ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayaka V Bhat Column: ವೈರುಧ್ಯಗಳನ್ನು ಮೀರಿ ಕನ್ನಡ ಹೋರಾಟ ಸಾಗಿ ಬಂದ ದಾರಿ

1966ರವರೆಗೂ ಕನ್ನಡದ ಕಾರ್ಯಕರ್ತರಿಗೆ ಯಾವುದೇ ನಿರ್ದಿಷ್ಟ ಬಾವುಟವೆಂಬುದು ಇರ ಲಿಲ್ಲ. ಈ ಕೊರತೆಯನ್ನು ನೀಗಲು ರಾಮಮೂರ್ತಿ ಹಾಗೂ ವಾಟಾಳರು ಬೆಂಗಳೂರಿನಲ್ಲಿ ಕನ್ನಡ ಸಂಘಟನೆಗಳ ಸಭೆ ಸೇರಿಸಿದರು. ಇಲ್ಲಿ ಪರಿಚಯಿಸಿದ ಬಾವುಟವು ಕರ್ನಾಟಕದ ನಕಾಶೆಯನ್ನು ಹೊಂದಿತ್ತು. ನಕಾಶೆಯ ಮಧ್ಯೆ ಬೆಳೆಯುತ್ತಿರುವ ಪೈರಿನ ಚಿತ್ರಣವಿತ್ತು. ಈ ಬಾವುಟ ಕರ್ನಾಟಕಕ್ಕೆ ಸೇರಬೇಕಾದ ಗಡಿಭಾಗಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾ ಯಿತು.

ವೈರುಧ್ಯಗಳನ್ನು ಮೀರಿ ಕನ್ನಡ ಹೋರಾಟ ಸಾಗಿ ಬಂದ ದಾರಿ

-

ವಿದ್ಯಮಾನ

ಕನ್ನಡದ ರಾಜಧಾನಿಯು ಅನ್ಯಭಾಷಿಕರ ಅದರಲ್ಲೂ ತಮಿಳರ ಹಿಡಿತದಲ್ಲಿರುವಾಗ, ಅ.ನ.ಕೃ., ಮ. ರಾಮಮೂರ್ತಿ ಮೊದಲಾದವರು ಬೆಂಗಳೂರಿನಲ್ಲಿ ಕನ್ನಡಪರ ಸಂಘ-ಸಂಸ್ಥೆಗಳನ್ನು ಕಟ್ಟಿಕೊಳ್ಳಲು ಜನರಿಗೆ ಕರೆ ನೀಡಿದ್ದರು. ಆಗ ಬೆಂಗಳೂರಿನಲ್ಲಿ ತಮಿಳರ ಸಂಘ-ಸಂಸ್ಥೆಗಳು ನಾಯಿಕೊಡೆಯಂತೆ ತಲೆ ಎತ್ತಿದ್ದವು. ಅದರಲ್ಲೂ ಡಿಎಂಕೆ ಪಕ್ಷದವರ ಕಪ್ಪು ಮತ್ತು ಕೆಂಪು ಬಣ್ಣದ ಬಾವುಟಗಳು ಕಂಡಕಂಡಲ್ಲಿ ಹಾರಾಡುತ್ತಿದ್ದವು.

ಆ ಕಾಲದಲ್ಲಿ ಕನ್ನಡಿಗರಿಗೆ ನಿರ್ದಿಷ್ಟ ಕನ್ನಡ ಬಾವುಟವೊಂದು ಇರಲಿಲ್ಲ. ಭುವನೇಶ್ವರಿ, ಕರ್ನಾಟಕ ಭೂಪಟ, ಗಂಡಭೇರುಂಡ ಮುಂತಾದ ಚಿತ್ರಗಳಿರುವ ಬಾವುಟಗಳನ್ನೇ ಹೋರಾಟಗಾರರು ಬಳಸುತ್ತಿದ್ದರು. ಹೀಗಾಗಿ ಕನ್ನಡದ ಈ ಸಂಘಟನೆಗಳು ಬಾವುಟದ ಕೊರತೆಯನ್ನು ಮನಗಂಡು ಕ್ರಿಯಾಶೀಲವಾದವು. ಕನ್ನಡದ ಪ್ರದೇಶಗಳಲ್ಲಿ ಕನ್ನಡದ ಬಾವುಟಕ್ಕೆ ಪ್ರಾಶಸ್ತ್ಯ ಚಳವಳಿ ಹೂಡಲಾಯಿತು.

1966ರವರೆಗೂ ಕನ್ನಡದ ಕಾರ್ಯಕರ್ತರಿಗೆ ಯಾವುದೇ ನಿರ್ದಿಷ್ಟ ಬಾವುಟವೆಂಬುದು ಇರಲಿಲ್ಲ. ಈ ಕೊರತೆಯನ್ನು ನೀಗಲು ರಾಮಮೂರ್ತಿ ಹಾಗೂ ವಾಟಾಳರು ಬೆಂಗಳೂರಿ ನಲ್ಲಿ ಕನ್ನಡ ಸಂಘಟನೆಗಳ ಸಭೆ ಸೇರಿಸಿದರು. ಇಲ್ಲಿ ಪರಿಚಯಿಸಿದ ಬಾವುಟವು ಕರ್ನಾಟಕ ದ ನಕಾಶೆಯನ್ನು ಹೊಂದಿತ್ತು. ನಕಾಶೆಯ ಮಧ್ಯೆ ಬೆಳೆಯುತ್ತಿರುವ ಪೈರಿನ ಚಿತ್ರಣವಿತ್ತು. ಈ ಬಾವುಟ ಕರ್ನಾಟಕಕ್ಕೆ ಸೇರಬೇಕಾದ ಗಡಿಭಾಗಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಯಿತು.

ಎಲ್ಲರೂ ಈ ಬಾವುಟವನ್ನು ಒಪ್ಪಿದ್ದರು. ಆದರೆ ರಾಮಮೂರ್ತಿಯವರು ಈ ಬಾವುಟ ವನ್ನು ಒಪ್ಪದೇ ಬದಲಾವಣೆಗೆ ಮನಸ್ಸು ಮಾಡಿದರು. ಧ್ವಜದ ಕುರಿತಾದ ಮ. ರಾಮಮೂರ್ತಿ ಹಾಗೂ ವಾಟಾಳ್ ಇವರಿಬ್ಬರ ತಾತ್ವಿಕ ಭಿನ್ನಾಭಿಪ್ರಾಯಗಳು, ಮುಂದೆ ಎರಡು ಪ್ರಾದೇಶಿಕ ಪಕ್ಷಗಳ ಹುಟ್ಟಿಗೆ ಕಾರಣವಾದವು.

ಇದನ್ನೂ ಓದಿ: Vinayaka V Bhat Column: ಕನ್ನಡ ಚಳವಳಿಗಳ ಹುಟ್ಟು, ಸಂಘಟನೆ ಮತ್ತು ಸಾಧನೆ

ವಾಟಾಳರು ತಮ್ಮ ಪಕ್ಷದ ಚಿಹ್ನೆಯಾಗಿ ನಕಾಶೆಯಿರುವ ಬಾವುಟವನ್ನೇ ಬಳಸಿದ್ದರು. ಇದರಿಂದ ರಾಮಮೂರ್ತಿ ಅವರು ತಮ್ಮ ಕನ್ನಡ ಪಕ್ಷಕ್ಕಾಗಿ ಹೊಸ ಬಾವುಟವನ್ನು ಪರಿಚಯಿಸುವುದು ಅನಿವಾರ್ಯವಾಯಿತು. ಕಾಟನ್ ಪೇಟೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಮಿತ್ರ ಮಂಡಲಿಯ ಬಿ.ನಿ.ಈಶ್ವರಪ್ಪನವರು ಸೂಚಿಸಿದ ನಾಲ್ಕು ಮೂಲೆಗಳ ಹಳದಿ ಕೆಂಪು ಬಣ್ಣಗಳಿದ್ದ ಬಾವುಟವನ್ನು ಸರ್ವರೂ ಒಪ್ಪಿದ್ದರು.

ಹಳದಿ ಕೆಂಪು ಬಣ್ಣಗಳನ್ನು ಶಾಂತಿ, ಸಹನೆ, ಕ್ರಾಂತಿಗಳ ಸಂಕೇತವೆಂದೂ, ಅರಿಸಿನ ಕುಂಕುಮಗಳನ್ನು ಹೋಲುವುದರಿಂದ ಮುತ್ತೈದೆತನದ ಸಂಕೇತವೆಂದೂ ವಿವರಣೆ ನೀಡಲಾಗಿತ್ತು. ಹೀಗಾಗಿ, ಇಂದಿಗೂ ಇದೇ ಹಳದಿ ಕೆಂಪು ಬಣ್ಣದ ಬಾವುಟಗಳು ಕನ್ನಡದ ಅಸ್ಮಿತೆಯ ಸಂಕೇತವಾಗಿ ಬಳಕೆಯಾಗುತ್ತಿವೆ.

ಕನ್ನಡಿಗರಲ್ಲಿ, ಭಾಷಾಭಿಮಾನವನ್ನು ಮೂಡಿಸಲು ‘ಕನ್ನಡ ಜಾಗೃತ ಪರಿಷತ್’ ಎಂಬ ಹೊಸ ಸಂಘಟನೆ ಹುಟ್ಟಿಕೊಂಡಿತು. ಕನ್ನಡದ ಚಳವಳಿಯ ಪ್ರಚಾರಕ್ಕಾಗಿ ಈ ಸಂಘಟನೆ ‘ಕನ್ನಡ ಜಾಗೃತ ಪತ್ರ’ ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಿತ್ತು. ಇದಾದ ಕೆಲವೇ ದಿನಗಳಲ್ಲಿ ಇದೇ ಆಶಯದಿಂದ ‘ಧ್ರುವ’ ಎಂಬ ಮಾಸಿಕ ಹೊರಬಂತು.

Screenshot_8 R1

ಎಂ.ನಾಗರಾಜ್ ಅವರು ಇವೆರಡೂ ಪತ್ರಿಕೆಗಳ ಸಂಪಾದಕರಾಗಿದ್ದರು. ಇದರಿಂದ ಪ್ರೇರಣೆ ಪಡೆದ ಕನ್ನಡ ಯುವಜನ ಸಭಾದವರು ‘ಕನ್ನಡ ಯುವಜನ’ ಎಂಬ ಪತ್ರಿಕೆಯನ್ನು ಹೊರಡಿಸಲಾರಂಭಿಸಿದರು. ಇದರ ಸಂಪಾದಕರಾಗಿದ್ದವರು ಚಳವಳಿಗಾರ ಮ. ರಾಮಮೂರ್ತಿ. ಅನಕೃ ಮತ್ತು ಮ.ರಾಮಮೂರ್ತಿ ಅವರು ಜನ ಕರೆದೆಡೆಗೆ ಹೋಗಿ, ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಜನರನ್ನು ಸಂಘಟಿಸ ತೊಡಗಿದರು.

ಇದರ ಪರಿಣಾಮವಾಗಿ ಹುಟ್ಟಿಕೊಂಡಿದ್ದೇ ‘ಕರ್ನಾಟಕ ಸಂಯುಕ್ತ ರಂಗ’. ಕನ್ನಡದ ಎಲ್ಲ ಸಂಸ್ಥೆಗಳನ್ನು ಒಂದೇ ವೇದಿಕೆಯಡಿಗೆ ತರುವುದು ಇದರ ಆಶಯವಾಗಿತ್ತು. 1962ರಲ್ಲಿ ಅಸ್ತಿತ್ವಕ್ಕೆ ಬಂದ ಈ ರಂಗದ ಅಧ್ಯಕ್ಷರು ಅನಕೃ, ಕಾರ್ಯದರ್ಶಿ ಮ.ರಾಮಮೂರ್ತಿ. ಇವರೊಂದಿಗೆ ತರಾಸು, ಅ.ನ.ಸುಬ್ಬರಾವ್, ಬೀಚಿ, ವೀರಕೇಸರಿ ಸೀತಾರಾಮಶಾಸ್ತ್ರೀ ಮೊದಲಾದವರು ಸೇರಿಕೊಂಡಿದ್ದರು.

ಇದೇ ವೇಳೆಗೆ ಕನ್ನಡ ಚಲನಚಿತ್ರ ರಂಗದಲ್ಲಿಯೂ ಕನ್ನಡತನ ಬಡವಾಗಿತ್ತು. ಕನ್ನಡ ಕಲಾವಿದರಿಗೆ, ನಿರ್ಮಾಪಕ-ನಿರ್ದೇಶಕರಿಗೆ ಕನ್ನಡನಾಡಿನಲ್ಲಿ ಪ್ರಾತಿನಿಧ್ಯ ಸಿಗುತ್ತಿರಲಿಲ್ಲ. ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಪರಭಾಷೆಯ ಚಿತ್ರಗಳಿಗೇ ಹೆಚ್ಚು ಮಣೆ ಹಾಕಲಾಗು ತ್ತಿತ್ತು. ಕನ್ನಡ ಚಿತ್ರಗಳಿಗೆ ಎರಡು ಅಥವಾ ಮೂರನೆಯ ಸ್ಥಾನ ಮೀಸಲಾಗಿತ್ತು.

ಥಿಯೇಟರ್, ಸ್ಟುಡಿಯೋ ಸಮಸ್ಯೆಗಳ ಜತೆಗೆ ಡಬ್ಬಿಂಗ್ ಹಾವಳಿಯೂ ಆವರಿಸಿಕೊಂಡಿತ್ತು. ಇಂಥ ಸಮಸ್ಯೆಗಳನ್ನು ಕನ್ನಡ ಚಳವಳಿಗಾರರು ಕೈಗೆತ್ತಿಕೊಂಡರು. ಮ.ರಾಮಮೂರ್ತಿ, ಅನಕೃ ಮೊದಲಾದವರು ಪ್ರತಿಭಟನೆಯ ಹಾದಿ ಹಿಡಿದರು. ಈ ಸಂದರ್ಭದಲ್ಲಿ ವಾಟಾಳ್ ನಾಗರಾಜರಂಥ ಯುವಕರು ಚಳವಳಿಗೆ ಧುಮುಕಿದರು. ಕನ್ನಡದ ಮೇರುನಟ ರಾಜ್‌ ಕುಮಾರ್ ಅವರನ್ನೂ ಒಳಗೊಂಡಂತೆ ಜಿ.ವಿ. ಅಯ್ಯರ್, ಬಾಲಕೃಷ್ಣ, ನರಸಿಂಹರಾಜು ಸೇರಿ ಕನ್ನಡ ಚಲನಚಿತ್ರ ಕಲಾವಿದರ ಸಂಘವನ್ನು ರಚಿಸಲಾಯಿತು.

ಈ ಸಂಘಟನೆಯ ಅಡಿಯಲ್ಲಿ ಅನೇಕ ಕನ್ನಡ ಚಿತ್ರಗಳನ್ನು ನಿರ್ಮಿಸುವ ಪ್ರಯತ್ನಗಳು ನಡೆದವು. ಇಂಥ ಚಿತ್ರಗಳನ್ನು ಸಿನಿಮಾ ಮಂದಿರದ ಮಾಲೀಕರು ಕಡ್ಡಾಯವಾಗಿ ಪ್ರದರ್ಶಿಸಲು ಒತ್ತಾಯಿಸಲಾಯಿತು. ಹೀಗಾಗಿ ಕನ್ನಡದ ನಿರ್ಮಾಪಕರುಗಳಿಗೆ, ಕನ್ನಡ ಚಿತ್ರಗಳಿಗೆ ಭರವಸೆಯ ವಾತಾವರಣ ಮೂಡುವಂತಾಯಿತು.

1964ರ ವೇಳೆಗೆ ಎಂಜಿಆರ್ ನಟಿಸುತ್ತಿದ್ದ ಚಲನಚಿತ್ರಗಳು ಬೆಂಗಳೂರಿನ ತಮಿಳರನ್ನು ಅತಿಯಾಗಿ ವರ್ತಿಸುವಂತೆ ಮಾಡಿದ್ದವು. ಇದರ ಪರಿಣಾಮವಾಗಿ ‘ಕಾಂಚಿ ತಲೈವನ್’ ಚಲನಚಿತ್ರದ ವಿರುದ್ಧ ಕನ್ನಡ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿತು. ‘ಕಾಂಚಿ ತಲೈವನ್’ ಚಲನಚಿತ್ರವು, ಕಂಚಿಯ ಪಲ್ಲವರ ದೊರೆ ೧ನೆಯ ನರಸಿಂಹವರ್ಮ ಬಾದಾಮಿ ಚಾಳುಕ್ಯ ದೊರೆ ಇಮ್ಮಡಿ ಪುಲಕೇಶಿಯನ್ನು ಸೋಲಿಸಿದ ಕಥೆಯನ್ನೊಳಗೊಂಡಿದೆ.

ಕನ್ನಡಿಗರನ್ನು ಅವಮಾನಿಸಲೋ ಎಂಬಂತೆ, ತಮಿಳು ದೊರೆ ಕರ್ನಾಟಕದ ಬಾವುಟ ವನ್ನು ಕಾಲಿನಲ್ಲಿ ತುಳಿಯುವ ದೃಶ್ಯಗಳನ್ನು ಆ ಚಿತ್ರದಲ್ಲಿ ಚಿತ್ರೀಕರಿಸಲಾಗಿತ್ತು. ತಮಿಳರ ಈ ವರ್ತನೆ ಕನ್ನಡಿಗರನ್ನು ಕೆರಳಿಸಿತು. ಚಳವಳಿಗಾರರು, ಇತಿಹಾಸ ತಜ್ಞರು, ವಿದ್ವಾಂಸರು, ಕನ್ನಡಾಭಿಮಾನಿಗಳು ಚಲನಚಿತ್ರದ ಕೆಲವು ಭಾಗಗಳನ್ನು ತೆಗೆದು ಹಾಕಲು ಒತ್ತಾಯಿಸಿ ಪ್ರತಿಭಟಿಸಿದರು.

ಆದರೂ ಆಕ್ಷೇಪಾರ್ಹ ಭಾಗಗಳನ್ನು ತೆಗೆಯದೆ ಚಿತ್ರವನ್ನು ಪ್ರದರ್ಶಿಸತೊಡಗಿದ್ದು ಕನ್ನಡಿಗರ ಸ್ವಾಭಿಮಾನವನ್ನು ಕೆರಳಿಸಿತು. ಈ ಘಟನೆ ಹಿಂಸಾರೂಪಕ್ಕೆ ತಿರುಗಿತು. ತಮಿಳರ ಸಂಖ್ಯೆ ಹೆಚ್ಚಿದ್ದ ಕಡೆಗಳಲ್ಲಿ ಅಲ್ಪಸಂಖ್ಯಾತ ಕನ್ನಡಿಗರ ಮೇಲೆ ದೌರ್ಜನ್ಯಗಳು ನಡೆದವು. ಬೆಂಗಳೂರಿನಲ್ಲಿ ತಮಿಳರೇ ಹೆಚ್ಚಾಗಿದ್ದ ಶ್ರೀರಾಮಪುರ, ಜೋಗುಪಾಳ್ಯ, ನಾಗಪ್ಪ ಬ್ಲಾಕ್, ಕಾP ಟೌನ್, ಫ್ರೇಜರ್ ಟೌನ್, ದಂಡು ಪ್ರದೇಶ ಮೊದಲಾದ ಕಡೆಗಳಲ್ಲಿ ಕನ್ನಡ ಚಳವಳಿ ಹಾಗೂ ಕನ್ನಡದ ಸಂಘಟನೆ ತೀವ್ರಗೊಂಡಿತು. ತಮಿಳರೇ ಹೆಚ್ಚಾಗಿದ್ದ ಕೆಲವು ಕಾರ್ಖಾನೆ ಗಳಲ್ಲಿ ಕನ್ನಡ ಕಾರ್ಮಿಕರು ಹಿಂಸೆ ಹಾಗೂ ಹಲ್ಲೆಗೆ ಒಳಗಾದರು.

ಈ ವೇಳೆಗೆ ಮರಾಠಿಗರ ಆಕ್ರಮಣಕಾರಿ ಭಾಷಿಕ ಪ್ರವೃತ್ತಿ ಹೆಚ್ಚಾಗತೊಡಗಿತ್ತು. ಶಿವಸೇನೆಯ ಬಾಳಠಾಕ್ರೆ ಮೊದಲಾದವರಿಂದ ಮುಂಬಯಿಯಲ್ಲಿ ಕನ್ನಡಿಗರಿಗೆ ಕಿರುಕುಳ ಆರಂಭ ವಾಗಿತ್ತು. ಮಹಾರಾಷ್ಟ್ರ, ಕೇರಳ ಹಾಗೂ ಕರ್ನಾಟಕದ ಗಡಿಗಳಿಗೆ ಸಂಬಂಧಿಸಿದ ವಿವಾದ ಗಳ ಇತ್ಯರ್ಥಕ್ಕೆ ಮಹಾಜನ್ ಆಯೋಗ ನೇಮಕ ಆಗಿದ್ದು ಇದೇ ವೇಳೆಗೆ. ಈ ಆಯೋಗದ ಮೇಲೆ ಹಾಗೂ ಕೇಂದ್ರ ಸರಕಾರದ ಮೇಲೆ ಮರಾಠಿಗರು ಒತ್ತಡ ಹೇರತೊಡಗಿ ದ್ದರು. ಇದಕ್ಕೆ ಕನ್ನಡಿಗರಿಂದ ಎಡೆ ಪ್ರತಿರೋಧಗಳು ಕಾಣಿಸಿಕೊಂಡವು.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂಬುದನ್ನು ಸಾಬೀತುಪಡಿಸುವುದು ಕನ್ನಡ ಚಳವಳಿಗಾರರ ಆಶಯವಾಗಿತ್ತು. ಹೀಗಾಗಿ ನಾಡಿನ ಎಡೆ ಮಹಾಜನ್ ಆಯೋಗದ ವಿರುದ್ಧ ತೀವ್ರವಾದ ಪ್ರತಿಭಟನೆಗಳು ನಡೆದವು.

ಮಹಾಜನ್ ಆಯೋಗದ ವರದಿ ಜತ್, ಅಕ್ಕಲಕೋಟೆ, ಕಾಸರಗೋಡುಗಳನ್ನು ಕರ್ನಾಟಕ ಕ್ಕೂ, ನಿಪ್ಪಾಣಿ, ಖಾನಾಪುರ, ಹಳಿಯಾಳಗಳನ್ನು ಮಹಾರಾಷ್ಟ್ರಕ್ಕೂ ಸೇರಿಸಬೇಕೆಂದು ಶಿಫಾರಸು ಮಾಡಿತ್ತು. ಅಲ್ಲದೆ, ಕನ್ನಡ ನೆಲವಾದ ಬೆಳಗಾವಿಯನ್ನು ಕರ್ನಾಟಕದಲ್ಲಿಯೇ ಉಳಿಸಬೇಕೆಂದೂ ಶಿಫಾರಸು ಮಾಡಿತ್ತು.

ಈ ಆಯೋಗದ ವರದಿಗೆ ಒಪ್ಪಿಕೊಳ್ಳುವುದಾಗಿ ಹೇಳಿದ್ದ ಮರಾಠಿಗರು ಮಾತು ಮುರಿದರು. ಈ ವಿಚಾರ 1970ರಲ್ಲಿ ಪಾರ್ಲಿಮೆಂಟಿನ ಉಭಯ ಸದನಗಳಲ್ಲಿ ಚರ್ಚೆಗೆ ಬಂದು, ತಾತ್ಕಾಲಿಕವಾಗಿ ಮಹಾಜನ್ ವರದಿಯ ಅನುಷ್ಠಾನವನ್ನು ತಡೆ ಹಿಡಿಯಿತು. ಅಂದಿನಿಂದ ಇಂದಿನವರೆಗೂ ಕರ್ನಾಟಕಕ್ಕೆ ಸೇರಬೇಕಾದ ಅನೇಕ ಕನ್ನಡದ ಭೂಪ್ರದೇಶಗಳು ಕರ್ನಾಟಕದ ಹೊರಗೇ ಉಳಿದಿವೆ. 1970ರ ದಶಕ ಬಹುಪಾಲು ವಾಟಾಳ್ ನೇತೃತ್ವದ ಕನ್ನಡ ಚಳವಳಿಯಾಗಿ ಪರಿಣಮಿಸಿತು. ಸಂಯುಕ್ತ ರಂಗದ ಅಧ್ಯಕ್ಷರಾಗಿದ್ದ ರಾಮಮೂರ್ತಿ ಅವರು ಆಕಸ್ಮಿಕ ಮರಣಕ್ಕೀಡಾದರು.

ತರಾಸು ಅವರು ಕನ್ನಡ ಪಕ್ಷದ ಚುಕ್ಕಾಣಿ ಹಿಡಿದಿದ್ದರು. ಆದರೆ ವಾಟಾಳರ ಜನಪ್ರಿಯತೆಯ ಮುಂದೆ, ಕನ್ನಡ ಪಕ್ಷ ಜನಪ್ರಿಯತೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ಮುಂದೆ ವಾಟಾಳರ ಒಡನಾಡಿಗಳಲ್ಲಿ ಭಿನ್ನಾಭಿಪ್ರಾಯ ಮೂಡಿ ಕನ್ನಡ ಚಳವಳಿಯಲ್ಲಿ ಬಿರುಕುಂಟಾಯಿತು. 1980ರಲ್ಲಿ ‘ಕನ್ನಡ ಚಳವಳಿ ವಾಟಾಳ್ ಪಕ್ಷ’ ಎಂದು ಹೊಸ ಹೆಸರು ಪಡೆಯುವವರೆಗೂ ವಾಟಾಳರು ನಾಡಿನ ಸಮಸ್ಯೆಗಳನ್ನು ಕುರಿತಂತೆ ಚಳವಳಿಗಳನ್ನು ಹೂಡುತ್ತಲೇ ಇದ್ದರು.

ಅಂಥವುಗಳಲ್ಲಿ ತಾಳವಾಡಿ ಮುತ್ತಿಗೆ ಚಳವಳಿಯೂ ಒಂದು. ಕರ್ನಾಟಕಕ್ಕೆ ಸೇರಬೇಕಿದ್ದ ಹೊಸೂರು, ತಾಳವಾಡಿಗಳನ್ನು ತಮಿಳುನಾಡಿಗೆ ಸೇರಿಸಲಾಗಿತ್ತು. ಇವುಗಳನ್ನು ಪಡೆಯಲು ತಾಳವಾಡಿ ಮುತ್ತಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ವಾಟಾಳರನ್ನು ಅಂದಿನ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕರುಣಾನಿಧಿ ಬಂಧಿಸಲು ಆದೇಶಿಸಿದ್ದರು.

ಬಂಧನಕ್ಕೊಳಗಾದ ವಾಟಾಳರ ಬಿಡುಗಡೆಗಾಗಿ ಒತ್ತಾಯಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ, ಹಿಂಸಾಚಾರಗಳು ನಡೆದವು. ತಮಿಳರ ವಿರುದ್ಧ ಕನ್ನಡಿಗರು ಉಗ್ರ ರೂಪದಲ್ಲಿ ಪ್ರತಿಭಟನೆ ಗಳನ್ನು ಸಾರಿದರು. ಕನ್ನಡೇತರರ ಮತಗಳಿಗಾಗಿ ಕಾದಿದ್ದ ಕನ್ನಡದ ರಾಜಕಾರಣಿಗಳು, ಈ ಘಟನೆಗೆ ಸ್ಪಂದಿಸದೆ ಇದ್ದದ್ದು ವಿಷಾದಕರ ಸಂಗತಿಯಾಗಿತ್ತು.

ಗೋಕಾಕ್ ಚಳವಳಿ ಅಂತ್ಯವಾಗುವ ವೇಳೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಕೊನೆಗೊಂಡಿತು. ರೈತ, ದಲಿತ ಹಾಗೂ ಭಾಷಾ ಚಳವಳಿಗಳ ಆಶೋತ್ತರಗಳನ್ನು ಈಡೇರಿ ಸುವ ಭರವಸೆಯನ್ನು ನೀಡಿ 1983ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂತು. ಆದರೆ ಬಹಳ ಬೇಗ ಈ ಸರಕಾರವೂ ಕನ್ನಡಿಗರ ಅಸಹನೆಗೆ ಗುರಿಯಾಯಿತು.

ಈ ಸಂದರ್ಭದಲ್ಲಿ ಸ್ಥಳೀಯವಾದ ರಾಜ್ಯಪಕ್ಷವೊಂದರ ಅಗತ್ಯ ಕಂಡುಬಂತು. ಇದರ ಪರಿಣಾಮವಾಗಿ ಹುಟ್ಟಿಕೊಂಡದ್ದೇ ‘ಕನ್ನಡ ದೇಶ’ ಹಾಗೂ ‘ಕರ್ನಾಟಕ ಪ್ರಗತಿರಂಗ’ ಎಂಬ ಪಕ್ಷಗಳು. ವಾಟಾಳರ ಪಕ್ಷ ಪ್ರಾದೇಶಿಕವಾಗಿ ಗುರುತಿಸಿಕೊಂಡಿದ್ದರೂ ಅದು ರಾಜ್ಯವ್ಯಾಪಿ ಪಕ್ಷವಾಗಿ ವಿಸ್ತೃತಗೊಂಡಿರಲಿಲ್ಲ.

ಹೀಗಾಗಿ 1987ರಲ್ಲಿ ಕನ್ನಡ ದೇಶ ಪಕ್ಷ ಅಸ್ತಿತ್ವಕ್ಕೆ ಬಂತು. ಈ ಪಕ್ಷದ ನೇತೃತ್ವವನ್ನು ವಹಿಸಿದ್ದವರು ರೈತ ಸಂಘದ ಎಂ.ಡಿ.ನಂಜುಂಡಸ್ವಾಮಿ ಅವರು. ‘ಕನ್ನಡ ದೇಶ’ ಪಕ್ಷವು ಕನ್ನಡಿಗರ ಅಶೋತ್ತರಗಳ ಈಡೇರಿಕೆಗೆ ದುಡಿಯುವ ಮುನ್ನವೇ ಸೋಲನ್ನು ಕಂಡಿತು. ಈ ಘಟ್ಟದಲ್ಲಿ ಎ.ಕೆ.ಸುಬ್ಬಯ್ಯನವರ ಕನ್ನಡಪರ ಪ್ರಯತ್ನಗಳೂ ಗಮನಾರ್ಹವೆನಿಸಿವೆ.

ಪ್ರಗತಿಪರ ಮನಸ್ಸುಳ್ಳ ವ್ಯಕ್ತಿಗಳು ಅದುವರೆಗಿನ ಎಲ್ಲ ಕೊರತೆಗಳನ್ನು ಪರಿಶೀಲಿಸಿ 1988 ರಲ್ಲಿ ‘ಕರ್ನಾಟಕ ಪ್ರಗತಿರಂಗ’ ಎಂಬ ರಾಜಕೀಯ ಪಕ್ಷವನ್ನು ರೂಪಿಸಿದರು. ಕಾಂಗ್ರೆಸ್ ಮತ್ತು ಜನತಾ ಪಕ್ಷಗಳಿಗೆ ಪರ್ಯಾಯವಾಗಿ ಹುಟ್ಟಿಕೊಂಡ ಪಕ್ಷವಿದು. ಇದರ ನೇತೃತ್ವ ಪಿ.ಲಂಕೇಶ್ ಅವರದ್ದಾಗಿತ್ತು.

ಕನ್ನಡ, ಕನ್ನಡಿಗ, ಕರ್ನಾಟಕಗಳ ಬಗೆಗಿನ ಕಾಳಜಿಯಿಂದ ರಚನೆಗೊಂಡ ಈ ಪಕ್ಷಕ್ಕೆ ಕನ್ನಡಿಗರಿಂದ ನಿರೀಕ್ಷಿಸಲಾಗಿದ್ದ ಬೆಂಬಲ, ಪ್ರೋತ್ಸಾಹಗಳು ದೊರೆಯಲಿಲ್ಲ. ಈ ಪಕ್ಷವೂ ಸಂಘಟನಾ ಹಂತದ ಕ್ಷೀಣಿಸಿತು. ಕನ್ನಡ ಚಳವಳಿಯ ಚರಿತ್ರೆಯಲ್ಲಿ ಈ ಪ್ರಾದೇಶಿಕ ರಾಜಕೀಯ ಪಕ್ಷಗಳಿಗೆ ದೊರೆಯದೆ ಹೋದ ಬೆಂಬಲಗಳು ರಾಷ್ಟ್ರೀಯ ಪಕ್ಷಗಳಿಗೆ ದೊರೆತವು.

ಗೋಕಾಕ್ ಚಳವಳಿಯ ನಂತರ ಸಂಭವಿಸಿದ ರಾಜಕೀಯ ಬದಲಾವಣೆಗಳು ಚಳವಳಿಯ ಸ್ವರೂಪವು ಬಹುಮುಖಿ ನೆಲೆಗಳನ್ನು ಕಂಡುಕೊಳ್ಳುವಂತೆ ಮಾಡಿತು. ಇದಕ್ಕೆ ಪ್ರಾತಿನಿಧ್ಯ, ಆಮಿಷ, ಅಗ್ಗದ ಪ್ರಚಾರ, ಕನ್ನಡದ ಹೆಸರಿನಲ್ಲಿ ಲೂಟಿ, ಹಿಂಸೆಗಳು, ಜಾತಿ ಮುಖಂಡರ, ರಾಜಕಾರಣಿಗಳ ಭ್ರಷ್ಟಾಚಾರಗಳು ಎಲ್ಲವೂ ಕಾರಣವಾದವು. 1980 ಹಾಗೂ 1990ರ ದಶಕದ ಈ ವೈಪರೀತ್ಯಗಳು ಕನ್ನಡ ಚಳವಳಿಯನ್ನು ಭಿನ್ನ ರೀತಿಯಲ್ಲಿ ಗ್ರಹಿಸಲು ಎಡೆ ಮಾಡಿಕೊಟ್ಟವು.

ಆದರೆ ಇವೆಲ್ಲವುಗಳನ್ನೂ ಹೊರತುಪಡಿಸಿ ನಾಡು, ನುಡಿ, ಸಂಸ್ಕೃತಿಯ ನೆಲೆಗಳಲ್ಲಿ ಕಾರ್ಯನಿರ್ವಹಿಸಿದ ನಿಸ್ವಾರ್ಥ ಕನ್ನಡ ಚಳವಳಿಗಾರರನ್ನು, ಸಂಘಟನೆಗಳನ್ನು ಇಲ್ಲಿ ಪ್ರಸ್ತಾಪಿಸಬಹುದು. ಚಳವಳಿಗಳಿಗೆ ಸಂಬಂಧಿಸಿದ ಮಾರ್ಗದರ್ಶನಗಳನ್ನು ನೀಡಿ ನಡೆಸಿ ಕೊಂಡು ಹೋಗಲು ಸಾಹಿತಿ, ಕಲಾವಿದರ ಬಳಗ ಹುಟ್ಟು ಹಾಕಿದ ಸಂಸ್ಥೆಯೇ ‘ಕನ್ನಡ ಶಕ್ತಿ ಕೇಂದ್ರ’.

1988ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕೇಂದ್ರ ಎಂ. ಚಿದಾನಂದಮೂರ್ತಿಯವರ ನೇತೃತ್ವದಲ್ಲಿ ಮುನ್ನಡೆಯಿತು. ಇದು ಗೋಕಾಕ್ ಚಳವಳಿಯ ನಂತರ ಕನ್ನಡದ ಹೋರಾಟವನ್ನು ಭಾಷೆಯ ಬಳಕೆಯ ಜತೆಗೆ ಇತರೆ ಸಮಸ್ಯೆಗಳ ಕಡೆಗೂ ಕೇಂದ್ರೀಕರಿಸುವಂತೆ ಮಾಡಿತು. ಕನ್ನಡ ಶಕ್ತಿ ಕೇಂದ್ರ, ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವ ಸರೋಜಿನಿ ಮಹಿಷಿ ವರದಿಯ ಅನುಷ್ಠಾನಕ್ಕಾಗಿ ಒತ್ತಾಯಿಸಿತು.

ರಾಜ್ಯ ಲೋಕಸೇವಾ ಆಯೋಗದಲ್ಲಿ ಕನ್ನಡಕ್ಕೆ ಆದ್ಯತೆ, ದೂರದರ್ಶನದ ಕನ್ನಡೀಕರಣ, ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ, ಉರ್ದು ವಾರ್ತಾ ಪ್ರಸಾರದ ತಡೆ, ಕಾವೇರಿ ಜಲವಿವಾದ ಚಳವಳಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಪ್ರಾಽಕಾರಗಳ ಸ್ಥಾಪನೆ, ಬೆಳಗಾವಿಯಲ್ಲಿ ತಾಂತ್ರಿಕ ವಿಶ್ವವಿದ್ಯಾಲಯದ ಸ್ಥಾಪನೆ ಇತ್ಯಾದಿ ಕನ್ನಡ ಪರವಾದ ಸಾಧನೆಗಳಿಗಾಗಿ ಈ ಸಂಘಟನೆ ಶ್ರಮಿಸಿದೆ.

ಒಟ್ಟಾರೆ ಕನ್ನಡ ಚಳವಳಿಗಳ ಕಳೆದ ಎರಡು ದಶಕಗಳ ಚರಿತ್ರೆಯನ್ನು ಪರಿಶೀಲಿಸಿದರೆ ರಾಜಕಾರಣದ ಆಮಿಷ, ಪ್ರಚಾರಪ್ರಿಯತೆ ಇವಗಳೇ ಗೋಚರವಾಗುತ್ತವೆ. ಸಂಕುಚಿತ, ಭಾಷಿಕ ಭಾವೋದ್ವೇಗಗಳಿಂದ, ಅತಿರೇಕದ ಭಾಷಾಭಿಮಾನದಿಂದ ಕನ್ನಡ ಚಳವಳಿ ಮತ್ತು ಚಿಂತನೆಗಳು ಕೆಲವೊಮ್ಮೆ ದಾರಿತಪ್ಪಿವೆ ಎನಿಸುತ್ತದೆ.

ಆದ್ದರಿಂದಲೇ ಇಂದಿಗೂ ಗೋಕಾಕ್ ವರದಿಯಲ್ಲಿ ಸೂಚಿಸಿದ್ದ ಶಿಕ್ಷಣ ರಂಗದಲ್ಲಿ ಕನ್ನಡಕ್ಕೆ ಸಿಗಬೇಕಾಗಿದ್ದ ಪ್ರಾಧಾನ್ಯವಾಗಲೀ, ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಉದ್ಯೋಗದ ಮೀಸಲಾತಿ ನೀಡುವಂತೆ ಸರೋಜಿನಿ ಮಹಿಷಿ ನೀಡಿರುವ ವರದಿಯ ಅನುಷ್ಠಾನವಾಗಲೀ, ಕರ್ನಾಟಕದ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ನೀಡಲಾಗಿದ್ದ ಡಾ.ಡಿ.ಎಂ. ನಂಜುಂಡಪ್ಪ ಅವರ ಕ್ರಿಯಾಯೋಜನೆಯ ಅನುಷ್ಠಾನವಾಗಲೀ ಅಥವಾ ಕನ್ನಡವನ್ನು ಸಂಪೂರ್ಣವಾಗಿ ಆಡಳಿತ ಭಾಷೆಯನ್ನಾಗಿಸುವ ಉದ್ದೇಶವಾಗಲೀ ಪೂರ್ಣವಾಗಿ ಸಾಧ್ಯ ವಾಗಿಲ್ಲ.

ಆದರೆ ಒಂದು ಮಾತಂತೂ ಸತ್ಯ. ಏಕೀಕರಣ ಮತ್ತು ಅದರಾಚೆಗಿನ ನಿಸ್ವಾರ್ಥ ಕನ್ನಡ ಪರ ಹೋರಾಟಗಳ ಫಲವಾಗಿ, ಅಲ್ಲಿಂದೀಚೆಗೂ ನಿರಂತರವಾಗಿ ಪ್ರವಹಿಸಿದ ಕನ್ನಡ ಸಾಹಿತ್ಯ ಪ್ರವಾಹದಿಂದಾಗಿ ಮತ್ತು ಅವುಗಳಿಗೆ ದೊರಕಿದ ಲೋಕ ಮನ್ನಣೆಗಳಿಂದಾಗಿ, ಕನ್ನಡ, ಕನ್ನಡಿಗ ಹಾಗೂ ಕರುನಾಡು, ಅನ್ಯರು ಅಸೂಯೆ ಪಡಬಹುದಾದ ಸ್ಥಿತಿಯಲ್ಲಿದೆ ಎನ್ನಲಡ್ಡಿಯಿಲ್ಲ. ಸವೆಸಬೇಕಾದ ಹಾದಿ ದೂರ ಇನ್ನೂ ಬಹಳಷ್ಟಿದೆ, ಇಲ್ಲಿಯವರೆಗೆ ಸಾಗಿಬಂದ ದಾರಿಯ ದೂರವೂ ಕಡಿಮೆಯೇನಲ್ಲ.