Ranjith H Ashwath Column: ತಳಮಟ್ಟದಲ್ಲಿ ಬಿಜೆಪಿಗೆ ಲಾಭ ತಂದ ಪಾದಯಾತ್ರೆ !
ಮುಡಾ ಪಾದಯಾತ್ರೆಯ ಬಳಿಕ ರಾಜ್ಯ ಸರಕಾರದ ವಿರುದ್ಧ ಗಟ್ಟಿ ಧ್ವನಿಯಲ್ಲಿ ‘ಫೀಲ್ಡ್’ಗಿಳಿದು ಹೋರಾಟ ನಡೆಸಿದ್ದು ಇದೇ ಆಗಿತ್ತು. ಮುಡಾ ಪಾದಯಾತ್ರೆಯ ಬಳಿಕ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಿಗೆ ಅಥವಾ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದಕ್ಕೆ ಸೀಮಿತವಾಗಿದ್ದ ಬಿಜೆಪಿ ನಾಯಕರು, ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಮಳೆಗಾಲದ ಅಧಿವೇಶನದ ಉದ್ದಕ್ಕೂ ಸದನ ದೊಳಗೆ ಪ್ರತಿಭಟನೆ ನಡೆಸಿದ್ದು, ಅದಾದ ಬಳಿಕ ರಾಜೀನಾಮೆಗೆ ಆಗ್ರಹಿಸಿ ಸುಮಾರು 200 ಕಿಮೀ ನಡೆಯಲು ಪಾದಯಾತ್ರೆ ಘೋಷಿಸುತ್ತಿದ್ದಂತೆ ಪಕ್ಷ ಕೇಡರ್ ಚುರುಕಾಯಿತು.
-
ಅಶ್ವತ್ಥಕಟ್ಟೆ
ದೇಶದ ರಾಜಕಾರಣಕ್ಕೂ ಪಾದಯಾತ್ರೆಗಳಿಗೂ ಅದೊಂದು ರೀತಿಯ ವಿಶಿಷ್ಟ ಸಂಬಂಧವಿದೆ. ಆಡಳಿತ ಪಕ್ಷದ ಹುಳುಕನ್ನು ಜನರ ಮುಂದಿಡಲು, ಸರಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು, ಸರಕಾರದ ಮೇಲೆ ಒತ್ತಡ ತರಲು ಪಾದಯಾತ್ರೆಗಳು ಆಯಾ ಕಾಲಕ್ಕೆ ಅಂದಿನ ಪ್ರತಿಪಕ್ಷಗಳಿಗೆ ಸಹಾಯ ಮಾಡಿಕೊಂಡೇ ಬಂದಿವೆ.
ಇಂತಹ ಪಾದಯಾತ್ರೆಗಳು ಕರ್ನಾಟಕಕ್ಕೆ ಹೊಸದೇನಲ್ಲ. ಇಂತಹ ಹತ್ತಾರು ಪಾದಯಾತ್ರೆಗಳು ನಾಯಕರು ಹಾಗೂ ಪಕ್ಷಗಳನ್ನು ಆಯಾ ಕಾಲಘಟ್ಟದಲ್ಲಿ ಕೈಹಿಡಿದಿರುವುದಕ್ಕೆ ಹತ್ತಾರು ನಿದರ್ಶನ ಗಳಿವೆ. ಕರ್ನಾಟಕ ದಲ್ಲಿ ಹತ್ತಾರು ಪಾದಯಾತ್ರೆಗಳು ನಡೆದಿವೆ. ಅದರಲ್ಲಿಯೂ ಗಣಿ ಜಿಲ್ಲೆ ಬಳ್ಳಾರಿ ರಾಜಕೀಯಕ್ಕೆ ಪಾದಯಾತ್ರೆಯ ‘ಎಫೆಕ್ಟ್’, ಸೈಡ್ ಎಫೆಕ್ಟ್ ಬಗ್ಗೆ ಬಿಡಿಸಿ ಹೇಳಬೇಕಿಲ್ಲ. ಆದರೆ ಈ ಬಾರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಘೋಷಿಸಿದ್ದ ರಾಯಚೂರು-ಬಳ್ಳಾರಿ ಪಾದಯಾತ್ರೆ ಯೇ ಭಿನ್ನವಾಗಿ ಸಾಗಿತ್ತು.
ಮುಡಾ ಪಾದಯಾತ್ರೆಯ ಬಳಿಕ ರಾಜ್ಯ ಸರಕಾರದ ವಿರುದ್ಧ ಗಟ್ಟಿ ಧ್ವನಿಯಲ್ಲಿ ‘ಫೀಲ್ಡ್’ಗಿಳಿದು ಹೋರಾಟ ನಡೆಸಿದ್ದು ಇದೇ ಆಗಿತ್ತು. ಮುಡಾ ಪಾದಯಾತ್ರೆಯ ಬಳಿಕ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಿಗೆ ಅಥವಾ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದಕ್ಕೆ ಸೀಮಿತವಾಗಿದ್ದ ಬಿಜೆಪಿ ನಾಯಕರು, ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಮಳೆಗಾಲದ ಅಧಿವೇಶನದ ಉದ್ದಕ್ಕೂ ಸದನ ದೊಳಗೆ ಪ್ರತಿಭಟನೆ ನಡೆಸಿದ್ದು, ಅದಾದ ಬಳಿಕ ರಾಜೀನಾಮೆಗೆ ಆಗ್ರಹಿಸಿ ಸುಮಾರು 200 ಕಿಮೀ ನಡೆಯಲು ಪಾದಯಾತ್ರೆ ಘೋಷಿಸುತ್ತಿದ್ದಂತೆ ಪಕ್ಷ ಕೇಡರ್ ಚುರುಕಾಯಿತು.
ಇದನ್ನೂ ಓದಿ: Ranjith H Ashwath Column: ಅಹಿಂದ ಮತಬ್ಯಾಂಕ್ ಹಿಡಿಯೋರ್ಯಾರು ?
ವಾಲ್ಮೀಕಿ ನಿಗಮದಲ್ಲಿನ ಅಕ್ರಮ ಪ್ರಕರಣದಲ್ಲಿ ಬಂಧಿತವಾಗಿದ್ದ ಬಿ.ನಾಗೇಂದ್ರ ಅವರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಂಪುಟಕ್ಕೆ ಸೇರಿಸಿಕೊಂಡ ಬಳಿಕ, ನಾಗೇಂದ್ರ ರಾಜೀನಾಮೆಗೆ ಬಿಜೆಪಿ ನಿರಂತರ ವಾಗಿ ಹೋರಾಟ ಮಾಡಿಕೊಂಡು ಬಂದಿತ್ತು. ಮಳೆಗಾಲದ ಅಧಿವೇಶನದಲ್ಲಿ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ನಡೆಸಿ ನಿರಂತರ ಧರಣಿಯಿಂದ ಎರಡು ದಿನವೇ ಮೊದಲೇ ಅಧಿವೇಶನವನ್ನು ಬರ್ಕಾಸ್ತುಗೊಳಿಸುವ ತೀರ್ಮಾನವನ್ನು ಸರಕಾರ ಕೈಗೊಂಡಿತ್ತು.
ಸರಕಾರದ ಸದನವನ್ನು ಬರ್ಕಾಸ್ತುಗೊಳಿಸುತ್ತಿದ್ದಂತೆ ಬಿಜೆಪಿ ನಾಯಕರು ಪಾದಯಾತ್ರೆಯನ್ನು ಘೋಷಿಸಿದ್ದರು. ಈ ಮೂಲಕ ಈ ವಿಷಯವನ್ನು ಜೀವಂತವಾಗಿಡುವ ಮೂಲಕ ಸರಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸುವ ಪ್ರಯತ್ನಕ್ಕೆ ಕೈಹಾಕಿತ್ತು. ಆದರೆ ಇದರ ಒಳಾರ್ಥ ಅರಿತುಕೊಂಡೇ ನಾಗೇಂದ್ರ ಕಡೆಯಿಂದ ಹೈಕಮಾಂಡ್ ರಾಜೀನಾಮೆ ಪಡೆದು ಇಡೀ ಪಾದಯಾತ್ರೆ ಯ ‘ಅಗತ್ಯ’ತೆಯ ಪ್ರಶ್ನೆ ಏಳುವಂತೆ ಮಾಡಿತ್ತು.
ರಾಜೀನಾಮೆಗೆ ಆಗ್ರಹಿಸಿ ಪಾದಯಾತ್ರೆ ಆರಂಭಗೊಂಡಿದ್ದರಿಂದ ನಾಗೇಂದ್ರ ರಾಜೀನಾಮೆಯ ಬಳಿಕ ಪಾದಯಾತ್ರೆಯೇ ಮೊಟಕಾಗಬಹುದು ಎನ್ನುವ ಮಾತುಗಳು ಕೇಳಿಬಂದಿತ್ತು. ಮೈತ್ರಿ ಪಕ್ಷದ ನಾಯಕ, ಕೇಂದ್ರ ಸಚಿವ ಕುಮಾರಸ್ವಾಮಿ ಅವರೂ, ‘ರಾಜೀನಾಮೆ ನೀಡಿದ ಬಳಿಕ ಪಾದಯಾತ್ರೆ ಏಕೆ’ ಎನ್ನುವ ಪ್ರಶ್ನೆಯನ್ನು ಎತ್ತಿದ್ದರು. ನಾಗೇಂದ್ರ ರಾಜೀನಾಮೆಯ ಹೊರತಾಗಿಯೂ ಭಿನ್ನ ವಿಷಯಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಮಾಡಬೇಕೆಂಬ ಲೆಕ್ಕಾಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿದ್ದರು.
ಈ ಮೂಲಕ ಬಿಜೆಪಿಯಲ್ಲಿ ತಮ್ಮ ವಿರುದ್ಧ ಸ್ವಪಕ್ಷೀಯರೇ ಮಾಡಿದ್ದ ಹತ್ತಾರು ಆರೋಪಗಳಿಗೆ ಉತ್ತರಿಸಲು, ಹೊದಿಕೆ ಹೊದ್ದು ಮಲಗಿದ್ದ ಸಂಘಟನೆಗೆ ಚುರುಕು ಮುಟ್ಟಿಸಲು ಹಾಗೂ ಕಾಂಗ್ರೆಸ್ ಸರಕಾರದ ವಿರುದ್ಧ ಜನಾಕ್ರೋಶ ಹೆಚ್ಚಿಸಿ, ಮುಂದಿನ ಚುನಾವಣೆಗೆ ಅದರ ಲಾಭವನ್ನು ಪಡೆಯುವ ಆಲೋಚನೆ ಮಾಡಿದರು. ಆದ್ದರಿಂದ ನಾಗೇಂದ್ರ ರಾಜೀನಾಮೆ ನೀಡಿದ್ದರೂ, ಬರ ಪರಿಹಾರ, ಭ್ರಷ್ಟಾಚಾರ ಆರೋಪ, ದಲಿತರ ಅನುದಾನ ದುರ್ಬಳಕೆ ಸೇರಿದಂತೆ ಹತ್ತಕ್ಕು ಹೆಚ್ಚು ವಿಷಯ ಗಳನ್ನು ದಿನಕ್ಕೊಂದರಂತೆ ಜನರ ಮುಂದಿಡುವುದಾಗಿ ಪಾದಯಾತ್ರೆಯ ಉದ್ದೇಶವನ್ನು ಪರಿಷ್ಕರಿಸಿ ಕೊಂಡು ಆರಂಭಿಸಿದರು.
ಪಾದಯಾತ್ರೆಯ ಉದ್ದೇಶದ ಬಗ್ಗೆಯೇ ಸ್ಪಷ್ಟನೆ ಇಲ್ಲದೇ ಇದಿದ್ದರಿಂದ ಬಿಜೆಪಿಯ ಬಹುತೇಕ ರಾಜ್ಯ ನಾಯಕರು ನೈತಿಕ ಬೆಂಬಲ ಅಥವಾ ಸಾಂಕೇತಿಕ ಬೆಂಬಲಕ್ಕೆ ಸೀಮಿತವಾದರು. ಮುಂಗಾರು ಕೈಕೊಟ್ಟಿದ್ದರಿಂದ ರಾಯಚೂರು-ಬಳ್ಳಾರಿ ಬಿಸಿಲಿನಲ್ಲಿ ನಮ್ಮಿಂದ ನಡೆಯಲು ಸಾಧ್ಯವಿಲ್ಲ ಎಂದು ದೂರ ಉಳಿದರು. ಪ್ರತಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ರಾಜ್ಯ ನಾಯಕರು ಈ ಪಾದಯಾತ್ರೆ ಯನ್ನು ಬಿಜೆಪಿ ಪಾದಯಾತ್ರೆ ಎಂದು ನೋಡುವುದಕ್ಕಿಂತ ‘ವಿಜಯೇಂದ್ರ ಪಾದ ಯಾತ್ರೆ’ ಎನ್ನುವಂತೆ ನೋಡಿದರು.
ಅಶೋಕ್ ಮೊದಲ ದಿನ ಹೆಜ್ಜೆಹಾಕಿದ್ದು ಬಿಟ್ಟರೆ ಕಾಣಿಸಿಕೊಂಡಿದ್ದು ಕೊನೆಯ ದಿನವೇ. ಮೊದಲ ದಿನ ನಡೆದ ಬಳಿಕ ಕಾಲು ನೋವಿನ ನೆಪ ಕೇಳಿ ಅಶೋಕ್ ಬೆಂಗಳೂರಿಗೆ ಮುಖ ಮಾಡಿದರು. ಇಲ್ಲಿ ದಿನಕ್ಕೊಂದು ಸುದ್ದಿಗೋಷ್ಠಿಗಳ ಮೂಲಕ ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಒಂದು ವೇಳೆ ಆರೋಗ್ಯ ಸಮಸ್ಯೆ ಇದ್ದರೆ ವಿಜಯೇಂದ್ರ ಅವರೊಂದಿಗೆ ಕಾಲ್ನಡಿಗೆ ಮಾಡುವ ಬದಲು ವಾಹನದಲ್ಲಿಯೇ ಪಾದಯಾತ್ರೆಯ ರ್ಯಾಲಿಯ ಹಿಂದೆ ಹೋಗಬಹುದಾಗಿತ್ತು.
ಪ್ರತಿಪಕ್ಷ ನಾಯಕರಾಗಿ ಇದನ್ನು ಮಾಡದೇ ಬೆಂಗಳೂರಿಗೆ ಮುಖ ಮಾಡಿದ್ದು ಪಕ್ಷದೊಳಗೆ ಹಾಗೂ ಹೊರಗೆ ಬೇರೆ ರೀತಿಯದ್ದೇ ಸಂದೇಶ ರವಾನೆಯಾಗುವಂತೆ ಮಾಡಿತು ಎಂದರೆ ತಪ್ಪಾಗುವುದಿಲ್ಲ. ಇನ್ನು ರಾಜ್ಯ ಬಿಜೆಪಿಯ ಪ್ರಮುಖ ನಾಯಕರಾದ ಪ್ರಲ್ಹಾದ್ ಜೋಶಿ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ನಾಯಕರು ಸಮಾರೋಪ ಸಮಾರಂಭದಲ್ಲಿ ಕಾಣಿಸಿ ಕೊಂಡಿದ್ದು ಬಿಟ್ಟರೆ ಇನ್ನೆಲ್ಲೂ ಕಾಣಿಸಿಕೊಳ್ಳಲಿಲ್ಲ. ಈ ಎಲ್ಲದರ ಹೊರತಾಗಿ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆ ಹಾಗೂ ಬಳ್ಳಾರಿ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆಗೆ ಈ ಪಾದಯಾತ್ರೆಯನ್ನು ಬಳಸಿಕೊಳ್ಳುವಲ್ಲಿ ವಿಜಯೇಂದ್ರ ಯಶಸ್ವಿಯಾದರು ಎಂದರೆ ತಪ್ಪಾಗುವು ದಿಲ್ಲ.
ಇದಕ್ಕೆ ಪೂರಕವಾಗಿ ಬಿಜೆಪಿಯ ಕಾರ್ಯಕರ್ತರು ಬೆಂಬಲಿಸಿದ್ದರು. ಇದರ ಫಲವೇ ಬಿಜೆಪಿಯ ಕೇಡರ್‌ನಲ್ಲಿ ಹೊಸದೊಂದು ಉತ್ಸಾಹ ಬಂದಿದೆ. ಅಷ್ಟರ ಮಟ್ಟಿಗೆ ಈ ಪಾದಯಾತ್ರೆಯಲ್ಲಿ ವಿಜಯೇಂದ್ರ ಯಶಸ್ವಿ ಯಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಈ ಪಾದಯಾತ್ರೆಯಿಂದ ರಾಜ್ಯ ಬಿಜೆಪಿಯ ಇಡೀ ಚಿತ್ರಣ ಬದಲಾವಣೆಯಾಗಿದೆ ಎಂದಲ್ಲ. ಆದರೆ ಚುನಾವಣೆಗೆ 18 ತಿಂಗಳು ಇರುವ ಈ ಸಮಯದಲ್ಲಿ ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಭಾಗದಲ್ಲಿ ಬಿಜೆಪಿಯ ಸಂಘಟನೆಗೆ ಹೊಸ ಕಿಚ್ಚು ಹೊತ್ತಿಸುವ ಪ್ರಯತ್ನ ಮಾಡಲಾಗಿದೆ.
ಒಂದು ಕಾಲದಲ್ಲಿ ಬಿಜೆಪಿಯ ಭದ್ರಕೋಟೆ ಎನಿಸಿದ್ದ ಹತ್ತಾರು ಕ್ಷೇತ್ರಗಳನ್ನು ಮರಳಿ ಪಡೆಯುವ, ಹರಿದು ಹಂಚಿರುವ ಅಥವಾ ತಟಸ್ಥವಾಗಿರುವ ಬಿಜೆಪಿಯ ಮತಬ್ಯಾಂಕ್‌ನ್ನು ಒಗ್ಗೂಡಿಸುವಲ್ಲಿ ಈ ಪಾದಯಾತ್ರೆ ಒಂದು ಹಂತಕ್ಕೆ ಯಶಸ್ವಿಯಾಗಿದೆ ಎನ್ನುವುದು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಹಲವು ಕಾರ್ಯಕರ್ತರ ಮಾತಾಗಿದೆ. ಹಾಗೇ ನೋಡಿದರೆ, ಕರ್ನಾಟಕದ ಇತಿಹಾಸದಲ್ಲಿ ಪಾದಯಾತ್ರೆಗಳು ಪ್ರಮುಖ ಪಾತ್ರವಹಿಸಿದೆ.
ಕಳೆದ ಎರಡು-ಎರಡುವರೆ ದಶಕದ ರಾಜಕೀಯ ಇತಿಹಾಸದಲ್ಲಿ ಪಾದಯಾತ್ರೆ ನಡೆದಿರುವ ಕಡೆ ಆಯಾ ಪಕ್ಷಕ್ಕೆ ಲಾಭವೇ ಆಗಿದೆ. ಇದೇ ಬಳ್ಳಾರಿಗೆ ರೆಡ್ಡಿಗಳ ವಿರುದ್ಧ ತೊಡೆತಟ್ಟಿ ಅಂದಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಗಳೂರು-ಬಳ್ಳಾರಿ ಚಲೋ ನಡೆಸಿತ್ತು. ಈ ಪಾದಯಾತ್ರೆ ಪಕ್ಷಕ್ಕೆ ಭಾರಿ ಲಾಭ ತಂದುಕೊಡುವುದಷ್ಟೇ ಅಲ್ಲದೇ, ಸಿದ್ದರಾಮಯ್ಯ ಅವರ ವೈಯಕ್ತಿಕ ವರ್ಚಸ್ಸನ್ನು ದೊಡ್ಡ ಪ್ರಮಾಣದಲ್ಲಿ ವೃದ್ಧಿಸಿತ್ತು. ಅದಾದ ಬಳಿಕ 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ‘ಸರಳ’ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿತ್ತು.
ಇನ್ನು ಪಾದಯಾತ್ರೆ ಸಾಗಿದ ಕ್ಷೇತ್ರಗಳಲ್ಲಿ ಪಕ್ಷದ ವೋಟ್ ಶೇರ್ ಸಹ ಹೆಚ್ಚಾಗಿತ್ತು ಎನ್ನುವುದು ಅಂಕಿ-ಅಂಶಗಳಿಂದ ಸ್ಪಷ್ಟ. 2008ರಲ್ಲಿ ಕೇವಲ ಒಂದು ಸ್ಥಾನವನ್ನು ಗೆದಿದ್ದ ಕಾಂಗ್ರೆಸ್ 2013ರ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಮೂರು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಬಿಜೆಪಿಯ ಭದ್ರಕೋಟೆ ಎನಿಸಿದ್ದ ಬಳ್ಳಾರಿಯಲ್ಲಿ, 2013ರ ಚುನಾವಣೆಯಲ್ಲಿ ಕಾಣಿಸಿಕೊಂಡ ಬಿರುಕನ್ನೇ ಬಳಸಿಕೊಂಡು 2018ರ ವೇಳೆಗೆ ಆರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.
ಇನ್ನು ಬಳ್ಳಾರಿ ಪಾದಯಾತ್ರೆಯ ಬಳಿಕ ಈ ಪ್ರಮಾಣದಲ್ಲಿ ನಡೆದ ಮತ್ತೊಂದು ಪಾದಯಾತ್ರೆ ಯೆಂದರೆ ಅದು 2022ರಲ್ಲಿ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಅಂದಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಈ ಪಾದಯಾತ್ರೆ ಕರೋನಾ ಮಾರ್ಗಸೂಚಿಯ ಕಾರಣಕ್ಕೆ ಅರ್ಧಕ್ಕೆ ಮೊಟಕುಗೊಂಡರೂ, ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮೈಕೊಡವಿಕೊಳ್ಳಲು ಸಹಾಯ ಮಾಡಿದ್ದಂತೂ ಸುಳ್ಳಲ್ಲ.
2018ರಲ್ಲಿ ಹಳೇ ಮೈಸೂರು ಭಾಗದಲ್ಲಿಯೇ 29 ಶಾಸಕರನ್ನು ಹೊಂದಿದ್ದ ಜೆಡಿಎಸ್ 23ರ ಚುನಾವಣೆಯಲ್ಲಿ 15ಕ್ಕೆ ಕುಸಿದಿತ್ತು. ಇನ್ನು ಕಾಂಗ್ರೆಸ್ ಬರೋಬ್ಬರಿ 20 ಕ್ಷೇತ್ರಗಳನ್ನು ಹೆಚ್ಚುವರಿ ಯಾಗಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಎರಡು ಪಾದಯಾತ್ರೆಗಳನ್ನು ಕಾಂಗ್ರೆಸ್ ನಡೆಸಿ ಲಾಭ ಪಡೆದು ಕೊಂಡಿತ್ತು. ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದ ಮೇಲೆ ವಿಜಯೇಂದ್ರ ಕೂತ ಕೆಲವೇ ದಿನದಲ್ಲಿ ಮುಡಾ ಹಗರಣ ಭಾರಿ ಪ್ರಮಾಣದಲ್ಲಿ ಸದ್ದು ಮಾಡಿತ್ತು. ಆದರೆ ಈ ವಿಷಯವನ್ನು ಎತ್ತಿಕೊಳ್ಳುವುದಕ್ಕೆ ಬಿಜೆಪಿ ಮನೆಯೊಂದು ಮೂರು ಬಾಗಿಲಿನಂತಾಗಿತ್ತು.
ಒಂದೆಡೆ ವಿಜಯೇಂದ್ರ ವಿರುದ್ಧ ಯತ್ನಾಳ್ ಮತ್ತು ಟೀಂ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದರೆ, ಇನ್ನೊಂದೆಡೆ ವಿಜಯೇಂದ್ರ, ಅಶೋಕ್, ಸಂಘ, ತಟಸ್ಥ ಹೀಗೆ ಹತ್ತಾರು ಗುಂಪುಗಳಾಗಿ ರಾಜ್ಯ ಬಿಜೆಪಿ ಚದುರಿ ಹೋಗಿತ್ತು(ಈಗಲೂ ಒಂದಾಗಿಲ್ಲ ಎನ್ನುವುದು ಬೇರೆ ಮಾತು). ಈ ನಡುವೆಯೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಳಿಬಂದ ಮುಡಾ ಹಗರಣವನ್ನು ಮುಂದಿಟ್ಟುಕೊಂಡು ವಿಜಯೇಂದ್ರ ನೇತೃತ್ವದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆಯನ್ನು ಆರಂಭಿಸ ಲಾಗಿತ್ತು. ಆದರೆ ಈ ಪಾದಯಾತ್ರೆಯ ಲಾಭ-ನಷ್ಟದ ಹೊಯ್ದಾಟದ ನಡುವೆ ಜೆಡಿಎಸ್ ಅಂತರ ಕಾಯ್ದುಕೊಂಡಿತ್ತು.
ಮೈತ್ರಿ ಪಕ್ಷದಲ್ಲಿನ ಬಿರುಕು ಹಾಗೂ ಸರಕಾರದ ಡ್ಯಾಮೇಜ್ ಕಂಟ್ರೋಲ್‌ಗೆ ಅಂದಿನ ಉಪಮುಖ್ಯ ಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ಪಾದಯಾತ್ರೆ ಹೋಗುವ ಒಂದು ದಿನ ಮೊದಲು ತಮ್ಮ ಪಕ್ಷದ ಬೃಹತ್ ಸಮಾವೇಶಗಳನ್ನು ಪಾದಯಾತ್ರೆ ನಡೆದ ಊರುಗಳಲ್ಲಿ ಮಾಡುವ ಮೂಲಕ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಇದಿಷ್ಟೇ ಅಲ್ಲದೇ, ಕಾಂಗ್ರೆಸ್ ನಾಯಕರ ತಂತ್ರಗಾರಿಕೆಯಿಂದ ಬಿಜೆಪಿ ನಾಯಕರು ಆರಂಭಿಸಿದ್ದ ಪಾದಯಾತ್ರೆಯ ಮೂಲ ಉದ್ದೇಶವನ್ನೇ ಮರೆತು, ಕಾಂಗ್ರೆಸಿಗರ ಆರೋಪಕ್ಕೆ ಉತ್ತರಿಸುವು ದರಲ್ಲಿಯೇ ಮೈಸೂರಿನ ದಾರಿ ಸವೆಯುವಂತಾ ಯಿತು.
ಮುಡಾ ವಿರುದ್ಧ ನಡೆದ ಪಾದಯಾತ್ರೆಯ ಮೂಲಕ ವಿಜಯೇಂದ್ರ ನೇತೃತ್ವದ ಬಿಜೆಪಿಯ ಸಂಘಟನೆ ಗಟ್ಟಿಯಾಗಲಿದೆ, ಪಕ್ಷದ ಆಂತರಿಕ ಗೊಂದಲಗಳು ನಿವಾರಣೆಯಾಗಲಿವೆ ಎಂದೇ ಅನೇಕರು ಭಾವಿಸಿದ್ದರು. ಆದರೆ ಇಡೀ ಪಾದಯಾತ್ರೆಯಲ್ಲಿ ಸಮಸ್ಯೆ ತಿಳಿಯಾಗುವ ಬದಲು, ಮೈತ್ರಿ ಪಕ್ಷದ ಅಸಹಕಾರ, ಬಿಜೆಪಿಯ ಹಲವು ನಾಯಕರು ತಟಸ್ಥರಾಗಿ ಉಳಿದುಕೊಂಡರು.
ಇನ್ನೊಂದೆಡೆ ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಕೂಡಲಸಂಗಮ ದಿಂದ-ಬಳ್ಳಾರಿಗೆ ಪಾದಯಾತ್ರೆಗೆ ಸಿದ್ಧತೆ ಆರಂಭಿಸಿದ್ದರು. ವಿಜಯೇಂದ್ರ ಪಾದಯಾತ್ರೆಗೆ ಸಮನಾಂತರವಾಗಿ ಮತ್ತೊಂದು ಪಾದಯಾತ್ರೆ ಬಿಜೆಪಿಯ ಚಿಹ್ನೆಯಲ್ಲಿ ನಡೆದಿದ್ದು ಬಿಜೆಪಿಗೆ ಲಾಭಕ್ಕಿಂತ ನಷ್ಟವಾಗಿತು. ಈ ಪಾದಯಾತ್ರೆಯ ಬಳಿಕ ಬಿಡದಿ ಚಲೋ ಎನ್ನುವ ಪಾದಯಾತ್ರೆ ಯನ್ನು ಜೆಡಿಎಸ್ ನಡೆಸಿತ್ತು. ನಿಖಿಲ್ ಕುಮಾರಸ್ವಾಮಿ ಅವರ ‘ವರ್ಚಸ್ಸ’ನ್ನು ವೃದ್ಧಿಸಲು ಈ ಪಾದಯಾತ್ರೆಯನ್ನು ಜೆಡಿಎಸ್ ಆಲೋಚಿಸಿತ್ತಾ ದರೂ, ಸೀಮಿತ ಪ್ರದೇಶದ ಪಾದಯಾತ್ರೆ ಯಾಗಿದ್ದರಿಂದ ರಾಜ್ಯಕ್ಕೆ ಇದರ ಎಫೆಕ್ಟ್ ಆಗುತ್ತದೆ ಎಂದು ಹೇಳಲಾಗುವುದಿಲ್ಲ.
ಆದರೆ ರಾಮನಗರದಲ್ಲಿ ಕುಗ್ಗಿರುವ ಜೆಡಿಎಸ್ ವರ್ಚಸ್ಸು ವೃದ್ಧಿಯಾಗುವುದೇ ಎನ್ನುವುದಕ್ಕೆ ಮುಂದಿನ ಚುನಾವಣೆಯವರೆಗೆ ಕಾಯಬೇಕಿದೆ. ಚುನಾವಣೆಗೆ ಎರಡು ವರ್ಷವೂ ಇಲ್ಲದೇ ಇರುವ ಸಮಯದಲ್ಲಿ ವಾಲ್ಮೀಕಿ ಸಮುದಾಯ, ಕಲ್ಯಾಣ ಕರ್ನಾಟಕ ಭಾಗವನ್ನು ಗಮನದಲ್ಲಿರಿಸಿಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ ನೀಡಿದ್ದ ಪಾದಯಾತ್ರೆಯಲ್ಲಿ ಆರಂಭದಲ್ಲಿ ಸಣ್ಣಪುಟ್ಟ ಗೊಂದಲಗಳಿದ್ದರೂ, ಬಳಿಕ ಈ ಎಲ್ಲ ಗೊಂದಲಗಳನ್ನು ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾದಂತೆ ಕಾಣುತ್ತದೆ.
ಹಾಗೇ ನೋಡಿದರೆ, ಈ ಪಾದಯಾತ್ರೆಯಲ್ಲಿ ಆರಂಭದಲ್ಲಿ ರಾಜ್ಯ ನಾಯಕರುಗಳು ಭಾಗವಹಿಸ ದಿದ್ದರೂ, ಕಾರ್ಯಕರ್ತರು ಭಾಗವಹಿಸಿದ್ದರಿಂದ ಪಕ್ಷದೊಳಗೆ ಸಂಘಟನೆಗೆ ಒತ್ತು ನೀಡಲು ಸಹಕಾರಿಯಾಯಿತು ಎಂದರೆ ತಪ್ಪಾಗುವುದಿಲ್ಲ. ಮುಂದಿನ 18 ತಿಂಗಳಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಗೂ ಮೊದಲು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸನ್ನು ತುಂಬಿದೆ. ಇಷ್ಟಕ್ಕೆ ಅಥವಾ ಈ ಒಂದು ಪಾದಯಾತ್ರೆಯಿಂದ ಇಡೀ ಪಕ್ಷದೊಳಗಿನ ನಾಯಕರಲ್ಲಿ ರುವ ಗೊಂದಲ, ಗೋಜಲು, ಅಸಮಾಧಾನಗಳು ಮರೆತು ಒಬ್ಬರಿಗೊಬ್ಬರು ಅಪ್ಪಿ-ಮುದ್ದಾಡುತ್ತಾರೆ ಎಂದಲ್ಲ.
ಕಳೆದ ಮೂರು ವರ್ಷದಿಂದ ಕೆಟ್ಟು ನಿಂತಿದ್ದ ವಾಹನಕ್ಕೆ ಇದೀಗ ಮೊದಲ ಸರ್ವೀಸ್ ಆಗಿದೆಯಷ್ಟೆ. ಇದರಿಂದ ಕೆಲ ಕಿಮೀ ಗಾಡಿಯನ್ನು ಓಡಿಸಬಹುದು. ಆದರೆ ಅಷ್ಟರಲ್ಲಿ ಗಾಡಿಯ ಬ್ಯಾಟರಿ, ಎಂಜಿನ್ ಅನ್ನು ರೀಚಾರ್ಜ್ ಮಾಡುವ ಕೆಲಸವನ್ನು ಎಲ್ಲ ನಾಯಕರು ಒಂದಾಗಿ ಮಾಡಬೇಕಿದೆ ಅಷ್ಟೆ. ಈಗಲೂ ನಾಯಕರು ಎಚ್ಚೆತ್ತುಕೊಳ್ಳದೇ ಹೋದರೆ ಭವಿಷ್ಯದ ಚುನಾವಣೆಯಲ್ಲಿ ಅದರ ಹೊಡೆತವನ್ನು ಎಲ್ಲರೂ ತಿನ್ನಬೇಕಾಗುತ್ತದೆ ಎನ್ನುವುದು ಸ್ಪಷ್ಟ.