Dr Sadhanashree Column: ಕಾಡುವ ಕುರುವಿಗೆ ಹೀಗೆ ಮಾಡು ಎನ್ನುತ್ತದೆ ಆಯುರ್ವೇದ
ಕೆಲವೊಮ್ಮೆ ಇದು ಸಕ್ಕರೆ ಕಾಯಿಲೆಯ ಪರಿಣಾಮವಾಗಿರಬಹುದು ಎಂಬ ಅನುಮಾನವೂ ವ್ಯಕ್ತವಾಗುತ್ತದೆ. ಈ ರೀತಿಯಾಗಿ ಹಲವು ಕಾರಣಗಳನ್ನು ಊಹಿಸಿ ಜನರು ವಿವಿಧ ಮಲಾಮು ಗಳು, ಲೇಪನಗಳು ಅಥವಾ ಮನೆಮದ್ದುಗಳನ್ನು ಬಳಸುತ್ತಾ ತಾತ್ಕಾಲಿಕವಾಗಿ ಶಮನಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ಈ ಸಮಸ್ಯೆಯ ಅಭ್ಯಂತರ ಕಾರಣವನ್ನು ಸರಿಯಾಗಿ ತಿಳಿಯದೆ ಕೇವಲ ಮೇಲ್ಮೈಯಲ್ಲಿ ಲೇಪನಗಳನ್ನು ಹಚ್ಚುವುದರಿಂದ ಶಾಶ್ವತ ಪರಿಹಾರ ದೊರಕುವುದು ಕಷ್ಟ.
-
ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಸಾಮಾನ್ಯವಾಗಿ ನಮ್ಮ ದೇಹದ ಬೇರೆ ಬೇರೆ ಭಾಗಗಳಲ್ಲಿ ಕಾಣಿಸಿಕೊಳ್ಳುವ, ಕೆಂಪಾಗಿರುವ, ನೋವುಂಟುಮಾಡುವ ಹಾಗೂ ಒಳಗೆ ಕೀವು ತುಂಬಿಕೊಂಡಿರುವ ಊತವನ್ನು ಜನರು ಸಾಮಾನ್ಯವಾಗಿ ‘ಕುರು’ ಅಥವಾ ‘ಪುಟ್ಟು’ ಎಂದು ಕರೆಯು ತ್ತಾರೆ. ಈ ಸಮಸ್ಯೆಯ ಅಭ್ಯಂತರ ಕಾರಣವನ್ನು ಸರಿಯಾಗಿ ತಿಳಿಯದೆ ಕೇವಲ ಮೇಲ್ಮೈಯಲ್ಲಿ ಲೇಪನಗಳನ್ನು ಹಚ್ಚುವುದರಿಂದ ಶಾಶ್ವತ ಪರಿಹಾರ ದೊರಕುವುದು ಕಷ್ಟ.
ಒಂದು ಬೆಳಗ್ಗೆ ನನ್ನ ಕ್ಲಿನಿಕ್‌ಗೆ ಒಬ್ಬ ತಾಯಿ ತನ್ನ ಸುಮಾರು ಹತ್ತು ವರ್ಷದ ಮಗನನ್ನು ಕರೆದುಕೊಂಡು ಬಂದಳು. ಮಗನ ಕೈಯಲ್ಲಿ ಒಂದು ನೋವುಳ್ಳ ಊತ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅವಳ ಮುಖದಲ್ಲಿ ಚಿಂತೆ ಮತ್ತು ಬೇಸರ ಎರಡೂ ಗೋಚರಿಸುತ್ತಿದ್ದವು. “ಡಾಕ್ಟರ್, ಇದು ಮೊದಲ ಬಾರಿ ಅಲ್ಲ. ಇವನಿಗೆ ಈ ರೀತಿಯ ಕುರು ಪದೇಪದೆ ಬರುತ್ತಿದೆ. ಒಂದು ಜಾಗದಲ್ಲಿ ಊತವಾಗಿ ಬರುತ್ತದೆ, ಕೆಲ ದಿನಗಳಲ್ಲಿ ಅದು ಕಡಿಮೆಯಾದಂತೆ ಕಾಣುತ್ತದೆ.
ಆದರೆ ಸ್ವಲ್ಪ ದಿನಗಳ ನಂತರ ಮತ್ತೊಂದು ಜಾಗದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ನಾವು ಎಷ್ಟೋ ಮಲಾಮುಗಳು, ಕ್ರೀಮುಗಳು, ಮಾತ್ರೆಗಳು ಎಲ್ಲವೂ ಪ್ರಯತ್ನಿಸಿದ್ದೇವೆ. ಅವು ಹಾಕಿದಾಗ ಸ್ವಲ್ಪ ಕಡಿಮೆಯಾದಂತೆ ಕಾಣುತ್ತದೆ; ಆದರೆ ಮತ್ತೆ ಕೆಲ ದಿನಗಳ ನಂತರ ಬೇರೆ ಜಾಗದಲ್ಲಿ ಇನ್ನೂ ಹೆಚ್ಚು ನೋವಿನಿಂದ ಬರುತ್ತದೆ. ಈಗ ಇದರಿಂದ ನಾವು ತುಂಬಾ ಬೇಸತ್ತಿದ್ದೇವೆ.
ಆದ್ದರಿಂದ ಆಯುರ್ವೇದದಲ್ಲಿ ಇದಕ್ಕೆ ಶಾಶ್ವತ ಪರಿಹಾರ ಸಿಗಬಹುದೆಂದು ನಿಮ್ಮ ಬಳಿ ಬಂದಿದ್ದೇವೆ" ಎಂದಳು ಆ ತಾಯಿ. ಇಂಥ ಸಮಸ್ಯೆಯೊಂದಿಗೆ ಬರುವ ರೋಗಿಗಳು ಅಪರೂಪವಲ್ಲ. ಸಾಮಾನ್ಯವಾಗಿ ನಮ್ಮ ದೇಹದ ಬೇರೆ ಬೇರೆ ಭಾಗಗಳಲ್ಲಿ ಕಾಣಿಸಿ ಕೊಳ್ಳುವ, ಕೆಂಪಾಗಿರುವ, ನೋವುಂಟುಮಾಡುವ ಹಾಗೂ ಒಳಗೆ ಕೀವು ತುಂಬಿಕೊಂಡಿ ರುವ ಊತವನ್ನು ಜನರು ಸಾಮಾನ್ಯವಾಗಿ ‘ಕುರು’ ಅಥವಾ ‘ಪುಟ್ಟು’ ಎಂದು ಕರೆಯುತ್ತಾರೆ.
ಜನಸಾಮಾನ್ಯರಲ್ಲಿ ಇದರ ಬಗ್ಗೆ ಹಲವು ಕಲ್ಪನೆಗಳು ಇವೆ. ಕೆಲವರು ಇದನ್ನು ದೇಹದಲ್ಲಿ ಅತಿಯಾದ ಉಷ್ಣತೆ ಹೆಚ್ಚಿರುವುದರಿಂದ ಆಗಿದೆ ಎಂದು ಹೇಳುತ್ತಾರೆ; ಕೆಲವರು ರಕ್ತ ಕೆಟ್ಟಿದೆ ಎಂದು ಭಾವಿಸುತ್ತಾರೆ; ಮತ್ತೊಬ್ಬರು ಒಂದು ಊತದಿಂದ ಮತ್ತೊಂದಕ್ಕೆ ಹರಡುತ್ತಿದೆ ಎಂದುಕೊಳ್ಳುತ್ತಾರೆ.
ಇದನ್ನೂ ಓದಿ: Dr Sadhanashree Column: ಸ್ವರ್ಣಪ್ರಾಶನ: ಮಕ್ಕಳ ಆರೋಗ್ಯದ ಸುವರ್ಣ ಅಧ್ಯಾಯ
ಕೆಲವೊಮ್ಮೆ ಇದು ಸಕ್ಕರೆ ಕಾಯಿಲೆಯ ಪರಿಣಾಮವಾಗಿರಬಹುದು ಎಂಬ ಅನುಮಾನವೂ ವ್ಯಕ್ತವಾಗುತ್ತದೆ. ಈ ರೀತಿಯಾಗಿ ಹಲವು ಕಾರಣಗಳನ್ನು ಊಹಿಸಿ ಜನರು ವಿವಿಧ ಮಲಾಮುಗಳು, ಲೇಪನಗಳು ಅಥವಾ ಮನೆಮದ್ದುಗಳನ್ನು ಬಳಸುತ್ತಾ ತಾತ್ಕಾಲಿಕವಾಗಿ ಶಮನಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ಈ ಸಮಸ್ಯೆಯ ಅಭ್ಯಂತರ ಕಾರಣವನ್ನು ಸರಿಯಾಗಿ ತಿಳಿಯದೆ ಕೇವಲ ಮೇಲ್ಮೈಯಲ್ಲಿ ಲೇಪನಗಳನ್ನು ಹಚ್ಚುವುದರಿಂದ ಶಾಶ್ವತ ಪರಿಹಾರ ದೊರಕುವುದು ಕಷ್ಟ.
ಈ ಸಮಸ್ಯೆಯನ್ನು ಆಯುರ್ವೇದವು ಅತ್ಯಂತ ಸ್ಪಷ್ಟವಾಗಿ ವಿವರಿಸಿದೆ. ಅತಿಯಾಗಿ ದೂಷಿತಗೊಂಡ ರಕ್ತ, ಮಾಂಸ, ಮೇದಸ್ಸು, ಚರ್ಮ ಮತ್ತು ಅಸ್ಥಿ ಧಾತುಗಳನ್ನು ಆಶ್ರಯಿಸಿ ಉಂಟಾಗುವ, ಹೊರಗೆ ಚಿಕ್ಕದಾಗಿ ಕಂಡರೂ ಒಳಗೆ ದೊಡ್ಡದಾಗಿ ವಿಸ್ತರಿಸಿಕೊಂಡಿರುವ, ಕೆಂಪಾಗಿರುವ ಹಾಗೂ ನೋವು ಮತ್ತು ಕೀವುಗಳಿಂದ ಕೂಡಿರುವ ಊತವನ್ನು ಆಯುರ್ವೇದದಲ್ಲಿ ‘ವಿದ್ರಧಿ’ ಎಂದು ಕರೆಯಲಾಗಿದೆ.
ವಿದ್ರಧಿಯಲ್ಲಿ ಸಾಮಾನ್ಯವಾಗಿ ಎರಡು ವಿಧಗಳನ್ನು ಕಾಣಬಹುದು. ಮೊದಲನೆಯದು ಅಭ್ಯಂತರ ವಿದ್ರಧಿ. ಇದರಲ್ಲಿ ದೇಹದ ಒಳಭಾಗದಲ್ಲಿರುವ ರಕ್ತ, ಮಾಂಸ ಮೊದಲಾದ ಧಾತುಗಳು ದೂಷಿತಗೊಂಡು ಉಂಟಾಗುವ ಕುರುಗಳು ಸೇರಿವೆ. ಇವು ದೇಹದ ಒಳಾಂಗ ಗಳಲ್ಲಿ ಉಂಟಾಗುವ ಕಾರಣ ಹೊರಗೆ ಸ್ಪಷ್ಟವಾಗಿ ಕಾಣಿಸಿಕೊಳ್ಳದೇ, ನೋವು ಮತ್ತು ಇತರೆ ಲಕ್ಷಣಗಳ ಮೂಲಕ ವ್ಯಕ್ತವಾಗುತ್ತವೆ.
ಅಭ್ಯಂತರ ವಿದ್ರಧಿ ಸಾಮಾನ್ಯವಾಗಿ ದೇಹದ ಒಳಾಂಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ವಿಶೇಷ ವಾಗಿ ಯಕೃತ್, ಪ್ಲೀಹಾ, ಹೃದಯ, ಗುದ, ಬಸ್ತಿ, ನಾಭಿ ಮತ್ತು ವೃಕ್ಕ- ಮುಂತಾದ ಅವಯವಗಳಲ್ಲಿ ಇದು ಉಂಟಾಗಬಹುದು. ಎರಡನೆಯದು ಬಾಹ್ಯ ವಿದ್ರಧಿ. ದೇಹದ ಹೊರಭಾಗದಲ್ಲಿ, ವಿಶೇಷವಾಗಿ ಪೆಟ್ಟು ತಗುಲುವುದು, ಸೋಂಕು ಉಂಟಾಗುವುದು ಅಥವಾ ಸ್ಥಳೀಯ ದೋಷದ ಕಾರಣದಿಂದ ಕಾಣಿಸಿಕೊಳ್ಳುವ ಉಬ್ಬರಗಳನ್ನು ಬಾಹ್ಯ ವಿದ್ರಧಿ ಅಥವಾ ಬಾಹ್ಯ ಕುರುಗಳು ಎಂದು ಕರೆಯುತ್ತಾರೆ.
ವಿದ್ರಧಿ ಉಂಟಾದ ನಂತರ ಅದನ್ನು ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಿ ಶಮನ ಗೊಳಿಸುವುದು ಒಂದು ಭಾಗ ಮಾತ್ರ. ಆದರೆ ಅದಕ್ಕಿಂತಲೂ ಮುಖ್ಯವಾದದ್ದು ಅದರ ಮೂಲ ಕಾರಣವನ್ನು ತಿಳಿದುಕೊಳ್ಳುವುದು. ಕಾರಣವನ್ನು ಗುರುತಿಸಿ ಸರಿಪಡಿಸದಿದ್ದರೆ, ಒಂದು ಕುರು ಕಡಿಮೆಯಾದ ಬಳಿಕ ಮತ್ತೊಂದು ಸ್ಥಳದಲ್ಲಿ ಮತ್ತೆ ಮತ್ತೆ ಉಂಟಾಗುವ ಸಾಧ್ಯತೆ ಇರುತ್ತದೆ.
ಆದ್ದರಿಂದ ವಿದ್ರಧಿಯ ಚಿಕಿತ್ಸೆಯಲ್ಲಿ ಕೇವಲ ಊತವನ್ನು ಶಮನಗೊಳಿಸುವುದಷ್ಟೇ ಅಲ್ಲ, ಅದರ ಹಿಂದಿರುವ ದೋಷವೈಷಮ್ಯ ಮತ್ತು ಕಾರಣಗಳನ್ನು ಅರಿತು ಅವನ್ನು ಸರಿಪಡಿಸು ವುದು ಅತ್ಯಂತ ಅಗತ್ಯ.
ಕುರುವಿನ (ವಿದ್ರಧಿಯ) ಮುಖ್ಯ ಕಾರಣಗಳು
- ಹಳೆಯ ಅಥವಾ ಹಳಸಿದ ಆಹಾರ ಸೇವನೆ: ನಿನ್ನೆ ಮಾಡಿದ ಅಥವಾ ಬಹಳ ಹೊತ್ತು ಸಂಗ್ರಹಿಸಿ ಇಟ್ಟ ಆಹಾರಗಳನ್ನು ಸೇವಿಸುವುದು. ಉದಾಹರಣೆಗೆ ಫ್ರಿಜ್‌ನಲ್ಲಿ ಇಟ್ಟು ಮತ್ತೆ ಬಿಸಿ ಮಾಡಿ ತಿನ್ನುವ ಅನ್ನ, ವಾರಗಳ ಕಾಲ ಶೇಖರಿಸಿ ಇಡುವ ದೋಸೆ ಹಿಟ್ಟು, ಇಡ್ಲಿ ಹಿಟ್ಟು, ಹಾಗೆಯೇ ಪಲ್ಯಗಳು, ಸಾಂಬಾರ್ ಮುಂತಾದ ಪದಾರ್ಥಗಳನ್ನು ಮರುಬಿಸಿ ಮಾಡಿ ಸೇವಿಸುವ ಅಭ್ಯಾಸ.
- ಅತಿಯಾಗಿ ಬಿಸಿಬಿಸಿ ಆಹಾರ ಸೇವನೆ
- ಜಿಡ್ಡಿಲ್ಲದ ಮತ್ತು ಅತಿಯಾಗಿ ಒಣಗಿರುವ ಆಹಾರಗಳ ಸೇವನೆ: ಚಿಪ್ಸ್, ಬೇಕರಿ ತಿಂಡಿಗಳು, ಅತಿಯಾಗಿ ಒಣಗಿಸಿದ ತರಕಾರಿಗಳು, ಮೊಳಕೆ ಕಾಳುಗಳು, ಅಲಸಂದೆ, ಆಲೂಗಡ್ಡೆ, ಗೆಣಸು, ಬಟಾಣಿ, ಒಣ ಸೊಪ್ಪುಗಳು, ಒಣ ಮಾಂಸ, ಒಣ ಮೀನು, ಚುರುಮುರಿ, ಬಿಸ್ಕತ್ತು ಮುಂತಾದ ಆಹಾರಗಳನ್ನು ನಿರಂತರವಾಗಿ ಸೇವಿಸುವುದು.
4.ಪರಸ್ಪರ ವಿರುದ್ಧವಾದ ಆಹಾರ ಪದಾರ್ಥಗಳನ್ನು ಒಟ್ಟಿಗೆ ಸೇವಿಸುವುದು: ಉದಾ ಹರಣೆಗೆ ಹಾಲಿನೊಂದಿಗೆ ಮೀನು ಸೇವಿಸುವುದು, ಮೊಸರಿನೊಂದಿಗೆ ಮೀನು ಸೇವಿಸು ವುದು, ಹಾಲಿನೊಂದಿಗೆ ಹುಳಿ ಹಣ್ಣುಗಳನ್ನು ತಿನ್ನುವುದು, ಹುಳಿಯಾದ ಮೊಸರಿಗೆ ಹಾಲು ಬೆರೆಸಿ ಸೇವಿಸುವುದು, ಹಾಲಿಗೆ ಉಪ್ಪು ಹಾಕಿ ಕುಡಿಯುವುದು, ಜೇನುತುಪ್ಪವನ್ನು ಬಿಸಿ ನೀರಿನೊಂದಿಗೆ ಸೇವಿಸುವುದು ಇತ್ಯಾದಿ.
5.ಅತಿಯಾಗಿ ಖಾರ, ಹುಳಿ ಮತ್ತು ತೀಕ್ಷ್ಣ ಮಸಾಲೆಗಳಿಂದ ತಯಾರಿಸಿದ ಆಹಾರ ಸೇವನೆ: ಅತಿಯಾಗಿ ಹಸಿ ಮೆಣಸಿನ ಕಾಯಿ, ಶುಂಠಿ, ಬೆಳ್ಳುಳ್ಳಿ ಬಳಸುವುದು ಹಾಗೂ ಅಡುಗೆಯಲ್ಲಿ ಉಪ್ಪಿದ್ದರೂ ಮತ್ತೆ ಮೇಲುಪ್ಪು ಹಾಕಿ ತಿನ್ನುವ ಅಭ್ಯಾಸ.
6.ಜೀರ್ಣಕ್ಕೆ ಕಷ್ಟವಾಗುವ ಆಹಾರಗಳ ಅತಿಯಾದ ಸೇವನೆ: ಕರಿದ ಪದಾರ್ಥಗಳು, ಪನೀರ್, ಚೀಸ್, ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈಸ್, ಮೈದಾ ಉತ್ಪನ್ನಗಳು, ಬನ್, ರಸ್ಕ್, ಕೇಕ್, ಮಿಲ್ಕ್‌ಶೇಕ್, ಸ್ಮೂದಿಗಳು ಮುಂತಾದವುಗಳನ್ನು ಹೆಚ್ಚಾಗಿ ಸೇವಿಸುವುದು.
7.ದೇಹದ ಸ್ವಾಭಾವಿಕ ವೇಗಗಳನ್ನು ತಡೆಯುವುದು: ಮಲ, ಮೂತ್ರ, ವಾಂತಿ, ಹಸಿವು, ನಿದ್ರೆ ಮತ್ತು ಬಾಯಾರಿಕೆ ಮುಂತಾದ ಶಾರೀರಿಕ ವೇಗಗಳನ್ನು ತಡೆಯುವ ಅಭ್ಯಾಸ.
- ದೇಹದ ಶಕ್ತಿಯನ್ನು ಮೀರಿದ ಅತಿಯಾದ ವ್ಯಾಯಾಮ
- ಅತಿಯಾದ ಮೈಥುನ
- ರಕ್ತವನ್ನು ದೂಷಿಸಿ ಉಷ್ಣತೆಯನ್ನು ಹೆಚ್ಚಿಸುವ ಅಭ್ಯಾಸಗಳು: ಬೀಡಿ, ಸಿಗರೇಟ್ ಸೇವನೆ, ಮದ್ಯಪಾನ, ಅತಿಯಾದ ಕಾಫಿ ಸೇವನೆ ಮತ್ತು ಕರಿದ ತಿಂಡಿಗಳನ್ನು ಹೆಚ್ಚಾಗಿ ತಿನ್ನುವುದು.
ಮೇಲ್ಕಂಡ ಕಾರಣಗಳಿಂದ ದೇಹದಲ್ಲಿ ರಕ್ತ ದೂಷಿತಗೊಂಡಾಗ ಕುರು ಅಥವಾ ವಿದ್ರಧಿಯ ಸಮಸ್ಯೆ ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಆಯುರ್ವೇದದ ಪ್ರಕಾರ ವಿದ್ರಧಿ ಮುಖ್ಯ ವಾಗಿ ವಾತ, ಪಿತ್ತ ಮತ್ತು ಕಫ ಎಂಬ ತ್ರಿದೋಷಗಳ ಅಸಮತೋಲನದಿಂದ ಉಂಟಾಗು ತ್ತದೆ. ಈ ದೋಷಗಳು ರಕ್ತದೊಂದಿಗೆ ದೂಷಿತಗೊಂಡಾಗ ಊತ, ನೋವು ಮತ್ತು ಕೀವು ಗಳಿಂದ ಕೂಡಿದ ಕುರುಗಳು ರೂಪುಗೊಳ್ಳುತ್ತವೆ. ಕೆಲ ಸಂದರ್ಭಗಳಲ್ಲಿ ದೇಹಕ್ಕೆ ಪೆಟ್ಟು ತಗುಲಿದ ಪರಿಣಾಮವಾಗಿ ರಕ್ತದ ದೂಷಣೆ ಉಂಟಾದರೂ ವಿದ್ರಧಿ ಬೆಳೆಯುವ ಸಾಧ್ಯತೆ ಇದೆ.
ಕುರು/ವಿದ್ರಧಿ ಉಂಟಾದಾಗ ತಪ್ಪದೇ ವರ್ಜಿಸಬೇಕಾದವು:
- ಬೀಸುವ ಗಾಳಿಯಲ್ಲಿ ಹೆಚ್ಚು ಓಡಾಟ ಅಥವಾ ಅತಿಯಾದ ಸಂಚಲನ
- ಕೊಳಚೆ ನೀರಿನಲ್ಲಿ ಕೆಲಸ ಮಾಡುವುದು
- ಬಿಸಿಲಿನಿಂದ ಬಂದ ತಕ್ಷಣ ತಣ್ಣನೆಯ ಪಾನೀಯ ಕುಡಿಯುವುದು ಅಥವಾ ತಣ್ಣೀರಿನಲ್ಲಿ ಸ್ನಾನ ಮಾಡುವುದು
- ಅತಿಯಾದ ಉಪ್ಪು, ಖಾರ ಮತ್ತು ಹುಳಿ ಆಹಾರಗಳ ಸೇವನೆ
- ಒಣ ತರಕಾರಿಗಳು, ಒಣ ಮಾಂಸ ಮತ್ತು ಒಣ ಮೀನುಗಳ ಸೇವನೆ
- ಹೊಸ ಧಾನ್ಯಗಳು ಅಥವಾ ಮೊಳಕೆ ಒಡೆದ ಧಾನ್ಯಗಳ ಅತಿಯಾದ ಸೇವನೆ
- ಹಿಟ್ಟಿನಿಂದ ಮಾಡಿದ ಪದಾರ್ಥಗಳು
- ಮೊಸರು, ಮಜ್ಜಿಗೆ, ಲಸ್ಸಿಯನ್ನು ಅತಿಯಾಗಿ ಕುಡಿಯುವುದು
- ಸೋಡಾ ಮುಂತಾದ ಕ್ಷಾರೀಯ ಪಾನೀಯಗಳ ಸೇವನೆ
- ಹಗಲು ನಿದ್ರೆ ಮತ್ತು ರಾತ್ರಿ ಜಾಗರಣೆ
- ಅತಿಯಾದ ಮೈಥುನ
- ಮದ್ಯ, ಕಳ್ಳು ಮುಂತಾದ ಅಮಲುಕಾರಕಗಳ ಸೇವನೆ
ಕುರುವಿನಲ್ಲಿ ಮಾಡಬೇಕಾದ ಚಿಕಿತ್ಸೆಗಳು
ಪದೇ ಪದೆ ಕುರು ಕಾಣಿಸಿಕೊಳ್ಳುವ ವ್ಯಕ್ತಿಯು ಆಯುರ್ವೇದ ವೈದ್ಯರ ಸಲಹೆಯಂತೆ ಶರೀರ ಶೋಧನ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವುದು ಉತ್ತಮ. ಆಯುರ್ವೇದದಲ್ಲಿ ವಿದ್ರಧಿ ಯಂಥ ಸಮಸ್ಯೆಗಳಲ್ಲಿ ದೇಹದಲ್ಲಿರುವ ದೂಷಿತ ದೋಷಗಳನ್ನು ಹೊರ ಹಾಕುವುದು ಪ್ರಮುಖ ಚಿಕಿತ್ಸಾ ವಿಧಾನವಾಗಿದೆ. ವಮನ, ವಿರೇಚನ ಮತ್ತು ರಕ್ತಮೋಕ್ಷಣ ಮುಂತಾದ ಶೋಧನ ಚಿಕಿತ್ಸೆಗಳು ದೇಹದಲ್ಲಿ ಸಂಗ್ರಹಗೊಂಡಿರುವ ದೋಷಗಳನ್ನು ಹೊರ ಹಾಕಲು ಸಹಾಯ ಮಾಡುತ್ತವೆ.
ಈ ವಿಧಾನಗಳಿಂದ ದೇಹದ ದೋಷ ಸಮತೋಲನವು ಪುನಃ ಸ್ಥಾಪನೆಯಾಗಿ ಕುರುವು ಪದೇ ಪದೆ ಉಂಟಾಗುವುದನ್ನು ತಡೆಯಲು ಸಹಕಾರಿಯಾಗುತ್ತದೆ.
ಇನ್ನು ಹಣ್ಣಾಗದ ಕುರುಗಳಿದ್ದರೆ, ಅವುಗಳನ್ನು ಪೌಲ್ಟಿಸ್‌ಗಳ ಮೂಲಕ ಶಾಖ ನೀಡಿ ನಿಧಾನವಾಗಿ ಹಣ್ಣಾಗುವಂತೆ ಮಾಡಬಹುದು. ಕುರು ಸಂಪೂರ್ಣವಾಗಿ ಹಣ್ಣಾದ ನಂತರ ಅಗತ್ಯವಿದ್ದಲ್ಲಿ ಶಸ್ತ್ರಕರ್ಮದ ಮೂಲಕ ಸೀಳಿ, ಅದರೊಳಗಿನ ಕೀವು ಮತ್ತು ಕೆಟ್ಟ ರಕ್ತವನ್ನು ಹೊರಹಾಕಲಾಗುತ್ತದೆ. ಅದಾದ ನಂತರ ಗಾಯವು ಸರಿಯಾಗಿ ಗುಣವಾಗುವಂತೆ ಸೂಕ್ತವಾದ ಔಷಧಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತದೆ.
ಗಾಯವು ವಾಸಿಯದ ನಂತರ ಕಲೆಗಳು ಉಳಿಯದಂತೆ ಕೂಡ ಮುಂದಿನ ಚಿಕಿತ್ಸೆಯನ್ನು ಮಾಡಬಹುದು. ಒಟ್ಟಾರೆಯಾಗಿ ಇದು ಕುರುವಿನ ಚಿಕಿತ್ಸೆಯಲ್ಲಿ ಅನುಸರಿಸುವ ಸಾಮಾನ್ಯ ವಿಧಾನವಾಗಿದೆ.
ಕುರುವನ್ನು ಹಣ್ಣಾಗಿಸಲು ಕೆಲವು ಸರಳ ಉಪಾಯಗಳನ್ನು ಬಳಸಬಹುದು. ಉಪ್ಪು, ಮರಳು ಅಥವಾ ಇಟ್ಟಿಗೆಯನ್ನು ಕಾಯಿಸಿ ಶಾಖ ನೀಡುವುದು ಒಂದು ವಿಧಾನ. ಹಾಗೆಯೇ ಉದ್ದಿನ ಹಿಟ್ಟು, ಗೋಧಿ ಹಿಟ್ಟು ಅಥವಾ ಎಳ್ಳನ್ನು ನೀರಿನಲ್ಲಿ ಕಲಸಿ ಪೌಲ್ಟಿಸ್ ರೂಪದಲ್ಲಿ ಶಾಖ ನೀಡಬಹುದು.
ಇನ್ನೊಂದು ವಿಧಾನವೆಂದರೆ ಎಣ್ಣೆಯನ್ನು ಕಾಯಿಸಿ ಅದರಲ್ಲಿ ನುಗ್ಗೆ ಬೇರು, ಅರಿಶಿನ, ನಿಂಬೆ ರಸ ಮತ್ತು ಉಪ್ಪು ಸೇರಿಸಿ, ಅದರಲ್ಲಿ ಹಿಟ್ಟನ್ನು ಅದ್ದಿ ಕುರುವಿನ ಮೇಲೆ ಶಾಖ ನೀಡುವುದು. ಉತ್ತಮ ಗುಣಮಟ್ಟದ ಅರಿಶಿನ ಅಥವಾ ಕುಂಕುಮಕ್ಕೆ ಸಮಪ್ರಮಾಣದ ಬೆಣ್ಣೆಯನ್ನು ಬೆರೆಸಿ ಕುರುವಿನ ಮೇಲೆ (ತುದಿ ಭಾಗವನ್ನು ಬಿಟ್ಟು ಉಳಿದ ಭಾಗಕ್ಕೆ) ಹಚ್ಚಬಹುದು. ಇದರಿಂದ ಕುರುವು ಬೇಗ ಹಣ್ಣಾಗಿ ತಾನಾಗಿಯೇ ಒಡೆಯಲು ಸಹಾಯ ವಾಗುತ್ತದೆ.
ಕುರು ಒಡೆದ ನಂತರ ಗಾಯವನ್ನು ಶೀಘ್ರವಾಗಿ ಗುಣಪಡಿಸಲು ಕೆಲವು ಸರಳವಾದ ಆಯುರ್ವೇದ ಕ್ರಮಗಳನ್ನು ಅನುಸರಿಸಬಹುದು. ಮೊದಲು, ಅಳಲೆಕಾಯಿ ಅಥವಾ ತ್ರಿಫಲಾ ಚೂರ್ಣದಿಂದ ತಯಾರಿಸಿದ ಕಷಾಯದಲ್ಲಿ ಆ ಭಾಗವನ್ನು ಚೆನ್ನಾಗಿ ತೊಳೆಯ ಬೇಕು. ನಂತರ ಅದನ್ನು ಸ್ವಚ್ಛವಾಗಿ ಒಣಗಿಸಿ, ಹಳೆಯ ಜೇನುತುಪ್ಪವನ್ನು ಆ ಗಾಯದ ಮೇಲೆ ಹಚ್ಚಬೇಕು.
ಒಂದು ಅಥವಾ ಎರಡು ದಿನಗಳ ನಂತರ ಗಾಯವು ಸ್ವಲ್ಪ ಒಣಗಿದ ಮೇಲೆ, ಹೆಚ್ಚು ಪ್ರಮಾಣದ ತುಪ್ಪ ಮತ್ತು ಕಡಿಮೆ ಪ್ರಮಾಣದ ಜೇನುತುಪ್ಪವನ್ನು ಬೆರೆಸಿ ಆ ಭಾಗಕ್ಕೆ ಹಚ್ಚುತ್ತಾ ಬಂದರೆ ಗಾಯವು ಕ್ರಮೇಣ ಸಂಪೂರ್ಣವಾಗಿ ಶಮನವಾಗುತ್ತದೆ.
ಇದಲ್ಲದೆ, ಮಂಜಿಷ್ಠಾ, ಅರಿಶಿಣ, ರಕ್ತಚಂದನ ಹಾಗೂ ಅಳಲೆ ಕಾಯಿ ಇಂಥ ಔಷಧಗಳಿಂದ ತಯಾರಿಸಿದ ತುಪ್ಪವನ್ನು ಅಥವಾ ಅವುಗಳ ಚೂರ್ಣವನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಹಚ್ಚುವುದರಿಂದ ಲೂ ಗಾಯವು ಶೀಘ್ರವಾಗಿ ಗುಣವಾಗಲು ಸಹಾಯವಾಗುತ್ತದೆ.
ಕುರುವಿನ ಸಮಸ್ಯೆಯಿರುವವರು ಪಾಲಿಸಬೇಕಾದ ಪಥ್ಯ
ಕುರುವಿನ ಸಮಸ್ಯೆಯಿರುವವರು ಆಹಾರದಲ್ಲಿ ವಿಶೇಷ ಜಾಗ್ರತೆ ವಹಿಸುವುದು ಅಗತ್ಯ. ಹಳೆಯ ಅಕ್ಕಿ ಮತ್ತು ಹಳೆಯ ಗೋಧಿಯಿಂದ ಮಾಡಿದ ಆಹಾರ ಹಿತಕರವಾಗಿರುತ್ತದೆ. ಜವೆ (ಬಾರ್ಲಿ) ಮತ್ತು ಗೋಧಿ ಸಹ ಉಪಯುಕ್ತ. ಹೆಸರು ಕಟ್ಟು, ನೆಲ್ಲಿಕಾಯಿಯಿಂದ ತಯಾರಿಸಿದ ಸಾರು ಸೇವಿಸಬಹುದು.
ಪಡವಲಕಾಯಿ, ಹೀರೆಕಾಯಿ, ಹಾಗಲಕಾಯಿ, ನುಗ್ಗೆ ಸೊಪ್ಪು, ಮೆಂತ್ಯ ಸೊಪ್ಪು, ಧನಿಯಾ ಸೊಪ್ಪು ಹಾಗೂ ದಂಟಿನ ಸೊಪ್ಪುಗಳಿಂದ ತಯಾರಿಸಿದ ಆಹಾರಗಳನ್ನು ಸೇವಿಸುವುದು ಉತ್ತಮ. ತುಪ್ಪ, ಹೆಸರುಬೇಳೆ ಮತ್ತು ದ್ರಾಕ್ಷಿಯನ್ನು ಆಹಾರದಲ್ಲಿ ಹೇರಳವಾಗಿ ಬಳಸಬಹುದು.
ಹಸಿವಿಲ್ಲದಿದ್ದಾಗ ಒಂದು ಹೊತ್ತು ಆಹಾರವನ್ನು ಬಿಟ್ಟು ಉಪವಾಸ ಮಾಡುವುದೂ ಒಳಿತು. ನಂತರ ಹಸಿವು ಬಂದಾಗ ಜೀರ್ಣಕ್ಕೆ ಲಘುವಾದ ಗಂಜಿ ರೂಪದ ಆಹಾರವನ್ನು ಸೇವಿಸುವುದು ಹಿತಕರ. ಕುರುವು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಚರ್ಮದ ಸಮಸ್ಯೆ ಯಾಗಿದ್ದರೂ, ಅದನ್ನು ನಿರ್ಲಕ್ಷಿಸುವುದು ಸರಿಯಲ್ಲ.
ದೇಹದಲ್ಲಿ ದೋಷಗಳ ಅಸಮತೋಲನ, ಅಶುದ್ಧ ರಕ್ತ ಹಾಗೂ ಅನುಚಿತ ಆಹಾರ-ವಿಹಾರಗಳ ಪರಿಣಾಮವಾಗಿ ಈ ಸಮಸ್ಯೆ ಉಂಟಾಗುತ್ತದೆ ಎಂದು ಆಯುರ್ವೇದವು ತಿಳಿಸುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು, ಶರೀರ ಶೋಧನೆ ಮಾಡಿಸಿಕೊಳ್ಳುವುದು ಹಾಗೂ ಸೂಕ್ತ ಪಥ್ಯವನ್ನು ಪಾಲಿಸುವುದು ಬಹಳ ಮುಖ್ಯ. ಮನೆಯ ಮಾಡಬಹುದಾದ ಕೆಲವು ಸರಳ ಉಪಾಯಗಳು ಆರಂಭಿಕ ಹಂತದಲ್ಲಿ ಉಪಕಾರಿಯಾಗಬಹುದು. ಆದರೆ ಕುರುವು ಪದೇ ಪದೆ ಕಾಣಿಸಿಕೊಳ್ಳುವುದಾದರೆ ಅಥವಾ ಹೆಚ್ಚು ನೋವು, ಉರಿಯೂತ ಕಂಡುಬಂದರೆ ಆಯುರ್ವೇದ ವೈದ್ಯರನ್ನು ಸಂಪರ್ಕಿಸು ವುದು ಅಗತ್ಯ.
ಸರಿಯಾದ ಆಹಾರ, ಶುದ್ಧ ಜೀವನಶೈಲಿ ಮತ್ತು ಸಮರ್ಪಕ ಚಿಕಿತ್ಸೆಗಳನ್ನು ಅನುಸರಿಸಿದರೆ ಕುರುವಿನ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಹುದು.