Gubbi News: ಗುಬ್ಬಿ ತಾಲ್ಲೂಕಿನ ಕೆರೆಗಳಿಗೆ ಶೀಘ್ರ ಹೇಮೆ ಹರಿಸಿ : ಗುಬ್ಬಿ ಬಿಜೆಪಿಗರ ಒತ್ತಾಯ
ಗುಬ್ಬಿ ತಾಲೂಕಿನಾದ್ಯಂತ ಎಲ್ಲಾ ಕೆರೆಗಳು ನೀರು ಇಲ್ಲದೆ ಬರಿದಾಗಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ರೈತರ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವಜಲವಾಗಿದ್ದ ಹೇಮಾವತಿ ನೀರು ಬರಬೇಕಿತ್ತು. ಈ ಬಾರಿ ಜುಲೈ ತಿಂಗಳು ಕಳೆದರೂ ಹೇಮೆ ನಮ್ಮತ್ತ ಹರಿದಿಲ್ಲ. ಮುಂಗಾರು ಕೈ ಕೊಟ್ಟಿದೆ. ಆದರೆ ಕೆಲ ದಿನದಿಂದ ಮಲೆನಾಡು ಭಾಗದಲ್ಲಿ ಮಳೆ ಬೀಳುತ್ತಿದೆ
-
ಗುಬ್ಬಿ: ತಾಲ್ಲೂಕಿನ ಬಹುತೇಕ ಎಲ್ಲಾ ಕೆರೆಕಟ್ಟೆಗಳು ಬತ್ತಿ ಹೋಗಿ ಜನಜಾನುವಾರು ಸೇರಿದಂತೆ ಪಕ್ಷಿ ಸಂಕುಲಕ್ಕೂ ನೀರು ಸಿಗದ ದುಸ್ಥಿತಿ ಎದುರಾಗಿದೆ. ಸದ್ಯದ ಪರಿಸ್ಥಿತಿ ಹೇಮಾವತಿ ಡ್ಯಾಂಗೆ ಒಳಹರಿವು ಹೆಚ್ಚಿದೆ. ತಮಿಳುನಾಡಿನ ಕಣ್ಣು ಬೀಳುವ ಮುನ್ನ ತುಮಕೂರು ಜಿಲ್ಲೆಯತ್ತ ಕೂಡಲೇ ಹೇಮಾವತಿ ನೀರನ್ನು ನಮ್ಮ ತಾಲೂಕಿನ ಎಲ್ಲಾ ಕೆರೆಗಳಿಗೆ ಕೂಡಲೇ ಹರಿಸುವಂತೆ ಒತ್ತಾಯಿಸಿ ಗುಬ್ಬಿ ಮಂಡಲದ ಬಿಜೆಪಿ ಪದಾಧಿಕಾರಿಗಳು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, ಗುಬ್ಬಿ ತಾಲೂಕಿನಾದ್ಯಂತ ಎಲ್ಲಾ ಕೆರೆಗಳು ನೀರು ಇಲ್ಲದೆ ಬರಿದಾಗಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ರೈತರ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವಜಲವಾಗಿದ್ದ ಹೇಮಾವತಿ ನೀರು ಬರಬೇಕಿತ್ತು. ಈ ಬಾರಿ ಜುಲೈ ತಿಂಗಳು ಕಳೆದರೂ ಹೇಮೆ ನಮ್ಮತ್ತ ಹರಿದಿಲ್ಲ. ಮುಂಗಾರು ಕೈ ಕೊಟ್ಟಿದೆ. ಆದರೆ ಕೆಲ ದಿನದಿಂದ ಮಲೆನಾಡು ಭಾಗದಲ್ಲಿ ಮಳೆ ಬೀಳುತ್ತಿದೆ.
ಹೇಮಾವತಿ ಗೊರೂರು ಡ್ಯಾಂಗೆ 15 ಸಾವಿರ ಕ್ಯೂಸೆಕ್ಸ್ ಒಳ ಹರಿವು ಇದೆ. ಜಲಾಶಯ ಬಹುತೇಕ ತುಂಬಿದ ಈ ಸಮಯ ತುಮಕೂರು ಜಿಲ್ಲೆಗೆ ಹರಿಸಬೇಕಾದ ಹಂಚಿಕೆಯ ನೀರು ಹರಿಸಿ ರೈತರ ಹಿತ ಕಾಯಬೇಕು. ಜಿಲ್ಲೆಯ ನೀರಾವರಿ ಬಗ್ಗೆ ಉಸ್ತುವಾರಿ ಸಚಿವರು ಗಮನಹರಿಸಿಲ್ಲ. ನಮ್ಮ ಗುಬ್ಬಿ ಶಾಸಕರು ಸಚಿವ ಸ್ಥಾನ ಲಾಭಿಯಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಗುಬ್ಬಿ ಪಟ್ಟಣಕ್ಕೆ ನೀರಿನ ಹಾಹಾಕಾರ ಬಂದಿದೆ. ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನಮ್ಮ ಪಾಲಿನ ನೀರು ತರಲು ಸರ್ಕಾರಕ್ಕೆ ಒತ್ತಡ ತರುವ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: Gubbi News: ಗುಬ್ಬಿಯಲ್ಲಿ ಅರ್ಥಪೂರ್ಣ ಕಾರ್ಗಿಲ್ ಮತ್ತು ಆಪರೇಷನ್ ಸಿಂಧೂರ ವಿಜಯೋತ್ಸವ
ಜಿಲ್ಲಾ ಬಿಜೆಪಿ ಮುಖಂಡ ಎಚ್.ಟಿ.ಭೈರಪ್ಪ ಮಾತನಾಡಿ, ಕಳೆದ ಬಾರಿ ಅಧಿಕಾರಿಗಳ ನಿರ್ಲಕ್ಷ ಮತ್ತು ಗುಬ್ಬಿ ಶಾಸಕ ಬೇಜವಾಬ್ದಾರಿ ತನದಿಂದ ಗುಬ್ಬಿ ತಾಲೂಕಿನ ಹಲವು ಕೆರೆಗಳು ಹೇಮಾವತಿ ನೀರಿ ನಿಂದ ತುಂಬಿರಲಿಲ್ಲ. ಆದರೆ ಈ ಬಾರಿ ಬರಗಾಲ ಎದುರಾಗಿದ್ದು ಕೆರೆಕಟ್ಟೆಗಳು ಬತ್ತಿ ಹೋಗಿ ಸಂಕಷ್ಟ ಎದುರಾಗಿದೆ. ಈ ಕೂಡಲೇ ಅಧಿಕಾರಿಗಳು ಮತ್ತು ಶಾಸಕರು ಸಲಹಾ ಸಮಿತಿಯ ಜೊತೆ ಚರ್ಚಿಸಿ ನೀರು ಹರಿಸುವ ಕೆಲಸಕ್ಕೆ ಮುಂದಾಗಬೇಕಿದೆ.
ಇನ್ನೂ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಡಿಸಿಎಂ ಜಿ.ಪರಮೇಶ್ವರ್(Deputy Chief Minister G Parameshwar) ಕೇವಲ ಬಿಡದಿ ಟೌನ್ ಶಿಪ್(Bidadi Township) ವಿಚಾರಕ್ಕೆ ಸೀಮಿತವಾಗಿದ್ದು ನಮ್ಮ ಜಿಲ್ಲೆಯ ರೈತರ ಪರ ನಿಂತು ಕೆರೆಗಳನ್ನು ತುಂಬಿಸುವ ಕೆಲಸದಲ್ಲಿ ವಿಫಲರಾಗಿದ್ದಾರೆ. ಈ ಬಾರಿ ನಮ್ಮ ನೀರು ಹರಿಸದಿದ್ದರೆ ಉಗ್ರ ಹೋರಾಟವನ್ನು ಬಿಜೆಪಿ ರೈತರೊಟ್ಟಿಗೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಲರಾಮಯ್ಯ ಮಾತನಾಡಿ, ಭಾಜಪ ಮುಖಂಡರು ಮತ್ತು ಪಕ್ಷದ ಪ್ರಮುಖರೆಲ್ಲ ಸೇರಿ ಇಂದು ಹೇಮಾವತಿ ನೀರು ಹರಿಸುವಂತೆ ಒತ್ತಾಯ ಮಾಡುತ್ತಿದ್ದೇವೆ. ಈಗಾಗಲೇ ಗುಬ್ಬಿ ತಾಲೂಕು ಬರಗಾಲಕ್ಕೆ ಸಿಲುಕಿ ಕೆರೆಕಟ್ಟೆಗಳು ಬತ್ತಿ ಹೋಗಿದ್ದು ರೈತರು ಪರದಾಡುವ ಸ್ಥಿತಿ ಬಂದೊದಗಿದೆ. ಜಿಲ್ಲೆಗೆ 24 ಟಿಎಂಸಿ ಗುಬ್ಬಿ ತಾಲೂಕಿನ 18.5 ಎಂಸಿಎಫ್ ಟಿ ಹೇಮಾವತಿ ನೀರಿನ ಪಾಲನ್ನು ತುರ್ತಾಗಿ ಹರಿಸಬೇಕೆಂದು ಒತ್ತಾಯ ಮಾಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಪಂಚಾಕ್ಷರಿ ಮಾತನಾಡಿ, ನೀರಾವರಿ ಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಗಮನಹರಿಸಿ ಜಿಲ್ಲೆಗೆ ಸಿಗಬೇಕಾದ ನೀರಿನ ಪಾಲನ್ನು ಕೊಡಿಸುವ ಕೆಲಸಕ್ಕೆ ಮುಂದಾಗ ಬೇಕಿದೆ. ತಾಲೂಕಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಿಸುತ್ತಿದ್ದು ನೀರಿನ ಅಭಾವ ತಾಲೂಕಿನಾದ್ಯಂತ ತಲೆದೋರಿದ್ದು ಇಂತಹ ದುಸ್ಥಿತಿಯ ಸಂದರ್ಭದಲ್ಲಿ ಗುಬ್ಬಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಸರ್ಕಾರ ಘೋಷಣೆ ಮಾಡುವ ಜೊತೆಗೆ ಬರವನ್ನ ನೀಗಿಸುವ ಕ್ರಮಕ್ಕೆ ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್.ನಂಜೇಗೌಡ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವಿದ್ಯಾಸಾಗರ್, ಪಪಂ ಮಾಜಿ ಸದಸ್ಯರಾದ ಜಿ.ಎನ್.ಅಣ್ಣಪ್ಪಸ್ವಾಮಿ, ಜಿ.ಆರ್.ಶಿವಕುಮಾರ್, ಚನ್ನಶೆಟ್ಟಿಹಳ್ಳಿ ಯತೀಶ್, ಗಂಗಣ್ಣ, ಬಿ.ಲೋಕೇಶ್, ಕುಮಾರಸ್ವಾಮಿ, ರವಿಕುಮಾರ್, ತಿರುಮಲೇಶ್, ಜಿ.ಆರ್.ಬಸವರಾಜು ಇತರರು ಇದ್ದರು.