ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಂಬೇಡ್ಕರ್‌-ಆರ್‌ಎಸ್‌ಎಸ್‌ ; ನಿಲುವೊಂದೇ, ದಾರಿ ಮಾತ್ರ ವಿಭಿನ್ನ !

ಅಂಬೇಡ್ಕರ್‌-ಆರ್‌ಎಸ್‌ಎಸ್‌ ; ನಿಲುವೊಂದೇ, ದಾರಿ ಮಾತ್ರ ವಿಭಿನ್ನ !

ಅಂಬೇಡ್ಕರ್‌-ಆರ್‌ಎಸ್‌ಎಸ್‌ ; ನಿಲುವೊಂದೇ, ದಾರಿ ಮಾತ್ರ ವಿಭಿನ್ನ !

-

Profile Vishwavani News Apr 10, 2021 6:39 AM
ವೀಕೆಂಡ್‌ ವಿಥ್‌ ಮೋಹನ್‌ ಮೋಹನ್‌ ವಿಶ್ವ ಶತಶತಮಾನಗಳಿಂದಲೂ ಭಾರತದಲ್ಲಿ ದಲಿತರ ಮೇಲಿನ ಶೋಷಣೆಗಳು ನಡೆದುಕೊಂಡು ಬಂದಿರುವ ಸತ್ಯ ಎಲ್ಲರಿಗು ತಿಳಿದಿರುವ ವಿಷಯ. ದಲಿತರ ಉದ್ಧಾರಕ್ಕಾಗಿಯೇ ಉದ್ಭವವಾಗಿರುವುದಾಗಿ ಹೇಳಿಕೊಂಡು ರಾಜಕೀಯ ಮಾಡುತ್ತಾ ಹಲವು ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದವು. ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಸಹ ದಲಿತರ ಕೂಗು ಇನ್ನೂ ನಿಂತಿಲ್ಲ. ಇಂದಿಗೂ ದಲಿತರ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಅವರನ್ನು ಮತಬ್ಯಾಂಕುಗಳಾಗಿ ಬಳಸಿಕೊಳ್ಳಲಾಗುತ್ತಿದೆ. ಸ್ವಾತಂತ್ರ್ಯಾ ನಂತರ ಸಂವಿಧಾನದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಂಥ ‘ಬಿ.ಆರ್. ಅಂಬೇಡ್ಕರ್’ ದಲಿತರ ಉದ್ಧಾರವಾಗ ಬೇಕಾದರೆ ಸಾಮಾಜಿಕ, ರಾಜಕೀಯ, ಕಾರ್ಯಾಂಗ, ಶಿಕ್ಷಣ ವ್ಯವಸ್ಥೆಯಲ್ಲಿ ದಲಿತರು ಪ್ರಮುಖ ಹುದ್ದೆಯಲ್ಲಿರಬೇಕೆಂದು ಹೇಳಿದ್ದರು. ಸವರ್ಣೀಯನೊಬ್ಬ ಒಳ್ಳೆಯ ಬಟ್ಟೆ, ತಲೆಯಲ್ಲಿ ಪೇಟ, ಶರ್ಟಿನ ಮೇಲೆ ಕೋಟನ್ನು ಹಾಕಿಕೊಂಡಿದ್ದನೆಂದು ಅವನ ಎದುರು ದಲಿತನೊಬ್ಬ ಹರಕು ಬಟ್ಟೆ ಹಾಕಿಕೊಂಡು ಓಡಾಡಬೇಕೆಂಬ ಹಳೆಯ ಸಮಾಜದ ಕೆಟ್ಟ ಆಚರಣೆಗಳ ಮುಂದೆ, ದಲಿತನೂ ಸಹ ಅವನಂತೆ ತಲೆಯಲ್ಲಿ ಪೇಟ, ಶರ್ಟಿನ ಮೇಲೆ ಕೋಟು ಹಾಕಿಕೊಂಡು ಸಮಾಜದಲ್ಲಿ ನಡೆದಾಡಬೇಕೆಂಬುದು ಅಂಬೇಡ್ಕರರ ಇಚ್ಛೆಯಾಗಿತ್ತು. ಅಂಬೇಡ್ಕರ್‌ಗಿಂತಲು ಮೊದಲು 18ನೆಯ ಶತಮಾನದಲ್ಲಿ ‘ಜ್ಯೋತಿಬಾ ಫುಲೆ’ ಸಮಾಜದಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿದ್ದರು. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಮೊಟ್ಟಮೊದಲ ಮಹಿಳಾ ಶಾಲೆಯನ್ನು ಶುರು ಮಾಡಿದ್ದರು, ವಿಧವಾ ವಿವಾಹದಂಥ ಆಚರಣೆಗಳ ಪರವಾಗಿ ನಿಂತಿದ್ದರು. ಫುಲೆಯವರ ಕ್ರಾಂತಿಕಾರಕ ಹೋರಾಟವು ‘ಅಂಬೇಡ್ಕರ್’ರವರ ಹೋರಾಟದ ಮುನ್ನುಡಿಯೆಂದರೆ ತಪ್ಪಿಲ್ಲ. ಅಂಬೇಡ್ಕರ್ ತಮ್ಮ ಬಾಲ್ಯದಲ್ಲಿ ಸಮಾಜದಲ್ಲಿ ಅನುಭವಿಸಿದ ‘ಅಸ್ಪೃಶ್ಯ’ ನೀತಿಯ ವಿರುದ್ಧ ಮಾಡಿದ ಹಲವಾರು ಹೋರಾಟ ಗಳಿಗೆ ಹಿಂದೂ ಸಮಾಜದ ಮೇಲ್ ಸ್ತರದ ಜನರ ಬೆಂಬಲ ಸಿಗದೇ ಹೋದಾಗ ಬೇಸತ್ತು ‘ಬೌದ್ಧ ಧರ್ಮಕ್ಕೆ’ ಮತಾಂತರವಾದರು. ಶತಶತಮಾನಗಳಿಂದ ಪಾಶ್ಚಿಮಾತ್ಯರು ಭಾರತದ ದಲಿತರನ್ನು ‘ಕ್ರಿಶ್ಚಿಯನ್’ ಧರ್ಮಕ್ಕೆ ಮತಾಂತರ ಮಾಡಿದರೂ ಸಹ, ಅಂಬೇಡ್ಕರ್ ಮಾತ್ರ ‘ಕ್ರಿಶ್ಚಿಯನ್’ಧರ್ಮವನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ತಮ್ಮ ಬಳಿ ಅಳಲು ತೋಡಿಕೊಂಡು ಬಂದಂಥ ದಲಿತರಿಗೆ ‘ಕ್ರಿಶ್ಚಿಯನ್’ ಧರ್ಮಕ್ಕೆ ಮತಾಂತರವಾಗುವುದರಿಂದ ನಮಗೆ ಸಮಾಜದಲ್ಲಿ ನ್ಯಾಯ ಸಿಗುವುದಿಲ್ಲ. ಕುಟುಂಬದ ಒಂದು ತಲೆಮಾರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದರೆ ಆ ದಲಿತನ ಕುರುಹೇ ಸಮಾಜದಲ್ಲಿ ಇಲ್ಲದಂತಾಗುವುದರಿಂದ, ಯಾರೂ ಸಹ ಮತಾಂತರವಾಗಬಾರದೆಂದು ಹೇಳುತ್ತಿದ್ದರು. ಮುಸಲ್ಮಾನರ ವಿಚಾರದಲ್ಲಿ ಅಂಬೇಡ್ಕರರಿಗೆ ಬೇರೆಯದ್ದೇ ಅಭಿಪ್ರಾಯವಿತ್ತು. ಅವರು ರಾಷ್ಟ್ರೀಯವಾದಕ್ಕಾಗಿ ಸುಲಭವಾಗಿ ಭಾರತದ ಪರವಾಗಿ ನಿಲ್ಲುವುದಿಲ್ಲವೆಂಬ ಅಂಶ ಅಂಬೇಡ್ಕರರಿಗೆ ಚೆನ್ನಾಗಿಯೇ ತಿಳಿದಿತ್ತು, ಅದಕ್ಕಾಗಿಯೇ ಅಂಬೇಡ್ಕರ್ ಸಹ ಅಖಂಡ ಭಾರತದ ವಿಭಜನೆಯನ್ನು ಬೆಂಬಲಿಸಿದ್ದರು. ಕ್ರಿಶ್ಚಿಯನ್ ಹಾಗೂ ಮುಸಲ್ಮಾನರ ಬಗ್ಗೆ ಈ ರೀತಿಯ ನಿಲುವು ಹೊಂದಿದ್ದಂಥ ಕೆಲವು ಅಂಬೇಡ್ಕರ್ ಅನುಯಾಯಿಗಳು ಇಂದು ‘ದಲಿತರು’ ಹಾಗೂ ‘ಮುಸಲ್ಮಾನರನ್ನು’ ಒಂದುಗೂಡಿಸುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಮತ್ತದೇ ದೇಶವಿರೋಧಿ ‘ಕಮ್ಯುನಿಸ್ಟರು’ ಈ ಪ್ರಯತ್ನಕ್ಕೆ ಕೈಹಾಕುತ್ತಿzರೆ. ಸದಾ ದೇಶದೊಳಗಡೆ ಅಶಾಂತಿಯನ್ನು ಸೃಷ್ಟಿಸಲು ಹವಣಿಸುವ ಕಮ್ಯುನಿಸ್ಟರಿಗೆ ಇತ್ತೀಚಿಗೆ ಹೊಳೆದಿರುವ ಮನೆಹಾಳು ಕಲ್ಪನೆಯಿದು. ಈ ಸಾಹಸವನ್ನು ಮಾಡಲು ಅವರು ‘ದಲಿತರು’ ಹಾಗು ‘ಮುಸಲ್ಮಾನರಿಗೆ’ ತೋರಿಸುತ್ತಿರುವ ಸಂಘಟನೆ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’. ಸಂಘದ ವಿಚಾರದಲ್ಲಿ ಇಲ್ಲ ಸಲ್ಲದ ಸುಳ್ಳುಗಳನ್ನು ಹೇಳಿ, ಅವರು ಕೋಮುವಾದಿಗಳು, ಅವರು ಬ್ರಾಹ್ಮಣ್ಯರು ಅವರಿಂದ ದಲಿತ ಸಮಾಜಕ್ಕೆ ತೊಂದರೆ ಯಾಗುತ್ತದೆಯೆಂದು ಹೇಳಿ ತಲೆಯನ್ನು ಹಾಳು ಮಾಡುತ್ತಿದ್ದಾರೆ. ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ ಹಾಗೂ ‘ಅಂಬೇಡ್ಕರ್ ’ರವರ ವಿಚಾರಧಾರೆಗಳು ಸಮಾನವಾಗಿ ಸಮಾಜದ ಏಳಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ. ಸಂಘವನ್ನು ಸ್ಥಾಪಿಸಿದ ‘ಡಾಕ್ಟರ್ ಜಿಲ್ಲೆ’ ಎಂದೂ ಸಹ ಸಮಾಜದಲ್ಲಿನ ಜಾತಿ ವ್ಯವಸ್ಥೆಯನ್ನು ಬೆಂಬಲಿಸಲಿಲ್ಲ. ಅವರ ಧ್ಯೇಯವೊಂದೇ ‘ಹಿಂದೂ’ಗಳನ್ನು ಒಗ್ಗೂಡಿಸುವುದು. ಭಾರತದಲ್ಲಿರುವ ಹಲವು ಜಾತಿಗಳನ್ನು ಬದಿಗೊತ್ತಿ ರಾಷ್ಟ್ರ ನಿರ್ಮಾಣದಲ್ಲಿ ಎಲ್ಲಾ ಹಿಂದುಗಳನ್ನು ಒಂದುಗೂಡಿಸುವ ಸಲುವಾಗಿ ಸಂಘವನ್ನು ಕಟ್ಟಿದರು. ಸಮಾಜದಲ್ಲಿ ಸಾಮರಸ್ಯ ಇಲ್ಲದೆ ಸಮಾನತೆಯನ್ನು ರೂಪಿಸುವುದು ಸಾಧ್ಯವಿಲ್ಲವೆಂಬುದು ಡಾಕ್ಟರ್ ಜಿಲ್ಲೆ ಹಾಗೂ ಅಂಬೇಡ್ಕರ್ ಇಬ್ಬರ ನಿಲುವಾಗಿತ್ತು. 1947ರ ನವೆಂಬರ್ 25ರಂದು ದೆಹಲಿಯಲ್ಲಿ ಮಾಡಿದ ಬಾಷಣದಲ್ಲಿ ‘ಅಂಬೇಡ್ಕರ್’ ಹೇಳುತ್ತಾರೆ, ಭಾರತ ದಲ್ಲಿ ಅಸಂಖ್ಯ ಜಾತಿಗಳಿವೆ. ಇದರಿಂದಲೇ ಸಮಾಜದಲ್ಲಿ ಪ್ರತ್ಯೇಕತೆಯ ಭಾವನೆ ಬೆಳೆಯುತ್ತದೆ, ಇದರಿಂದಲೇ ಪರಸ್ಪರ ದ್ವೇಷ, ತಿರಸ್ಕಾರ ತಲೆಯೂರುತ್ತದೆ. ನಾವು ಒಂದು ರಾಷ್ಟ್ರವಾಗಿ ಎದ್ದು ನಿಲ್ಲುವುದೇ ಆದಲ್ಲಿ ಮೊದಲು ನಮ್ಮ ಮಾರ್ಗದಲ್ಲಿ ಅಡೆತಡೆಗಳನ್ನು ನಿವಾರಿಸಬೇಕು ಒಂದು ರಾಷ್ಟ್ರವಾಗಿ ನಿಂತುಕೊಂಡಲ್ಲಿ ಮಾತ್ರ ಬಂಧುತ್ವದ ಭಾವನೆ ಅರಳುತ್ತದೆ. ಅಂಬೇಡ್ಕರ್ ಹಾಗೂ ಡಾಕ್ಟರ್ ಜಿಲ್ಲೆಯವರ ಕಾರ್ಯಶೈಲಿಗಳು ಭಿನ್ನವಾಗಿ ಕಂಡರೂ, ಇಬ್ಬರ ದಿಕ್ಕೂ ಒಂದೇ ಆಗಿತ್ತೆಂದು ಇದರಿಂದ ಸ್ಪಷ್ಟವಾಗುತ್ತದೆ. ಇಬ್ಬರೂ ಸಹ ಸಮಾಜದಲ್ಲಿ ಸಮಾನತೆಯ ಪರವಾಗಿದ್ದವರು. ಇಬ್ಬರ ಆರಂಭದ ‘ಬಿಂದು’ಗಳು ಬೇರೆಯಾಗಿದ್ದರಿಂದ ಅವರಿಬ್ಬರೂ ಅನುಸರಿಸುತ್ತಿದಂಥ ಮಾರ್ಗಗಳು ತುಸು ಭಿನ್ನವಾಗಿ ಕಾಣುತ್ತವೆ. 1934ರಲ್ಲಿ ಸಂಘದ ಶಿಬಿರವನ್ನು ಸಂದರ್ಶಿಸಲು ಮಹಾತ್ಮಾ ಗಾಂಧಿಯವರು ಬಂದಿದ್ದರು. ಶಿಬಿರದಲ್ಲಿ ಪಾಲ್ಗೊಂಡ್ದಿದಂಥ ಕಾರ್ಯಕರ್ತರಿಗೆ ಇತರರ ಜಾತಿಯ ಅರಿವೇ ಇರಲಿಲ್ಲ, ಅಲ್ಲಿ ಬಂದಿದ್ದ ಕಾರ್ಯಕರ್ತರು ಯಾರು ಸಹ ಮತ್ತೊಬ್ಬನ ಜಾತಿಯನ್ನು ಕೇಳಿ ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡಲಿಲ್ಲ. ಎಲ್ಲರ ಮನದಲ್ಲಿಯೂ ತಾವು ಕೇವಲ ‘ಹಿಂದೂ’ಗಳಷ್ಟೇ ಎಂಬ ಮನೋಭಾವವಿತ್ತು. ಶಿಬಿರದಲ್ಲಿ ಎಲ್ಲರೂ ಒಟ್ಟಾಗಿ ಕೂರುವುದು, ಏಳುವುದು, ಊಟ ಮಾಡುವುದು, ಕೆಲಸ ಮಾಡುವುದು ಒಟ್ಟಾಗಿಯೇ ಸಾಗುತಿತ್ತು. ಇದನ್ನು ಕಂಡ ಮಹಾತ್ಮಾ ಗಾಂಧೀಜಿ ಆಶ್ಚರ್ಯರಾಗಿದ್ದರು. ‘ಹೆಡ್ಗೆವಾರ್’ರವರು ಅತ್ಯಂತ ಯಶಸ್ವಿಯಾಗಿ ಅಸ್ಪೃಶ್ಯತೆ ನಿವಾರಣೆ ಮಾಡಿರುವುದನ್ನು ಮಹಾತ್ಮಾ ಗಾಂಧಿಯವರು ಕೊಂಡಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪಿಸುವ ಮೊದಲೇ ಡಾಕ್ಟರ್ ಜಿ ಅವರಿಗೆ ಸ್ವಾತಂತ್ರ್ಯ ನಂತರದ ಸಮಸ್ಯೆಗಳ ಅರಿವಿತ್ತು. ಕೇವಲ ಬ್ರಿಟಿಷರ ಗುಲಾಮಗಿರಿಯಿಂದ ಸ್ವಾತಂತ್ರ್ಯ ಬಂದರೆ ಭಾರತದ ಸಮಸ್ಯೆಗಳು ಬಗೆಹರಿಯುವುದಿಲ್ಲ, ಎಲ್ಲಿಯವರೆಗೆ ಸಮಾಜದ ನಾಗರಿಕರಲ್ಲಿ ರಾಷ್ಟ್ರೀಯ ಏಕತೆಯ ಭಾವನೆಯು ಬಲಗೊಳ್ಳುವುದಿಲ್ಲವೋ ಅಲ್ಲಿಯವರೆಗೂ ಭಾರತದ ಭವಿಷ್ಯ ಉಜ್ವಲವಾಗುವುದಿಲ್ಲ ವೆಂದು ಹೇಳಿದ್ದರು. ಅಂಬೇಡ್ಕರ್ ಸಹ ನಿರಂತರ ನಡೆಸಿದ್ದಂಥ ಸಾಮಾಜಿಕ ಹೋರಾಟದ ಅನುಭವದ ಮೊತ್ತವಾಗಿ ಮೊದಲು ದಲಿತರಿಗಾಗಿಯೇ ಸ್ಥಾಪಿಸಿದ್ದಂಥ ‘ಶೆಡ್ಯೂಲ್ ಕ್ಯಾಸ್ಟ್ ಫೌಂಡೇಶನ್’ ಪಕ್ಷವನ್ನು ವಿಸರ್ಜಿಸಿ ಎಲ್ಲಾ ಜಾತಿವರ್ಗವನ್ನು ಒಳಗೊಂಡಂಥ ‘ರಿಪಬ್ಲಿಕನ್’ ಪಕ್ಷವನ್ನು ಸ್ಥಾಪಿಸಲು ಮುಂದಾಗಿದ್ದರು. ರಾಜಕೀಯದಲ್ಲಿ ದಲಿತರು ಎದ್ದು ನಿಲ್ಲಬೇಕಾದರೆ ಸಮಾಜದಲ್ಲಿನ ಇತರ ವರ್ಗದ ಜನರ ಅವಶ್ಯಕತೆಯೂ ಇದೆಯೆಂದು ಅಂಬೇಡ್ಕರ್‌ರವರಿಗೆ ಚುನಾವಣೆ ಮನದಟ್ಟು ಮಾಡಿಕೊಟ್ಟಿತ್ತು. ಹೊಸ ಪಕ್ಷದ ಸ್ಥಾಪನೆಗಾಗಿ ಅವರು ಎಲ್ಲ ವಿಧದ ಸಿದ್ಧತೆಯನ್ನು ಮಾಡಿಕೊಂಡಿದ್ದರು. ಆದರೆ ವಿಧಿ ಅವರನ್ನು ಹೆಚ್ಚು ದಿನ ಭೂಮಿಯ ಮೇಲೆ ಇರಲು ಬಿಡಲಿಲ್ಲ. ನಾಗಪುರದಲ್ಲಿ ಒಮ್ಮೆ ನಡೆಯಬೇಕಿದ್ದಂಥ ತೃತೀಯ ವರ್ಷದ ‘ಸಂಘ ಶಿಕ್ಷ ವರ್ಗ’ದ ಕಾರ್ಯಕ್ರಮಕ್ಕೆ ಯಾರನ್ನು ಆಹ್ವಾನಿಸಬೇಕೆಂದು ಸಂಘದ ಹಿರಿಯ ಕಾರ್ಯಕರ್ತರೊಬ್ಬರು ಗುರೂಜಿ’ಯವರನ್ನು ಕೇಳಿದಾಗ ಹಲವು ಗಣ್ಯ ವ್ಯಕ್ತಿಗಳ ಹೆಸರುಗಳನ್ನೂ ಸೂಚಿಸಲಾಯಿತು. ಗುರೂಜಿ ‘ರೇವರಾಮಜಿ ಕವಾಡೆ’ಯವರನ್ನು ಆಹ್ವಾನಿಸುವಂತೆ ಹೇಳಿದರು, ಇವರ ಹೆಸರು ಕೇಳಿ ಅಲ್ಲಿದ್ದ ಎಲ್ಲರಿಗೂ ಆಶ್ಚರ್ಯವಾಯಿತು, ಕಾರಣ ಅವರಿಗ್ಯಾರಿಗೂ ‘ಕವಾಡೆ’ ಯಾರೆಂದು ಗೊತ್ತಿರಲಿಲ್ಲ. ಆದರೆ ಗುರೂಜಿಗೆ ಮಾತ್ರ, ‘ಕವಾಡೆ’ಯವರು ಅಂಬೇಡ್ಕರ್ ಅನುಯಾಯಿಗಳ ಪೈಕಿ ಧರ್ಮದ ವಿಚಾರದಲ್ಲಿ ಆಸಕ್ತಿಯಿರು ವವರೆಂಬ ವಿಷಯ ಚೆನ್ನಾಗಿ ತಿಳಿದಿತ್ತು. ಅಂಬೇಡ್ಕರ್ ಮತಾಂತರಗೊಂಡ ಮೇಲೆ ಹಲವು ಅನುಯಾಯಿಗಳು ರಾಜಕೀಯದೆಡೆಗೆ ಹೋದರು. ಆದರೆ ಇಬ್ಬರು ಮಾತ್ರ ಧರ್ಮದ ಬಗ್ಗೆ ಒಲವು ಮೂಡಿಸಿಕೊಂಡಿದ್ದರು, ಆ ಇಬ್ಬರಲ್ಲಿ ‘ಕವಾಡೆ’ ಸಹ ಒಬ್ಬರು. ‘ರಾಷ್ಟ್ರೀಯ ಸ್ವಯಂ ಸೇವಕ’ ಸಂಘ ಹಾಗೂ ‘ಅಂಬೇಡ್ಕರ್’ ನಡುವೆ ಬಿರುಕು ಮೂಡಿಸಲು ಈಗ ಕಮ್ಯುನಿಷ್ಟರು ಮಾಡುತ್ತಿರುವ ಕುತಂತ್ರದ ರೀತಿಯಲ್ಲಿ ಅಂದೂ ಸಹ ‘ಪ್ರಗತಿಪರ’ರೆನಿಸಿಕೊಂಡವರು ಪ್ರಯತ್ನ ಪಟ್ಟಿದ್ದರು. ಉದಾಹರಣೆಗಾಗಿ ‘ಅಂಬೇಡ್ಕರ್ ’ರವರು ಕೆಲವು ಶಾಸ್ತ್ರೀಯ ಕಾರಣದಿಂದ ತಮ್ಮ ದೀಕ್ಷಾ ಸಮಾರಂಭಕ್ಕಾಗಿ ‘ನಾಗಪುರ’ವನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಕೆಲವು ಪ್ರಗತಿಪರರು ಸಂಘದ ಕೇಂದ್ರವು ನಾಗಪುರದಲ್ಲಿರುವುದರಿಂದ ಅವರಿಗೆ ಸಂದೇಶ ವನ್ನು ರವಾನಿಸಲು ಅಂಬೇಡ್ಕರ್ ನಾಗಪುರವನ್ನು ಆಯ್ಕೆ ಮಾಡಿಕೊಂಡಿzರೆಂದು ಸುಳ್ಳು ಸುದ್ದಿ ಹಬ್ಬಿಸಿದರು. ಬಾಬಾ ಸಾಹೇಬರಿಗೆ ಈ ವಿಷಯ ತಿಳಿಯಿತು, ಅವರು ನಾಗಪುರದ ಭಾಷಣದ ಆರಂಭದಲ್ಲಿಯೇ ಏಕೆ ತಾನು ನಾಗಪುರವನ್ನು ಆಯ್ಕೆ ಮಾಡಿರುವುದಾಗಿ ಹೇಳಿಬಿಟ್ಟರು. ತಮ್ಮ ಭಾಷಣದಲ್ಲಿ ಬೌದ್ಧಮತದ ಹರಡುವಿಕೆಯಲ್ಲಿ ‘ನಾಗಪುರ’ದ ಜನರ ಪ್ರಮುಖ ಪಾತ್ರವನ್ನು ಉಖ ಮಾಡುತ್ತಾ ಅದಕ್ಕಾಗಿಯೇ ತಾನು ನಾಗಪುರವನ್ನು ಆಯ್ಕೆ ಮಾಡಿಕೊಂಡೆನೆಂದು ಹೇಳಿದರು. ಕೆಲವರು ಇದರ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ನನ್ನ ಕಿವಿಗೆ ಬಿದ್ದಿದೆ, ಅದೆಲ್ಲವೂ ಸುಳ್ಳೆಂದು ಹೇಳುವ ಮೂಲಕ ಪ್ರಗತಿಪರರಿಗೆ ಸರಿಯಾದಂಥ ಸಂದೇಶ ವನ್ನು ತಲುಪಿಸಿದ್ದರು. ಮಹಾತ್ಮಾ ಗಾಂಧಿಯವರು ಬಳಸುತ್ತಿದ್ದಂಥ ‘ಹರಿಜನ’ವೆಂಬ ಪದದ ಬಗ್ಗೆ ಬಾಬಾ ಸಾಹೇಬರಿಗೆ ತಮ್ಮದೇ ಆದಂಥ ಶಂಕೆಯಿತ್ತು. ಈ ವಿಷಯದಲ್ಲಿ ಗುರೂಜಿಯವರ ನಿಲುವು ಸಹ ಇದೇ ಆಗಿತ್ತು, ತಮ್ಮನ್ನು ಇತರರಿಂದ ಬೇರ್ಪಡಿಸುತ್ತಾರೆಂಬ ಒಂದೇ ಒಂದು ಅಂಶದಿಂದ ದಲಿತರನ್ನು ‘ಹರಿಜನ’ರೆಂದು ಕರೆಯುವುದು ಉಪಯುಕ್ತ ವಲ್ಲವೆಂದು ಗುರೂಜಿ ಹೇಳಿದ್ದರು. ಗುರೂಜಿ ಮಹಾತ್ಮಾ ಗಾಂಧಿಜಿಯವರನ್ನು ಭೇಟಿಯಾದಾಗ ಈ ವಿಷಯವನ್ನು ಹೇಳಿದ್ದರು, ಈ ಪದಬಳಕೆಯಿಂದ ಅವರಲ್ಲಿ ಪ್ರತ್ಯೇಕತೆಯ ಭಾವವನ್ನು ಮತ್ತಷ್ಟು ಹೆಚ್ಚಿಸುತ್ತದೆಯೆಂದು ಗುರೂಜಿ ಮಹಾತ್ಮಾ ಗಾಂಧಿಯವರಿಗೆ ಹೇಳಿದ್ದರು. ಮುಂದೊಂದು ದಿನ ರಾಜಕೀಯ ಅಸವನ್ನಾಗಿ ಬಳಸಿಕೊಳ್ಳಬಹುದೆಂದೂ ಸಹ ಗುರೂಜಿ ಹೇಳಿದ್ದರು, ಆದರೆ ಅಂಥ ಭೀತಿಯಿಲ್ಲ ವೆಂದು ಗಾಂಧೀಜಿ ಗುರೂಜಿಯವರಿಗೆ ಹೇಳಿ ಕಳುಹಿಸಿದ್ದರು. ಧರ್ಮದ ಕುರಿತ ಕೆಲವೊಂದು ತಪ್ಪು ಕಲ್ಪನೆಯಿಂದಾಗಿ ಸಮಾಜ ದಲ್ಲಿ ಅಸ್ಪೃಶ್ಯತೆಯಂಥ ವಿಕೃತ ಆಚರಣೆ ಮುಂದುವರಿದುಕೊಂಡು ಬಂದಿದೆ. ಇಂಥ ಅಧಾರ್ಮಿಕ ಆಚರಣೆಗಳನ್ನು ನಿವಾರಿಸಲು ಧರ್ಮಾಚಾರ್ಯರು ಮುಂದೆ ಬರಬೇಕೆಂಬುದು ‘ಗುರೂಜಿ’ಯವರ ಯೋಚನೆಯಾಗಿತ್ತು. 1961ರಲ್ಲಿ ದೆಹಲಿಯಲ್ಲಿರುವ ‘ರಾಮರಾಜ್ಯ ಪರಿಷತ್ತಿನ’ ಅಧ್ಯಕ್ಷರಾಗಿದ್ದಂಥ ಸ್ವಾಮೀಜಿಯವರನ್ನು ಕಾಣಲು ಗುರೂಜಿ ಹೋಗಿದ್ದರು, ಸ್ವಾಮೀಜಿಯವರಿಗೆ ‘ಚಾತುರ್ವರ್ಣ’ ವ್ಯವಸ್ಥೆಯಲ್ಲಿ ಅಪಾರವಾದ ನಂಬಿಕೆಯಿತ್ತು. ಗುರೂಜಿಯನ್ನು ಕಂಡೊಡನೆ ಸ್ವಾಮೀಜಿಯವರು ಸಂಘದ ಶಾಖೆಗಳ ಬಗ್ಗೆ, ಸ್ವಯಂಸೇವಕರ ಬಗ್ಗೆ ಆಳವಾಗಿ ವಿಚಾರಿಸಿದರು. ವಿಚಾರಿಸಿದ ನಂತರ ‘ಗುರೂಜಿ’ ಯವರನ್ನು ಕುರಿತು, ದೇಶದಾದ್ಯಂತ್ಯ ಇರುವ ಸಂಘದ ಸ್ವಯಂಸೇವಕರಿಗೆ ಚಾತುರ್ವರ್ಣದ ಆಧಾರದ ಮೇಲೆ ವ್ಯವಹರಿಸಲು ಆದೇಶ ನೀಡಿ, ಅವರೆಲ್ಲರೂ ನಿಮ್ಮ ಮಾತು ಕೇಳುತ್ತಾರೆಂದು ಹೇಳಿದರು. ಆಗ ಗುರೂಜಿ ಹೇಳುತ್ತಾರೆ, ಅವರ‍್ಯಾರೂ ಸಹ ನನ್ನ ಶಿಷ್ಯರಲ್ಲ, ಬದಲಾಗಿ ನನ್ನ ಬಂಧುಗಳು. ನಾನು ಅವರಿಗೆ ಆದೇಶ ನೀಡುವುದಿಲ್ಲವೆಂದರು. ಗುರೂಜಿ ‘ಸ್ವಾಮೀಜಿ’ಗಳಿಗೆ ಒಂದು ಉಪಾಯವನ್ನು ಹೇಳಿದರು. ಹೇಗೂ ನೀವು ಅಪಾರ ಶಿಷ್ಯವೃಂದ ವನ್ನು ಹೊಂದಿದ್ದೀರಿ ನಿಮ್ಮ ಶಿಷ್ಯಂದಿರು ನೀವು ಹೇಳಿದಂತೆ ಕೇಳುತ್ತಾರೆ, ನಿಮ್ಮ ಶಿಷ್ಯಂದರಿಗೆ ವರ್ಣಕ್ಕನುಸಾರವಾಗಿ ನಡೆದುಕೊಂಡು ಸಮಾಜಕ್ಕೆ ಆದರ್ಶಪ್ರಾಯವಾಗುವಂತೆ ಮಾಡಿಬಿಡಿ ಎಂದರು. ಇದರಿಂದ ಕೋಪಗೊಂಡ ಸ್ವಾಮೀಜಿಯವರು ನಿಮಗೆ ಮಾಡಲಾಗುವುದಿಲ್ಲವೆಂದರೆ ಆಗುವುದಿಲ್ಲವೆಂದು ಹೇಳಿ ಅದನ್ನು ಬಿಟ್ಟು ನನಗೆ ಹೇಳಬೇಡಿ ಎಂದರು. ಆಗ ಗುರೂಜಿ ಹೇಳಿದರು. ಇಂದು ವರ್ಣಾಶ್ರಮ ಉಳಿದಿಲ್ಲ, ಜಾತಿ ವ್ಯವಸ್ಥೆ ಉಳಿದಿರಬೇಕಿಲ್ಲ, ಜೀರ್ಣಾವಸ್ಥೆ ಯಲ್ಲಿರುವ ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮುಗಿಸಿ ಹಾಕಿ ಒಂದೇ ಒಂದು ವರ್ಣವನ್ನು ನಿರ್ಮಿಸುವ ಕಾಲ ಬಂದಿದೆ, ಸಂಘವು ಅದನ್ನೇ ಮಾಡುತ್ತಿದೆ ಎಂದರು. ಇದನ್ನೆ ಕಂಡರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರೂಜಿ ಯವರ ಮೂಲ ಉದ್ದೇಶ ಹಾಗೂ ಬಾಬಾ ಸಾಹೇಬರ ಹೋರಾಟ ಎರಡೂ ಒಂದೇ ಅಲ್ಲವೇ ? ಸಂಘವು ಜಾತಿ ಕತ್ತಲೆಯನ್ನು ತೆಗೆದುಹಾಕಿ ಒಂದೇ ಒಂದು ವರ್ಣದ ಸಮಾಜವನ್ನು ನಿರ್ಮಿಸುವಲ್ಲಿ ಕಾರ್ಯನಿರತವಾಗಿದೆ, ಬಾಬಾ ಸಾಹೇಬರ ಯೋಚನೆಯೂ ಸಹ ಇದೆ ಆಗಿತ್ತು. ಜಾತಿ ವ್ಯವಸ್ಥೆಯೆಂಬುದು ಕೇವಲ ನಗರ ಪ್ರದೇಶ ಅಥವಾ ಹಳ್ಳಿಗಳಿಗೆ ಸೀಮಿತವಾಗಿರಲಿಲ್ಲ, ಕಾಡುಗಳಲ್ಲಿ ವಾಸವಾಗಿದ್ದಂಥ ಆದಿವಾಸಿಗಳಲ್ಲಿಯೂ ಇತ್ತು. ಬಾಬಾಸಾಹೇಬರಿಗೆ ವನವಾಸಿಗಳ ಬಗ್ಗೆ ಅಪಾರ ಕಾಳಜಿಯಿತ್ತು. ಅವರನ್ನು ಮುಖ್ಯವಾಹಿನಿಗೆ ತಂದು ಒಳ್ಳೆಯ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಅವರನ್ನು ಉತ್ತಮ ಸ್ಥಾನಮಾನ ಕೊಡಿಸಬೇಕೆಂಬ ಹಂಬಲವಿತ್ತು. ಸಾವಿರಾರು ವರ್ಷಗಳಿಂದ ತಮ್ಮದೇ ಆದ ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಆದಿವಾಸಿಗಳು ಹಲವು ರೋಗದಿಂದ ಬಳಲುತ್ತಿದ್ದಾರೆ. ಅವರಿಗೆ ಸರಿಯಾದ ಆಶ್ರಯವಿಲ್ಲ ಅವರನ್ನು ಸಮೀಪಿಸಿ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿದರೆ ಅವರನ್ನು ರಕ್ಷಿಸಲು ಸಾಧ್ಯವೆಂದು ಬಾಬಾಸಾಹೇಬರು ಹೇಳಿದ್ದರು. ವನವಾಸಿಗಳು ಹಾಗೂ ಗಿರಿಜನರ ಬಗ್ಗೆ ಬಾಬಾಸಾಹೇಬರಂತೆ ‘ಗುರೂಜಿ’ ಯವರೂ ಸಹ ಆತ್ಮೀಯತೆಯಿಂದ ಯೋಚಿಸುತ್ತಿದ್ದರು. ಸಂಘದ ಪ್ರಮುಖ ಕಾರ್ಯಕರ್ತರಾಗಿದ್ದಂಥ ‘ಬಾಳಾಸಾಹೇಬ ದೇಶಪಾಂಡೆ’ಯವರನ್ನು ವನವಾಸಿಗಳ ನಡುವೆ ಕೆಲಸಕ್ಕಾಗಿ ನಿಯುಕ್ತಿಸಿದರು. ಬಾಳಾಸಾಹೇಬರು ದೊಡ್ಡದೊಂದು ಯುವಪಡೆಯನ್ನು ಕಟ್ಟಿಕೊಂಡು ಛತ್ತೀಸ್‌ಗಢದಲ್ಲಿ ತಮ್ಮ ಕೆಲಸವನ್ನು ಶುರುಮಾಡಿದರು. ಬಾಳಾಸಾಹೇಬರ ತಂಡವು ವನವಾಸಿಗಳ ಶಿಕ್ಷಣದ ರಚನಾತ್ಮಕ ಕೆಲಸವನ್ನು ಕೈಗೆತ್ತುಕೊಂಡರು, ಮತ್ತೊಂದೆಡೆ ವನವಾಸಿಗಳ ಸಮಸ್ಯೆಗಳ ಬಗ್ಗೆ ಆಳವಾದ ಅಧ್ಯಯನ ನಡೆಯಿತು. ವನವಾಸಿಗಳ ಪರಂಪರಾಗತವಾದಂಥ ಕಾಡುಗಳ ಮೇಲಿನ ಹಕ್ಕನ್ನು ಸರಕಾರವು ಕಿತ್ತುಕೊಂಡಿತ್ತು, ಅದನ್ನು ವಾಪಾಸ್ ಪಡೆಯಲು ಜನಜಾಗರಣ ಅಭಿಯಾನ ನಡೆಸಿದರು. ವನವಾಸಿಗಳಿಂದ ಕಡಿಮೆ ಬೆಲೆಯಲ್ಲಿ ಉತ್ಪನ್ನಗಳನ್ನು ಖರೀದಿಸಿ ಪೇಟೆಯಲ್ಲಿ ದುಬಾರಿ ಬೆಲೆಗೆ ಮಾರಿ ಹಣ ಮಾಡುತ್ತಿದ್ದಂಥ ವರ್ತಕರ ಬಗ್ಗೆ ಅರಿವು ಮೂಡಿಸಿ ಚಳವಳಿ ಮಾಡಿಸಲಾಯಿತು. 1977ರಲ್ಲಿ ಈ ಎಲ್ಲಾ ಕೆಲಸಗಳನ್ನು ‘ವನವಾಸಿ ಕಲ್ಯಾಣ ಆಶ್ರಮ’ವೆಂಬ ಅಖಿಲ ಭಾರತೀಯ ವ್ಯವಸ್ಥೆಗೆ ಒಳಪಡಿಸಲಾಯಿತು. ಹತ್ತೊಂಬತ್ತನೆಯ ಶತಮಾನದಲ್ಲಿ ಕೇರಳದಲ್ಲಿ ನಡೆಯು ತ್ತಿದ್ದಂಥ ಅಸ್ಪೃಶ್ಯತೆಯು ತುಂಬಾ ದಯನೀಯವಾಗಿತ್ತು. ದಲಿತರು ಉಚ್ಚವರ್ಣೀಯರಿಂದ ಸುಮಾರು 64 ಗಜದಷ್ಟು ದೂರದಲ್ಲಿ ನಿಂತು ಮಾತನಾಡಬೇಕಿತ್ತು. ಮಹಿಳೆಯರು ಸೊಂಟಕ್ಕಿಂತ ಮೇಲೆ ವಸ್ತ್ರ ಉಡುವಂತಿರಲಿಲ್ಲ. ಇದನ್ನು ಕಂಡ ಸ್ವಾಮಿ ವಿವೇಕಾನಂದರು ಕೇರಳವನ್ನು ‘ಹುಚ್ಚಾಸ್ಪತ್ರೆ’ಎಂದು ಕರೆದಿದ್ದರು. ಇಂಥ ಕೇರಳದಲ್ಲಿ ಬದಲಾವಣೆಯ ಗಾಳಿ ಬೀಸಿ ‘ಗುರುವಾಯೂರ್’ ದೇಗುಲ ಪ್ರವೇಶಕ್ಕೆ ಸತ್ಯಾಗ್ರಹ, ತಿರುವಾಂಕೂರ್ ಮಹಾರಾಜರಿಂದ ಮಂದಿರ ಪ್ರವೇಶಕ್ಕೆ ಅವಕಾಶದಂಥ ಐತಿಹಾಸಿಕ ಘಟನೆಗಳು ನಡೆದವು. ಅಷ್ಟೇ ಯಾಕೆ ಕಳೆದ ದಶಕದಲ್ಲಿ ಕಂಚಿ ಕಾಮಕೋಟಿ ಶಂಕರಾಚಾರ್ಯ ಶ್ರೀ ವಿಜಯೇಂದ್ರ ಸರಸ್ವತಿಯವರ ಸಮ್ಮುಖದಲ್ಲಿ 29 ಮಂದಿ ಅನ್ಯ ಜಾತಿಯವರಿಗೆ ಪೌರೋಹಿತ್ಯದಲ್ಲಿ ತರಬೇತಿ ನೀಡಿ, ಕೊನೆಯಲ್ಲಿ ಸುಮಾರು 40000 ಜನರ ಸಮ್ಮುಖದಲ್ಲಿ ರುದ್ರಾಕ್ಷಿಯ ಮಾಲೆ ಸಮೇತ ಕಂಚಿ ಕಾಮಕೋಟಿ ಪೀಠದ ಅಧಿಕೃತ ಮೊಹರು ಒತ್ತಿ ಪ್ರಮಾಣಪತ್ರವನ್ನೂ ಪ್ರಧಾನ ಮಾಡಲಾಯಿತು. ಕೇರಳದಲ್ಲಿ ನಡೆದ ಇಷ್ಟೊಂದು ದೊಡ್ಡ ಪ್ರಯತ್ನದ ಹಿಂದೆ ಇದ್ದದ್ದು ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ದ ಹಿರಿಯ ಪ್ರಚಾರಕರಾದ ಪಿ. ಮಾಧವನ್ ಅವರ ಶಾಂತ ಪ್ರಯತ್ನ. ಅದೆಷ್ಟು ಜನರಿಗೆ ತಿಳಿದಿದಿಯೋ ಇಲ್ಲವೋ ಗೊತ್ತಿಲ್ಲ, ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿನ ಪರಿವಾರದಲ್ಲಿ ಆದಷ್ಟು ಅಂತರ್ಜಾತೀಯ ವಿವಾಹಗಳು ಮತ್ತೆಲ್ಲೂ ಆಗಿಲ್ಲ, ಇತರರ ರೀತಿಯಲ್ಲಿ ಪ್ರಚಾರವನ್ನು ಗಿಟ್ಟಿಸದೆ ಸಂಘದ ಕಾರ್ಯಕರ್ತರು ತಮ್ಮ ಕೆಲಸವನ್ನು ಕಾರ್ಯಕರ್ತರು ಮಾಡುತ್ತಿರುತ್ತಾರೆ. ಪ್ರಚಾರ ಮಾಡದ ಕಾರಣ ಸಂಘದ ಹಲವು ಸಾಮಾಜಿಕ ಕಳಕಳಿಯ ಕಾರ್ಯಗಳು ಜನರಿಗೆ ತಿಳಿಯುವುದಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬಾಬಾ ಸಾಹೇಬರು ಸಮಾಜದಲ್ಲಿನ ಜಾತಿ ಪದ್ಧತಿಯ ವಿರುದ್ಧ ಗಟ್ಟಿಯಾಗಿ ನಿಂತವರು. ಇಬ್ಬರ ಗುರಿ ಒಂದೇ ಆಗಿತ್ತು, ಆದರೆ ಗುರಿಯನ್ನು ಸಾಧಿಸಲು ಬಳಸಿಕೊಂಡಂಥ ಮಾರ್ಗ ಮಾತ್ರ ಬೇರೆ ಬೇರೆ. ಇಬ್ಬರಿಗೂ ರಾಜಕೀಯದ ಅರಿವಿಲ್ಲದ ಕಾರಣ ಚುನಾವಣೆಗಳನ್ನು ಎದುರಿಸುವುದು ಕಷ್ಟವಾಗಿತ್ತು, ಬಾಬಾ ಸಾಹೇಬರು ತಾವು ಕಟ್ಟಿದ ಪಕ್ಷದಿಂದ ಚುನಾವಣೆಗೆ ನಿಂತಾಗ ಅನೇಕ ಅಸ್ಪೃಶ್ಯರು ಮತ ಹಾಕಲಿಲ್ಲ,ಇದರ ಅಳವನ್ನರಿತ ಬಾಬಾಸಾಹೇಬರು ತಮ್ಮ ಷೆಡ್ಯೂಲ್ ಕ್ಯಾಸ್ಟ್ ಪಕ್ಷವನ್ನು  ವಿಸರ್ಜಿಸಿ ಎಲ್ಲಾ ಜಾತಿಯವರ ವಿಶ್ವಾಸವನ್ನು ಗಳಿಸಲು ರಿಪಬ್ಲಿಕನ್ ಪಕ್ಷವನ್ನು ಕಟ್ಟುವತ್ತ ಯೋಚಿಸಿದ್ದರು. ಬಾಬಾ ಸಾಹೇಬರ ಅನುಯಾಯಿಗಳು ಹಾಗು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಧ್ಯೆ ದೊಡ್ಡದೊಂದು ಕಂದಕವನ್ನು ಸೃಷ್ಟಿಸಲು ಕಮ್ಯುನಿಸ್ಟರು ಇಲ್ಲಸಲ್ಲದ ಆರೋಪಗಳನ್ನು ಸಂಘದ ಮೇಲೆ ಇಂದೂ ಸಹ ಮಾಡುತ್ತಿದ್ದಾರೆ. ಸಂಘವೆಂದರೆ ಕೇವಲ ಬ್ರಾಹ್ಮಣರಿಗೆ ಸೇರಿzಂದು ಸುಳ್ಳು ಸುದ್ದಿಗಳನ್ನು ಹರಡಿಸಿ ದಲಿತರನ್ನು ಎತ್ತುಕಟ್ಟುವ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಆರಂಭವಾದ ದಿನದಿಂದಲೂ ಜಾತಿಯೆಂಬ ಬೇಧ ಭಾವವನ್ನು ಎಲ್ಲಿಯೂ ಮಾಡಲಿಲ್ಲ, ಮಾಡುವು ದಿಲ್ಲ. ಸಮಾಜದಲ್ಲಿನ ಜಾತಿ ವ್ಯವಸ್ಥೆಯ ವಿರುದ್ಧ ಬಾಬಾಸಾಹೇಬರಷ್ಟೇ ನಿಲುವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಇಂದಿಗೂ ಹೊಂದಿದೆ.