ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Shishir Hegde Column: ಶ್..‌ ಗುಟ್ಟಿನ ಗುಟ್ಟನ್ನು ಹೇಳುತ್ತೇನೆ, ಯಾರಿಗೂ ಹೇಳ್ಬೇಡಿ

ಮಕ್ಕಳ ಯಾವುದೇ ಕಿತಾಪತಿ ತಿಳಿದಾಗ ಸಂಭ್ರಮಿಸಬೇಕೋ, ಪೂರ್ತಿ ಕೇಳಿಸಿಕೊಳ್ಳು ವುದಕ್ಕಿಂತ ಮೊದಲು ಬುದ್ಧಿವಾದಕ್ಕೆ ಇಳಿಯಬೇಕೋ ಅಥವಾ ‘ಅವರ ಮುಂದೆ ನಿಮ್ಮದೇನು ಕಿಸುಬೋಕ್ಕೆ’ ಎಂದು ನಮ್ಮ ಗತಕಾಲದ ಭುಜಬಲ ಪರಾಕ್ರಮ ಕೊಚ್ಚಿಕೊಳ್ಳಬೇಕೋ ಎಂಬಿತ್ಯಾದಿ ಬಹುವಿಕಲ್ಪ ನಮ್ಮ ತಲೆಮಾರಿನ ಅಪ್ಪ-ಅಮ್ಮಂದಿರದು.

ಶ್..‌ ಗುಟ್ಟಿನ ಗುಟ್ಟನ್ನು ಹೇಳುತ್ತೇನೆ, ಯಾರಿಗೂ ಹೇಳ್ಬೇಡಿ

-

ಶಿಶಿರಕಾಲ

ಎಲ್ಲಾ ಸತ್ಯಗಳನ್ನೂ ಪ್ರಪಂಚಕ್ಕೆ ಕೂಗಿ ಹೇಳಬೇಕೆಂದಿಲ್ಲ. ಉತ್ತಮ ಜೀವನ ನಿರ್ವಹಣೆಗೆ ಗುಟ್ಟುಗಳು ಬೇಕು. ಅಷ್ಟೇ ಅಲ್ಲ- ಅದನ್ನು ಸರಿಯಾಗಿಯೇ ಬಳಸಿಕೊಳ್ಳಬೇಕು. ಯಾವ ಗುಟ್ಟು ವಿಶ್ವಾಸವನ್ನು ಬೆಳೆಸುತ್ತದೆಯೋ, ಸುರಕ್ಷತೆ ಯನ್ನು ಹೆಚ್ಚಿಸುತ್ತದೆಯೋ, ಘನತೆ ಯನ್ನು ಕಾಪಾಡಿಕೊಳ್ಳುತ್ತದೆಯೋ, ಪ್ರಾಮಾಣಿಕವೋ, ಇನ್ನೊಬ್ಬರಿಗೆ ಹಾನಿಯುಂಟು ಮಾಡುವುದಿಲ್ಲವೋ ಅಂಥ ಗುಟ್ಟುಗಳು ನಮಗೆ ಹಾನಿ ಮಾಡುವುದಿಲ್ಲ.

ಆ ದಿನ ನನ್ನ ಮಗಳು ಮೈನಾ ಶಾಲೆಯಲ್ಲಿ ಏನೋ ಒಂದು ತುಂಟತನದ ಕೆಲಸ ಮಾಡಿ ಮನೆಗೆ ಬಂದಿದ್ದಳು. ಅವಳ ಯಾವುದೇ ಮಾತು “ಅಮ್ಮನಿಗೆ ಹೇಳಬೇಡ" ಎಂದು ಶುರುವಾದರೆ ಅದೇನೋ ಖದೀಮಗಿರಿ ಪೂರೈಸಿ ಬಂದಾಗಿದೆ ಎಂದೇ ಅರ್ಥ. ಹಳ್ಳಿಯಲ್ಲಿ ಬೆಳೆದು, ಪೇಟೆಗೋ, ಇನ್ನೆಲ್ಲಿಗೋ ಪರಭಾರೆಯಾದ ನಮ್ಮಂಥ ಅಪ್ಪಂದಿರಿಗೆ ನಮ್ಮ ಮಕ್ಕಳು ಬೇಕಾದಷ್ಟು ತುಂಟತನವನ್ನು ಮಾಡುವುದಿಲ್ಲವಲ್ಲ ಎಂಬುದೇ ಕೊರಗು.

ಮಕ್ಕಳ ಯಾವುದೇ ಕಿತಾಪತಿ ತಿಳಿದಾಗ ಸಂಭ್ರಮಿಸಬೇಕೋ, ಪೂರ್ತಿ ಕೇಳಿಸಿಕೊಳ್ಳು ವುದಕ್ಕಿಂತ ಮೊದಲು ಬುದ್ಧಿವಾದಕ್ಕೆ ಇಳಿಯಬೇಕೋ ಅಥವಾ ‘ಅವರ ಮುಂದೆ ನಿಮ್ಮದೇನು ಕಿಸುಬೋಕ್ಕೆ’ ಎಂದು ನಮ್ಮ ಗತಕಾಲದ ಭುಜಬಲ ಪರಾಕ್ರಮ ಕೊಚ್ಚಿಕೊಳ್ಳಬೇಕೋ ಎಂಬಿತ್ಯಾದಿ ಬಹುವಿಕಲ್ಪ ನಮ್ಮ ತಲೆಮಾರಿನ ಅಪ್ಪ-ಅಮ್ಮಂದಿರದು.

ಆದರೂ “ಒಂದು ವಿಷಯ ಹೇಳ್ತೇನೆ, ಅಮ್ಮನಿಗೆ ಹೇಳಬೇಡ.." ಎಂದ ಅರೆಕ್ಷಣ ಅಪ್ಪನಾದವನಿಗೆ ಒಂದು ಸೊಕ್ಕು ಬರುತ್ತದೆ. ‘ಬೇರೆಯವರಿಗೆ ಹೇಳಬೇಡ’ ಎಂದು ಶುರು ವಾಗುವ ಮಾತೇ ಹಾಗಲ್ಲವೇ. ‘ಗುಟ್ಟು’ ತಕ್ಷಣಕ್ಕೆ, ಕುತೂಹಲ, ಭರವಸೆ ಮತ್ತು ಆತ್ಮೀಯತೆಯ ಭಾವವನ್ನು ಎಲ್ಲರಲ್ಲೂ ಹುಟ್ಟಿಸುತ್ತದೆ.

ಗುಟ್ಟನ್ನು ಯಾರೇ, ಅದರಲ್ಲೂ ಮಕ್ಕಳು ಹೇಳಲು ಮುಂದಾದಾಗ ಸುಮ್ಮನೆ ಕೇಳಿಸಿ ಕೊಳ್ಳಬೇಕು. ಬುದ್ಧಿವಾದಕ್ಕಂತೂ ಅದು ಸಮಯವೇ ಅಲ್ಲ. ನಮಗೆಲ್ಲರಿಗೂ ಬಾಲ್ಯದ ಮೊದಲ ಹಂತದಲ್ಲಿ ಈ ‘ಗುಟ್ಟು’ ಎನ್ನುವ, ಮನುಷ್ಯಜಗತ್ತಿನ ಅತ್ಯಂತ ವಿಚಿತ್ರ ಸಾಮಾಜಿಕ ಸ್ವಭಾವ ಸುಲಭವಾಗಿ ಅರ್ಥವಾಗುವುದಿಲ್ಲ.

ಕೆಲ ದಿನಗಳ ಹಿಂದಿನ ಮಾತು. ಸ್ನೇಹಿತನೊಬ್ಬನ ಮನೆಯಲ್ಲಿ ಪೂಜೆಯಿತ್ತು- ಹೋಗಿದ್ದೆ. ಪೂಜೆ ಮುಗಿಯಿತು, ಊಟ ಶುರುಮಾಡಬೇಕಿತ್ತು; ಆದರೆ ಇನ್ನೊಂದು ಆಹ್ವಾನಿತ ಕುಟುಂಬ ಬರುವುದಿತ್ತೆಂದು ಎಲ್ಲರೂ ಕಾಯುತ್ತಿದ್ದೆವು.

ಇದನ್ನೂ ಓದಿ: Shishir Hegde Column: ಟಿಂಗ್‌ ಟಿಂಗ್ ಮೋಹಿನಿ ಮತ್ತು ಕೂರುವುದು ಎಂಬ ಸಾಧನೆ

ಸ್ವಲ್ಪವೇ ಹೊತ್ತಿನಲ್ಲಿ ಯುವ ತಂದೆ, ತಾಯಿ ಮತ್ತು ಸುಮಾರು ಮೂರು ವರ್ಷದ ಮಗು ಒಳಬಂದರು. ಎಲ್ಲರೂ ಅವರತ್ತ ನೋಡುತ್ತಿದ್ದಂತೆ, ಸೌಜನ್ಯಕ್ಕೆ “ಬರುವಾಗ ತಡವಾಯಿತು, ಕ್ಷಮಿಸಿ" ಎಂದು ಗಂಡ-ಹೆಂಡತಿ ಇಬ್ಬರೂ ಎಂಥದೋ ಒಂದು ಕಾರಣ ಕೊಟ್ಟು ಸಾರ್ವಜನಿಕ ಕ್ಷಮೆಯಾಚಿಸಿದರು. ಅಲ್ಲಿ ನೆರೆದಿದ್ದ ಉಳಿದವರಿಗೆ ಕಾರಣದ ಬಗ್ಗೆ ಅಷ್ಟೇನೂ ಕುತೂಹಲವಿರಲಿಲ್ಲ.

ಅವರೆಲ್ಲ ಆಗಷ್ಟೇ ‘ನಮ್ಮ ಮತ್ತು ಊಟದ ನಡುವಿನ ಗಂಡಾಂತರ ಕಳೆಯಿತು’ ಎಂದು ನಿರಾಳವಾಗಿದ್ದರು. ಆ ಹೊತ್ತಿನಲ್ಲಿ ಅವರ ಕೈಯಲ್ಲಿದ್ದ ಮಗು “ಇವತ್ತು ಅಮ್ಮ ಎದ್ದು ಕೊಂಡದ್ದೇ ಲೇಟ್. ಅಪ್ಪ ಸ್ನಾನ ಮಾಡಿಲ್ಲ" ಎಂದು ಬಿಟ್ಟಿತು!!

ಹೊಟ್ಟೆನೋವು ಮೂರು ದಿನ ಇತ್ತು, ಅಷ್ಟು ಅಲ್ಲಿ ಸೇರಿದ್ದ ಎಲ್ಲರೂ ನಗೆಯಾಡಿದ್ದರು. ಬಹುಶಃ ಬರುವಾಗ ಕಾರಿನಲ್ಲಿ ಇದನ್ನೇ ಅಪ್ಪ ಅಮ್ಮ ಮಾತನಾಡಿಕೊಂಡು ಬಂದದ್ದು ಮಗು ಕೇಳಿಸಿಕೊಂಡಿತ್ತು ಅನಿಸುತ್ತದೆ. ಆ ಮಗುವಿಗೆ ಆ ದಿನ ಮನೆಗೆ ಹೋದ ಕ್ಷಣವೇ ‘ಗುಟ್ಟು’ ಎಂದರೆ ಏನು, ಹೇಗೆ ಎಂಬ ಪಾಠ- ಗುಟ್ಟಿನ ಸಂಸ್ಕಾರ ಕಾರ್ಯಕ್ರಮ ನೆರವೇರಿರು ತ್ತದೆ ಬಿಡಿ. ಎಲ್ಲರಿಗೂ ಗುಟ್ಟು- ‘ಯಾವುದು ಯಾರಿಗೆ ಹೇಳಬೇಕು, ಹೇಳಬಾರದು’ ಎನ್ನುವ ಪರಿಕಲ್ಪನೆಯ ಪರಿಧಿಯನ್ನು ಪರಿಚಯಿಸುವುದು ಅವರವರ ಪ್ಪ-ಅಮ್ಮಂದಿರು, ಕುಟುಂಬದವರು. ಅಲ್ಲಿಂದ ಮುಂದೆ ಅಸಂಖ್ಯ ಗುಟ್ಟುಗಳ ನಡುವೆ ವ್ಯಕ್ತಿ ಬದುಕುತ್ತಾ ಹೋಗುತ್ತಾನೆ. ಕೆಲವು ಚಿಕ್ಕಪುಟ್ಟವು, ಕೆಲವು ಕೆಲವೊಮ್ಮೆ ದೇಶದಷ್ಟು ಗಾತ್ರದವು. ಕೆಲವು ಚಿಲ್ಲರೆ, ಇನ್ನು ಕೆಲವು ಎದೆಯ ಮೇಲೆ ಕಲ್ಲಿಟ್ಟುಕೊಂಡಂತೆ ಮಣ ಭಾರದವು!

ನಮ್ಮೆಲ್ಲರ, ಪ್ರತಿಯೊಬ್ಬರ ಕುಟುಂಬದಲ್ಲೂ ಅದೆಷ್ಟು ಗುಟ್ಟುಗಳು. ಕುಟುಂಬದ ಗುಟ್ಟು ಬೇರೆ, ಕುಟುಂಬದ ಒಳಗಡೆ ಸಂಬಂಧಗಳಲ್ಲೂ ಗುಟ್ಟುಗಳು. ಸ್ವಲ್ಪ ಗ್ರಹಿಸಿದರೆ ಎಲ್ಲ ಸಂಬಂಧಗಳನ್ನು ಹೆಣೆದು ನಿಲ್ಲಿಸಿದ, ಕೆಲವೊಮ್ಮೆ ಕಟ್ಟಿ ಹಾಕುವ ದಾರವೇ ಗುಟ್ಟುಗಳು ಎನ್ನುವುದು ತಿಳಿಯುತ್ತದೆ.

ನಿಮಗೆ ಅವರ ಯಾವ ಯಾವ ಗುಟ್ಟು ಗೊತ್ತು ಎನ್ನುವುದೇ ಸಂಬಂಧದ ಪ್ರಮಾಣ. ಕುಟುಂಬ ದಲ್ಲಿ ಅದೆಷ್ಟೋ ಗುಟ್ಟುಗಳು ಅನಿವಾರ್ಯ ಮತ್ತು ಕೆಲವು ತಾತ್ಕಾಲಿಕ. ಉದಾಹರಣೆಗೆ ಈಗೀಗ ಎಲ್ಲಾ ಕುಟುಂಬದಲ್ಲೂ ಹುಟ್ಟುಹಬ್ಬ ಇತ್ಯಾದಿ ಸಂಭ್ರಮಗಳಿಗೆ ಗುಟ್ಟಾಗಿ ತಿಳಿಯದಂತೆ ತಯಾರಿ ಮಾಡಿ, ‘ಸರ್‌ಪ್ರೈಸ್’ ಕೊಡುವ ಹೊಸ ತಲೆಮಾರಿನ ಆಚರಣೆಗಳ ರೀತಿ. ಇಂಥ ಸಮಯದಲ್ಲಿ ಮನೆಯೊಳಗೇ ಗುಟ್ಟನ್ನು ಕಾಪಾಡಿಕೊಳ್ಳುವುದು ಕೆಲವು ಗಂಡಸರ ಪಾಲಿಗಂತೂ ಸಿಂಹಸ್ವಪ್ನವೇ ಹೌದು. ಗುಟ್ಟು ಎಲ್ಲರಲ್ಲಿಯೂ ಸುಲಭದಲ್ಲಿ ಉಳಿಯುವುದಿಲ್ಲ. ಆದರೂ ಹೆಂಗಸರಲ್ಲಿ ಗುಟ್ಟು ಉಳಿಯುವುದಿಲ್ಲ ಎಂಬ ಲಿಂಗಭೇದ ನಂಬಿಕೆಯಂತೂ ಚಾಲ್ತಿಯಲ್ಲಿದೆ.

Screenshot_3 ok

ಎಲ್ಲಾ ಗುಟ್ಟುಗಳು ಇಷ್ಟು ಲಘುವಲ್ಲ! ಕಪಾಟಿನೊಳಗೆ ಮಡಸಿಟ್ಟ ಆರೋಗ್ಯದ/ರೋಗದ ರಿಪೋರ್ಟ್, ಆರ್ಥಿಕ ಸ್ಥಿತಿಯನ್ನು ಹೇಳುವ ಪಾಸ್‌ಬುಕ್, ಸ್ಯಾಲರಿ, ಸಾಲ, ಹಳಸಿದ ಸಂಬಂಧ ಇಂಥ ನೂರೆಂಟು ವೈಯಕ್ತಿಕ ಹಂತದ ಗುಟ್ಟುಗಳು. ಪ್ರತಿಯೊಬ್ಬ ವ್ಯಕ್ತಿ ಅವನದೇ ಆದ ಗುಟ್ಟಿನ ತ್ರಿಜೋರಿಯನ್ನು ಹೊತ್ತುಕೊಂಡು ಓಡಾಡುತ್ತಿರುತ್ತಾನೆ.

ಕಾರಣ? ಬದುಕಬೇಕೆಂದರೆ ಮನೆಯಲ್ಲಿ, ಉದ್ಯೋಗ-ವ್ಯಾಪಾರದಲ್ಲಿ, ಆಫೀಸಿನಲ್ಲಿ, ಸ್ನೇಹವರ್ಗದಲ್ಲಿ, ಶಾಲೆಯಲ್ಲಿ- ಒಟ್ಟಾರೆ ಸಮಾಜದಲ್ಲಿ ಬದುಕಬೇಕೆಂದರೆ ಯಾವ ವಿಷಯವನ್ನು ಯಾರಲ್ಲಿ ಹೇಳಬೇಕು, ಮುಚ್ಚಿಡಬೇಕು ಎನ್ನುವ ಕೌಶಲ ಅತ್ಯವಶ್ಯ. ಅದು ಸರಿಯಾಗಿ ತಿಳಿದವನು ಮಾತ್ರ ಇಲ್ಲಿ ಸುಲಭದಲ್ಲಿ ಬದುಕಿನ ಗಾಡಿ ಓಡಿಸಬಲ್ಲ.

ಗುಟ್ಟೇ ಬೇರೆ, ಅಪ್ರಾಮಾಣಿಕತೆಯೇ ಬೇರೆ. ಮಾನವಶಾಸ್ತ್ರಜ್ಞರನ್ನು ಕೇಳಿದರೆ ಅಲ್ಲಿಂದಿಲ್ಲಿ ಗೂ ನಾಗರಿಕತೆ ಈ ರೀತಿಯಲ್ಲಿ ಬೆಳೆದದ್ದಕ್ಕೆ ಕಾರಣವೇ ನಮ್ಮಲ್ಲಿರುವ ಗುಟ್ಟುಮಾಡುವ ಕೌಶಲ ಅಂತಾರೆ. ಸರಕಾರಗಳು, ಇಂಟೆಲಿಜೆನ್ ಏಜನ್ಸಿ, ಬೇಹುಗಾರಿಕಾ ಸಂಸ್ಥೆ, ಕಾರ್ಪೊ ರೇಷನ್, ವ್ಯಾಪಾರ, ಕುಟುಂಬ- ಹೀಗೆ ರಾಷ್ಟ್ರೀಯ ಭದ್ರತೆಯಿಂದ ಕುಟುಂಬದ ಆತ್ಮೀಯತೆಯವರೆಗೆ ಎಲ್ಲವೂ ನಿಯಂತ್ರಿತ ಮಾಹಿತಿಯ ಆಧಾರದ ಮೇಲೆಯೇ ನಿಂತಿವೆ.

ಸಾಮಾನ್ಯವಾಗಿ ಗುಟ್ಟುಗಳೆಂದರೆ ಏನೋ ಒಂದು ಮಾಹಿತಿಯ ರಕ್ಷಣೆ ಅಲ್ಲವೇ? ಆದರೆ ಕೆಲವೊಂದು ಗುಟ್ಟುಗಳು ವ್ಯಕ್ತಿಯನ್ನು ಕಾಪಾಡುವುದಿಲ್ಲ, ರಕ್ಷಿಸುವುದಿಲ್ಲ, ಬದಲಿಗೆ ಅವನ ಬದುಕಿಗೇ ತುಕ್ಕು ಹಿಡಿಸುತ್ತವೆ, ಅವನನ್ನೇ ತಿಂದುಹಾಕುತ್ತಿರುತ್ತವೆ.

ಯಾರಿಗೂ ಹೇಳದೇ ಎಲ್ಲರಿಂದ ಬಚ್ಚಿಟ್ಟ ದುಶ್ಚಟ, ಅಕ್ರಮ ಸಂಬಂಧ, ಯಾವತ್ತೋ ಆಗಿಹೋದ ಅವಮಾನ, ಪ್ರತೀಕಾರದ ಭಾವ ಇತ್ಯಾದಿ. ಇಂಥ ಗುಟ್ಟುಗಳ ಮೇಂಟೆನೆ- ನಿರ್ವಹಣೆ ಸುಲಭವಲ್ಲ. ಹೇಳುವ ಸುಳ್ಳು, ಕಥೆ, ಸಮಯ ಎಲ್ಲವೂ ಹೊಂದಿಕೆಯಾಗಬೇಕು. ಅದೆಲ್ಲದಕ್ಕಿಂತ ಹೆಚ್ಚಾಗಿ ಯಾವುದೇ ಗುಟ್ಟನ್ನು ಕಾಪಾಡಿಕೊಳ್ಳಲು ಬೇಕೆಂದು ಸುಳ್ಳು ಹೇಳುವ, ಸಮಾಜಾಯಿಷಿಯ ‘ರಿಹರ್ಸಲ’ ಮಾಡಿಕೊಳ್ಳುವ ಪ್ರಕ್ರಿಯೆ.

ನಮ್ಮ ಇತಿಹಾಸವಂತೂ ಗುಟ್ಟುಗಳಿಂದಲೇ ತುಂಬಿ ಹೋಗಿವೆ. ರಾಮಾಯಣ, ಮಹಾ ಭಾರತದಿಂದ ಹಿಡಿದು 21ನೇ ಶತಮಾನದ ಇತಿಹಾಸದವರೆಗೆ ಎಲ್ಲ ಇತಿಹಾಸದ ಮೂಲ ಧಾತು ಗುಟ್ಟು, ಗೌಪ್ಯತೆ. ಯಾವ ದೇಶ ತನ್ನ ಗುಟ್ಟನ್ನು ಗುಟ್ಟಾಗಿಯೇ ಇಡುವಲ್ಲಿ ಸಮರ್ಥ ವೋ ಆ ದೇಶ ಮಾತ್ರ ಇಂದಿನ ಜಗತ್ತಿನಲ್ಲಿ ನೆಲೆನಿಲ್ಲಲು ಸಾಧ್ಯ.

ಆಧುನಿಕ ಇತಿಹಾಸದಲ್ಲಿ ಗುಟ್ಟು ಎಂದಾಕ್ಷಣ ನನಗೆ ನೆನಪಾಗುವುದು ಅಮೆರಿಕದ ‘ಮ್ಯಾನ್ಹಟನ್ ಪ್ರಾಜೆಕ್ಟ್’. ಎರಡನೇ‌ ವಿಶ್ವಯುದ್ಧದ ಸಮಯ. ಸುಮಾರು 130000 ಮಂದಿ ಅಮೆರಿಕದ ಆ ಗೌಪ್ಯ ಯೋಜನೆಯ ಭಾಗವಾಗಿದ್ದರು. ಆದರೆ ಅವರ‍್ಯಾರಿಗೂ ತಾವು ಏನು ಮಾಡುತ್ತಿದ್ದೇವೆ ಎನ್ನುವ ಪೂರ್ಣ ಮಾಹಿತಿಯಿರಲಿಲ್ಲ.

ಲಾಸ್ ಅಲಮೋಸ್, ಓಕ್ ರಿಡ್ಜ್ ಎಂಬ ಎರಡು ನಗರದ ಬಹುತೇಕರು ಈ ಪ್ರಾಜೆಕ್ಟ್ʼನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಯಾರಿಗೂ ತಾವು ಮೊದಲ ಅಣ್ವಸ ತಯಾರಿಕೆಯಲ್ಲಿ ತೊಡಗಿದ್ದೇವೆ ಎಂದು ಗೊತ್ತೇ ಇರಲಿಲ್ಲ. ಅದೆಷ್ಟು ಗುಟ್ಟಿನಲ್ಲಿ ಇದೆಲ್ಲ ನಡೆದಿರಬೇಕು ಊಹಿಸಿಕೊಳ್ಳಿ. ಆಗ ಅಮೆರಿಕದ ಅಧ್ಯಕ್ಷರಾಗಿದ್ದವರು ಫ್ರಾಂಕ್‌ಲಿನ್ ರೂಸವೆಲ್ಟ್. ‌

ಅವರು ಎರಡನೇ ವಿಶ್ವಯುದ್ಧ ನಡೆಯುತ್ತಿರುವಾಗಲೇ ‘ಸ್ಟ್ರೋಕ್’ ಹೊಡೆದು ಸತ್ತು ಹೋದರು. ಆಗ ಅಮೆರಿಕದ ಉಪಾಧ್ಯಕ್ಷರಾಗಿದ್ದ ಹೆನ್ರಿ ಟ್ರೂಮನ್ ಅಧ್ಯಕ್ಷರಾಗಿ ಅಧಿಕಾರ ಹಿಡಿದರು. ಅಲ್ಲಿಯವರೆಗೆ ಹೆನ್ರಿ ಟ್ರೂಮನ್- ದೇಶದ ಉಪಾಧ್ಯಕ್ಷರಾಗಿದ್ದವರಿಗೂ- ಈ ಅಣ್ವಸ್ತ್ರ ತಯಾರಾಗುತ್ತಿದೆ, ಒಂದೂ ಕಾಲು ಲಕ್ಷ ಮಂದಿ ಇದರ ಕೆಲಸದಲ್ಲಿ ವರ್ಷದಿಂದ ತೊಡಗಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿದಿರಲಿಲ್ಲ.

ನಂತರ ಟ್ರೂಮನ್ ಅಧ್ಯಕ್ಷರಾಗಿ ಎರಡೇ ವಾರಕ್ಕೆ ಅಣ್ವಸ್ತ್ರ ಚಲಾಯಿಸುವ ನಿರ್ಧಾರ ತೆಗೆದುಕೊಳ್ಳುತ್ತಾನೆ. ಸದ್ಯದ ಜಗತ್ತಿನ ಅತ್ಯಂತ ಗುಟ್ಟಿನ ವಿಷಯ ಯಾವುದು ಗೊತ್ತೇ? ಮತ್ಯಾವುದು, ಅದೇ ಈ ಅಮೆರಿಕ ಅಧ್ಯಕ್ಷರ ಅಣ್ವಸ್ತ್ರ ಚಲಾಯಿಸಲು ಕೋಡ್ ಅಂತೆ. ಅಣ್ವಸದ ಬಹುತೇಕ ಮಾಹಿತಿಗಳು, ಬೇಹುಗಾರಿಕಾ ರೀತಿ, ಸಾಧ್ಯತೆ, ಕಾರ್ಯಾಚರಣೆಗಳು, ದೇಶದ ಸೈಬರ್ ಯುದ್ಧ ಸಾಮರ್ಥ್ಯ, ಯುದ್ಧ ನೀತಿ ಇವೆಲ್ಲ ಆಯಾದೇಶದ ಟಾಪ್ ಸೀಕ್ರೆಟ್. ಅದು ಬಿಟ್ಟು ಕೆಲವು ಕಮರ್ಷಿಯಲ್, ವಾಣಿಜ್ಯ ಗುಟ್ಟುಗಳು ಕೂಡ‌ ಹೆಚ್ಚು ಕಡಿಮೆ ಅಷ್ಟೇ ಗೌಪ್ಯದವು.

ಕೋಕಾ-ಕೋಲಾ ತನ್ನ ಸಕ್ಕರೆ ಪಾನಕದ ಪಾಕಮಾಹಿತಿಯನ್ನು (recipe) ಅದರ ಮುಖ್ಯ ಕಚೇರಿಯ ಬಹುಭದ್ರತೆಯ ತ್ರಿಜೋರಿಯಲ್ಲಿಟ್ಟಿದೆಯಂತೆ. ಇಬ್ಬರಿಗೆ ಮಾತ್ರ ಅದರ ಪೂರ್ಣ ಮಾಹಿತಿ ಇದೆಯಂತೆ. ಇಂಥ ಕೆಲವು ‘ದೊಡ್ಡ ಗುಟ್ಟಂತೆ’ ಎಂದೇ ಜನಪ್ರಿಯವಾಗುವ ಗುಟ್ಟುಗಳಿವೆ. ಅವು ಸತ್ಯವೋ, ಗಿಮಿಕ್ಕೋ ಯಾರಿಗೂ ಗೊತ್ತಿರುವುದಿಲ್ಲ.

ಅದೇ ಅಂಥ ಗುಟ್ಟುಗಳ ಗುಟ್ಟು. ನಾಟಿ ವೈದ್ಯರಿಂದ ವ್ಯಾಪಾರಿಗಳು, ಕಂಪನಿಯ ಸಿಇಒ ಆದಿಯಾಗಿ ಎಲ್ಲರೂ ಅವರವರ ಟ್ರೇಡ್ ಸೀಕ್ರೆಟ್ ಎಂಬ ಗುಟ್ಟನ್ನು ನಿರ್ವಹಿಸುತ್ತಾರೆ. ಇದು ಕೂಡ ಇಂದು ನಿನ್ನೆಯದಲ್ಲ. ಶತಶತಮಾನಗಳ ಹಿಂದೆ ಚೀನಾದ ರಾಜಮನೆತನವೊಂದು ರೇಷ್ಮೆ ಉತ್ಪಾದನೆಯನ್ನು ಗೌಪ್ಯವಾಗಿ ಸುಮಾರು ಆರೇಳು ಶತಮಾನ ಕಾಪಾಡಿಕೊಂಡು ಬಂದಿತ್ತಂತೆ.

ರೇಷ್ಮೆ ಜೀವಂತ ಹುಳು ಮತ್ತು ಹಿಪ್ಪು ನೇರಳೆಯ ಬೀಜ ರಾಜ್ಯದಿಂದ ಹೊರಹೋಗದಂತೆ ಎಲ್ಲಿಲ್ಲದ ಭದ್ರತೆ, ಇಡೀ ತಯಾರಿಕೆಯ ಮಾಹಿತಿಯ ಗೌಪ್ಯತೆ. ಏಕಸ್ವಾಮ್ಯತ್ವ (Monopoly ). ಆಮೇಲೆ ಅದೇ ಕುಟುಂಬದ ರಾಜಕುಮಾರಿಯೊಬ್ಬಳು ತನ್ನ ತವರಿಗೆ ಬಂದು ಮರಳುವಾಗ ತನ್ನ ಜಡೆಯಲ್ಲಿ ರೇಷ್ಮೆ ಗೂಡು ಮತ್ತು ಹಿಪ್ಪುನೇರಳೆ ಬೀಜ ಕದ್ದೊಯ್ದಳು ಎಂದು. ಈ ರೀತಿ ಗುಟ್ಟನ್ನು ಒಯ್ದು, ಇನ್ನೆಲ್ಲಿಗೋ ಕೊಟ್ಟು ಇತಿಹಾಸವೇ ಬದಲಾಗಿ ಹೋದ ಉದಾಹರಣೆಗಳು ಸಾಕಷ್ಟು.

ನೀವು ‘ಎಡ್ವರ್ಡ್ ಸ್ನೋಡನ್’ ಹೆಸರು ಕೇಳಿರುತ್ತೀರಿ. ಅಮೆರಿಕದ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದವನಿಗೆ ಅಮೆರಿಕ ತನ್ನದೇ ನಾಗರಿಕರ ಮೇಲೆ ಯಾವ ರೀತಿಯಲ್ಲಿ ಬೇಹುಗಾರಿಕೆ ನಡೆಸುತ್ತಿದೆ ಎನ್ನುವ ಮಾಹಿತಿ ತಿಳಿಯುತ್ತದೆ. ಅದು ಸರಕಾರದ ಗುಟ್ಟು. ವರ್ಲ್ಡ್ ಟ್ರೇಡ್ ಸೆಂಟರ್ ದಾಳಿಯ ನಂತರ ರೂಪಗೊಂಡ ವ್ಯವಸ್ಥೆ. ಯಾವುದೇ ಸರಕಾರ ಲೆಕ್ಕಾಚಾರದಂತೆ ತನ್ನದೇ ಜನರ ಮೇಲೆ ಬೇಹುಗಾರಿಕೆ ನಡೆಸುವಂತಿಲ್ಲ. ಆದರೆ ಅಮೆರಿಕ ಸರಕಾರ ತನ್ನ ನಾಗರಿಕರ ಮೊಬೈಲ್ ಸಂಖ್ಯೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಕಲೆಹಾಕುತ್ತಿತ್ತು. ಅದೆಲ್ಲ ವಿಷಯವನ್ನು ಎಡ್ವರ್ಡ್ ಸ್ನೋಡನ್ ಥಂಬ್ ಡ್ರೈವ್‌ಗೆ ಇಳಿಸಿ ಕೊಂಡು ರಷ್ಯಾಗೆ ಪಲಾಯನ ಮಾಡಿದ.

ಅಷ್ಟೇ ಅಲ್ಲ ಸುಮಾರು 15-20 ಲಕ್ಷ ಇಂಥ ಮಾಹಿತಿಯ ಫೈಲ್‌ಗಳನ್ನು ಬಹಿರಂಗ ಪಡಿಸಿ ಬಿಟ್ಟ. ಇಂಥ ಗುಟ್ಟು ರಟ್ಟಾಗಿಸುವ ಘಟನೆಗಳು ದೇಶವನ್ನೇ ಪ್ರಶ್ನಿಸುತ್ತವೆ, ಸರಕಾರಗಳನ್ನೇ ಅಲುಗಾಡಿಸಿಬಿಡುತ್ತವೆ.

ಈಗ ಅಮೆರಿಕಾದಲ್ಲಿ ಗುಟ್ಟು ರಟ್ಟಾದ ‘ಎಪ್‌ಸ್ಟೀನ್ ಹಗರಣ’ ಅದಕ್ಕೆ ಇನ್ನೊಂದು. ಬಿಲ್ ಕ್ಲಿಂಟನ್, ಬಿಲ್ ಗೇಟ್ಸ ಮೊದಲಾದವರ ಕಚ್ಚೆಹರಕುತನವೂ ಟಾಪ್ ಸೀಕ್ರೆಟ್- ಅತಿ ಗೌಪ್ಯವೇ ಆಗಿತ್ತು. ಗುಟ್ಟನ್ನು ಕಾಪಾಡಿಕೊಳ್ಳುವುದು ಅತ್ಯಂತ ದುಬಾರಿ- ಆರ್ಥಿಕವಾಗಿ ಮತ್ತು ಮಾನಸಿಕವಾಗಿ. ಯಾವುದೇ ಗುಟ್ಟು, ನಮ್ಮಲ್ಲಿಯೇ ಉಳಿಸಿಕೊಳ್ಳುವ ವಿಷಯ ಸಹಜವಾಗಿ ಉದ್ವೇಗಕ್ಕೆ ಕಾರಣವಾಗುತ್ತವೆ. ಇದು ಎಲ್ಲರ ಅನುಭವ.

ಒತ್ತಡವೇಕೆ? ಗುಟ್ಟು ಎಂದಾಕ್ಷಣ ಆ ಮಾಹಿತಿ ಎಂಥದ್ದೇ ಇರಲಿ, ಅದಕ್ಕೆ ಹೆಚ್ಚಿನ ಮೌಲ್ಯ, ಗೌರವ. ಮನಃಶಾಸ್ತ್ರಜ್ಞರ ಪ್ರಕಾರ ಗುಟ್ಟು ಇರಬೇಕು-ಅದರದ್ದೇನೂ ಸಮಸ್ಯೆ ಇಲ್ಲ. ಉಪದ್ರ ಗುಟ್ಟಿಗೆ ಸಂಬಂಧಿಸಿದ ನಮ್ಮ ಮಾನಸಿಕ ರಿಹರ್ಸಲ್‌ನದು. ‘ಗುಟ್ಟು ತಿಳಿದುಬಿಟ್ಟರೆ ಹೇಗೆ?’ ಇದು ಕ್ರಮೇಣ ನಿರಂತರ ಉದ್ವೇಗಕ್ಕೆ ಕಾರಣವಾಗುತ್ತದೆಯಂತೆ. ಗುಟ್ಟು ಕೇಳುವಾಗ ಕುತೂಹಲವೆನಿಸಿದರೂ ಕೇಳಿದ ಮೇಲೆ ರಗಳೆಯೇ ಹೌದು ಬಿಡಿ.

ನಮ್ಮ ಮಂತ್ರಗಳಲ್ಲಿ ಅದೆಷ್ಟು ಮಾಹಿತಿಯನ್ನು ಗುಟ್ಟಾಗಿ ಇಡಲಾಗಿದೆ ಎನ್ನುವ ಪೂರ್ಣ ಅಂದಾಜು ನಮ್ಮಲ್ಲಿ ಎಲ್ಲರಿಗೂ ಇಲ್ಲ. ಮಂತ್ರ ಎಂದಾಕ್ಷಣ ದೇವರನ್ನು ಹೊಗಳುವುದು, ಬ್ರಾಹ್ಮಣರದ್ದು ಎಂದಾಗಿದೆ. ಉಳಿದ ಜಗತ್ತು ಭೂಮಿ ಸಪಾಟಾಗಿದೆ ಎಂದು ನಂಬಿದ್ದ ಕನಿಷ್ಠ ಐದು ಸಾವಿರ ವರ್ಷದ ಹಿಂದೆಯೇ ಬ್ರಹ್ಮಾಂಡದ ಕಲ್ಪನೆ, ಸ್ಪಷ್ಟತೆ ವೇದ ಮಂತ್ರ ಗಳಲ್ಲಿದೆ.

ನಾದ ಮತ್ತು ಶಬ್ದಶಕ್ತಿ, ಭದ್ರತೆ ಇತ್ಯಾದಿ. ಇಂದಿನ ಅತ್ಯಾಧುನಿಕ ಜಗತ್ತಿನ ಎಲ್ಲರ ಸಮಸ್ಯೆ- ಮಾನಸಿಕ ಸಮಸ್ಯೆ. ಅದಕ್ಕೆ ಬೇಕಾದ ಪರಿಹಾರ, ಧ್ಯಾನ, ಯೋಗ ಏನುಂಟು ಏನಿಲ್ಲ. ಅದೆಲ್ಲವನ್ನೂ ಹಿಂದಿನವರು ಗುಟ್ಟಾಗಿ ಇಟ್ಟದ್ದಲ್ಲ- ಪಟ್ಟಾಗಿ ಮಂತ್ರದಲ್ಲಿಟ್ಟದ್ದು. ನಮ್ಮ ಇಂದಿನ ವ್ಯವಸ್ಥೆಯ ಕರ್ಮಕ್ಕೆ ನಮ್ಮ ಜ್ಞಾನ ನಮ್ಮೆದುರೇ ಗುಟ್ಟಾಗಿ, ದೂರವಾಗಿ ಕೂತಿದೆ.

ಎಲ್ಲರೂ ಪಾರದರ್ಶಕತೆಯನ್ನು ಕೊಂಡಾಡುತ್ತಾರೆ, ಎಲ್ಲರಿಗೂ ಪಾರದರ್ಶಕತೆ ಬೇಕು. ಆದರೆ ಗುಟ್ಟುಗಳಿಲ್ಲದೆ ಜಗತ್ತು ಸಾಧ್ಯವಿಲ್ಲ. ಗುಟ್ಟು ನಂಬಿಕೆಯದ್ದೇ ಭಾಗ. ಆದರೆ ಕೆಲವೊಂದು ಗುಟ್ಟು ಬಿಟ್ಟುಕೊಟ್ಟರೆ ಮಾತ್ರ ನೆಮ್ಮದಿ. ಕ್ರಿಶ್ಚಿಯಾನಿಟಿಯಲ್ಲಿ- ಕನೆಶನ್ ರೂಮ, ದೇವರಿಗೆ ಹೇಳಿದ್ದು ಸಮಾಧಾನವಾಗದಿದ್ದಲ್ಲಿ ಇನ್ನೊಬ್ಬ ವ್ಯಕ್ತಿಗೆ- ಪಾದ್ರಿಗೆ ಹೇಳುವ ವ್ಯವಸ್ಥೆ ಇದೇ ಅವಶ್ಯಕತೆಯಿಂದ ಹುಟ್ಟಿದ್ದು.

‘ಅಮ್ಮನಿಗೆ ಹೇಳಬೇಡ’ ಎಂದು ಮೆಲ್ಲಗೆ ಶುರುವಾಗುವ ಗುಟ್ಟು ಎಲ್ಲಿಯೋ ಹೇಗೇಗೋ ನಮ್ಮಲ್ಲಿ ರೂಪತಾಳುತ್ತವೆ, ಬದುಕನ್ನು ನಿರ್ದೇಶಿಸುತ್ತವೆ. ಎಲ್ಲಾ ಸತ್ಯಗಳನ್ನೂ ಪ್ರಪಂಚಕ್ಕೆ ಕೂಗಿ ಹೇಳಬೇಕೆಂದಿಲ್ಲ. ಉತ್ತಮ ಜೀವನ ನಿರ್ವಹಣೆಗೆ ಗುಟ್ಟುಗಳು ಬೇಕು. ಅಷ್ಟೇ ಅಲ್ಲ- ಅದನ್ನು ಸರಿಯಾಗಿಯೇ ಬಳಸಿಕೊಳ್ಳಬೇಕು. ಯಾವ ಗುಟ್ಟು ವಿಶ್ವಾಸವನ್ನು ಬೆಳೆಸುತ್ತದೆ ಯೋ, ಸುರಕ್ಷತೆಯನ್ನು ಹೆಚ್ಚಿಸುತ್ತದೆಯೋ, ಘನತೆಯನ್ನು ಕಾಪಾಡಿ ಕೊಳ್ಳುತ್ತದೆಯೋ, ಪ್ರಾಮಾಣಿಕವೋ, ಇನ್ನೊಬ್ಬರಿಗೆ ಹಾನಿಯುಂಟುಮಾಡುವುದಿಲ್ಲವೋ ಅಂಥ ಗುಟ್ಟುಗಳು ನಮಗೆ ಹಾನಿಮಾಡುವುದಿಲ್ಲ.

ಯಾವ ಗುಟ್ಟು ದುರುದ್ದೇಶದ್ದೋ, ನಮ್ಮನ್ನು ನೋವಾಗಿ, ರಗಳೆಯಾಗಿ ಕಾಡುತ್ತದೆಯೋ ಅಂಥ ಅಪ್ರಾಮಾಣಿಕ ಗುಟ್ಟನ್ನು ಬಿಟ್ಟುಬಿಡದಿದ್ದಲ್ಲಿ ಅವು ಬೆನ್ನಿನ ಮೇಲಿನ ಆಲೂಗಡ್ಡೆ ಚೀಲದಂತೆ. ಭಾರವಾಗುತ್ತದೆ, ಕ್ರಮೇಣ ಕೊಳೆಯುತ್ತದೆ, ವಾಸನೆ, ತುರಿಕೆ, ಗಾಯ. ಅದನ್ನು ಬೇಗ ಕೆಳಗಿಳಿಸುವುದೇ ಬುದ್ಧಿವಂತಿಕೆ.

ನಮ್ಮ ಸುತ್ತಲೂ ಅದೆಷ್ಟು ಗುಟ್ಟುಗಳಿಲ್ಲವೇ? ‘ಮನುಷ್ಯ ಹುಟ್ಟುವಾಗ ಏನನ್ನೂ ತರುವುದಿಲ್ಲ, ಹೋಗುವಾಗ, ಸಾಯುವಾಗ ಏನನ್ನೂ ಒಯ್ಯುವುದಿಲ್ಲ’ ಎಂಬ ಮಾತಿದೆ ಯಲ್ಲ. ಆದರೆ ಇದೆಲ್ಲದಕ್ಕೆ ಅಪವಾದ ‘ಗುಟ್ಟು’. ಏಕೆಂದರೆ ಕೆಲವರು ಸಾಯುವಾಗ ಕೆಲವು ಗುಟ್ಟುಗಳನ್ನೂ ತಮ್ಮ ಜತೆ ತೆಗೆದುಕೊಂಡು ಹೋಗಿ ಬಿಡುತ್ತಾರೆ!