Shishir Hegde Column: ಎಲ್ನೋಡಿ ಅಲ್ಲಿ ಕಾರು, ಆದರೆ ಬಿಡುವಂತಿಲ್ಲ ಜೋರು
ಆಂಬುಲೆನ್ಸ್ ಗೆ ದಾರಿ ಹೇಗೆ ಕೊಡಬೇಕು ಎಂಬುದನ್ನು ಅಮೆರಿಕವನ್ನು ನೋಡಿ ಕಲಿಯಬೇಕು ಎಂಬುದು ಸುಳ್ಳಲ್ಲ. ಸಾಮಾನ್ಯವಾಗಿ ಹೆಚ್ಚಿನ ರಸ್ತೆಯ ಒಂದು ಲೇನ್ ಅನ್ನು ಎಮರ್ಜೆನ್ಸಿ ಕಾರಣಕ್ಕೆಂದೇ ಬಿಟ್ಟಿಡ ಲಾಗುತ್ತದೆ. ಅದರಲ್ಲಿ ಪೊಲೀಸರು ಅಥವಾ ಆಂಬುಲೆನ್ಸ್ ಮೊದಲಾದವು ಗಳು ಹೋಗಲಿಕ್ಕಷ್ಟೇ ಅನುಮತಿ. ಆ ಲೇನ್ ಅನ್ನು ಜನಸಾಮಾನ್ಯರು ಬಳಸಿದರೆ ಅದು ಅಪರಾಧ. ಅದಿಲ್ಲದ ಜಾಗದಲ್ಲಿಯೂ ಯಾವುದೇ ಆಂಬುಲೆನ್ಸ್ ಅಥವಾ ಪೊಲೀಸರು ಬ್ಲಿಂಕರ್ ಹಾಕಿ ಬಂದರೆ ಸಾವಿರಾರು ಕಾರುಗಳು ದಾರಿಮಾಡಿಕೊಡಬೇಕು.


ಶಿಶಿರಕಾಲ
shishih@gmail.com
(ಅಮೆರಿಕ ಕಾನೂನು ವ್ಯವಸ್ಥೆ ಭಾಗ-4)
ಅಮೆರಿಕದಲ್ಲಿ ಬದುಕು ಸಾಗಬೇಕೆಂದರೆ ಜತೆಯಲ್ಲೊಂದು ಕಾರು ಇರಲೇಬೇಕು. ಸ್ವಂತಕ್ಕೆ- ವೈಯಕ್ತಿಕ ಕಾರಿಲ್ಲವೆಂದರೆ ಬದುಕು ಬಂದೀಖಾನೆ. ಕಾರು ಅವಶ್ಯಕತೆ. ಇಲ್ಲಿ ಬಸ್ ಸೌಲಭ್ಯ ಅತ್ಯಂತ ಸೀಮಿತ. ತೀರಾ ನಗರ ವ್ಯಾಪ್ತಿಯಲ್ಲಿದ್ದರೆ ನಾಲ್ಕಾರು ಬಸ್ ಓಡಾಡುತ್ತವೆ. ಅದು ಕೂಡ ನಗರದಲ್ಲಿ ಎಂದರಲ್ಲಿ ಓಡಾಡುವುದು ಕಷ್ಟ.
ಹೇಳಿದಲ್ಲಿ ಹೋಗುವಷ್ಟು- ನಮ್ಮ ಬಿಎಂಟಿಸಿ ರೀತಿಯ ವ್ಯವಸ್ಥೆ ಇಲ್ಲಿಲ್ಲ. ಅಥವಾ ಹೇಳಿದ ಊರಿಗೆ ಹೋಗಬೇಕೆಂದರೆ ಬಸ್ ಸ್ಟ್ಯಾಂಡಿಗೆ ಹೋದರೆ ಅಲ್ಲಿ ಬೋರ್ಡ್ ಹಾಕಿದ ಬಸ್‌ಗಳು ನಿಂತಿರುವು ದಿಲ್ಲ. ನಾನು ಶಿಕಾಗೋದಲ್ಲಿ ವಾಸಿಸಲು ಶುರು ಮಾಡಿ ದಶಕವೇ ಕಳೆಯಿತು. ಇಲ್ಲಿಯವರೆಗೆ ಒಮ್ಮೆಯೂ ಬಸ್ ಹತ್ತುವ ಪ್ರಮೇಯವೇ ಬಂದಿಲ್ಲ.
ನನಗೆ ಶಿಕಾಗೋ ಬಸ್ ಸ್ಟ್ಯಾಂಡ್ ಎಲ್ಲಿದೆ ಎನ್ನುವುದೇ ಗೊತ್ತಿಲ್ಲ. ತೀರಾ ಪೇಟೆಯಲ್ಲಿ ಬದುಕು ವವರಿಗೆ ಕಾರ್ ಪಾರ್ಕಿಂಗ್ ಮಾಡುವ ವ್ಯವಸ್ಥೆ ಅಷ್ಟಿರುವುದಿಲ್ಲ. ಅಪಾರ್ಟ್‌ಮೆಂಟಿನಲ್ಲಿ ಬದುಕು ವವರಾದರೂ ಅವರಿಗೆ ಸಾಮಾನ್ಯವಾಗಿ ಒಂದು ಕಾರನ್ನು ಇಡಲಷ್ಟೇ ವ್ಯವಸ್ಥೆ ಇರುತ್ತದೆ. ಎರಡನೇ ಕಾರು ಇಡಬೇಕೆಂದರೆ ಅದಕ್ಕೆ ತಿಂಗಳಿಗೆ 300 ಡಾಲರ್‌ನಿಂದ ನ್ಯೂಯಾರ್ಕ್‌ನಂಥ ನಗರಗಳಲ್ಲಿ 500-600 ಡಾಲರ್ ಪೀಕಬೇಕು. ಹತ್ತಿರತ್ತಿರ ಐವತ್ತು ಸಾವಿರ ರುಪಾಯಿ.
ಹಾಗಾಗಿ ಪೇಟೆಯಲ್ಲಿರುವವರು ಅವರಿಗೆ ಅಂಗಡಿ ಇತ್ಯಾದಿ ವ್ಯವಸ್ಥೆ ಸಮೀಪದಲ್ಲಿ ಇರುವುದರಿಂದ ಕಾರ್ ಇಟ್ಟುಕೊಳ್ಳದೆ ಬದುಕಬಹುದು. ಆದರೆ ಹೆಚ್ಚಿನ ಜನವಸತಿಯಿರುವುದು ಉಪನಗರಗಳಲ್ಲಿ. ಅಲ್ಲಿ ಮನೆಗಳ ನಡುವೆ ಅಂಗಡಿಗಳಿರುವುದಿಲ್ಲ. ಮಧ್ಯರಾತ್ರಿ ಕೊತ್ತಂಬರಿ ಸೊಪ್ಪು ತರಬೇಕೆಂದರೂ ಕಾರು ಬೇಕೇ ಬೇಕು. ಲೆಕ್ಕದ ಪ್ರಕಾರ ಪ್ರತಿ 100 ಜನಕ್ಕೆ 85 ಕಾರು ಅಮೆರಿಕದ ಸರಾಸರಿ.
ಇದನ್ನೂ ಓದಿ: Shishir Hegde Column: ಇಲ್ಲಿ ನ್ಯಾಯಾಧೀಶರಾಗಬೇಕೆಂದರೆ ಚುನಾವಣೆಯಲ್ಲಿ ಗೆಲ್ಲಬೇಕು ?
ಇಲ್ಲಿ ಮನೆಗೆಲಸದವರೂ ಕಾರಲ್ಲಿ ಬರುತ್ತಾರೆ ಎನ್ನುವುದು ಸುಳ್ಳಲ್ಲ. ಏಕೆಂದರೆ ಕಾರಿಲ್ಲದೆ ಅವರು ಕೂಡ ಯಾರದೇ ಮನೆ ತಲುಪಲು ಸಾಧ್ಯವೇ ಇಲ್ಲ. ಇಷ್ಟೊಂದು ಪ್ರಮಾಣದ ಕಾರುಗಳು ಇಲ್ಲಿರುವು ದರಿಂದ ಅದರ ಸುತ್ತಲಿನ ಕಾನೂನುಗಳು ಕೂಡ ಅಷ್ಟೇ ಮಜಬೂತಾಗಿವೆ.
ನನ್ನ ಸ್ನೇಹಿತ ಪ್ರಸೂನ್ ದೆಹಲಿಯವನು. ಸ್ವಲ್ಪ ಭೋಳೆ ಶಂಕರನಂಥವನು. ಅಮೆರಿಕಕ್ಕೆ ಬಂದ ಹೊಸತರಲ್ಲಿ ನಾನು ಅವನಿಗೆ ಈ ದೇಶವನ್ನು ಪರಿಚಯಿಸುವ ಸ್ನೇಹಿತ. ಮನೆ ವ್ಯವಸ್ಥೆ ಎಲ್ಲ ಆದ ನಂತರ ಲೈಸೆ, ಕಾರು ಖರೀದಿಸುವುದಕ್ಕೂ ಜತೆಯಲ್ಲಿ ಓಡಾಡಿ ಮಾತುಕತೆ ನಡೆಸಿ ಖರೀದಿಸಿದ್ದೂ ಆಯಿತು. ಪುಣ್ಯಾತ್ಮ ಅಮೆರಿಕಕ್ಕೆ ಬಂದ ಜೋಶ್‌ನಲ್ಲಿದ್ದ.
ಹೊಸ ಕಾರು ಖರೀದಿಸಿದ್ದೇ ತಡ, ಮುಂದಿನ ವಾರಾಂತ್ಯಕ್ಕೆ ಕುಟುಂಬ ಸಮೇತ ನಯಾಗರಾ ಫಾಲ್ಸ್ ಗೆ ಟ್ರಿಪ್ ಹೊರಟು ಬಿಟ್ಟ. ಕಾರಿನಲ್ಲಿ ಸುಮಾರು ಹತ್ತು ತಾಸಿನ ದಾರಿ. ಅವನು ಹುಟ್ಟಿದ್ದು ಬೆಳೆದದ್ದು ಎಲ್ಲವೂ ದೆಹಲಿಯಲ್ಲಿ. ಪೇಟೆ ಹುಡುಗ ‘ಚಾಲೂ ಇರ್ತಾನೆ’ ಎಂದು ನಾನು ಜಾಸ್ತಿ ಎಚ್ಚರಿಸಲಿಲ್ಲ. ಅಮೆರಿಕದ ಹೈವೇ- ಕಾರಿನ ಆಕ್ಸಿಲೇಟರ್ ಪೂರ್ತಿ ಒತ್ತಿ ವೇಗೋತ್ಕರ್ಷದಲ್ಲಿ ಓಡಿಸಿದ್ದಾನೆ. ಅವನು ನಿಗದಿತ ವೇಗದ ಮಿತಿಗಿಂತ ಮೂವತ್ತು ಮೈಲಿ ಹೆಚ್ಚಿನ ವೇಗದಲ್ಲಿದ್ದ.
ಇವನ ಮಿತಿಮೀರಿದ ವೇಗವನ್ನು ಕಂಡದ್ದೇ ಹೈವೇ ಕಾವಲಿನ ಪೊಲೀಸರು ಎಲ್ಲಿಲ್ಲದ ಗಾಬರಿ ಬಿದ್ದಿದ್ದಾರೆ. ಸಾಮಾನ್ಯವಾಗಿ ಅಮೆರಿಕದಲ್ಲಿ ವೇಗದ ಮಿತಿಗಿಂತ 10-15ರಷ್ಟು ಹೆಚ್ಚಿದ್ದರೆ ಪೊಲೀಸರು ತಲೆಕೆಡಿಸಿಕೊಳ್ಳುವುದಿಲ್ಲ. ವೇಗದ ಮಿತಿ ಮೀರಿದರೆ, ಯರ್ರಾಬಿರ್ರಿ ಕಾರನ್ನು ಚಲಾಯಿಸಿದರೆ ಅಥವಾ ಯಾವುದೇ ನಿಯಮ ಉಲ್ಲಂಘಿಸಿದರೆ ಪೊಲೀಸರು ನಮ್ಮ ಹಿಂದೆ ಬಂದು ತಮ್ಮ ಕಾರಿನ ಮೇಲೆ ಹಾಕಿದ ಬ್ಲಿಂಕರ್ ಲೈಟ್ ಗಳನ್ನು ಆನ್ ಮಾಡುತ್ತಾರೆ. ಅದನ್ನು ನೋಡು ತ್ತಿದ್ದಂತೆ ನಾವು ಕಾರು ಚಲಾಯಿಸುವವರು ರಸ್ತೆಯ ಪಕ್ಕಕ್ಕೆ ಕಾರನ್ನು ನಿಲ್ಲಿಸಬೇಕು.
ಇದು ನಿಯಮ. ಆದರೆ ನನ್ನ ಸ್ನೇಹಿತ ಪ್ರಸೂನ್ ಕುಮಾರನಿಗೆ ಅದು ತಿಳಿದಿರಲಿಲ್ಲ. ಒಬ್ಬ ಪೊಲೀಸ್ ಇವನ ಕಾರಿನ ಹಿಂದಕ್ಕೆ ಬಂದು ತನ್ನ ಪೊಲೀಸ್ ಕಾರಿನ ಬ್ಲಿಂಕರ್ ಹಚ್ಚಿದ್ದಾನೆ. ಅದು ಕಾರನ್ನು ನಿಲ್ಲಿಸಬೇಕು ಎಂಬುದರ ಸೂಚನೆ ಎಂದು ಪ್ರಸೂನ್‌ಗೆ ಗೊತ್ತಿರಲಿಲ್ಲ. ಪೊಲೀಸ್ ಬ್ಲಿಂಕರ್ ಕಾಣಿಸಿದ್ದೇ ತಡ, ನಮ್ಮ ಪ್ರಸೂನ್ ಸಾಹೇಬ್ರು ಏನೋ ಎಮರ್ಜೆನ್ಸಿ ಇರಬಹುದು ಎಂದು ತಮ್ಮ ಕಾರನ್ನು ಇನ್ನಷ್ಟು ವೇಗೋತ್ಕರ್ಷ ಮಾಡಿದ್ದಾರೆ.
ಸಾಮಾನ್ಯವಾಗಿ ಇಲ್ಲಿನ ಕ್ರಿಮಿನಲ್‌ಗಳು, ಕಳ್ಳಕೋರರು ತಪ್ಪಿಸಿಕೊಳ್ಳುವುದಕ್ಕೆ ಹೀಗೆ ಪೊಲೀಸ್ ಬ್ಲಿಂಕರ್ ಹಾಕಿದ ಮೇಲೆಯೂ ಯರ್ರಾಬಿರ್ರಿ ಓಡಿಸುವುದಿದೆ. ‘ಇದು ಪಕ್ಕಾ ಅದೇ ಕೇಸ್’ ಎಂದೇ ಪೊಲೀಸರು ತಿಳಿದಿದ್ದರೆ, ಪೊಲೀಸ್ ಸೈರನ್ ಆದರೂ ಪ್ರಸೂನ್ ಮಾತ್ರ ಒಳ್ಳೆಯ ಪ್ರಜೆಯಾಗಲು ಅವಕ್ಕೆ ದಾರಿ ಮಾಡಿಕೊಡಲು ಇನ್ನಷ್ಟು ವೇಗದಲ್ಲಿ ಓಡಿಸುತ್ತಲೇ ಇದ್ದಾನೆ. ಈಗ ಕಾರು ಒಂದಿರುವುದು, ಎರಡಾಯ್ತು, ನಾಲ್ಕಾಯ್ತು.
ಇವನ ಕಾರಿನ ಹಿಂದೆ ಗಣಪತಿಯ ಮೆರವಣಿಗೆಯಂತೆ ಪೊಲೀಸರ ಲೈಟು, ಸೈರನ್ನು. ಸುಮಾರು ಹತ್ತು ಮೈಲಿ ಇದೇ ರೀತಿ ಪೊಲೀಸರು ಇವನನ್ನು ಚೇಸ್ ಮಾಡಿದ್ದಾರೆ. ಪ್ರಸೂನ್ ರಾಯರಿಗೆ ಅದು ತಮ್ಮನ್ನೇ ಚೇಸ್ ಮಾಡುತ್ತಿರುವುದು ಎಂದು ಇನ್ನೂ ತಿಳಿದಿಲ್ಲ. ಅಷ್ಟಕ್ಕೇ ಮುಗಿಯಲಿಲ್ಲ. ಕೊನೆಯಲ್ಲಿ ಒಂದು ಪೊಲೀಸ್ ಹೆಲಿಕಾಪ್ಟರ್ ಅವನೆದುರು ಬಂದು ಹಾರಿದೆ.
ಆಗ ಪ್ರಸೂನ್ ಹೌಹಾರಿದ್ದಾನೆ- ಕಾರನ್ನು ನಿಧಾನ ಮಾಡಿ ನಿಲ್ಲಿಸಿದ್ದಾನೆ. ಪೊಲೀಸರು ಪಿಸ್ತೂಲ್ ಮುಖಕ್ಕೆ ಹಿಡಿದು, ಬಂಧಿಸಿ ಆಮೇಲೆ ಕೇಸ್ ಮಾಡಿ ಬಿಟ್ಟಿದ್ದರು. ಅಯ್ಯೋ, ಆಮೇಲೆ ಆರು ತಿಂಗಳು ಕೋರ್ಟಿಗೆ ಅಲೆಯುತ್ತಿದ್ದ. ಅವನಿಗೆ ಅತಿ ವೇಗದ ದಂಡದ ಜತೆಯಲ್ಲಿ ನಾಲ್ಕು ಪೊಲೀಸ್ ವಾಹನ, ಹೆಲಿಕಾಪ್ಟರ್, ಒಂದಿಡೀ ವ್ಯವಸ್ಥೆಯನ್ನು ಅವನ ಕಾರಣದಿಂದ ನಿಯೋಜಿಸಿದ ಖರ್ಚು ಎಲ್ಲ ಸೇರಿಸಿ ಬರೋಬ್ಬರಿ ಹನ್ನೊಂದು ಸಾವಿರ ಡಾಲರ್ ದಂಡ ವಿಧಿಸಲಾಯಿತು.
ರುಪಾಯಿಯಲ್ಲಿ ಅಂದಾಜಿಸುವುದಾದರೆ 9 ಲಕ್ಷ ರುಪಾಯಿ. ಈ ರೀತಿ ಪೊಲೀಸ್ ವಾಹನ ನಮ್ಮ ಕಾರಿನ ಹಿಂದೆ ಬಂದು ಬ್ಲಿಂಕರ್ ಹಚ್ಚಿದಾಗ ನಾವು ರಸ್ತೆಯ ಪಕ್ಕಕ್ಕೆ ಸರಿದು ನಿಲ್ಲಬೇಕು. ಆದರೆ ಆ ಕ್ಷಣಕ್ಕೆ ನಾವು ಕಾರಿಂದ ಇಳಿಯುವಂತಿಲ್ಲ. ಸುಮ್ಮನೆ ಕಾರಿನೊಳಗೇ ಕುಳಿತಿರಬೇಕು. ಪೊಲೀಸ್ ನಮ್ಮ ಹತ್ತಿರ ಬರುವುದಕ್ಕಿಂತ ಮೊದಲು ನಮ್ಮ ಕಾರಿನ ಸಂಖ್ಯೆಯನ್ನು ತನ್ನ ಕಾರಿನಲ್ಲಿರುವ ಕಂಪ್ಯೂಟರಿನಲ್ಲಿ ಹಾಕಿ, ಎಲ್ಲ ವಿವರಣೆಯನ್ನು ನೋಡಿಕೊಳ್ಳುತ್ತಾನೆ. ಈ ಕಾರು ಯಾರದ್ದು, ಇದರ ಓನರ್ ಯಾರು, ಅವನ ಬಳಿ ಗನ್ ಇದೆಯೇ? ಅಥವಾ ಇವ ಕ್ರಿಮಿನಲ್ ಇತಿಹಾಸವಿರುವವನೇ ಇತ್ಯಾದಿಯನ್ನೆಲ್ಲ ನೋಡಿ ತಿಳಿದು ನಂತರವೇ ಪೊಲೀಸ್ ತನ್ನ ಕಾರಿನಿಂದ ಇಳಿದು ನಮ್ಮ ಬಳಿ ಬರುವುದು.
ಆತ ಬಂದಾಗಲೂ ಅಷ್ಟೇ- ಅವನೇ ಹೇಳುವಲ್ಲಿಯವರೆಗೆ ಕಾರಿನೊಳಗೆ ಅಲುಗಾಡುವಂತಿಲ್ಲ. ಎರಡೂ ಕೈ ಅನ್ನು ಸ್ಟಿಯರಿಂಗ್ ಮೇಲೆಯೇ ಇಟ್ಟು ಕಾಯಬೇಕು. ಅವನು ‘ಕಾರಿನ ಗಾಜನ್ನು ಇಳಿಸು’ ಎಂದಾಗ ನಿಧಾನಕ್ಕೆ ಗಾಜನ್ನು ಇಳಿಸಬೇಕು. ಅಮೆರಿಕದಲ್ಲಿ ಗನ್-ಪಿಸ್ತೂಲುಗಳು ಸಾಮಾನ್ಯ. ಪೊಲೀಸ್ ಈ ರೀತಿ ನಡೆದು ಬಳಿ ಬಂದಾಗ ಕೈ ಆಚೀಚೆ ಜಾಸ್ತಿ ಚಲನವಲನ ಮಾಡಿದರೆ ನೀವು ಗನ್ ಹುಡುಕುತ್ತಿರಬಹುದು ಎಂದು ಭಾವಿಸಬಹುದು.
ಹಾಗನ್ನಿಸಿದಲ್ಲಿ ಪೊಲೀಸರಿಗೆ ತಕ್ಷಣ ಆತ್ಮರಕ್ಷಣೆಗೆಂದು ಶೂಟ್ ಮಾಡುವ ಸ್ವಾತಂತ್ರ್ಯವಿದೆ, ಸಾಧ್ಯತೆ ಯಿದೆ. ಹಾಗಾಗಿ ಅವನು ಬಂದು ಗ್ಲಾಸ್ ಇಳಿಸಿ ಎಂದ ಮೇಲೆಯೇ ಮಾತು. ಪೊಲೀಸ್ ಬಂದು ಯಾವ ಕಾರಣಕ್ಕೆ ತಾನು ನಿಲ್ಲಿಸಿದ್ದು ಎಂದು ವಿವರಿಸುತ್ತಾನೆ. ನಂತರ ಲೈಸೆನ್ಸ್, ಆರ್‌ಸಿ ಪರಿಶೀಲಿಸಿದ ಮೇಲೆ ದಂಡದ ಹಾಳೆ ಕೊಟ್ಟು ಹೊರಟು ಬಿಡುತ್ತಾನೆ.
ಕುಡಿದು ಕಾರು ಚಲಾಯಿಸುವುದು ಲೆಕ್ಕ ಮೀರಿದ ಅಪರಾಧ. ವಾಹನ ಚಲಾಯಿಸುವಾಗ ಅಳತೆ ಮೀರಿ ಕುಡಿದಿದ್ದರೆ ಯಥೇಚ್ಛ ದಂಡ, ಲೈಸೆ ರದ್ದು ಇತ್ಯಾದಿ. ಇನ್ನು ಕೆಲವು ರಾಜ್ಯಗಳಲ್ಲಿ ಜೈಲು. ಅಷ್ಟಾಗಿಯೂ ಅಮೆರಿಕದಲ್ಲಿನ ಕಾರು ಅಪಘಾತದಲ್ಲಿ ಶೇ.30ರಷ್ಟು ಸಾವು ಆಗುವುದು ಕುಡಿದು ವಾಹನ ಚಲಾಯಿಸುವುದರಿಂದ. ಈ ಕಾರಣಕ್ಕೆ ಕೆಲವು ರಾಜ್ಯಗಳು ವಿಚಿತ್ರ ಕಾನೂನನ್ನು ಮಾಡಿಕೊಂಡಿವೆ.
ಕೆಲವು ರಾಜ್ಯಗಳಲ್ಲಿ ಅಂಥವರ ಲೈಸೆನ್ಸ್ ಅನ್ನು ಆಜೀವ ರದ್ದು ಮಾಡಲಾಗುತ್ತದೆ. ಇನ್ನು ಅಲಾಸ್ಕಾ ಮೊದಲಾದ ರಾಜ್ಯಗಳಲ್ಲಿ ಅಂಥವರಿಗೆ ಪ್ರತ್ಯೇಕ ಲೈಸೆನ್ಸ್ ಪ್ಲೇಟ್. ಅದನ್ನು ನೋಡುತ್ತಿದ್ದಂತೆ ಪೊಲೀಸರು ಯಾವಾಗ ಬೇಕಾದರೂ ನಿಲ್ಲಿಸಿ ಡ್ರೈವರ್ ಅನ್ನು ಪರೀಕ್ಷಿಸ ಬಹುದು. ಜತೆಯಲ್ಲಿ ಅವಮಾನ- ಇವನು ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದವನು ಎಂಬುದು ಕಾರಿನ ನಂಬರ್ ಪ್ಲೇಟ್ ನೋಡಿದವರಿಗೆಲ್ಲ ತಿಳಿಯುತ್ತದೆ.
ಆಂಬುಲೆನ್ಸ್ ಗೆ ದಾರಿ ಹೇಗೆ ಕೊಡಬೇಕು ಎಂಬುದನ್ನು ಅಮೆರಿಕವನ್ನು ನೋಡಿ ಕಲಿಯಬೇಕು ಎಂಬುದು ಸುಳ್ಳಲ್ಲ. ಸಾಮಾನ್ಯವಾಗಿ ಹೆಚ್ಚಿನ ರಸ್ತೆಯ ಒಂದು ಲೇನ್ ಅನ್ನು ಎಮರ್ಜೆನ್ಸಿ ಕಾರಣಕ್ಕೆಂದೇ ಬಿಟ್ಟಿಡ ಲಾಗುತ್ತದೆ. ಅದರಲ್ಲಿ ಪೊಲೀಸರು ಅಥವಾ ಆಂಬುಲೆನ್ಸ್ ಮೊದಲಾದವು ಗಳು ಹೋಗಲಿಕ್ಕಷ್ಟೇ ಅನುಮತಿ. ಆ ಲೇನ್ ಅನ್ನು ಜನಸಾಮಾನ್ಯರು ಬಳಸಿದರೆ ಅದು ಅಪರಾಧ. ಅದಿಲ್ಲದ ಜಾಗದಲ್ಲಿಯೂ ಯಾವುದೇ ಆಂಬುಲೆನ್ಸ್ ಅಥವಾ ಪೊಲೀಸರು ಬ್ಲಿಂಕರ್ ಹಾಕಿ ಬಂದರೆ ಸಾವಿರಾರು ಕಾರುಗಳು ದಾರಿಮಾಡಿಕೊಡಬೇಕು.
ಎದುರು ರಸ್ತೆಯಲ್ಲಿ ಅಥವಾ ನಮ್ಮದೇ ರಸ್ತೆಯಲ್ಲಿ ಆಂಬುಲೆನ್ಸ್ ಬರುತ್ತಿರುವುದು ಕಾಣಿಸಿದರೆ ವಾಹನವನ್ನು ಆದಷ್ಟು ರಸ್ತೆಯ ಬದಿಗೆ ತಂದು ಸಂಪೂರ್ಣ ನಿಲ್ಲಿಸಬೇಕು, ದಾರಿ ಮಾಡಿ ಕೊಡಬೇಕು. ಟ್ರಾಫಿಕ್ ಎಷ್ಟೇ ಇರಲಿ, ಎಮರ್ಜೆನ್ಸಿ ವಾಹನ ಬಂದಿತೆಂದರೆ ಸಾವಿರಾರು ಕಾರುಗಳು ದಾರಿ ಮಾಡಿ ಕೊಡುತ್ತವೆ. ಆಂಬುಲೆನ್ಸ್ ಬಂದದ್ದು ತಿಳಿಯಲಿಲ್ಲ, ದಾರಿ ಮಾಡಿಕೊಡಲಿಲ್ಲ ಎಂದರೆ, ಅಂಥ ಅಪರಾಧಗಳಿಗೆ ಶಿಕ್ಷೆ ವಿಭಿನ್ನ.
ಆ ರೀತಿಯ ಅಪರಾಧಕ್ಕೆ ಯಥೇಚ್ಛ 500 ಡಾಲರ್ ವರೆಗಿನ ದಂಡ, ಜತೆಯಲ್ಲಿ ಕಮ್ಯುನಿಟಿ ಸರ್ವೀಸ್. ಕಮ್ಯುನಿಟಿ ಸರ್ವೀಸ್ ಎಂದರೆ ಏನಾದರೂ ಸಾರ್ವಜನಿಕ ಕೆಲಸ. ಇದು ತೀರಾ ಸಾಮಾನ್ಯ ಶಿಕ್ಷೆ. ತಪ್ಪು ಮಾಡಿ ಈ ಶಿಕ್ಷೆಗೊಳಗಾದವರು ವಾರಾಂತ್ಯ ಈ ಕಮ್ಯುನಿಟಿ ಸರ್ವೀಸ್ ಗೆಂದು ನಿಗದಿತ ಜಾಗಕ್ಕೆ ತೆರಳಬೇಕು. ಅಲ್ಲಿ ಈ ರೀತಿಯ ಅಪರಾಧ ಮಾಡಿದವರೆಲ್ಲ ಸೇರಿರುತ್ತಾರೆ.
ಅವರನ್ನು ಗುಂಪಿನಲ್ಲಿ ರಸ್ತೆಯ ಪಕ್ಕದಲ್ಲಿ, ಬ್ರಿಡ್ಜ್ ನ ಕೆಳಗಡೆ ಇತ್ಯಾದಿ ಜಾಗದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಲಾಗುತ್ತದೆ. ಅವರು ಅಲ್ಲಿನ ಕಸ ಹೆಕ್ಕಬೇಕು ಇತ್ಯಾದಿ. ಅಲ್ಲಿ ಪಿಕ್‌ಪಾಕೆಟ್, ಚಿಕ್ಕ ಪುಟ್ಟ ಅಪರಾಧ ಮಾಡಿದವರೆ ಜತೆಯಾಗುತ್ತಾರೆ. ಅಂಥವರ ಜತೆಯಲ್ಲಿ ಸೇರಿ ನಾಲ್ಕಾರು ವಾರಾಂತ್ಯ ಈ ಕೆಲಸಕ್ಕೆ ಹೋಗಿ ಬಂದರೆ ಪಾಪ ಪರಿಹಾರ.
ಬಸ್ಸು ಕಡಿಮೆ, ಆಟೋರಿಕ್ಷಾ ಇಲ್ಲ, ಬೈಕ್ ತೀರಾ ವಿರಳ. ರಸ್ತೆಯೆಂದರೆ ಒಂದೋ ಕಾರುಗಳು, ಇಲ್ಲವೇ ಯಮಗಾತ್ರದ ಟ್ರಕ್. ಕಾರಿನ ಯಾವ ಯಾವ ದಂಡಗಳಿವೆಯೋ ದಂಡದ ಪ್ರಮಾಣ ಟ್ರಕ್ ಚಾಲಕರಿಗೆ ದುಪ್ಪಟ್ಟು. ಕುಡಿದು ಚಲಾಯಿಸಿ ಸಿಕ್ಕಿಹಾಕಿಕೊಂಡಲ್ಲಿ ಆಜೀವನ ಲೈಸೆನ್ಸ್ ರದ್ದು ಇತ್ಯಾದಿ. ಕಾರಣ ಅವರೇನಾದರೂ ಇಂಥ ತಪ್ಪು ಮಾಡಿದರೆ ಅವುಗಳ ಗಾತ್ರದ ಕಾರಣದಿಂದಾಗಿ ಹಾನಿಯೂ ಹೆಚ್ಚು.
ಟ್ರಕ್ ಅನ್ನು ಪೊಲೀಸರು ನಿಲ್ಲಿಸುವ ಪರಿ ಸ್ವಲ್ಪ ವಿಭಿನ್ನ. ಉದ್ದದ ಟ್ರಕ್‌ನ ಹಿಂದೆ ಬಂದು ಪೊಲೀಸ್ ಬ್ಲಿಂಕರ್ ಹಾಕಿದರೆ ಕಾಣಿಸುವುದಿಲ್ಲ. ಹಾಗಾಗಿ ಪೊಲೀಸರು ಟ್ರಕ್ ಎದುರಿಗೆ ಬಂದು ಬ್ಲಿಂಕರ್ ಹಾಕುತ್ತಾರೆ, ಅದನ್ನು ನೋಡಿದ ಟ್ರಕ್ ಡ್ರೈವರ್ ಆ ಪೊಲೀಸ್ ವಾಹನವನ್ನು ಹಿಂಬಾಲಿಸಬೇಕು ಮತ್ತು ನಿಲ್ಲಿಸಬೇಕು.
ಟ್ರಕ್ ವಾಹನ ಮತ್ತು ಚಾಲಕರು ಯಥೇಚ್ಛ ಅಪಘಾತಕ್ಕೆ ಕಾರಣರಾಗುತ್ತಾರೆ- ಹಾಗಾಗಿ ಒಬ್ಬ ಟ್ರಕ್ ಡ್ರೈವರ್ ಎಷ್ಟು ಹೊತ್ತು ಟ್ರಕ್ ಚಲಾಯಿಸಬೇಕು, ಎಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು ಎಂಬುದಕ್ಕೆ ಕಾನೂನಿದೆ. ಒಬ್ಬ ಡ್ರೈವರ್ ಪ್ರತಿನಿತ್ಯ 11 ತಾಸು ಮಾತ್ರ ಟ್ರಕ್ ಚಲಾಯಿಸಬಹುದು. ಹನ್ನೊಂದು ತಾಸಿಗಿಂತ ಒಂದೇ ನಿಮಿಷ ಹೆಚ್ಚಿಗೆ ಓಡಿಸಿದರೂ ಅದು ಶಿಕ್ಷಾರ್ಹ ಅಪರಾಧ.
ಪ್ರತಿ ಎಂಟು ಗಂಟೆಗೆ ಇಂತಿಷ್ಟು ವಿಶ್ರಾಂತಿ ತೆಗೆದುಕೊಳ್ಳಲೇಬೇಕು. ಅಷ್ಟೇ ಅಲ್ಲ, ಒಮ್ಮೆ 11 ತಾಸು ಕಳೆದು ವಾಹನ ನಿಲ್ಲಿಸಿದರೆ ಮುಂದಿನ 14 ತಾಸು ಟ್ರಕ್ ಚಲಾಯಿಸುವಂತಿಲ್ಲ- ವಿರಮಿಸಬೇಕು. ಅದೆಲ್ಲವನ್ನೂ ಲೆಕ್ಕವಿಡಲು ಪ್ರತಿ ಟ್ರಕ್‌ನಲ್ಲಿ Electronic Logging Device (ELD)- ಚಿಕ್ಕದೊಂದು ಇಲೆಕ್ಟ್ರಾನಿಕ್ ಸಾಧನವನ್ನು ಅಳವಡಿಸಲಾಗುತ್ತದೆ. ಅದು ಇದೆಲ್ಲದರ ಲೆಕ್ಕವಿಡುತ್ತದೆ. ಎಲ್ಲಾ ಮಾಹಿತಿಯನ್ನು ಪೊಲೀಸ್ ವ್ಯವಸ್ಥೆಗೆ ಮತ್ತು ಟ್ರಕ್ ಕಂಪನಿಗಳಿಗೆ ರವಾನಿಸುತ್ತದೆ. ಒಂದು ವೇಳೆ ಯಾವುದೇ ಡ್ರೈವರ್ ಇದನ್ನು ಮೀರಿ ವರ್ತಿಸಿದರೆ ಆತನಿಗೆ ತಕ್ಷಣ ಟ್ರಕ್ ನಿಲ್ಲಿಸುವಂತೆ ಅವನ ಕಂಪನಿಯಿಂದಲೇ ಕರೆಬರುತ್ತದೆ. ಅದನ್ನೂ ಮೀರಿದನೆಂದುಕೊಳ್ಳಿ- ಪೊಲೀಸ್ ವ್ಯವಸ್ಥೆಗೆ ಇದು ಮುಟ್ಟುತ್ತದೆ ಮತ್ತು ಆ ಟ್ರಕ್ ಇರುವ ಸ್ಥಳೀಯ ಪೊಲೀಸರು ಅವನ ಬೆನ್ನುಬಿದ್ದು ಬಂಧಿಸುತ್ತಾರೆ. ಮಂಡೆ ಸಮ ಇಲ್ಲದವರಷ್ಟೇ ಇಂಥ ನಿಯಮ ಮೀರಲು ಸಾಧ್ಯ- ಟ್ರಕ್‌ಗೆ ಕಾನೂನು ಅಷ್ಟು ಗಡ್ಚು.
ಅಮೆರಿಕದಲ್ಲಿ ಆಕ್ಸಿಡೆಂಟ್ ಮಾಡಿ ಆ ಜಾಗದಿಂದ ಓಡಿಹೋದರೆ ಅದರಷ್ಟು ದೊಡ್ಡ ತಪ್ಪು ಇನ್ನೊಂದಿಲ್ಲ. ‘ಹಿಟ್ ಆಂಡ್ ರನ್’ ಮಾಡಿ ಸಿಕ್ಕಿಬಿದ್ದರೆ ಅವನು ಮುಂದೆ ಕಾರು ಚಲಾಯಿಸುವ ಆಸೆ ಬಿಡುವಷ್ಟು ಕಾನೂನು. ಓಡಿಹೋದವನು ಕುಡಿದಿರಬಹುದು, ಲೈಸೆ ಇಲ್ಲದಿರಬಹುದು ಇತ್ಯಾದಿ ಏನೇ ಸಾಧ್ಯತೆಯಿರಬಹುದು.
ಹಾಗಾಗಿ ಅಪಘಾತವೇ ಇರಲಿ, ಅಥವಾ ಬೇರೊಂದು ಚಿಕ್ಕದೊಂದು ಸ್ಕ್ರಾಚ್ ಮಾಡಿದ್ದರೂ ಅಲ್ಲಿ ನಿಂತು ಬಗೆಹರಿಸಿಕೊಳ್ಳಬೇಕು ಎಂಬುದು ಕಾನೂನು. ಆಕ್ಸಿಡೆಂಟ್ ಆದಾಗಲೂ ಅಷ್ಟೇ. ನಾವು ಇನ್ನೊಬ್ಬ ಕಾರಿನವನ ಜತೆ ಜಗಳ, ಯುದ್ಧಕ್ಕೆ ನಿಲ್ಲಬೇಕೆಂದಿಲ್ಲ. ನಮ್ಮಷ್ಟಕ್ಕೆ ನಾವು, ಅವನಷ್ಟಕ್ಕೆ ಅವನು. ಪೊಲೀಸರಿಗೆ ಕರೆ ಮಾಡಿ ಅವನು ಬಂದು, ರಿಪೋರ್ಟ್ ಕೊಟ್ಟು ಹೋಗುತ್ತಾನೆ. ಆ ರಿಪೋರ್ಟ್ ಹಿಡಿದು ನಮ್ಮ ವಾಹನ ಸರಿಪಡಿಸಿಕೊಳ್ಳಬೇಕು. ಹಾಗಾಗಿ ಬಹುತೇಕ ಆಕ್ಸಿಡೆಂಟ್ ಆದಾಗ ಇನ್ನೊಬ್ಬ ವಾಹನದವನ ಜತೆ ನಾವು ಮಾತಾಡುವುದು ಕೂಡ ಇಲ್ಲ.
ನಾನು ಪೊಲೀಸರಿಗೆ ಮಾಡಲೋ, ನೀನು ಮಾಡುತ್ತೇಯೋ ಎಂದು ಸೌಜನ್ಯಕ್ಕೆ ಕೇಳುವುದಷ್ಟೇ ಅಲ್ಲಿನ ಮಾತುಕತೆ. ಇಲ್ಲಿ ವಾಹನ ಸಂಬಂಧ ಅಪರಾಧಕ್ಕೆ ಅತಿ ವೇಗಕ್ಕೆ ದಂಡ 200-500 ಡಾಲರ್, ಲೈಸೆ ರದ್ದು. ಅದು ಬಿಟ್ಟು ಆಕ್ಸಿಡೆಂಟ್ ಉದ್ದೇಶಪೂರ್ವಕ ಅಜಾಗರೂಕತೆಯಿಂದಾಗಿದ್ದಾದರೆ, ಉದಾ ಹರಣೆಗೆ ಹೈವೇಗಳಲ್ಲಿ ರೇಸಿಂಗ್, ವೀಲಿಂಗ್ ಇತ್ಯಾದಿ ಮಾಡಿದರೆ ದಂಡ 2500 ಡಾಲರ್ (ಎರಡೂಕಾಲು ಲಕ್ಷ ರುಪಾಯಿಗೆ ಸಮ) ವರೆಗೂ ಬೀಳಬಹುದು. ಈ ಎಲ್ಲಾ ಅಪರಾಧವನ್ನು ಸರಕಾರ ಇನ್ಷೂರೆನ್ಸ್ ಕಂಪನಿಯ ಜತೆ ಹಂಚಿಕೊಳ್ಳುತ್ತದೆ.
ಪ್ರತಿ ಅಪರಾಧ ಮಾಡಿದಾಗಲೂ ಇನ್ಷೂರೆನ್ಸ್ ಕಂಪನಿ ತನ್ನ ಪ್ರೀಮಿಯಂ ಮೇಲೇರಿಸುತ್ತದೆ. ಏಕೆಂದರೆ ಯಾರು ವಾಹನ ಚಲಾವಣೆ ಸರಿಮಾಡುವುದಿಲ್ಲವೋ ಅಂಥವರಿಂದ ರಿಸ್ಕ್ ಜಾಸ್ತಿ, ಹಾಗಾಗಿ ಪ್ರೀಮಿಯಂ ಕೂಡ ಮೇಲೇರುತ್ತದೆ. ಈ ಎಲ್ಲಾ ಮಾಹಿತಿಯನ್ನು ನೋಡಿಯೇ ನಮ್ಮ ಪ್ರೀಮಿಯಂ ಮೊತ್ತವನ್ನು ಇನ್ಷೂರೆನ್ಸ್ ಕಂಪನಿ ನಿಗದಿಮಾಡುವುದು. ಇಲ್ಲಿನ ಸರಕಾರ ಆ ಮಾಹಿತಿ ಯನ್ನು ಎಲ್ಲಾ ಇನ್ಷೂರೆನ್ಸ್ ಕಂಪನಿಗೂ ಬಹಿರಂಗ ನೀಡುತ್ತದೆ.
ಹಾಗಾಗಿ ನಾವು ಯಾವುದೇ ಇನ್ಷೂರೆನ್ಸ್ ಕಂಪನಿಗೆ ಹೋದರೂ ನಮ್ಮ ಜತೆಯಲಿಯ ನಮ್ಮ ವಾಹನ ಚಲಾವಣೆಯ ಇತಿಹಾಸ ಕೂಡ ಅವರಿಗೆ ತಲುಪಿರುತ್ತದೆ. ಅಮೆರಿಕದಲ್ಲಿ ಕಾರಿನ ಇನ್ಷೂರೆನ್ಸ್ ಬಲು ತುಟ್ಟಿ. ಒಂದು ಅಂದಾಜಿಗೆ- ಎರಡು ಕಾರಿಗೆ ವಾರ್ಷಿಕ ನಾನು ತುಂಬುವ ಇನ್ಷೂರೆನ್ಸ್ ಪ್ರೀಮಿಯಂ 3000 ಡಾಲರ್. ಒಂದು ವೇಳೆ ನಾನು ಸ್ಪೀಡಿಂಗ್- ಅತಿವೇಗಕ್ಕೆ ಸಿಕ್ಕಿಬಿದ್ದೆ ಎಂದಿಟ್ಟುಕೊಳ್ಳಿ.
ಅದು ಪೊಲೀಸ್ ರಿಪೋರ್ಟ್ ಆಗಿ ಇನ್ಷೂರೆನ್ಸ್‌ಗೆ ತಿಂಗಳೊಳಗೆ ತಲುಪಿ 3000 ಇದ್ದ ಪ್ರೀಮಿಯಂ 4000 ಡಾಲರ್ ಆಗಬಹುದು. ರಸ್ತೆಯ ಅಪರಾಧ ಹೆಚ್ಚಿಗೆ ಮಾಡಿದಂತೆ ಹೆಚ್ಚಿನ ಪ್ರೀಮಿಯಂ. ಅಪರಾಧಕ್ಕೆ ದಂಡ ಬೇರೆ, ಮೇಲಿಂದ ಎರಡು ವರ್ಷ ಹೆಚ್ಚಿದ ಇನ್ಷೂರೆನ್ಸ್ ಪ್ರೀಮಿಯಂ. ನಾನು ಒಮ್ಮೆ ವೇಗದ ಮಿತಿ ಮೀರಿ ಪೊಲೀಸರ ಬಳಿ ಸಿಕ್ಕಿಹಾಕಿಕೊಂಡಿದ್ದೆ.
ವೇಗದ ಮಿತಿಗಿಂತ ಹದಿನೈದು ಮೈಲಿ ಹೆಚ್ಚಿನ ವೇಗದಲ್ಲಿದ್ದೆ. ದಂಡ 350 ಡಾಲರ್. ನಂತರದಲ್ಲಿ ನನ್ನ ಇನ್ಷೂರೆನ್ಸ್ ಪ್ರೀಮಿಯಂ ತಿಂಗಳಿಗೆ ನೂರು ಡಾಲರ್ ಹೆಚ್ಚಿತು. ಎರಡು ವರ್ಷ. ಒಟ್ಟಾರೆ ಒಮ್ಮೆ ವೇಗ ಮೀರಿದ್ದಕ್ಕೆ ನಾನು ಕಳೆದುಕೊಂಡದ್ದು ಬರೋಬ್ಬರಿ 2750 ಡಾಲರ್. ಹತ್ತಿರತ್ತಿರ ಎರಡೂವರೆ ಲಕ್ಷ ರುಪಾಯಿಗೆ ಸಮ. ಟ್ರಾಫಿಕ್ ರೂಲ್ಸ್ ಪಾಲಿಸದೆ ಸಿಕ್ಕಿಬಿದ್ದಲ್ಲಿ ‘ಈ ಕುಂಡೆ ಸುಟ್ಟು ಕೊಂಡ’ ಉರಿ ಎರಡು ವರ್ಷದವರೆಗೂ ಇರುತ್ತದೆ.
ಹಾಗಾಗಿಯೇ ಹೆಚ್ಚಿನವರು ಎಲ್ಲಾ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ.