ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chandrashekher Sthavaramatha Column: ನಾಡು ಕಂಡ ಧೀಮಂತ ಸಿಎಂ

ಹೆಗಡೆ ಅವರು ಒಂದೆರಡು ಸಾಧನೆಗೆ ತೃಪ್ತಿ ಪಟ್ಟವರಲ್ಲ. ಇವರ ಪ್ರಗತಿಪಥದಲ್ಲಿ ವಿಧವಾ ಪಿಂಚಣಿ, ರಾಜ್ಯ ಅಲ್ಪಸಂಖ್ಯಾತರ ಆಯೋಗ-ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದವರ ಅಭ್ಯುದಯಕ್ಕಾಗಿ ಆಯೋಗ ಹಾಗೂ ಅಭಿವೃದ್ಧಿ ನಿಗಮಗಳ ಸ್ಥಾಪನೆ, ಸ್ಥಳೀಯ ಸಂಸ್ಥೆ ಗಳಲ್ಲಿ ಮಹಿಳೆಯರಿಗೆ ಶೇ.25ರ ಮೀಸಲು, ಲೋಕಾಯುಕ್ತ ವ್ಯವಸ್ಥೆಯನ್ನು ರಾಜ್ಯಕ್ಕೆ ಒದಗಿಸಿದ ನಿಲುವು, ರೈತರ ಸಾಲ ಮನ್ನಾ, ಕಡಿಮೆ ಬಡ್ಡಿಗೆ ಸಾಲ ಮುಂತಾದವು ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತವೆ.

ನಾಡು ಕಂಡ ಧೀಮಂತ ಸಿಎಂ

Ashok Nayak Ashok Nayak Aug 29, 2025 9:42 AM

ಗುಣಗಾನ

ಚಂದ್ರಶೇಖರ್‌ ಸ್ಥಾವರಮಠ

ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಪ್ರಧಾನಮಂತ್ರಿ, ಮುಖ್ಯಮಂತ್ರಿ ಆಗಬಹುದು. ಸಂಖ್ಯಾಬಲದ ಮೇಲೆ ನಿರ್ಧಾರವಾಗುವ ರಾಜಕೀಯ ಗಾದಿ ಯಾರಿಗೆ ಬೇಕಾದರೂ ಲಭಿಸುತ್ತದೆ. ಆದರೆ ಇದೆಲ್ಲದರ ಆಧಾರ ಬಿಟ್ಟು ಕೇವಲ ಮೌಲ್ಯಗಳಿಂದ ರಾಜ್ಯದ ಅತ್ಯುನ್ನತ ಹುದ್ದೆಗೆ ಏರಿದವರು ರಾಮಕೃಷ್ಣ ಹೆಗಡೆ. ತಾವು ಸಿಎಂ ಆಗಿದ್ದಾಗ ಇಡೀ ದೇಶವೇ ಕರ್ನಾಟಕದ ಕಡೆ ನಿಬ್ಬೆರಗಾಗಿ ನೋಡುವಂತೆ ಆಡಳಿತ ನೀಡಿದ ಮಹಾನ್ ನಾಯಕ.

ದಿಕ್ಕು-ದೆಸೆಯಿಲ್ಲದ ಇಂದಿನ ರಾಜಕಾರಣವನ್ನು ಕಂಡಾಗ ಮೌಲ್ಯಾಧಾರಿತ ರಾಜಕಾರಣ ನಡೆಸಿದ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಕಣ್ಮುಂದೆ ಬರುತ್ತಾರೆ. ಹೆಗಡೆಯವರು ತಮ್ಮ ರಾಜಕೀಯ ಜೀವನದುದ್ದಕ್ಕೂ ನಂಬಿದ ಹಾಗೂ ತಾವೇ ಪ್ರತಿಪಾದಿಸಿದ ರಾಜಕೀಯ ಮೌಲ್ಯಗಳ ಉಳಿವಿಗಾಗಿ ಅಹರ್ನಿಶಿ ಶ್ರಮಿಸಿದ್ದಷ್ಟೇ ಅಲ್ಲ, ಆ ಮೌಲ್ಯಗಳಿಗಾಗಿ ಸಾಕಷ್ಟು ಬಾರಿ ಬೆಲೆಯನ್ನೂ ತೆತ್ತ ಆದರ್ಶ ನಾಯಕರೂ ಹೌದು.

1962ರಿಂದ 72ರ ನಡುವೆ ನಿಜಲಿಂಗಪ್ಪ, ವೀರೇಂದ್ರ ಪಾಟೀಲರ ಸರಕಾರದಲ್ಲಿ ಪ್ರಮುಖ ಖಾತೆ ಪಡೆದು ಜನಪ್ರಿಯತೆ ಹೆಚ್ಚಿಸಿಕೊಂಡ ರಾಮಕೃಷ್ಣ ಹೆಗಡೆ ಅವರು 1983ರಲ್ಲಿ ರಾಜ್ಯದ ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. 1985ರಲ್ಲಿ ನಡೆದ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷವು ಹಿನ್ನಡೆ ಸಾಧಿಸಿದ್ದಕ್ಕೆ ನೈತಿಕ ಜವಾಬ್ದಾರಿ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು ಹಾಗೂ ಆ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಆರಿಸಿ ಬರುವ ಮೂಲಕ ತಾವೊಬ್ಬ ಜನ ನಾಯಕ ಎನ್ನುವುದನ್ನು ಮತ್ತೆ ಸಾಬೀತುಪಡಿಸಿ ತೋರಿಸಿದರು.

ಇದನ್ನೂ ಓದಿ: Prof R G Hegde Column: ಹೆಗಡೆ: ರಾಜಕೀಯದ ಅನನ್ಯತೆ ದಾಖಲಾಗಲಿ

ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ಅವರು ಮಾಡಿದ ಬದಲಾವಣೆ ಒಂದೆರಡಲ್ಲ. ಪಂಚಾಯತ್ ರಾಜ್ ಕಾನೂನಿನಲ್ಲಿ ಹೆಗಡೆಯವರ ಪಾತ್ರ ಅತ್ಯಂತ ಮಹತ್ವದ್ದು. ಇದರ ಮೂಲಕ ಅವರು ಹಿಂದುಳಿದವರು, ಬಡವರು ಹಾಗೂ ಸಣ್ಣ ಗುಂಪು, ಜಾತಿಯ ಜನರಿಗೆ ರಾಜಕೀಯದಲ್ಲಿ ಪ್ರಾತಿನಿಧ್ಯ ಗಳಿಸುವ ಶಕ್ತಿ ತುಂಬಿದರು. ಅಧಿಕಾರ ವಿಕೇಂದ್ರೀಕರಣ ಹಾಗೂ ಗ್ರಾಮ ಪಂಚಾಯಿತಿಗಳು ಇವರ ಅತ್ಯಂತ ಪ್ರಿಯ ವಿಚಾರವಾಗಿದ್ದವು.

ಇವರ ಕಾಲದಲ್ಲಿ ಕರ್ನಾಟಕದಲ್ಲಿ ಪ್ರಬಲವಾಗಿ ಅನುಷ್ಠಾನಗೊಂಡ ಪಂಚಾಯತ್ ಕಾನೂನಿನಿಂದ ರಾಜೀವ್ ಗಾಂಧಿ ಪ್ರಭಾವಿತರಾಗಿದ್ದಂತೂ ವಿಶೇಷ. ಇವರ ಕೃಷಿ-ತೋಟಗಾರಿಕೆ ನೀತಿಯು ರಾಷ್ಟ್ರೀಯ ತೋಟಗಾರಿಕಾ ನಿಗಮದ ಸ್ಥಾಪನೆಗೆ ದಾರಿ ಮಾಡಿಕೊಟ್ಟಿದ್ದು ಇನ್ನೊಂದು ಮೈಲಿ ಗಲ್ಲು.

ಹೆಗಡೆ ಅವರು ಒಂದೆರಡು ಸಾಧನೆಗೆ ತೃಪ್ತಿ ಪಟ್ಟವರಲ್ಲ. ಇವರ ಪ್ರಗತಿಪಥದಲ್ಲಿ ವಿಧವಾ ಪಿಂಚಣಿ, ರಾಜ್ಯ ಅಲ್ಪಸಂಖ್ಯಾತರ ಆಯೋಗ-ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದವರ ಅಭ್ಯುದಯಕ್ಕಾಗಿ ಆಯೋಗ ಹಾಗೂ ಅಭಿವೃದ್ಧಿ ನಿಗಮಗಳ ಸ್ಥಾಪನೆ, ಸ್ಥಳೀಯ ಸಂಸ್ಥೆ ಗಳಲ್ಲಿ ಮಹಿಳೆಯರಿಗೆ ಶೇ.25ರ ಮೀಸಲು, ಲೋಕಾಯುಕ್ತ ವ್ಯವಸ್ಥೆಯನ್ನು ರಾಜ್ಯಕ್ಕೆ ಒದಗಿಸಿದ ನಿಲುವು, ರೈತರ ಸಾಲ ಮನ್ನಾ, ಕಡಿಮೆ ಬಡ್ಡಿಗೆ ಸಾಲ ಮುಂತಾದವು ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತವೆ.

ಇನ್ನು ಪಠ್ಯಪುಸ್ತಕ, ಬಸ್ ಪಾಸ್ ವಿತರಣೆ, ಸಮವಸ್ತ್ರ ವಿತರಣೆ ಸೇರಿದಂತೆ ಹಲವಾರು ಕ್ರಾಂತಿಕಾರಿ ಸಾಧನೆಗೆ ಇದೇ ಸಂದರ್ಭದಲ್ಲಿ ಮುನ್ನುಡಿ ಬರೆಯಲಾಯಿತು. ಲೋಕಾಯುಕ್ತ ವ್ಯವಸ್ಥೆ ವಿಷಯ ಬಂದಾಗ ಹೆಗಡೆಯವರ ಈ ಸಾಧನೆ ನೆನೆಸಿಕೊಳ್ಳದಿದ್ದರೆ ಅಪಚಾರವಾದೀತು.

ಹೊರರಾಜ್ಯದ ನ್ಯಾಯಮೂರ್ತಿಗಳನ್ನು ಈ ಸ್ಥಾನಕ್ಕೆ ತಂದು ಕೂರಿಸಿದರು. ಜತೆಗೆ ಲೋಕಾಯುಕ್ತ ರಿಗೆ ಸ್ವ ಇಚ್ಛೆಯಿಂದ ಮೊಕದ್ದಮೆಗಳನ್ನು ದಾಖಲಿಸಿಕೊಳ್ಳುವ ಉನ್ನತ ಅಧಿಕಾರವನ್ನು ಹೆಗಡೆ ನೀಡಿದ್ದರು. ಮುಖ್ಯಮಂತ್ರಿಯನ್ನೂ ಲೋಕಾಯುಕ್ತರು ಪ್ರಶ್ನಿಸಬಹುದಾಗಿತ್ತು. ‘ಮೌಲ್ಯಾಧಾರಿತ ರಾಜಕಾರಣಿ’ ಎಂಬ ಪದ ಹುಟ್ಟಿದ್ದೇ ಇವರಿಂದ ಅಂದರೆ ಅತಿಶಯೋಕ್ತಿ ಎನಿಸದು.

ಇದಕ್ಕೆ ನೀಡಬಹುದಾದ ಕೆಲ ಉದಾಹರಣೆಗಳಿವೆ. ಅವುಗಳಲ್ಲಿ ಪ್ರಮುಖವಾದುದು ಬೆಂಡಿಗೇರಿ ಯಲ್ಲಿ ದಲಿತನಿಗೆ ಮಲ ತಿನ್ನಿಸಿದ ಪ್ರಕರಣ. ಇದನ್ನು ಹೆಗಡೆ ಎಷ್ಟು ಗಂಭೀರವಾಗಿ ಪರಿಗಣಿಸಿದ ರೆಂದರೆ ‘ಇನ್ನು ಮುಂದೆ ಇಂಥ ಪ್ರಕರಣ ನಡೆದರೆ ತಪ್ಪಿತಸ್ಥರಿಗೆ ದಲಿತರಿಂದಲೇ ಮಲ ತಿನ್ನಿಸು ತ್ತೇನೆ’ ಅಂತ ಖಡಕ್ ಆಗಿ ಎಚ್ಚರಿಸಿದ್ದರು.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನಾದಿನ ಎಲ್ಲ ಸಂಬಂಧಿಗಳನ್ನು ಕರೆದು, ಊಟ ಹಾಕಿದ ನಂತರ, ‘ನಾನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಯುವವರೆಗೂ ನಮ್ಮ ಸಂಬಂಧವು ನೆಂಟರಿಷ್ಟರು ಅನ್ನುವುದಷ್ಟಕ್ಕೇ ಸೀಮಿತವಾಗಿರಲಿ. ಅದು ಹಾಗೆಯೇ ಇದ್ದರೆ ಒಳಿತು. ಯಾರೂ ನನ್ನ ಭೇಟಿಗೆ ಕಚೇರಿಗೆ/ಮನೆಗೆ ಬರಬೇಡಿ’ ಎಂದಿದ್ದರು.

ಇವರ ಪ್ರಾಮಾಣಿಕತೆಗೊಂದು ನಿದರ್ಶನವೆಂದರೆ ವೈದ್ಯ ಸೀಟು ಕೊಡಿಸಿದ್ದಕ್ಕೆ ಪ್ರತಿಯಾಗಿ ಅವರ ಮಗ ಭರತ್ ಹೆಗಡೆ ಲಂಚ ಸ್ವೀಕರಿಸಿದ್ದಾರೆ ಎಂದು ಎ.ಕೆ.ಸುಬ್ಬಯ್ಯನವರು ಆರೋಪಿಸಿದಾಗ, ಹಿಂದೆ ಮುಂದೆ ಯೋಚಿಸದೇ ಮಗನ ವಿರುದ್ಧವೇ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದರು. ಇನ್ನು ಸಹೋದರ ಗಣೇಶ್ ಹೆಗಡೆ ಅಂತಾರಾಜ್ಯ ಅಕ್ಕಿ ಸಾಗಣೆ ದಾಸ್ತಾನಿನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಕೇಳಿಬಂದಾಗಲೂ ತನಿಖೆಗೆ ಸೂಚಿಸಿದ್ದರು. ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ ಒಂದ ಎರಡು ಸಲ ಖುದ್ದು ಸಿಎಂ ಪದವಿ ತ್ಯಜಿಸಿದ್ದರು.

ಹೆಗಡೆ ಅವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಹಿತ-ಮಿತ ನಡೆ-ನುಡಿಯೊಂದಿಗೆ ನಾಡಿನ ಜನರ ಹೃದಯ ಗೆದ್ದಿದ್ದರು. ಅವರು ಭಾಗವಹಿಸುತ್ತಿದ್ದ ಸಭೆ- ಸಮಾರಂಭಗಳಲ್ಲಿ ಜನಸಾಗರವೇ ಸೇರುತ್ತಿತ್ತು. ಅಂಥ ಧೀಮಂತ ವ್ಯಕ್ತಿತ್ವ ಅವರಲ್ಲಿತ್ತು. ಇನ್ನು ಎಂಥ ಸಂದರ್ಭದಲ್ಲೂ ಹೆಗಡೆ ಅವರು ಅಸಾಂವಿಧಾನಿಕ ಭಾಷೆ ಪ್ರಯೋಗಿಸಿದ ಉದಾಹರಣೆಗಳೇ ಇಲ್ಲ. ಅವರನ್ನು ಜನತಾದಳದಿಂದ ಹೊರ ಹಾಕಿದಾಗಲೂ ತಮ್ಮ ಗರಡಿಯ ಬೆಳೆದ, ಜತೆಗಿದ್ದ ಕೆಲ ನಾಯಕರು ತಮ್ಮಿಂದ ದೂರ ವಾಗುತ್ತಿದ್ದಾರೆ ಎಂಬ ಸುಳಿವು ದೊರೆತಾಗ ತೀರಾ ನೊಂದುಕೊಂಡಿದ್ದರು.

ಆಗ ಮನನೊಂದು ತೀರಾ ಭಾವುಕರಾಗಿ ಸಾತ್ವಿಕ ಆಕ್ರೋಶ ಹೊರಹಾಕಿದ್ದರು. ಆದರೆ, ತಮ್ಮ ರಾಜಕೀಯ ಕಡುವೈರಿಯನ್ನೂ ಎಂದೂ ನಿಂದಿಸಿ ಮಾತನಾಡಿದವರಲ್ಲ. ಅಂಥ ರಾಜಕೀಯ ಸಂಸ್ಕಾರ ಅವರಲ್ಲಿತ್ತು. ಇಂಥ ಆದರ್ಶ ರಾಜಕಾರಣಿಯಾಗಿದ್ದ ಹೆಗಡೆ ಅವರ ರಾಜಕೀಯ ಮೌಲ್ಯ ಗಳು, ಚಿಂತನೆಗಳನ್ನು ಯುವ ಜನತೆಗೆ ತಿಳಿಸಲು ರಾಜ್ಯದ ವಿ.ವಿ.ಯೊಂದರಲ್ಲಿ ಅಧ್ಯಯನ ಪೀಠ ಸ್ಥಾಪಿಸುವ ಭರವಸೆ ಇನ್ನೂ ಸಾಕಾರವಾಗಿಲ್ಲ ಎಂಬುದು ನೋವಿನ ಸಂಗತಿ.

ಹೆಗಡೆಯವರ ರಾಜಕೀಯ ಗರಡಿಯ ಬೆಳೆದ ಸಿದ್ದರಾಮಯ್ಯ ಈಗ ಮುಖ್ಯಮಂತ್ರಿ ಆಗಿದ್ದಾರೆ. ಅವರು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ, ಅಧ್ಯಯನ ಪೀಠ ಸ್ಥಾಪಿಸಿದ್ದೇ ಆದಲ್ಲಿ, ಭವಿಷ್ಯದ ಪೀಳಿಗೆಗೆ ಹೆಗಡೆ ಅವರ ರಾಜಕೀಯ ವಿಚಾರಧಾರೆಗಳ ಪರಿಚಯವಾಗಿ, ರಾಜಕಾರಣದಲ್ಲಿ ಮೌಲ್ಯ ಗಳ ಸಂರಕ್ಷಣೆಗೆ ಅದು ಸಹಕಾರಿಯಾಗಬಲ್ಲದು.

(ಲೇಖಕರು ರಾಜ್ಯಾಧ್ಯಕ್ಷರು, ಲೋಕಶಕ್ತಿ ಪಕ್ಷ)