ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Ravi Hunj Column: ಧಾರ್ಮಿಕ ಅಲ್ಪಸಂಖ್ಯಾತದಾಸೆಯ ಪ್ರತ್ಯೇಕ ಧರ್ಮವೆಂಬ ಮೂಗಿನ ಮೇಲಿನ ತುಪ್ಪ!

ಜಾಗತಿಕ ಲಿಂಗಾಹತ ಮಹಾಸಭಾವು ತನ್ನ ಜಾಹೀರಾತಿನಲ್ಲಿ ವರ್ಣಿಸಿದ ಸವಲತ್ತುಗಳು ಹೀಗಿದ್ದವು: ಶೈಕ್ಷಣಿಕ ಸೌಲಭ್ಯಗಳು: ಲಿಂಗಾಯತ ಧರ್ಮದ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಶಾಲಾ/ಕಾಲೇಜು ಶುಲ್ಕದಿಂದ ಪೂರ್ಣ ವಿನಾಯಿತಿ ಪಡೆಯುತ್ತಾರೆ. ಲಿಂಗಾಯತ ಧರ್ಮೀಯರು ನಡೆಸುತ್ತಿರುವ ಸಾವಿ ರಾರು ಶಿಕ್ಷಣ ಸಂಸ್ಥೆಗಳಲ್ಲಿ ೫೦ ಪ್ರತಿಶತಕ್ಕೂ ಹೆಚ್ಚು ಮೀಸಲಾತಿ ಸಿಗುವುದು.

ಧಾರ್ಮಿಕ ಅಲ್ಪಸಂಖ್ಯಾತದಾಸೆಯ ಪ್ರತ್ಯೇಕ ಧರ್ಮವೆಂಬ ಮೂಗಿನ ಮೇಲಿನ ತುಪ್ಪ!

-

Ashok Nayak
Ashok Nayak Dec 8, 2025 10:46 AM

ಬಸವ ಮಂಟಪ

ರವಿ ಹಂಜ್

2018ರ ಮೇ ತಿಂಗಳ ಒಂಬತ್ತರ ಮತದಾನದ ದಿನ ಜಾಗತಿಕ ಲಿಂಗಾಯತ ಮಹಾಸಭಾವು ಪ್ರಮುಖ ಪತ್ರಿಕೆಗಳಲ್ಲಿ ಒಂದು ಪುಟದ ಜಾಹೀರಾತು ನೀಡಿ ಅದರಲ್ಲಿ ಒಂದು ಪಕ್ಷದ ಲಿಂಗಾಯತ ಮುಖ್ಯ ಮಂತ್ರಿ ಜೈಲು ಸೇರಿ ಬಂದವರು. ಇವರಿಗೆ ಮತ ಹಾಕಬೇಡಿ ಎಂದು ಕರೆ ನೀಡಿತ್ತು. ಆರೋಪ ಸಾಬೀತಾಗದೆ ಖುಲಾಸೆಯಾಗಿದ್ದರೂ ಅವರನ್ನು ಅಪರಾಧಿ ಎಂದು ತಾನೇ ತೀರ್ಪು ನೀಡಿ ಅಪರಾಧಿ ಎಂದು ಘೋಷಿಸಿತ್ತು.

ಹಾಗೆಯೇ ಅದೇ ಜಾಹೀರಾತಿನಲ್ಲಿ ಇನ್ನೊಂದು ಪಕ್ಷದ ಲಿಂಗಾಯತೇತರ ಮುಖ್ಯಮಂತ್ರಿಯು “ಲಿಂಗಾಯತ ಪ್ರತ್ಯೇಕ ಧರ್ಮದ ರೂವಾರಿ. ಪ್ರತ್ಯೇಕ ಧರ್ಮಕ್ಕೆ ಬೆಂಬಲಿಸಿದವರು. ಹಾಗಾಗಿ ಅವರಿಗೆ ಮತ ಹಾಕಿ" ಎಂದು ರಾಜಾರೋಷವಾಗಿ ಕರೆ ಕೊಟ್ಟಿತ್ತು.

ಲಿಂಗಾಯತರ ಪ್ರಗತಿಗಾಗಿ, ಲಿಂಗಾಯತರ ಉದ್ಧಾರಕ್ಕಾಗಿ ಶ್ರಮಿಸುವ ಸಂಘಟನೆ ನಮ್ಮದು ಎನ್ನುತ್ತಾ ಹೀಗೆ ಲಿಂಗಾಯತರು ಮೆಚ್ಚಿನ ಮುಖಂಡರನ್ನು ಲಿಂಗಾಹತ ಮಾಡುವ ಇವರ ಹುನ್ನಾರ ಸಮಾಜದ್ರೋಹವಲ್ಲವೇ?ಬಸವಣ್ಣನು, “ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ, ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ. ನುಡಿಗೆ ತಕ್ಕ ನಡೆಯ ಕಂಡಡೆ ಕೂಡಲಸಂಗಮದೇವ ನೊಳಗಿಪ್ಪನಯ್ಯಾ" ಎಂದು ತನ್ನ ವಚನದಲ್ಲಿಯೇ ನಡೆಯೊಂದು ನುಡಿವೊಂದು ತೋರುವ ಇವರಲ್ಲಿ ಕೂಡಲಸಂಗಮದೇವನಿಲ್ಲದೇ ಲಿಂಗಾಹತರಾಗಿರುವರೆಂದು ಪರೋಕ್ಷವಾಗಿ ಹೇಳಿದ್ದಾನೆ. ಹಾಗಾಗಿ ಇದು ಬಸವಸಾಕ್ಷಿಯಾಗಿ ಜಾಗತಿಕ ಲಿಂಗಾಹತ ಮಹಾಸಭಾ!

ಅಂದ ಹಾಗೆ ಆ ಚುನಾವಣೆಯಲ್ಲಿ ಇವರು ವಿರೋಧಿಸಿದ್ದ ಆ ಲಿಂಗಾಯತ ಮುಖಂಡರ ಪಕ್ಷವೇ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ ಪಕ್ಷವಾಗಿ ಹೊಮ್ಮಿತ್ತು! ಅಲ್ಲಿಗೆ ಚುನಾವಣಾ ಫಲಿತಾಂಶವು ಈ ಲಿಂಗಾಹತರನ್ನು ಲಿಂಗಾಯತರು ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ಇನ್ನು ಇದೇ ಜಾಹೀರಾತಿನಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಯಿಂದಾಗುವ ಅನುಕೂಲಗಳು ಎಂದು ಹಲವು ಸೌಲಭ್ಯಗಳನ್ನು ಲಿಂಗಾಹತ ಮಹಾಸಭಾವು ತಾವು ಬೆಂಬಲಿಸುವ ಪಕ್ಷದ ಚುನಾವಣಾ ಪ್ರಣಾಳಿಕೆಗಿಂತ ಸುಂದರವಾಗಿ ವರ್ಣಿಸಿತ್ತು.

ಇದನ್ನೂ ಓದಿ: Ravi Hunj Column: ಇದು ಬಸವಣ್ಣನ ಹೆಸರನ್ನು ಬಳಸಿ ಅವನಿಗೆ ಮಾಡುತ್ತಿರುವ ಅಪಚಾರ !

ಜಾಗತಿಕ ಲಿಂಗಾಹತ ಮಹಾಸಭಾವು ತನ್ನ ಜಾಹೀರಾತಿನಲ್ಲಿ ವರ್ಣಿಸಿದ ಸವಲತ್ತುಗಳು ಹೀಗಿದ್ದವು: ಶೈಕ್ಷಣಿಕ ಸೌಲಭ್ಯಗಳು: ಲಿಂಗಾಯತ ಧರ್ಮದ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಶಾಲಾ/ಕಾಲೇಜು ಶುಲ್ಕದಿಂದ ಪೂರ್ಣ ವಿನಾಯಿತಿ ಪಡೆಯುತ್ತಾರೆ. ಲಿಂಗಾಯತ ಧರ್ಮೀಯರು ನಡೆಸು ತ್ತಿರುವ ಸಾವಿರಾರು ಶಿಕ್ಷಣ ಸಂಸ್ಥೆಗಳಲ್ಲಿ ೫೦ ಪ್ರತಿಶತಕ್ಕೂ ಹೆಚ್ಚು ಮೀಸಲಾತಿ ಸಿಗುವುದು.

ಭಾರತ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ನಿಧಿಯಿಂದ ಸಮಾಜದಲ್ಲಿರುವ ಬಡವರಿಗೆ ಹಾಗೂ ಅಶಕ್ತರಿಗೆ ಹಲವಾರು ಸೌಲಭ್ಯಗಳು ಸಿಗುತ್ತವೆ. ಸರಕಾರಿ ನೌಕರಿಗಳಲ್ಲಿ ವಿಶೇಷ ಮೀಸಲಾತಿ, ಭಡ್ತಿ ಸೌಲಭ್ಯ. ಲಿಂಗಾಯತ ವಿದ್ಯಾಸಂಸ್ಥೆಗಳು ಧಾರ್ಮಿಕ ವಿಷಯಗಳನ್ನು ಪಠ್ಯವಾಗಿ ಸೇರಿಸಬಹುದು. ಭಾರತೀಯ ಸಂವಿಧಾನದ ೩೦ನೇ ಕಲಂ ಪ್ರಕಾರ ಫಾರ್ಮಸಿ, ಎಂಜಿನಿಯರಿಂಗ್ ಕಾಲೇಜು, ಪ್ರೌಢ ಶಾಲೆ ಸ್ಥಾಪಿಸುವ ಹಕ್ಕು, ಸರಕಾರದ ವಿಶೇಷ ಅನುದಾನ ಸಿಗುತ್ತವೆ. ಲಿಂಗಾಯತ ಧರ್ಮದ ಶಿಕ್ಷಣ ಸಂಸ್ಥೆಗಳಲ್ಲಿ ಸರಕಾರ ಅನವಶ್ಯಕ ಹಸ್ತಕ್ಷೇಪ ಮಾಡುವುದಿಲ್ಲ (ಇಲ್ಲಿ ಸರಕಾರ ಅನವಶ್ಯಕ ಹಸ್ತಕ್ಷೇಪ ಮಾಡುವುದು ಎಂದರೆ ಏನರ್ಥ? ಹಾಗೆ ಅನವಶ್ಯಕ ಹಸ್ತಕ್ಷೇಪ ಮಾಡಿದರೆ ಸರಕಾರ ವನ್ನು ಕೋರ್ಟಿಗೆಳೆದು ಛೀಮಾರಿ ಹಾಕಿಸಬಹುದಲ್ಲವೇ!).

ಧಾರ್ಮಿಕ ಸೌಲಭ್ಯಗಳು: ಲಿಂಗಾಯತ ಧರ್ಮದ ಯಾವುದೇ ಮಠ, ಮಂದಿರ ಗದ್ದುಗೆ, ಯಾತ್ರಾ ಸ್ಥಳ, ಧಾರ್ಮಿಕ ಸಂಘ ಸಂಸ್ಥೆಗಳನ್ನು ರಕ್ಷಿಸುವ ಜವಾಬ್ದಾರಿ ಸರಕಾರಿ ರಕ್ಷಣೆಗೆ ಒಳಗಾಗುತ್ತದೆ. ಇದರಿಂದ ಲಿಂಗಾಯತ ಧಾರ್ಮಿಕ ಸ್ಥಳಗಳ ಸಂರಕ್ಷಣೆಯಾಗುವುದು. ಅಲ್ಲದೆ ಧರ್ಮಕ್ಷೇತ್ರಗಳ ಅಭಿವೃದ್ಧಿಗಾಗಿ ಕೇಂದ್ರ ಸರಕಾರದಿಂದ ಅನುದಾನ ದೊರೆಯುತ್ತದೆ. ವಿಶ್ವಸಂಸ್ಥೆಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಮನ್ನಣೆ ದೊರೆತು ಜಾಗತಿಕ ಧರ್ಮಗಳ ಸಾಲಿನಲ್ಲಿ ಲಿಂಗಾಯತ ಧರ್ಮ ಸ್ಥಾನ ಗಳಿಸು ತ್ತದೆ.

ಆರ್ಥಿಕ ಸೌಲಭ್ಯಗಳು: ರಾಷ್ಟ್ರೀಯ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕ್‌ಗಳಿಂದ ಲಿಂಗಾಯತ ಸಮಾಜದ ದುರ್ಬಲ ವರ್ಗದ ಜನರಿಗೆ ಕಡಿಮೆ ದರದಲ್ಲಿ ವ್ಯಾಪಾರಕ್ಕಾಗಿ ಸಾಲ ಸಿಗುವುದು. ಇದರಿಂದ ಸ್ವಯಂ ಉದ್ಯೋಗ ಮಾಡಿ ಅಭಿವೃದ್ಧಿಯಾಗಬಹುದು. ಪ್ರತಿ ವರ್ಷವೂ ಅಲ್ಪ ಸಂಖ್ಯಾ ತರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರದಿಂದ ಸಾವಿರಾಜು ಕೋಟಿ ರು. ಹಣವನ್ನು ನೀಡಲಾಗು ತ್ತಿದೆ. ಲಿಂಗಾಯತ ಧರ್ಮ ಮಾನ್ಯತೆ ಪಡೆದರೆ ಪ್ರತಿ ವರ್ಷವು ಸಾವಿರಾರು ಕೋಟಿ ರು. ನಿಧಿ ಲಿಂಗಾಯತ ಧರ್ಮದ ಏಳ್ಗೆಗಾಗಿ ದೊರಕಲಿದೆ.

ಇದೆಲ್ಲವೂ ಸತ್ಯವೇ?

ಭಾರತ ಸರಕಾರವು ಅಧಿಕೃತವಾಗಿ ಮಾನ್ಯತೆ ಪಡೆದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯ ಗಳಾದ ಮುಸ್ಲಿಮ, ಸಿಖ್, ಕ್ರೈಸ್ತ, ಬೌದ್ಧ, ಜೋರಾಸ್ಟ್ರಿಯನ್ (ಪಾರ್ಸಿ) ಮತ್ತು ಜೈನರಿಗೆ ವಿವಿಧ ಯೋಜನೆಗಳನ್ನು ಮತ್ತು ರಕ್ಷಣೆಗಳನ್ನು ಒದಗಿಸುತ್ತದೆ. ಈ ಯೋಜನೆಗಳು ಪ್ರಾಥಮಿಕವಾಗಿ ಶೈಕ್ಷಣಿಕ ಸಬಲೀಕರಣ, ಆರ್ಥಿಕ ಸಹಾಯ, ಕೌಶಲ ವಿಕಸನ ಮತ್ತು ಸಾಂಸ್ಕೃತಿಕ/ಧಾರ್ಮಿಕ ಸ್ವಾಯತ್ತತೆಯ ಮೇಲೆ ಕೇಂದ್ರಿತವಾಗಿವೆ.

ಶೈಕ್ಷಣಿಕ ಬೆಂಬಲದಡಿಯಲ್ಲಿ ವಿವಿಧ ಹಂತದ ವಿದ್ಯಾರ್ಥಿ ವೇತನಗಳು ಲಭ್ಯವಿವೆ. ಇದರಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪದವೀಧರೋತ್ತರ, ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣದವರೆಗೆ ಮೆರಿಟ್ ಮತ್ತು ಆದಾಯದಾಧಾರಿತವಾದ ಯೋಜನೆಗಳು ಸೇರಿವೆ.

ಇವುಗಳಲ್ಲಿ ಪ್ರಮುಖವಾಗಿ: ನಯಾ ಸವೇರಾ (ಉಚಿತ ತರಬೇತಿ ಮತ್ತು ತರಬೇತಿ ಸಂಬಂಧಿತ ಯೋಜನೆ): ಸರಕಾರಿ ಉದ್ಯೋಗಗಳಿಗಾಗಿ ಮತ್ತು ವೃತ್ತಿಪರ ಶಿಕ್ಷಣದ ಪ್ರವೇಶಕ್ಕಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಉಚಿತ ತರಬೇತಿಗೆ ಆರ್ಥಿಕ ಸಹಾಯ ಒದಗಿಸುತ್ತದೆ.

ಮೌಲಾನಾ ಆಜಾದ್ ರಾಷ್ಟ್ರೀಯ ಫೆಲೋಶಿಪ್ ಯೋಜನೆ: ಎಂ.ಫಿಲ್ ಮತ್ತು ಪಿಎಚ್‌ಡಿ ಯಂಥ ಉನ್ನತ ಶಿಕ್ಷಣ ಕಲಿಯುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುತ್ತದೆ.

ಬೇಗಂ ಹಜರತ್ ಮಹಲ್ ರಾಷ್ಟ್ರೀಯ ವಿದ್ಯಾರ್ಥಿವೇತನ: ಇದನ್ನು ಅಲ್ಪಸಂಖ್ಯಾತ ಸಮುದಾಯಗಳಿಂದ ಬರುವ ಐಗಿ ರಿಂದ ಗಿಐಐವರೆಗಿನ ತರಗತಿಯಲ್ಲಿ ಓದುವ ಮೇಧಾವಿ ಹೆಣ್ಣುಮಕ್ಕಳಿಗೆ ನೀಡಲಾಗುತ್ತದೆ.

ಸೀಖೋ ಔರ್ ಕಮಾವೋ (ಕಲಿ ಮತ್ತು ಸಂಪಾದಿಸು)/ ಘರೀಬ್ ನವಾಜ್ ಉದ್ಯೋಗ ತರಬೇತಿ ಕಾರ್ಯಕ್ರಮ: ಇದು ಉದ್ಯೋಗ-ಲಿಂಕ್ ಆದ ಕೌಶಲ ವಿಕಸನ ಯೋಜನೆಯಾಗಿದ್ದು, ಅಲ್ಪಸಂಖ್ಯಾತ ಯುವಕರಿಗೆ ತಮ್ಮ ಉದ್ಯೋಗ ಸಾಧ್ಯತೆಯನ್ನು ಹೆಚ್ಚಿಸಲು ಅಥವಾ ಸ್ವಯಂ-ಉದ್ಯೋಗಕ್ಕೆ ಅನುವು ಮಾಡಿಕೊಡಲು ವೃತ್ತಿಪರ ತರಬೇತಿ ನೀಡುತ್ತದೆ. ಮುಸ್ಲಿಂ ನಾಯಕರ ಹೆಸರಿನ ಈ ಯೋಜನೆಗಳು ಕೇವಲ ಮುಸ್ಲಿಮರಿಗಲ್ಲದೆ ಎಲ್ಲಾ ಅರ್ಹ ಅಲ್ಪಸಂಖ್ಯಾತ ಧರ್ಮೀಯ ರಿಗೂ ಲಭ್ಯವಿವೆ.

ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಹಣಕಾಸು ನಿಗಮ ( NMDFC ) ಸಾಲ ಯೋಜನೆ ಗಳು: ಸ್ವಯಂ-ಉದ್ಯೋಗ ಮತ್ತು ಆದಾಯ-ಸೃಷ್ಟಿಕಾರಕ ಚಟುವಟಿಕೆಗಳಿಗೆ ರಿಯಾಯಿತಿ ಸಾಲ ಗಳನ್ನು ಒದಗಿಸುತ್ತದೆ.

ಪ್ರಧಾನ ಮಂತ್ರಿ ಜನ್‌ವಿಕಾಸ್ ಕಾರ್ಯಕ್ರಮ (ಪಿಎಂಜೆವಿಕೆ): ಗುರುತಿಸಲಾದ ‘ಅಲ್ಪಸಂಖ್ಯಾತ ಕೇಂದ್ರೀಕರಣ ಪ್ರದೇಶಗಳಲ್ಲಿ’ ಸಾಮಾಜಿಕ-ಆರ್ಥಿಕ ಮೂಲಸೌಕರ್ಯವನ್ನು (ಉದಾಹರಣೆಗೆ, ಶಾಲೆ ಗಳು, ಆರೋಗ್ಯ ಕೇಂದ್ರಗಳು, ಕೌಶಲ ಕೇಂದ್ರಗಳು, ವಸತಿ) ಸುಧಾರಿಸುವ ಕಾರ್ಯಕ್ರಮವಾಗಿದ್ದು, ಅಸಮತೋಲನವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಸಾಂಸ್ಥಿಕ ಮತ್ತು ಸಾಂಸ್ಕೃತಿಕ ಸ್ವಾಯತ್ತತೆ: ಅಲ್ಪಸಂಖ್ಯಾತ ಸಮುದಾಯಗಳು ತಮ್ಮ ಸ್ವಂತ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಆರ್ಟಿಕಲ್ ೩೦ರ ಅಡಿಯಲ್ಲಿ ಸಾಂವಿ ಧಾನಿಕ ಹಕ್ಕನ್ನು ಹೊಂದಿವೆ. ಈ ಸಂಸ್ಥೆಗಳು ತಮ್ಮ ಸ್ವಂತ ಸಮುದಾಯದ ವಿದ್ಯಾರ್ಥಿಗಳಿಗಾಗಿ ಶೇ.೫೦ರವರೆಗಿನ ಸೀಟುಗಳನ್ನು ಕಾಯ್ದಿರಿಸುವುದು ಸೇರಿದಂತೆ ತಮ್ಮ ಸ್ವಂತ ಪ್ರವೇಶ ವಿಧಾನ ಗಳನ್ನು ನಿಗದಿಪಡಿಸಬಹುದು ಮತ್ತು ಇತರ ಸಂಸ್ಥೆಗಳಿಗೆ ಅನ್ವಯಿಸುವ ಕೆಲವು ಸರಕಾರಿ ಪರಿಶೀಲನೆ ಮತ್ತು ಬಾಡಿಗೆ ನಿಯಂತ್ರಣ ಕಾನೂನುಗಳಿಂದ ಮುಕ್ತವಾಗಿರುತ್ತವೆ.

ಧಾರ್ಮಿಕ ಸಂಸ್ಥೆಗಳು ಮತ್ತು ಟ್ರಸ್ಟ್‌ಗಳು ಹಲವು ಹಿಂದೂ ದೇವಾಲಯಗಳಿಗೆ ವ್ಯತಿರಿಕ್ತವಾಗಿ, ಸರಕಾರದ ಗಮನಾರ್ಹ ನಿಯಮಗಳಿಲ್ಲದೆ ತಮ್ಮ ಆಂತರಿಕ ವ್ಯವಹಾರಗಳು ಮತ್ತು ಆಸ್ತಿಗಳನ್ನು ನಿರ್ವಹಿಸುವಲ್ಲಿ ಸ್ವಾಯತ್ತತೆಯನ್ನು ಹೊಂದಿವೆ. ಆ ದೇವಾಲಯಗಳು ಕೆಲವು ರಾಜ್ಯಗಳಲ್ಲಿ ರಾಜ್ಯ-ನೇಮಕ ಮಂಡಳಿಗಳಿಂದ ನಿರ್ವಹಿಸಲ್ಪಡುತ್ತವೆ. ಸರಕಾರವು ಅಲ್ಪ ಸಂಖ್ಯಾತ ಸಮುದಾಯಗಳ ಸಮೃದ್ಧ ಪರಂಪರೆಯನ್ನು ಸಂರಕ್ಷಿಸಲು ‘ಹಮಾರಿ ಧರೋಹರ್’ ಯೋಜನೆಯನ್ನು ಜಾರಿಗೆ ತರುತ್ತದೆ.

ಕಾನೂನಾತ್ಮಕ ರಕ್ಷಣೆಗಳು: ಭಾರತದ ಸಂವಿಧಾನವು ಎಲ್ಲಾ ನಾಗರಿಕರಿಗೆ ಮೂಲಭೂತ ಹಕ್ಕು ಗಳನ್ನು ಗ್ಯಾರಂಟಿ ನೀಡುತ್ತದೆ. ಇದರಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು (ಆರ್ಟಿಕಲ್ ೨೫) ಮತ್ತು ವಿಶಿಷ್ಟ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಸಂರಕ್ಷಿಸುವ ಹಕ್ಕು (ಆರ್ಟಿಕಲ್ ೨೯) ಸೇರಿವೆ. 1992ರ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ (ಘೆಇI) ಕಾಯ್ದೆಯು, ರಕ್ಷಣೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಲ್ಪಸಂಖ್ಯಾತ ಹಕ್ಕುಗಳ ಕಡಿತದ ಕುರಿತಾದ ದೂರುಗಳನ್ನು ಪರಿಶೀಲಿಸಲು ಒಂದು ಶಾಸನಬದ್ಧ ಸಂಸ್ಥೆಯನ್ನು ಒದಗಿಸುತ್ತದೆ.

ಭಾರತದ ಸಂವಿಧಾನದ ಅನುಚ್ಛೇದ ೩೦ರಲ್ಲಿ, “ಎಲ್ಲಾ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ರಿಗೆ ತಮ್ಮ ಸ್ವಂತ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಹಕ್ಕನ್ನು ನೀಡುತ್ತದೆ. ನಿರ್ವಹಿಸುವ ಹಕ್ಕಿನಲ್ಲಿ ಅದರ ವ್ಯವಹಾರಗಳನ್ನು ನಿರ್ವಹಿಸುವ, ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಮತ್ತು ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಹಕ್ಕುಗಳು ಸೇರಿವೆ" ಎಂದಿದ್ದರೂ ಭಾರತದ ಸರ್ವೋಚ್ಚ ನ್ಯಾಯಾಲಯವು, “ಈ ಸಂಸ್ಥೆಗಳು ಸ್ವಾಯತ್ತತೆಯನ್ನು ಹೊಂದಿದ್ದರೂ, ಶಿಕ್ಷಣ, ಕಲ್ಯಾಣ ಮತ್ತು ನಿರ್ವಹಣೆಯ ರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸಬೇಕು ಮತ್ತು ರಾಜ್ಯ ಸರಕಾರಗಳಿಂದ ಹಣಕಾಸು ನೆರವು ಪಡೆಯುವಾಗ ಸರಕಾರವು ಸಹ ಯಾವುದೇ ತಾರತಮ್ಯ ಮಾಡಲಾಗದು" ಎಂದಿದೆ. ಒಟ್ಟಾರೆ ಧಾರ್ಮಿಕ ಅಲ್ಪಸಂಖ್ಯಾತರಿಗೆ ಇಷ್ಟೆಲ್ಲ ಸೌಲಭ್ಯಗಳು ಸಿಗುವುದು ಸತ್ಯ. ಇದರಲ್ಲಿ ಯಾವುದೇ ಅನುಮಾನವಿಲ್ಲ!

ಇನ್ನು ಇಂಥದೇ ಯೋಜನೆಗಳು ಬಹುಸಂಖ್ಯಾತ ಧರ್ಮೀಯರಿಗೆ ಇಲ್ಲವೇ? ಸಾಂಕವಾಗಿ ಸ್ವಾಯ ತ್ತತೆ, ವಿದ್ಯಾರ್ಥಿ, ಸಿಬ್ಬಂದಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಸ್ವಾತಂತ್ರ್ಯ ಬಿಟ್ಟರೆ ಬಹುಸಂಖ್ಯಾತ ಧರ್ಮೀಯರೂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳಬಹುದು. ಹಾಗಾಗಿಯೇ ಅನೇಕ ಮಠಗಳು, ಜಾತಿ ಸಂಘಗಳು, ಸಹಕಾರಿ ವಿದ್ಯಾಸಂಸ್ಥೆಗಳು ಹೇರಳವಾಗಿವೆ.

ವೈಯಕ್ತಿಕ ನಾಗರಿಕರಿಗೆ ಆರ್ಥಿಕವಾಗಿ ದುರ್ಬಲರಾದ, ಸಾಮಾಜಿಕವಾಗಿ ಹಿಂದುಳಿದ ಮತ್ತು ಜಾತಿಯಾಧಾರಿತ ಅನೇಕ ವಿದ್ಯಾರ್ಥಿ ವೇತನ, ಮೀಸಲಾತಿ, ಉಚಿತ ವಸತಿ ಮುಂತಾದ ಯೋಜನೆ ಗಳಿವೆ. ಅದೇ ರೀತಿ ತಂತ್ರಜ್ಞಾನ, ಕರಕುಶಲ ಅನುಭವದ ಆಧಾರದಲ್ಲಿ ಸಬ್ಸಿಡಿ ಸಾಲ ಸೌಲಭ್ಯ ಗಳಿವೆ. ಅನೇಕ ಸಾಲಮನ್ನಾ ಯೋಜನೆಗಳಿವೆ.

ಒಂದೇ ವ್ಯತ್ಯಾಸವೆಂದರೆ ಸರ್ವರಿಗೂ ಸಮಾನ ಹಂಚಿಕೆ ಎಂಬ ಪ್ರಜಾಪ್ರಭುತ್ವದ ಸಮತೋಲನದ ಸೂತ್ರದ ಆಧಾರದಲ್ಲಿ ಅಲ್ಪ ಸಂಖ್ಯಾತರಿಗೆ ಕೆಲವೇ ಕೆಲವು ವಿಶೇಷ ರಿಯಾಯಿತಿಗಳು ಇವೆ. ಹಾಗೆಂದು ಧಾರ್ಮಿಕ ಅಲ್ಪಸಂಖ್ಯಾತರೆಲ್ಲರೂ ಕೇವಲ ಮತ್ತು ಕೇವಲ ತಮ್ಮ ಧಾರ್ಮಿಕ ನೆಲೆಗಟ್ಟಿ ನಲ್ಲಿ ಸಿಗುವ ಸರಕಾರಿ ಸೌಲಭ್ಯಗಳ ಸುಖದ ಸುಪ್ಪತ್ತಿಗೆಯಲ್ಲಿ ಪವಡಿಸಿ ಆನಂದಿಸುತ್ತಿಲ್ಲ. ಇದನ್ನು ನಮ್ಮ ಸುತ್ತಮುತ್ತಲಿನ ಸಹಜೀವಿಗಳನ್ನು ಕಣ್ಣು ತೆರೆದು ನೋಡಿದರೆ ಅರಿವಾಗುತ್ತದೆ.

ಒಟ್ಟಿನಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಇರುವ ಮೇಲ್ಕಾಣಿಸಿದ ಯೋಜನೆಗಳಂತೆ ಧಾರ್ಮಿಕ ಬಹುಸಂಖ್ಯಾತರಿಗೂ ಹೇರಳ ಸರಕಾರಿ ಯೋಜನೆಗಳಿವೆ. ಅಲ್ಪಸಂಖ್ಯಾತರೋ ಅಥವಾ ಬಹು ಸಂಖ್ಯಾತರೋ ತನ್ನೆಲ್ಲ ನಾಗರಿಕರಿಗೆ ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳನ್ನು ನೀಡುತ್ತದೆ. ಇದರಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು (ಆರ್ಟಿಕಲ್ ೨೫) ಮತ್ತು ವಿಶಿಷ್ಟ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಸಂರಕ್ಷಿಸುವ ಹಕ್ಕು (ಆರ್ಟಿಕಲ್ ೨೯) ಎಲ್ಲರಿಗೂ ಅನ್ವಯಿಸುತ್ತವೆ.

ಅದೇ ರೀತಿ ಸಮತೋಲನ ಮತ್ತು ನಿಯಂತ್ರಣ ಕಾಪಾಡಲು ಸರಕಾರದಲ್ಲಿ ತನ್ನದೇ ಆದ ನಿಯಮ ಗಳಿವೆ. ಹಾಗಾಗಿ ರಾಷ್ಟ್ರೀಯವಾಗಿ ಧಾರ್ಮಿಕ ಅಲ್ಪಸಂಖ್ಯಾತರೆಂದು ಪರಿಗಣಿಸಿದರೂ ಕೆಲವು ಧರ್ಮೀಯರು ರಾಜ್ಯಮಟ್ಟದಲ್ಲಿ ಅಲ್ಪಸಂಖ್ಯಾತರಲ್ಲದಿದ್ದರೆ ಅವರಿಗೆ ಈ ಸೌಲಭ್ಯಗಳು ಉಪಲಬ್ಧ ವಾಗವು. ಉದಾಹರಣೆಗೆ ರಾಷ್ಟ್ರೀಯವಾಗಿ ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖರನ್ನು ಅಲ್ಪ ಸಂಖ್ಯಾತರೆಂದು ಪರಿಗಣಿಸಿದರೂ ಕಾಶ್ಮೀರದಲ್ಲಿ ಮುಸ್ಲಿಮರನ್ನು, ಮಿಜೋರಂ/ನಾಗಾಲ್ಯಾಂಡಿನಲ್ಲಿ ಕ್ರಿಶ್ಚಿಯನ್ನ ರನ್ನು, ಪಂಜಾಬಿನಲ್ಲಿ ಸಿಖ್ಖರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಲಾಗದು.

ಏಕೆಂದರೆ ಆಯಾಯ ರಾಜ್ಯಗಳಲ್ಲಿ ಅವರು ಅಲ್ಪಸಂಖ್ಯಾತರಲ್ಲ. ಒಂದು ವೇಳೆ ವೀರಶೈವ ಲಿಂಗಾಯತವು ಪ್ರತ್ಯೇಕ ಧರ್ಮದ ಮಾನ್ಯತೆಯನ್ನು ಪಡೆದರೆ, ಆಗ ಕರ್ನಾಟಕದಲ್ಲಿ ಬಹುಸಂಖ್ಯಾ ತರಾದ ವೀರಶೈವ-ಲಿಂಗಾಯತರನ್ನು ಧಾರ್ಮಿಕ ಅಲ್ಪಸಂಖ್ಯಾತರೆಂದು ಪರಿಗಣಿಸಲಾಗದು.

ರಾಷ್ಟ್ರೀಯವಾಗಿ ವೀರಶೈವ-ಲಿಂಗಾಯತರು ಧಾರ್ಮಿಕ ಅಲ್ಪಸಂಖ್ಯಾತ ಮಾನ್ಯತೆ ಪಡೆದರೂ, ರಾಜ್ಯದಲ್ಲಿ ಬಹುಸಂಖ್ಯಾತರಾದ ಕಾರಣ, ಕರ್ನಾಟಕದಲ್ಲಿ ಮೇಲಿನ ಎಲ್ಲಾ ಸೌಲಭ್ಯಗಳನ್ನು ಪಡೆಯಲಾಗುವುದಿಲ್ಲ. ಸಂವಿಧಾನದ ಅನುಚ್ಛೇದ ೩೦ರ ಪ್ರಕಾರ ಅಲ್ಪಸಂಖ್ಯಾತ ಮಾನ್ಯತೆಯ ಏಕೈಕ ಲಾಭ ಪಡೆಯುವವರು ಧಾರ್ಮಿಕ ಹೆಸರಿನ ಸಂಸ್ಥೆಯಡಿ ವಿದ್ಯಾ ವ್ಯಾಪಾರದ ಕ್ಯಾಪಿಟೇಷನ್ ಶುಲ್ಕ ನಿರ್ವಹಿಸಿ ಲಾಭ ಮಾಡಿಕೊಳ್ಳುತ್ತಿರುವ ಕೋಟ್ಯಧಿಪತಿಗಳು ಮಾತ್ರ!

ಈ ‘ವಿದ್ಯಾ ವ್ಯಾಪಾರಿ’ಗಳು ಯಾರು ಯಾರು, ಅವರು ಎರಡೂ ಮಹಾಸಭಾಗಳಲ್ಲಿ ಯಾವ ಯಾವ ಹುದ್ದೆಗಳನ್ನು ಹೊಂದಿದ್ದಾರೆ, ಅವರಲ್ಲಿನ ಪರಸ್ಪರ ಸಂಬಂಧ ಮತ್ತು ಈ ಹೋರಾಟದಲ್ಲಿ ಯಾವ ಯಾವ ಪಾತ್ರವಹಿಸಿದ್ದಾರೆಂದು ಆಲೋಚಿಸಿದರೆ ಈ ಹೋರಾಟದ ಉದ್ದೇಶ ಸ್ಪಷ್ಟವಾಗುವುದು.

ಅಂತೆಯೇ ಈ ಹೋರಾಟದಲ್ಲಿ ಸಕ್ರಿಯವಾಗಿರುವ ಕಾವಿಧಾರಿಗಳು ಯಾವ ಯಾವ ವಿದ್ಯಾ ಸಂಸ್ಥೆ ಗಳನ್ನು ನಡೆಸುತ್ತಿದ್ದಾರೆ, ಅವರ ಅಧೀನದಲ್ಲಿರುವ ಕ್ಯಾಪಿಟೇಷನ್ ಶುಲ್ಕ ನಿರ್ವಹಣೆ ಎಂಥದ್ದು ಎಂದು ತಾಳೆ ಹಾಕಿಕೊಂಡರೆ ಎಲ್ಲವೂ ಬಸವಣ್ಣನು ಹೇಳಿದ ಸ್ಫಟಿಕದ ಶಲಾಕೆಯಷ್ಟು ಸುಸ್ಪಷ್ಟ ವಾಗುತ್ತ ಪ್ರತ್ಯೇಕತೆಯ ಲಾಭಾಂಶದ ಸ್ಪಷ್ಟ ಜಾಡುಗಳು ಗೋಚರಿಸುತ್ತವೆ. ಅದರಲ್ಲೂ ಎರಡೂ ಕಡೆ ಹೊಯ್ದಾಡುವ ಸಮನ್ವಯಿ ಮಠಸ್ಥರ ನಡೆಯಂತೂ ಕರ್ಮಠ ಕಠೋರ ಲಾಭಾಂಶ ಸಂಜಾತವಾಗಿ ಸ್ಪಷ್ಟವಾಗುತ್ತದೆ!

(ಮುಂದುವರಿಯುವುದು)

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)