ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ನಾವು ನಿಜವಾಗಿಯೂ ಶ್ರೀಮಂತರೇ ?

ನಮ್ಮ ಮನೆಯಲ್ಲಿ ನಾಲ್ವರು, ಆದರೆ ಅವರ ಮನೆಯಲ್ಲಿ ೧೨ ಜನರು! ಅವರಿಗೆ ಆಟವಾಡಲು ಎಷ್ಟೋ ಜನರು! ನಮ್ಮ ಮನೆಗೆ ಈಜುಕೊಳವಿದೆ, ಆದರೆ ಅವರ ಜಮೀನಿನ ಮೂಲಕ ಹರಿಯುವ ಒಂದು ದೊಡ್ಡ ನದಿಯೇ ಇದೆ. ರಾತ್ರಿಯಾರೆ ಸಾಕು ನಮ್ಮ ಮನೆಯಲ್ಲಿ ಲ್ಯಾಂಟನ್‌ಗಳು, ಆದರೆ ಅವರಿಗೆ ವಿಶಾಲವಾದ ಆಕಾಶ ಮತ್ತು ಅದ್ಭುತ ತುಂತುರು ನಕ್ಷತ್ರಗಳು!

Roopa Gururaj Column: ನಾವು ನಿಜವಾಗಿಯೂ ಶ್ರೀಮಂತರೇ ?

-

ಒಂದೊಳ್ಳೆ ಮಾತು

ಬಹಳ ಶ್ರೀಮಂತ ಕುಟುಂಬದಲ್ಲಿ ಬೆಳೆದಿದ್ದ ಒಬ್ಬ ಹುಡುಗನಿದ್ದ. ಸಾಮಾನ್ಯ ಜನರು ಹೇಗೆ ಬದುಕುತ್ತಾರೆ ಎಂಬುದನ್ನು ತೋರಿಸಲು ಅವನ ತಂದೆ ಅವನನ್ನು ಒಮ್ಮೆ ಒಂದು ಪ್ರವಾಸಕ್ಕೆ ಕರೆದುಕೊಂಡು ಹೋದ. ಜೀವನದಲ್ಲಿ ಅವನಿಗೆ ದೊರೆತಿರುವ ಎಲ್ಲದರ ಮೌಲ್ಯವನ್ನು ಅರ್ಥ ಮಾಡಿಕೊಳ್ಳಲಿ ಎಂಬುದು ತಂದೆಯ ಆಶಯವಾಗಿತ್ತು.

ಹುಡುಗ ಮತ್ತು ಅವನ ತಂದೆ, ಅತ್ಯಂತ ಬಡ ಕುಟುಂಬವೊಂದು ವಾಸಿಸುತ್ತಿದ್ದ ಒಂದು ಹಳ್ಳಿಗೆ ಬಂದರು. ಅವರು ಆ ಮನೆತನದವರೊಂದಿಗೆ ಕೆಲವು ದಿನಗಳನ್ನು ಕಳೆಯುತ್ತಾ, ಅವರ ಆಹಾರ ಕ್ಕಾಗಿ ದುಡಿದು, ಅವರ ಭೂಮಿಯನ್ನು ನೋಡಿಕೊಳ್ಳಲು ಸಹಾಯ ಮಾಡಿದರು. ಅವರು ಹಳ್ಳಿ ಯನ್ನು ತೊರೆಯುವಾಗ, ತಂದೆ ಹುಡುಗನನ್ನು ಕೇಳಿದ, “ನಮ್ಮ ಈ ಪ್ರಯಾಣ ನಿನಗೆ ಇಷ್ಟ ವಾಯಿತೇ? ಅವರ ಮನೆಯಲ್ಲಿ ಉಳಿದ ದಿನಗಳಲ್ಲಿ ಏನಾದರೂ ಕಲಿತೆಯಾ?". ಹುಡುಗ ಕೂಡಲೇ ಉತ್ತರಿಸಿದ, “ಅದು ಅದ್ಭುತವಾಗಿತ್ತು, ಆ ಕುಟುಂಬದವರು ತುಂಬಾ ಅದೃಷ್ಟಶಾಲಿಗಳು!".

ತಂದೆಗೆ ಮಗನ ಮಾತನ್ನು ಅರಗಿಸಿಕೊಳ್ಳಲು ಸಾಧ್ಯವೇ ಆಗದೆ ಕುತೂಹಲದಿಂದ, “ಅದು ಹೇಗೆ?" ಎಂದು ಕೇಳಿದನು. ಹುಡುಗ ಹೇಳಿದ, “ನಮ್ಮ ಬಳಿ ಒಂದೇ ನಾಯಿಯಿದೆ, ಆದರೆ ಆ ಕುಟುಂಬಕ್ಕೆ ನಾಲ್ಕು ನಾಯಿಗಳು. ಮೇಲಾಗಿ ಅವರಿಗೆ ಕೋಳಿಗಳೂ ಇವೆ!

ಇದನ್ನೂ ಓದಿ: Roopa Gururaj Column: ಹೃದಯವನ್ನೇ ಹೆಪ್ಪುಗಟ್ಟಿಸಿ ಸಾವನ್ನು ಗೆಲ್ಲುವ ವುಡ್‌ ಕಪ್ಪೆ

ನಮ್ಮ ಮನೆಯಲ್ಲಿ ನಾಲ್ವರು, ಆದರೆ ಅವರ ಮನೆಯಲ್ಲಿ ೧೨ ಜನರು! ಅವರಿಗೆ ಆಟವಾಡಲು ಎಷ್ಟೋ ಜನರು! ನಮ್ಮ ಮನೆಗೆ ಈಜುಕೊಳವಿದೆ, ಆದರೆ ಅವರ ಜಮೀನಿನ ಮೂಲಕ ಹರಿಯುವ ಒಂದು ದೊಡ್ಡ ನದಿಯೇ ಇದೆ. ರಾತ್ರಿಯಾರೆ ಸಾಕು ನಮ್ಮ ಮನೆಯಲ್ಲಿ ಲ್ಯಾಂಟನ್‌ಗಳು, ಆದರೆ ಅವರಿಗೆ ವಿಶಾಲವಾದ ಆಕಾಶ ಮತ್ತು ಅದ್ಭುತ ತುಂತುರು ನಕ್ಷತ್ರಗಳು!

ನಮಗೆ ಕಾಲ ಕಳೆಯಲು ಒಂದು ಅಂಗಳ ಇದೆ, ಆದರೆ ಅವರಿಗೆ ಆನಂದಿಸಲು ಸಂಪೂರ್ಣ ನಾಲ್ಕು ದಿಕ್ಕುಗಳ ಭೂಮಿ, ಆಕಾಶ. ಅವರು ಓಡಾಡಲು ಅನಂತವಾದ ಹೊಲಗಳನ್ನು ಹೊಂದಿದ್ದಾರೆ. ಧಾನ್ಯಗಳ ಖರೀದಿಗೆ ನಾವು ಅಂಗಡಿಗೆ ಹೋಗಬೇಕು, ಆದರೆ ಅವರು ತಮ್ಮ ಆಹಾರವನ್ನು ತಾವೇ ಬೆಳೆಯುತ್ತಾರೆ.

ನಮ್ಮ ಆಸ್ತಿಯನ್ನು ರಕ್ಷಿಸಲು ಎತ್ತರವಾದ ಬೇಲಿ ಇದೆ, ಆದರೆ ಅವರಿಗೆ ಅಂಥ ಮಿತಿ ಬೇಡ; ಅವರಿಗೆ ಸ್ನೇಹಿತರು ರಕ್ಷಣೆಯಾಗಿದ್ದಾರೆ...". ಮಗ ಉತ್ಸಾಹದಿಂದ ಒಂದೇ ಸಮನೆ ಮಾತನಾಡುತ್ತಿದ್ದರೆ ತಂದೆಗೆ ಅವನ ಮಾತು ಕೇಳುತ್ತಾ ನಾಚಿಕೆಯಿಂದ ಮಾತೇ ಹೊರಡದಾಗಿತ್ತು. ಕೊನೆಯಲ್ಲಿ ಹುಡುಗ ಸೇರಿಸಿದ, “ಶ್ರೀಮಂತರು ಹೇಗೆ ಬದುಕುತ್ತಾರೆ ಎಂಬುದನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು, ಅವರು ನಿಜವಾಗಲೂ ಎಷ್ಟೊಂದು ಅದೃಷ್ಟಶಾಲಿಗಳು".

ತಮ್ಮ ಶ್ರೀಮಂತಿಕೆಯ ಬಗ್ಗೆ ಸದಾ ಅಹಂಕಾರವಿದ್ದ ತಂದೆಗೆ ತನ್ನ ಪುಟ್ಟ ಮಗನಿಂದ ಜೀವನದ ದೊಡ್ಡ ಸತ್ಯದ ಅನಾವರಣವಾಗಿತ್ತು. ನಿಜವಾದ ಐಶ್ವರ್ಯ ಮತ್ತು ಸಂತೋಷವನ್ನು ಭೌತಿಕ ವಸ್ತುಗಳಿಂದ ಅಳೆಯಲು ಸಾಧ್ಯವೇ ಇಲ್ಲ ಅಲ್ಲವೇ? ನಾವು ಪ್ರೀತಿಸುವವರ ಒಡನಾಟ, ಪ್ರಕೃತಿಯ ಸೌಂದರ್ಯವನ್ನು ಆನಂದಿಸುವುದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಹೇಗೆ ಬೇಕೋ ಹಾಗೆ ಬದುಕುವ ಸ್ವಾತಂತ್ರ್ಯವು ಜೀವನದ ನಿಜ ವಾದ ಸಂಪತ್ತು.

ಸ್ಥಿತಿವಂತರಾಗಿರುವುದು ಎಂದರೆ ಅಪಾರವಾದ ಹಣ-ಆಸ್ತಿ-ಅಂತಸ್ತನ್ನು ಗಳಿಸಿ ಐಷಾರಾಮಿ ಜೀವನ ಮಾಡುವುದು ಎನ್ನುವ ನಂಬಿಕೆ ಅನೇಕರಲ್ಲಿದೆ. ಬೇಕಾದ್ದನ್ನು ಕೊಂಡುಕೊಂಡು ದುಡ್ಡಿನಿಂದ ಎಲ್ಲರನ್ನೂ ಅಳೆಯುವುದು ಅಥವಾ ನೀರಿನಂತೆ ಖರ್ಚು ಮಾಡುವುದು ಸಾಧನೆಯಲ್ಲ. ಆತ್ಮ ವಿಶ್ವಾಸದಿಂದ ನಮ್ಮ ಬದುಕನ್ನು ನಾವೇ ಕಟ್ಟಿಕೊಂಡು, ಮತ್ತಷ್ಟು ಜನರಿಗೆ ಬದುಕುವ ಪ್ರೇರಣೆ ಯನ್ನು ನೀಡುವುದು ಶ್ರೀಮಂತಿಕೆ.

ಯಾವುದೇ ವಯಸ್ಸಿನಲ್ಲೂ ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಂಡು ಬೇಕಾದ ರುಚಿ ರುಚಿ ಯಾದ ಆಹಾರವನ್ನು ಆನಂದಿಸುವ ಮನಸ್ಥಿತಿ, ದೇಹ ಸ್ಥಿತಿ ಎರಡನ್ನೂ ಪಡೆಯುವುದು ನಿಜವಾದ ಆಸ್ತಿ. ‘ದೇಶ ಸುತ್ತು, ಕೋಶ ಓದು’ ಎಂದು ದೊಡ್ಡವರು ಹೇಳುವಂತೆ, ಬೇರೆ ಬೇರೆ ದೇಶಗಳಿಗೆ ಹೋಗಿ ಹೊಸ ಜನರನ್ನು ಭೇಟಿ ಮಾಡಿ, ಮುಕ್ತ ಮನಸ್ಸಿನಿಂದ ಸ್ನೇಹಗಳನ್ನು ಸಂಪಾ ದಿಸುವುದು ನಿಜವಾದ ಸಂಪತ್ತು.

ಬೇಕು ಅನಿಸಿ ದ್ದನ್ನು ಮಾಡುವ ಹುಮ್ಮಸ್ಸು, ಎಲ್ಲರನ್ನೂ ಪ್ರೀತಿಸುವ ವರ್ಚಸ್ಸು ಇವೆಲ್ಲವನ್ನು ಕಾಪಾಡಿಕೊಂಡಾಗ ನಮ್ಮಷ್ಟು ಅದೃಷ್ಟವಂತರು ಮತ್ಯಾರೂ ಅಲ್ಲ. ಒಟ್ಟಾರೆಯಾಗಿ, ನಮಗೆ ಮುಖ್ಯವಾದ ಸಂಗತಿಗಳು ನಮ್ಮ ಜೀವನದಲ್ಲಿದ್ದರೆ, ನಾವೇ ಐಶ್ವರ್ಯವಂತರು.