Roopa Gururaj Column: ಬೃಹದೀಶ್ವರ ದೇವಾಲಯದ ಮುಂದಿನ ಅಳಗಿ ಕೊಳ
ಎಚ್ಚರವಾದ ರಾಜನು ಅಜ್ಜಿ ಯಾರು ಎಂದು ಹುಡುಕಿಸಿ, ಅವಳ ಗುಡಿಸಲಿಗೆ ಬಂದನು. ಅವಳ ಶ್ರದ್ಧೆ, ಭಕ್ತಿ ಮತ್ತು ಸೇವಾಭಾವವನ್ನು ತಿಳಿದು ತುಂಬಾ ಮೆಚ್ಚಿದನು. ದೇವಾಲಯದ ಪ್ರತಿಷ್ಠಾಪನೆಯ ದಿನ, ಅಜ್ಜಿಯ ಸ್ಮರಣಾರ್ಥವಾಗಿ ರಾಜನು ಅವಳ ಹೆಸರಿನಲ್ಲಿ ದೇವಾಲಯದ ಸಮೀಪವೇ ಒಂದು ಸುಂದರ ವಾದ ನೀರಿನ ಕೊಳವನ್ನೂ ಕಟ್ಟಿಸಿದನು. ಆ ಕೊಳ ಇಂದಿಗೂ ಅಲ್ಲಿ ಕಾಣಿಸುತ್ತದೆ.
-
ಒಂದೊಳ್ಳೆ ಮಾತು
ತಮಿಳುನಾಡಿನಲ್ಲಿ ಶೈವ ಮತದ ಭಕ್ತರಾಗಿದ್ದ ಚೋಳರ ಆಡಳಿತವಿದ್ದ ಕಾಲ. ಶಿವಭಕ್ತಿಯ ಪ್ರತೀಕವಾಗಿ ಅವರು ಅನೇಕ ಭವ್ಯವಾದ ಶಿವಾಲಯಗಳನ್ನು ಕಟ್ಟಿಸಿದರು. ಉತ್ತಮ ಆಡಳಿತ, ಕಲೆ-ಶಿಲ್ಪಗಳಿಂದ ಚೋಳರ ಕಾಲ ಸುವರ್ಣಯುಗವೆಂದೇ ಪ್ರಸಿದ್ಧವಾಯಿತು. ಅವರಲ್ಲಿ ಒಬ್ಬನಾದ ರಾಜರಾಜ ಚೋಳನು, ಪರಮೇಶ್ವರನಿಗಾಗಿ ಇಡೀ ಭೂಮಿಯ ಅಪೂರ್ವವಾಗಿರುವಂಥ ದೇವಾಲಯವನ್ನು ಕಟ್ಟಬೇಕೆಂದು ಸಂಕಲ್ಪ ಮಾಡಿದನು.
ದೇವಾಲಯದ ಮೇಲೆ ನಿರ್ಮಿಸುವ ವಿಮಾನ ಗೋಪುರವು ಎಷ್ಟು ಅದ್ಭುತವಾಗಿರಬೇಕು ಎಂದರೆ, ಅದರ ನೆರಳು ಸಹ ಭೂಮಿಗೆ ಬೀಳಬಾರದು ಎಂಬುದು ರಾಜನ ಆಶಯವಾಗಿತ್ತು. ಈ ಮಹಾ ಯೋಜನೆಗಾಗಿ ದೇಶದ ವಿವಿಧ ಭಾಗಗಳಿಂದ ಸಾವಿರಾರು ಶಿಲ್ಪಿಗಳು, ಕೂಲಿಕಾರರನ್ನು ಕರೆಸ ಲಾಯಿತು.
ಹಗಲು-ರಾತ್ರಿ ಎನ್ನದೆ ಕೆಲಸ ನಡೆಯಿತು. ಧನಿಕರಿಂದ ಹಿಡಿದು ಸಾಮಾನ್ಯ ಜನರವರೆಗೆ, ತಮ್ಮ ಶಕ್ತಿಗೆ ತಕ್ಕಂತೆ ಎಲ್ಲರೂ ಹಣ, ಶ್ರಮದಾನ ಮಾಡಿದರು. ಇಡೀ ರಾಜ್ಯವೇ ದೇವಾಲಯದ ನಿರ್ಮಾಣ ಕಾರ್ಯದಲ್ಲಿ ತೊಡಗಿತ್ತು.
ಇದನ್ನೂ ಓದಿ: Roopa Gururaj Column: ಬೆಂಕಿ ಹತ್ತಿದ ಬಸ್ಸಿಗೆ ನುಗ್ಗಿ ಮಕ್ಕಳ ಪ್ರಾಣ ಉಳಿಸಿದ 11ರ ಹುಡುಗ
ದೇವಾಲಯದ ಸಮೀಪದ ಒಂದು ಸಣ್ಣ ಹಳ್ಳಿಯಲ್ಲಿ ‘ಅಳಗಿ’ ಎಂಬ ಹೆಸರಿನ ವೃದ್ಧೆ ವಾಸಿಸು ತ್ತಿದ್ದಳು. ಅವಳಿಗೆ ದೇವಾಲಯ ನಿರ್ಮಾಣದ ಮಹತ್ವ ಗೊತ್ತಿತ್ತು. ಆದರೆ ಅವಳ ಬಳಿ ಹಣವೂ ಇರಲಿಲ್ಲ, ಕೆಲಸ ಮಾಡುವ ಶಕ್ತಿಯೂ ಇರಲಿಲ್ಲ. ನಾನೇನು ಮಾಡಲಿ ಶಿವನೇ? ಎಂದು ಆಕೆ ಮನಸ್ಸಿನಲ್ಲಿ ನೋವಿನಿಂದ ಚಿಂತಿಸುತ್ತಿದ್ದಳು.
ಒಂದು ದಿನ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಒಬ್ಬ ಕೂಲಿ ಆಳು ಬಾಯಾರಿಕೆಯಿಂದ ಅಳಗಿಯ ಮನೆ ಬಳಿ ಬಂದು “ಅಜ್ಜಿ, ಬಹಳ ಬಾಯಾರಿಕೆಯಾಗಿದೆ. ಸ್ವಲ್ಪ ಮಜ್ಜಿಗೆ ಇದ್ದರೆ ಕೊಡುತ್ತೀಯಾ?" ಎಂದು ಕೇಳಿದ. ಅಜ್ಜಿ ಸಂತೋಷದಿಂದ ಒಳಗೆ ಹೋಗಿ ತಾಜಾ ಮಜ್ಜಿಗೆ ಮಾಡಿ ತಂದಳು. ಅದನ್ನು ಕುಡಿದ ಆ ಕಾರ್ಮಿಕನಿಗೆ ಹೊಸ ಚೈತನ್ಯ ಬಂದಿತು.
“ಅಜ್ಜಿ, ದೇವರು ನಿನಗೆ ಒಳ್ಳೆಯದು ಮಾಡಲಿ" ಎಂದು ಅವನು ಸಂತೃಪ್ತಿಯಿಂದ ಹರಸಿ ಹೋದನು. ಆ ಕ್ಷಣವೇ, ವೃದ್ಧೆ ಅಳಗಿಯ ಮನಸ್ಸಿನಲ್ಲಿ ಒಂದು ಮಿಂಚಿನಂಥ ಯೋಚನೆ ಮೂಡಿತು. ದೇವಾಲಯದ ನಿರ್ಮಾಣಕ್ಕೆ ಸಾವಿರಾರು ಜನ ಕೆಲಸ ಮಾಡುತ್ತಿದ್ದಾರೆ.
ಅವರಿಗೆ ಬಾಯಾರಿಕೆಯಾಗುತ್ತದೆ. ನಾನು ಅವರಿಗೆ ಮಜ್ಜಿಗೆ ಕೊಟ್ಟರೆ, ಅದೂ ಭಗವಂತನ ಸೇವೆಯೇ ಅಲ್ಲವೇ? ಎಂದು ನಿರ್ಧರಿಸಿದಳು. ಮರುದಿನದಿಂದಲೇ ಅಜ್ಜಿ ಬೆಳಗ್ಗೆ ಬೇಗ ಎದ್ದು ಸಾಕಷ್ಟು ಮಜ್ಜಿಗೆ ತಯಾರಿಸಿ, ಗಡಿಗೆಯಲ್ಲಿ ತುಂಬಿಕೊಂಡು ನಿರ್ಮಾಣ ಸ್ಥಳದ ಬಳಿ ಕುಳಿತು ಕಾರ್ಮಿಕರಿಗೆ ಹಂಚತೊಡಗಿದಳು.
ಶುದ್ಧ ಮನಸ್ಸಿನಿಂದ, ಪ್ರೀತಿಯಿಂದ ಕೊಟ್ಟ ಮಜ್ಜಿಗೆ ಕಾರ್ಮಿಕರಿಗೆ ಹೊಸ ಶಕ್ತಿ ನೀಡುತ್ತಿತ್ತು. ಪ್ರತಿದಿನವೂ ಅವರು ಅಜ್ಜಿಯನ್ನು ಪ್ರೀತಿಯಿಂದ ಮಾತಾಡಿ ಹಾರೈಸುತ್ತಿದ್ದರು. ದೇವಾಲಯದ ಕೆಲಸ ಮುಗಿಯುವವರೆಗೂ ಅಜ್ಜಿ ತನ್ನ ಸೇವೆಯನ್ನು ನಿಲ್ಲಿಸಲಿಲ್ಲ. ಆದರೂ ಅವಳ ಮನಸ್ಸಿನಲ್ಲಿ ‘ನಾನು ದೊಡ್ಡ ಕೆಲಸ ಏನೂ ಮಾಡಲಿಲ್ಲ’ ಎಂಬ ಕೊರಗು ಉಳಿದಿತ್ತು.
ಇನ್ನೇನು ದೇವಾಲಯ ಪೂರ್ಣಗೊಳ್ಳಬೇಕಿತ್ತು. ಆದರೆ ವಿಮಾನ ಗೋಪುರಕ್ಕೆ ಹೊಂದುವಂಥ ದೊಡ್ಡ ಕಲ್ಲು ಸಿಗದೆ ಶಿಲ್ಪಿಗಳು ಚಿಂತೆಯಲ್ಲಿದ್ದರು. ಅದೇ ಸಮಯದಲ್ಲಿ ಅಜ್ಜಿ ತನ್ನ ಮನೆಯ ಅಂಗಳದಲ್ಲಿದ್ದ ಹಳೆಯ ದೊಡ್ಡ ಬಂಡೆಕಲ್ಲನ್ನು ಗಮನಿಸಿದಳು. ಮಜ್ಜಿಗೆ ಕುಡಿಯಲು ಬಂದ ಕಾರ್ಮಿಕನಿಗೆ, “ಈ ಕಲ್ಲು ದೇವಸ್ಥಾನದ ಶಿಖರಕ್ಕೆ ಉಪಯೋಗವಾಗಬಹುದೇ?" ಎಂದು ಕೇಳಿದಳು.
ಕಲ್ಲನ್ನು ಶಿಲ್ಪಿಗಳಿಗೆ ತೋರಿಸಲಾಯಿತು. ಅದನ್ನು ನೋಡಿದ ಶಿಲ್ಪಿ ಅಚ್ಚರಿಯಿಂದ, “ಈ ಕಲ್ಲು ವಿಮಾನ ಗೋಪುರಕ್ಕೇ ಹೇಳಿ ಮಾಡಿಸಿದಂತೆ ಇದೆ!" ಎಂದು ಹೇಳಿದ. ಅದನ್ನು ಸುಂದರವಾಗಿ ಕಡೆದು, ಕಲಾತ್ಮಕವಾಗಿ ಚಿತ್ತಾರ ಮಾಡಿ, ದೇವಾಲಯದ ಮೇಲೆ ವಿಮಾನ ಗೋಪುರವಾಗಿ ಕೂರಿಸಲಾಯಿತು. ಗೋಪುರ ಅಚ್ಚುಕಟ್ಟಾಗಿ, ಅದ್ಭುತವಾಗಿ ಮೂಡಿಬಂದಿತು.
ಆ ರಾತ್ರಿ ರಾಜರಾಜನಿಗೆ ಕನಸಿನಲ್ಲಿ ಶಿವನು ಪ್ರತ್ಯಕ್ಷನಾಗಿ, “ರಾಜನೇ, ಅಳಗಿ ಕೊಟ್ಟ ಕಲ್ಲಿನ ಕೆಳಗೆ ನೆಲೆಸಿರುವುದು ನನಗೆ ಅಪಾರ ಸಂತೋಷ ನೀಡುತ್ತಿದೆ" ಎಂದು ಹೇಳಿದಂತಾಯಿತು. ಎಚ್ಚರವಾದ ರಾಜನು ಅಜ್ಜಿ ಯಾರು ಎಂದು ಹುಡುಕಿಸಿ, ಅವಳ ಗುಡಿಸಲಿಗೆ ಬಂದನು. ಅವಳ ಶ್ರದ್ಧೆ, ಭಕ್ತಿ ಮತ್ತು ಸೇವಾಭಾವವನ್ನು ತಿಳಿದು ತುಂಬಾ ಮೆಚ್ಚಿದನು. ದೇವಾಲಯದ ಪ್ರತಿಷ್ಠಾಪನೆಯ ದಿನ, ಅಜ್ಜಿಯ ಸ್ಮರಣಾರ್ಥವಾಗಿ ರಾಜನು ಅವಳ ಹೆಸರಿನಲ್ಲಿ ದೇವಾಲಯದ ಸಮೀಪವೇ ಒಂದು ಸುಂದರವಾದ ನೀರಿನ ಕೊಳವನ್ನೂ ಕಟ್ಟಿಸಿದನು. ಆ ಕೊಳ ಇಂದಿಗೂ ಅಲ್ಲಿ ಕಾಣಿಸುತ್ತದೆ.
ಭಗವಂತನ ಸೇವೆಗೆ ಹಣ, ಶಕ್ತಿ ಅಥವಾ ದೊಡ್ಡ ಸಾಧನೆ ಬೇಕೆಂದೇನಿಲ್ಲ. ಶುದ್ಧ ಮನಸ್ಸು, ಸೇವೆ ಮಾಡುವ ತುಡಿತ ಇದ್ದರೆ ಸಾಕು. ಅಜ್ಜಿ ಮಜ್ಜಿಗೆಯ ಮೂಲಕ ಮಾಡಿದ ಸೇವೆಯಂತೆ, ಶಕ್ತ್ಯಾನುಸಾರ ಸೇವೆ ಮಾಡುವ ಅವಕಾಶ ನಮಗೂ ಸಿಗುತ್ತದೆ. ಆ ನಿಸ್ವಾರ್ಥ ಸೇವೆಯೇ ಭಗವಂತನಿಗೆ ತಲುಪುತ್ತದೆ...