Hari Paraak Column: ಮೂರ್ ಮದ್ವೆ ಆಗೋಕೆ ಅಮೀರ್ ಆಗಿರಬೇಕು
ಒಟ್ನಲ್ಲಿ ಜನ ಅಲ್ಪ ಸ್ವಲ್ಪ ನಿರೀಕ್ಷೆ ಇಟ್ಟಿದ್ದ ಚಿತ್ರವೊಂದು ವಿವಾದಗಳ ಸುಳಿಯಲ್ಲಿ ಸದ್ದು ಮಾಡ್ತಾ ಇದೆ. ಇದರಿಂದ ಚಿತ್ರಕ್ಕೆ ಲಾಭ ಆಗುತ್ತೋ ನಷ್ಟ ಆಗುತ್ತೋ ಅನ್ನೋದು ಚಿತ್ರ ಬಿಡುಗಡೆ ಆದಮೇಲೆ ಗೊತ್ತಾಗುತ್ತೆ. ಆದ್ರೆ ಸದ್ಯಕ್ಕೆ ಈ ವಿವಾದ ಬಗೆಹರಿದಿದೆ. ವಿವಾದ ಆಗುತ್ತಿದ್ದಂತೆ ಪ್ರಜ್ವಲ್ ಅವರ ಬಾಕಿ ಮೊತ್ತ ಪಾವತಿ ಮಾಡಿದ್ದೇವೆ ಅಂತ ಚಿತ್ರತಂಡ ಹೇಳಿದೆ.
-
ತುಂಟರಗಾಳಿ
ಸಿನಿಗನ್ನಡ
ಕಳೆದ ವಾರದಿಂದ ಗಾಂಧಿನಗರದಲ್ಲಿ ಕರಾವಳಿಯದ್ದೇ ಹಾವಳಿ. ಕರಾವಳಿ ಚಿತ್ರಕ್ಕಾಗಿ ತಮಗೆ ಬರಬೇಕಿದ್ದ ಸಂಭಾವನೆ ಬಂದಿಲ್ಲ ಅದಕ್ಕೆ ಡಬ್ ಮಾಡಿಲ್ಲ, ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ಹೋಗಲಿಲ್ಲ ಅಂತ ನಾಯಕ ಪ್ರಜ್ವಲ್ ದೇವರಾಜ್ ಹೇಳಿದರೆ, ಅವರು ಸಿಕ್ಸ್ ಪ್ಯಾಕ್ ಮಾಡಿಕೊಳ್ತೀನಿ ಅಂತ ಹೇಳಿದ್ರು, ಆದ್ರೆ ಮಾಡಿಕೊಂಡಿಲ್ಲ ಅದಕ್ಕೆ 25 ಲಕ್ಷ ರು. ಬಾಕಿ ಇಟ್ಟಿದ್ದೀವಿ ಅಂತಾರೆ ನಿರ್ಮಾಪಕ, ನಿರ್ದೇಶಕ ಗುರುದತ್ ಗಾಣಿಗ. ಇದರ ಮಧ್ಯೆ ಸಿನಿಮಾಗೆ ರಾಜ್ ಬಿ ಶೆಟ್ಟಿ ಎಂಟ್ರಿ ಕೊಟ್ಟಿದ್ದು ಇನ್ನೊಂದು ಸಮಸ್ಯೆ ಅಂತೆ.
ಒಟ್ನಲ್ಲಿ ಜನ ಅಲ್ಪ ಸ್ವಲ್ಪ ನಿರೀಕ್ಷೆ ಇಟ್ಟಿದ್ದ ಚಿತ್ರವೊಂದು ವಿವಾದಗಳ ಸುಳಿಯಲ್ಲಿ ಸದ್ದು ಮಾಡ್ತಾ ಇದೆ. ಇದರಿಂದ ಚಿತ್ರಕ್ಕೆ ಲಾಭ ಆಗುತ್ತೋ ನಷ್ಟ ಆಗುತ್ತೋ ಅನ್ನೋದು ಚಿತ್ರ ಬಿಡುಗಡೆ ಆದಮೇಲೆ ಗೊತ್ತಾಗುತ್ತೆ. ಆದ್ರೆ ಸದ್ಯಕ್ಕೆ ಈ ವಿವಾದ ಬಗೆಹರಿದಿದೆ. ವಿವಾದ ಆಗುತ್ತಿದ್ದಂತೆ ಪ್ರಜ್ವಲ್ ಅವರ ಬಾಕಿ ಮೊತ್ತ ಪಾವತಿ ಮಾಡಿದ್ದೇವೆ ಅಂತ ಚಿತ್ರತಂಡ ಹೇಳಿದೆ. ಇನ್ನಾದರೂ ಪ್ರಜ್ವಲ್ ಸಿನಿಮಾದ ತಮ್ಮ ಪಾತ್ರಕ್ಕೆ ಡಬ್ ಮಾಡ್ತಾರಾ ಅನ್ನೋದು ಈಗ ಪ್ರಶ್ನೆ. ಯಾಕಂದ್ರೆ ವಿವಾದ ಆದಾಗ ಪ್ರಜ್ವಲ್ ಅವರ ಬಗ್ಗೆ ನೆಗೆಟಿವ್ ಮಾತಾಡಬೇಕು ಅನ್ನೋ ಭರದಲ್ಲಿ, ಅವರ ವಾಯ್ಸ ನಮ್ ಸಿನಿಮಾಗೆ ಸೂಟ್ ಆಗಲ್ಲ. ಅವ್ರಿಗೆ ಕರಾವಳಿ ಕಡೆ ಭಾಷೆ ಬರಲ್ಲ ಅಂತ ಕ್ಯಾತೆ ತೆಗೆದಿದ್ದ ಚಿತ್ರತಂಡ ಈಗ ವಿವಾದ ಮುಗೀತು ಅಂತ ಪ್ರಜ್ವಲ್ ಹತ್ರ ಡಬ್ ಮಾಡಿಸ್ತಾರಾ ಅಥವಾ ತಮ್ಮ ಹೇಳಿಕೆಗೆ ಬದ್ಧರಾಗಿ ಬೇರೆಯವರು ಡಬ್ ಮಾಡಿದ್ದನ್ನೇ ಉಳಿಸಿಕೊಳ್ತಾರೋ ಅನ್ನೋದು ಸದ್ಯಕ್ಕೆ ಉಳಿದಿರೋ ಪ್ರಶ್ನೆ ಏನ್ರೀ.
ಇದನ್ನೂ ಓದಿ: Hari Paraak Column: ಫುಟ್ʼಪಾತ್ʼಗೆ ಬಂದ ಜೀವನ ಈಗ ರೋಡಿಗೆ ಬಂದಿದೆ
ಲೂಸ್ ಟಾಕ್ –ಅಮೀರ್ ಖಾನ್
ಈ ವಯಸ್ಸಲ್ಲಿ ಮೂರನೇ ಮದುವೆ ಆಗಿಬಿಟ್ರಲ್ಲ?
- ಏನ್ ಮಾಡೋದು, ಲಗಾನ್ ಏನೋ ವರ್ಕ್ ಔಟ್ ಆಯ್ತು. ಆದ್ರೆ ನನ್ನ ಲಗ್ನಗಳು ಮಾತ್ರ ವರ್ಕ್ ಔಟ್ ಆಗ್ತಾ ಇಲ್ಲವಲ್ಲ.
ಸರಿ ಸರಿ, ಈ ಸಲನಾದ್ರೂ ಮೂರಕ್ಕೆ ಮುಕ್ತಾಯ ಅಂತ ಮಾಡ್ತೀರಾ?
- ಅಯ್ಯೋ, ಮೊದಲನೇ ಮದುವೆ ಆದಾಗ್ಲೇ ಗಂಡಸಿನ ಜೀವನ ಮುಕ್ತಾಯ ಅಂತಾರೆ. ಮೂರನೇಯದಕ್ಕೆ ಮುಗಿಸದಿದ್ರೆ ಹೆಂಗೆ? ನೋಡೋಣ.
ನೋಡೋಣ. ಸರಿ, ಆದ್ರೂ ನಮ್ಮಡುಗರಿಗೆ ಮದುವೆ ಆಗೋಕೆ ಒಂದ್ ಹೆಣ್ಣು ಸಿಕ್ತಾ ಇಲ್ಲ, ನೀವು ನೋಡಿದ್ರೆ ಮೂರ್ ಮೂರು ಮದುವೆ ಆಗಿಬಿಟ್ರಲ್ಲ?
- ನೋಡಿ ಮಕ್ಕಳಾಗಲೀ, ಹೆಂಡ್ತಿ ಆಗಲಿ, ದೇವರು ಕೊಟ್ಟಾಗ ಬೇಡ ಅನ್ನಬಾರದಂತೆ.
ಆದ್ರೂ ನಿಮಗೆ ಈ ವಯಸ್ಸಲ್ಲೂ ಹೆಣ್ಣು ಕೊಡೋರು ಇದ್ದಾರಲ್ಲ. ಗ್ರೇಟ್ ಅಲ್ವಾ ನೀವು?
- ಮದ್ವೆ ಆಗೋಕೆ ಅಮೀರ್ ಖಾನ್ ಆದರೆ ಸಾಲದು. ‘ಅಮೀರ್’ ಆಗಿರಬೇಕು ಕಣ್ರೀ.
ಅದೂ ಸರಿನೇ, ಆದ್ರೆ ಇಷ್ಟೊಂದ್ ಮದುವೆ ಆಗ್ತೀರಲ್ಲ, ನಿಮ್ಮನ್ನ ನೋಡಿದೋರು ಏನಂತ ಆಡಿಕೊಳ್ತಾರೆ ಗೊತ್ತಾ?
- ಗೊತ್ತು. ‘ಖಾನ್’ದಾನ್ ಬೆಳೆಸೋಕೆ ಎಲ್ಲರೂ ಮಕ್ಕಳು ಮಾಡಿಕೊಂಡ್ರೆ ನಾನು ಮದುವೆಗಳು ಆಗ್ತಾ ಇದ್ದೀನಿ ಅಂತ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಹೆಂಡ್ತಿ ಖೇಮುಶ್ರೀ ಬರ್ತಾ ಬರ್ತಾ ತುಂಬಾ ದಪ್ಪ ಆಗ್ತಾ ಇದ್ಳು. ಆದ್ರೂ ಅವಳಿಗೆ ತೂಕ ಜಾಸ್ತಿ ಆಗ್ತಾ ಇರೋದ್ರ ಬಗ್ಗೆ ಕೇರ್ ಇರಲಿಲ್ಲ. ಅವಳು ಅದಕ್ಕೆ ತಲೆಕೆಡಿಸಿಕೊಳ್ತಾ ಇರಲಿಲ್ಲ. ಆದ್ರೆ ಖೇಮುಗೆ ಮಾತ್ರ ಹೆಂಡ್ತಿ ಅಷ್ಟು ದಪ್ಪ ಆಗ್ತಾ ಇರೋದು ನೋಡೋಕೆ ಆಗ್ತಾ ಇರಲಿಲ್ಲ. ಅಲ್ಲದೆ ಅವನ ಗೆಳೆಯರ ಹೆಂಡತಿಯರೆ ತುಂಬಾ ಸ್ಲಿಮ್ ಆಗಿದ್ರು. ಸೋ, ಖೇಮುಗೆ ನನ್ನ ಹೆಂಡತಿನೂ ಹಂಗೇ ಇರಬೇಕು ಅಂತ ಆಸೆ. ಖೇಮುಶ್ರೀಗೆ ಡೈಲಿ ವಾಕಿಂಗ್ ಮಾಡು ಅಂತ ಹೇಳಿ ಹೇಳಿ ಸಾಕಾಗಿತ್ತು.
ಅವಳು ಮಾಡ್ತಾನೇ ಇರಲಿಲ್ಲ. ಒಂದು ದಿನ ಖೇಮು ಖಡಕ್ಕಾಗಿ ಹೇಳಿಬಿಟ್ಟ, ನೀನು ಇವತ್ತಿಂದ ಡೈಲಿ 10 ಸಾವಿರ ಸ್ಟೆಪ್ಸ್ ವಾಕ್ ಮಾಡಬೇಕು. ನೀನು ಸೋಮಾರಿ ಅಂತ ಗೊತ್ತು. ಅದಕ್ಕೇ ಈ ಸ್ಮಾರ್ಟ್ ವಾಚ್ ತಂದಿದ್ದೀನಿ. ಇನ್ಮೇಲೆ ನೀನು ತಪ್ಪಿಸಿಕೊಳ್ಳೋಕಾಗಲ್ಲ ಅಂತ. ಸರಿ ಅಂದಿನಿಂದ ಪ್ರತಿದಿನ ಆಫೀಸಿಂದ ಬಂದಮೇಲೆ ಖೇಮು ಹೆಂಡತಿಯ ಸ್ಮಾರ್ಟ್ ವಾಚ್ ಟೆಸ್ಟ್ ಮಾಡ್ತಾ ಇದ್ದ. ಅದು 10 ಸಾವಿರಕ್ಕಿಂತ ಜಾಸ್ತಿನೇ ತೋರಿಸ್ತಾ ಇತ್ತು.
ಖೇಮು ಖುಷಿಯಾಗ್ತಾ ಇದ್ದ. ಆದ್ರೆ ಎಷ್ಟೇ ದಿನ ಆದ್ರೂ ಖೇಮುಶ್ರೀ ಮಾತ್ರ ಸಣ್ಣ ಆಗ್ಲಿಲ್ಲ. ಖೇಮು ಕೇಳಿದ್ರೆ, ನಾನೇನ್ ಮಾಡ್ಲಿ, ದಿನಾ ನೀವು ಆಫೀಸಿಗೆ ಹೋದಾಗ ವಾಕಿಂಗ್ ಮಾಡ್ತೀನಿ. 10 ಸಾವಿರ ಸ್ಟೆಪ್ಸ್‌ಗಿಂತ ಜಾಸ್ತಿ. ಆದ್ರೂ ಸಣ್ಣ ಆಗ್ತಿಲ್ಲ ಅಂದ್ಳು. ಖೇಮುಗೆ ಅನುಮಾನ ಬಂದು ಒಂದ್ ದಿನ ಆಫೀಸಿನಿಂದ ಸ್ವಲ್ಪ ಮುಂಚೆನೇ ಮನೆಗೆ ಹೊರಟ. ಮನೆಗೆ ಬಂದು ಕಾಲಿಂಗ್ ಬೆಲ್ ಒತ್ತಿದ. ಯಾರು ಬಂದಿರಬಹುದು ಅಂತ ಖೇಮುಶ್ರೀ ಅನುಮಾನದ ಹೊರಗೆ ಬಂದಳು. ಅಷ್ಟೊತ್ತಿಗೆ, ಅದೆಲ್ಲಿತ್ತೋ ಅವರ ಮನೆಯ ನಾಯಿ ರಾಬರ್ಟ್, ಓಡಿ ಬಂದು ಖೇಮು ಮುಂದೆ ಬಾಲ ಅಡಿಸ್ತಾ ನಿಂತ್ಕೊಂತು. ಅದರ ಕುತ್ತಿಗೆಯಲ್ಲಿದ್ದ ಸ್ಮಾರ್ಟ್‌ವಾಚ್‌ನಲ್ಲಿ 11 ಸಾವಿರ ಸ್ಟೆಪ್ಸ್ ರೀಡಿಂಗ್ ತೋರಿಸ್ತಾ ಇತ್ತು.
ಲೈನ್ ಮ್ಯಾನ್
ಫುಲ್ ಸ್ಲೋ ಬ್ಯಾಟಿಂಗ್ ಮಾಡಿ ಲಾಸ್ಟ್ ಓವರ್‌ನಲ್ಲಿ ಮಾತ್ರ ಹೊಡೆದು ಮ್ಯಾಚ್ ಗೆಲ್ಲಿಸ್ತೀನಿ ಅಂದುಕೊಳ್ಳೋದು
- ಓವರ್ ಕಾನಿಡೆನ್ಸ್
ಕುತ್ತಿಗೆಗೆ ಸೀರೆ ಬಿಗಿದು ಕೊಲೆ ಮಾಡುವವನು
- ‘ಸೀರೆಯಲ್’ ಕಿಲ್ಲರ್
ನಮಗೆ ವಯಸ್ಸಾಗಿದೆ ಅಂತ ಗೊತ್ತಾಗೋದು ಯಾವಾಗ?
- ನಮ್ ಕಾಲದಲ್ಲಿ ಹಿಂಗಿರಲಿಲ್ಲ ಅನ್ನೋ ಮಾತು ನಮ್ಮ ಬಾಯಲ್ಲಿ ಬಂದಾಗ
ವಾಕ್ಯ ಪ್ರಯೋಗದ ಬಗ್ಗೆ ಬಂದ ಡೌಟು
- ತುಂಬಾ ಓದಿದವರಿಗೂ, ತುಂಬಾ ಓದಿಕೊಂಡವರಿಗೂ ಇರೋ ವ್ಯತ್ಯಾಸ ಏನು?
ಪರ ವಿರೋಧದ ನಡುವೆ ಮತ್ತೆ ಅಮೆರಿಕ ಇರಾನ್ ಯುದ್ಧ ಶುರು ಆಗಿದೆ.
- ಯುದ್ಧಂ ಶರಣಂ ಗಚ್ಛಾಮಿ ಅನ್ನೋದನ್ನ ಕೇಳಿ ಲಾಫಿಂಗ್ ಬುದ್ಧ ಇನ್ನಷ್ಟು ಜೋರಾಗಿ ನಗ್ತಾ ಇದ್ದಾನಂತೆ.
- ಕ್ರಿಕೆಟ್ ಅನ್ನೇ ಸಮರ, ಹಣಾಹಣಿ ಅಂತ ಕರೆಯೋ ದೇಶ. ಹಾಗಾಗಿ ತುಂಬಾ ಜನ ಯುದ್ಧ ಬೇಕು ಅಂತಿದ್ದಾರೆ. ಆದ್ರೂ ವಾರ್ ಡಿಕ್ಲೇರ್ ಮಾಡೋದಕ್ಕೂ ಇನ್ನಿಂಗ್ಸ್ ಡಿಕ್ಲೇರ್ ಮಾಡೋದಕ್ಕೂ ವ್ಯತ್ಯಾಸ ಇದೆ ಕಣ್ರಪಾ..
- ಅಲ್ಲೆಲ್ಲೂ ಯುದ್ಧ ನಡೆದರೆ ಇಲ್ಲಿ ಭಾರತದಲ್ಲಿ ಇರೋವ್ರೆಲ್ಲ ಶ್ರೀಲಂಕಾದವರ ಥರ ಆಡ್ತಾ ಇದ್ದಾರೆ. ಯಾಕಂದ್ರೆ ಇಲ್ಲಿ ಎಲ್ಲರೂ ‘ಸಮರವೀರ’ರೇ
ಯುದ್ಧದ ಸಮಯದಲ್ಲಿ ಸಂತ್ರಸ್ತರಿಗೆ ಆಕಾಶದಿಂದ ಎಸೆಯಲಾಗುವ ಫುಡ್ ಪ್ಯಾಕೆಟ್
- War ಅನ್ನ
ಪ್ರಮೀಳಾ ನೇಸರ್ಗಿ ಅವರಿಗೆ ಕೋಪ ಬಂದ್ರೆ ಅದು
- ನೇಸರ್ಗಿ ಕಾ ಪ್ರಕೋಪ
ಬೆಳಗಾಂನಲ್ಲಿ ಕುಂದಾ ಸಿಹಿ ಸಿಗೋದು ಕಷ್ಟ ಆದ್ರೆ ಅದು
- ‘ಕುಂದಾ’ ಕೊರತೆ
ಬಾರಿಗೂ ಕುಡಿದುಕೊಂಡೇ ಹೋಗುವವನನ್ನ ನೋಡಿ ಏನಂತ ಹೇಳಬಹುದು?
- ‘ದಟ್ಸ್ ದಿ ಸ್ಪಿರಿಟ್’