ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayaka V Bhat Column: ಬರ್ಲಿನ್‌ ಶಾಲೆಯಲ್ಲಿ ಮತ್ತದೇ ರಾಗಾಲಾಪ !

ವಿರೋಧ ಪಕ್ಷದ ನಾಯಕನೊಬ್ಬ ವಿದೇಶಿ ನೆಲದಲ್ಲಿ ನಿಂತು ಪದೇ ಪದೆ ತನ್ನದೇ ದೇಶದ ವ್ಯವಸ್ಥೆಗಳ ವಿರುದ್ಧ ಮಾತನಾಡುವುದನ್ನು ನೋಡುವಾಗ, ಇವರಿಗೆ ವಿದೇಶಿ ನಾಯಕ ನೊಂದಿಗೆ ಸಂವಾದಕ್ಕೆ ಅವಕಾಶ ಮಾಡಿಕೊಟ್ಟರೆ, ಅಲ್ಲೂ ಈತ ತನ್ನ ದೇಶದ ಸರಕಾರದ ವಿರುದ್ಧವೇ ಮಾತನಾಡಿ ದೇಶಕ್ಕೆ ಮುಜುಗುರ ಉಂಟು ಮಾಡುತ್ತಿದ್ದರೇನೋ ಅಂತ ಈಗ ಅನಿಸುತ್ತಿದೆ.

Vinayaka V Bhat Column: ಬರ್ಲಿನ್‌ ಶಾಲೆಯಲ್ಲಿ ಮತ್ತದೇ ರಾಗಾಲಾಪ !

-

ವಿದ್ಯಮಾನ

ರಾಹುಲ್ ಗಾಂಧಿ ವಿದೇಶಕ್ಕೆ ಹೋಗುವುದು ಅಪರಾಧವಲ್ಲ, ಆದರೆ ಹಾಗೆ ತೆರಳಿ ದಾಗೆಲ್ಲ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ದುರ್ಬಲಗೊಳಿಸುವ ರೀತಿಯಲ್ಲಿ ಮಾತನಾಡುವ ವ್ಯಕ್ತಿಗಳನ್ನು ಭೇಟಿ ಮಾಡಲು ಏಕೆ ಆಯ್ಕೆ ಮಾಡು ತ್ತಾರೆ ಎನ್ನುವುದನ್ನು ಸ್ಪಷ್ಟಪಡಿಸಲಿ; ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಇಂಥ ಭಾರತ ವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸುವ ಮೂಲಕ ಭಾರತದ ವಿರುದ್ಧ ಪಿತೂರಿ ನಡೆಸುತ್ತಿರುವಂತೆ ಭಾಸವಾಗುತ್ತಿದೆ ಎನ್ನುತ್ತಿದ್ದಾರೆ ಬಿಜೆಪಿ ನಾಯಕರು.

ದೆಹಲಿಯಲ್ಲಿ ಮತಗಳ್ಳತನದ ಹೋರಾಟಕ್ಕೆ ಮಂಗಳ ಹಾಡಿ, ‘ಮನ್ರೇಗಾ’ ಯೋಜನೆಯ ಹೆಸರು ಬದಲಾವಣೆಯ ಹೋರಾಟಕ್ಕೆ ನಾಂದಿ ಹಾಡಿ, ಕರ್ನಾಟಕದ ಅಧಿಕಾರ ಹಸ್ತಾಂತರದ ವಿಷಯವನ್ನು ಅಡ್ಡಗೋಡೆಯ ಮೇಲಿಟ್ಟು, ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿರುವಾಗಲೇ ವಿರೋಧಪಕ್ಷದ ನಾಯಕರು ಜರ್ಮನಿಯ ಪ್ರವಾಸಕ್ಕೆ ತೆರಳಿದ್ದರು. ರಾಹುಲ್ ಗಾಂಧಿ ತಮ್ಮ ವಿದೇಶ ಪ್ರವಾಸದ ಸಂದರ್ಭದಲ್ಲಿ ಭಾರತದ ತನಿಖಾ ಸಂಸ್ಥೆಗಳು, ಚುನಾವಣಾ ಆಯೋಗ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ದುರವಸ್ಥೆಯನ್ನು ಮತ್ತೆ ದೂಷಿಸಿದ್ದಾರೆ.

ಅವರು ಹೀಗೆ ವಿದೇಶದಲ್ಲಿ ಭಾರತದ ಆಡಳಿತ ವ್ಯವಸ್ಥೆಯನ್ನು ದೂಷಿಸುವುದು ಇದೇನು ಮೊದಲ ಬಾರಿಯಲ್ಲ. ಹಿಂದೆಯೂ ಮಾಡಿದ್ದಾರೆ, ಈಗಲೂ ಅದರ ಪುನರಾವರ್ತನೆ ಯಾಗಿದೆ ಅಷ್ಟೇ. ಅದರೆ ಈ ಬಾರಿ ಅವರ ಭಾಷಣ ಅಸ್ಖಲಿತವಾಗಿತ್ತು, ಉತ್ತಮ ಇಂಗ್ಲಿಷ್‌ನ ಪ್ರದರ್ಶನವಿತ್ತು, ಉದ್ವೇಗವಿರಲಿಲ್ಲ ಎನ್ನುವುದು ಗಮನಿಸಬಹುದಾದ ಅಂಶವಾಗಿತ್ತು.

ಮೊನ್ನೆ ರಷ್ಯಾ ಅಧ್ಯಕ್ಷ ಪುಟಿನ್ ಅವರ ಭಾರತದ ಭೇಟಿಯ ಸಂದರ್ಭದಲ್ಲಿ, ವಿರೋಧ ಪಕ್ಷದ ನಾಯಕನಿಗೆ ವಿದೇಶಿ ನಾಯಕನೊಂದಿಗೆ ಸಂವಾದಕ್ಕೆ ಸರಕಾರ ಅವಕಾಶ ಮಾಡಿ ಕೊಟ್ಟಿಲ್ಲ, ಈ ಮೂಲಕ, ವಿದೇಶಿ ಗಣ್ಯರು ಭಾರತಕ್ಕೆ ಬಂದಾಗ ವಿರೋಧ ಪಕ್ಷದ ನಾಯಕ ರಿಗೂ ಭೇಟಿಗೆ ಅವಕಾಶ ನೀಡುವ, ಅನಾದಿಯಿಂದ ಇದ್ದ ಒಂದು ಒಳ್ಳೆಯ ಸಂಪ್ರದಾಯಕ್ಕೆ ಬಿಜೆಪಿ ಸರಕಾರ ಕೊಡಲಿಯೇಟು ಕೊಟ್ಟಿದೆ ಎಂದು ಕಾಂಗ್ರೆಸ್ ದೂರಿತ್ತು. ಹೌದಲ್ವಾ? ಸರಕಾರ ಅವಕಾಶ ಮಾಡಿಕೊಡಬೇಕಿತ್ತು ಎಂದು ಆಗ ನಮಗೂ ಅನಿಸಿತ್ತು.

ಇದನ್ನೂ ಓದಿ:Vinayak V Bhat Column: ವಾಹ್‌ ವಾಹ್‌ ಜೀ ರಾಮ್‌ ಜೀ...ಸಬ್ʼಕೋ ಸನ್ಮತಿ ದೇದೋಜಿ

ವಿರೋಧ ಪಕ್ಷದ ನಾಯಕನೊಬ್ಬ ವಿದೇಶಿ ನೆಲದಲ್ಲಿ ನಿಂತು ಪದೇ ಪದೆ ತನ್ನದೇ ದೇಶದ ವ್ಯವಸ್ಥೆಗಳ ವಿರುದ್ಧ ಮಾತನಾಡುವುದನ್ನು ನೋಡುವಾಗ, ಇವರಿಗೆ ವಿದೇಶಿ ನಾಯಕ ನೊಂದಿಗೆ ಸಂವಾದಕ್ಕೆ ಅವಕಾಶ ಮಾಡಿಕೊಟ್ಟರೆ, ಅಲ್ಲೂ ಈತ ತನ್ನ ದೇಶದ ಸರಕಾರದ ವಿರುದ್ಧವೇ ಮಾತನಾಡಿ ದೇಶಕ್ಕೆ ಮುಜುಗುರ ಉಂಟು ಮಾಡುತ್ತಿದ್ದರೇನೋ ಅಂತ ಈಗ ಅನಿಸುತ್ತಿದೆ.

ಈ ಕಾರಣಕ್ಕಾಗಿಯೇ ಇರಬೇಕು, ಸರಕಾರ ಇಂಥವರನ್ನು ಎಲ್ಲಿಡಬೇಕೋ ಅಲ್ಲಿಟ್ಟಿದ್ದು. ತಾವೇ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳಲು ಕೇಂದ್ರ ಸರಕಾರದಲ್ಲಿರುವವರೇನು ಮೂರ್ಖರೇ? ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಪಕ್ಷದ ‘ಪ್ರಬುದ್ಧ ಯುವನಾಯಕ’ ರಾಹುಲ್ ಗಾಂಧಿ ಅವರು ಕಳೆದ ಸೋಮವಾರ ಜರ್ಮನಿಯ ಬರ್ಲಿನ್ʼ ನಲ್ಲಿರುವ ಹರ್ಟಿ ವಿದ್ಯಾಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ. ಭಾರತದಲ್ಲಿ ನಡೆದಿದೆ ಎನ್ನಲಾಗುತ್ತಿರುವ ‘ಮತ ಕಳ್ಳತನ’ದ ಕುರಿತು ಹೇಳಿಕೆ ನೀಡಿರುವುದು ಭಾರತದಲ್ಲಿ ವಿವಾದಕ್ಕೆ ಕಾರಣವಾಗಿದೆ.

ಭಾರತದ ಸಾಂಸ್ಥಿಕ ಚೌಕಟ್ಟಿನ ಮೇಲೆ ಸರಕಾರದಿಂದ ನಿರಂತರವಾಗಿ ಪೂರ್ಣಪ್ರಮಾಣದ ದಾಳಿ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಬಿಜೆಪಿ ನೇತೃತ್ವದ ಸರಕಾರದ ಅವಧಿ ಯಲ್ಲಿ ನಡೆದ ಚುನಾವಣೆಗಳಲ್ಲಿನ ಅಕ್ರಮಗಳ ಬಗ್ಗೆ ತಮ್ಮ ಆರೋಪಗಳನ್ನು ಅವರು ಅಲ್ಲಿಯೂ ಪುನರಾವರ್ತಿಸಿದರು.

ಕಾಂಗ್ರೆಸ್ ಪಕ್ಷವು ಭಾರತದ ಚುನಾವಣಾ ಆಯೋಗದ ಪ್ರಾಮಾಣಿಕತೆಯ ಬಗ್ಗೆ ಪದೇ ಪದೆ ಕಳವಳ ವ್ಯಕ್ತಪಡಿಸುತ್ತಿದ್ದರೂ ಅತ್ತಕಡೆಯಿಂದ ಪ್ರತಿಕ್ರಿಯೆ ಮಾತ್ರ ಬರುತ್ತಿಲ್ಲ ಎಂದು ಅವರು ಹೇಳಿದರು. ಮೂಲಭೂತವಾಗಿ, ಭಾರತೀಯರೆಲ್ಲ ಸಮಾನರು ಎಂದು ಬಿಜೆಪಿಗರು ನಂಬುವುದಿಲ್ಲ, ಆಡಳಿತ ಪಕ್ಷವು ದಲಿತರು ಮತ್ತು ಮೇಲ್ಜಾತಿಯ ನಾಗರಿಕರನ್ನು ಸಮಾನ ವಾಗಿ ನೋಡುವುದಿಲ್ಲ ಎಂದು ಹೇಳಿದ ರಾಹುಲ್ ಗಾಂಧಿ, ಈ ದೃಷ್ಟಿಕೋನವು ದೋಷ ಪೂರಿತವಾಗಿದೆ ಮತ್ತು ದೇಶದಲ್ಲಿ ಗಂಭೀರವಾದ ಸಾಮಾಜಿಕ ಉದ್ವಿಗ್ನತೆಯನ್ನು ಸೃಷ್ಟಿಸುವ ಅಪಾಯವಿದೆ ಎಂದು ಹೇಳಿದರು.

RG

ತನಿಖಾ ಸಂಸ್ಥೆಗಳನ್ನು ಕೇಂದ್ರ ಸರಕಾರ ಆಯುಧವನ್ನಾಗಿ ಮಾಡಿಕೊಂಡಿದೆ, ನಮ್ಮ ಗುಪ್ತಚರ ಸಂಸ್ಥೆಗಳಾದ ‘ಇ.ಡಿ’ ಮತ್ತು ಸಿಬಿಐಗಳನ್ನು ವಿರೋಧಪಕ್ಷಗಳ ವಿರುದ್ಧ ಶಸ್ತ್ರಾಸ್ತ್ರವಾಗಿ ಬಳಸಲಾಗುತ್ತಿದೆ, ಈ ಸಂಸ್ಥೆಗಳಿಂದ ಬಿಜೆಪಿ ವಿರುದ್ಧ ಒಂದೂ ಪ್ರಕರಣ ದಾಖಲಾಗುವುದಿಲ್ಲ; ಆದರೆ ಹೆಚ್ಚಿನ ಪ್ರಕರಣಗಳು ಅವರನ್ನು ರಾಜಕೀಯವಾಗಿ ವಿರೋಧಿ ಸುವವರ ವಿರುದ್ಧವಾಗಿ ಮಾತ್ರ ದಾಖಲಾಗುತ್ತವೆ, ಕಾಂಗ್ರೆಸ್ ಅನ್ನು ಬೆಂಬಲಿಸುವ ಉದ್ಯಮಿ ಗಳು ಇಂದು ಸರಕಾರದಿಂದ ಬೆದರಿಕೆಯನ್ನು ಎದುರಿಸುತ್ತಿದ್ದಾರೆ, ಇದು ದೇಶದ ಪ್ರಜಾ ಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿ ಎನ್ನುವುದು ರಾಹುಲ್ ಗಾಂಧಿಯವರ ದೂರು.

ಒಬ್ಬ ವ್ಯಕ್ತಿಯ ಇಚ್ಛೆಗೆ ಅನುಗುಣವಾಗಿ ಭಾರತವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದು ನಂಬುವ ಲಕ್ಷಾಂತರ ಜನ ದೇಶದಲ್ಲಿ ಇನ್ನೂ ಇದ್ದಾರೆ, ರಾಜ್ಯ ರಾಜ್ಯಗಳ ನಡುವಿನ ಸಂವಾದದ ಮೂಲಕ ದೇಶ ಕಾರ್ಯನಿರ್ವಹಿಸುವ ಮಾದರಿಯ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಪ್ರಧಾನಿ ಮೋದಿಯವರನ್ನು ಇಂದು ಭಾರತದಲ್ಲಿನ ಜನರು ಬೆಂಬಲಿಸುತ್ತಿದ್ದಾರೆ ಎನ್ನುವುದು ನಿಜವಾದರೂ, ಅವರ ಸಿದ್ಧಾಂತ ಮತ್ತು ದೇಶದ ಕುರಿತ ದೃಷ್ಟಿಕೋನವನ್ನು ಒಪ್ಪದ ದೊಡ್ಡ ವರ್ಗವೂ ದೇಶದಲ್ಲಿದೆ. ಭಾರತದಲ್ಲಿ ಉತ್ಪಾದನೆ ಹೆಚ್ಚಳ ಮಾಡಿದರೆ ಉದ್ಯೋಗ ಹೆಚ್ಚಿಸಬಹುದು. ಆದರೆ ಬಿಜೆಪಿಯು ಅದಾನಿ, ಅಂಬಾನಿಗಳ ಕೈಗೆ ಅಧಿಕಾರ ನೀಡಿದೆ.

ಭಾರತದಲ್ಲಿ, ಅಂಬಾನಿ ಅಥವಾ ಅದಾನಿ ಮುಂತಾದ ಉದ್ದಿಮೆದಾರರು ಉತ್ಪಾದಕತೆ ಯಲ್ಲಿ ತೊಡಗದೇ ಹೆಚ್ಚಿನವರು ಕೇವಲ ಚೀನಿ ಉತ್ಪನ್ನಗಳನ್ನು ಮಾರಾಟ ಮಾಡು ತ್ತಿದ್ದಾರೆ, ಹಾಗಾಗಿ ಭಾರತದ ಉದ್ಯೋಗ ಮಾರುಕಟ್ಟೆ ಹದಗೆಟ್ಟಿದೆ ಎಂದು ನಮಗಿಂತ ಆರ್ಥಿಕ ಸ್ಥಿತಿಗತಿ ಹದಗೆಟ್ಟಿರುವ ಜರ್ಮನ್ನರ ಮುಂದೆ ರಾಹುಲ್ ಅಭಿಪ್ರಾಯ ಪಟ್ಟರು. ಈಗ ಇರುವ ಜಿಎಸ್‌ಟಿ ಸಂಪೂರ್ಣ ಉತ್ಪಾದಕ ಮತ್ತು ಗ್ರಾಹಕ ವರ್ಗದ ವಿರೋಧಿಯಾಗಿದೆ ಎಂದೂ ಟೀಕಿಸಿದರು.

‘ಕಾಂಗ್ರೆಸ್ ನಾಯಕ ವಿದೇಶಿ ನೆಲದಲ್ಲಿ ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲ ಗೊಳಿಸುತ್ತಿದ್ದಾರೆ’ ಎಂದು ಭಾರತೀಯ ಜನತಾ ಪಕ್ಷವು ಆರೋಪಿಸಿದೆ. ಅವರ ಹೇಳಿಕೆ ಗಳನ್ನು ಬೇಜವಾಬ್ದಾರಿಯುತ ಮತ್ತು ರಾಷ್ಟ್ರ ವಿರೋಧಿ ಎಂದು ಕರೆದಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕನಾಗಿ ಕಾರ್ಯನಿರ್ವಹಿಸುತ್ತಿಲ್ಲ, ಆದರೆ ದೇಶದ ವಿರುದ್ಧ ಮಾತನಾಡಲು ಆಗಾಗ ವಿದೇಶಕ್ಕೆ ಪ್ರಯಾಣಿಸುವ ‘ಭಾರತ ವಿರೋಧಿ ನಾಯಕ’ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹೀಗೆ ಮಾಡುವುದರಿಂದ ಆತ ಏನು ಗಳಿಸುವ ಗುರಿಯನ್ನು ಹೊಂದಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಅವರು ಈಗಲೂ ಚಿಕ್ಕ ಮಗುವಿನಂತೆ ವರ್ತಿಸುತ್ತಿದ್ದಾರೆಯೇ ಹೊರತು ಒಬ್ಬ ಗೌರವಾನ್ವಿತ ನಾಯಕನಂತೆ ಅಲ್ಲ ಎಂದು ಅದು ಹೇಳಿದೆ. ರಾಹುಲ್ ಗಾಂಧಿ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಹಾಳುಮಾಡಲು ಪ್ರಯತ್ನಿಸು ತ್ತಿದ್ದಾರೆ; ತಾವು ವಿರೋಧ ಪಕ್ಷದ ನಾಯಕ ಎನ್ನುವುದನ್ನು ಮರೆತು ಕೇವಲ ಪ್ರಚಾರ ನಾಯಕ ಎಂದು ತಿಳಿದಂತಿದೆ. ಅವರು ವಿದೇಶಕ್ಕೆ ಹೋದಾಗಲೆ ಪ್ರಧಾನಿ, ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಮತ ಕಳ್ಳತನದ ಬಗ್ಗೆ ಟೀಕಿಸುತ್ತಿರುವುದನ್ನು ನೋಡುವಾಗ, ಅವರ ಗುರಿ ಭಾರತವನ್ನು ಅವಮಾನಿಸುವುದು ಮಾತ್ರ ಅಂತ ತಿಳಿಯುತ್ತದೆ ಎನ್ನುವುದು ಬಿಜೆಪಿಗರ ಅಂಬೋಣ.

ರಾಹುಲ್ ಗಾಂಧಿ ವಿದೇಶಕ್ಕೆ ಹೋಗುವುದು ಅಪರಾಧವಲ್ಲ, ಆದರೆ ಭಾರತ ವಿರೋಧಿ ಕಾರ್ಯಸೂಚಿ ಹೊಂದಿರುವ ಜನರನ್ನು ಭೇಟಿ ಮಾಡುವುದು ಸರಿಯಲ್ಲ ಎನ್ನುವುದು ಬಿಜೆಪಿ ನಾಯಕರ ವಾದ. ರಾಹುಲ್ ಗಾಂಧಿ ಅವರ ಇತ್ತೀಚಿನ ಜರ್ಮನಿ ಪ್ರವಾಸದಲ್ಲಿ ರಾಜಕೀಯ ವಿಜ್ಞಾನಿ ಕಾರ್ನೆಲಿಯಾ ವೋಲ್‌ರನ್ನು ಭೇಟಿಯಾಗಿರುವುದನ್ನು ಅವರು ಪ್ರಶ್ನಿಸುತ್ತಾರೆ.

ಇವರು ಅಮೆರಿಕದ ಬಿಲಿಯನೇರ್ ಜಾರ್ಜ್ ಸೊರೊಸ್ ಅವರ ಓಪನ್ ಸೊಸೈಟಿ ಫೌಂಡೇ ಷನ್‌ನಿಂದ ಧನಸಹಾಯ ಪಡೆದಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಇಂಥ ಭಾರತ ವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸುವ ಮೂಲಕ ಭಾರತದ ವಿರುದ್ಧ ಪಿತೂರಿ ನಡೆಸುತ್ತಿರುವಂತೆ ಭಾಸವಾಗುತ್ತಿದೆ.

ರಾಹುಲ್ ಗಾಂಧಿ ವಿದೇಶಕ್ಕೆ ಭೇಟಿ ನೀಡಿದಾಗಲೆ, ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ದುರ್ಬಲಗೊಳಿಸುವ ರೀತಿಯಲ್ಲಿ ಮಾತನಾಡುವ ವ್ಯಕ್ತಿಗಳನ್ನು ಭೇಟಿ ಮಾಡಲು ಏಕೆ ಆಯ್ಕೆ ಮಾಡುತ್ತಾರೆ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಬಿಜೆಪಿ ನಾಯಕರು ಕೇಳುತ್ತಿದ್ದಾರೆ.

ಹೀಗೆ ವಿದೇಶದಲ್ಲಿ ನಿಂತು ತನ್ನದೇ ದೇಶದ ವಿರುದ್ಧ ಮಾತನಾಡುವುದರಿಂದ ರಾಹುಲ್ ಗಾಂಧಿ ಹಾಗೂ ಅವರ ಪಕ್ಷ ಗಳಿಸುವುದಾದರೂ ಏನು ಎನ್ನುವುದನ್ನು ಅವರೇ ಹೇಳಬೇಕು. ಬರ್ಲಿನ್ ವಿದ್ಯಾರ್ಥಿಗಳ ಮುಂದೆ ಅಳಲು ತೋಡಿಕೊಂಡರೆ, ಭಾರತದ ಉದ್ಧಾರಕ್ಕೆ ಯಾವ ಕಾಣಿಕೆಯನ್ನು ಅವರು ಹೇಗೆ ನೀಡಬಲ್ಲರೋ? ಇದನ್ನು ರಾಹುಲ್ ಗಾಂಧಿಯವರೇ ಹೇಳಬೇಕು.

ದೇಶದ ಮತದಾರರ ವಿಶ್ವಾಸ ಗಳಿಸಲು ಸಾಧ್ಯವಾಗದೇ, ಭವಿಷ್ಯದ ಚುನಾವಣೆಗಳಲ್ಲಿಯೂ ತಮ್ಮ ಪಕ್ಷ ಗೆಲ್ಲುವುದು ಸಾಧ್ಯವೇ ಇಲ್ಲ ಎಂದು ಮನದಟ್ಟಾದವರು ಮಾತ್ರ ಹೀಗೆಲ್ಲ ಮಾಡಲು ಸಾಧ್ಯ. ಅದಲ್ಲದಿದ್ದರೆ, ವಿದೇಶದಲ್ಲಿ ಭಾರತವನ್ನು ತೆಗಳುವ ಚಾಳಿಯಿಂದ ಸ್ವತಃ ರಾಹುಲ್ ಗಾಂಧಿ ಅಥವಾ ಅವರ ಪಕ್ಷ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು ಎನ್ನುವುದು ಪಕ್ಷದಲ್ಲಿ ಯಾರಿಗೂ ಅರ್ಥವಾಗದಿರುವುದು ಚೋದ್ಯದ ಸಂಗತಿಯಾಗಿದೆ.

‘ಚೌಕೀದಾರ್ ಚೋರ್ ಹೈ’ ಆಯ್ತು, ಆಮೇಲೆ ಅಂಬಾನಿ-ಅದಾನಿಯಗಳ ವಿಷಯವಾಯ್ತು, ವೋಟ್ ಚೋರಿಯ ಪ್ರಹಸನವಾಯ್ತು, ಈಗ ‘ಮನ್ರೇಗಾ’ ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರು ಕೈಬಿಟ್ಟಿದ್ದಕ್ಕೆ ಕ್ಯಾತೆ ಶುರುವಾಗಿದೆ. ಅಂತೂ ಮೇಲೆ ತಿಳಿಸಿದ ಯಾವ ವಿಷಯವನ್ನೂ ನ್ಯಾಯಾಲಯ ಮುಂತಾದ ಸಾಂವಿಧಾನಿಕ ವ್ಯವಸ್ಥೆಯನ್ನು ಬಳಸಿ ಕೊಂಡು ಒಂದು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋದ ಉದಾಹರಣೆಯೇ ಇಲ್ಲ.

ಬರೀ ಮಾತು, ಮಾತು, ಮಾತು. ಒಂದು ಕಡೆ ರಾಹುಲ್ ಗಾಂಧಿ ವಿದೇಶಗಳಿಗೆ ಹೋಗುವುದು, ಭಾರತ ವಿರೋಧಿ ಭಾಷಣ ಮಾಡುವುದು, ಭಾರತದ ಪ್ರಧಾನಮಂತ್ರಿ ಮೋದಿಯವರನ್ನು ಹಳಿಯುವುದು ಮಾಡುತ್ತಿದ್ದರೆ, ಇನ್ನೊಂದು ಕಡೆ ಅದೇ ದೇಶದ ಸರಕಾರಗಳು ಮೋದಿ ಯವರನ್ನು ಕರೆಸಿಕೊಂಡು ದೇಶದ ಅತ್ಯುನ್ನತ ಗೌರವಪ್ರಶಸ್ತಿಯನ್ನು ಕೊಡುವುದು ನಡೆದೇ ಇದೆ. ದೇಶದ ಹಾಗೂ ಪ್ರಧಾನ ಮಂತ್ರಿಗಳ ವರ್ಚಸ್ಸಿಗೆ ಎಳ್ಳುಕಾಳಿನಷ್ಟೂ ಧಕ್ಕೆ ಯಾಗಿಲ್ಲ.

ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ವಿರೋಧ ಪಕ್ಷದ ನಾಯಕರು ವಿದೇಶ ಪ್ರವಾಸ ಮಾಡಿದ್ದಿದೆ. ಆಗೆಲ್ಲ, ಅವರು ಭಾರತದಲ್ಲಿ ಕೇಂದ್ರ ಸರಕಾರ ವಿರೋಧಪಕ್ಷಗಳ ಎಷ್ಟು ಸರಕಾರಗಳನ್ನು ಅಸಾಂವಿಧಾನಿಕವಾಗಿ ಬೀಳಿಸಿದೆ, ತುರ್ತುಪರಿಸ್ಥಿತಿಯಲ್ಲಿ ವಿರೋಧ ಪಕ್ಷದವರನ್ನು ಹಾಗೂ ಮಾಧ್ಯಮವನ್ನು ಎಷ್ಟು ಕೆಟ್ಟದಾಗಿ ನೋಡಿಕೊಳ್ಳಲಾಗಿದೆ, ಸರಕಾರದ ಮುಂದಾಳತ್ವದ ಸಿಖ್ಖರ ನರಮೇಧ ಹೇಗಾಯಿತು ಮುಂತಾದ ವಿಷಯವನ್ನು ಪ್ರಸ್ತಾಪಿಸಿದ್ದಾರೆಯೇ? ಈ ಹುಳುಕುಗಳನ್ನೆಲ್ಲ ದೇಶದ ಜನರ ಮುಂದೆ ತಂದು ಚುನಾವಣೆ ಗಳಲ್ಲಿ ಹೋರಾಡಿದ್ದಾರೆಯೇ ಹೊರತು ವಿದೇಶಿ ನೆಲದಲ್ಲಿ ನಿಂತು ಭಾರತವನ್ನು ಜರಿಯುವ ಕೆಲಸ ಮಾಡಿರಲಿಲ್ಲ.

ವಿರೋಧ ಪಕ್ಷದ ನಾಯಕನಿಗೆ ಹೆಚ್ಚಿನ ಜವಾಬ್ದಾರಿ ಇರಬೇಕಾಗುತ್ತದೆ. ಆತ ಸರಕಾರ ಮತ್ತು ವಿವಿಧ ವಿರೋಧ ಪಕ್ಷಗಳ ನಡುವಿನ ಸೇತುವೆಯಾಗಿ ಕೆಲಸ ಮಾಡಬೇಕಾಗುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ, ವಿರೋಧ ಪಕ್ಷದ ನಾಯಕನು ಸರಕಾರದ ಸವಲತ್ತು, ಸಂಬಳ ಹಾಗೂ ಇತರ ಸೌಲಭ್ಯಗಳನ್ನು ಬಳಸುತ್ತಿರುತ್ತಾನೆ. ಹೆಚ್ಚು ಕಡಿಮೆ ಸಂಪುಟ ದರ್ಜೆಯ ಸಚಿವರಿಗಿರುವ ಸವಲತ್ತುಗಳನ್ನು ಆತ ಅನುಭವಿಸುತ್ತಿರುತ್ತಾನೆ.

ಹಾಗಾಗಿ ಅವನ ಉತ್ತರದಾಯಿತ್ವ ಉಳಿದವರಿಗಿಂತ ಹೆಚ್ಚಾಗಿರುತ್ತದೆ. ಇವರು ಮಣಿಶಂಕರ್ ಅಯ್ಯರ್ ಅಥವಾ ದಿಗ್ವಿಜಯ್ ಸಿಂಗ್ ಮಾತಾಡಿದಂತೆ ದೇಶದ ಕುರಿತು ಹಗುರವಾಗಿ ಮಾತಾಡುವುದನ್ನು ಯಾರೂ ಒಪ್ಪುವುದಿಲ್ಲ. ನಮಗೊಂದೇ ಅಲ್ಲ, ಈ ಯಪ್ಪ ಯಾಕೆ ಪದೇ ಪದೆ ಹೀಗೆ ವಿದೇಶಿ ನೆಲದಲ್ಲಿ ನಿಂತು ಸ್ವದೇಶವನ್ನು ಜರಿದು, ತಮ್ಮ ಮರ್ಯಾದೆ ಯನ್ನು ಕಳೆದುಕೊಳ್ಳುವುದಷ್ಟೇ ಅಲ್ಲದೇ, ಪಕ್ಷದ ಮಾನವನ್ನೂ ಹರಾಜು ಹಾಕುತ್ತಾರೆ ಎಂದು ಅವರ ಪಕ್ಷದ ಪ್ರಜ್ಞಾವಂತರಿಗೂ ಅನಿಸಬಹುದು.

ಆದರೆ ಬಹಿರಂಗವಾಗಿ ಮಾತಾಡುವ ಹಾಗಿಲ್ಲ ಅಷ್ಟೆ. ರಾಹುಲ್ ಗಾಂಧಿ ಎಷ್ಟೇ ಕ್ಷುಲ್ಲಕ ವಾಗಿ ಮಾತಾಡಿದರೂ ಅದನ್ನು ಸಮರ್ಥನೆ ಮಾಡಿಕೊಂಡಿರುವವನಿಗೇ ಪಕ್ಷದಲ್ಲಿ ಮಣೆ ಎನ್ನುವುದನ್ನು ತಿಳಿದು ಸುಮ್ಮನಿರಬೇಕಷ್ಟೆ. ಬಿಹಾರ ಚುನಾವಣೆಯಲ್ಲಿನ ಘನಘೋರ ಸೋಲಿನ ನೈತಿಕ ಹೊಣೆ ಹೊರಿಸಿ ಪಕ್ಷದ ರಾಷ್ಟೀಯ ಅಧ್ಯಕ್ಷರ ರಾಜೀನಾಮೆ ಪಡೆಯ ಬಹುದು ಎಂದು ನಿರೀಕ್ಷಿಸಲಾಗಿತ್ತು.

ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ರಾಜೀನಾಮೆ ಕೊಟ್ಟು, ಅವರ ಜಾಗದಲ್ಲಿ ಪ್ರಿಯಾಂಕಾ ಗಾಂಧಿಯವರನ್ನು ತಂದು ಕುಳ್ಳಿರಿಸಲಾಗುವುದು ಎನ್ನುವ ಮಾತೂ ಓಡಾಡು ತ್ತಿತ್ತು. ಆದರೆ ಅದಾವುದೂ ಆಗಲಿಲ್ಲ. ಬಿಹಾರದಲ್ಲಿ ಚುನಾವಣೆಗಿಂತ ಮೊದಲೇ ಕಾಂಗ್ರೆಸ್ ಸೋಲೊಪ್ಪಿಕೊಂಡಾಗಿತ್ತು, ಹಾಗಾಗಿಯೇ ಸೋಲಿನ ಕಾರಣ ಹುಡುಕುವ ಆತ್ಮವಿಮರ್ಶೆಯ ಸಭೆಯನ್ನು ಕಾಂಗ್ರೆಸ್ ಕಾಟಾಚಾರಕ್ಕೂ ಮಾಡಿದಂತಿಲ್ಲ.

ವಿಮರ್ಶೆ ಮಾಡುವುದಾದರೆ, ಬಿಹಾರದ ಸೋಲಿಗಲ್ಲ, ಒಂದಾದಮೇಲೆ ಒಂದು ರಾಜ್ಯಗಳ ಚುನಾವಣೆಗಳಲ್ಲಿ ಪಕ್ಷ ಮಕಾಡೆ ಮಲಗುತ್ತಿದ್ದರೂ, ಕಳೆದ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಅಷ್ಟು ಸ್ಥಾನಗಳು ತಮಗೆ ಹೇಗೆ ಬಂತು ಎನ್ನುವುದನ್ನು ತಿಳಿಯಲು ಜಿಜ್ಞಾಸೆ ಮಾಡುವುದೊಳಿತು ಎಂದು ವಿರೋಧಪಕ್ಷಗಳು ಲೇವಡಿ ಮಾಡಿರುವುದೂ ಇದೆ.

ಅದೂ ನಿಜವೇ! ಲೋಕಸಭಾ ಚುನಾವಣೆಯಲ್ಲಿ ನೂರು ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದ್ದು ಹೇಗೆ ಎನ್ನುವುದು ವಿಮರ್ಶಕರಿಗೆ ಇನ್ನೂ ಒಗಟಾಗೇ ಉಳಿದಿದೆ. ಕಾಂಗ್ರೆಸ್ ಪಕ್ಷವು, ಕರ್ನಾಟಕವನ್ನೂ ಸೇರಿ ಅಧಿಕಾರದಲ್ಲಿರುವುದೇ ಮೂರು ರಾಜ್ಯಗಳಲ್ಲಿ, ಅಲ್ಲೂ ಸರಕಾರ ಗಳು ಗ್ಯಾರಂಟಿಗಳ ಭಾರದಿಂದ ಬಸವಳಿದು ನಿಂತಿವೆ.

ಅನೇಕ ಪ್ರತಿಭಾವಂತ ಯುವನಾಯಕರು ಪಕ್ಷವನ್ನು ತೊರೆದು ಹೋಗಿಯಾಗಿದೆ, ಇನ್ನೊಂದಷ್ಟು ಜನ ಹೊರಹೋಗುವ ತಯಾರಿಯಲ್ಲಿದ್ದಾರೆ. ದಶಕಗಳಿಂದ ಬೇರೆ ಪಕ್ಷಗಳಿಂದ ಪ್ರಭಾವಿ ನಾಯಕರು ಕಾಂಗ್ರೆಸ್ಸನ್ನು ಸೇರಿರುವ ವರ್ತಮಾನವಿಲ್ಲ. ಮೂರು ಮತ್ತೊಬ್ಬರು ಸೇರಿ ಪಕ್ಷ ನಡೆಸುವಲ್ಲಿ ಹರಸಾಹಸ ಪಡುತ್ತಿರುವ ಈ ಹೊತ್ತಿನಲ್ಲಿ ಕಾಂಗ್ರೆಸ್ ಇರುವಾಗ, ರಾಹುಲ್ ಗಾಂಧಿಯವರು ಭಾರತದ ಸ್ಥಿತಿಗತಿಗಳ ಬಗ್ಗೆ ಜರ್ಮನ್ನರಿಗೆ ಪಾಠ ಮಾಡುತ್ತಿರುವುದು ನೋಡಿದರೆ, ‘ತಿನ್ನುವುದು ಬದನೇಕಾಯಿಯಾದರೂ ಹೇಳುವುದು ಮಾತ್ರ ಪುರಾಣ’ ಎನ್ನುವ ನಾಣ್ಣುಡಿ ನೆನಪಾಗುತ್ತಿದೆ...!!