ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vidyashankar Sharma Column: ಏಕೆ ಹೀಗೆ ಓಡುವೆ ?

ಕಾಯುವಿಕೆ ಎಂಬುದು ಒಂದು ಬೇಸರದ ಅನುಭವ. ಹಾಗೆ ಸುಖಾಸುಮ್ಮನೆ ಬೇಕಾದಷ್ಟು ಸಮಯದ ವ್ಯರ್ಥ ಕಲಾಪವನ್ನು ನಾವು ಮಾಡಿಯೇವು! ಆದರೆ ಯಾವುದೋ ಒಂದರ ನಿರೀಕ್ಷೆಯಲ್ಲಿ ಇರುವ ಕಾಯುವಿಕೆ ನಮಗೆ ಇಷ್ಟವಾಗದ ವಿಷಯ. ಅದು ಐದು ನಿಮಿಷವೇ ಇರಲಿ, ಅರ್ಧ ಗಂಟೆಯೇ ಇರಲಿ, ನಮ್ಮಲ್ಲಿ ಕಸಿವಿಸಿಯೆಂಬುದು ಬಲು ಸಹಜವಾಗಿ ಮೂಡಿ ಬಿಡುತ್ತದೆ.

ಏಕೆ ಹೀಗೆ ಓಡುವೆ ?

-

Ashok Nayak
Ashok Nayak Feb 19, 2026 10:48 AM

ನಿಧಾನಿಸು

ವಿದ್ಯಾಶಂಕರ ಶರ್ಮ, ಸಿದ್ದಾಪುರ

ಯಾವಾಗ ಆತುರತೆಯು ನಮ್ಮ ಪ್ರಾಶಸ್ತ್ಯ ಪಡೆಯುತ್ತದೆಯೋ, ತಾಳ್ಮೆಯು ಹಿಂದಕ್ಕೆ ತಳ್ಳಲ್ಪಡುತ್ತದೆ. ನಿಧಾನ ಎಂಬುದನ್ನು ನಾವು ನಮ್ಮ ದೌರ್ಬಲ್ಯವೆಂದು ಕಾಣು ತ್ತಿದ್ದೇವೆ. ವಿವೇಕಯುತವಾದ ಚಿಂತನೆಗಳಿಂದ ನಮ್ಮ ನಿರ್ಧಾರಗಳು ರೂಪು ಗೊಳ್ಳುತ್ತಿಲ್ಲ.

ಕಾಯುವಿಕೆ ಎಂಬುದು ಒಂದು ಬೇಸರದ ಅನುಭವ. ಹಾಗೆ ಸುಖಾಸುಮ್ಮನೆ ಬೇಕಾದಷ್ಟು ಸಮಯದ ವ್ಯರ್ಥ ಕಲಾಪವನ್ನು ನಾವು ಮಾಡಿಯೇವು! ಆದರೆ ಯಾವುದೋ ಒಂದರ ನಿರೀಕ್ಷೆಯಲ್ಲಿ ಇರುವ ಕಾಯುವಿಕೆ ನಮಗೆ ಇಷ್ಟವಾಗದ ವಿಷಯ. ಅದು ಐದು ನಿಮಿಷವೇ ಇರಲಿ, ಅರ್ಧ ಗಂಟೆಯೇ ಇರಲಿ, ನಮ್ಮಲ್ಲಿ ಕಸಿವಿಸಿಯೆಂಬುದು ಬಲು ಸಹಜವಾಗಿ ಮೂಡಿ ಬಿಡುತ್ತದೆ. ಇನ್ನೊಂದರ್ಥದಲ್ಲಿ, ತಾಳ್ಮೆ ಎಂಬುದು ನಮಗೆ ಬೇಡದ ಸ್ವಭಾವವಾಗಿದೆ. ಎಲ್ಲವೂ ಬಹಳ ಕಡಿಮೆ ಸಮಯದಲ್ಲಿ ಆಗಬೇಕು ಎಂಬ ಸಾರ್ವತ್ರಿಕ ಧೋರಣೆಗೆ ಸಾಕ್ಷಿ ಯಾದ ಕಾಲವಿದು.

ಬದಲಾದ ಜೀವನ ಶೈಲಿ: ಬದಲಾವಣೆ ಎಂಬುದು ಎಂದೂ ಬದಲಾಗದಿರುವ ಸತ್ಯವೆನ್ನು ತ್ತಾರೆ ತಿಳಿದವರು. ನಮ್ಮ ಹಿಂದಿನ ತಲೆಮಾರಿನವರ ಬದುಕಿನ ಓಟಕ್ಕಿಂತ ಬಲು ಭಿನ್ನವಾದ ಹಾದಿ ನಮ್ಮದಾಗಿದೆ. ಧಾವಂತ ಎನ್ನುವುದು ಇಂದಿನ ಜೀವನದ ಗುರುತಾಗಿದೆ. ನಮ್ಮ ಪ್ರತಿ ನಡೆಯೂ ಒಂದು ಗಡಿಬಿಡಿಯ ಸ್ಪರ್ಶದಿಂದಲೇ ಆಗುವುದು. ನಮ್ಮ ದೈನಂದಿನ ಚಟುವಟಿಕೆಗಳು ಆತುರದ ಸರಮಾಲೆಗಳು.

ಆಹಾರ ಸೇವನೆಯಿಂದ ರಾತ್ರಿಯ ನಿದ್ದೆಯ ತನಕ ಎಲ್ಲವೂ ಚಡಪಡಿಕೆಯ ಸಾಗುವುದು. ದರ್ಶಿನಿಗಳು, ನಿಮಿಷದಲ್ಲಿ ತಯಾರಾಗುವ ಆಹಾರಗಳು, ಅಂತರ್ಜಾಲದ ಉಪಯೋಗ ದಿಂದ ವಸ್ತುಗಳ ಕ್ಷಿಪ್ರ ಲಭಿಸುವಿಕೆ, ವಾಹನಗಳ ಮೂಲಕ ತ್ವರಿತ ಪ್ರಯಾಣ, ಹೀಗೆ ಎಲ್ಲವೂ ವೇಗ ವಾಹಕಗಳೇ ಆಗಿವೆ.

ಇದನ್ನೂ ಓದಿ: Vidya Shankar Sharma Column: ಆಹಾರ ಸೇವನೆ ಎಂಬ ಧ್ಯಾನ

ತಾಳ್ಮೆಯ ನಶಿಸುವಿಕೆ: ಯಾವಾಗ ಆತುರತೆಯು ನಮ್ಮ ಪ್ರಾಶಸ್ತ್ಯ ಪಡೆಯುತ್ತದೆಯೋ, ತಾಳ್ಮೆಯು ಹಿಂದಕ್ಕೆ ತಳ್ಳಲ್ಪಡುತ್ತದೆ. ನಿಧಾನ ಎಂಬುದನ್ನು ನಾವು ನಮ್ಮ ದೌರ್ಬಲ್ಯ ವೆಂದು ಕಾಣುತ್ತಿದ್ದೇವೆ. ವಿವೇಕಯುತವಾದ ಚಿಂತನೆಗಳಿಂದ ನಮ್ಮ ನಿರ್ಧಾರಗಳು ರೂಪು ಗೊಳ್ಳುತ್ತಿಲ್ಲ. ಏಕೆಂದರೆ ಸಾಧಕಬಾಧಕಗಳನ್ನು ವಿವೇಚಿಸಲು ನಾವು ಸಮಯವನ್ನೇ ಕೊಡುತ್ತಿಲ್ಲ! ಹಾಗಾಗಿ ನಮಗೆ ನಿರಾಶಾದಾಯಕ ಮತ್ತು ಹತಾಶೆಗೆ ಈಡುಮಾಡುವ ಸನ್ನಿವೇಶಗಳು ಮತ್ತೆ ಮತ್ತೆ ಎದುರಾಗುತ್ತಿವೆ.

ಪರಿಶ್ರಮದ ಕಡೆಗಣನೆ: ಆಧುನಿಕ ತಂತ್ರಜ್ಞಾನದ ಸೌಕರ್ಯದಿಂದ ಎಲ್ಲ ಮಾಹಿತಿಗಳೂ ನಮ್ಮ ಕೈಬೆರಳುಗಳ ತುದಿಯಲ್ಲಿ ಲಭ್ಯ. ಅದರಿಂದ ರಂಗುರಂಗಿನ, ಥಳಕು ಬಳುಕಿನ, ಸಿರಿ ಸಂಪತ್ತುಗಳ ಪ್ರದರ್ಶನದ ಅನಾವರಣ ಸುಲಭವಾಗಿದೆ. ಇದರ ಬಹುದೊಡ್ಡ ದೋಷ ವೆಂದರೆ, ಇಂತಹ ಐಷಾರಾಮಿ ಬದುಕನ್ನು ಪಡೆಯುವುದೇ ಎಲ್ಲರ ಗುರಿ ಮತ್ತು ಅದನ್ನು ಬಲು ಬೇಗ ಪಡೆಯಬೇಕು ಎಂಬ ಅನಗತ್ಯ ಒತ್ತಡ ಬಹುಜನರ ದೃಷ್ಟಿಯನ್ನು ಮಸುಕಾಗಿಸಿದೆ. ಯಾವುದನ್ನು ಪಡೆಯಲೂ ಪರಿಶ್ರಮವು ಬೇಕೇಬೇಕು ಎಂಬ ಸತ್ಯವು ಸಂಪೂರ್ಣವಾಗಿ ಕಳೆದುಹೋಗಿದೆ.

Screenshot_5 ok

ದಿಕ್ಕು ತಪ್ಪಿದ ಯಶಸ್ಸಿನ ಅಳತೆಗೋಲುಗಳು: ನಮ್ಮ ಕಣ್ಣು ಕಸದಿಂದ ತುಂಬಿರುವಾಗ ನಮಗೆ ಮುಂದಿರುವ ವಸ್ತುಗಳು ಸರಿಯಾಗಿ ಕಾಣಲಾರವು. ಅದೇ ರೀತಿಯಲ್ಲಿ ನಮ್ಮ ಚಿಂತನೆಯು ಸಂಕುಚಿತವಾದಾಗ, ವಿವಿಧ ಆಯಾಮಗಳ ವಿಶ್ಲೇಷಣೆಯು ನಮ್ಮಿಂದ ದೂರವಾಗುವುದು. ಇಂದು ಯಶಸ್ಸು ಎಂದರೆ ಸಂಪತ್ತಿನ ಗಳಿಕೆ, ಅಧಿಕಾರದ ಪಡೆಯುವಿಕೆ, ಭೋಗ ವಸ್ತುಗಳ ಒಡೆತನ, ಆಸ್ತಿ ಸಂಪಾದನೆ ಎಂಬುದಾಗಿದೆ.

ಶುದ್ಧವಾದ ವ್ಯಕ್ತಿತ್ವ, ವಿನಯ, ಮಾನವೀಯತೆ, ಲಭಿಸಿದ್ದರಲ್ಲಿ ಸಂತೃಪ್ತಿ, ಮನದ ಸಮತೆ ಮುಂತಾದವುಗಳು ನಮ್ಮ ಯಶಸ್ಸಿನ ಮಾನದಂಡಗಳಾಗಿ ಉಳಿದಿಲ್ಲ. ಯಾವಾಗ ನಮ್ಮ ಗಮ್ಯವು ಭದ್ರವಾದ ಅಡಿಪಾಯದ ಮೇಲೆ ನಿಂತಿಲ್ಲವೋ ನಿರಾಶೆ ಎಂಬುದು ಕಟ್ಟಿಟ್ಟ ಬುತ್ತಿಯಾಗಿದೆ.

ಮರೆಯಾದ ಮುನ್ನೆಚ್ಚರಿಕೆಯ ಭಾವ: ವೇಗದ ಭ್ರಾಂತಿಯಲ್ಲಿ ಮುನ್ನೆಚ್ಚರಿಕೆ ಎಂಬ ದೊಡ್ಡ ಅಸವನ್ನು ಕಳೆದುಕೊಂಡಿದ್ದೇವೆ. ಇಂದು ನಾವು ಸಾಕ್ಷಿಯಾಗಿರುವ ಅನೇಕ ಅವಘಡಗಳಿಗೆ ನಮ್ಮಲ್ಲಿ ಶೂನ್ಯವಾದ ಎಚ್ಚರಿಕೆಯೇ ಕಾರಣವಾಗಿದೆ. ನಿಧಾನವೇ ಪ್ರಧಾನ ಎಂಬ ಹಿರಿಯರ ಮಾತುಗಳನ್ನು ಗಾಳಿಗೆ ತೂರಿ ಸ್ವೇಚ್ಛೆಯ ಗಾಳಕ್ಕೆ ಸಿಕ್ಕಿ ನಲುಗಿ ಹೋಗು ತ್ತಿರುವ ಯುವಪೀಳಿಗೆ ಇದಕ್ಕೆ ಜ್ವಲಂತ ನಿದರ್ಶನವಾಗಿದೆ.

ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ: ಜಗತ್ತಿನ ಯಾವ ಸಾಧನೆಯೇ ಆಗಲಿ, ಅದು ವೇಗದಿಂದ ಪಡೆದುಕೊಂಡ ಪರಿಣಾಮವಲ್ಲ. ಹಲವಾರು ವರ್ಷಗಳ ಸತತ ಮತ್ತು ಏಕಾ ಗ್ರತೆಯ ಮೂಲಕ ಗಳಿಸಿರುವುದೇ ಆಗಿದೆ. ಕಟ್ಟಿದ ಕೋಟೆಯ ವೈಭವವನ್ನು ನಾವು ಕಾಣ ಬಲ್ಲೆವು, ಆದರೆ ಅದರ ಹಿಂದಿನ ಶ್ರಮವನ್ನು ನಾವು ಗುರುತಿಸಲು ಸಾಧ್ಯವಾಗದಿದ್ದರೆ ಅದು ನಮ್ಮ ಚಿಂತನೆಯನ್ನು ಕಿರಿದಾಗಿಸುತ್ತದೆ.

Screenshot_6 ok

ಪಾಂಡವರು ಪಗಡೆಯಾಟದಲ್ಲಿ ಸೋತು ಕಾಡನ್ನು ಸೇರಿದರೂ ಬಹಳ ಸಂಯಮದಿಂದ ತಮ್ಮ ಸಮಯಕ್ಕಾಗಿ ಕಾದರು. ಆ ಸಮಯವನ್ನು ಸತ್ಸಂಗದಲ್ಲಿ, ಶಸ್ತ್ರಗಳ ಸಂಪಾದನೆ ಯಲ್ಲಿ ಕಳೆದರು. ಪರಿಶ್ರಮದಿಂದಲೇ ಅವರು ತಮ್ಮ ಗುರಿಯನ್ನು ಸಾಧಿಸಿದರು.

ಓದು ಎಂಬ ದಿವ್ಯ ಹವ್ಯಾಸದ ಕಣ್ಮರೆ: ಪುಸ್ತಕ ಓದುವಿಕೆ ಎಂಬ ಹವ್ಯಾಸವು ಜ್ಞಾನ ಕಾರಕವೊಂದೇ ಅಲ್ಲ, ಅದು ನಮ್ಮಲ್ಲಿ ಅಪಾರವಾದ ತಾಳ್ಮೆಯನ್ನು ಬೆಳೆಸುತ್ತದೆ. ಆದರೆ ವೇಗದ ಜಗದಲ್ಲಿ, ಅಂತರ್ಜಾಲದ ಭರಾಟೆಯಲ್ಲಿ ಪುಸ್ತಕದ ಓದು ಎಂಬುದು ಹುಲ್ಲಿನ ಗೊಣವೆಯಲ್ಲಿ ಕಳೆದುಹೋದ ಸೂಜಿಯಂತಾಗಿದೆ. ಗುರಿ ಸಾಧನೆಗೆ ನಿಧಾನವಾದ ಆದರೆ ದೃಢವಾದ ಹೆಜ್ಜೆಗಳು ಮುಖ್ಯ ಎಂಬುದನ್ನು ಓದಿನಂತಹ ಆರೋಗ್ಯಕರ ಹವ್ಯಾಸವು ನಮಗೆ ಹೇಳುವುದು.

ಶಿಥಿಲವಾದ ಶಿಕ್ಷಣ ವ್ಯವಸ್ಥೆ: ಎರವಲು ಪಡೆದ ನಮ್ಮ ಶಿಕ್ಷಣ ಪದ್ಧತಿಯು ವ್ಯಕ್ತಿತ್ವ ವಿಕಸನಕ್ಕೆ ಯಾವ ಪಾಠವನ್ನೂ ನೀಡಲು ಸಮರ್ಥವಾಗಿಲ್ಲ ಎಂಬುದು ಕಟು ಸತ್ಯವಾಗಿದೆ. ಗುರುಕುಲ ಪದ್ಧತಿಯ ಶಿಕ್ಷಣವು ತಾಳ್ಮೆ ಮತ್ತು ಸಹನೆಗಳನ್ನು ಕಲಿಸುವ ಪ್ರಯೋಗಶಾಲೆ ಯಾಗಿತ್ತು. ಈ ಕಾರಣಕ್ಕಾಗಿಯೇ ನಮ್ಮ ಪೂರ್ವಜರ ಬದುಕಿನ ರೀತಿ ಬಲು ಸರಳವಾಗಿತ್ತು ಮತ್ತು ಧಾವಂತರಹಿತವಾಗಿತ್ತು. ಶಿಕ್ಷಣದಲ್ಲಿ ನಮಗೆ ಸಿಗದಿರುವುದನ್ನು ನಾವು ಆರೋಗ್ಯ ಕರ ಹವ್ಯಾಸಗಳ ಮೂಲಕ, ಅಧ್ಯಯನಗಳ ಮೂಲಕ ದೊರಕಿಸಿಕೊಂಡರೆ ವೇಗವೆಂಬ ಹುಚ್ಚಿನಿಂದ ಪಾರಾಗಬವು.

ವೇದಶಾಸ್ತ್ರಗಳು ಮಾನವ ಜನ್ಮದ ಮಹತ್ವವನ್ನು ಸಾರಿ ಹೇಳಿವೆ, ಈ ಜನ್ಮವು ಅಷ್ಟು ಸುಲಭವಾಗಿ ಸಿಗುವಂಥದ್ದಲ್ಲ. ಹಾಗಾಗಿ ಗೊತ್ತು ಗುರಿಯಿಲ್ಲದ ಓಟಕ್ಕೆ ನಮ್ಮನ್ನು ನಾವು ಬಲಿಪಶುಗಳನ್ನಾಗಿ ಮಾಡಿಕೊಳ್ಳದೆ, ಮಾನವನಾಗಿ ಹುಟ್ಟಿ ಸಾರ್ಥಕ ಬದುಕನ್ನು ನಡೆಸ ಬೇಕು.

ಇದು ನಮ್ಮ ವೇದಗಳ ಆಶಯವೇ ಆಗಿದೆ. ಅಧ್ಯಾತ್ಮದ ಮೂಲನೆಲೆಯನ್ನು ಅರಿತು ಬದುಕುವ ತಾಳ್ಮೆ ನಮ್ಮ ಜನರಿಗೆ ಇಲ್ಲವಾಗುತ್ತಿದೆ. ಅದು ಜನರಿಗೆ ಬೇಡವೆನ್ನುವುದಕ್ಕಿಂತ ನಮ್ಮ ಆಯ್ಕೆಗಳನ್ನು ಕಾಣದ ಕೈಗಳು ಬಲಾತ್ಕಾರವಾಗಿ ನಿರ್ಧರಿಸುತ್ತಿರುವ ಸ್ಥಿತಿಯಿದೆ. ನಾವು ಏನು ಓದಬೇಕು, ನೋಡಬೇಕು, ಮಾಡಬೇಕು ಎನ್ನುವುದನ್ನು ಎಲ್ಲೋ ಕುಳಿತ ವ್ಯಕ್ತಿಗಳು ನಿರ್ಧರಿಸುತ್ತಿರುತ್ತಾರೆ. ಪ್ರಭಾವಿಸುತ್ತಾರೆ, ಪ್ರಚೋದಿಸುತ್ತಾರೆ. ಮನುಷ್ಯನ ಮನಸ್ಸು ದುರ್ಬಲ. ಅವನು ಅತ್ತಕಡೆಯೇ ವಾಲುತ್ತಾನೆ. ಓ ಮನುಷ್ಯನೇ... ನಿಧಾನಿಸು.