ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Hari Paraak Column: ಏಕಲವ್ಯ ದ್ರೋಣಾಚಾರ್ಯರಿಗೆ ಕೊಟ್ಟ ಗುರುದಕ್ಷಿಣೆ

ರಾಮಾಯಣ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದ ಪೋಸ್ಟರ್ ಗಳಲ್ಲಿ ರಾವಣನ ಪಾತ್ರ ಮಾಡಿದ ಯಶ್ ಅವರೇ ರಾರಾಜಿಸ್ತಾ ಇದ್ದಾರೆ. ಅದನ್ನು ನೋಡಿದ ಜನ ಅರೇ ಇದೇನು ರಾಮಾಯಣನಾ ಇಲ್ಲ ರಾವಣಾಯಣನಾ ಅಂತ ಆಶ್ಚರ್ಯ ವ್ಯಕ್ತಪಡಿಸುತ್ತಾ ಇದ್ದಾರೆ. ಆದರೆ ಇದು ಪಕ್ಕಾ ಮಾರ್ಕೆಟ್ ಪ್ರಶ್ನೆ ಅನ್ನೋದು ಸತ್ಯ. ಸದ್ಯಕ್ಕೆ ಯಶ್‌ಗೆ ಮಾರ್ಕೆಟ್ ವ್ಯಾಲ್ಯೂ ಇದೆ.

ಏಕಲವ್ಯ ದ್ರೋಣಾಚಾರ್ಯರಿಗೆ ಕೊಟ್ಟ ಗುರುದಕ್ಷಿಣೆ

-

ಹರಿ ಪರಾಕ್‌
ಹರಿ ಪರಾಕ್‌ Nov 8, 2026 10:33 AM

ತುಂಟರಗಾಳಿ

ಸಿನಿಗನ್ನಡ

ರಾಮಾಯಣ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದ ಪೋಸ್ಟರ್ ಗಳಲ್ಲಿ ರಾವಣನ ಪಾತ್ರ ಮಾಡಿದ ಯಶ್ ಅವರೇ ರಾರಾಜಿಸ್ತಾ ಇದ್ದಾರೆ. ಅದನ್ನು ನೋಡಿದ ಜನ ಅರೇ ಇದೇನು ರಾಮಾಯಣನಾ ಇಲ್ಲ ರಾವಣಾಯಣನಾ ಅಂತ ಆಶ್ಚರ್ಯ ವ್ಯಕ್ತಪಡಿಸುತ್ತಾ ಇದ್ದಾರೆ. ಆದರೆ ಇದು ಪಕ್ಕಾ ಮಾರ್ಕೆಟ್ ಪ್ರಶ್ನೆ ಅನ್ನೋದು ಸತ್ಯ. ಸದ್ಯಕ್ಕೆ ಯಶ್‌ಗೆ ಮಾರ್ಕೆಟ್ ವ್ಯಾಲ್ಯೂ ಇದೆ. ಹಾಗಾಗಿ ಯಶ್ ಅವರಿಗೆ ರಾಜಾತಿಥ್ಯ. ಅಲ್ಲದೆ ಈ ಪೋಸ್ಟರ್‌ಗಳು ಕರ್ನಾಟಕದಲ್ಲಿ ಹೆಚ್ಚೆಂದರೆ ಸೌತ್ ಇಂಡಿಯಾ ದಲ್ಲಿ ಇರುತ್ವೆ. ಮುಂಬೈ ಮತ್ತು ಬಾಲಿವುಡ್ ಪ್ರಧಾನ ಜಾಗಗಳ ಪೋಸ್ಟರ್‌ಗಳಲ್ಲಿ ರಾಮನ ಪಾತ್ರ ಮಾಡಿದ ರಣಬೀರ್ ಕಪೂರ್ ಅವರೇ ಇರ್ತಾರೆ ಅನ್ನೋದು ಕೂಡಾ ಸತ್ಯ. ಇದನ್ನು ಬಿಟ್ಟಾಕಿ ಸಿನಿಮಾ ನೋಡಿದ ಪ್ರೇಕ್ಷಕರ ಬಗ್ಗೆ ಮಾತಾಡೋದಾದ್ರೆ, ಕೆಲವರು ಮಾಮೂಲಿ ಸಿನಿಮಾ, ಟ್ವಿಸ್ಟೇ ಇಲ್ಲ ಅಂತ ಮಾತಾಡಿರೋ ಪೆದ್ದುಮಣಿಗಳೂ ಇದ್ದಾರೆ. ಇವರಿಗೆ ನೂರಾರು ಬಾರಿ ಕೇಳಿರುವ ರಾಮಾಯಣ ಕಥೆಯಲ್ಲಿ ಇನ್ಯಾವ ಹೊಸ ಟ್ವಿಸ್ಟ್ ಸೇರಿಸಬೇಕಿತ್ತೋ ಗೊತ್ತಿಲ್ಲ. ಇದು ಬಿಟ್ಟರೆ ಕೆಲವರು ಕಣ್ಣಿನ ಸಮಸ್ಯೆ ಇರುವವರು ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಸರಿ ಇಲ್ಲ, ನೋಡೋಕಾಗಲ್ಲ ಅಂತ ಬಾಯಿ ಹರಿಬಿಟ್ಟಿದ್ದಾರೆ.

ಇನ್ನು ಕೆಲವರು ರಕುಲ್ ಪ್ರೀತ್ ಅವರಂಥ ಶೂರ್ಪನಖಿಯನ್ನ ರಾಮ ಯಾಕೆ ರಿಜೆಕ್ಟ್ ಮಾಡಿದ ಅಂತ ಕೇಳಿದ್ರೆ, ಒಂದಷ್ಟು ಜನ ಕಾಜಲ್ ಅಗರ್ವಾಲ್ ಅವರಂಥ ಮಂಡೋದರಿ ಇದ್ರೂ ಸೀತೆಯ ಮೇಲೆ ಕಣ್ಣಾಕಿದ ರಾವಣನ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ. ಇದನ್ನಂತೂ ಚಿತ್ರತಂಡದ ಕಾಸ್ಟಿಂಗ್ ಮಿಸ್ಟೇಕ್ ಅಂದ್ರೆ ತಪ್ಪಿಲ್ಲ ಬಿಡಿ.

ಇದನ್ನೂ ಓದಿ: H‌ari Paraak Column: ಸ್ಟಿಂಗ್‌ ಆಪರೇಷನ್ V/s ಪವರ್‌ ಪಾಲಿಟಿಕ್ಸ್

ಲೂಸ್‌ ಟಾಕ್-ನರೇಂದ್ರ ಮೋದಿ

ಏನ್ ಸಾರ್ ರಾಹುಲ್ ಗಾಂಧಿ ಡಿಬೇಟ್‌ಗೆ ಕರೆದ್ರೆ ಯಾಕೆ ಹೋಗ್ತಾ ಇಲ್ಲ?

- ಅಯ್ಯೋ ನಾನ್ ಸ್ಕೂಲಿಗೇ ಹೋಗಿಲ್ಲ, ಹಂಗಾಗಿ ಡಿಬೇಟ್ ಕಾಂಪಿಟೇಷನ್‌ನಲ್ಲಿ ಭಾಗವಹಿಸಿ ಅಭ್ಯಾಸ ಇಲ್ಲ

ಆದ್ರೂ ಪಾಪ ಅವ್ರು ಅಷ್ಟೊಂದ್ ಬಲವಂತ ಮಾಡ್ತಾ ಇದ್ದಾರೆ ಹೋಗೋದಲ್ವಾ?

- ರೀ, ಮೀಡಿಯಾದವ್ರು ಅಷ್ಟು ವರ್ಷದಿಂದ ಪ್ರೆಸ್ ಮೀಟ್‌ಗೆ ಕರೀತಾ ಇದ್ದಾರೆ. ಅಲ್ಲಿಗೇ ಹೋಗಿಲ್ಲ ನಾನು. ರಾಹುಲ್ ಗಾಂಧಿ ಕರೆದ್ರೆ ಹೋಗಿಬಿಡ್ತೀನಾ?

ರಾಹುಲ್ ಗಾಂಧಿ ಏನ್ ಪ್ರಶ್ನೆ ಕೇಳಬಹುದು ನಿಮ್ಮನ್ನ?

- ಅವ್ರು ಮೀಡಿಯಾದವ್ರ ಥರನೇ ಕಣ್ರೀ, ಬರೀ ಮೀಡಿಯಾಕರ್ ಪ್ರಶ್ನೆಗಳನ್ನೇ ಕೇಳ್ತಾರೆ.

ಸರಿ, ರಾಹುಲ್ ಅವ್ರ ಪ್ರಶ್ನೆಗಳಿಗೆ ನಿಮ್ಮತ್ರ ಉತ್ರ ಇದೆಯಾ?

- ಮಾವಿನ ಹಣ್ಣನ್ನ ಹೆಂಗೆ ತಿಂತೀರಾ ಅಂತ ಅಕ್ಷಯ್ ಕುಮಾರ್ ಥರ ಪ್ರಶ್ನೆ ಕೇಳಿದ್ರೆ, ಖಂಡಿತಾ ಇದೆ.

ಹೋಗ್ಲಿ, ನಿಜ ಹೇಳಿ, ರಾಹುಲ್ ಗಾಂಧಿ ಅವರನ್ನ ಕಂಡ್ರೆ ನಿಮಗೆ ಭಯನಾ?

- ಅಯ್ಯೋ, ಭಯ ಎಂಥದ್ದು. ಅವ್ರ ಅಮ್ಮ ಕ್ರಿಶ್ಟಿಯನ್ ಹಂಗಾಗಿ ಬಹಿರಂಗವಾಗಿ ಚರ್ಚೆಗೆ ಬನ್ನಿ ಅಂತ ಕರೆದ್ರೋ ಅಥವಾ ಬಹಿರಂಗವಾಗಿ ಚರ್ಚಿಗೆ ಬನ್ನಿ ಅಂತ ಕರೆದ್ರೋ ಅಂತ ಗೊಂದಲ ಆಯ್ತು. ಅದಕ್ಕೇ ಬರಲ್ಲ ಅಂದಿದ್ದೀನಿ ಅಷ್ಟೇ.

(ಕಾಲ್ಪನಿಕ ಸಂದರ್ಶನ)

Yash ok

ನೆಟ್‌ ಪಿಕ್ಸ್

ರಾಮು, ಸೋಮು, ಖೇಮು ಸಿಬಿಐ ಇಂಟವ್ಯೂಗೆ ಹೋಗಿದ್ದರು. ಅಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು ಎಂಬ ಕುತೂಹಲದ ಮೂವರೂ ಹೊರಗೆ ಕೂತಿದ್ದರು. ಸ್ವಲ್ಪ ಹೊತ್ತಿನ ರಾಮು ಸರದಿ ಬಂತು. ಒಳಗೆ ಹೋದ ರಾಮುಗೆ ಕಂಪ್ಯೂಟರ್‌ನಲ್ಲಿ ಒಬ್ಬ ಶಂಕಿತ ಉಗ್ರಗಾಮಿಯ ಫೋಟೋ ತೋರಿಸಿದ ಸಂದರ್ಶಕರು ಈ ಫೋಟೋದಿಂದ ನಿಮಗೆ ಏನಾದರೂ ಕ್ಲೂ ಸಿಗುತ್ತಾ? ಅಂತ ಕೇಳಿದ್ರು. ರಾಮು ಒಂದರೆಕ್ಷಣ ಯೋಚಿಸಿ, ಇವನಿಗೆ ಬಲಗಾಲೇ ಇಲ್ಲ ಅಂದ, ಸಂದರ್ಶಕರು ಯಾಕೆ? ಅಂತ ಕೇಳಿದಾಗ ರಾಮು ಹೇಳಿದ, ನೋಡಿ ಫೋಟೋದಲ್ಲಿ ಅವನ ಎಡಗಾಲು ಮಾತ್ರ ಕಾಣುತ್ತಿದೆ. ಬಲಗಾಲು ಕಾಣುತ್ತಿಲ್ಲ ಅಂದ. ಸಿಟ್ಟಿಗೆದ್ದ ಸಂದರ್ಶಕರು, ಅಯ್ಯೋ ನಿನ್ನ, ಅವನು ಎಡಕ್ಕೆ ತಿರುಗಿ ನಿಂತಿದಾನೆ ಅದಕ್ಕೆ ಬಲಗಾಲು ಕಾಣ್ತಾ ಇಲ್ಲ ಅಷ್ಟೆ, ನಡಿ ಮನೆಗೆ ಅಂತ ಕಳಿಸಿದರು. ನಂತರ ಸೋಮು ಸರದಿ ಬಂತು.

ಅವನಿಗೂ ಅದೇ ಫೋಟೋ ಅದೇ ಪ್ರಶ್ನೆ. ಎಷ್ಟೇ ಆದರೂ ಸ್ನೇಹಿತರಲ್ಲವೇ. ಹಾಗಾಗಿ ಸೋಮು ಉತ್ತರ ಕೂಡ ಅದೇ ಆಗಿತ್ತು. ಮತ್ತು ಸಂದರ್ಶಕರಿಂದ ಅದೇ ಬೈಗುಳ ಸಿಕ್ಕಿತು. ಕೊನೆಯದಾಗಿ ಖೇಮುವನ್ನು ಕರೆಸಿದರು. ಅವನಿಗೂ ಅದೇ ಫೋಟೋ, ಅದೇ ಪ್ರಶ್ನೆ. ಖೇಮು ಒಂದರೆಕ್ಷಣ ಯೋಚಿಸಿ ಈತ ಮರದ ಕಾಲು ಹಾಕ್ಕೊತಾನೆ ಅಂದ. ಸಂದರ್ಶಕರಿಗೆ ಅಚ್ಚರಿ, ಇದು ಒಂದ್ ನಿಮಿಷ ಅಂತ ಆ ಉಗ್ರಗಾಮಿಯ ಪ್ರೊಫೈಲ್ ಚೆಕ್ ಮಾಡಿ ನೋಡಿದರು.

ಖೇಮು ಹೇಳಿದ್ದು ಸರಿ ಇತ್ತು. ಸಂದರ್ಶಕರು ಫುಲ್ ಇಂಪ್ರೆಸ್ ಆಗಿ, ಅದು ಹೇಗೆ ನಿಮಗೆ ಅವನು ಮರದ ಕಾಲು ಹಾಕ್ಕೊತಾನೆ ಅಂತ ಗೊತ್ತಾಯ್ತು? ಅಂತ ಕೇಳಿದ್ರು. ಅದಕ್ಕೆ ಖೇಮು ತಣ್ಣಗೆ ಹೇಳಿದೆ, ಆ ಫೋಟೋ ನೋಡಿ, ಅವನಿಗೆ ಬಲಗಾಲೇ ಇಲ್ಲ, ಆದ್ರೂ ಅವನು ಎಲ್ಲಾ ಕಡೆ ಓಡಾಡಿಕೊಂಡು ಉಗ್ರಗಾಮಿ ಕೆಲಸ ಮಾಡ್ತಾನೆ ಅಂದ್ರೆ ಅವನು ಮರದ ಕಾಲು ಹಾಕ್ಕೋತಿರ್ಬೇಕು ಅಂತ ಗೆಸ್ ಮಾಡಿದೆ.

ಲೈನ್‌ ಮ್ಯಾನ್

ಫುಡ್ ಫಾರ್ ಥಾಟ್

- ಅಪರಿಚಿತ ಜಾಗದಲ್ಲಿ ಊಟಕ್ಕೆ ಹೋದಾಗ ಊಟ ಮುಗಿದ ಮೇಲೆ ಯಾರನ್ನೂ hand wash ಎಲ್ಲಿದೆ ಅಂತ ಕೇಳಬಾರದು. ಯಾಕಂದ್ರೆ ನೀವು ಊಟಕ್ಕೆ ಮುಂಚೆ ಕೈ ತೊಳೆದಿಲ್ಲ ಅನ್ನೋದು ಅವರಿಗೆ ಗೊತ್ತಾಗುತ್ತೆ.

ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿದ ಸೂರ್ಯಕುಮಾರ್ ಯಾದವ್

- ಕ್ರಿಕೆಟ್ ಕೆರಿಯರ್ ಅಂತೂ ಮುಗೀತು. ಅದಕ್ಕೆ ಬಿಜೆಪಿ ಸೇರೋ ಪ್ಲ್ಯಾನ್ ಇರಬಹುದು. ಅಷ್ಟಕ್ಕೂ ಸೂರ್ಯ ಬರದೆ ಕಮಲವೆಂದು ಅರಳದು ಅಲ್ವಾ...

ಅಸಿಡಿಟಿ ಬರಬಾರದು ಅಂದ್ರೆ ಏನ್ ಮಾಡಬೇಕು?

- ‘ತೇಗ’ದ ಮರವನ್ನು ಒಲೆಗೆ ಇಟ್ಟು ಅಡುಗೆ ಮಾಡಬೇಕು

ಆಪತ್ ಬಂದು ಚಾಪೆ ಸುತ್ಕೊಂಡೋಗ ಅನ್ನೋದನ್ನು ಇಂಗ್ಲಿಷ್‌ನಲ್ಲಿ ಹೆಂಗೆ ಹೇಳೋದು

- ಮ್ಯಾಟ್ ಫಿನಿಷ್

ಕೂದಲಿಗೆ ಒಳ್ಳೆ ಟ್ರೀಟ್ ಮೆಂಟ್ ಕೊಡುವವಳು

- ಹೇರ್ ಹೋಸ್ಟೆಸ್

ಏಕಲವ್ಯ ದ್ರೋಣಾಚಾರ್ಯರಿಗೆ ಕೊಟ್ಟ ಗುರುದಕ್ಷಿಣೆ

- ‘ಫಿಂಗರ್ ಟಿಪ್ಸ್’

ಸೊಳ್ಳೆ ಪರದೆ ಡಿಸ್ಕೌಂಟ್ ಕೊಡುವಾಗ ಇರಬೇಕಾದ ಎಚ್ಚರ

-50% ಕಡಿತ ಅಂತ ಹಾಕಬಾರದು.

ಮೆನಿಕ್ಯೂರ್ ಪೆಡಿಕ್ಯೂರ್ ಮಾಡಿಸಲ್ಲ ಅನ್ನೋದನ್ನು ಹೇಳೋದು ಹೇಗೆ

- ಹಲ್ಲಲ್ಲಿ ಹೋಗೋ ಉಗುರಿಗೆ ಅಷ್ಟೊಂದು ದುಡ್ಡು ಯಾಕೆ ಕೊಡಲಿ?.

ಮನೆ ಕಟ್ಟಿಸುವವರ ಕಷ್ಟ

- ‘ವಿಲ್ಲ ವಿಲ್ಲ’ ಒದ್ದಾಟ

ಜೀವನದ ಫಿಲಾಸಫಿ

- ಉಳ್ಳವರಿಗೆ ಬೇಕಿದ್ದೆಲ್ಲ ತಕ್ಷಣ ಕಣ್ಮುಂದೆ ಬರುತ್ತೆ, ಇಲ್ಲದವರಿಗೆ ದಿನಾ ರಾತ್ರಿ ಕನಸಲ್ಲಿ ಬರುತ್ತೆ