Ravi Hunj Column: ಜಾತಿಗಳ ಅಸ್ಮಿತೆಗೆ ಐಕಾನುಗಳು ಅವಶ್ಯವೇ ?
ವಡ್ಡಗೆರೆಯವರ ಸಂಶೋಧನೆಗೆ ಸಾಕ್ಷ್ಯ ಕೇಳಿದರೆ, ರೇಣುಕಾಚಾರ್ಯ ಮತ್ತಿತರ ಪಂಚಾಚಾರ್ಯರ ಹುಟ್ಟು ಅಯೋ ನಿಜವಾದದ್ದು ಎಂಬುದೇ ಅವೈಜ್ಞಾನಿಕ ಎಂದು ಉತ್ತರಿಸುತ್ತಾರೆ. ರೇವಣಸಿದ್ಧ ರೇಣುಕ ನಲ್ಲ ಎನ್ನುವ ವಡ್ಡಗೆರೆಯವರು ತಮ್ಮ ಸಂಶೋಧನೆಗೆ ತಕ್ಕ ಸಾಕ್ಷ್ಯ ಕೊಡದೆ ಅವರೇ ರೇಣುಕಾಚಾರ್ಯ ರ ಅಯೋನಿಜ ಹುಟ್ಟನ್ನು ರೇವಣಸಿದ್ಧನೊಂದಿಗೆ ತಳುಕು ಹಾಕುತ್ತಾರೆ ಏಕೆ?
-
ವಚನಾಮೃತ
ರವಿ ಹಂಜ್
ಒಂದೊಮ್ಮೆ ಜಾತಿನಾಶದಂತಹ ಪುರೋಗಾಮಿ ಆಂದೋಲನಗಳಲ್ಲಿ ತೊಡಗಿದ್ದ ಸಮಾಜವಾದಿ ಬುದ್ಧಿಜೀವಿಗಳೇ ಇಂದು ಅಸ್ಮಿತೆ ಎಂಬ ಹೆಸರಿನಲ್ಲಿ ಜಾತೀಯತೆಯ ವಿಷ ವರ್ತುಲ ನಿರ್ಮಿಸಿದ್ದಾರೆ. ಇಂದು ಜಾತಿ ಪ್ರೌಢಿಮೆಯು ಪಕ್ಷಗಳಲ್ಲಿನ ಸ್ಥಾನಮಾನ, ಸರಕಾರದ ಮಂತ್ರಿ ಸ್ಥಾನ, ಸಾಮಾಜಿಕ ಜೀವನ, ವ್ಯವಹಾರೋದ್ಯಮಗಳಲ್ಲದೆ ಪ್ರತಿಯೊಂದು ಆಟೋರಿಕ್ಷಾ, ಟ್ಯಾಕ್ಸಿ ವಾಹನಗಳ ಹಿಂಬರಹದವರೆಗೆ ಮೆರೆಯುತ್ತಿದೆ.
ಅದಲ್ಲದೆ ಒಂದೊಂದು ಜಾತಿಗೆ ಕನಿಷ್ಠ ಮೂರ್ನಾಲ್ಕು ಐಕಾನುಗಳಿರಬೇಕೆಂಬ ಅಘೋಷಿತ ನಿಯಮ ನಿರ್ಮಾಣವಾಗಿ ಬಿಟ್ಟಿದೆ. ಹಾಗಾಗಿ ಕೆಲವು ಐತಿ ಹಾಸಿಕ ವ್ಯಕ್ತಿಗಳನ್ನು ಒಂದೊಂದು ಜಾತಿಗೆ ಸೀಮಿತಗೊಳಿಸಿ ಐಕಾನುಗಳನ್ನಾಗಿಸಲಾಗಿದೆ.
ಹೀಗೆ ಐಕಾನುಗಳಾಗಿಸಿಕೊಳ್ಳುವ ಭರದಲ್ಲಿ ಕೆಲವು ಐತಿಹಾಸಿಕ ಮಹಾಪುರುಷರ ಎಲ್ಲ ಐತಿಹಾಸಿಕ ದಾಖಲೆಗಳನ್ನೂ ಉಪೇಕ್ಷಿಸಿ ಜಾತ್ಯಂತರಗೊಳಿಸಿ ಐಕಾನಿ ಅಪಹರಣಗಳಾಗುತ್ತಿವೆ. ಇದನ್ನು ಕೆಲವರು ಹೈಜಾಕ್ ಎನ್ನುತ್ತಾ ಇತ್ತೀಚೆಗೆ ಬಹಳಷ್ಟು ಸುದ್ದಿ ಮಾಡುತ್ತಿದ್ದಾರೆ. ಇಂತಹ ಜಾತ್ಯಂತರದ ವಿಷಯವೇ ರೇವಣಸಿದ್ಧರು ಕುರುಬರೇ ಎಂಬ ಕಳೆದ ಬಾರಿಯ ನನ್ನ ಲೇಖನವಾಗಿತ್ತಷ್ಟೇ. ಈ ವೇಳೆ ಕುರಿತು ಇನ್ನೂ ಸಾಕ್ಷ್ಯ ಸ್ಪಷ್ಟವಾಗಿ ಹೇಳಬೇಕೆಂದರೆ, ಕರ್ನಾಟಕದ ಮೈಲಾರನ ಒಕ್ಕಲಿನವರು ‘ಏಳು ಕೋಟಿ ಏಳು ಕೋಟಿ ಉಘೇ ಚಾಂಗು ಭಲೇ’ ಎಂದು ಶಿವನ ಜಯಘೋಷ ಮಾಡುತ್ತಾರೆ.
ಇದುವೇ ಪೂರ್ವದ ‘ಲಾಕುಳಸಿದ್ಧಾಂತ’ವಿದ್ದಂತೆ ತೋರುವುದು. ಶಾಸನಗಳಲ್ಲಿ ಇದನ್ನು ‘ಎಕ್ಕೋಟಿ’ ಸಮಯವೆಂದು ಕರೆಯಲಾಗಿದೆ ಎಂದು ಕಪಟರಾಳ ಕೃಷ್ಣರಾಯರು ತಮ್ಮ, ‘ಕರ್ನಾಟಕ ಲಾಕುಳ ಶೈವ’ ಇತಿಹಾಸದ ಪುಟ 85ರಲ್ಲಿ ತಿಳಿಸಿ ದ್ದಾರೆ. ಈವರೆಗಿನ ರೇವಣಸಿದ್ಧನ ಕುರಿತಾದ ಶಾಸನಗಳಲ್ಲಿ ಎಕ್ಕೋಟಿ ಸಮಯ ಎಂಬ ಪದವಾಗಲಿ ಅಥವಾ ಎಕ್ಕೋಟಿ ಸಮಯ ಎಂದಿರುವ ಶಾಸನಗಳಲ್ಲಿ ರೇವಣಸಿದ್ಧನ ಉಲ್ಲೇಖವಾಗಲಿ ಇಲ್ಲ.
ಇದನ್ನೂ ಓದಿ: Ravi Hunj Column: ರೇವಣಸಿದ್ಧ: ಅಂತೆಕಂತೆಯ ಸಂತೆಗೆ ಸಂಶೋಧನೆ ಎಂಬ ಸೋಗು !
ಹಾಗಾಗಿ ರೇವಣಸಿದ್ಧ ಸ್ಪಷ್ಟವಾಗಿ ಬೀರಗೊಂಡನಿಗೆ ದೀಕ್ಷೆ ಕೊಟ್ಟ ಗುರುವೇ ಹೊರತು ಕುರುಬ ನಲ್ಲ. ಈಗ ಮುರುಘಾ ಶರಣರು ಜಾತಿಗೊಂದು ಪೀಠ ಮಾಡಿ ಕೊಟ್ಟಿರುವ ಕಾರಣ ಅವರ ಮೇಲೆ ಪ್ರೀತಿಯಿಂದ ಯಾವುದಾದರೂ ಒಂದು ಪೀಠ ಅವರನ್ನು ಕುಲಗುರು ಎಂದರೆ ಮುರುಘಾ ಶರಣರು ಆ ಜಾತಿಯವರಾಗುತ್ತಾರೆಯೇ? ಯಾರಾದರೂ ಶಿರಡಿ ಸಾಯಿಬಾಬಾನನ್ನು ಭಕ್ತಿಪೂರ್ವಕ ವಾಗಿ ತಮ್ಮ ಕುಲಗುರು ಎಂದರೆ ಅವರು ಭಕ್ತನ ಜಾತಿಯವರಾಗುತ್ತಾರೆಯೇ? ಗುರುಪರಂಪರೆಗಳಲ್ಲಿ ವಂಶೀಯ ಎಂದರೆ ಅನುವಂಶೀಯವಾಗಿ ಹುಟ್ಟಿದವ ಎಂದಲ್ಲ.
ಅದು ಉತ್ತರಾಧಿಕಾರಿ ಎಂದು ಇದು ಕೇವಲ ವೀರಶೈವ ಗುರು ವಿರಕ್ತರಲ್ಲದೆ ಇತರೆ ಪಂಥ ಗಳಲ್ಲಿಯೂ ಇದೇ ಅರ್ಥವನ್ನು ಹೊಂದಿದೆ. ವೀರಶೈವರಲ್ಲಿ, ನಿರಂಜನ ವಂಶ ರತ್ನಾಕರ ಎಂಬ ಉತ್ತರಾಧಿಕಾರಿಗಳ ಇತಿಹಾ ಸವಿದ್ದರೆ, ಶಂಕರಮಠವು ಗುರುವಂ ಶಕಾವ್ಯವನ್ನು ಹೊಂದಿದೆ.
ಇಂತಹ ಯಾವುದೇ ಅರಿವಿಲ್ಲದೆ ನಾಡಿನ ಖ್ಯಾತ ಜನಪದ ತಜ್ಞ ವಡ್ಡಗೆರೆ ನಾಗರಾಜಯ್ಯನವರು ತಾಮ್ರಬಿಯೊಂದರಲ್ಲಿ ರೇಣುಕಾಚಾರ್ಯ ವಂಶೀಯ ಎಂದಿರುವುದನ್ನು, ಇಟ್ಟುಕೊಂಡು ಬೇರಾ ವುದೇ ಸಾಕ್ಷಿ ಪುರಾವೆ ಕೊಡದೆ ಜನಪದದ ಕತೆಯೊಂದನ್ನು ಹೊಸೆದು ಲಂಗೋಟಿ ಧರಿಸಿ ಕಾಡು ಮೇಡು ಅಳೆಯುವ ದ್ರಾವಿಡ ಸಿದ್ಧ ರೇವಣಸಿದ್ಧ ಎಂಬೆಲ್ಲ ಆರ್ಯ-ದ್ರಾವಿಡ, ವೈದಿಕ-ಅವೈದಿಕ, ಬಡವ-ಶ್ರೀಮಂತ ಶೋಷಕ-ಶೋಷಿತ ಎಂಬ ತಥಾಕಥಿತ ಕಮ್ಯುನಿಸ್ಟ್ ಸಂಕಥನವನ್ನು ರೇವಣ ಸಿದ್ಧನ ಇತಿಹಾಸವೆಂದು ಹೇಳುತ್ತಾರೆ.
ವೈದಿಕ ವೀರಶೈವರು ಅವೈದಿಕ ಕುರುಬರ ಮಠಗಳನ್ನು ಆಕ್ರಮಿಸಿಕೊಂಡಿದ್ದಾರೆ ಎನ್ನುತ್ತಾರೆ. ಆದರೆ, ಅವರ ಅನುಯಾಯಿ ಹಾಲುಮತಸ್ಥರು ಅವರಿಗೆ ಜೈಕಾರ ಹಾಕುತ್ತಲೇ ಅವರ ದ್ರಾವಿಡ ಸಿದ್ಧಾಂತಕ್ಕೆ ತದ್ವಿರುದ್ಧವಾಗಿ ನಾವು ಪಶು ಪಾಲಕ ಆರ್ಯ ಕ್ಷತ್ರಿಯರು ಎನ್ನುತ್ತಾರೆ!
ವಡ್ಡಗೆರೆಯವರ ಸಂಶೋಧನೆಗೆ ಸಾಕ್ಷ್ಯ ಕೇಳಿದರೆ, ರೇಣುಕಾಚಾರ್ಯ ಮತ್ತಿತರ ಪಂಚಾಚಾರ್ಯರ ಹುಟ್ಟು ಅಯೋ ನಿಜವಾದದ್ದು ಎಂಬುದೇ ಅವೈಜ್ಞಾನಿಕ ಎಂದು ಉತ್ತರಿಸುತ್ತಾರೆ. ರೇವಣಸಿದ್ಧ ರೇಣುಕನಲ್ಲ ಎನ್ನುವ ವಡ್ಡಗೆರೆಯವರು ತಮ್ಮ ಸಂಶೋಧನೆಗೆ ತಕ್ಕ ಸಾಕ್ಷ್ಯ ಕೊಡದೆ ಅವರೇ ರೇಣುಕಾಚಾರ್ಯರ ಅಯೋನಿಜ ಹುಟ್ಟನ್ನು ರೇವಣಸಿದ್ಧನೊಂದಿಗೆ ತಳುಕು ಹಾಕುತ್ತಾರೆ ಏಕೆ?
ಓರ್ವ ಜನಪದ ತಜ್ಞನಿಗೆ ಪೌರಾಣಿಕ ಬಿಡಿ ಜಾನಪದ ದಲ್ಲಿಯೇ ಹೇರಳವಾಗಿರುವ ರೂಪಕಾರ್ಥದ ಪವಾಡಗಳ, ಹುಟ್ಟಿನ, ಮರುಹುಟ್ಟಿನ ಸಂಕಥನಗಳು ಅರ್ಥವಾಗದಿದ್ದ ಮೇಲೆ ಇವರ ಜನಪದ ತಜ್ಞ ಎನ್ನುವ ಪೂರ್ವಪ್ರತ್ಯಯವು ನಿಜಕ್ಕೂ ಸಮಂಜಸವೇ ಎಂಬ ಅನುಮಾನ ಮೂಡಿಸುತ್ತದೆ.
ಏಕೆಂದರೆ ರೋಚಕ ಸಂಕಥನದ ಮೌಖಿಕ ಇತಿಹಾಸದ ಒಂದು ಪ್ರಕಾರವೆನ್ನುವ ಜನಪದವಾಗಲಿ ಅಥವಾ ಅದೇ ರೀತಿಯ ಗ್ರಾಂಥಿಕ ರೂಪದ ಪುರಾಣಗಳಾಗಲಿ ಇತಿಹಾಸದ ಒಂದು ಆಕರವಾಗಿ ಮಹತ್ವ ಪಡೆಯಲು ಅವುಗಳಿಗೆ ತಾಳೆಯಾಗಬಲ್ಲ ಯಾವುದಾದರೂ ವೈಜ್ಞಾನಿಕ ಪ್ರಕಾರದ ಶಾಸನ ದಂತಹ ಪ್ರಾಮಾಣಿತ ಆಕರಗಳು ಮುಖ್ಯ. ಇಂತಹ ಯಾವ ಸಾಕ್ಷ್ಯಗಳನ್ನೂ ವಡ್ಡಗೆರೆಯವರು ಕೊಟ್ಟಿಲ್ಲ, ಕೊಡಲು ಸಾಧ್ಯವೂ ಇಲ್ಲ.
ಈ ಎಲ್ಲ ಹಿನ್ನೆಲೆಯಲ್ಲಿ ‘ರೇವಣಸಿದ್ಧರ ಜಾತ್ಯಂತರ ಯಾನೆ ಹೈಜಾಕ್’ ಎನ್ನುವ ಸುದ್ದಿ ಈಗೇಕೆ ಮುನ್ನೆಲೆಗೆ ಬರುತ್ತಿದೆ ಎಂದು ಪ್ರಶ್ನೆ ಹಾಕಿಕೊಂಡಾಗ ಅದರ ಉದ್ದೇಶ ಸ್ಫಟಿಕ ಸದೃಶವಾಗಿ ಅನಾವರಣಗೊಳ್ಳುತ್ತದೆ. ಅನಾದಿ ಕಾಲದಿಂದಲೂ ಗ್ರಾಂಥಿಕ ವೀರಶೈವ ಮತ್ತು ಆಡುಮಾತಿನ ಲಿಂಗಾಯತ ಪದಗಳು ಒಂದೇ ಧರ್ಮವನ್ನು ಬಿಂಬಿಸುತ್ತಿದ್ದರೂ ಅದನ್ನು 2018ರಲ್ಲಿ ವೀರಶೈವ ಬೇರೆ, ಲಿಂಗಾಯತ ಬೇರೆ ಎಂಬ ಧರ್ಮಭಂಜನೆಗೆ ಈಡಾಗಿಸಿ ಛಿದ್ರಿಸಲಾಯಿತು.
ಆದರೆ, ಅಂದಿನ ಸರಕಾರದೊಂದಿಗೆ ಈ ವಾದವೂ ಪತನಗೊಂಡರೂ ಕೆಲವು ಲಿಂಗಾಯತ ದುಷ್ಟ ಶಕ್ತಿಗಳು ಅದನ್ನು ಮತ್ತದೇ ಪಕ್ಷದ ಸರಕಾರ ಬಂದಾಗ ಜೀವಂತ ಗೊಳಿಸುತ್ತಿವೆ. ಈ ಧರ್ಮ ಭಂಜನೆ ಯು ಆ ಪಕ್ಷದ ಕಾರ್ಯಸೂಚಿಯೇ ಆಗಿದ್ದರೂ ಅಧಿಕೃತವಾಗಿ ಆ ಪಕ್ಷವು ಅದನ್ನು ನಿರಾಕರಿಸುತ್ತಿದೆ.
‘ವಿಶ್ವವಾಣಿಯ ಬಸವ ಮಂಟಪ ಅಂಕಣವು’ ಆ ಎಲ್ಲ ಪೊಳ್ಳುವಾದದ ಭಂಜನೆಯನ್ನು ಬಯಲಾ ಗಿಸಿದ್ದರಿಂದ ತಣ್ಣಗಾದ ಆ ವಾದವು ಈಗ ಕೆಲವು ಅಸ್ಮಿತೆ ಪೀಡಿತರನ್ನು ಬಳಸಿಕೊಂಡು ಮತ್ತೆ ಧರ್ಮಭಂಜನೆಗೆ ಅನುವಾಗಿದೆ. ತಮ್ಮ ಭಂಜನೋದ್ದೇಶಕ್ಕಾಗಿ ಈ ಧರ್ಮಭಂಜಕ ಮಾಫಿಯಾ ಎಂತಹ ಕೆಳಮಟ್ಟಕ್ಕೂ ಇಳಿಯಬಲ್ಲದು ಎಂಬುದು ಈಗ ಜಗಜ್ಜಾಹೀರಾಗಿದೆ!
ಇದಕ್ಕಾಗಿ ಈ ಗುಂಪು ಪ್ರಮುಖವಾಗಿ ಜ್ಯೋತಿಷ್ಯ ಹೇಳುವ, ದೆವ್ವ ಬಿಡಿಸುವ ಉದ್ಯೋಗ ಮಾಡಿ ಕೊಂಡಿರುವ ಬಹು ಪೂರ್ವಪ್ರತ್ಯಯಗಳ ಚಂದ್ರಕಾಂತ ಬಿಜ್ಜರಗಿ ಎಂಬುವವರಿಗೆ ಸಾಕಷ್ಟು ಪ್ರಚಾರ ಕೊಟ್ಟು ಮುನ್ನೆಲೆಗೆ ತಂದಿತು. ಈ ಮುನ್ನೆಲೆಗೆ ವಡ್ಡಗೆರೆ ನಾಗರಾಜಯ್ಯನವರಿಗಿಂತ ಬಹಳಷ್ಟು ಮೊದಲೇ ಬಿಜ್ಜರಗಿಯವರು, ರೇವಣ ಸಿದ್ಧರು ಕುರುಬರು. ಇವರನ್ನು ವೀರಶೈವರು ಹೈಜಾಕ್ ಮಾಡಿದ್ದಾರೆ ಎಂದು ಹೇಳುತ್ತಿದ್ದುದು.
ಇದನ್ನು ಶ್ರೀಯುತರು ಇತ್ತೀಚೆಗಲ್ಲದೆ ಕಳೆದ ಒಂದು ದಶಕದಿಂದಲೂ ಹೇಳುತ್ತಿದ್ದಾರೆ. ಆಗೆಲ್ಲ ಇವರನ್ನು ಹಾಲುಮತಸ್ಥರಲ್ಲಿಯೇ ಯಾರೂ ಗಂಭೀರ ವಾಗಿ ಪರಿಗಣಿಸಿರಲಿಲ್ಲ. ಏಕೆಂದರೆ ಅವರ ವಾದದಲ್ಲಿ ಅಂತಹ ಗಂಭೀರ ಸಾಕ್ಷಿಗಳಾಗಲಿ ತರ್ಕವಾಗಲಿ ಇರಲಿಲ್ಲ. ಆದರೆ, ಯಾವಾಗ ಲಿಂಗಾ ಹತರ ಭಂಜಕವಾದಗಳು ಬೀಳುತ್ತಾ ಸಾಗಿ ದವೋ ಆಗ ಉರುಳುವವನಿಗೆ ಹುಲ್ಲುಕಡ್ಡಿ ಆಸರೆ ಎಂಬಂತೆ ಈ ಬಿಜ್ಜರಗಿಯವರ ವಾದವನ್ನು ಭಂಜಕವಾದಗಳು ಹಿಡಿದುಕೊಂಡವು.
ಆಸರೆಗಾಗಿ ಹಿಡಿದ ಈ ಹುಲ್ಲುಕಡ್ಡಿ ಶೃಂಗಾರಗೊಂಡು ವಿವಿಧ ರಂಜನೀಯ ವೇಷಭೂಷಣಗಳಲ್ಲಿ ಉಕ್ಕಿನ ಸರಪಳಿಯಂತೆ ಕಂಗೊಳಿಸಲಾರಂಭಿಸಿತು. ಆದರೆ ತನ್ನನ್ನು ತಾನು ಸಂಶೋಧಕ ಎಂದು ಕೊಳ್ಳುತ್ತಿದ್ದ ಶ್ರೀ ಬಿಜ್ಜರಗಿಯವರು ಅದರಿಂದ ನಿರೀಕ್ಷಿತ ಫಲ ಕಾಣದೆ ಪ್ರೇತಾತ್ಮಗಳೊಂದಿಗೆ ಸಂಭಾಷಿಸಿ ದೆವ್ವಗಳನ್ನು ಬಿಡಿಸುವ, ಅವುಗಳಿಗೆ ಪುನರ್‌ವಸತಿ ಕಲ್ಪಿಸಿ ಕೊಡುವ ದಂಧೆಯನ್ನು ಆರಂಭಿಸಿ ಗುರೂಜಿಗಳಾಗಿ ಹೋಗಿದ್ದರು. ಅಷ್ಟೇ ಅಲ್ಲದೆ ತಮ್ಮ ದೆವ್ವ ಬಿಡಿಸುವ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿಕೊಳ್ಳುವ ಅಸಾಧಾರಣ ಧಾರ್ಷ್ಟ್ಯವನ್ನೂ ಮೆರೆದಿದ್ದಾರೆ.
ಈ ಧಾರ್ಷ್ಟ್ಯಕ್ಕೆ ತಕ್ಕಂತೆ ಲಿಂಗಾಹತರ ಬೆಂಬಲದಿಂದ ಮೌಢ್ಯ ನಿಷೇಧ ಜಾರಿಗೊಳಿಸುವ ಜನನಾಯಕರು ಈ ಓರ್ವ ದೆವ್ವ ಬಿಡಿಸುವ, ವಶೀಕರಣ ಮಾಡುವೆನೆನ್ನುವ, ಜ್ಯೋತಿಷಿ/ಸಮ್ಮೋ ಹನ ಪಂಡಿತ ಎಂಬ ಪೂರ್ವಪ್ರತ್ಯಯಗಳನ್ನು ಹೊಂದಿರುವ ಬಿಜ್ಜರಗಿ ಎಂಬ ಮೌಢ್ಯದ ಪ್ರತಿ ರೂಪಕ್ಕೆ ವಶೀಕರಣ ಗೊಂಡು ಸಮ್ಮೋಹದಿಂದ ಮತ್ತು ಅಷ್ಟೇ ಧಾರ್ಷ್ಟ್ಯತೆಯಿಂದ 2025ನೇ ಸಾಲಿನ ಕನಕಶ್ರೀ ಎಂಬ ಸರಕಾರಿ ಪ್ರಶಸ್ತಿಯನ್ನೂ ನೀಡಿಬಿಟ್ಟರು. ಏಕೆ? ಅಂದ ಹಾಗೆ ವೀರಶೈವ ಲಿಂಗಾಯತ ಧರ್ಮ ಭಂಜನೆಗೆ ಚಾಲನೆ ನೀಡಿದ್ದವರು ಇದೇ ಜನನಾಯ ಕರು ಎಂಬುದನ್ನು ಇಡೀ ನಾಡೇ ಬಲ್ಲದು. ಇಂತಹ ಮೌಢ್ಯದ ಪ್ರತಿರೂಪವನ್ನು ಕನಕ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದ ಆಯ್ಕೆ ಸಮಿತಿಯ ಅಧ್ಯಕ್ಷರು ಕೆ.ಮರುಳಸಿದ್ದಪ್ಪ!
ಅಂದ ಹಾಗೆ ಕೆ.ಮರುಳಸಿದ್ದಪ್ಪ ಅವರು ನಾಡಿನ ಕೆಲವೇ ಕೆಲವು ಪ್ರಗತಿಪರ, ಮೌಢ್ಯನಿಷೇಧ ಪ್ರವರ್ತಕ ಸಾಕ್ಷಿ ಪ್ರಜ್ಞೆಗಳಲ್ಲಿ ಒಬ್ಬರು! ಈ ಆಯ್ಕೆ ಸಮಿತಿ ಯಾವ ಖರ್ಚೂ ಇಲ್ಲದೆ ಸುಮ್ಮನೆ ಅಂತರ್‌ಜಾಲದಲ್ಲಿ ಬಿಜ್ಜರಗಿ ಎಂದು ಹುಡುಕಿದ್ದರೆ ಹಲವಾರು ದೆವ್ವ ಬಿಡಿಸುವ ವಿಡಿಯೊಗಳು ಸಿಗುತ್ತಿದ್ದವು.
ಇಂತಹ ಒಂದು ಸಣ್ಣ ಹುಡುಕಾಟವನ್ನೂ ನಡೆಸಲಾಗದ ಕಾರ್ಯಕ್ಕೆ ಒಂದು ಸಮಿತಿಯನ್ನೇ ರಚಿಸಲಾಗಿದೆ ಎಂದರೆ ಸರಕಾರಿ ಹಣ ಅದೆಷ್ಟು ಪೋಲಾಯಿತು? ಅಂದ ಹಾಗೆ ಕೆ.ಮರುಳಸಿದ್ದಪ್ಪ ಅವರ ಆಪ್ತ ಬಳಗದ ಮೌಢ್ಯ ನಿಷೇಧ, ಜಾತಿ ವಿನಾಶದ ಬುದ್ಧಿಜೀವಿಗಳೇ ಮೇಲಿನ ಜನನಾಯಕರ ಸರಕಾರ ನೇಮಿಸಿದ್ದ ಧರ್ಮ ಭಂಜಕ ಲಿಂಗಾಯತ ಪ್ರತ್ಯೇಕ ಧರ್ಮ ಸಮಿತಿ ಅಧ್ಯಕ್ಷರು ಮತ್ತು ಸರ್ವಸದಸ್ಯರೂ ಆಗಿದ್ದರು!
ಅಲ್ಲದೆ ವೀರಶೈವ ಬೇರೆ ಲಿಂಗಾಯತ ಬೇರೆ ಎನ್ನುವ ಧರ್ಮ ಭಂಜಕ ಬಳಗದ ಪ್ರಮುಖರಾದ ತೋಂಟದ ಜಗದ್ಗುರು ಶ್ರೀ ಸಿದ್ಧರಾಮ ಶ್ರೀಗಳು, ಫ.ಗು.ಹಳಕಟ್ಟಿಯವರ ನಂತರ ಸಂಶೋಧನಾ ಕ್ಷೇತ್ರದಲ್ಲಿ ಎದ್ದು ಕಾಣುವ ಹೆಸರು ನಿಮ್ಮದು ಎಂದು ಶ್ರೀ ಬಿಜ್ಜರಗಿಯವರೆಗೆ ಪ್ರಶಂಸನಾ ಪತ್ರ ವನ್ನೂ ಕೊಟ್ಟು ಬಿಟ್ಟರು, ಏಕೆ?
ಏಕೆಂದರೆ ತೋಂಟದ ಜಗದ್ಗುರು ಶ್ರೀ ಸಿದ್ಧರಾಮ ಶ್ರೀಗಳಿಗೆ ತಾವು ದ್ವೇಷಿಸುವ ಮತ್ತು ವೀರಶೈವ ಲಿಂಗಾಯತ ಒಂದೇ ಎನ್ನುವ ಪಂಚಪೀಠಗಳ ಆರಾಧ್ಯ ದೈವ ರೇವಣಸಿದ್ಧನನ್ನು ಬಿಜ್ಜರಗಿಯವರು ಕುರುಬರು ಎಂದಿದ್ದು ಹಾಲು ಕುಡಿದಷ್ಟು ಸಂತೋಷವನ್ನುಂಟುಮಾಡಿ ಬಿಜ್ಜರಗಿಯವರ ದೆವ್ವ, ಭೂತ, ಪ್ರೇತಗಳನ್ನೆಲ್ಲ ಪ್ರೀತ್ಯರ್ಥವಾಗಿಸಿಬಿಟ್ಟವು.
ಅಂದ ಹಾಗೆ ಈ ಜಗದ್ಗುರುಗಳು ಇವನಾರವ ಇವನಾರವ ಇವನಾರವ ಎನ್ನುತ್ತಾ ವೇದಗಳಿಗೆ ಒರೆಯ ಕಟ್ಟುತ್ತಿರುತ್ತಾರೆ. ಅದೇ ರೀತಿ ಲಿಂಗಾಹತರ ವಕ್ತಾರರಂತೆ ಅಂದು ಲಿಂಗಾಹತರ ಪರವಾಗಿ ಜನಪದ ತಜ್ಞ, ವಡ್ಡಗೆರೆಯವರು ಅಂದೂ ಸಂಕಥನಗಳನ್ನು ಹೊಸೆಯುತ್ತಿದ್ದರು.
ಇಂದೂ ಅದರ ಮುಂದಿನ ಭಾಗವಾಗಿ ರೇವಣಸಿದ್ಧರ ಜನಪದ ಪುರಾಣವನ್ನು ಹೊಸೆಯು ತ್ತಿದ್ದಾರಷ್ಟೇ. ಹೀಗೆ ಸಮಗ್ರವಾಗಿ ರೇವಣಸಿದ್ಧರು ಕುರುಬರು ಎಂಬ ಸೃಷ್ಟಿಗೂ, ಬಿಜ್ಜರಗಿಯವರ ಮೌಢ್ಯಕ್ಕೂ, ಲಿಂಗಾಯತ ಪ್ರತ್ಯೇ ಕ ಧರ್ಮ ಎಂಬ ಧರ್ಮಭಂಜನೆಗೂ, ಕುಲ ಕುಲ ಕುಲ ವೆಂದು ಹೊಡೆದಾಡದಿರಿ ಎಂಬ ಕನಕನ ಹೆಸರಿನ ಪ್ರಶಸ್ತಿಗೂ, ತೋಂಟದ ಶ್ರೀಗಳ ಪ್ರಶಂಸನಾ ಪತ್ರಕ್ಕೂ, ವಡ್ಡಗೆರೆಯವರ ಜನಪದ ಸಂಕಥನಕ್ಕೂ ಇರುವ ಸಂಬಂಧದ ನಡುವೆ ಏನಾದರೂ ಬಿಟ್ಟು ಹೋದ ಸ್ಥಳ ಉಳಿದಿದ್ದರೆ ಸ್ಪಷ್ಟವಾಗಿ ತುಂಬಿಕೊಳ್ಳಿ.
ಇನ್ನು ಶ್ರೀ ಬಿಜ್ಜರಗಿಯವರು ಕೇವಲ ರೇವಣಸಿದ್ಧರ ಬಗ್ಗೆ ಮಾತ್ರ ಸಂಶೋಧನೆ ನಡೆಸದೆ ಬಸವಣ್ಣನ ಬಗ್ಗೆ ಕೂಡ ಸಂಶೋಧನೆ ಮಾಡಿ ಬಸವಣ್ಣನನ್ನೂ ಕುರುಬರೆಂದು ಘೋಷಿಸಿದ್ದಾರೆ. ಬುದ್ಧಿಜೀವಿ ಕೆ.ಮರುಳಸಿದ್ದಪ್ಪನವರು ಹೇಗೆ ಆಯ್ಕೆಯ ಮಾನದಂಡಗಳನ್ನು ದಂಡ ಮಾಡಿ ಕನಕ ಶ್ರೀ ಪ್ರಶಸ್ತಿಗೆ ಬಿಜ್ಜರಗಿಯವರನ್ನು ಅನುಮೋದಿಸಿದ್ದರೋ ಅದೇ ರೀತಿ ತೋಂಟದ ಜಗದ್ಗುರು ಶ್ರೀ ಸಿದ್ಧರಾಮ ಶ್ರೀಗಳು ಬಿಜ್ಜರಗಿ ಯವರು ಬಸವಣ್ಣನ ಬಗ್ಗೆ ಏನು ಬರೆದಿದ್ದಾರೆ ಎಂದು ಗಮನಿ ಸದೆ ಅಥವಾ ಗಮನಿಸಿದ್ದರೂ ಉಪೇಕ್ಷಿಸಿ, ತಮ್ಮ ವೈರಿಗಳ ಆದ್ಯದೈವ ವೀರಶೈವನಲ್ಲ ಎಂದಿದ್ದಾರಲ್ಲ ಅಷ್ಟು ಸಾಕು. ಬಸವಣ್ಣನ ಬಗ್ಗೆ ಏನು ಬರೆದಿದ್ದರೇನು? ನನ್ನ ಎರಡೂ ಕಣ್ಣು ಹೋದರೂ ಚಿಂತೆಯಿಲ್ಲ. ನನ್ನ ವೈರಿಯ ಒಂದು ಕಣ್ಣು ಹೋಗಲಿ ಎಂದು ಹಿರಿಹಿರಿ ಹಿಗ್ಗಿ ಪ್ರಶಂಸನಾ ಪತ್ರವನ್ನು ಕೊಟ್ಟಿದ್ದಾರೆ.