Turuvekere Prasad Column: ಬಹುಕೃತ ವೇಷಗಳಿಲ್ಲದ ನೇರನಡೆಯ ಜನಸೇವಕ ಬಿ.ಸಿ.ನಾಗೇಶ್
ಹಲವು ಬಾರಿ ಪೆಟ್ರೋಲ್, ಡೀಸಲ್ ಬೆಲೆ ಹೆಚ್ಚಾದಾಗಲೋ, ಇಲ್ಲ ಸರಕಾರ, ಪಕ್ಷದ ಹೈಕಮಾಂಡ್ ಉಳಿತಾಯದ ಮಾತಾಡಿದಾಗಲೋ ಸಾಮಾನ್ಯವಾಗಿ ಸಚಿವರು, ಜನಪ್ರತಿನಿಧಿಗಳು ಇಂತಹ ಪೆರೇಡ್ ಶುರು ಹಚ್ಚಿಕೊಳ್ಳುತ್ತಾರೆ. ಜನರ ಮಧ್ಯೆ ಜನಸಾರಿಗೆಯಲ್ಲಿ ಪ್ರಯಾಣಿಸುವ ಸರ್ಕಸ್ ಮಾಡಿ ಒಂದಷ್ಟು ದಿನಗಳ ನಂತರ ಎಲ್ಲಾ ಮರೆತು ಎಸಿ ಕಾರ್ ಹತ್ತುತ್ತಾರೆ. ಆದರೆ ನಾಗೇಶ್ ಯಾರನ್ನೋ ಮೆಚ್ಚಿಸಲು ಇಲ್ಲ ಯಾವುದೋ ಅಗ್ಗದ ಪ್ರಚಾರಕ್ಕಾಗಿ ಹೀಗೆ ನಡೆದುಕೊಂಡವರಲ್ಲ. ಅವರು ಸ್ವಪ್ರೇರಣೆಯಿಂದಲೇ ಹೀಗೆ ಅನುಕರಣೀಯ ಮಾದರಿ ಆದವರು.
-
ಚಿರಸ್ಮರಣೆ
ತುರುವೇಕೆರೆ ಪ್ರಸಾದ್
ಕೆಲವರ್ಷಗಳ ಹಿಂದೆ ಮಂತ್ರಿಗಳೊಬ್ಬರು ಕೈಲೊಂದೆರಡು ಫೈಲ್ ಹಿಡಿದು ರೈಲ್ವೆ ನಿಲ್ದಾಣಕ್ಕೆ ಓಡೋಡುತ್ತಾ ಬಂದು ಅದಾಗಲೇ ಹೊರಟಿದ್ದ ರೈಲು ಹತ್ತುವ ವೀಡಿಯೋ ಒಂದು ಆ ಕಾಲಕ್ಕೇ ಸಾಕಷ್ಟು ವೈರಲ್ ಆಗಿತ್ತು. ಆ ಮಂತ್ರಿಗಳು ಬೇರಾರೂ ಅಲ್ಲ, ಕರ್ನಾಟಕದ ಅಂದಿನ ಶಿಕ್ಷಣ ಸಚಿವರಾಗಿದ್ದ ಬಿ.ಸಿ.ನಾಗೇಶ್ ಅವರು. ಮಂತ್ರಿಗಳಾದ ಮೇಲೆ ಪ್ರಚಾರಕ್ಕಾಗಿ ಮಾಡಿದ ಸ್ಟಂಟ್ ಇದಾಗಿರಲಿಲ್ಲ. ಅವರು ಶಾಸಕರಾಗಿದ್ದಾಗಲೂ ಹಲವು ಬಾರಿ ಹೀಗೇ ಬಸ್ಸು, ರೈಲುಗಳಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡಿದ್ದರು. ಎಷ್ಟೋ ಸಾರಿ ಮೆಟ್ರೋದಲ್ಲಿ ನಿಂತೇ ಪ್ರಯಾಣಿಸಿದ್ದರು. ಮೆಟ್ರೋದಿಂದ ಇಳಿದು ಮೆಜೆಸ್ಟಿಕ್‌ನಲ್ಲಿ ಆಟೋ ಹತ್ತಿ ವಿಧಾನಸೌಧದ ಮುಂದೆ ಆಟೋದಿಂದಿಳಿದು ಅಧಿವೇಶನದಲ್ಲಿ ಪಾಲ್ಗೊಂಡಿದ್ದೂ ಉಂಟು.
ಹಲವು ಬಾರಿ ಪೆಟ್ರೋಲ್, ಡೀಸಲ್ ಬೆಲೆ ಹೆಚ್ಚಾದಾಗಲೋ, ಇಲ್ಲ ಸರಕಾರ, ಪಕ್ಷದ ಹೈಕಮಾಂಡ್ ಉಳಿತಾಯದ ಮಾತಾಡಿದಾಗಲೋ ಸಾಮಾನ್ಯವಾಗಿ ಸಚಿವರು, ಜನಪ್ರತಿನಿಧಿಗಳು ಇಂತಹ ಪೆರೇಡ್ ಶುರು ಹಚ್ಚಿಕೊಳ್ಳುತ್ತಾರೆ. ಜನರ ಮಧ್ಯೆ ಜನಸಾರಿಗೆಯಲ್ಲಿ ಪ್ರಯಾಣಿಸುವ ಸರ್ಕಸ್ ಮಾಡಿ ಒಂದಷ್ಟು ದಿನಗಳ ನಂತರ ಎಲ್ಲಾ ಮರೆತು ಎಸಿ ಕಾರ್ ಹತ್ತುತ್ತಾರೆ. ಆದರೆ ನಾಗೇಶ್ ಯಾರನ್ನೋ ಮೆಚ್ಚಿಸಲು ಇಲ್ಲ ಯಾವುದೋ ಅಗ್ಗದ ಪ್ರಚಾರಕ್ಕಾಗಿ ಹೀಗೆ ನಡೆದುಕೊಂಡವರಲ್ಲ. ಅವರು ಸ್ವಪ್ರೇರಣೆಯಿಂದಲೇ ಹೀಗೆ ಅನುಕರಣೀಯ ಮಾದರಿ ಆದವರು.
ವಿಶೇಷ ಉಪಚಾರ, ಆಡಂಬರ ಯಾವುದರ ನಿರೀಕ್ಷೆಯೂ ಇಲ್ಲದೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಇರಬಯಸುತ್ತಿದ್ದವರು ಎನ್ನುವುದಕ್ಕೆ ಇದೊಂದು ಉದಾಹರಣೆ ಅಷ್ಟೇ. ಜನಸಾಮಾನ್ಯರೊಂದಿಗೆ ಒಡನಾಡಿದರೆ ಅವರ ಕಷ್ಟ ಗೊತ್ತಾಗುತ್ತದೆ. ಸಾರ್ವಜನಿಕ ಜೀವನ ದರ್ಶನವಾಗುತ್ತದೆ. ಒಬ್ಬ ವ್ಯಕ್ತಿಯನ್ನು ನಿನ್ನ ಕಷ್ಟ ಏನು ಎಂದರೆ ಎಲ್ಲರು ಮುಕ್ತವಾಗಿ ಹೇಳಿಕೊಳ್ಳಲಾರರು. ಕಷ್ಟ ಕಾರ್ಪಣ್ಯಗಳನ್ನು ನಾವು ಕಣ್ಣಾರೆ ನೋಡಬೇಕು. ಆಗಷ್ಟೇ ನಮಗೆ ಅದರ ತೀವ್ರತೆಯ ಅರಿವಾಗು ವುದು. ಹೊರಗಣ್ಣಿಗಿಂತ ಅಂತರಂಗದ ಸೂಕ್ಷ್ಮಗ್ರಾಹಿ ಒಳಗಣ್ಣುಗಳು ಬೇಕು. ಎಷ್ಟೋ ಸಾರಿ ಒಬ್ಬರ ಕಷ್ಟ ಕೇಳಿ ನಾವು ಒಂದೆರಡು ಸಮಾಧಾನದ ಮಾತಾಡಿದರೂ ಅವರಿಗೆಷ್ಟೋ ಸಂತೋಷ ವಾಗುತ್ತದೆ. ಆದರೆ ಕಾಲಕ್ರಮೇಣ ಇದೊಂದು ಕಣ್ಣೊರೆಸುವ ತಂತ್ರ ಎಂದು ಸಾಮಾನ್ಯರಿಗೆ ಅನಿಸಿಬಿಡುತ್ತದೆ. ಹಾಗಾಗಿ ಕಣ್ಣಾರೆ ಕಷ್ಟಕಂಡು ಅವರಿಗೆ ಸಹಾಯ ಮಾಡಬೇಕು. ಅಂತಹ ದಿಢೀರ್ ನೆರವೇ ಅವರ ಬದುಕಿನ ತುರ್ತು ಅಗತ್ಯಗಳನ್ನು ಪೂರೈಸುವುದು ಮತ್ತು ಸಾರ್ಥಕ ಎನಿಸುವುದು ಎನ್ನುತ್ತಿದ್ದರು. ಹಾಗೇ ಸಹಾಯ ಸದಾ ದಾನ, ಅನುದಾನವೇ ಆಗಿರಬೇಕಿಲ್ಲ, ನಾವು ಅವರಿಗೆ ಸವಲತ್ತು, ಸೌಕರ್ಯಗಳ ಮಾರ್ಗ ತೋರಿಸಬೇಕು. ಸ್ವಾವಲಂಬನೆಯ ದಾರಿ ತೋರಬೇಕು. ಎಷ್ಟೋ ಜನರಿಗೆ ಸರಕಾರಿ ಸವಲತ್ತುಗಳೇ ಗೊತ್ತಿರುವುದಿಲ್ಲ. ಗೊತ್ತಿದ್ದರೂ ಭ್ರಷ್ಟ ವ್ಯವಸ್ಥೆಯ ಮಧ್ಯೆ ಅದನ್ನು ಪಡೆಯಲಾಗದೆ ಅಸಹಾಯಕರಾಗಿರುತ್ತಾರೆ.
ಇದನ್ನೂ ಓದಿ: Turuvekere Prasad Column: ದೂರಶಿಕ್ಷಣ ನಕಲಿಗೆ ಮುಕ್ತವಾಗದಿರಲಿ !
ಇಂತಹ ಅಡೆತಡೆಗಳನ್ನು ನಿವಾರಿಸಿದರೂ ಅವರಿಗೆ ಎಷ್ಟೋ ಉಪಕಾರ ಮಾಡಿದಂತೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ತಮ್ಮ ಕ್ಷೇತ್ರದಲ್ಲಿ, ತಾವು ಹೋಗುವ ಸಭೆ, ಸಮಾರಂಭ ಎಲ್ಲಾ ಕಡೆ ಅವರು ಸರಳವಾಗಿಯೇ ಇರುತ್ತಿದ್ದರು. ಅವರ ವೇಷಭೂಷಣ, ನಡವಳಿಕೆ ಅಷ್ಟೇ ಸರಳವಾಗಿರು ತ್ತಿತ್ತು. ತಾನು ಶಾಸಕ, ಮಂತ್ರಿ ಎಂಬ ಹಮ್ಮು ಬಿಮ್ಮು ಯಾವುದೂ ಅವರಲ್ಲಿರಲಿಲ್ಲ. ಸದಾ ಕಾಲ ಅವರು ಶ್ರೇಷ್ಠತೆಯ ವ್ಯಸನದಿಂದ ದೂರವೇ ಇರುತ್ತಿದ್ದರು.
ಅಧಿಕಾರ, ಪದವಿಯಿಂದ ದತ್ತವಾದ ಪ್ರತಿಷ್ಠೆಯನ್ನು ಅವರು ಎಂದೂ ಮೆರೆಯಲಿಲ್ಲ. ಸಾಮಾನ್ಯ ರಂತೆ ವಾಕ್ ಮಾಡುತ್ತಿದ್ದರು. ಎದುರು ಬಂದವರನ್ನು ನಿಲ್ಲಿಸಿಕೊಂಡು ಕುಶಲ ವಿಚಾರಿಸಿ ಮಾತಾಡುತ್ತಿದ್ದರು. ಯಾರಾದರೂ ಕಾಫಿಗೆ ಕರೆದರೆ ರಸ್ತೆ ಬದಿಯ ಚಾ ಅಂಗಡಿಯ ಮುಂದೇ ಪೇಪರ್ ಹಿಡಿದು ಕೂತು ಚಾ ಕುಡಿಯುತ್ತಾ ಲೋಕಾಭಿರಾಮವಾಗಿ ಮಾತಾಡುತ್ತಿದ್ದರು. ಎಷ್ಟೋ ಸಾರಿ ಇಂತಹ ಕಡೆಗಳಲ್ಲೇ ರಾಜಕೀಯ ಚರ್ಚೆಗಳೂ ನಡೆದದ್ದಿವೆ. ಇದಕ್ಕೆ ಅವರ ಪಕ್ಷದ ಕಾರ್ಯಕರ್ತರೇ ಆಗಿರಬೇಕು ಎಂದೇನಿರಲಿಲ್ಲ. ಯಾರೇ ಸಾಮಾನ್ಯತಿಸಾಮಾನ್ಯ ವ್ಯಕ್ತಿಯಾದರೂ ಸರಿ, ಅವನನ್ನು ಮಾತಿಗೆ ಎಳೆದು ಸರಕಾರದ ನೀತಿಗಳು, ಜನರ ಸಮಸ್ಯೆಗಳು, ಆಗಬೇಕಾದ ಕೆಲಸಗಳು ಇವುಗಳ ಬಗ್ಗೆ ಕೇಳುತ್ತಿದ್ದರು. ಅವರ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸುತ್ತಿದ್ದರು. ಹಾಗೇ ಯಾರಾದರೂ ತುರ್ತು ಎಂದು ಫೋನ್ ಮಾಡಿದರೆ ಅಲ್ಲೇ ಇದ್ದ ಯಾರದ್ದೋ ಗಾಡಿ ಹತ್ತಿ ತಾವೇ ಚಲಾಯಿಸಿಕೊಂಡು ಹೊರಟು ಬಿಡುತ್ತಿದ್ದರು.
ಒಮ್ಮೆ ನಮ್ಮೂರಿಗೆ ಒಂದು ಕಾರ್ಯಕ್ರಮಕ್ಕೆ ಬಂದಾಗ ಅವರಿಗೆ ಪರಿಚಯವಿದ್ದ ಶಿಕ್ಷಕರೊಬ್ಬರು ಅನಾರೋಗ್ಯದಿಂದ ವಿಶ್ರಾಂತಿಯಲ್ಲಿದ್ದ ವಿಷಯ ತಿಳಿದ ನಾಗೇಶ್ ಅಲ್ಲೇ ಇದ್ದ ಒಬ್ಬರ ಬೈಕ್ ಹತ್ತಿ ಕುಳಿತು ನಡೀರಿ ಹೋಗಿ ನೋಡಿ ಬರೋಣ ಎಂದು ಹೊರಟುಬಿಟ್ಟರು. ಸರ್ ನೀವು ಕಾರಿನಲ್ಲಿ ಬನ್ನಿ ಎಂದಾಗ ನಾಗೇಶ್ ಅವರು ಅಲ್ಲಿಗ್ಯಾಕೆ ಕಾರು, ಪೆಟ್ರೋಲ್ ದಂಡ, ಅಲ್ಲದೆ ನಾನು ಬರ್ತಿದೀನಿ ಅಂತ ಇಲ್ಲದ ಪ್ರೋಟೋಕಾಲು, ಭದ್ರತೆಯ ತಾಪತ್ರಯ. ಸುಮ್ನೆ ನಡಿಯಪ್ಪ ಎಂದು ಹೊರಡಿಸಿದರು. ಆ ಶಿಕ್ಷಕರಿಗಂತೂ ಶಿಕ್ಷಣ ಸಚಿವರೇ ತಮ್ಮ ಮನೆಗೆ ಆರೋಗ್ಯ ವಿಚಾರಿಸಲು ಬಂದದ್ದು ನೋಡಿ ಅಮಿತಾನಂದವಾಯಿತು.
ಒಂದೆಡೆ ಖುಷಿ, ಒಂದೆಡೆ ಮುಜಗರ, ಸಂಕೋಚ. ನಾಗೇಶ್ ಅವರ ಕುಶಲ ವಿಚಾರಿಸಿ ಅವರ ಮನೆಯಲ್ಲಿ ಟೀ ಕುಡಿದು ಶುಭ ಹಾರೈಸಿ ಬಂದರು. ನಾಗೇಶ್ ಅವರ ಸರಳತೆಗೆ ಇದೂ ಒಂದು ಸಾಕ್ಷಿ. ಆಗದ ಕೆಲಸಗಳನ್ನು ಮಾಡಿಕೊಡಲಾಗುವುದಿಲ್ಲ ಎಂದು ನೇರವಾಗಿ ನಿಷ್ಠುರವಾಗೇ ಹೇಳುತ್ತಿದ್ದರು. ಅದರಲ್ಲಿ ಯಾವ ಮುಲಾಜೂ ಇರಲಿಲ್ಲ. ಒಮ್ಮೆ ಉತ್ತರ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರೊಬ್ಬರು ಈ ಭಾಗಕ್ಕೆ ವರ್ಗಾವಣೆ ಮಾಡಿಸಿಕೊಳ್ಳಲು ಶಿಫಾರಸ್ಸು ಮಾಡುವಂತೆ ಕೋರಿ ಬಂದಿದ್ದರು. ನಾಗೇಶ್ ಅವರಿಗೆ ಆ ಭಾಗದ ಜನ ಹಿಂದುಳಿದಿದ್ದಾರೆ. ಎಲ್ಲಾ ಸೌಕರ್ಯ ಹುಡುಕಿ ಕೊಂಡು ವಾಪಸ್ ಬಂದರೆ ಅಲ್ಲಿ ಮಕ್ಕಳಿಗೆ ಪಾಠ ಮಾಡೋರ್ಯಾರು? ಇದು ಆಗುವ ಕೆಲಸ ಅಲ್ಲ, ಒಂದಷ್ಟು ವರ್ಷ ಅಲ್ಲೇ ಕೆಲಸ ಮಾಡಿ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದರು.
ಆಗುವಂತಹ ಜನೋಪಯೋಗಿ ಕೆಲಸಗಳನ್ನು ಅಧಿಕಾರಿಗಳ ತಲೆ ಮೇಲೆ ಕೂತಾದರೂ ಮಾಡಿಸಿ ಯೇ ತೀರುತ್ತಿದ್ದರು. ಅದು ರಸ್ತೆ ಅಭಿವೃದ್ಧಿ ಇರಬಹುದು, ಕೆರೆ ಕಾಯಕಲ್ಪ ಇರಬಹುದು, ಒಮ್ಮೆ ಅವರು ಮನಸ್ಸು ಮಾಡಿ ದರೆಂದರೆ ಅದೇನೇ ಎಡರುತೊಡರು ಬರಲಿ, ಶತಾಯಗತಾಯ ಮಾಡಿಯೇ ತೀರುತ್ತಿದ್ದರು. ಅಂತಹ ಧೃಢ ಸಂಕಲ್ಪ ಅವರದ್ದು!
ಇದಕ್ಕಾಗಿ ಅವರು ಅಧಿಕಾರಿಗಳೊಂದಿಗೂ ನಿಷ್ಠುರವಾಗಿ ವರ್ತಿಸಲು ಹಿಂದೆ ಮುಂದೆ ನೋಡುತ್ತಿರ ಲಿಲ್ಲ. ಸಾರ್ವಜನಿಕ ಸಂಸ್ಥೆಯೊಂದರ ನಿವೇಶನದ ಬಗ್ಗೆ ಯಾರೋ ಒಬ್ಬರು ತಕರಾರು ಅರ್ಜಿ ಹಾಕಿದ್ದರು. ಅದನ್ನು ಅಧಿಕಾರಿಗಳೊಬ್ಬರು ವರುಷಗಳಾದರೂ ಇತ್ಯರ್ಥ ಮಾಡದೆ ಎಳೆದಾಡು ತ್ತಿದ್ದರು. ನಾಗೇಶ್ ಅವರು ಫೋನಿನಲ್ಲೇ ಅವರನ್ನು ತರಾಟೆಗೆ ತೆಗೆದುಕೊಂಡ ಎರಡೇ ದಿನದಲ್ಲಿ ಕೆಲಸ ಆಯಿತು. ಅವರಲ್ಲಿ ಆರ್‌ಎಸ್‌ಎಸ್ ಕಲಿಸಿದ ಶಿಸ್ತು, ಸಮಯಪಾಲನೆ, ಸರಳತೆಯ ಗುಣವಿತ್ತು. ಅವರ ತಂದೆ ಬಿ.ಎಸ್. ಚಂದ್ರಶೇಖರಯ್ಯನವರನ್ನೂ ಒಳಗೊಂಡಂತೆ ಹಲವು ಬಿಜೆಪಿ ನಾಯಕರ ವ್ಯಕ್ತಿತ್ವದ ಪ್ರಭಾವವಿತ್ತು. ಈ ಎರಡೂ ಅವರನ್ನು ಒಬ್ಬ ಅಪರೂಪದ ಸರಳ, ಸಜ್ಜನಿಕೆಯ ರಾಜಕಾರಣಿಯನ್ನಾಗಿ ರೂಪಿಸುವುದರಲ್ಲಿ ಸಹಾಯಕವಾದವು.
ರಾಜಕೀಯದಂತೆಯೇ ಅವರಿಗೆ ಸಾಹಿತ್ಯ, ಸಂಸ್ಕೃತಿಯ ವಿಷಯಗಳಲ್ಲೂ ಅಪರಿಮಿತ ಆಸಕ್ತಿ. ಸಾಹಿತ್ಯ ಕಾರ್ಯಕ್ರಮ ಎಂದು ಕಡೆಗಣಿಸುತ್ತಿರಲಿಲ್ಲ. ಸಾಧ್ಯವಾದಷ್ಟು ಮಟ್ಟಿಗೆ ಒಪ್ಪಿಕೊಂಡ ಎಲ್ಲಾ ಕಾರ್ಯಕ್ರಮ ಗಳಿಗೂ ಹಾಜರಾಗುತ್ತಿದ್ದರು. ದೀಪ ಹಚ್ಚಿ ಉದ್ಘಾಟನೆಯ ಶಾಸ್ತ್ರ ಮಾಡಿ ಎರಡು ಮಾತಾಡಿ ಓಡಿ ಹೋಗುತ್ತಲೂ ಇರಲಿಲ್ಲ. ಸಾಧ್ಯವಾದಷ್ಟು ಹೊತ್ತು ಬೇರೆಯವರ ಮಾತು ಕೇಳುತ್ತಿದ್ದರು.
ಸ್ವಾರಸ್ಯಕರ ಸಾಹಿತ್ಯದ ಭಾಷಣವಾದರಂತೂ ಪೂರಾ ಕೇಳೇ ಹೋಗುತ್ತಿದ್ದರು. ನನಗೆ ಆಗಾಗ್ಗೆ ಫೋನ್ ಮಾಡಿ ಭೈರಪ್ಪನವರ ಹೊಸ ಕಾದಂಬರಿ ಏನಾದರೂ ಬಂತಾ? ಕುಂ.ವೀ ಅವರ ಅರಮನೆ ಚೆನ್ನಾಗಿತ್ತು, ಅವರು ಮತ್ತೆ ಯಾವುದಾದರೂ ಕಾದಂಬರಿ ಬರೆದರಾ? ಹೀಗೆ ವಿಚಾರಿಸುತ್ತಿದ್ದರು. ಹಾಗೇ ಹಲವು ಸಂಘ ಸಂಸ್ಥೆಗಳ ಪುನಶ್ಚೇತನಕ್ಕೂ ಅವರು ಕಾರಣರಾಗಿದ್ದರು. ನಾನು ಒಂದೆರಡು ಬಾರಿ ಅವರ ಸಂದರ್ಶನ ಮಾಡಿದ್ದೆ. ಆಗೆಲ್ಲಾ ಹಲವು ಚಿಂತನೆಗಳನ್ನು, ರಾಜಕೀಯ ವಿಚಾರ ಗಳನ್ನು ಹಂಚಿಕೊಂಡಿದ್ದರು. ಅವರು ಶಿಕ್ಷಣ ಮಂತ್ರಿಗಳಾದ ಮೇಲೆ ಶಿಕ್ಷಣ ತಜ್ಞರ ಜೊತೆ ಚರ್ಚಿಸಿದ ರೀತಿಯಲ್ಲೇ ಕೆಳಹಂತದ ಶಿಕ್ಷಕರು ಮತ್ತು ಇತರೆ ಅಧಿಕಾರಿಗಳ ಜೊತೆ ಕೂಡ ಆಗಬೇಕಾದ ಸುಧಾರಣೆಗಳ ಬಗ್ಗೆ ಚರ್ಚಿಸಿದ್ದರಂತೆ. ಎಲ್ಲೋ ವಿಧಾನಸೌಧದಲ್ಲಿ ಕೂತು ರೂಪುರೇಷೆಗಳನ್ನು ಹಾಕುವುದಕ್ಕಿಂತ ಶಾಲಾ, ಕಾಲೇಜುಗಳ ವಾತಾವರಣದಲ್ಲೇ ಆದರೆ ಅದು ಹೆಚ್ಚು ವಸ್ತುನಿಷ್ಠ ವಾಗಿರುತ್ತದೆ ಎನ್ನುತ್ತಿದ್ದರು.
ಶಿಕ್ಷಣವೆಂದರೆ ಸಮಗ್ರ ವ್ಯಕ್ತಿತ್ವ ನಿರ್ಮಾಣ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರು ಮಾಡಿ ಅದರ ಆಧಾರದ ಮೇಲೆ ಉದ್ಯೋಗ ಹಂಚುವುದಲ್ಲ. ಜ್ಞಾನ, ಕೌಶಲ ಒಂದು ಜೂಜಾಗಿದೆ. ನಮ್ಮ ಯೂನಿವರ್ಸಿಟಿ ಗಳು ಶಿಕ್ಷಣದ ಟೆಂಡರ್ ಕರೆದು ಮಾರಾಟ ಮಾಡುವ ವ್ಯಾಪಾರೀ ಸಂಸ್ಥೆಗಳಾಗಿವೆ. ಉಳ್ಳವರು ಅದನ್ನು ಬಾಚಿಕೊಳ್ಳುವ ಎಲ್ಲಾ ಸೌಲಭ್ಯ, ಅವಕಾಶಗಳನ್ನು ಈ ವ್ಯವಸ್ಥೆ ನಿರ್ಮಾಣ ಮಾಡಿಕೊಟ್ಟಿದೆ. ಶಿಕ್ಷಣ ಎಲ್ಲರಿಗೆ ದಕ್ಕುವಂತಾಗಬೇಕು. ಕೇವಲ ಅಕ್ಷರ ಜ್ಞಾನ ದಕ್ಕಿದರೆ ಸಾಲದು, ಆ ಜ್ಞಾನ ಮನುಷ್ಯನನ್ನು ಸಭ್ಯ, ಸಮರ್ಥ ನಾಗರಿಕನನ್ನಾಗಿಸಬೇಕು.
ನಮ್ಮ ಜ್ಞಾನ, ಕೌಶಲದ ವ್ಯವಸ್ಥೆ ಬಳಸೆಸೆಯುವ ರೀಫಿಲ್ ತರ ಆಗಿದೆ. ಹಾಗಾಗಿ ಎಷ್ಟೋ ಕ್ಷೇತ್ರ ಗಳಲ್ಲಿ ಸ್ನಾತಕೋತ್ತರ ಪದವಿ ಮಾಡಿದವರಿಗೂ ವ್ಯವಹಾರಿಕ ಜ್ಞಾನ, ಅಗತ್ಯ ಕೌಶಲ, ಪರಿಣಿತಿ ಇರುವುದಿಲ್ಲ. ಇನ್ನು ನಾಗರಿಕ ಸೇವಾ ಪರೀಕ್ಷೆಯಂತಹ ಉನ್ನತ ಪರೀಕ್ಷೆಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇ.2ಕ್ಕಿಂತ ಕಡಿಮೆ ಫಲಿತಾಂಶ ನೀಡಲಾಗುತ್ತದೆ. ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಪರ್ಸಂಟೈಲ್ ಆಧಾರದ ಮೇಲೆ ಉದ್ಯೋಗದ ಅವಕಾಶವಿರುತ್ತದೆ.
ಉದ್ಯೋಗ ಪಡೆದವರಷ್ಟೇ ಪರಿಣಿತರು, ಪ್ರತಿಭಾವಂತರು ಕೂದಲೆಳೆಯಷ್ಟು ಅಂತರದಲ್ಲಿ ಅವಕಾಶ ವಂಚಿತರಾಗಿ ಮತ್ತೆ ಮತ್ತೆ ಪರೀಕ್ಷೆ ಬರೆಯಬೇಕಾಗುತ್ತದೆ. ಇದರ ಬದಲು ಒಂದು ಶ್ರೇಣೀಕೃತ ಬ್ಯಾಂಡ್ (ಉದಾ. 98-100. 95-98, 90-95 ಹೀಗೆ) ಮೂಲಕ ಅವರನ್ನು ಗುಂಪುಗೂಡಿಸಿ ಆಯಾ ವೃಂದಕ್ಕೆ ಮುಂದೆ ಸೃಷ್ಟಿಯಾಗುವ ಉದ್ಯೋಗದಲ್ಲಿ ಅವಕಾಶ ನೀಡುವಂತಾಗಬೇಕು. ಒಂದು ಟ್ಯಾಲೆಂಟ್ ಬ್ಯಾಂಕ್ ಮಾಡಬೇಕು. ಇದಕ್ಕೆ ಒಂದು ಕಾಲಮಿತಿ ನಿಗದಿಪಡಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಆರ್‌ಎಸ್‌ಎಸ್ ಚಿಂತನೆ, ಕೇಸರೀಕರಣ ಎಂದೆಲ್ಲಾ ಆರೋಪ ಬಂದರೂ, ಅವರ ಕಾಲದಲ್ಲಾದ ಪಠ್ಯಪಸ್ತಕಗಳ ಪರಿಷ್ಕರಣೆ ಕ್ರಾಂತಿಕಾರಕ ಸುಧಾರಣೆಯ ಒಂದು ಪ್ರಯತ್ನವೇ ಅಗಿತ್ತು. ಮೆಕಾಲೆ ಪ್ರಣೀತ, ಜೆಎನ್‌ಯು ಪ್ರಾಯೋಜಿತ, ಸೆಕ್ಯುಲರ್ ಬಣ್ಣಲೇಪಿತ ತಥಾಕಥಿತ ಕಥನಗಳ ಮಧ್ಯೆ ಒಂದು ದೇಶೀ ಹಾಗೂ ಮೌಲ್ಯಯುತ ಕಥನವೂ ಇರಬಹುದು ಎಂಬ ಹೊಸ ಸಾಧ್ಯತೆಯ ಹೊಳಹು ಗಳನ್ನು ಉತ್ಖನನ ಮಾಡಿ ನಮ್ಮ ಮುಂದಿಟ್ಟಿತ್ತು.
ದಶಕಗಟ್ಟಲೆ ಒಂದೇ ಪಡಿಯಚ್ಚಿಗೆ ಪಕ್ಕಾದ ಚಿಂತನಾ ಕ್ರಮದ ಬೇರುಗಳನ್ನು ಕಡಿದು ಹಾಕುವುದು ಅಷ್ಟು ಸುಲಭವಲ್ಲ, ಅದಕ್ಕೂ ನಿರಂತರ ಪ್ರಯೋಗಶೀಲತೆ, ಮನವರಿಕೆ ಮುಖ್ಯವಾಗಿ ಅಽಕಾರ ಬೇಕು. ಅದಾಗದೆ ತಮ್ಮ ಪ್ರಯತ್ನ ವೈ-ಲ್ಯ ಕಂಡಿತು ಎಂಬ ಬೇಸರ ಅವರಿಗಿತ್ತಾದರೂ ಹೊಸದೊಂದು ಸುಧಾರಣೆಗೆ ನಾಂದಿ ಹಾಡಿದ ತೃಪ್ತಿಯೂ ಅವರಲ್ಲಿತ್ತು. ಮೊದಲ ಬಾರಿ ನಾಗೇಶ್ ಗೆದ್ದಾಗ ಇದ್ದ ಅವರ ಮನಸ್ಥಿತಿಗೂ ನಂತರದ ಅವರ ರಾಜಕೀಯ ಕುರಿತಾದ ನಿಲುವುಗಳಿಗೂ ಭಾರೀ ವ್ಯತ್ಯಾಸವಿತ್ತು. ಮೊದಲ ಅವಧಿಯಲ್ಲಿ ಅವರು ಈ ಸಾಂಪ್ರದಾಯಿಕ ಹಾಗೂ ಪರಂಪರಾಗತ ಚುನಾವಣಾ ವ್ಯವಸ್ಥೆಗೆ ಒಗ್ಗಿದಂತೆ ಕಾಣುತ್ತಿದ್ದರು. ಅದು ಅವರ ಪಕ್ಷ ಸಂಘಟನೆಯ ಅನುಭವ, ಜೊತೆಗೆ ಅವರ ತಂದೆಯವರ ರಾಜಕೀಯ ಅನುಭವದ ಫಲವೂ ಇರಬಹುದು.
ಆದರೆ ಎರಡನೇ ಭಾರಿ ಅವರು ಶಾಸಕರಾಗಿ ಆಯ್ಕೆಯಾದ ಮೇಲೆ ಈ ಚುನಾವಣೆ ವ್ಯವಸ್ಥೆಯ ಬಗ್ಗೆ ಅವರಿಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದವು. ಯಾವುದೇ ಪಕ್ಷ ಇರಲಿ, ಹಣ, ಹೆಂಡ, ಆಮಿಷಗಳ ಮೇಲೆ ಚುನಾವಣೆ ನಡೆಸಬಾರದು. ಅದು ಮುಕ್ತವಾಗಿರಬೇಕು, ಎಲ್ಲರಿಗೆ ಅವಕಾಶ ಸಿಗಬೇಕು. ಬೇರೆ ದೇಶಗಳಲ್ಲಿ ನಡೆಯುವಂತೆ ಅಭಿವೃದ್ಧಿ ಯೋಜನೆಗಳ ಕುರಿತು ಪಕ್ಷ, ಪಕ್ಷಗಳ ನಡುವೆ ಸಾರ್ವಜನಿಕ ಚರ್ಚೆ ಆಗಬೇಕು. ದುರದೃಷ್ಟವೆಂದರೆ ನಮ್ಮ ಅಭಿವೃದ್ಧಿ ಮಾದರಿಗಳೂ ವಿದೇಶಿ ಸಿದ್ಧಾಂತಗಳ ಮೇಲೇ ರೂಪಿತಗೊಂಡಿವೆ. ಅವು ಭಾರತದಂತಹ ದೇಶದ ಆತ್ಮನಿರ್ಭರ ಮಾರ್ಗಗಳಿಗೆ ಅನುಗುಣ ವಾಗಿ ರೂಪಿತವಾಗಬೇಕು ಎನ್ನುತ್ತಿದ್ದರು. ಚುನಾವಣೆಗೆ ಕೋಟಿ ಕೋಟಿ ಖರ್ಚು ಮಾಡುವುದ ರಿಂದಲೇ ಅದನ್ನು ವಾಪಸ್ ಪಡೆಯಲು ವಾಮಮಾರ್ಗಗಳನ್ನು ಹುಡುಕುವುದು ಅನಿವಾರ್ಯ ವಾಗುತ್ತದೆ.
ಇಲ್ಲಿ ನಾಯಕನೊಬ್ಬ ರಾಜಕೀಯ ವನ್ನೇ ವೃತ್ತಿಯಾಗಿಟ್ಟುಕೊಂಡ ಹಲವರನ್ನು ಸಾಕಬೇಕು. ಅದಕ್ಕಾಗಿ ಅವನು ಭ್ರಷ್ಟಮಾರ್ಗ ತುಳಿಯುವಂತೆ ವ್ಯವಸ್ಥೆಯೇ ಪ್ರೇರೇಪಿಸು ತ್ತದೆ. ಇದು ನಿಲ್ಲಬೇಕು. ಕಾರ್ಯಕರ್ತರೂ ತಮ್ಮದೇ ವೃತ್ತಿ ಹೊಂದಿದ್ದು ಆದಾಯದ ಮೂಲ ಹೊಂದಿರಬೇಕು. ಅವರಿಗೆ ಪಕ್ಷ ಮತ್ತು ರಾಜಕೀಯ ಒಂದು ಉದಾತ್ತ ಸಾಧನೆಯ ಮಾರ್ಗವಾ ಗಿರಬೇಕು. ಈಗಿರುವಂತೆ ವ್ಯಕ್ತಿ ಮತ್ತು ಅಧಿಕಾರ ಕೇಂದ್ರಿ ತವಾಗಿರಬಾರದು. ಈ ಕಾರಣಕ್ಕಾಗಿಯೇ ನನಗೆ ಆರ್‌ಎಸ್‌ಎಸ್ ಇಷ್ಟವಾಗಿದ್ದು.
ಅಲ್ಲಿ ವ್ಯಕ್ತಿಪೂಜೆಯೂ ಇಲ್ಲ, ಅಧಿಕಾರ ಕೇಂದ್ರಗಳೂ ಇಲ್ಲ ಎನ್ನುತ್ತಿದ್ದರು. ವಾಟ್ಸ್ಯಾಪ್, ಇನ್‌ಸ್ಟಾಗ್ರಾಂ ಯಾವುದೂ ಇಷ್ಟು ಪ್ರಭಾವಶಾಲಿಯಾಗಿಲ್ಲದ ಕೆಲವರ್ಷಗಳ ಹಿಂದೆಯೂ ಅವರು ಯುವಕರು ದೇಶದ ಬಗ್ಗೆ ಯೋಚಿಸಬೇಕು, ರಾಜಕೀಯದ ಸುಧಾರ ಣೆಗಳ ಬಗ್ಗೆ ಯೋಚಿಸಬೇಕು. ಹಳ್ಳಿಗಳಲ್ಲಿ ಯುವಕ ಸಂಘಗಳೇ ಮರೆಯಾಗಿವೆ. ಯುವಕ ಮಂಡಲಗಳು ಪುನಶ್ಚೇತನಗೊಳ್ಳಬೇಕು, ಸರಕಾರ ಸಂಘಕ್ಕೆ ವಾರ್ಷಿಕ ಒಂದು ಅನುದಾನ ನಿಗದಿಪಡಿಸಿ ಅವರನ್ನು ಅಭಿವೃದ್ಧಿ ಚಟುವಟಿಕೆ ಗಳಲ್ಲಿ ತೊಡಗಿಸಬೇಕು ಎಂಬ ಆಶಯ ಆವರದಾಗಿತ್ತು.
ಇದೇ ಮಾದರಿಯೇ ಈಗ ನಮ್ಮ ಮುಖ್ಯ ಮಂತ್ರಿಗಳ ಭಾರತ್ ಜೋಡೋ ಯುವ ಸಂಘದ ಪರಿಕಲ್ಪನೆ. ಈ ನಾಡಿನಲ್ಲಿ ಕಡಿದಾಳ್ ಮಂಜಪ್ಪ, ಎಸ್. ನಿಜಲಿಂಗಪ್ಪ, ಶಾಂತವೇರಿ ಗೋಪಾಲಗೌಡ ಮೊದಲಾದ ಹಲವು ಪ್ರಾಮಾಣಿಕ ರಾಜಕಾರಣಿಗಳು ಪ್ರಾತಃಸ್ಮರಣೀಯರಾಗಿದ್ದಾರೆ. ತುಮಕೂರು ಜಿಲ್ಲೆಯ ದಿ. ಎಂ.ಎನ್. ರಾಮಣ್ಣ ಸಹ ಅವರಲ್ಲೊಬ್ಬರು. ಈ ಪಂಕ್ತಿಗೆ ಬಿ.ಸಿ.ನಾಗೇಶ್ ಕೂಡ ಸೇರಿದ್ದಾರೆ. ಅವರ ಸರಳತೆ, ಸಜ್ಜನಿಕೆ, ನಿಷ್ಠುರ ವ್ಯಕ್ತಿತ್ವ, ಪ್ರಾಮಾಣಿಕತೆ ಎಲ್ಲಾ ಕಾಲಕ್ಕೂ ಮಾದರಿ.