ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr S P Yoganna Column: ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಚಿಕಿತ್ಸೆ ನೀಡಿ, ಪುಸ್ತಕೋದ್ಯಮ ಉಳಿಸಿ

ಪವಿತ್ರ ಪುಸ್ತಕ ಪರಂಪರೆಯನ್ನು ಬೆಳೆಸಿ, ರಕ್ಷಿಸುವ ದಿಕ್ಕಿನಲ್ಲಿ ಕರ್ನಾಟಕ ಸರಕಾರ ಸಾರ್ವಜನಿಕ ಗ್ರಂಥಾಲಯ ಕಾಯ್ದೆಯನ್ನು 1965ರಲ್ಲಿ ಜಾರಿಗೆ ತಂದಿತು; 1970ರ ದಶಕದಲ್ಲಿ ಅಂದಿನ ಮುಖ್ಯ ಮಂತ್ರಿ ದೇವರಾಜ ಅರಸು ಅವರು ಗ್ರಂಥಾಲಯಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯನ್ನು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆ ಅಡಿಯಲ್ಲಿ ಸ್ಥಾಪಿಸಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಚಿಕಿತ್ಸೆ ನೀಡಿ, ಪುಸ್ತಕೋದ್ಯಮ ಉಳಿಸಿ

-

Ashok Nayak
Ashok Nayak Dec 8, 2025 10:26 AM

ಸಾರಸ್ವತ

ಡಾ.ಎಸ್.ಪಿ.ಯೋಗಣ್ಣ

ಪುಸ್ತಕಗಳು ಜ್ಞಾನಭಂಡಾರವನ್ನು ಶೇಖರಿಸಿಟ್ಟು ಪೀಳಿಗೆಯಿಂದ ಪೀಳಿಗೆಗೆ ಜ್ಞಾನವನ್ನು ಲಭ್ಯ ವಾಗಿಸುವ ಪ್ರಮುಖ ಮುದ್ರಿತ ದಾಖಲೆಗಳು. ಮಾನವ ಸಂತತಿಯ ಪ್ರಾರಂಭದಿಂದಲೂ, ಇತಿಹಾಸ ವನ್ನು ತಿರುಗಿ ನೋಡಿದಾಗ, ವ್ಯಾಸರು ಬರೆದಿಟ್ಟ ವೇದಗಳು ಇಡೀ ಪ್ರಪಂಚದಲ್ಲಿಯೇ ಪ್ರಪ್ರಥಮ ದಾಖಲಿತ ಜ್ಞಾನಕೋಶಗಳು ಎಂಬುದು ನಿರ್ವಿವಾದ. ಅಲ್ಲಿಂದ ಪ್ರಾರಂಭವಾದ ಪುಸ್ತಕೋದ್ಯಮ ಇಂದಿನ ಆನ್‌ಲೈನ್ ಗ್ರಂಥಾಲಯಗಳವರೆಗೂ ಬೆಳೆದುಬಂದಿದೆ.

ಪವಿತ್ರ ಪುಸ್ತಕ ಪರಂಪರೆಯನ್ನು ಬೆಳೆಸಿ, ರಕ್ಷಿಸುವ ದಿಕ್ಕಿನಲ್ಲಿ ಕರ್ನಾಟಕ ಸರಕಾರ ಸಾರ್ವಜನಿಕ ಗ್ರಂಥಾಲಯ ಕಾಯ್ದೆಯನ್ನು 1965ರಲ್ಲಿ ಜಾರಿಗೆ ತಂದಿತು; 1970ರ ದಶಕದಲ್ಲಿ ಅಂದಿನ ಮುಖ್ಯ ಮಂತ್ರಿ ದೇವರಾಜ ಅರಸು ಅವರು ಗ್ರಂಥಾಲಯಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯನ್ನು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆ ಅಡಿಯಲ್ಲಿ ಸ್ಥಾಪಿಸಿದರು.

ಹೊಸ ಹೊಸ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಪರಿವರ್ತನೆಯ ಯೋಜನೆಗಳ ಹರಿಕಾರರಿವರು. ಜ್ಞಾನದ ಬೆಳಕು ಚೆಲ್ಲುವ, ಬೆಳೆಸುವ ಈ ನೂತನ ಸಾರ್ವಜನಿಕ ಗ್ರಂಥಾಲಯ ಯೋಜನೆಯು ಸರಕಾರದಿಂದ ಪ್ರಾರಂಭವಾಗಿದ್ದೂ ಅರಸು ಅವರ ಕಾಲದಲ್ಲಿಯೇ. ಅಲ್ಲಿಂದ ಇಲ್ಲಿಯವರೆಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಲವಾರು ಏಳು-ಬೀಳುಗಳನ್ನು ಕಾಣುತ್ತಾ ಸಾಗಿ ಬಂದಿದೆ.

ಇದನ್ನೂ ಓದಿ: Dr D C Nanjunda Column: ಫುಲ್‌ ಮತ್ತು ಡಲ್‌ʼಗಳ ನಡುವೆ ಕ್ರಿಕೆಟಿಗರ ಹೋಟೆಲ್‌ ಉದ್ಯಮ !

ಇಂದು ಪುಸ್ತಕೋದ್ಯಮ ಇನ್ನಿತರ ಸೇವಾ ಉದ್ಯಮಗಳಂತೆ ವಾಣಿಜ್ಯೋದ್ಯಮವಾಗಿ ಬೆಳೆದು ನಿಂತಿದೆ. ಲೇಖಕರು ತಮ್ಮ ವಿಚಾರಗಳನ್ನು ಶಾಶ್ವತವಾಗಿ ಶೇಖರಿಸಿಟ್ಟು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಬರೆಯುವುದಾದರೆ, ಬರೆದುದನ್ನು ಮುದ್ರಿಸಿ ಓದುಗರಿಗೆ ತಲುಪಿಸುವ ಮುದ್ರಣ ಮತ್ತು ಪ್ರಕಾಶನ ಉದ್ಯಮವು ವಾಣಿಜ್ಯಮಯವಾಗಿ ಬೆಳೆಯುತ್ತಿದೆ.

ಜ್ಞಾನ ಸೃಷ್ಟಿ ಮಾಡುವ ಲೇಖಕರು ಮತ್ತು ಅವಶ್ಯಕ ಬಂಡವಾಳ ಹೂಡಿ ಪುಸ್ತಕಗಳ ಮುದ್ರಣ, ವಿನ್ಯಾಸ, ಸಂರಕ್ಷಣೆ, ವಿತರಣೆ ಇತ್ಯಾದಿ ಎಲ್ಲಾ ಸವಾಲುಗಳನ್ನು ನಿರ್ವಹಿಸುವ ಮುದ್ರಕರು, ಪ್ರಕಾಶ ಕರು ಮತ್ತು ಈ ವ್ಯವಸ್ಥೆಯ ಪಾಲುದಾರರಾದ ಓದುಗರು ಪುಸ್ತಕೋದ್ಯಮವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸರಕಾರದ ಯೋಜನೆಗಳು ಈ ಸರಣಿಯೋಪಾದಿಯ ವ್ಯವಸ್ಥೆ ಯನ್ನು ಬೆಳೆಸುವಂತಾದರೆ ಮಾತ್ರ ಪುಸ್ತಕೋದ್ಯಮ ಬೆಳೆಯುತ್ತದೆ.

library

ಜೇಬಿಗೆ ಭಾರವಾದರೂ ಮುದ್ರಣ ಉದ್ಯಮದಲ್ಲಾಗುತ್ತಿರುವ ತಾಂತ್ರಿಕ ಪ್ರಗತಿಯಂತೂ ಅವರ್ಣ ನೀಯ. ಪುಟವಿನ್ಯಾಸದಿಂದ ಮೊದಲ್ಗೊಂಡು, ಲೇಖನಗಳನ್ನು ನಿರೂಪಿಸುವಿಕೆ, ಅತ್ಯಾಧುನಿಕ ತಂತ್ರಜ್ಞಾನದ ಮುದ್ರಣ, ಪ್ರಕಾಶನ, ಪುಸ್ತಕಗಳ ಶೇಖರಣೆ, ಸಂರಕ್ಷಣೆ ಮತ್ತು ಮಾರಾಟ ಇವೆಲ್ಲ ವನ್ನೂ ಒಳಗೊಂಡಂತೆ ಪ್ರತ್ಯೇಕ ಗ್ರಂಥಾಲಯ ವಿಜ್ಞಾನದ ಜ್ಞಾನಶಾಖೆ ಜನ್ಮತಾಳಿರುವುದು ಪುಸ್ತಕೋದ್ಯಮದ ಅವಶ್ಯಕತೆ ಮತ್ತು ಅದರ ಬೆಳವಣಿಗೆಗೆ ಸಮಾಜ ಕೈಗೊಂಡಿರುವ ಆದ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ.

ಈ ದಿಕ್ಕಿನಲ್ಲಿ ಆಲೋಚನೆ ಮಾಡಿದ ಭಾರತೀಯ ಗ್ರಂಥಾಲಯಗಳ ಪಿತಾಮಹ, ಗಣಿತ ಮತ್ತು ಗ್ರಂಥಾಲಯ ವಿಜ್ಞಾನ ತಜ್ಞ ಡಾ.ಎಸ್.ಆರ್. ರಂಗನಾಥನ್ ಅಸ್ಮರಣೀಯರು. ಸಾರ್ವಜನಿಕ ಗ್ರಂಥಾ ಲಯ ಇಲಾಖೆಯಡಿಯಲ್ಲಿ ರಾಜ್ಯಾದ್ಯಂತ ಇಂದು ಸುಮಾರು 1200 ಗ್ರಂಥಾಲಯಗಳಿದ್ದು, ಇವೆಲ್ಲವೂ ರಾಜ್ಯಮಟ್ಟದಲ್ಲಿ ಐಎಎಸ್ ಅಧಿಕಾರಿ ಆಯುಕ್ತರ ನಿಯಂತ್ರಣದಲ್ಲಿವೆ.

ಇವುಗಳಲ್ಲದೆ ಗ್ರಾಮೀಣ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಸುಮಾರು ೬ ಸಾವಿರ ಗ್ರಾಮ ಪಂಚಾ ಯಿತಿ ಗ್ರಂಥಾಲಯಗಳಿವೆ. ಇವು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಬದಲು ಗ್ರಾಮೀಣಾಭಿ ವೃದ್ಧಿ ಇಲಾಖೆಯ ನಿಯಂತ್ರಣದಲ್ಲಿವೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಗ್ರಂಥಾಲಯ ವಿಜ್ಞಾನ ದಲ್ಲಿ ಪರಿಣತಿ ಪಡೆದ ಅಧಿಕಾರಿಗಳಿಲ್ಲದೆ ಇವುಗಳ ನಿರ್ವಹಣೆ, ಗುಣಮಟ್ಟದ ಪುಸ್ತಕಗಳ ಖರೀದಿ ಸಮಂಜಸವಾಗಿ ಆಗುತ್ತಿಲ್ಲ. ಈ ಹಿಂದೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಧೀನದಲ್ಲಿದ್ದವು. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಡಿ ಯಲ್ಲಿರುವ ಮತ್ತು ಗ್ರಾಮ ಪಂಚಾಯಿತಿ ಗ್ರಂಥಾಲಯಗಳೆರಡನ್ನೂ ಒಟ್ಟುಗೂಡಿಸಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಡಿಯಲ್ಲಿ ತಂದರೆ, ಸುಮಾರು ೭ ಸಾವಿರ ಗ್ರಂಥಾಲಯ ಗಳಾಗುತ್ತವೆ.

ಹಾಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಐಎಎಸ್ ಆಯುಕ್ತರಿರುವುದರಿಂದ ಇವುಗಳ ನಿರ್ವಹಣೆಯೂ ದಕ್ಷತೆಯಿಂದಾಗುತ್ತದೆ. ಆಯುಕ್ತರ ಅಡಿಯಲ್ಲಿ, ಗ್ರಂಥಾಲಯದ ಬಗ್ಗೆ ಜ್ಞಾನ ವಿರುವ ಹಿರಿಯ ಪರಿಣತ ನಿರ್ದೇಶಕರೊಬ್ಬರನ್ನು ಹಿಂದೆ ಇದ್ದಂತೆ ನೇಮಿಸಿದಲ್ಲಿ ಇಲಾಖೆಯ ಸೇವಾ ಗುಣಮಟ್ಟ ಹೆಚ್ಚಾಗುತ್ತದೆ. ಆದರೆ ಪ್ರಸ್ತುತ, ನಿರ್ದೇಶಕರಿಲ್ಲದಿರುವುದು ದುರ್ದೈವ.

ಪುಸ್ತಕಗಳ ಖರೀದಿ

ಸಾರ್ವಜನಿಕ ಗ್ರಂಥಾಲಯಗಳಿಗೆ ಪ್ರತಿವರ್ಷ ಹೊಸ ಹೊಸ ಪುಸ್ತಕಗಳನ್ನು ಆಯ್ಕೆ ಮಾಡಿ ಖರೀದಿಸಲು ರಾಜ್ಯ ಸರಕಾರವು ತಜ್ಞರ ಸಮಿತಿಯೊಂದನ್ನು ನೇಮಿಸುತ್ತದೆ. ಈ ಸಮಿತಿ ಆಯ್ಕೆ ಮಾಡಿದ ಪುಸ್ತಕಗಳನ್ನು, ಗ್ರಂಥಾಲಯ ಇಲಾಖೆಯು ೨ ಹಂತದಲ್ಲಿ ಖರೀದಿ ಮಾಡುತ್ತಿತ್ತು. ಒಂದನೇ ಹಂತದಲ್ಲಿ ರಾಜ್ಯ ಮಟ್ಟದಲ್ಲಿ ಏಕಗವಾಕ್ಷಿ ಯೋಜನೆಯಡಿ ಆಯ್ಕೆಯಾದ ಪ್ರತಿಯೊಂದು ಶೀರ್ಷಿಕೆಯ (ಟೈಟಲ್) 300 ಪ್ರತಿಗಳನ್ನು ಖರೀದಿ ಮಾಡಿ ತನ್ನ ಅಧೀನದಲ್ಲಿರುವ ಎಲ್ಲ ಗ್ರಂಥಾಲಯಗಳಿಗೆ ವಿಲೇವಾರಿ ಮಾಡುತ್ತಿತ್ತು.

ಈ ಸಗಟು ಖರೀದಿ ಯೋಜನೆಗೆ ಸರಕಾರ ಹಣ ನೀಡಬೇಕು. ಆದರೆ, ಈ ಯೋಜನೆ ಕಳೆದ ೪ ವರ್ಷಗಳಿಂದ ನಿಂತು ಹೋಗಿದೆ. ಮತ್ತೊಂದು ಹಂತದಲ್ಲಿ, ಆಯ್ಕೆಯಾದ ಪುಸ್ತಕಗಳನ್ನು ಜಿಲ್ಲಾ ಉಪ ನಿರ್ದೇಶಕರುಗಳು ನೇರವಾಗಿ ಆಯಾಯ ಜಿಲ್ಲೆಯಲ್ಲಿ ಲಭ್ಯವಿರುವ ಗ್ರಂಥಾಲಯಗಳ ಸೆಸ್ ಹಣದಲ್ಲಿ ಖರೀದಿಸುತ್ತಾರೆ. ಈ ಹಂತದ ಪುಸ್ತಕ ಖರೀದಿಯಲ್ಲಿ ಪ್ರತಿ ಶೀರ್ಷಿಕೆಯ ಸುಮಾರು 500-800 ಪುಸ್ತಕಗಳು ಖರೀದಿಯಾಗುತ್ತವೆ. ಇದು ಇಂದಿಗೂ ಚಾಲ್ತಿಯಲ್ಲಿದೆ.

ಈ ಯೋಜನೆಗೆ ಹಣವು ಸ್ಥಳೀಯ ಸಂಸ್ಥೆಗಳ ಗ್ರಂಥಾಲಯ ಸೆಸ್'ನಿಂದ ಬರುವುದರಿಂದ ಸರಕಾರ ಪ್ರತ್ಯೇಕವಾಗಿ ಹಣ ನೀಡುವ ಅಗತ್ಯವಿಲ್ಲ. ಆದರೆ ಇದಕ್ಕೂ ಸರಕಾರವು ಬಜೆಟ್ ಅನುಮೋದನೆ ನೀಡಬೇಕಾಗಿದ್ದು ಅದು ನಿಧಾನವಾಗುವುದರಿಂದ ಹಾಗೂ ಪುಸ್ತಕಗಳ ಆಯ್ಕೆಯ ಪ್ರಕಟಣೆಯು ಕೂಡ ನಿಧಾನವಾಗುವುದರಿಂದ, ಈ ಯೋಜನೆಯು ಕೂಡ ವಿಳಂಬವಾಗುತ್ತಿದೆ.

ಕಳೆದ ೩ ವರ್ಷಗಳಿಂದ ಸಗಟು ಖರೀದಿ ಮಾಡಲಾದ ಪುಸ್ತಕಗಳು ಬೆಂಗಳೂರಿನ ಉಗ್ರಾಣದಲ್ಲಿದ್ದು, ಗ್ರಂಥಾಲಯಗಳಿಗೆ ಸರಬರಾಜಾಗದಿರುವುದರಿಂದ, ಜಾಗದ ಕೊರತೆಯಿಂದಾಗಿ ಪುಸ್ತಕಗಳನ್ನು ಈ ಯೋಜನೆಯಡಿ ಕೊಳ್ಳದೆ, ಸಗಟು ಖರೀದಿಯು ಕಳೆದ ೪ ವರ್ಷಗಳಿಂದ ಸ್ಥಗಿತವಾಗಿರುತ್ತದೆ.

ಆದ್ದರಿಂದ, ಇನ್ನು ಮುಂದೆ ಆಯ್ಕೆಯಾದ ಪುಸ್ತಕಗಳನ್ನು ಪ್ರಕಾಶಕರು ಮತ್ತು ಲೇಖಕರುಗಳೇ ನೇರವಾಗಿ ಗ್ರಂಥಾಲಯಗಳಿಗೆ ಸರಬರಾಜು ಮಾಡುವ ಮತ್ತು ಹಣವನ್ನು ಆಯುಕ್ತರು ಪಾವತಿಸುವ ಪದ್ಧತಿಯನ್ನು ಜಾರಿಗೆ ತರುವುದು ಈ ಸಮಸ್ಯೆಗೆ ಸೂಕ್ತ ಪರಿಹಾರವಾಗುತ್ತದೆ.

ಏಕಗವಾಕ್ಷಿ ಸಗಟು ಖರೀದಿ ಯೋಜನೆ ನಿರಂತರವಾಗಿ ನಡೆಯದಿರಲು ಈ ಯೋಜನೆಯು ಇದು ವರೆಗೂ ಸರಕಾರದಿಂದ ಕಾನೂನು ಬದ್ಧವಾಗಿ ಅನುಮೋದಿತ ಯೋಜನೆಯಾಗದೇ ಇರುವುದೇ ಕಾರಣ. ಇದರಿಂದಾಗಿ ಪುಸ್ತಕಗಳ ಖರೀದಿಗೆ ವಾರ್ಷಿಕ ಆಯವ್ಯಯದಲ್ಲಿ ಹಣವನ್ನು ಮೀಸಲಿ ಟ್ಟಿಲ್ಲ.

ಪ್ರತಿ ವರ್ಷ ಈ ಯೋಜನೆಯಡಿ ಸುಮಾರು ೭ರಿಂದ ೯ ಸಾವಿರ ಶೀರ್ಷಿಕೆಗಳ ಪುಸ್ತಕಗಳನ್ನು, ತಲಾ 300 ರಂತೆ ಖರೀದಿಸಲಾದ ಪುಸ್ತಕಗಳಿಗೆ ಅವಶ್ಯಕವಿರುವ ಮೊತ್ತವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಬೇಡಿಕೆ ಸಲ್ಲಿಸಿ ಗ್ರಂಥಾಲಯ ಇಲಾಖೆ ಪಡೆಯುತ್ತಿತ್ತು. ಆದರೆ 2021ರಿಂದ ಈ ಯೋಜನೆ ಹಲವಾರು ಕಾರಣಗಳಿಂದ ಮತ್ತು ಸರಕಾರದ ಉದಾಸೀನತೆಯಿಂದ ಸ್ಥಗಿತವಾಗಿರುತ್ತದೆ.

ಕಾನೂನುಬದ್ಧ ಯೋಜನೆ ಇದಾಗದಿರುವುದರಿಂದ ಯಾರೂ ಪುಸ್ತಕಗಳನ್ನು ಕೊಂಡುಕೊಳ್ಳಲೇ ಬೇಕೆಂಬ ಷರತ್ತನ್ನು ಹಾಕುವಂತಿಲ್ಲ ಎಂಬ ನೆಪವೊಡ್ಡಿ ಅಧಿಕಾರಿಗಳು ದಿವ್ಯನಿರ್ಲಕ್ಷ್ಯ ತೋರು ತ್ತಿರುವುದು ಸಹ ಈ ಯೋಜನೆ ನಿಂತಿರುವುದಕ್ಕೆ ಕಾರಣವಾಗಿದೆ.

ಗ್ರಾಮಪಂಚಾಯಿತಿ ಗ್ರಂಥಾಲಯಗಳು, ಗ್ರಂಥಾಲಯ ಇಲಾಖೆಯ ಅಧೀನದಲ್ಲಿ ಇಲ್ಲದಿರುವು ದರಿಂದ ಸಗಟು ಖರೀದಿ ಪುಸ್ತಕಗಳನ್ನು ವಿತರಿಸಲು ಗ್ರಂಥಾಲಯಗಳ ಕೊರತೆಯಾಗಿದೆ. ಅಲ್ಲದೆ, ಹಾಲಿ ಇರುವ ಗ್ರಂಥಾಲಯಗಳು ಈಗಾಗಲೆ ಪುಸ್ತಕಗಳಿಂದ ತುಂಬಿದ್ದು, ಜಾಗದ ಕೊರತೆಯೂ ಎದ್ದುಕಾಣುತ್ತಿದೆ.

ಅವಶ್ಯಕ ಹಳೆಯ ಪುಸ್ತಕಗಳನ್ನು ಗಣಕೀಕೃತಗೊಳಿಸಿ, ಒಂದೆರಡು ಹಾರ್ಡ್‌ಕಾಪಿಗಳನ್ನು ಇಟ್ಟು ಕೊಳ್ಳುವ ಪದ್ಧತಿಯನ್ನು ಜಾರಿಗೆ ತರುವುದರಿಂದ ಈ ಸಮಸ್ಯೆಗೆ ಸುಲಲಿತ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಸಾರ್ವಜನಿಕ ಗ್ರಂಥಾಲಯಗಳಲ್ಲಿ ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವಶ್ಯಕತೆ ಇರುವ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳ ಕೊರತೆ ಇದೆ. ಈ ಪುಸ್ತಕಗಳ ಬೆಲೆ ದುಬಾರಿಯಾಗಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಈ ದುಬಾರಿ ಬೆಲೆಯನ್ನು ತೆತ್ತು ಪುಸ್ತಕಗಳನ್ನು ಕೊಳ್ಳಲಾಗುತ್ತಿಲ್ಲ.

ಈ ಬಗೆಯ ಪುಸ್ತಕಗಳನ್ನು ಗ್ರಂಥಾಲಯಗಳು ಹೆಚ್ಚು ಹೆಚ್ಚು ಕೊಳ್ಳಬೇಕು. ಪ್ರಕಾಶಕರುಗಳು ಆಸಕ್ತಿ ವಹಿಸಿ ಸಂಬಂಧಿಸಿದ ಲೇಖಕರುಗಳಿಂದ ಈ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಬರೆಯಿಸಿ ಅವು ಗ್ರಂಥಾಲಯಗಳಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಸಗಟು ಖರೀದಿ ಯೋಜನೆಗೆ ಪ್ರತಿ ವರ್ಷ ಸುಮಾರು ೩೦ ಕೋಟಿ ರುಪಾಯಿಗಳು ಅವಶ್ಯಕವಿದ್ದು ಪ್ರತಿ ವರ್ಷದ ಆಯವ್ಯಯದಲ್ಲಿ ಹಣ ಒದಗಿಸಿ ಈ ಯೋಜನೆಯನ್ನು ಕಾನೂನುಬದ್ಧ ಗೊಳಿಸಿ, ಸರಕಾರ ಆದೇಶಿಸಿದಲ್ಲಿ ಮಾತ್ರ ಈ ಯೋಜನೆ ಶಾಶ್ವತವಾಗಿ ಸಾಗುತ್ತದೆ. ೩ ಲಕ್ಷ ಕೋಟಿ ರುಪಾಯಿ ಆಯವ್ಯಯವಿರುವ ಸರಕಾರಕ್ಕೆ ಪುಸ್ತಕೋದ್ಯಮದ ಬೆಳವಣಿಗೆಗೆ ವಾರ್ಷಿಕ ೩೦ ಕೋಟಿ ರು. ಖರ್ಚು ಮಾಡುವುದು ಭಾರವೇನಲ್ಲ. ಸರಕಾರವು ಸಗಟು ಖರೀದಿ ಯೋಜನೆಗೆ ಅಗತ್ಯ ಹಣವನ್ನು ಮೀಸಲಿಟ್ಟು, ಈ ಯೋಜನೆಯನ್ನು ಕಾನೂನುಬದ್ಧಗೊಳಿಸಿ ಅದು ಶಾಶ್ವತವಾಗಿ ಕಾರ್ಯಗತವಾಗುವಂತೆ ಮಾಡಬೇಕು.

ಈ ಮೂಲಕ, ಪುಸ್ತಕೋದ್ಯಮದಲ್ಲಿ ತೊಡಗಿಕೊಂಡಿರುವ ಲೇಖಕರು, ಮುದ್ರಕರು ಮತ್ತು ಪ್ರಕಾ ಶಕರುಗಳಿಗೆ ಉತ್ತೇಜನ ಕೊಟ್ಟು ಜ್ಞಾನಕೋಶಗಳನ್ನು ಸೃಷ್ಟಿಸಲು ಸಹಕಾರಿಯಾಗಬೇಕು. ಕಾಗದ ಮತ್ತು ಮುದ್ರಣದ ಬೆಲೆಗಳು ದುಬಾರಿಯಾಗಿರುವುದರಿಂದ ಪುಸ್ತಕದ ಪುಟದ ಬೆಲೆಯನ್ನು ಏರಿಸುವ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಬೇಕು. ಈ ಬಗ್ಗೆ ಸುಮಾರು ೧೦ ವರ್ಷಗಳ ಹಿಂದೆ ನಿಗದಿಪಡಿಸಿದ್ದ ಬೆಲೆಯನ್ನೇ ಇಂದೂ ನೀಡುತ್ತಿರುವುದು ಸಮಂಜಸವಲ್ಲ.

ಉಪನಿರ್ದೇಶಕರ ಹಂತದಲ್ಲಿ ಖರೀದಿ ಮಾಡುವ ಪುಸ್ತಕಗಳಿಗೂ ಪ್ರತಿವರ್ಷ ಅವರುಗಳು ಸರಕಾರದಿಂದ ಬಜೆಟ್‌ಗೆ ಅನುಮತಿ ಪಡೆಯಬೇಕೆಂಬ ಷರತ್ತು ಕೂಡ ನಿಗದಿತ ಕಾಲದಲ್ಲಿ ಪುಸ್ತಕ ಖರೀದಿಗೆ ತೊಡಕಾಗಿದೆ. ಈ ಬಗೆಗಿನ ಬಜೆಟ್ ಅನುಮೋದನೆಯನ್ನು ಆಯುಕ್ತರ ಹಂತದಲ್ಲಿ ಆಗುವಂತೆ ಕ್ರಮವಹಿಸಿದಲ್ಲಿ ಖರೀದಿ ಪ್ರಕ್ರಿಯೆ ಬಹು ಬೇಗ ಆಗಿ ಪುಸ್ತಕಗಳು ಓದುಗರಿಗೆ ಸಕಾಲಿಕ ವಾಗಿ ಲಭಿಸುತ್ತವೆ.

ಅಲ್ಲದೆ ಪುಸ್ತಕ ಆಯ್ಕೆ ಮತ್ತು ಪ್ರಕಟಣೆಗಳು ಸಹ ಕಾಲಾನುಕಾಲಕ್ಕೆ ಪ್ರತಿ ವರ್ಷ ನಿಗದಿತ ಸಮಯ ದಲ್ಲಿ ಆಗಬೇಕೆಂಬ ಕಾನೂನನ್ನು ರೂಪಿಸಬೇಕು. ಕಳೆದ ೪ ವರ್ಷಗಳಿಂದ ಪುಸ್ತಕ ಖರೀದಿ ಆಗದೇ ಲೇಖಕರು ಮತ್ತು ಪ್ರಕಾಶಕರುಗಳು ಮುದ್ರಿಸಿದ ಉಪಯುಕ್ತ ಪುಸ್ತಕಗಳು ಹಾಗೇ ಉಳಿದಿದ್ದು ಅವರುಗಳು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ.

ಈ ಅವಧಿಯ ಪುಸ್ತಕಗಳನ್ನು ಸಹ ಕೊಳ್ಳುವ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು. ಗ್ರಂಥಾಲಯ ಗಳಲ್ಲಿ ಪುಸ್ತಕಗಳನ್ನು ಶೇಖರಿಸಿಟ್ಟುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದೆ ಹಲವಾರು ಗ್ರಂಥಾಲಯ ಗಳಲ್ಲಿ ಪುಸ್ತಕಗಳನ್ನು ಮೂಟೆ ಕಟ್ಟಿ ಇಟ್ಟಿದ್ದಾರೆ. ಜ್ಞಾನ ದೇಗುಲಗಳಾಗಿರುವ ಗ್ರಂಥಾಲಯಗಳ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಅವಕ್ಕೆ ಮಾನವ ಸಂಪನ್ಮೂಲಗಳನ್ನು ಒದಗಿಸುವ ಬಗ್ಗೆಯೂ ಸರಕಾರ ಗಮನಹರಿಸಬೇಕು.

ಲೇಖಕರು, ಪ್ರಕಾಶಕರು ಮತ್ತು ಮುದ್ರಕರುಗಳನ್ನು ಪ್ರೋತ್ಸಾಹಿಸಿ ಪುಸ್ತಕ ಪ್ರೀತಿಯನ್ನು ಬೆಳೆಸಿ ಪುಸ್ತಕೋದ್ಯಮವನ್ನು ಬೆಳೆಸಬೇಕಾಗಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಇಂದು ಈ ಸಮಸ್ಯೆಗಳಿಂದ ನರಳುತ್ತಿದ್ದು, ಇವೆಲ್ಲವುಗಳಿಗೂ ಸೂಕ್ತ ಚಿಕಿತ್ಸೆ ನೀಡುವ ದಿಕ್ಕಿನಲ್ಲಿ ಸರಕಾರ ಬಹುಬೇಗ ಗಮನ ಹರಿಸಬೇಕು. ಆಹಾರ ಭಾಗ್ಯವನ್ನು ಸಂಪಾದಿಸಲು ಜ್ಞಾನಭಾಗ್ಯ ಅವಶ್ಯಕ ವಲ್ಲವೇ? ಸರಕಾರ ಇದನ್ನು ಮನಗಾಣಬೇಕಲ್ಲವೇ?

(ಲೇಖಕರು ಅಧ್ಯಕ್ಷರು, ಕರ್ನಾಟಕ ಲೇಖಕರ ಮತ್ತು

ಪ್ರಕಾಶಕರ ಒಕ್ಕೂಟ, ಮೈಸೂರು)