Shashidhara Halady Column: ಕುದುರೆಯ ಬಾಲ ಮನೆಯಂಗಳದಲ್ಲಿ !
ನಮ್ಮ ಹಳ್ಳಿಯ ಮನೆಯಲ್ಲಿ ಇಂಥದೊಂದು ಘಟನೆಗೆ ನನ್ನ ತಂಗಿ, ಭಾವ ಸಾಕ್ಷಿಯಾದರು. ಅದನ್ನು ಅವರ ಮಾತುಗಳಲ್ಲೇ ಕೇಳುವುದಾದರೆ: “ನಮ್ಮ ಮನೆಯ ಬೆಕ್ಕು ತನ್ನ ಬಾಯಲ್ಲಿ ಒಂದು ಹಾಂತೆಯನ್ನು ಕಚ್ಚಿಕೊಂಡು ಓಡಿ ಬಂತು. ಸಂಜೆಯ ಕತ್ತಲೆಯ ಸಮಯ. ಅದರ ಬಾಯಲ್ಲಿದ್ದ ಕೀಟವನ್ನು ಕಂಡು, ಹಚ ಹಚ ಎಂದು ಓಡಿಸಿದೆವು.
-
ಶಶಾಂಕಣ
ನಮ್ಮ ಸುತ್ತಮುತ್ತಲಿನ ಪರಿಸರದ ವಿಸ್ಮಯಗಳನ್ನು, ಪರಿಸರದ ಕೊಂಡಿಗಳನ್ನು ಸಾಕಷ್ಟು ಅರಿತಿದ್ದೇವೆ ಎಂಬ ಸಣ್ಣ ಹಮ್ಮು ಹೆಚ್ಚಿನವರಲ್ಲಿದೆ. ಸಾಮಾಜಿಕ ವ್ಯವಹಾರದ ದೃಷ್ಟಿ ಯಲ್ಲಿ ಅದನ್ನು ಒಣಜಂಬ ಎಂದೂ ಕರೆಯಬಹುದು. ಆದರೆ, ಪರಿಸರದ ಅಗಾಧ ಪ್ರಪಂಚದ ಕುರಿತಾಗಿ ಅಂಥ ಜಂಬ ಅಥವಾ ಒಣಜಂಬಕ್ಕೆ ಸ್ಥಳವಿಲ್ಲ.
ಏಕೆಂದರೆ, ನಾವು ಸಾಕಷ್ಟು ಅರಿತಿದ್ದೇವೆ ಎಂಬ ನಮ್ಮ ಸುತ್ತಲಿನ ಪರಿಸರದಲ್ಲಿ ಇಂದಿಗೂ ಅವೆಷ್ಟೋ ವಿಸ್ಮಯಗಳಿವೆ, ಅನೂಹ್ಯ ವ್ಯಾಪಾರಗಳು ನಡೆಯುತ್ತಿವೆ, ಸಂಶೋಧನೆ ಗೊಳ್ಳಬೇಕಾದ ವಿದ್ಯಮಾನಗಳಿವೆ, ಮೇಲ್ನೋಟಕ್ಕೆ ಇದು ಹೀಗೆ ಎಂದು ಅನಿಸುವ ಘಟನೆಗಳ ಹಿಂದೆ ನಿಗೂಢ ಕೊಂಡಿಗಳ ಸಮತೋಲಿತ ವ್ಯವಸ್ಥೆಯಿದೆ!
ನಮ್ಮ ಹಳ್ಳಿಯ ಮನೆಯಲ್ಲಿ ಇಂಥದೊಂದು ಘಟನೆಗೆ ನನ್ನ ತಂಗಿ, ಭಾವ ಸಾಕ್ಷಿಯಾದರು. ಅದನ್ನು ಅವರ ಮಾತುಗಳಲ್ಲೇ ಕೇಳುವುದಾದರೆ: “ನಮ್ಮ ಮನೆಯ ಬೆಕ್ಕು ತನ್ನ ಬಾಯಲ್ಲಿ ಒಂದು ಹಾಂತೆಯನ್ನು ಕಚ್ಚಿಕೊಂಡು ಓಡಿ ಬಂತು. ಸಂಜೆಯ ಕತ್ತಲೆಯ ಸಮಯ. ಅದರ ಬಾಯಲ್ಲಿದ್ದ ಕೀಟವನ್ನು ಕಂಡು, ಹಚ ಹಚ ಎಂದು ಓಡಿಸಿದೆವು. ಅದು ಚಾಲಾಕಿತನ ದಿಂದ ಮನೆ ಮುಂದಿನ ಅಂಗಳದ ಆವರಣದ ಮೂಲೆಯಲ್ಲಿ ಕುಳಿತು, ಆ ಹಾಂತೆಯನ್ನು ತಿಂದುಹಾಕಿತು. ಎಲ್ಲಾ ಸ್ವಾಹಾ ಮಾಡಿ, ನಾಲಗೆಯನ್ನು ಸವರಿಕೊಳ್ಳುತ್ತಾ ಕುಳಿತ ಆ ಬೆಕ್ಕಿನ ಹತ್ತಿರ ಹೋಗಿ ನೋಡಿದರೆ, ಅದರ ಮುಂಭಾಗದಲ್ಲಿ ಒಂದು ಉದ್ದನೆಯ ಕಡ್ಡಿ ಇತ್ತು! ಆದರೆ ಆ ಕಡ್ಡಿಗೆ ಜೀವ ಇತ್ತು!
ಅತ್ತಿತ್ತ ಅಲ್ಲಾಡುತ್ತಿದ್ದ ಆ ಕಡ್ಡಿಯ ಜತೆ ಬೆಕ್ಕು ಆಟ ಆಡಲು ಶುರುಮಾಡಿತು. ಆ ಕಡ್ಡಿಗೆ ಜೀವ ಹ್ಯಾಂಗೆ ಬಂತೋ ಗೊತ್ತಿಲ್ಲ. ನಕ್ಳು ಹುಳಕ್ಕಿಂತ (ಎರೆ ಹುಳ) ಉದ್ದ, ಸಪೂರ ಇದ್ದ ಆ ಕಪ್ಪು ಕಡ್ಡಿಯು ನುಲಿದುಕೊಂಡು, ತನ್ನಷ್ಟಕ್ಕೆ ಚಲಿಸುವಂತೆ ಅಂಗಳದಲ್ಲಿ ಆಟವಾಡು ತ್ತಿದೆ!
ಇದನ್ನೂ ಓದಿ: Shashidhara Halady Column: ಪುನರ್ಜನ್ಮ ಪಡೆದ ಒಂದು ಗೊಂಡಾರಣ್ಯ !
ನಮ್ಮ ಬೆಕ್ಕು ಅದರ ಜತೆ ಆಟ ಆಡುತ್ತಿದೆ. ಬೆಕ್ಕನ್ನು ಆಚೆ ಓಡಿಸಿ, ನನ್ನ ಮೊಬೈಲ್‌ನಲ್ಲಿ ಆ ಕಡ್ಡಿ ರೀತಿ ಉದ್ದನೆಯ ಕೀಟದ ವಿಡಿಯೋ ಮಾಡಿದೆ. ಇದು ಎಂತ ಹೇಳಿ ಕಾಂಬ ಎಂಬ ಪ್ರಶ್ನೆಯ ಜತೆ, ನಮ್ಮ ಒಂದು ವಾಟ್ಸಾಪ್ ಗ್ರೂಪಿಗೆ ಹಾಕಿದೆ. ಯಾರಿಗೂ ಸುಖ್ತ ಉತ್ತರ ಗೊತ್ತಾಗಲಿಲ್ಲ. ಇದು ಎಂತ ಕೀಟ ಇರಬಹುದು ಎಂದು ನಿನಗೆ ಗೊತ್ತಾ?" ಇದು ನನ್ನ ತಂಗಿಯ ಪ್ರಶ್ನೆ.
ಮೊಬೈಲ್‌ನಲ್ಲಿ ಚಿತ್ರಿಸಿದ ವಿಡಿಯೋವನ್ನು ನೋಡಿದೆ. ಅವರ ಮನೆಯ ಅಂಗಳದ ಸಿಮೆಂಟ್ ನೆಲದ ಮೇಲೆ ಅತ್ತಿತ್ತ ನುಲಿದಾಡುತ್ತಿದ್ದ ಆ ನಸುಕಪ್ಪು ಬಣ್ಣದ ಕೀಟವು ಸುಮಾರು ಒಂದು ಅಡಿ ಉದ್ದ ಇರಬಹುದು. ಅದು ಸುರುಳಿಸುತ್ತುತ್ತಾ, ಅತ್ತಿತ್ತ ವೇಗವಾಗಿ ಚಲಿಸುತ್ತಿತ್ತು. ಎರೆಹುಳಕ್ಕಿಂತ ತುಸು ತೆಳು, ಕಪ್ಪುಬಣ್ಣ. ನೋಡಲು ತುಸು ವಿಚಿತ್ರ, ಸಣ್ಣಗೆ ಅಸಹ್ಯ ತರಿಸುವಂಥ ದೇಹ ರಚನೆ. ಇದೆಂಥ ಹುಳ, ಅದೂ ನಮ್ಮ ಊರಿನಲ್ಲಿ ಎಂಬ ಕುತೂಹಲ ಹುಟ್ಟಿತು.
ನಮ್ಮ ಊರಿನಲ್ಲಿ ಎಂದು ಒತ್ತಿ ಹೇಳಿದ್ದೇಕೆಂದರೆ, ಆ ಪರಿಸರದಲ್ಲಿ ಪ್ರತಿದಿನ ಸುಮಾರು ಐದು ಕಿ.ಮೀ. ಕಾಡು ಗುಡ್ಡಗಳಲ್ಲಿ ನಡೆಯುತ್ತಾ ಶಾಲೆಗೆ ಹೋಗುತ್ತಾ, ಅಲ್ಲೇ ಬೆಳೆದಿದ್ದ ನನ್ನ ಗಮನಕ್ಕೆ ಇಂಥದೊಂದು ಕೀಟ ಬಂದಿರಲಿಲ್ಲ! ನಾನು ಕಂಡಿಲ್ಲ ಎಂದ ಮಾತ್ರಕ್ಕೆ, ನಮ್ಮ ಹಳ್ಳಿಯ ಪರಿಸರದ ವಿಸ್ಮಯಗಳು ಬೆಳಕಿಗೆ ಬರಬಾರದೆಂದೇನೂ ಇಲ್ಲವಲ್ಲ.
ಜತೆಗೆ, ಅಲ್ಲೇ ಹುಟ್ಟಿ ಬೆಳೆದಿದ್ದರೂ, ನನ್ನಂಥವರ ಅರಿವಿಗೆ ಬಾರದ ಹಲವು ವಿಸ್ಮಯಗಳು ನಮ್ಮ ಹಳ್ಳಿಯ ಸುತ್ತಲಿನ ಪರಿಸರದಲ್ಲಿ ಅಡಗಿವೆ ಎಂಬುದಕ್ಕೆ ಇದೂ ಒಂದು ಉದಾಹರಣೆ ಯೇ ಆಗಿರಬೇಕು, ಅಲ್ಲವೆ? ಈಗ ಎಂತಿದ್ದರೂ ಅಂತರ್ಜಾಲದ ಯುಗ ತಾನೆ? ಯಾವುದೇ ಸಮಸ್ಯೆಗೂ ಅಂತರ್ಜಾಲದಲ್ಲಿ, ಕೃತಕ ಬುದ್ಧಿಮತ್ತೆಯಲ್ಲಿ (ಎಐ) ಉತ್ತರ ದೊರಕುತ್ತದೆ ಎಂದು ನಾವೇ ಅಂದುಕೊಂಡಿರುವ (ಅಥವಾ ಹಾಗೆ ಭ್ರಮಿಸಿಕೊಂಡಿರುವ?) ಕಾಲವಿದು. ಅಂತರ್ಜಾಲದಲ್ಲಿ ಈ ಕೀಟದ ಕುರಿತು ಹುಡುಕಿದಾಗ ಗೊತ್ತಾಯಿತು, ಅದು ‘ಹಾರ್ಸ್ ಹೇರ್ ವರ್ಮ್’. ಹೆಸರು ಚೆನ್ನಾಗಿದೆ!
ಹಾರ್ಸ್ ಹೇರ್ ವರ್ಮ್, ಅಂದರೆ ಕುದುರೆ ಬಾಲದಂಥ ಕೀಟ! ಇದರ ಹೆಸರಿನ ರೀತಿಯೇ, ಇದರ ಜೀವನಚಕ್ರದ ಮಾಹಿತಿ ಭಲೇ ರೋಚಕವಾಗಿದೆ. ಹಳ್ಳದ ದಡದಲ್ಲಿ, ಜವುಗು ಮತ್ತು ಪಸೆ ಜಾಗದಲ್ಲಿ ವಾಸಿಸುವ ಈ ಹುಳ ಐದರಿಂದ ಹತ್ತು ಸೆಂಟಿಮೀಟರ್ ಬೆಳೆಯುತ್ತದೆ. 2000ಕ್ಕೂ ಹೆಚ್ಚು ಪ್ರಭೇದವಿರುವ ಇವುಗಳಲ್ಲಿ ಕೆಲವು ಪ್ರಭೇದದ ಕೀಟಗಳು, ಒಂದರಿಂದ ಎರಡು ಮೀಟರ್ ಉದ್ದ ಬೆಳೆಯುವುದೂ ಉಂಟು. ಇಷ್ಟು ವೈವಿಧ್ಯವಿರುವ ಈ ಹುಳದ ಉದ್ದವು ಒಂದು ಕೌತುಕ. ಅದಕ್ಕೂ ಮಿಗಿಲಾದ ಕೌತುಕ ಎಂದರೆ, ಅದರ ಮರಿಯ ಜೀವನ ಕ್ರಮ!
ಈ ಕೀಟದ ಮರಿಯು ಲಾರ್ವಾ ರೂಪ ಪಡೆದಾಗ, ನಾನಾ ರೀತಿಯ ಸಾಹಸ ಮತ್ತು ಪಯಣ ಗಳನ್ನು ಮಾಡುತ್ತದೆ! ಬದುಕಿನ ಚಕ್ರದ ಆ ಹಂತದಲ್ಲಿ, ಅದರ ಮರಿಯು ವಿವಿಧ ಕೀಟ ಗಳನ್ನೇ ತನ್ನ ಮನೆಯನ್ನಾಗಿ ಮಾಡಿಕೊಳ್ಳುತ್ತದೆ. ಹಾತೆ, ಮಿಡತೆ, ಜಿರಳೆ ಮೊದಲಾದ ಜೀವಿಗಳ ದೇಹ ಪ್ರವೇಶಿಸುವ ಆ ಲಾರ್ವಾ, ಅಲ್ಲೇ ಮನೆ ಮಾಡಿಕೊಂಡು, ತನ್ನ ಅತಿಥಿಯ ದೇಹದ ಒಳಗೆ ಬೆಳೆದು, ನಿಧಾನವಾಗಿ ಅತಿಥಿಯ ದೇಹದ ಹೊರಗೂ ಬೆಳೆಯತೊಡಗುತ್ತದೆ! ಅಂದರೆ, ಬೇರಾವುದೋ ಪ್ರಭೇದದ ಮಿಡತೆಯ ದೇಹದ ಮೇಲ್ಭಾಗದಲ್ಲಿ, ಕಡ್ಡಿಯ ಸ್ವರೂಪದಲ್ಲಿ ಬೆಳೆಯತೊಡಗುತ್ತದೆ, ಈ ಲಾರ್ವಾ!
ಹೀಗೆ ನಾಲ್ಕಾರು ತಿಂಗಳು ಬೆಳೆದ ನಂತರ, ಆ ಲಾರ್ವಾ ಸಾಕಷ್ಟು ಉದ್ದವಾಗಬಹುದು. ಮೇಲ್ನೋಟಕ್ಕೆ ಒಂದು ದಾರದಂಥ ರಚನೆಯು ಮಿಡತೆಯ ದೇಹಕ್ಕೆ ಅಂಟಿಕೊಂಡಂತೆ ಕಾಣಿಸಬಹುದು; ಆದರೆ, ಅದು ಹಾರ್ಸ್ ಹೇರ್ ವರ್ಮ್‌ನ ಲಾರ್ವಾ! ಅದರ ಕಾಟ ತಡೆಯದ ಮಿಡತೆ, ನೀರಿನಲ್ಲಿ ಮುಳುಗಿದಾಗ, ಈ ಕೀಟ ಪ್ರತ್ಯೇಕಗೊಳ್ಳಬಹುದು. ಈ ರೀತಿ ಮಿಡತೆಯ ದೇಹಕ್ಕೆ ಅಂಟಿಕೊಂಡಿದ್ದಾಗಲೇ, ನನ್ನ ತಂಗಿಯ ಮನೆಯ ಬೆಕ್ಕು ಆ ದಿನ ಮಿಡತೆಯನ್ನು ಕಚ್ಚಿಕೊಂಡು ತಂದಾಗ, ಅದರ ಜತೆ ಈ ಕುದುರೆ ಕೂದಲು ಹುಳವೂ ಬಂತು. ಬೆಕ್ಕು ಮಿಡತೆಯನ್ನು ತಿಂದು ಹಾಕಿತು, ಕುದುರೆ ಕೂದಲು ಹುಳ ಮಾತ್ರ ಉಳಿದು ಕೊಂಡಿತು, ಕ್ಯಾಮೆರಾದಲ್ಲಿ ಸೆರೆಯಾಯಿತು.
ಈ ಕೀಟದ ಹೆಸರನ್ನು ಕನ್ನಡಕ್ಕೆ ಅನುವಾದಿಸಿದಾಗ, ಕುದುರೆ ಕೂದಲು ಹುಳ ಎನಿಸಿದರೂ, ನಮ್ಮ ಹಳ್ಳಿಯಲ್ಲಿ ಕುದುರೆಯಂತೂ ಇಲ್ಲ, ಹಳ್ಳಿ ಜನರು ಅದನ್ನು ಏನೆಂದು ಕರೆಯು ತ್ತಾರೊ ಸ್ಪಷ್ಟವಿಲ್ಲ. ‘ಕೊಂಬಿನ ವಿಷ’ ಎನ್ನುತ್ತಾರೆ ಕೆಲವರು, ಎಂದಳು ನನ್ನ ತಂಗಿ. ಆದರೆ ಹಳ್ಳಿಯ ಜನರು ತಮ್ಮ ಸುತ್ತಲಿನ ಅಸಂಖ್ಯ ಕೀಟ, ಪಕ್ಷಿಗಳನ್ನು ನಾಮಕರಣ ಮಾಡುವಲ್ಲಿ, ನಿರ್ದಿಷ್ಟವಾಗಿ ಒಂದು ಹೆಸರನ್ನೇ ಬಳಸುವಲ್ಲಿ ತುಸು ಹಿಂದೆ ಎಂದೇ ಹೇಳಬಹುದು.
ಜತೆಗೆ, ಪರಿಸರದ ನಿಗೂಢ ವಿದ್ಯಮಾನಗಳನ್ನು ನಮ್ಮ ಹಳ್ಳಿಯ ಜನರು, ಜನಪದರು ನಿಖರವಾಗಿ ಗುರುತಿಸದೇ ಇರಬಹುದು. ಬಹುಶಃ, ಕಡ್ಡಿಯ ರೂಪದಲ್ಲಿರುವ, ಬೇರೊಂದು ಜೀವಿಯ ಮೇಲೆ ಪರೋಪಜೀವಿಯಾಗಿ ಅಂಟಿಕೊಂಡು, ಹಲವು ತಿಂಗಳುಗಳ ಕಾಲ ತನ್ನ ಅತಿಥಿಯ ಜತೆಯಲ್ಲೇ ಸುತ್ತಾಡುವ ಇಂಥ ಕಡ್ಡಿಯ ರೂಪದ ಕೀಟವನ್ನು ಸ್ಪಷ್ಟವಾಗಿ ಗುರುತಿಸಿಲ್ಲದೇ ಇರುವ ಸಾಧ್ಯತೆ ಇದೆ.
ಹಾರ್ಸ್ ಹೇರ್ ವರ್ಮ್ ಅನ್ನು, ಕುದುರೆ ಕೂದಲು ಹುಳ ಎಂದು ಕನ್ನಡದಲ್ಲಿ ಅನುವಾದಿಸ ಬಹುದು. ನಮ್ಮ ರಾಜ್ಯದಲ್ಲಿ ಈ ಕೀಟದ ಹಲವು ಪ್ರಭೇದಗಳಿರಬಹುದು. ಹೆಚ್ಚಿನ ಅಧ್ಯಯನ ಆದಂತೆ ಕಾಣುವುದಿಲ್ಲ ಮತ್ತು ಅಂಥ ಅಧ್ಯಯನ ನಡೆದಿದ್ದರೂ, ಜನಸಾ ಮಾನ್ಯರಿಗೆ, ಪರಿಸರದ ಕುರಿತು ಕುತೂಹಲ ಹೊಂದಿರುವವರಿಗೆ ಆ ಅಧ್ಯಯನದ ವಿವರ ಗಳು ತಲುಪಿಲ್ಲ ಎಂದೇ ಹೇಳಬಹುದು.
ನಮ್ಮ ಹಳ್ಳಿಯ ಜನರು ಈ ಕೀಟವನ್ನು ಕೊಂಬಿನ ವಿಷ ಎಂದೂ ಕರೆದಿರುವ ಸಾಧ್ಯತೆ ಯಿದೆ. ಆದರೆ, ನಮ್ಮೂರಿನಲ್ಲಿ ಅದೇ ಹೆಸರಿನ ಇನ್ನೊಂದು ಕೀಟ ತುಸು ಪ್ರಖ್ಯಾತ. ಮಳೆಗಾಲದಲ್ಲಿ ಕಾಣಸಿಗುವ, ಒಂದು ಇಂಚು ಉದ್ದದ, ಅಗಲ ತಲೆಯ (ತಲೆಯು ಅಡ್ಡಡ್ಡ ಬೆಳೆದಿರುತ್ತದೆ) ಕಪ್ಪು ಹುಳವೊಂದನ್ನು ಸಹ ನಮ್ಮ ಹಳ್ಳಿಯವರು ‘ಕೊಂಬಿನ ವಿಷ’ ಎಂದು ಕರೆಯುತ್ತಾರೆ.
ನೋಡಲು ತುಸು ಭಯ ಹುಟ್ಟಿಸುವ, ಲೋಳೆಲೋಳೆಯ ದೇಹ ಹೊಂದಿರುವ ಆ ಹುಳ ಕಾಲಿಗೆ ತಗುಲಿದರೆ, ಆ ಭಾಗ ನಿಧಾನವಾಗಿ ಕೊಳೆಯಲು ಆರಂಭಿಸುತ್ತದೆ ಎಂಬ ನಂಬಿಕೆ ಯೂ ನಮ್ಮ ಹಳ್ಳಿಯಲ್ಲಿದೆ. ಇದು ನಂಬಿಕೆಯೂ ಆಗಿರಬಹುದು, ಮೂಢನಂಬಿಕೆ ಯೂ ಆಗಿರಬಹುದು.
ಕೊಂಬಿನ ವಿಷ ಎಂಬ ಜೀವಿಯು, ಒಂದೆರಡು ಇಂಚು ಉದ್ದ ಇದ್ದು, ಲೋಳೆಲೋಳೆ ದೇಹ ಹೊಂದಿರುತ್ತದೆ. ಕೊಂಬಿನ ವಿಷ ಎಂಬ ಹೆಸರಿರುವುದರಿಂದ, ಇದು ತುಸು ಪ್ರಸಿದ್ಧ. ಇದನ್ನು ಇಂಗ್ಲಿಷ್‌ನಲ್ಲಿ ಹ್ಯಾಮರ್ ಹೆಡ್ ವರ್ಮ್ ಎಂದು ಕರೆದಿದ್ದು, ಇವುಗಳಲ್ಲಿ ಕೆಲವು ಪ್ರಭೇದಗಳೂ ಇವೆ. ಅಡ್ಡಡ್ಡವಾಗಿ ಬೆಳೆದಿರುವ ಅದರ ತಲೆಯನ್ನು ಕಂಡು, ಅದರ ಗಾಢವರ್ಣದ ದೇಹವನ್ನು ಕಂಡು, (ದಟ್ಟ ಕಪ್ಪು ಅಥವಾ ಕೆಂಪು ಮಿಶ್ರಿತ ಲೋಳೆ ದೇಹ) ಅದನ್ನು ಕೊಂಬಿನ ವಿಷ ಎಂದು ನಮ್ಮ ಜನಪದರು ಕರೆದರು. ಆದರೆ, ಅಂಥ ಹೆಸರಿಡು ವಾಗ, ಭಾವನಾತ್ಮಕ ವಿಚಾರವೇ ಪ್ರಧಾನವೇ ಹೊರತು, ವೈಜ್ಞಾನಿಕ ವರ್ಗೀಕರಣಕ್ಕೆ ಅನುಕೂಲವಾಗುವ ಹೆಸರನ್ನು ನಮ್ಮ ಜನಪದರು ಇಡುವ ಸಾಧ್ಯತೆ ಕಡಿಮೆ.
ನಮ್ಮ ಊರಿನ ಸುತ್ತ ಕಾಣಸಿಗುವ ಹಕ್ಕಿಗಳ ಕಥೆಯೂ ಅಷ್ಟೆ - ಕೆಲವು ಹಕ್ಕಿಗಳಿಗೆ ನಿರ್ದಿಷ್ಟ ಹೆಸರನ್ನು ಇಟ್ಟು ಕರೆದರೂ, ಇನ್ನು ಕೆಲವಕ್ಕೆ ಅಸ್ಪಷ್ಟ ಹೆಸರು. ಇನ್ನು ಕೆಲವಕ್ಕೆ ಹೆಸರೇ ಇಲ್ಲ ಎಂದರೂ ಹೇಳಬಹುದು! ನಮ್ಮ ಹಳ್ಳಿಯಲ್ಲಿ ‘ಪಿಕಳಾರ’ ಎಂದು ನಾಲ್ಕಾರು ಪ್ರಭೇದದ ಹಕ್ಕಿಗಳನ್ನು ಕರೆದಿದ್ದನ್ನು ಕಂಡಿರುವೆ.
“ಅವತ್ತು ಕಂಡ, ಜುಟ್ಟಿನ ಹಕ್ಕಿ ಪಿಕಳಾರ. ಇದಕ್ಕೆ ಜುಟ್ಟು ಇಲ್ಲ, ಇದು ಬೇರೆ ಹಕ್ಕಿ ಅಲ್ಲವಾ, ಇಂದೆಂಥ ಹಕ್ಕಿ?" ಎಂದು ಕೇಳಿದರೆ, “ನಂಗೊತ್ತಿಲ್ಲ, ಎಲ್ಲಾ ಹಕ್ಕಿಗಳಿಗೆ ಹೆಸರಿಡುವುದಕ್ಕೆ ಆಗುತ್ತಾ?" ಎನ್ನುತ್ತಿದ್ದರು ನಮ್ಮ ಅಮ್ಮಮ್ಮ. ಇದು ಗ್ರಾಮೀಣರ ಸಹಜ ಉತ್ತರ ತಾನೆ! ಇನ್ನು ಕೆಲವು ಹಕ್ಕಿಗಳ, ಪ್ರಾಣಿಗಳ ನಿರ್ದಿಷ್ಟ ಹೆಸರು ಕ್ರಮೇಣ ಜನಮಾನಸದಿಂದ ಮರೆತೇಹೋಗಿರಬಹುದು.
ಆಗ, ಹೋಲಿಕೆಯ ಆಧಾರದಲ್ಲಿ ಹೆಸರು ಬಳಕೆಗೆ ಬಂದಿರುತ್ತದೆ. ಇಷ್ಟಿದ್ದರೂ, ವಿಶಿಷ್ಟವಾಗಿ ಕೂಗುವ ಒಂದು ಹಕ್ಕಿಗೆ ನಮ್ಮ ಹಳ್ಳಿಯ ಜನರು ಇಟ್ಟ ಹೆಸರು ಮಾತ್ರ ಬೆರಗು ಹುಟ್ಟಿಸು ವಂಥದ್ದು! ಆ ಹಕ್ಕಿಯ ಹೆಸರಿನ ಹಿಂದೆ ನಮ್ಮೂರಿನ ಕೃಷಿಕರು ಅನುಭವಿಸುತ್ತಾ ಬಂದಿರುವ ಕಷ್ಟ, ವೇದನೆಗಳ ವ್ಯಥೆಯಿದೆ.
ಸಾಮಾನ್ಯವಾಗಿ ಬೇಸಗೆಯ ದಿನಗಳಲ್ಲಿ ಮನೆಯ ಮುಂದಿನ ಹಾಡಿಯ ಮರಗಳ ಸಂದಿ ಯಲ್ಲಿ ಕುಳಿತ ಒಂದು ಹಕ್ಕಿ “ಹೋರಿ ಸತ್ತು ಹೋಯಿತೋ" ಎಂದು ಕೂಗುತ್ತದೆ. ಕೂ.. ಕೂ.. ಕೂ.. ಕೂ.. ಎಂದು ನಾಲ್ಕಾರು ಏರಿಳಿತ ಇರುವ ಆ ಹಕ್ಕಿಯ ಕೂಗನ್ನು “ಹೋರಿ ಸತ್ ಹೋಯ್ತೋ, ಹಣ ಕೊಟ್ ಆಯ್ತೋ" ಎಂದು ಅರ್ಥೈಸುತ್ತಾರೆ ನಮ್ಮ ಹಳ್ಳಿಯವರು (ಇಂಡಿಯನ್ ಕುಕೂ: ಕುಕುಲಸ್ ಮೈಕ್ರೋಪ್ಟೆರಸ್).
ಬೇರಾವುದೇ ಸಮಯದಲ್ಲಿ ಕೇಳಿಬರದ ಆ ಹಕ್ಕಿಯ ಕೂಗು, ಬೇಸಗೆಯ ಸಮಯದಲ್ಲಿ ಮಾತ್ರ ಕೇಳಿಬರುವುದು ನಮ್ಮೂರಿನವರಿಗೆ ಬೆರಗನ್ನು ತಂದಿರಬೇಕು. ಆದ್ದರಿಂದ, ಅದಕ್ಕೊಂದು ಡುಕಿ ಕಥೆ ಕಟ್ಟಿದ್ದಾರೆ. ಒಂದು ಜತೆ ಹೋರಿಗಳನ್ನು ಖರೀದಿಸಲು ಹೊರಟ ಒಬ್ಬ ಬಡ ರೈತ, ಕಾಡಿನ ದಾರಿ ದಾಟಿ ಪಕ್ಕದ ಹಳ್ಳಿಗೆ ಹೋದ. ಅಲ್ಲಿನ ಸ್ಥಿತಿವಂತ ರೈತನೊಬ್ಬನ ಬಳಿ ಹೋರಿಗಳ ವ್ಯಾಪಾರ ಮಾಡಿದ. ಅದಕ್ಕಾಗಿ ಸಾಲ ಮಾಡಿ, ಕಷ್ಟಪಟ್ಟು ಹಣ ಹೊಂದಿಸಿದ್ದ.
ಬೇಸಾಯ ಶುರುವಾಗುವ ಸಮಯಕ್ಕೆ ಹೋರಿಗಳನ್ನು ಹೊಡೆದು ತಂದರಾಯಿತು, ಅಷ್ಟರಲ್ಲಿ ಒಂದು ಕೊಟ್ಟಿಗೆ ಕಟ್ಟುವ ಎಂದು ಒಂದೆರಡು ವಾರ ಹೋರಿಗಳನ್ನು ಅಲ್ಲೇ ಬಿಟ್ಟುಬಂದ. ಮನೆಯ ಬಳಿ ಕೊಟ್ಟಿಗೆ ಕಟ್ಟಿದ. ಇನ್ನೇನು ಹೂಟಿ ಶುರುಮಾಡಬೇಕು, ಹೋರಿಗಳನ್ನು ಹೊಡೆದುಕೊಂಡು ಬರೋಣ ಎಂದು ಪಕ್ಕದ ಹಳ್ಳಿಗೆ ಹೋಗಿ ನೋಡಿದರೆ, “ಕಾಯಿಲೆ ಬಂದು ನೀನು ಖರೀದಿಸಿದ ಹೋರಿಗಳು ಸತ್ತು ಹೋದವು" ಎಂದು ಹೇಳಿದ, ಹೋರಿಗಳನ್ನು ಮಾರಿದಾತ. ಈತ ಬಡವ.
ಮಾರಿದಾತ ಸ್ಥಿತಿವಂತ. “ಹಣ ವಾಪಸು ಕೊಡಿ" ಎಂದು ಕೇಳಿದರೆ “ಹಣ ಎಲ್ಲಾ ಖರ್ಚಾಯ್ತು, ನಿನ್ನ ಹೋರಿ ಸತ್ತು ಹೋಯಿತಲ್ಲ. ಈಗ ಹಣ ಕೊಡು ಎಂದರೆ ನಾನೆಲ್ಲಿಂದ ತರಲಿ?" ಎಂದು ದಬಾಯಿಸಿದ ಆ ಸ್ಥಿತಿವಂತ ರೈತ. ಹಣ ಕೊಟ್ಟರೂ, ಹೋರಿ ಸಿಗದೇ ರೈತ ಹತಾಶನಾದ.
ಮನೆಯತ್ತ ಕಾಡುದಾರಿಯಲ್ಲಿ ಹೊರಟ ಆ ಬಡ ರೈತ, ಮನೆಗೆ ವಾಪಸಾಗಲು ಮನಸ್ಸಾ ಗದೇ, ಕಾಡಿನಲ್ಲೇ ಅಲೆದಾಡುತ್ತಾ “ಹೋರಿ ಸತ್ ಹೋಯ್ತೋ, ಹಣ ಕೊಟ್ ಆಯ್ತೋ" ಎಂದು ಕೂಗುತ್ತಾ ಹಕ್ಕಿಯ ರೂಪ ತಾಳಿದ್ದಾನೆ. ಇದು ನಮ್ಮ ಹಳ್ಳಿಯ ಜನಪದರ ಕಥೆ. ವಿಚಿತ್ರ ಧ್ವನಿಯಲ್ಲಿ ಕೂಗುವ ಹಕ್ಕಿಗೆ, ಕೃಷಿ ಕೆಲಸದ ಕಷ್ಟ, ವ್ಯಥೆಯ ಕಥೆಯನ್ನು ಜೋಡಿಸಿದ ಈ ಕಥನ ಕುತೂಹಲಕಾರಿ.
ಬೇಸಗೆಯ ದಿನಗಳಲ್ಲಿ ದೊಡ್ಡ ದನಿಯಲ್ಲಿ ಕೂಗುವ “ಹೋರಿ ಸತ್ ಹೋಯ್ತೋ" ಹಕ್ಕಿಯು, ನಮ್ಮ ಹಳ್ಳಿಯ ಎಲ್ಲರ ಗಮನವನ್ನೂ, ಹಳ್ಳಿಯನ್ನು ಸುತ್ತುವರಿದಿದ್ದ ಹಕ್ಕಲಿನತ್ತ ಸೆಳೆಯುವುದಂತೂ ನಿಜ. ಆ ಮೂಲಕ, ಪರಿಸರದ ಪ್ರಾಮುಖ್ಯತೆಯನ್ನು ಅದು ತಿಳಿಸಿ ಕೊಡುತ್ತದೆ.