಿಟ್ಟು, ಸಾಂವಿಧಾನಿಕ ಚೌಕಟ್ಟಿನ ಮಿತಿಯೊಳಗೆ ಬದುಕುವುದನ್ನು ಕಲಿಯುವುದೇ ಇಂದಿನ ಭಾರತದ ಮುಂದಿರುವ ಅತಿ ದೊಡ್ಡ ಜವಾಬ್ದಾರಿ.
ಪ್ರಕೃತಿಗೆ ಯಾವ ಪಂಥಗಳೂ ಇಲ್ಲ. ಬೆಳಗುವ ಸೂರ್ಯನಿಗೆ, ಹರಿಯುವ ನದಿಗೆ, ಕಷ್ಟದಲ್ಲಿ ಜತೆಯಾಗುವ ನೆರೆಹೊರೆಯವರಿಗೆ ಎಡ ಬಲಗಳ ಭೇದವಿಲ್ಲ. ಹಸಿದ ಹೊಟ್ಟೆಗೆ ಅನ್ನ, ತುತ್ತು ನೀಡುವ ಕೈಗೆ ಯಾವ ಸಿದ್ಧಾಂತದ ಬಣವೂ ಇರುವುದಿಲ್ಲ. ರಾಜಕೀಯದ ಚದುರಂಗದಾಟದಲ್ಲಿ ಎಡ-ಬಲಗಳು ಅವರವರ ಬೇಳೆ ಬೇಯಿಸಿಕೊಳ್ಳುವ ದಾಳಗಳಷ್ಟೇ. ನಾವು ಕೇವಲ ‘ಮನುಷ್ಯರಾಗಿ’ ಬದುಕಬೇಕಿದೆ. ಸಿದ್ಧಾಂತಗಳ ಅಂಧತ್ವವನ್ನು ಕಳಚಿ ಬದುಕಬೇಕಿದೆ. ಕೊನೆಯದಾಗಿ ಯುದ್ಧಗಳು ಮತ್ತು ಸಿದ್ಧಾಂತಗಳ ನಡುವೆ ಗೆದ್ದವರು ಯಾರೂ ಇಲ್ಲ; ಸೋತದ್ದು ಮತ್ತು ಸತ್ತದ್ದು ಕೇವಲ ರಕ್ತಮಾಂಸಗಳ ಮನುಷ್ಯ ಮಾತ್ರ.