Shashidhara Halady Column: ಶೀತಗಾಳಿ ಬೀಸಿದಾಗ ಬರುವ ಅತಿಥಿ !
ಆರೋಗ್ಯದ ಸಮಸ್ಯೆ ಎಂದಾಕ್ಷಣ ಯಾರೂ ನಿರ್ಲಕ್ಷ್ಯ ಮಾಡಬಾರದು, ಸೂಕ್ತ ಮತ್ತು ಎಷ್ಟು ಬೇಕೋ ಅಷ್ಟು ಎಚ್ಚರಿಕೆ ವಹಿಸಿ, ಚಿಕಿತ್ಸೆ ಪಡೆಯಬೇಕೆಂಬುದಂತೂ ನಿಜ. ಕಳೆದ ಕೆಲವು ವಾರಗಳಲ್ಲಿ ಬೆಂಗಳೂರೂ ಸೇರಿದಂತೆ ನಮ್ಮ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ನೆಗಡಿ, ಜ್ವರ ಹರಡಿರುವು ದಂತೂ ನಿಜ; ಈಗ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂದಣಿಯೂ ಇದೆ; ಜತೆಗೆ, ಪತ್ರಿಕೆಗಳಲ್ಲಿ ಎಚ್1ಎನ್1 ಕುರಿತ ಕಾಳಜಿಯುಕ್ತ ಸುದ್ದಿಗಳೂ ಬರುತ್ತಿವೆ.
-
ಶಶಾಂಕಣ
ಪ್ರತಿದಿನ ಸುದ್ದಿಗಳನ್ನು ಗಮನಿಸುವವರಿಗೆ, ನಾನಾ ರೀತಿಯ ರಾಜಕೀಯದ ಒಳಸುಳಿಗಳು, ಸಕ್ಕರೆಯ ಬೆಲೆ ದಿಢೀರ್ ಏರಿಕೆ, ನೇಪಾಳ ಪ್ರವಾಹ ಮೊದಲಾದ ಸುದ್ದಿಗಳ ನಡುವೆಯೇ, ಅಲ್ಲಲ್ಲಿ ಕಾಡುತ್ತಿರುವ ವಿವಿಧ ರೀತಿಯ ಜ್ವರಗಳ ಸುದ್ದಿಯೂ ಕಣ್ಣಿಗೆ ಬಿದ್ದಿರಬೇಕು. ಕಣ್ಣಿಗೆ ಬೀಳುವುದೇನು, ಕೆಲವರ ಮನೆಗಳಲ್ಲಿ ಒಬ್ಬ ಅತಿಥಿಯು ಆಹ್ವಾನವಿಲ್ಲದೇ ಒಳಪ್ರವೇಶಿಸಿ, ಅದಾಗಲೇ ಜ್ವರದ ಕಾಟ ಆರಂಭವಾಗಿರಬಹುದು.
ಎಚ್1ಎನ್1, ಫ್ಲೂ, ಹಂದಿಜ್ವರ, ವೈರಲ್ ಫಿವರ್ ಮೊದಲಾದ ಹೆಸರುಗಳಲ್ಲಿ, ಈಗ ನಮ್ಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜ್ವರದ ಸಂಚಾರ ನಡೆಯುತ್ತಿದೆ; ಸಂಚಾರ ಎಂದೇಕೆ ಹೇಳಿದೆನೆಂದರೆ, ವೈರಸ್ ನಿಂದ ಹರಡುವ ಕೆಲವು ಜ್ವರಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತಾ, ಅವರು ಸಂಚರಿಸಿ ದಲ್ಲೆಲ್ಲಾ ತನ್ನ ಹೆಜ್ಜೆಯನ್ನೂ ಊರಿ, ಊರಿಂದೂರಿಗೂ ಸಂಚರಿಸುವುದುಂಟು!
ಜ್ವರ ಎಂದಾಕ್ಷಣ ಒಮ್ಮೆಗೇ ಗಾಬರಿಯಾಗಬೇಕಿಲ್ಲ ನಿಜ, ಆದರೆ ಮಕ್ಕಳಿಗೆ ಜ್ವರ ಬಂದ ತಕ್ಷಣ, ಮನೆಯವ ರೆಲ್ಲರಿಗೂ ಹೆಚ್ಚು ಕಾಳಜಿ ವಹಿಸಬೇಕಾಗುವುದಂತೂ ನಿಜ. ಮಳೆಗಾಲದಲ್ಲಿ ಜ್ವರ ಸಾಮಾನ್ಯ, ವೈರಲ್ ಜ್ವರ ಒಂದು ವಾರದಲ್ಲಿ ಗುಣವಾಗುತ್ತದೆ ಎಂದೆಲ್ಲಾ ಧೈರ್ಯ ಹೇಳಿದರೂ, ನಮ್ಮದೇ ಮನೆಯಲ್ಲಿ ಜ್ವರ ನೆಗಡಿ ಕಾಟ ಶುರುವಾದಾಗ, ಇಂತಹ ಉಪದೇಶಗಳೆಲ್ಲಾ ಮೂಲೆ ಗುಂಪಾಗುತ್ತವೆ, ಅದ್ಯಾವ ಮಾತ್ರೆ ತಿನ್ನಲಿ, ಯಾವ ಕಷಾಯ ಕುಡಿಯಲಿ ಅಥವಾ ಹತ್ತಿರದ ವೈದ್ಯರ ಹತ್ತಿರ ಹೋಗಲೋ, ದೊಡ್ಡಾಸ್ಪತ್ರೆಗೆ ಹೋಗಲೋ ಎಂದು ಮನಸ್ಸು ಯೋಚನಾಲಹರಿಯಲ್ಲಿ ಮುಳುಗಿಹೋಗುತ್ತದೆ.
ಇದನ್ನೂ ಓದಿ: Shashidhara Halady Column: ಸರಸರ ಹರಿಯುವ ಇದರ ಕುರಿತು ಇರಲಿ ಕಾಳಜಿ !
ಆರೋಗ್ಯದ ಸಮಸ್ಯೆ ಎಂದಾಕ್ಷಣ ಯಾರೂ ನಿರ್ಲಕ್ಷ್ಯ ಮಾಡಬಾರದು, ಸೂಕ್ತ ಮತ್ತು ಎಷ್ಟು ಬೇಕೋ ಅಷ್ಟು ಎಚ್ಚರಿಕೆ ವಹಿಸಿ, ಚಿಕಿತ್ಸೆ ಪಡೆಯಬೇಕೆಂಬುದಂತೂ ನಿಜ. ಕಳೆದ ಕೆಲವು ವಾರ ಗಳಲ್ಲಿ ಬೆಂಗಳೂರೂ ಸೇರಿದಂತೆ ನಮ್ಮ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ನೆಗಡಿ, ಜ್ವರ ಹರಡಿರುವುದಂತೂ ನಿಜ; ಈಗ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂದಣಿಯೂ ಇದೆ; ಜತೆಗೆ, ಪತ್ರಿಕೆಗಳಲ್ಲಿ ಎಚ್1ಎನ್1 ಕುರಿತ ಕಾಳಜಿ ಯುಕ್ತ ಸುದ್ದಿಗಳೂ ಬರುತ್ತಿವೆ.
ರಾಜ್ಯದಲ್ಲಿ ಬರಗಾಲದ ವಾತಾವರಣ ಇದ್ದರೂ, ಕೆಲವು ಕಡೆ ಕಳೆದ ಒಂದು ತಿಂಗಳಿನಲ್ಲಿ ಸಾಕಷ್ಟು ಮಳೆಯಾಗಿದೆ; ಅದಕ್ಕಿಂತ ಮುಖ್ಯವಾಗಿ, ಆಗಾಗ ತುಂತುರು ಮಳೆಯಾಗುತ್ತಿದೆ; ಇದರಿಂದಾಗಿ, ಥಂಡಿ ವಾತಾವರಣ ಸೃಷ್ಟಿಯಾಗುತ್ತಿದೆ. ಈಗ ಒಂದೆರಡು ವಾರಗಳಿಂದ ಹಲವು ಕಡೆ ಥಂಡಿ ವಾತಾವರಣ ವಿದ್ದು, ಇಂತಹ ವಾತಾವರಣದಲ್ಲೇ ಜ್ವರ ನೆಗಡಿ ಕಾಡುವುದು. ನಮ್ಮ ಹಳ್ಳಿಯಲ್ಲಿ ಹಿಂದೆಲ್ಲಾ ಮಳೆಗಾಲ ಎಂದರೆ, ಜ್ವರದ ಕಾಲ ಎಂದೇ ಅರ್ಥ.
ನಮ್ಮೂರಿನಲ್ಲಿ ಕೆಲವು ವರ್ಷ ಮಳೆಗಾಲದಲ್ಲಿ, ಪ್ರತಿ ದಿನ ಮಳೆ ಸುರಿಯುತ್ತಿದ್ದುದುಂಟು; ಕೆಲವು ವರ್ಷಗಳಂತೂ, ಒಂದೇ ಸಮನೆ ಆರೆಂಟು ದಿನ ‘ಸಂದು ಕಡಿಯದೇ’ ಮಳೆ ಸುರಿದದ್ದನ್ನು ಗಮನಿಸ ಬಹುದು. ಅಂತಹ ವರ್ಷಗಳಲ್ಲಿ ಹಳ್ಳಿಯ ಎಲ್ಲಾ ಮನೆಗಳಲ್ಲೂ ಜ್ವರ, ನೆಗಡಿ, ಮೈಕೈ ನೋವು. ಯಾರನ್ನು ಕಂಡರೂ ಮೂಗು ಸೊರಸೊರ, ಗಂಟಲು ಗದ್ಗದ! ಥಂಡಿ ವಾತಾವರಣವಿದ್ದಾಗ, ಒಮ್ಮೆ ಬಂದ ವೈರಲ್ ಫಿವರ್ ಬೇಗನೆ ಗುಣವಾಗುವುದಿಲ್ಲವಾದ್ದರಿಂದ, ಇಂತಹ ಸ್ಥಿತಿ.
ಕವಿಗಳಿಗೆ, ಕವಿ ಮನಸ್ಸಿನವರಿಗೆ, ಭಾವಜೀವಿಗಳಿಗೆ ಮಳೆಗಾಲ ಎಂದರೆ ಮಧುರ ಭಾವನೆಗಳನ್ನು ಹುಟ್ಟು ಹಾಕುವ ಋತು. ಹೊರಗೆ ಜಿರಾಪತಿ ಮಳೆ ಸುರಿಯುತ್ತಿರುವಾಗ, ಮನೆಯೊಳಗೆ ಕುಳಿತು, ಮಳೆಯನ್ನೇ ನೋಡುತ್ತಾ, ಅದರ ಸಂಗೀತವನ್ನು ಕೇಳುತ್ತಾ ಮನಸ್ಸಿನ ಲಗಾಮು ಕಳಚಿಬಿಡುವುದು ಒಂದು ಮಧುರ ಅನುಭವವೇ ಸೈ. ಒಲೆಯ ಕೆಂಡದಲ್ಲಿಟ್ಟು ಸುಟ್ಟ ಹಲಸಿನ ಹಪ್ಪಳ, ಅದರ ಮೇಲೆ ನಾಲ್ಕಾರು ಸುಟ್ಟ ಗೋಡಂಬಿಗಳಿದ್ದರಂತೂ, ಎಡೆಬಿಡದೆ ಸುರಿವ ಮಳೆಯ ಅನುಭವ ನಿಧಾನವಾಗಿ ಮನದೊಳಗೆ ಇಳಿಯುತ್ತದೆ; ಇತ್ತ ಹಪ್ಪಳ ಮತ್ತು ಸುಟ್ಟ ಗೋಡಂಬಿಯ ಕಾಂಬಿನೇಷನ್ ನ ರುಚಿ ಹೊಟ್ಟೆಯೊಳಗೆ ಇಳಿಯುತ್ತದೆ!
ಈಗಲೂ, ಮಳೆಗಾಲ ನೋಡಲೆಂದೇ ನಗರದ ಜನರು, ಮಲೆನಾಡಿಗೆ ಮತ್ತು ಕರಾವಳಿಯ ಹಳ್ಳಿಗಳಿಗೆ ಹೋಗುವುದುಂಟು; ಕೆಲವು ರಾಜ್ಯಗಳು ಮಳೆಗಾಲದ ಪ್ರವಾಸವನ್ನೇ ಏರ್ಪಡಿಸಿ, ಮಳೆಗಾಲವೆಂದರೆ, ಎಲ್ಲರೂ ನೋಡಲೇಬೇಕಾದ ಒಂದು ಅನುಭವ ಎಂಬ ಭಾವನೆಯನ್ನೂ ಹುಟ್ಟು ಹಾಕಿವೆ.
ಇದರಲ್ಲಿ ಸತ್ಯಾಂಶವಿಲ್ಲದೇ ಇಲ್ಲ. ಆದರೆ, ಹಿಂದೆಲ್ಲಾ ನಮ್ಮ ಹಳ್ಳಿಗಳಲ್ಲ ಮಳೆಗಾಲವೆಂದರೆ, ಮಧುರ ಭಾವನೆಗಳ ಜತೆಯಲ್ಲೂ, ನೋವುಂಟು ಮಾಡುವ ಅನುಭವಗಳನ್ನೂ ತರುವಂತಹ ದಿನಗಳು ಎಂಬು ದಂತೂ ನಿಜ. ಹಾಗಂತ ಮಲೆನಾಡಿನ ಮಳೆಗಾಲದ ದಿನಗಳ ನೆನಪುಗಳೆಲ್ಲವೂ ಮಧುರವೇ ಎಂದು ಕೇಳಿದರೆ ಇಲ್ಲ ಅಂತಲೇ ಅನ್ನಬೇಕು.
ಮಲೆನಾಡಿನ ಅಂಚಿನಲ್ಲಿರುವ ನಮ್ಮೂರಿನಲ್ಲಿ ನನ್ನ ಬಾಲ್ಯದ ಮಳೆಗಾಲವನ್ನು ನೆನಪಿಸಿಕೊಂಡರೆ ವಾಸ್ತವವಾಗಿ ಅದೊಂದು ಮಿಶ್ರ ಅನುಭವ. ನಮ್ಮ ಹಳ್ಳಿಯ ಅಪ್ಪಟ ಗ್ರಾಮೀಣ ಜೀವಗಳಿಗೆ, ಮಳೆಗಾಲ ಎಂದರೆ ಸಣ್ಣಗೆ ಒಂದು ರೀತಿಯ ಭಯ, ನಡುಕ, ಅಳುಕು, ದಿಗಿಲು ಇತ್ತು. ‘ಈ ವರ್ಷದ ಮಳೆಗಾಲ ಬಂದು ಕಳೆದರೆ ನಾವು ಗೆದ್ದಂತೆ’ ಎಂದು ಪ್ರತಿವರ್ಷ ದೇವರಿಗೆ ಕೈಮುಗಿಯುತ್ತಿದ್ದ ಹಲವು ಕುಟುಂಬಗಳನ್ನು ಕಂಡಿದ್ದೆ. ಕೆಳ ಮಧ್ಯಮವರ್ಗ ಮತ್ತು ಕೃಷಿ ಕಾರ್ಮಿಕರ ಕುಟುಂಬ ಗಳಿಗಂತೂ, ಮಳೆಗಾಲವೆಂದರೆ ಕಷ್ಟದ ದಿನಗಳು.
ನಾಲ್ಕು ತಿಂಗಳುಗಳ ಕಾಲ ಸುರಿಯುವ ಮಳೆಗಾಲವನ್ನು ಕ್ಷೇಮವಾಗಿ, ಗೌರವಯುತವಾಗಿ ಕಳೆಯುವುದೇ ಹಲವರಿಗೆ ಒಂದು ಸವಾಲು. ಮಳೆಗಾಲದ ದಿನಗಳಲ್ಲಿ, ವಿಪರೀತ ಮಳೆಯಿಂದ ಕಾಡುವ ಆರೋಗ್ಯದ ಸಮಸ್ಯೆಗಳ ಜತೆಯಲ್ಲೇ, ಕೆಲವು ಕುಟುಂಬಗಳಿಗೆ, ಆ ದಿನಗಳಲ್ಲಿ ಊಟಕ್ಕೆ ಕೊರತೆಯಾಗುವುದರಿಂದ, ಹೊಟ್ಟೆ ತುಂಬಿಸುವ ಕಾಯಕವನ್ನು ಗೌರವಯುತವಾಗಿ ಮಾಡುವ ಅದೃಷ್ಟ ಕೊಡು ದೇವರೇ ಎಂದು ಹಲವು ಕುಟುಂಬಗಳು ಬೇಡಿಕೊಳ್ಳುವುದುಂಟು. ಮಳೆಗಾಲದ ಆರೋಗ್ಯದ ಸಮಸ್ಯೆಗಳಲ್ಲಿ ತೀರಾ ಸಾಮಾನ್ಯ ಎಂದರೆ ಜ್ವರ, ನೆಗಡಿ; ಇದರ ಜತೆಯಲ್ಲೇ, ಹಿಂದೆಂ ದೋ ಆದ ಮೈಕೈ ನೋವು, ಮೂಳೆ ನೋವು, ಸ್ನಾಯು ಸೆಳೆತ ಮೊದಲಾದವು ಮಳೆಗಾಲದಲ್ಲಿ ಮತ್ತೆ ಮರುಕಳಿಸಿ, ಕಾಡುವುದುಂಟು.
ಜತೆಗೆ, ದಿನವಿಡೀ ಮಳೆ ಸುರಿಯುವಾಗ, ಹೆಚ್ಚು ಹೊರಗೆ ಓಡಾಡದೇ ಇರುವುದರಿಂದಾಗಿ, ಹಲವು ದಿನಗಳ ಕಾಲ ಸೂಕ್ತ ವ್ಯಾಯಾಮ ದೊರಕದೇ, ಆ ಆಯಾಮದಲ್ಲೂ ಆರೋಗ್ಯ ಸಣ್ಣಗೆ ಸೊರಗು ತ್ತದೆ. ಜೂನ್ ಮೊದಲ ವಾರ ಸುರಿಯಲಾರಂಭಿಸಿದ ಮಳೆಯು, ಜನಸಾಮಾನ್ಯರಿಗೆ ಮತ್ತು ಬಡವರಿಗೆ ತಂದಿಡುತ್ತಿದ್ದ ಕಷ್ಟಗಳಿಗೆ ಕೊನೆಯೇ ಇರಲಿಲ್ಲ. ಸುರಿವ ಮಳೆಯಲ್ಲೇ ನಾಟಿ ಮಾಡಿ, ಮೂರು ತಿಂಗಳ ನಂತರ ನಡೆಯುವ ಕೊಯ್ಲು ಕೆಲಸ ಬರುವ ತನಕ ಯಾರಿಗೂ ಹೆಚ್ಚಿನ ಕೆಲಸ ವಿಲ್ಲ.
ಆಷಾಢ, ಶ್ರಾವಣ ಎಂದರೆ ಇನ್ನಷ್ಟು ಕಷ್ಟ; ಕೃಷಿ ಚಟುವಟಿಕೆಗಳು ಆಗ ಕಡಿಮೆ. ಕೆಲಸ ಹುಡುಕಿ ಕೊಂಡು ಹೋಗೋಣವೆಂದರೆ ನಿರಂತರ ಸುರಿವ ಮಳೆ. ಮನೆಯಲ್ಲಿ ಕುಳಿತು ಬರಬರನೆ ಸುರಿಯುವ ಮಳೆಯನ್ನು, ಮಾಡಿನ ಅಂಚಿನಿಂದ ಬೀಳುವ ನೀರನ್ನೇ ನೋಡುತ್ತಾ, ಈ ಮಳೆ ಯಾವಾಗ ಕಡಿಮೆಯಾಗುತ್ತದೆ ಎಂದು ದೇನಿಸುವುದೇ ಪ್ರತಿದಿನದ ದಿನಚರಿ.
ಮಳೆಗಾಲದ ಇಂತಹ ಕಷ್ಟದ ದಿನಗಳನ್ನು ಎದುರಿಸಲೆಂದೇ, ಬೇಸಿಗೆ ಯಲ್ಲಿ ಕೆಲವು ತಯಾರಿ ಗಳನ್ನು ಮಾಡುವುದುಂಟು. ಬಿಸಿಲುಕಾಲದಲ್ಲಿ ಸಾಕಷ್ಟು ದೊರೆಯುವ ಗೆಣಸನ್ನು ಖರೀದಿಸಿ, ಸಣ್ಣ ಸಣ್ಣ ಹೋಳುಗಳನ್ನಾಗಿ ಹೆಚ್ಚಿ ಚೆನ್ನಾಗಿ ಒಣಗಿಸಿ, ಅದನ್ನು ಮಳೆಗಾಲದಲ್ಲಿ ಬೇಯಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕುಟುಂಬಗಳು ಹಲವು.
ಡಬ್ಬಿಗಟ್ಟಲೆ ಹಲಸಿನ ಬೀಜಗಳನ್ನು ಸಂಗ್ರಹಿಸಿ ಅದನ್ನು ಸುಟ್ಟು ಅಥವಾ ಬೇಯಿಸಿ ತಿನ್ನುತ್ತಿದ್ದ ವರು ಹಲವರು. ಹಲಸಿನ ಹಪ್ಪಳ ಸಹ ಕೆಲವು ದಿನ ಮಳೆಗಾಲದ ಬೆಳಗಿನ ತಿನಿಸು. ಹಲಸಿನ ಹಣ್ಣನ್ನು ಸಹ ಒಂದು ಹೊತ್ತಿನ ಆಹಾರವಾಗಿ ಸೇವಿಸುವ ಕುಟುಂಬಗಳು ಇದ್ದವು. ಹಾಗಂತ ದಿನದ ಮೂರೂ ಹೊತ್ತು ಇದನ್ನೇ ಮಾಡುತ್ತಿದ್ದಾರೆಂದು ಅರ್ಥವಲ್ಲ, ಒಂದು ಹೊತ್ತು ಅನ್ನವನ್ನೋ ಗಂಜಿಯನ್ನೋ ಸೇವಿಸಿ, ಇನ್ನೊಂದು ಹೊತ್ತು ಇಂತಹ ತಿನಿಸುಗಳು ಮಳೆಗಾಲದ ಆಹಾರದ ಪದ್ಧತಿ ಎನಿಸಿತ್ತು.
ನಿರಂತರ ಸುರಿವ ಮಳೆ, ಹಲವು ದಿನಗಳ ಕಾಲ ಮೋಡದ ಮರೆಯಿಂದ ಹೊರಗೆ ಬಾರದ ಸೂರ್ಯ, ಥಂಡಿ ಗಾಳಿ, ಇವೆಲ್ಲವೂ ಹಲವು ರೋಗಗಳಿಗೆ ಹೇಳಿ ಮಾಡಿಸಿದ ವಾತಾವರಣ. ನೆಗಡಿ, ಜ್ವರ, ಕೆಮ್ಮು, ಶೀತ, ಮೈ ಕೈ ನೋವು ಇವೆಲ್ಲಾ ನಮ್ಮೂರಿನ ಮಳೆಗಾಲದಲ್ಲಿ ತೀರಾ ಸಾಮಾನ್ಯ. 1970ರ ದಶಕದ ತನಕ ನಮ್ಮ ಹಳ್ಳಿಯಲ್ಲಿ ಸಣ್ಣ ಪುಟ್ಟ ಕಾಯಿಲೆಗಳಿಗೆಲ್ಲ ಆಸ್ಪತ್ರೆಗೆ ಹೋಗುವ ಕ್ರಮ ಇರಲಿಲ್ಲ. ಜ್ವರ, ನೆಗಡಿಯಾದರೆ ಹಲವು ರೀತಿಯ ಕಷಾಯಗಳೇ ಚಿಕಿತ್ಸೆ.
ಮೆಣಸಿನಕಾಯಿ ಕಾಳಿನ ಕಷಾಯ, ಹಂಗಾರ ಕೆತ್ತೆ ಕಷಾಯ, ಶುಂಠಿ ಬೆಳ್ಳುಳ್ಳಿ ಕಷಾಯ - ಇವೇ ವಿವಿಧ ರೀತಿಯ ಜ್ವರಗಳಿಗೆ ಔಷಧ. ಮೆಣಸಿನಕಾಯಿ ಕಾಳಿನ ಕಷಾಯವಂತೂ ಎಲ್ಲಾ ಜ್ವರಗಳಿಗೆ ರಾಮಬಾಣ ವೆಂದೇ ನಮ್ಮ ಹಳ್ಳಿಯವರ ಅನಿಸಿಕೆ. ಜಾಸ್ತಿ ಜ್ವರ ಬಂದು, ನಾಲಿಗೆಯ ರುಚಿ ಕೆಟ್ಟು, ಊಟ ಸೇರದೆ ಇದ್ದಾಗ, ಹುರಿದ ಅಕ್ಕಿಯ ಗಂಜಿ ಮತ್ತು ಮಿಡಿ ಉಪ್ಪಿನಕಾಯಿ, ಜತೆಗೆ ಮೆಣಸಿನ ಕಾಳಿನ ಕಷಾಯವನ್ನು ದಿನದ ಮೂರು ಹೊತ್ತು ಸೇವಿಸಿದರೆ, ನಾಲ್ಕಾರು ದಿನಗಳಲ್ಲಿ ಜ್ವರ ವಾಸಿಯಾಗುತ್ತದೆ ಎಂಬ ದೃಢವಾದ ನಂಬಿಕೆಯೇ, ಅಂದಿನ ಜನರನ್ನು ಮುನ್ನಡೆಸುವ ಶಕ್ತಿಯಾಗಿತ್ತು.
ಮಳೆಗಾಲದಲ್ಲಿ ನಮ್ಮ ಹಳ್ಳಿಯ ಅಜ್ಜಿಯಂದಿರು ಬಳಸುತ್ತಿದ್ದ ಇನ್ನೊಂದು ಪ್ರಬಲ ಔಷಧ ಎಂದರೆ ಅರಸಿನ. ಕೆಪ್ಪಟರಾಯ ಅಥವಾ ಮಂಪ್ಸ್ ಆದಾಗ, ದತ್ತೂರದ ಬೀಜವನ್ನು ಅರಿಶಿನ ಪುಡಿಯ ಜೊತೆ ಚೆನ್ನಾಗಿ ತೇಯ್ದು, ಕಪಾಲದ ಭಾಗಕ್ಕೆ ಹಚ್ಚುತ್ತಿದ್ದರು. ಗಂಟಲು ನೋವಾದರೆ ಅರಸಿನ ಮತ್ತು ಮುದ್ದೆ ಬೆಲ್ಲವನ್ನು ಮಿಶ್ರಣ ಮಾಡಿ ಹಚ್ಚುವ ಕ್ರಮ.
ಸುಟ್ಟ ಗಾಯವಾದರೆ, ತೇಗದ ಎಲೆಯ ಕುಡಿಯನ್ನು ಕೊಬ್ಬರಿ ಎಣ್ಣೆಯಲ್ಲಿ ಬಿಸಿ ಮಾಡಿ ಗಾಯಕ್ಕೆ ಹಚ್ಚುತ್ತಿದ್ದರು. ಕಿವಿ ನೋವಾದರೆ ಬೆಳ್ಳುಳ್ಳಿ ಮಿಶ್ರಿತ ಕೊಬ್ಬರಿ ಎಣ್ಣೆ ಯನ್ನು, ಸ್ವಲ್ಪ ಬಿಸಿ ಮಾಡಿ, ಕಿವಿಗೆ ಹಾಕಿದರೆ ಕಿವಿ ನೋವು ಮಾಯ! ಇಂತಹ ಕೆಲವು ಔಷಧಿಗಳು ಈಗಿನವರೆಗೆ ವಿಚಿತ್ರ ಎನಿಸಿದರೂ, ಅಂದು ಅವೇ ದಿವ್ಯ ಔಷಧ!
ಇದನ್ನೇಕೆ ಇಷ್ಟು ವಿವರವಾಗಿ ಹೇಳುತ್ತಿರುವೆ ಎಂದರೆ, ಮಳೆಗಾಲವಿದ್ದರೂ, ಆಗಿನ ದಿನಗಳಲ್ಲಿ ವೈದ್ಯರು, ಮಾತ್ರೆಗಳು, ಇಂಜೆಕ್ಷನ್ ಇಲ್ಲದೆ ದಿನಚರಿ ನಡೆಯುತ್ತಿತ್ತು ಎಂಬುದನ್ನು ಸೂಚಿಸಲು. ಜತೆಗೆ ಮೂರು ಅಥವಾ ನಾಲ್ಕು ತಿಂಗಳು ಸುರಿಯುತ್ತಿದ್ದ ಮಳೆಯಿಂದಾಗಿ, ಹಳ್ಳಿಗಳಿಂದ ಪೇಟೆಗೆ ಹೋಗಿ ಔಷಧ ತರುವ ವ್ಯವಧಾನವೂ ಇರುತ್ತಿರಲಿಲ್ಲ.
ನಂತರದ ದಶಕಗಳಲ್ಲಿ, ನಮ್ಮ ಹಳ್ಳಿಯಲ್ಲೂ ಪುಟ್ಟ ಆಸ್ಪತ್ರೆ ಆರಂಭವಾಗಿ, ಜನರು ಆಸ್ಪತ್ರೆಯತ್ತ ಮುಖಮಾಡಲು ಕಲಿತರು. ಹಾಗಂತ ಆ ಓಟ ಸುಲಭದ್ದಾಗಿರಲಿಲ್ಲ. ನಮ್ಮ ಮನೆಯಿಂದ ಮೂರು ಕಿ.ಮೀ. ದೂರದಲ್ಲಿದ್ದ ಅವರ ಕ್ಲಿನಿಕ್‌ಗೆ ಹೋಗಲು ಇದ್ದದ್ದು ಕಾಡುದಾರಿ ಮಾತ್ರ. ಮೊದಲಿಗೆ ಅರ್ಧ ಕಿಮೀ ಗದ್ದೆಯಂಚಿನ ದಾರಿ; ನಂತರ ಹರನ ಗುಡ್ಡ ಎಂಬ ನಿರ್ಜನ ಗುಡ್ಡದ ಮೇಲೆ ಕಾಲ್ದಾರಿ. ಬೈಲಿನಿಂದ ಗುಡ್ಡವೇರಲು, ಮುರಕಲ್ಲಿನ 120 ಮೆಟ್ಟಿಲುಗಳನ್ನು ಏರಬೇಕಿತ್ತು.
ಅಷ್ಟು ಕಷ್ಟಪಟ್ಟು ಹೋಗಿ, ‘ಒಳ್ಳೆಯ ಕೈಗುಣ’ ಇದ್ದ ಕೈಗುಣವಿದ್ದ ಆ ಡಾಕ್ಟರ ಬಳಿ ಔಷಧ ತಂದರೆ, ಕಾಯಿಲೆ ವಾಸಿಯಾಗುತ್ತಿದ್ದು ಖಚಿತ ಎಂಬ ನಂಬಿಕೆ. ಆ ದಿನಗಳಲ್ಲಿ ಅವರು ಕೊಡುತ್ತಿದ್ದುದು ಕೆಂಪು ಬಣ್ಣದ ಔಷಽಗಳು, ಕೆಲವು ಮಾತ್ರೆಗಳು ಮಾತ್ರ. ಅವರ ಕ್ಲಿನಿಕ್ ಹೊರತುಪಡಿಸಿದರೆ, ನಮ್ಮ ಹಳ್ಳಿಯ ಆರು ಕಿ.ಮೀ. ಪಾಸಲೆಯಲ್ಲಿ ಬೇರೆ ಡಾಕ್ಟರ್ ಇರಲಿಲ್ಲ, ಆಸ್ಪತ್ರೆಯೂ ಇರಲಿಲ್ಲ.
ಆದ್ದರಿಂದಲೇ ಮಳೆಗಾಲದಲ್ಲಿ ವೈದ್ಯರನ್ನು ಹುಡುಕಿಕೊಂಡು ಹೋಗುವುದೆಂದರೂ ಅಂದಿನ ದಿನಗಳಲ್ಲಿ ಅದೊಂದು ಸಾಹಸ. ನಾಲ್ಕು ತಿಂಗಳು ಮಳೆ ಸುರಿಯುವ ಮಳೆಗಾಲವು, ನಮ್ಮ ಹಳ್ಳಿಯಲ್ಲಿ ಸಣ್ಣ ಮಟ್ಟದ ‘ಖಳನಾಯಕ’. ವಿಪರೀತ ಮಳೆ ಸುರಿದಾಗ, ಗದ್ದೆಯಂಚಿನ ತೋಡು ಗಳಲ್ಲಿ ನೀರು ತುಂಬಿ, ಅವೆಲ್ಲವೂ ಗದ್ದೆಯ ಮೇಲೆ ಹರಿದು, ಬತ್ತದ ಸಸಿಗಳನ್ನು ಕಿತ್ತುಕೊಂಡು ಹೋಗುವುದುಂಟು.
ನಮ್ಮ ಮನೆ ತುಸು ಎತ್ತರದ ಜಾಗದಲ್ಲಿದ್ದುರಿಂದ, ತೋಡಿನಲ್ಲಿ ದೊಡ್ಡ ನೆರೆ ಬಂದರೂ, ಮನೆಗೆ, ಜೀವಕ್ಕೆ ಅಪಾಯವಿರಲಿಲ್ಲ. ಆದರೆ, ನಮ್ಮ ಹಳ್ಳಿಯ ಎಲ್ಲರಿಗೂ ಇಂತಹ ಅನುಕೂಲವಿರಲಿಲ್ಲ; ನದಿಯಲ್ಲಿ ನೆರೆ ಬಂದರೆ, ನಮ್ಮ ಬಂಧುಗಳೊಬ್ಬರ ಮನೆಗೆ ನೀರು ನುಗ್ತುತ್ತಿತ್ತು! ಅದು ಇನ್ನೊಂದು ರೀತಿಯ ಆತಂಕ!
ಅದೇನಿದ್ದರೂ, ಅಂದಿನ ಜನರ ಗ್ರಹಿಕೆಯಲ್ಲಿ, ಮಳೆಗಾಲವೆಂದರೆ ತೀರಾ ಕಷ್ಟದ ದಿನಗಳು ಎಂಬು ದರಲ್ಲಿ ಎರಡುಮಾತಿಲ್ಲ. ಅದನ್ನು ನಮ್ಮೂರಿನವರು ಹೇಳುತ್ತಿದ್ದುದು ಹೀಗೆ: ‘ವಯಸ್ಸಾದವರು ಇದೊಂದು ವರ್ಷ ಮಳೆಗಾಲದಲ್ಲಿ ಬದುಕಿ ಉಳಿದರೆ, ಇನ್ನು ಒಂದು ವರ್ಷ ತೊಂದರೆ ಇಲ್ಲ!’ ಹೀಗೆ, ಅನುಭವಜನ್ಯ ಕಟುಸತ್ಯವೊಂದು ನಮ್ಮೂರಿನಲ್ಲಿ ನಾಣ್ಣುಡಿಯ ಸ್ವರೂಪ ಪಡೆದಿತ್ತು.
ಮಧುರ ನೆನಪಿನ ಮಳೆಗಾಲವು ಕಷ್ಟದ ದಿನಗಳನ್ನು ಸಹ ಒಳಗೊಂಡಿದೆ ಎಂಬುದನ್ನು ಇದಕ್ಕಿಂತ ಸಮರ್ಪಕವಾಗಿ ಸೂಚಿಸುವ ಇನ್ನೊಂದು ನುಡಿಗಟ್ಟು ಇರಲಿಕ್ಕಿಲ್ಲ. ಈಗ ಕಾಲ ಬದಲಾಗಿದೆ; ಹಳ್ಳಿ ಪಟ್ಟಣಗಳಲ್ಲಿ ಕ್ಲಿನಿಕ್, ಆಸ್ಪತ್ರೆಗಳು ಬಂದಿವೆ.
ಬದಲಾಗಿರುವ ಸನ್ನಿವೇಶದಲ್ಲಿ ಕೆಲವು ಕಡೆ ಇನ್ನೊಂದೇ ವಿದ್ಯಮಾನವನ್ನು ಕಾಣಬಹುದು: ಸಣ್ಣ ಸಣ್ಣದಕ್ಕೆಲ್ಲಾ ವೈದ್ಯರ ಬಳಿ ಓಡುವುದು! ಆರೋಗ್ಯದ ವಿಚಾರ ದಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂಬ ಕಾಳಜಿಯೇ, ಇಂತಹ ವಿದ್ಯಮಾನಕ್ಕೆ ಕಾರಣ. ಈ ರೀತಿಯ ಅತಿಕಾಳಜಿಯು ತಪ್ಪೋ ಸರಿಯೋ ಎಂದು ಈ ಕ್ಷಣದಲ್ಲಿ ಹೇಳಲಾರೆ; ಹಲವು ವರ್ಷಗಳ ನಂತರ, ಸಿಂಹಾವಲೋಕನ ಮಾಡಿದರೆ, ಇದು ಸರಿಯಾಗಿತ್ತೋ ಎಂದು ನಿರ್ಧರಿಸಲು ಸಾಧ್ಯ.