ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

R T Vittalmurthy Column: ವಿಜಯೇಂದ್ರ ಇಳೀತಿಲ್ಲ, ಭಿನ್ನರು ಬಿಡ್ತಿಲ್ಲ

ಇವತ್ತು ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಮಿತಿಮೀರಿ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಮುಂದಾ ಗಿದ್ದು ಇದರ ಪರಿಣಾಮವಾಗಿ ಹಿಂದೂ ಮತಬ್ಯಾಂಕಿನ ಕ್ರೋಡೀಕರಣವಾಗಬೇಕಿದೆ. ಇವತ್ತಿನ ಸ್ಥಿತಿ ಯಲ್ಲಿ ರಾಜ್ಯ ಬಿಜೆಪಿಯ ಯಾವುದೇ ನಾಯಕರಿಗಿಂತ ಬಲವಾಗಿ ಈ ಕೆಲಸ ಮಾಡಬಲ್ಲವರು ಬಸನಗೌಡ ಪಾಟೀಲ್ ಯತ್ನಾಳ್.

R T Vittalmurthy Column: ವಿಜಯೇಂದ್ರ ಇಳೀತಿಲ್ಲ, ಭಿನ್ನರು ಬಿಡ್ತಿಲ್ಲ

-

ಮೂರ್ತಿಪೂಜೆ

ಕಳೆದ ವಾರ ದಿಲ್ಲಿಗೆ ಹೋದ ರಾಜ್ಯ ಬಿಜೆಪಿಯ ಭಿನ್ನಮತೀಯರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿಯ ಸಂದರ್ಭದಲ್ಲಿ ಅವರು ಮೂರು ಬೇಡಿಕೆ ಗಳನ್ನು ಮುಂದಿಟ್ಟಿದ್ದಾರೆ. ಅಂದ ಹಾಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕು ಅಂತ ಹೋರಾಟ ನಡೆಸುತ್ತಿರುವ ಈ ಭಿನ್ನಮತೀಯ ನಾಯಕರು ಕೆಲ ಕಾಲದಿಂದ ಮೌನಕ್ಕೆ ಜಾರಿದ್ದರು. ಅದರಲ್ಲೂ ಮುಖ್ಯವಾಗಿ ಯಡಿಯೂರಪ್ಪ-ವಿಜಯೇಂದ್ರ ಜೋಡಿಯ ವಿರುದ್ಧ ಕೆಂಡ ಕಾರುತ್ತಿದ್ದ ಬಸನಗೌಡ ಪಾಟೀಲರನ್ನು ವರಿಷ್ಠರು ಪಕ್ಷದಿಂದ ಉಚ್ಚಾಟಿಸಿದರಲ್ಲ? ಇದಾದ ನಂತರ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಸೇರಿದಂತೆ ಭಿನ್ನಮತೀಯರ ಪಡೆ ಮೌನಕ್ಕೆ ಜಾರಿತ್ತು.

ಆದರೆ ಈಗ ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ನಡೆಯುತ್ತಿರುವ ಪೈಪೋಟಿಯು ಬಿಜೆಪಿ ಭಿನ್ನಮತೀಯರ ಪಾಳಯಕ್ಕೆ ಚೇತರಿಕೆ ತಂದಿದೆ. ಇವತ್ತು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ನಡೆಯುತ್ತಿರುವ ತಿಕ್ಕಾಟ ಯಾವ ಹಂತಕ್ಕೆ ಹೋದರೂ ಕಾಂಗ್ರೆಸ್ ಪಕ್ಷ ಸುಸ್ತಾಗುತ್ತದೆ.

ಹೀಗೆ ಸುಸ್ತಾದ ಕಾಂಗ್ರೆಸ್ ಪಕ್ಷ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನೆಲ ಕಚ್ಚುವುದು ಗ್ಯಾರಂಟಿ. ಇಂಥ ಪರಿಸ್ಥಿತಿಯಲ್ಲಿ ಯಾರೇ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದರೂ ಯಶಸ್ಸು ನಿಶ್ಚಿತ. ಹೀಗಾಗಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಬದಲು ತಮ್ಮ ಗುಂಪಿನವರೊಬ್ಬರು ಅಧ್ಯಕ್ಷರಾಗಿರಲಿ ಎಂಬುದು ಭಿನ್ನಮತೀಯ ನಾಯಕರ ಲೆಕ್ಕಾಚಾರ.

ಆದರೆ ರಾಜ್ಯ ಬಿಜೆಪಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಇಷ್ಟೇ ಸಾಲದಲ್ಲ? ಹಾಗಂತಲೇ ಕಳೆದ ವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿದ ಈ ನಾಯಕರು ಮೂರು ಬೇಡಿಕೆ ಗಳನ್ನು ಮುಂದಿಟ್ಟಿದ್ದಾರೆ. ಮೊದಲನೆಯದಾಗಿ ಪಕ್ಷದಿಂದ ಉಚ್ಚಾಟಿತರಾಗಿರುವ ನಾಯಕ ಬಸನಗೌಡ ಪಾಟೀಲರನ್ನು ವಾಪಸ್ಸು ಬಿಜೆಪಿಗೆ ಸೇರಿಸಿಕೊಳ್ಳಬೇಕು.

ಇದನ್ನೂ ಓದಿ: R T Vittalmurthy Column: ರಾಹುಲ್‌ ಗಾಂಧಿಯವರಿಗೆ ಒಪ್ಪಂದದ ಕತೆ ಬೇಕಿಲ್ಲ

ಇವತ್ತು ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಮಿತಿಮೀರಿ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಮುಂದಾಗಿದ್ದು ಇದರ ಪರಿಣಾಮವಾಗಿ ಹಿಂದೂ ಮತಬ್ಯಾಂಕಿನ ಕ್ರೋಡೀಕರಣವಾಗಬೇಕಿದೆ. ಇವತ್ತಿನ ಸ್ಥಿತಿಯಲ್ಲಿ ರಾಜ್ಯ ಬಿಜೆಪಿಯ ಯಾವುದೇ ನಾಯಕರಿಗಿಂತ ಬಲವಾಗಿ ಈ ಕೆಲಸ ಮಾಡ ಬಲ್ಲವರು ಬಸನಗೌಡ ಪಾಟೀಲ್ ಯತ್ನಾಳ್.

ಅವರನ್ನು ಪಕ್ಷಕ್ಕೆ ಕರೆತಂದು ಗುರುತರ ಜವಾಬ್ದಾರಿ ಹೊರಿಸಿದರೆ ಇದು ಸಾಧ್ಯ ಎಂಬುದು ಭಿನ್ನಮತೀಯರ ಬೇಡಿಕೆ. ಎರಡನೆಯದಾಗಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ವಿಜಯೇಂದ್ರ ಮುಂದುವರಿಯಬಾರದು. ಒಂದು ವೇಳೆ ತತ್ಕಾಲಕ್ಕೆ ಅವರು ಮುಂದುವರಿಯಬೇಕು ಅಂತ ವರಿಷ್ಠರು ಬಯಸಿದರೂ, ಪುನಃ ಕರ್ನಾಟಕಕ್ಕೆ ಬಂದು ಅವರನ್ನು ಹೊಸದಾಗಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವುದಾಗಿ ಘೋಷಿಸಬಾರದು.

ಮೂರನೆಯದಾಗಿ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸ್ಥಾನದಿಂದ ಆರ್.ಅಶೋಕ್ ಅವರನ್ನು ಕೆಳಗಿಳಿಸಬೇಕು. ಯಾಕೆಂದರೆ ರಾಜ್ಯ ಸರಕಾರದಲ್ಲಿ ಹಗರಣಗಳ ಮೇಲೆ ಹಗರಣ ನಡೆಯುತ್ತಿದ್ದರೂ ಅಶೋಕ್ ಅವರು ವ್ಯವಸ್ಥಿತವಾಗಿ ಅವನ್ನು ಬಯಲಿಗೆಳೆಯುತ್ತಿಲ್ಲ. ಇವತ್ತು ತನ್ನದೇ ಸಂಘರ್ಷ ದಲ್ಲಿ ಮುಳುಗಿರುವ ಸರಕಾರವನ್ನು ಪೇಚಿಗೆ ಸಿಲುಕಿಸುವ ಅವಕಾಶವಿದ್ದರೂ ಅಶೋಕ್ ಅದನ್ನು ಮಾಡುತ್ತಿಲ್ಲ. ಹೀಗಾಗಿ ಅವರನ್ನು ಕೆಳಗಿಳಿಸಿ ಸಮರ್ಥ ನಾಯಕರನ್ನು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ತರಬೇಕು ಎಂಬುದು ಭಿನ್ನಮತೀಯರ ಬೇಡಿಕೆ.

ಹೀಗೆ ಅವರು ಮುಂದಿಟ್ಟ ಬೇಡಿಕೆಗಳನ್ನು ಕೇಳಿಸಿಕೊಂಡ ಜಗತ್ ಪ್ರಕಾಶ್ ನಡ್ಡಾ ಅವರು, “ಈ ಎಲ್ಲ ಸಂಗತಿಗಳ ಬಗ್ಗೆ ನಾವು ಗಂಭೀರವಾಗಿ ಪರಿಶೀಲನೆ ನಡೆಸುತ್ತಿದ್ದೇವೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ನಿಖರ ತೀರ್ಮಾನ ತೆಗೆದುಕೊಳ್ಳುತ್ತೇವೆ" ಎಂದರಂತೆ.

ಸರಿಮಾಡಿಕೊಳ್ಳಿ ಬ್ರದರ್

ಹೀಗೆ ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲು ದಿಲ್ಲಿಗೆ ಹೋಗಿದ್ದ ರಮೇಶ್ ಜಾರಕಿ ಹೊಳಿ ಮತ್ತಿತರ ನಾಯಕರು, ಇದೇ ಸಂದರ್ಭದಲ್ಲಿ ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನೂ ಭೇಟಿ ಮಾಡಿದ್ದಾರೆ. ಎಷ್ಟೇ ಆದರೂ ಇವತ್ತು ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಆಪ್ತರು. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ವಿಜಯೇಂದ್ರ ದರ್ಬಾರಿಗೆ ಅವರ ಮೂಲಕ ಹೊಡೆತ ಕೊಡಬಹುದು ಎಂಬುದು ಈ ನಾಯಕರ ಲೆಕ್ಕಾಚಾರ.

ಹಾಗಂತಲೇ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಈ ನಾಯಕರು, “ಸರ್, ಇವತ್ತು ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮಿತ್ರಕೂಟದ ಪರವಾದ ಅಲೆ ಶುರುವಾಗುತ್ತಿದೆ. ಆದರೆ ಈ ಸಂದರ್ಭದಲ್ಲಿ ವಿಜಯೇಂದ್ರ ಬಿಜೆಪಿಯ ಅಧ್ಯಕ್ಷರಾಗಿರುವುದೇ ಸಮಸ್ಯೆ" ಎಂದಿದ್ದಾರೆ. ಅದರೆ ಈ ಮಾತುಗಳನ್ನು ಕೇಳಿಸಿಕೊಂಡ ಕುಮಾರಸ್ವಾಮಿಯವರು, “ಬ್ರದರ್, ಎಲ್ಲ ರಾಜಕೀಯ ಪಕ್ಷಗಳಲ್ಲೂ ಭಿನ್ನಾಭಿಪ್ರಾಯ ಇರುತ್ತದೆ. ಆದರೆ ನಿಮ್ಮ ನಿಮ್ಮ ಭಿನ್ನಾಭಿಪ್ರಾಯವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ.

ಯಾಕೆಂದರೆ ನಿಮಗೆ ಪ್ರಾಮಾಣಿಕವಾಗಿ ಹೇಳುತ್ತೇನೆ, ನಾವು ನಿಮ್ಮ ಪಕ್ಷದ ಜತೆ ಮೈತ್ರಿ ಮಾಡಿ ಕೊಂಡಿದ್ದೇವೆ ಮತ್ತು ಅದರ ಪರವಾಗಿ ಇರುತ್ತೇವೆ. ಆದರೆ ಯಾವ ಕಾರಣಕ್ಕೂ ನಿಮ್ಮ ಪಕ್ಷದ ಭಿನ್ನಮತದ ಜತೆಗಿಲ್ಲ" ಎಂದಿದ್ದಾರೆ.

ಕುಮಾರಸ್ವಾಮಿಯವರು ಹಾಗೆಯೇ ಮುಂದುವರಿದು, “ಇವತ್ತು ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಕೆಟ್ಟ ಸ್ಥಿತಿಗೆ ತಲುಪಿದೆ. ಅದರ ವೈಫಲ್ಯಗಳಿಂದ ಜನ ಎಷ್ಟು ಬೇಸತ್ತಿದ್ದಾರೆ ಎಂದರೆ ಮುಂದಿನ ದಿನಗಳಲ್ಲಿ ಅವರು ಬಿಜೆಪಿ-ಜೆಡಿಎಸ್ ಮಿತ್ರಕೂಟದ ಪರ ನಿಲ್ಲುತ್ತಾರೆ. ಇದೇ ರೀತಿ ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ನಡೆಯುತ್ತಿರುವ ಜಟಾಪಟಿ ಎಲ್ಲಿಗೆ ತಲುಪಿದೆ ಎಂದರೆ ಇನ್ನು ಕೆಲವೇ ದಿನಗಳಲ್ಲಿ ನಾವು ಏನೇನು ನೋಡುತ್ತೇವೋ ಗೊತ್ತಿಲ್ಲ.

ಪರಿಸ್ಥಿತಿ ಹೀಗಿರುವಾಗ ನಿಮ್ಮ ಪಕ್ಷದಲ್ಲಿರುವ ಗೊಂದಲವನ್ನು ಮೊದಲು ಸರಿಮಾಡಿಕೊಳ್ಳಿ. ಈಗ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಅಂದರೆ ತಾನೇ ನಮಗೆ ಕಾಂಗ್ರೆಸ್ ಪಕ್ಷದ ಗೊಂದಲದಿಂದ ಲಾಭವಾಗುವುದು?" ಎಂದು ಕೇಳಿದ್ದಾರೆ.

ಯಾವಾಗ ಅವರು ಇಷ್ಟು ಕ್ಲಿಯರ್ ಕಟ್ ಆಗಿ ಮಾತನಾಡಿದರೋ, ಆಗ ಬಿಜೆಪಿಯ ಭಿನ್ನರಿಗೆ ಹೆಚ್ಚು ಮಾತನಾಡುವುದೇನೂ ಉಳಿದಿಲ್ಲ. ಮೂಲಗಳ ಪ್ರಕಾರ, ಕುಮಾರಸ್ವಾಮಿ ಇಷ್ಟು ಟಫ್ ಆಗಿರುವು ದಕ್ಕೆ ಅವರಿಗಾಗಿರುವ ಅನುಭವಗಳೇ ಕಾರಣ. ಈ ಮುಂಚೆ ಬಿಜೆಪಿಯ ಇಬ್ಬಣಗಳ ನಾಯಕರು ತಮ್ಮ ಬಳಿ ದೂರು ಹೇಳಿಕೊಂಡಾಗ ಎಲ್ಲರನ್ನೂ ಅವರು ಸಂತೈಸಿ ಕಳಿಸುತ್ತಿದ್ದರು. ಅದರೆ ಇಂಥ ಸಂತೈಸುವಿಕೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಂದೇಶ ರವಾನಿಸುತ್ತಿದ್ದು‌ದರಿಂದ ಗೊಂದಲ ಗಳಾಗುತ್ತಿದ್ದವು.

ಯಾವಾಗ ಇದು ಗೊತ್ತಾಯಿತೋ, ಇದಾದ ನಂತರ ಯಾವ ಬಣದ ನಾಯಕರು ಬಂದು ದೂರು ಹೇಳಿದರೂ ಕುಮಾರಸ್ವಾಮಿ ಆ ಬಗ್ಗೆ ತಲೆ ಕಡಿಸಿಕೊಳ್ಳುತ್ತಿಲ್ಲ. ಬದಲಿಗೆ, “ಇವೆಲ್ಲ ಬೇಡ ಬ್ರದರ್, ಒಟ್ಟಾಗಿ ಹೋಗಿ" ಅನ್ನುವುದಕ್ಕೆ ಶುರು ಮಾಡಿದ್ದಾರೆ.

ದಂಡಯಾತ್ರೆಗೆ ನಿಖಿಲ್ ಸಜ್ಜು?

ಇನ್ನು, ಜೆಡಿಎಸ್ ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎರಡನೇ ಸುತ್ತಿನ ರಾಜ್ಯ ಪ್ರವಾಸಕ್ಕೆ ಅಣಿಯಾಗತೊಡಗಿzರೆ. ಮೊದಲನೇ ಸುತ್ತಿನ ಪ್ರವಾಸದಲ್ಲಿ ರಾಜ್ಯದ ಐವತ್ತಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಿಗೆ ಹೋಗಿದ್ದ ನಿಖಿಲ್ ಕುಮಾರಸ್ವಾಮಿ, ಆಯಾ ಕ್ಷೇತ್ರಗಳ ಜಾತಕ ಪಟ್ಟಿ ತಂದು ಅಲ್ಲಿ ಪಕ್ಷದ ಸೈನ್ಯ ಹೇಗೆ ರೂಪುಗೊಳ್ಲಬೇಕು? ವಾರ್ಡ್ ಕಮಿಟಿ, ಬೂತ್ ಕಮಿಟಿಗಳು ಹೇಗಿರಬೇಕು? ಎಂಬ ವಿಷಯಕ್ಕೆ ಫೈನಲ್ ಟಚ್ ಕೊಡುತ್ತಿದ್ದಾರೆ. ಅವರ ಈ ಕಸರತ್ತಿಗೆ ಸಾಥ್ ಕೊಡುತ್ತಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಈಗ ಪಕ್ಷದ ಸಂಘಟನೆಗೆ ಪ್ರತಿದಿನ ಎರಡು ಗಂಟೆ ಸಮಯ ನೀಡುತ್ತಿದ್ದಾರೆ. ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವುದು ಹೇಗೆ? ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾರು ಪಕ್ಷದ ಅಭ್ಯರ್ಥಿಗಳಾಗಬೇಕು? ಎಂಬುದನ್ನು ಪರಿಶೀಲಿಸು ತ್ತಿರುವ ಕುಮಾರಸ್ವಾಮಿ ಅವರಿಗೆ ಪುತ್ರ ನಿಖಿಲ್ ಅವರ ಮೊದಲ ಸುತ್ತಿನ ರಾಜ್ಯ ಪ್ರವಾಸ ಒಂದಷ್ಟು ಟಾನಿಕ್ ನೀಡಿದೆ. ಈ ಹಿನ್ನೆಲೆಯ ನಿಖಿಲ್ ಅವರ ಎರಡನೇ ಸುತ್ತಿನ ರಾಜ್ಯ ಪ್ರವಾಸಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಯಾವ್ಯಾವ ಕ್ಷೇತ್ರಗಳಿಗೆ ನಿಖಿಲ್ ಹೋಗಬೇಕು? ಎಂಬುದರ ಬ್ಲೂ ಪ್ರಿಂಟು ರೆಡಿಯಾಗುತ್ತಿದೆ. ಜೆಡಿಎಸ್ ಮೂಲಗಳ ಪ್ರಕಾರ, ಜನವರಿಯ ಹೊತ್ತಿಗೆ ನಿಖಿಲ್ ಕುಮಾರಸ್ವಾಮಿ ಮತ್ತೊಂದು ಸುತ್ತಿನ ದಂಡಯಾತ್ರೆ ಆರಂಭಿಸಲಿದ್ದಾರೆ.

ಸುರ್ಜೇವಾಲಾ ನಾಟ್ ರೀಚಬಲ್

ಅಂದ ಹಾಗೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಟಾಪ್ ಲೆವೆಲ್ಲಿಗೆ ಹೋಗಿದ್ದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಇದ್ದಕ್ಕಿದ್ದಂತೆ ನಾಟ್ ರೀಚಬಲ್ ಆಗಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಅಗಿ ಎರಡೂವರೆ ವರ್ಷ ಕಳೆದ ನಂತರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಎಂಬ ಮಾತಿಗೆ ಎಲ್ಲರಿಗಿಂತ ಹೆಚ್ಚು ಬಲ ತುಂಬಿದ್ದೇ ಸುರ್ಜೇವಾಲಾ. ಇದೇ ರೀತಿ ನಿಗಮ-ಮಂಡಳಿಗಳ ನೇಮಕಾತಿಯಿಂದ ಹಿಡಿದು ಸರಕಾರದ ಪ್ರತಿ ಯೊಂದು ಹೆಜ್ಜೆಗಳಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದ ಸುರ್ಜೇವಾಲಾ ಅವರು ಸಿದ್ದು ವಿರೋಧಿ ಕ್ಯಾಂಪಿಗೆ ಬಲ ತುಂಬಿದ್ದರು ಅವರ ಈ ಕೆಲಸದಿಂದ ಕೆರಳಿದ ಸಿದ್ದರಾಮಯ್ಯ ಅವರು, “ಈ ಸುರ್ಜೇವಾಲಾ ಅವರು ನಮ್ಮ ರಾಜ್ಯಕ್ಕೆ ಬೇಡ.

ತಕ್ಷಣ ವಾಪಸ್ಸು ಕರೆಸಿಕೊಳ್ಳಿ" ಅಂತ ರಾಹುಲ್ ಗಾಂಧಿಯವರಿಗೆ ಹೇಳಿದ್ದರು. ಆದರೆ ಆ ಸಂದರ್ಭ ದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಬಚಾವಾದ ಸುರ್ಜೇವಾಲಾ ಅವರು ಇತ್ತೀಚೆಗಂತೂ ವಿಪರೀತ ಆಕ್ಟೀವ್ ಆಗಿದ್ದರು. ಅದರೆ ಯಾವಾಗ ಸರಕಾರಕ್ಕೆ ಎರಡೂವರೆ ವರ್ಷ ಭರ್ತಿಯಾದರೂ ಸಿದ್ದರಾಮಯ್ಯ ಸಿಎಂ ಹುದ್ದೆ ಬಿಟ್ಟು ಕೊಡಲಿಲ್ಲವೋ, ಇದಾದ ನಂತರ ಡಿಕೆಶಿ ಕೆರಳಿ ನಿಂತರೆ ಸುರ್ಜೇವಾಲಾ ಥಂಡಾ ಹೊಡೆದುಹೋದರು.

ಕಾರಣ? ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಡಿಕೆಶಿ ಜತೆ ಬಲವಾಗಿ ನಿಂತ ಸುರ್ಜೇವಾಲಾ, “ಎರಡೂ ವರೆ ವರ್ಷದ ನಂತರ ನೀವು ಸಿಎಂ ಆಗುವುದು ಗ್ಯಾರಂಟಿ. ಅದಕ್ಕೇನು ಮಾಡಬೇಕೋ ಅದನ್ನು ನಾನು ಮಾಡುತ್ತೇನೆ. ಹೈಕಮಾಂಡ್ ಲೆವೆಲ್ಲಿನಲ್ಲಿ ನಾನು ಎಲ್ಲ ಮ್ಯಾನೇಜ್ ಮಾಡುತ್ತೇನೆ" ಅಂತ ಭರವಸೆ ತುಂಬತೊಡಗಿದರು.

ಅಂದ ಹಾಗೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಿಗೆ, ಅದರಲ್ಲೂ ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ಹೊತ್ತವರಿಗೆ ಒಂದು ಮಟ್ಟದ ಪವರ್ ಇರುವುದು ನಿಜ. ಯಾಕೆಂದರೆ ಹೈಕಮಾಂಡ್‌ನ ಬೇಕು-ಬೇಡಗಳನ್ನು ಪೂರೈಸಲು ರಾಜ್ಯದಿಂದ ಏನು ಅಗಬೇಕೋ?ಅದನ್ನು ಸ್ಥಳೀಯ ನಾಯಕರಿಗೆ ವಿವರಿಸಿ, ಆ ಮೂಲಕ ಹೈಕಮಾಂಡ್‌ನ ಇಚ್ಛೆಯು ನೆರವೇರುವಂತೆ ನೋಡಿಕೊಳ್ಳುವುದೇ ಉಸ್ತುವಾರಿಯ ಜವಾಬ್ದಾರಿ.

ಈ ಜವಾಬ್ದಾರಿ ಹೊತ್ತವರು ರಾಜ್ಯದ ನಾಯಕರ ಜತೆ ವ್ಯವಹರಿಸುವಾಗ ಹೈಕಮಾಂಡ್ ತಪ್ಪಿಯೂ ಅಡ್ಡ ಬರುವುದಿಲ್ಲ. ಆ ದೃಷ್ಟಿಯಿಂದ ಕಾಂಗ್ರೆಸ್ ಹೈಕಮಾಂಡ್ ಸುರ್ಜೇವಾಲಾ ಅವರಿಗೆ -ಲ್ಲು ಪವರ್ ನೀಡಿತ್ತು ಮತ್ತು ಈ ಪವರ್ ಬಳಸಿಕೊಂಡ ಸುರ್ಜೇವಾಲಾ ಅವರು ಹೈಕಮಾಂಡ್ ಲೆವೆಲ್ಲಿ ನಲ್ಲಿ ಹಲವು ಬಾರಿ ಸಿದ್ದು ಆಟಕ್ಕೆ ಅಡ್ಡೇಟು ಹೊಡೆದು ಡಿಕೆಶಿ ಆಟಕ್ಕೆ ಕಲರ್ ತುಂಬು ತ್ತಿದ್ದರು.

ಹೀಗೆ ಸುರ್ಜೇವಾಲಾ ಆಡುವ ಗೇಮುಗಳನ್ನು ನೋಡಿದ ಡಿಕೆಶಿ, ತಮಗೆ ಸಿಎಂ ಪಟ್ಟ ದೊರಕಿಸಿ ಕೊಡಲು ಹೈಕಮಾಂಡ್ ಲೆವೆಲ್ಲಿನಲ್ಲಿ ಸುರ್ಜೇವಾಲಾ ಪ್ರಭಾವ ಬೀರುತ್ತಾರೆ ಅಂತ ನಂಬಿ ಕೊಂಡರು.

ಅವರು ತಮ್ಮನ್ನು ನಂಬಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದ ಸುರ್ಜೇವಾಲಾ ಕೂಡಾ ಟೈಮು ಸಿಕ್ಕಾಗಲೆಲ್ಲ ಬೆಂಗಳೂರಿಗೆ ಬಂದು ಪುಲ್ಲು ವರ್ಕ್‌ಔಟ್ ಮಾಡುವ ಪೋಸ್ ಕೊಡುತ್ತಿದ್ದರು. ಆದರೆ ಯಾವಾಗ ರಾಜ್ಯ ಸರಕಾರಕ್ಕೆ ಎರಡೂವರೆ ವರ್ಷ ಕಳೆಯಿತೋ ? ಮತ್ತು ಸಿಎಂ ಹುದ್ದೆ ಬಿಟ್ಟು ಕೊಡಲು ನಾನು ತಯಾರಿಲ್ಲ ಅಂತ ಸಿದ್ದರಾಮಯ್ಯ ಗುಡುಗಿದರೋ? ಆಗ ಸುರ್ಜೇವಾಲಾ ಥಂಡಾ ಹೊಡೆದರೆ, ಡಿಕೆಶಿ ಬಭ್ರುವಾಹನನಂತೆ ಉರಿದುಬಿದ್ದರು.

ಯಾವಾಗ ಈ ಬೆಳವಣಿಗೆ ಆಯಿತೋ, ಆಗ ಸುರ್ಜೇವಾಲಾ ಕರ್ನಾಟಕದ ಕಡೆಗಿನ ಟ್ರಿಪ್ಪು ಕಡಿಮೆ ಮಾಡಿ, ಹರಿಯಾಣದ ಕಡೆ ಓಡೋಡಿ ಹೋಗತೊಡಗಿದರು. ಅರ್ಥಾತ್, ಸಿಎಂ ಹುದ್ದೆ ಪಡೆಯುವ ವಿಷಯದಲ್ಲಿ ಈಗ ಡಿಕೆಶಿ ಸ್ವಯಂ ಶಕ್ತಿಯಿಂದ ಹೋರಾಡುತ್ತಿದ್ದಾರೆ. ಸುರ್ಜೇವಾಲಾ ಈ ಆಟದಿಂದ ಹಿಂದೆ ಸರಿದಿದ್ದಾರೆ.