ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಗಡಿಗಳು: ಪ್ರಕೃತಿಯ ಸೃಷ್ಟಿಯಲ್ಲ, ಮನುಷ್ಯನ ಸ್ವಾರ್ಥದ ರೇಖೆಗಳು

ಬ್ರಿಟಿಷರು ಅಥವಾ ಇತರ ಸಾಮ್ರಾಜ್ಯಶಾಹಿಗಳು ಜಗತ್ತನ್ನು ಆಳುವಾಗ ಸ್ಥಳೀಯ ಸಂಸ್ಕೃತಿ, ಭಾಷೆ, ಭಾವನೆ ಅಥವಾ ಭೌಗೋಳಿಕ ವಾಸ್ತವಗಳನ್ನು ಪರಿಗಣಿಸದೇ ತಮಗಿಷ್ಟ ಬಂದಂತೆ ಗೆರೆಗಳನ್ನು ಎಳೆದರು. ಪರಿಣಾಮವಾಗಿ ಒಂದೇ ಸಮುದಾಯದ ಜನರು ಎರಡು ದೇಶಗಳಾಗಿ ಸೀಳಲ್ಪಟ್ಟರು. ಒಂದೇ ಮನೆ ಎರಡು ರಾಷ್ಟ್ರಗಳ ಮಧ್ಯೆ ಸಿಲುಕಿಕೊಂಡಿತು.

ಗಡಿಗಳು: ಪ್ರಕೃತಿಯ ಸೃಷ್ಟಿಯಲ್ಲ, ಮನುಷ್ಯನ ಸ್ವಾರ್ಥದ ರೇಖೆಗಳು

-

ಇದೇ ಅಂತರಂಗ ಸುದ್ದಿ

ಗಡಿಗಳೆಂಬುದು ಪ್ರಕೃತಿ ಸೃಷ್ಟಿಸಿದ್ದಲ್ಲ, ಮನುಷ್ಯ ತನ್ನ ರಾಜಕೀಯ ಸ್ವಾರ್ಥಕ್ಕಾಗಿ ನಕ್ಷೆಯ ಮೇಲೆ ಗೀಚಿದ ರೇಖೆಗಳು ಮಾತ್ರ. ನಾವು ಭೂಮಿಯ ಇತಿಹಾಸವನ್ನು ಗಮನಿಸಿದರೆ, ಪ್ರಕೃತಿಯು ನದಿ, ಪರ್ವತ, ಸಾಗರ ಮತ್ತು ಕಾಡುಗಳನ್ನು ಸೃಷ್ಟಿಸಿದೆಯೇ ಹೊರತು ಎಲ್ಲೂ ‘ದೇಶ’ ಎಂಬ ಚೌಕಟ್ಟು ಗಳನ್ನಾಗಲಿ ಅಥವಾ ಬಂದೂಕು ಹಿಡಿದು ಕಾಯುವ ಗಡಿಗಳನ್ನಾಗಲಿ ನಿರ್ಮಿಸಿಲ್ಲ. ಹಕ್ಕಿಗಳಿಗೆ, ಗಾಳಿಗೆ, ಹರಿಯುವ ನೀರಿಗೆ ಇಲ್ಲದ ಗಡಿಗಳು ಕೇವಲ ಮನುಷ್ಯನಿಗೆ ಮಾತ್ರ ಅನ್ವಯಿಸುತ್ತವೆ.

ನಕ್ಷೆಗಳ ಮೇಲೆ ಇಂದು ನಾವು ಕಾಣುವ ರೇಖೆಗಳು ಬಹುಪಾಲು ವಸಾಹತುಶಾಹಿ ಆಡಳಿತಗಾರರು, ಸರ್ವಾಧಿಕಾರಿಗಳು ಅಥವಾ ರಾಜಕಾರಣಿಗಳು ತಮ್ಮ ಅಧಿಕಾರದ ಹಸಿವು ಮತ್ತು ರಾಜಕೀಯ ಸ್ವಾರ್ಥಕ್ಕಾಗಿ ಕಚೇರಿಯ ಎಸಿ ರೂಮುಗಳಲ್ಲಿ ಕುಳಿತು ಸ್ಕೇಲ್ ಇಟ್ಟು ಎಳೆದ ಒಣ ರೇಖೆಗಳಾಗಿವೆ.

ಬ್ರಿಟಿಷರು ಅಥವಾ ಇತರ ಸಾಮ್ರಾಜ್ಯಶಾಹಿಗಳು ಜಗತ್ತನ್ನು ಆಳುವಾಗ ಸ್ಥಳೀಯ ಸಂಸ್ಕೃತಿ, ಭಾಷೆ, ಭಾವನೆ ಅಥವಾ ಭೌಗೋಳಿಕ ವಾಸ್ತವಗಳನ್ನು ಪರಿಗಣಿಸದೇ ತಮಗಿಷ್ಟ ಬಂದಂತೆ ಗೆರೆಗಳನ್ನು ಎಳೆದರು. ಪರಿಣಾಮವಾಗಿ ಒಂದೇ ಸಮುದಾಯದ ಜನರು ಎರಡು ದೇಶಗಳಾಗಿ ಸೀಳಲ್ಪಟ್ಟರು. ಒಂದೇ ಮನೆ ಎರಡು ರಾಷ್ಟ್ರಗಳ ಮಧ್ಯೆ ಸಿಲುಕಿಕೊಂಡಿತು. ಗಿಡಮೂಲಿಕೆಗಳು ಮತ್ತು ಕಾಡು ಪ್ರಾಣಿ‌ ಗಳಿಗೆ ತಿಳಿಯದ ಈ ಕೃತಕ ನಿಯಮಗಳು ಮನುಷ್ಯನ ದೈನಂದಿನ ಬದುಕನ್ನು ಸಂಕೀರ್ಣ ಗೊಳಿಸಿದವು.

ರಾಜಕೀಯ ಸ್ವಾರ್ಥಕ್ಕಾಗಿ ಸೃಷ್ಟಿಯಾದ ಈ ಗಡಿರೇಖೆಗಳು ಜಗತ್ತಿನಲ್ಲಿ ಯುದ್ಧ, ದ್ವೇಷ ಮತ್ತು ರಾಷ್ಟ್ರೀಯತೆಯ ಅಂಧಾಭಿಮಾನಕ್ಕೆ ಕಾರಣವಾಗಿವೆ. ಪ್ರಕೃತಿಯ ದೃಷ್ಟಿಯಲ್ಲಿ ನಾವೆಲ್ಲರೂ ಒಂದೇ ಭೂಮಿಯ ನಿವಾಸಿಗಳು. ಆದರೆ ಮನುಷ್ಯ ತನ್ನ ಅಹಂಕಾರ ಮತ್ತು ಆಧಿಪತ್ಯ ಸ್ಥಾಪನೆಗಾಗಿ ಇಡೀ ಭೂಗೋಳವನ್ನು ತುಂಡು ಭೂಮಿಗಳನ್ನಾಗಿ ಪರಿವರ್ತಿಸಿದ. ಗಡಿಗಳು ಕೇವಲ ಭೌಗೋಳಿಕ ವಿಭಜನೆಯಲ್ಲ, ಅವು ಮನುಷ್ಯನ ಸಂಕುಚಿತ ಮನಸ್ಥಿತಿಯ ಸಂಕೇತ.

ಇದನ್ನೂ ಓದಿ: Vishweshwar Bhat Colum: ಟೈರ್ ಮೇಲಿನ ಕೆಂಪು ಚುಕ್ಕೆ

ಭೂಪಟದ ಮೇಲಿರುವ ಗೆರೆಗಳು ಮನುಷ್ಯ ಬದಲಾಯಿಸಬಹುದಾದ ಕೃತಕ ಕಲ್ಪನೆಗಳೇ ಹೊರತು ಶಾಶ್ವತ ಸತ್ಯಗಳಲ್ಲ. ವಲಸೆ ಹೋಗುವ ಪ್ರಾಣಿಗಳಿಗೆ, ಬೀಸುವ ಗಾಳಿಗೆ ಅಥವಾ ಹರಿಯುವ ನೀರಿಗೆ ಜಗತ್ತಿನ ಯಾವುದೇ ಗಡಿಯೂ ತಿಳಿಯುವುದಿಲ್ಲ. ಆಫ್ರಿಕಾದ ಮಸೈ ಮಾರಾ ಮತ್ತು ಸರೇಂಗೆಟಿ ಕಾಡುಗಳಲ್ಲಿ ಪ್ರತಿ ವರ್ಷ ಲಕ್ಷಾಂತರ ಪ್ರಾಣಿಗಳು ಒಂದು ದೇಶದಿಂದ ಮೂರ್ನಾಲ್ಕು ದೇಶಗಳ ಕಾಡುಗಳಿಗೆ ವಲಸೆ ಹೋಗುತ್ತವೆ. ಆ ಪ್ರಾಣಿಗಳಿಗೆ ಗಡಿಗಳ ಬಗ್ಗೆ ಏನೂ ಗೊತ್ತಿಲ್ಲ. ಇಂದು ನಾವು ನಕ್ಷೆಯಲ್ಲಿ ಕಾಣುವ ಗೆರೆಗಳು ಕೇವಲ ಮನುಷ್ಯನ ರಾಜಕೀಯ ಸ್ವಾರ್ಥ, ಅಧಿಕಾರದ ಆಸೆ ಮತ್ತು ಆಡಳಿತಾತ್ಮಕ ಅನುಕೂಲಕ್ಕಾಗಿ ಸೃಷ್ಟಿಸಿಕೊಂಡ ಕೃತಕ ಕಲ್ಪನೆಗಳು ಮಾತ್ರ. ಇತಿಹಾಸವನ್ನು ತಿರುವಿ ಹಾಕಿದರೆ ಈ ಕೃತಕ ಗೆರೆಗಳು ಎಷ್ಟು ಅಶಾಶ್ವತ ಎಂಬುದು ಸ್ಪಷ್ಟವಾಗುತ್ತದೆ.

ಒಂದಾನೊಂದು ಕಾಲದಲ್ಲಿ ಅಖಂಡವಾಗಿದ್ದ ಸಾಮ್ರಾಜ್ಯಗಳು ಇಂದು ನೂರಾರು ದೇಶಗಳಾಗಿ ಪ್ರತ್ಯೇಕವಾಗಿವೆ. ಬ್ರಿಟಿಷರು, ಡಚ್ಚರು, ಫ್ರೆಂಚರು, ಪೋರ್ಚುಗೀಸರು ಸೇರಿದಂತೆ ಜಗತ್ತಿನ ವಸಾಹತು ಶಾಹಿಗಳು ತಮಗೆ ತೋಚಿದಂತೆ, ಸ್ಥಳೀಯ ಜನರ ಭಾವನೆಗಳನ್ನು ಪರಿಗಣಿಸದೇ ಕಚೇರಿಗಳಲ್ಲಿ ಕುಳಿತು ಎಳೆದ ರೇಖೆಗಳು ಇಂದು ಜಗತ್ತಿನಾದ್ಯಂತ ಯುದ್ಧ ಮತ್ತು ಸಂಘರ್ಷಗಳಿಗೆ ಕಾರಣವಾಗಿವೆ.

ಕೇವಲ ಒಂದು ರಾಜಕೀಯ ಒಪ್ಪಂದ, ಒಂದು ಯುದ್ಧ ಅಥವಾ ಒಂದು ಕ್ರಾಂತಿ ಇಡೀ ಜಗತ್ತಿನ ಭೂಪಟವನ್ನೇ ಬದಲಾಯಿಸಿ ಬಿಡುತ್ತದೆ. ನೂರು ವರ್ಷಗಳ ಹಿಂದೆ ಇದ್ದ ದೇಶಗಳ ನಕ್ಷೆಗೂ, ಇಂದಿನ ನಕ್ಷೆಗೂ ಅಜಗಜಾಂತರ ವ್ಯತ್ಯಾಸವಿದೆ. ಭವಿಷ್ಯದಲ್ಲೂ ಈ ಗೆರೆಗಳು ಹೀಗೆಯೇ ಇರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಇದಕ್ಕೆ ತದ್ವಿರುದ್ಧವಾಗಿ, ಪ್ರಕೃತಿಯು ಸೃಷ್ಟಿಸಿದ ಭೌಗೋಳಿಕ ಗಡಿ ಗಳು- ಉದಾಹರಣೆಗೆ ಹಿಮಾಲಯ ಪರ್ವತ ಶ್ರೇಣಿ ಅಥವಾ ಅಟ್ಲಾಂಟಿಕ್ ಮಹಾಸಾಗರ-ಶಾಶ್ವತ ವಾದವು ಮತ್ತು ಬದಲಾಗದ ಸತ್ಯಗಳು. ಆದರೆ ಮಾನವ ನಿರ್ಮಿತ ಗಡಿಗಳು ಕೇವಲ ಕಾಗದದ ಮೇಲಿರುವ ರೇಖೆಗಳು. ಮನುಷ್ಯ ತನ್ನ ಸಂಕುಚಿತ ಮನಸ್ಥಿತಿಯಿಂದಾಗಿ ಭೂಮಿಯನ್ನು ವಿಭಜಿಸಿ ದ್ದಾನೆ.

61 ಒಕ

ಭೂಪಟದ ಮೇಲಿರುವ ಗೆರೆಗಳು ನಮ್ಮ ಆಲೋಚನೆ ಮತ್ತು ರಾಜಕೀಯ ಬದಲಾವಣೆಗಳಿಗೆ ತಕ್ಕಂತೆ ಬದಲಾಗುವ ತಾತ್ಕಾಲಿಕ ವ್ಯವಸ್ಥೆಗಳಷ್ಟೇ. ನಾವೆಲ್ಲರೂ ಒಂದೇ ಒಟ್ಟು ಭೂಮಿಯ ( Planet Earth) ನಿವಾಸಿಗಳು ಮತ್ತು ಇಡೀ ಮಾನವಕುಲ ಒಂದೇ ಎಂಬ ವಿಶಾಲ ದೃಷ್ಟಿಕೋನ ವನ್ನು ಹೊಂದಿದಾಗ ಮಾತ್ರ ಈ ಕೃತಕ ಗೆರೆಗಳ ಹಿಂದಿರುವ ನಿರರ್ಥಕತೆ ನಮಗೆ ಮನವರಿಕೆಯಾಗುತ್ತದೆ.

ಯಾರಿಗೂ ಬೇಡವಾದ ಭೂಪ್ರದೇಶ

ಜಗತ್ತಿನ ಇತಿಹಾಸವನ್ನು ಗಮನಿಸಿದರೆ, ಭೂಮಿಗಾಗಿ, ಗಡಿಗಾಗಿ ಮತ್ತು ಒಂದು ಇಂಚು ಮಣ್ಣಿಗಾಗಿ ರಕ್ತಸಿಕ್ತ ಯುದ್ಧಗಳು ನಡೆದಿರುವುದನ್ನು ನಾವು ನೋಡಿದ್ದೇವೆ. ದೇಶಗಳು ತಮ್ಮ ಗಡಿಯನ್ನು ವಿಸ್ತರಿಸಿಕೊಳ್ಳಲು ಶತಶತಮಾನ ಗಳಿಂದ ಹೋರಾಡುತ್ತಲೇ ಇವೆ. ಆದರೆ, ಇಂದಿನ ಆಧುನಿಕ ಯುಗದಲ್ಲೂ ಯಾವುದೇ ದೇಶಕ್ಕೂ ಬೇಡದ, ನಕ್ಷೆಯಲ್ಲಿ ಸಂಪೂರ್ಣ ವಾಗಿ ಅನಾಥವಾಗಿ ಬಿದ್ದಿರುವ 2000 ಚದರ ಕಿಮೀ ವಿಸ್ತೀರ್ಣದ ಭೂಪ್ರದೇಶ‌ ವೊಂದಿದೆ ಎಂದರೆ ಯಾರೂ ಸುಲಭವಾಗಿ ನಂಬುವುದಿಲ್ಲ.

ಈಜಿಪ್ಟ್ ಮತ್ತು ಸುಡಾನ್ ದೇಶಗಳ ಗಡಿಯಲ್ಲಿರುವ ‘ಬೀರ್ ತಾವಿಲ್’ ಎಂಬ ಮರುಭೂಮಿ ಪ್ರಾಂತ್ಯವೇ ಆ ಜಾಗತಿಕ ವಿಸ್ಮಯ. ಮಾರ್ಕ್ ಕೂಪರ್ ಜೋ ಮತ್ತು ಜೇ ಫಾರ್ಮ್ಯಾನ್ ತಮ್ಮ ‘ದಿಸ್ ವೇ ಅಪ್’ ಪುಸ್ತಕದಲ್ಲಿ ಈ ಪ್ರಾಂತ್ಯದ ಕುರಿತು ನೀಡಿರುವ ವಿವರಣೆಗಳು ಅಂತಾರಾಷ್ಟ್ರೀಯ ರಾಜಕೀಯ ಮತ್ತು ಭೌಗೋಳಿಕ ಒಪ್ಪಂದಗಳು ಎಷ್ಟು ಹಾಸ್ಯಾಸ್ಪದ ಮತ್ತು ತರ್ಕಹೀನವಾಗಿರ ಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ‘ಬೀರ್ ತಾವಿಲ್’ ಎಂದರೆ ಅರೇಬಿಕ್ ಭಾಷೆಯಲ್ಲಿ ’ಆಳವಾದ ಬಾವಿ’ ಎಂದು ಅರ್ಥ.

ಇದು ಉತ್ತರ ಆಫ್ರಿಕಾದ ನುಬಿಯನ್ ಮರುಭೂಮಿಯ ಭಾಗವಾಗಿದ್ದು, ಸರಿಸುಮಾರು 2060 ಚದರ ಕಿಮೀ ವಿಸ್ತೀರ್ಣವನ್ನು ಹೊಂದಿದೆ. ಇದು ಪ್ರಸ್ತುತ ಯಾವುದೇ ದೇಶದ ಸಾರ್ವಭೌಮತ್ವಕ್ಕೆ ಒಳಪಡದ, ಜಗತ್ತಿನ ಏಕೈಕ ಜನವಸತಿಯಿಲ್ಲದ ಭೂಪ್ರದೇಶವಾಗಿದೆ. ಈ ಜಾಗದಲ್ಲಿ ಯಾವುದೇ ನೈಸರ್ಗಿಕ ಸಂಪನ್ಮೂಲಗಳಿಲ್ಲ, ನದಿಗಳಿಲ್ಲ, ಕೇವಲ ಒಣಗಿದ ಮರಳು ಮತ್ತು ಬಂಡೆಗಳಿಂದ ಕೂಡಿದ ಕಠಿಣ ಹವಾಮಾನವಷ್ಟೇ ಇಲ್ಲಿದೆ. ಆದರೂ, ಇಷ್ಟು ದೊಡ್ಡ ಭೂಪ್ರದೇಶವನ್ನು ಜಗತ್ತಿನ ಎರಡು ನೆರೆಹೊರೆಯವರು ತಮಗೆ ಬೇಡವೆಂದು ನಿರಾಕರಿಸುತ್ತಿರುವುದರ ಹಿಂದೆ ಒಂದು ದೊಡ್ಡ ಇತಿಹಾಸವಿದೆ. ಬೀರ್ ತಾವಿಲ್ ಇಂದು ಅನಾಥವಾಗಿ ಉಳಿಯಲು ಮೂಲ ಕಾರಣ ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ಎಳೆದ ಎರಡು ವಿಭಿನ್ನ ಗಡಿರೇಖೆಗಳು.

ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಬ್ರಿಟಿಷರು ಈಜಿಪ್ಟ್ ಮತ್ತು ಸುಡಾನ್ ಎರಡನ್ನೂ ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದರು. ಆ ಸಂದರ್ಭದಲ್ಲಿ ಅವರು ಎರಡು ಬಾರಿ ಗಡಿಯನ್ನು ನಿರ್ಧರಿಸಿದರು. ಬ್ರಿಟಿಷರು ಮೊದಲು ಇಪ್ಪತ್ತೆರಡನೇ ಅಕ್ಷಾಂಶವನ್ನು ಈಜಿಪ್ಟ್ ಮತ್ತು ಸುಡಾನ್ ನಡುವಿನ ಅಧಿಕೃತ ರಾಜಕೀಯ ಗಡಿಯನ್ನಾಗಿ ನಿರ್ಧರಿಸಿದರು.

ಈ ರೇಖೆಯ ಪ್ರಕಾರ, ಬೀರ್ ತಾವಿಲ್ ಪ್ರಾಂತ್ಯವು ಸುಡಾನ್ ದೇಶಕ್ಕೆ ಸೇರಿತು ಮತ್ತು ಅದರ ಪಕ್ಕದ ಇರುವ, ತೈಲ ಹಾಗೂ ನೈಸರ್ಗಿಕ ಸಂಪನ್ಮೂಲಗಳಿಂದ ಶ್ರೀಮಂತವಾಗಿರುವ ‘ಹಲಾಯ್ಬ್ ತ್ರಿಕೋನ’ ( Hala'ib Triangle) ಎಂಬ ದೊಡ್ಡ ಪ್ರಾಂತ್ಯವು ಈಜಿಪ್ಟ್‌ಗೆ ಸೇರಿತು. ಕೇವಲ ಮೂರು ವರ್ಷಗಳ ನಂತರ, ಬ್ರಿಟಿಷರು ಸ್ಥಳೀಯ ಬುಡಕಟ್ಟು ಜನಾಂಗದವರ ಓಡಾಟ ಮತ್ತು ಸಾಂಸ್ಕೃತಿಕ ಹಿನ್ನೆಲೆ‌ ಯನ್ನು ಪರಿಗಣಿಸಿ ಮತ್ತೊಂದು ಆಡಳಿತಾತ್ಮಕ ಗಡಿಯನ್ನು ಎಳೆದರು. ಈ ಹೊಸ ನಕ್ಷೆಯ ಪ್ರಕಾರ, ಬೀರ್ ತಾವಿಲ್ ಪ್ರಾಂತ್ಯವನ್ನು ಈಜಿಪ್ಟ್‌ಗೆ ನೀಡಲಾಯಿತು ಮತ್ತು ಅತ್ಯಂತ ಮೌಲ್ಯ ಯುತವಾದ ’ಹಲಾಯ್ಬ ತ್ರಿಕೋನ’ವನ್ನು ಸುಡಾನ್‌ಗೆ ಹಸ್ತಾಂತರಿಸಲಾಯಿತು. ಇದೇ ಇಂದಿನ ಮಹಾ ಗೊಂದಲ ಕ್ಕೆ ಮತ್ತು ಬೀರ್ ತಾವಿಲ್ ಅನಾಥವಾಗಲು ನಾಂದಿ ಹಾಡಿತು.

ಬ್ರಿಟಿಷರು ದೇಶ ಬಿಟ್ಟು ಹೋದ ನಂತರ, ಇವೆರಡೂ ದೇಶಗಳು ತಮಗೆ ಲಾಭ ತರುವ ನಕ್ಷೆಯನ್ನೇ ಅಧಿಕೃತ ಎಂದು ವಾದಿಸಲು ಶುರು ಮಾಡಿದವು. ಆದರೆ, ಇಲ್ಲಿರುವ ಟ್ವಿಸ್ಟ್ ಏನೆಂದರೆ, ಹಲಾಯ್ಬ್ ತ್ರಿಕೋನವನ್ನು ಪಡೆಯುವ ಆಸೆಯಿಂದ ಇಬ್ಬರೂ ಬೀರ್ ತಾವಿಲ್ ಅನ್ನು ಬೇಡ ಎನ್ನುತ್ತಿದ್ದಾರೆ! ಒಂದು ವೇಳೆ ಈಜಿಪ್ಟ್ ತನಗೆ ಬೀರ್ ತಾವಿಲ್ ಬೇಕು ಎಂದು ಒಪ್ಪಿಕೊಂಡರೆ, ಅದು 1902ರ ನಕ್ಷೆ ಯನ್ನು ಒಪ್ಪಿಕೊಂಡಂತಾಗುತ್ತದೆ. ‌

ಆಗ ಅದಕ್ಕಿಂತ ಹತ್ತು ಪಟ್ಟು ದೊಡ್ಡದಾದ ಮತ್ತು ಶ್ರೀಮಂತವಾದ ಹಲಾಯ್ಬ ಪ್ರಾಂತ್ಯವನ್ನು ಅದು ಸುಡಾನ್‌ಗೆ ಬಿಟ್ಟುಕೊಡಬೇಕಾಗುತ್ತದೆ. ಅದೇ ರೀತಿ, ಸುಡಾನ್ ಒಂದು ವೇಳೆ ಬೀರ್ ತಾವಿಲ್ ತನ್ನದು ಎಂದು ಹೇಳಿಕೊಂಡರೆ, ಅದು 1899ರ ನಕ್ಷೆಯನ್ನು ಒಪ್ಪಿಕೊಂಡಂತಾಗಿ ಹಲಾಯ್ಬ್ ಅನ್ನು ಈಜಿಪ್ಟ್‌ಗೆ ಬಿಡಬೇಕಾಗುತ್ತದೆ. ಹೀಗಾಗಿ ಇಬ್ಬರಿಗೂ, ದೊಡ್ಡದಾದ ಹಲಾಯ್ಬ ಬೇಕೇ ಹೊರತು ಸಣ್ಣದಾದ ಬೀರ್ ತಾವಿಲ್ ಬೇಡ. ‌

ಈ ರಾಜಕೀಯ ಜಿದ್ದಾಜಿದ್ದಿನಿಂದಾಗಿ ಬೀರ್ ತಾವಿಲ್ ಕಳೆದ ಒಂದು ಶತಮಾನಕ್ಕೂ ಹೆಚ್ಚು ಕಾಲ ದಿಂದ ಯಾವುದೇ ದೇಶದ ನಕ್ಷೆಯಲ್ಲೂ ಸೇರದೇ ಮಧ್ಯದಲ್ಲಿ ಸಿಲುಕಿಕೊಂಡಿದೆ. ಈ ಪರಿಸ್ಥಿತಿಯು ಎಷ್ಟು ಹಾಸ್ಯಾಸ್ಪದವಾಗಿದೆ ಎಂದರೆ, ಜಗತ್ತಿನ ಯಾವುದೇ ಪ್ರಜೆಯೂ ಬೀರ್ ತಾವಿಲ್ ಪ್ರಾಂತ್ಯಕ್ಕೆ ಹೋಗಿ ನಿಂತರೆ, ಆತ ತಾಂತ್ರಿಕವಾಗಿ ಯಾವುದೇ ದೇಶದ ಕಾನೂನಿಗೆ ಒಳಪಡುವುದಿಲ್ಲ. ಅಲ್ಲಿ ಯಾವುದೇ ಪೊಲೀಸ್ ವ್ಯವಸ್ಥೆ ಇಲ್ಲ, ನ್ಯಾಯಾಲಯಗಳಿಲ್ಲ, ಸರಕಾರಿ ಕಚೇರಿಗಳಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಕೆಲವು ಸಾಹಸಿಗರು ಈ ಜಾಗಕ್ಕೆ ಹೋಗಿ ತಮ್ಮದೇ ಆದ ‘ಹೊಸ ದೇಶ’ ಗಳನ್ನು ಘೋಷಿಸಿಕೊಂಡಿರುವ ವಿಲಕ್ಷಣ ಘಟನೆಗಳೂ ನಡೆದಿವೆ. ಉದಾಹರಣೆಗೆ, 2014ರಲ್ಲಿ ಅಮೆರಿಕದ ಜೆರೆಮಿಯಾ ಹೀಟನ್ ಎಂಬ ವ್ಯಕ್ತಿ ಬೀರ್ ತಾವಿಲ್‌ಗೆ ಪ್ರಯಾಣ ಬೆಳೆಸಿ, ಅಲ್ಲಿ ತನ್ನದೇ ಆದ ಬಾವುಟವನ್ನು ನೆಟ್ಟು, ಆ ಜಾಗವನ್ನು ಕಿಂಗ್ಡಮ್ ಆಫ್ ನಾರ್ತ್ ಸುಡಾನ್’ ಎಂದು ಘೋಷಿಸಿ ಕೊಂಡಿದ್ದ! ಆತನ ಮಗಳಿಗೆ ರಾಜಕುಮಾರಿ’ ಆಗಬೇಕೆಂಬ ಆಸೆಯಿದ್ದಿದ್ದರಿಂದ ಆತ ಈ ಸಾಹಸ ಮಾಡಿದ್ದಾಗಿ ಹೇಳಿಕೊಂಡಿದ್ದ. ‌

ತದನಂತರ ಭಾರತದ ಸುಯಶ್ ದೀಕ್ಷಿತ್ ಎಂಬ ಯುವಕ ಕೂಡ ಅಲ್ಲಿಗೆ ಹೋಗಿ ತನ್ನದೇ ಆದ ಕಿಂಗ್ಡಮ್ ಆಫ್ ದೀಕ್ಷಿತ್’ ಸ್ಥಾಪಿಸಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿಕೊಂಡಿದ್ದ. ಆದರೆ, ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ, ಇಂಥ ಯಾವುದೇ ಸ್ವಯಂ-ಘೋಷಿತ ದೇಶ ಗಳಿಗೆ ಮಾನ್ಯತೆ ಸಿಗುವುದಿಲ್ಲ. ಇದು ನಮಗೆ ಮೂರು ಪ್ರಮುಖ ಸಂಗತಿಗಳನ್ನು ಮನವರಿಕೆ ಮಾಡಿ ಕೊಡುತ್ತದೆ - ಮೊದಲನೆಯದು, ಗಡಿಗಳೆಂದರೆ, ಕೇವಲ ರಾಜಕೀಯ ಹಿತಾಸಕ್ತಿಗಳು. ಮನುಷ್ಯನಿಗೆ ಭೂಮಿಯ ಮೇಲಿರುವ ಪ್ರೀತಿಗಿಂತ ಅದರ ಮೇಲಿನ ಆಧಿಪತ್ಯ ಮತ್ತು ಸ್ವಾರ್ಥವೇ ಮುಖ್ಯ ಎಂಬು ದಕ್ಕೆ ಬೀರ್ ತಾವಿಲ್ ಸಾಕ್ಷಿ.

ಲಾಭ ಬರುವುದಾದರೆ ಯುದ್ಧಕ್ಕೂ ಸಿದ್ಧ, ಲಾಭವಿಲ್ಲದಿದ್ದರೆ ಇಡೀ ಪ್ರಾಂತ್ಯವನ್ನೇ ಅನಾಥವಾಗಿ ಬಿಡಲು ಸಿದ್ಧ ಎಂಬ ರಾಜಕಾರಣದ ನೈಜ ಗುಣ ಇಲ್ಲಿದೆ. ಎರಡನೆಯದು, ವಸಾಹತುಶಾಹಿಗಳ ಬೇಜವಾಬ್ದಾರಿತೆ. ಬ್ರಿಟಿಷರು ಜಗತ್ತಿನಾದ್ಯಂತ ತಮಗೆ ತೋಚಿದಂತೆ ಎಳೆದ ಗೆರೆಗಳು ಇಂದಿಗೂ ಹೇಗೆ ಜಗತ್ತನ್ನು ಕಾಡುತ್ತಿವೆ ಎಂಬುದನ್ನು ಇದು ತೋರಿಸುತ್ತದೆ ಹಾಗೂ ಮೂರನೆಯದು, ಭೌಗೋಳಿಕತೆ ಯ ಅಪೂರ್ವ ಸೌಂದರ್ಯ. ನಕ್ಷೆಗಳು ಕೇವಲ ದೇಶಗಳನ್ನು ನೋಡುವ ಸಾಧನಗಳಲ್ಲ, ಅವುಗಳ ಹಿಂದೆ ಮಾನವ ಇತಿಹಾಸದ ರೋಚಕ ತಿರುವುಗಳು ಅಡಗಿವೆ ಎಂಬುದನ್ನು ಇದು ಪ್ರಶಂಸಿಸುತ್ತದೆ.

ಬೀರ್ ತಾವಿಲ್ ಎಂಬ ಯಾರಿಗೂ ಬೇಡದ ಭೂಮಿಯ ಕಥೆಯು ಇಡೀ ಜಗತ್ತಿನ ರಾಜಕೀಯ ವ್ಯವಸ್ಥೆಗೆ ಹಿಡಿದ ಕನ್ನಡಿ. ಮನುಷ್ಯ ತನ್ನ ಅಹಂಕಾರದಿಂದ ಭೂಮಿಯ ಮೇಲೆ ಎಷ್ಟೇ ಗೆರೆಗಳನ್ನು ಗೀಚಿದರೂ, ಪ್ರಕೃತಿಯು ಆ ಗೆರೆಗಳನ್ನು ಮೀರಿ ತನ್ನದೇ ಆದ ರೀತಿಯಲ್ಲಿ ಅಸ್ತಿತ್ವದಲ್ಲಿರುತ್ತದೆ ಎಂಬುದನ್ನು ಈ ವಿಶಿಷ್ಟ ಭೌಗೋಳಿಕ ವಿದ್ಯಮಾನವು ನಮಗೆ ಅತ್ಯಂತ ಮಾರ್ಮಿಕವಾಗಿ ಮತ್ತು ತಮಾಷೆಯಾಗಿ ನೆನಪಿಸುತ್ತದೆ.

ವಿಚಿತ್ರ ಗಡಿರೇಖೆ

ಜಗತ್ತಿನ ರಾಜಕೀಯ ನಕ್ಷೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೆಲವು ದೇಶಗಳ ಆಕಾರಗಳು ಅತ್ಯಂತ ವಿಚಿತ್ರವಾಗಿ ಕಾಣಿಸುತ್ತವೆ. ಅದರಲ್ಲಿ ಆಫ್ರಿಕಾ ಖಂಡದ ನೈಋತ್ಯ ಭಾಗದಲ್ಲಿರುವ ನಮೀಬಿಯಾ ದೇಶದ ನಕ್ಷೆ ಪ್ರಮುಖವಾದದ್ದು. ನಮೀಬಿಯಾದ ಈಶಾನ್ಯ ಭಾಗವನ್ನು ನೋಡಿದಾಗ, ದೇಶದ ಪ್ರಧಾನ ಭೂಭಾಗದಿಂದ ಇದ್ದಕ್ಕಿದ್ದಂತೆ ಒಂದು ಉದ್ದನೆಯ, ಕಿರಿದಾದ ಬಾಲದಂಥ ಭೂಪ್ರದೇಶವು ಪೂರ್ವಕ್ಕೆ ಚಾಚಿಕೊಂಡಿರು ವುದು ಸ್ಪಷ್ಟವಾಗಿ ಕಾಣುತ್ತದೆ. ಸುಮಾರು 450 ಕಿಮೀ ಉದ್ದವಿರುವ ಈ ವಿಚಿತ್ರ ಪಟ್ಟಿಯನ್ನು ‘ಕ್ಯಾಪ್ರಿವಿ ಸ್ಟ್ರಿಪ್’ (Caprivi Strip) ಎಂದು ಕರೆಯಲಾಗುತ್ತದೆ.

ಮೇಲ್ನೋಟಕ್ಕೆ ಇದು ಕೇವಲ ಒಂದು ಭೌಗೋಳಿಕ ಆಕಸ್ಮಿಕದಂತೆ ಕಂಡರೂ, ಇದರ ಹಿಂದೆ ವಸಾ ಹತು ಶಾಹಿ ಕಾಲದ ಜರ್ಮನ್ನರ ಬೃಹತ್ ಜಾಗತಿಕ ಲೆಕ್ಕಾಚಾರ, ಅಂತಾರಾಷ್ಟ್ರೀಯ ರಾಜತಾಂತ್ರಿಕ ಒಪ್ಪಂದ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಇತಿಹಾಸದ ದಾಖಲಾದ ಅತ್ಯಂತ ತಮಾಷೆಯ ಭೌಗೋಳಿಕ ಎಡವಟ್ಟಿನ ಕಥೆಯಿದೆ. ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ, ಅಂದರೆ 1890ರ ಅವಧಿಯಲ್ಲಿ ಜಗತ್ತಿನಾದ್ಯಂತ ಆಫ್ರಿಕಾ ಖಂಡದ ಭೂಮಿಯನ್ನು ಹಂಚಿಕೊಳ್ಳಲು ಯೂರೋಪಿಯನ್ ರಾಷ್ಟ್ರ ಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು.

ಆಗ ನಮೀಬಿಯಾ ದೇಶವು ಜರ್ಮನಿಯ ವಸಾಹತಾಗಿತ್ತು. ಅದೇ ಸಮಯದಲ್ಲಿ ಜರ್ಮನಿಯ ಚಾನ್ಸಲರ್ ಆಗಿದ್ದ ಲಿಯೋ ವಾನ್ ಕ್ಯಾಪ್ರಿವಿ ಎಂಬಾತನ ಹೆಸರನ್ನೇ ಈ ಭೂಪ್ರದೇಶಕ್ಕೆ ಇಡಲಾ ಯಿತು. ಆಗ ಜರ್ಮನಿಯು ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ಒಂದು ಪ್ರಮುಖ ಒಪ್ಪಂದವನ್ನು ಮಾಡಿಕೊಂಡಿತು. ಇದನ್ನು ‘ಹೆಲಿಗೋಲ್ಯಾಂಡ್-ಜಾಂಜಿಬಾರ್ ಒಪ್ಪಂದ’ ಎಂದು ಕರೆಯ ಲಾಗುತ್ತದೆ.

ಈ ಒಪ್ಪಂದದ ಪ್ರಕಾರ, ಜರ್ಮನಿಯು ಪೂರ್ವ ಆಫ್ರಿಕಾದಲ್ಲಿದ್ದ ಜಾಂಜಿಬಾರ್ ದ್ವೀಪದ ಮೇಲಿನ ತನ್ನ ಹಕ್ಕನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟಿತು. ಬದಲಿಗೆ, ಉತ್ತರ ಸಮುದ್ರದಲ್ಲಿದ್ದ ಆಯಕಟ್ಟಿನ ‘ಹೆಲಿಗೋಲ್ಯಾಂಡ್’ ದ್ವೀಪವನ್ನು ಮತ್ತು ನಮೀಬಿಯಾದ ಈಶಾನ್ಯದಲ್ಲಿದ್ದ ಈ 450 ಕಿಮೀ ಉದ್ದದ ಕಿರಿದಾದ ಭೂಪ್ರದೇಶವನ್ನು (ಕ್ಯಾಪ್ರಿವಿ ಸ್ಟ್ರಿಪ್) ಬ್ರಿಟಿಷರಿಂದ ತನ್ನದಾಗಿಸಿಕೊಂಡಿತು.

ಜರ್ಮನ್ನರ ಬೃಹತ್ ಲೆಕ್ಕಾಚಾರ ಏನಾಗಿತ್ತು?

ಜರ್ಮನಿ ಇಷ್ಟು ಉದ್ದದ ಕಿರಿದಾದ ಬಾಲದಂಥ ಜಾಗವನ್ನು ಹಠ ಹಿಡಿದು ಪಡೆಯುವುದರ ಹಿಂದೆ ಒಂದು ಬಲವಾದ ರಾಜತಾಂತ್ರಿಕ ಮತ್ತು ವಾಣಿಜ್ಯ ಲೆಕ್ಕಾಚಾರವಿತ್ತು. ಜರ್ಮನ್ನರಿಗೆ ಆಫ್ರಿಕಾದ ಪೂರ್ವ ಕರಾವಳಿಯಲ್ಲಿದ್ದ ತಮ್ಮ ಮತ್ತೊಂದು ವಸಾಹತಾದ ‘ಜರ್ಮನ್ ಈ ಆಫ್ರಿಕಾ’ (ಇಂದಿನ ತಾಂಜಾನಿಯಾ) ತಲುಪಲು ಭೂಮಾರ್ಗದ ಸಂಪರ್ಕ ಬೇಕಿತ್ತು. ಅದಕ್ಕಿಂತ ಲೂ ಮುಖ್ಯವಾಗಿ, ಕ್ಯಾಪ್ರಿವಿ ಪಟ್ಟಿಯ ತುದಿಯಲ್ಲಿ ಹರಿಯುವ ಬೃಹತ್ ಜಾಂಬೇಜಿ ನದಿಯ ಮೂಲಕ ತಮ್ಮ ಹಡಗುಗಳನ್ನು ನೇರವಾಗಿ ಹಿಂದೂ ಮಹಾಸಾಗರಕ್ಕೆ ಇಳಿಸಬ ಹುದು ಎಂದು ಅವರು ಯೋಚಿಸಿ ದ್ದರು.

ನದಿಯ ಮೂಲಕ ಜಾಗತಿಕ ವ್ಯಾಪಾರ ಮಾರ್ಗವನ್ನು ತೆರೆಯುವುದು ಜರ್ಮನಿಯ ಮಹತ್ವಾ ಕಾಂಕ್ಷೆ ಯಾಗಿತ್ತು. ಬ್ರಿಟಿಷರು ಕೂಡ ಜರ್ಮನ್ನರ ಈ ಲೆಕ್ಕಾಚಾರಕ್ಕೆ ಒಪ್ಪಿ, ಆ ಜಾಗವನ್ನು ಬಿಟ್ಟು ಕೊಟ್ಟರು. ಒಪ್ಪಂದವೆಲ್ಲ ಮುಗಿದು, ಜರ್ಮನಿ ಆ ಜಾಗವನ್ನು ತನ್ನ ಅಧಿಕೃತ ನಕ್ಷೆಗೆ ಸೇರಿಸಿಕೊಂಡ ನಂತರವೇ ಅವರಿಗೆ ಪ್ರಕೃತಿ ಕಾದಿರಿಸಿದ್ದ ಆ ಮಹಾ ಆಘಾತದ ಅರಿವಾಗಿದ್ದು!

ಜರ್ಮನಿಯ ಅಧಿಕಾರಿಗಳು ಬರ್ಲಿನ್‌ನ ಐಷಾರಾಮಿ ಕಚೇರಿಗಳಲ್ಲಿ ಕುಳಿತು ನಕ್ಷೆಯ ಮೇಲೆ ಸ್ಕೇಲ್ ಇಟ್ಟು ಗೆರೆ ಎಳೆದಿದ್ದರೇ ಹೊರತು, ಆ ಜಾಗದ ವಾಸ್ತವಿಕ ಭೌಗೋಳಿಕತೆಯ ಪರಿಶೀಲನೆ ನಡೆಸಿರ ಲಿಲ್ಲ. ಜರ್ಮನ್ನರು ಜಾಂಬೇಜಿ ನದಿಯ ಮೂಲಕ ಹಿಂದೂ ಮಹಾಸಾಗರಕ್ಕೆ ಹಡಗು ಚಲಾಯಿ ಸುವ ಹಗಲುಗನಸು ಕಾಣುತ್ತಿದ್ದರು. ಆದರೆ ದುರದೃಷ್ಟವಶಾತ್, ಆ ನದಿಯ ಹಾದಿಯ ಮಧ್ಯದ ಜಗತ್ತಿನ ಅತಿ ದೊಡ್ಡ ಮತ್ತು ಅತ್ಯಂತ ಭೀಕರ ಜಲಪಾತವಾದ ‘ವಿಕ್ಟೋರಿಯಾ ಜಲಪಾತ’ ಇದೆ ಎಂಬ ಕಟು ಸತ್ಯ ಅವರಿಗೆ ತಿಳಿದಿರಲಿಲ್ಲ!

ಬರೋಬ್ಬರಿ 108 ಮೀಟರ್ ಎತ್ತರದಿಂದ ಭೋರ್ಗರೆದು ಬೀಳುವ ವಿಕ್ಟೋರಿಯಾ ಜಲಪಾತದ ಮೇಲಿಂದ ಯಾವುದೇ ಹಡಗು ಅಥವಾ ದೋಣಿಯನ್ನು ಸುರಕ್ಷಿತವಾಗಿ ದಾಟಿಸಲು ಸಾಧ್ಯವೇ ಇರಲಿಲ್ಲ. ಜಲಪಾತದ ತುದಿಗೆ ತಲುಪಿದ ತಕ್ಷಣ ಹಡಗುಗಳು ಉರುಳಿ ನಾಶವಾಗುವುದು ಖಚಿತ ವಾಗಿತ್ತು. ಅಂದರೆ, ಜರ್ಮನ್ನರು ಯಾವ ನದಿಯ ಜಲಮಾರ್ಗದ ಸಂಪರ್ಕಕ್ಕಾಗಿ ಜಾಂಜಿಬಾರ್‌ ನಂಥ ಮೌಲ್ಯಯುತ ದ್ವೀಪವನ್ನು ಬ್ರಿಟಿ ಷರಿಗೆ ಬಿಟ್ಟುಕೊಟ್ಟಿದ್ದರೋ, ಆ ಜಲಮಾರ್ಗ ಸಂಪೂರ್ಣ ವಾಗಿ ನಿರುಪಯುಕ್ತವಾಗಿತ್ತು!

ಜರ್ಮನ್ನರ ಈ ಐತಿಹಾಸಿಕ ತಪ್ಪು ಲೆಕ್ಕಾಚಾರದಿಂದಾಗಿ ಅವರು ಅಂದುಕೊಂಡ ಜಾಗತಿಕ ವ್ಯಾಪಾ ರದ ಕನಸು ನುಚ್ಚುನೂರಾಯಿತು. ಆದರೆ, ಆ ರಾಜಕೀಯ ಒಪ್ಪಂದದ ಪರಿಣಾಮವಾಗಿ ನಕ್ಷೆಯ ಮೇಲೆ ಗೀಚಿದ ಆ ರೇಖೆ ಇಂದಿಗೂ ಬದಲಾಗದೆ ಹಾಗೇ ಉಳಿದುಕೊಂಡಿದೆ. ವಸಾಹತುಶಾಹಿಗಳು ಸ್ಥಳೀಯ ಭೌಗೋಳಿಕ ವಾಸ್ತವಗಳನ್ನು ಕಣ್ಣಾರೆ ನೋಡದೇ, ಕೇವಲ ಕಾಗದದ ಮೇಲೆ ನಡೆಸುವ ಅಧಿಕಾರದ ಆಟಗಳು ಎಷ್ಟು ಹಾಸ್ಯಾಸ್ಪದ ಮತ್ತು ವ್ಯರ್ಥ ಫಲಿತಾಂಶಗಳನ್ನು ನೀಡುತ್ತವೆ ಎಂಬು ದಕ್ಕೆ ನಮೀಬಿಯಾದ ಈ ‘ಬಾಲ’ ಜಗತ್ತಿನ ಅತ್ಯುತ್ತಮ ಉದಾಹರಣೆಯಾಗಿದೆ.

ಇಂದು ಜರ್ಮನಿ ಆಫ್ರಿಕಾವನ್ನು ಬಿಟ್ಟು ಹೋಗಿ ಶತಮಾನ ಕಳೆದಿದೆ. ಆದರೆ, ಅಂದು ಅವರು ಮಾಡಿದ ಆ ಒಂದು ಭೌಗೋಳಿಕ ಎಡವಟ್ಟಿನ ನೆನಪಾಗಿ ಕ್ಯಾಪ್ರಿವಿ ಸ್ಟ್ರಿಪ್ ಇಂದಿಗೂ ನಮೀಬಿಯಾ ದ ನಕ್ಷೆಯಲ್ಲಿ ಒಂದು ವಿಚಿತ್ರ, ತರ್ಕಹೀನ ಬಾಲದಂತೆ ನೇತಾಡುತ್ತಾ, ವಸಾಹತುಶಾಹಿ ಇತಿಹಾಸದ ಮೂರ್ಖತನಕ್ಕೆ ಸಾಕ್ಷಿಯಾಗಿ ನಿಂತಿದೆ.