Leena Joshi Column: ನಿಯಮಗಳ ಅಡಿಯಲ್ಲಿ ಮರೆಮಾಚಲಾಗುವ ಪಾಶವೀಯತೆ
ಎಪ್‌ಸ್ಟೀನ್ ಅಮೆರಿಕದ ಶ್ರೀಮಂತ ಕುಳ, ಅವನ ಸಂಪರ್ಕಗಳು ಜಗತ್ತಿನ ಪ್ರಮುಖ ನಾಯಕ ರೊಂದಿಗೆ ಇದ್ದವು. ಆದರೆ ಅವನ ಒಳಗಿನ ಪ್ರಪಂಚವು ಹೇಗಿತ್ತು ಎಂದು ನಾವು ಈಗ ತಿಳಿದಿದ್ದೇವೆ. ಅವನು ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಮತ್ತು ಅವನ ಸಂಪರ್ಕಗಳು ಅವನನ್ನು ರಕ್ಷಿಸಲು ಪ್ರಯತ್ನಿಸಿದ್ದವು.
-
ಕಹಿಸತ್ಯ
ಲೀನಾ ಜೋಶಿ
ಮಕ್ಕಳು ಸಮಾಜದ ಭವಿಷ್ಯ. ಅವರ ಸುರಕ್ಷತೆ, ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆದರೆ, ಮಕ್ಕಳನ್ನು ವೇಶ್ಯಾವೃತ್ತಿಗೆ ದೂಡುವ ಕ್ರೂರಪದ್ಧತಿ ಮಾನವೀಯತೆಯ ಮೇಲಿನ ಭೀಕರ ದಾಳಿ. ಇದು ಕೇವಲ ಅಪರಾಧವಲ್ಲ, ಇದು ಕ್ಷಮಿಸಲಾಗದ ಪಾಪ. ಇದರಲ್ಲಿ ಮಕ್ಕಳಿಗೆ ಯಾವುದೇ ಆಯ್ಕೆ ಇಲ್ಲ, ಯಾವುದೇ ಒಪ್ಪಿಗೆ ಇಲ್ಲ. ಬಲವಂತ, ಬೆದರಿಕೆ, ಬಡತನ, ಮೋಸ ಮತ್ತು ಅಧಿಕಾರದ ದುರುಪಯೋಗ, ಇದರ ಮೂಲಕಾರಣಗಳು
ಮಾನವನು ಇತರ ಪ್ರಾಣಿಗಳಂತೆ ಮೂಲಭೂತ ಆಸೆ-ಅವಶ್ಯಕತೆಗಳ ಮೇಲೆ ನಡಿಗೆ ನಡೆಸುವ ಜೀವಿ. ಆಹಾರ, ಆಶ್ರಯ, ಪ್ರಜನನ, ಶತ್ರುಗಳಿಂದ ರಕ್ಷಣೆ ಇತ್ಯಾದಿ ಮೂಲಭೂತ ಪ್ರೇರಣೆಗಳೇ ಅವನ ಚಲನೆಯ ಮೂಲ. ಗುಂಪಿನಲ್ಲಿನ ಸ್ಥಾನಕ್ಕಾಗಿಯೇ, ಶಕ್ತಿ ಮತ್ತು ಪ್ರಭುತ್ವದ ಹೋರಾಟಗಳು ಸಂಭವಿಸುತ್ತವೆ.
ಲೈಂಗಿಕ ಆಸೆಯೇ, ಪ್ರಾಬಲ್ಯ, ಸ್ವಯಂ-ಪ್ರತಿಷ್ಠೆ, ಭಾವನಾತ್ಮಕ ಸುಖದ ಮೂಲವಾಗಿರುತ್ತದೆ. ಈ ಮೂಲಭೂತತೆಯನ್ನು ಮರೆಮಾಡಲು ನಾವು ಸಾಮಾಜಿಕ ನಿಯಮಗಳು, ಕಾನೂನುಗಳು, ಸಂಸ್ಕೃತಿ ಮತ್ತು ಧರ್ಮ ಎಂಬ ಪದರಗಳನ್ನು ರಚಿಸಿಕೊಂಡಿದ್ದೇವೆ. ಇವುಗಳ ಮೂಲಕ ಈ ಪ್ರಾಣಿಕ ಸ್ವಭಾವವನ್ನು ಮರೆಮಾಡಿ, ಮಾನವನು ಉತ್ತಮ ವ್ಯಕ್ತಿಯ ಮುಖವಾಡವನ್ನು ಧರಿಸಿ ದ್ದಾನೆ.
ಆದರೂ, ಈ ವೇಷದ ಹಿಂದೆ, ಅಧಿಕಾರ ಮತ್ತು ಸಂಪತ್ತಿನ ಪ್ರಭಾವದಲ್ಲಿ, ಮೂಲ ಪ್ರೇರಣೆಗಳು ಜೀವಂತ ಗಿರುತ್ತವೆ. ಇದರಿಂದ ಉಂಟಾಗುವ ಫಲಿತಾಂಶವೇ, ಸದ್ಯಕ್ಕೆ ಟ್ರೆಂಡಿಂಗ್‌ನಲ್ಲಿ ಇರುವ ‘ಎಪ್‌ಸ್ಟೀನ್ ಫಲ’ನಂಥ ಘಟನೆಗಳು. ಶಕ್ತಿ ಮತ್ತು ಲೈಂಗಿಕ ಉತ್ಸಾಹದ ನಡುವಿನ ಸಂಬಂಧಗಳು, ಧರ್ಮ, ಕಥೆ, ಪುರಾಣ ಮತ್ತು ಸಂಸ್ಕೃತಿಯಲ್ಲಿಯೂ ಪ್ರತ್ಯಕ್ಷವಾಗುತ್ತವೆ.
ಮಾನವನ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು, ನಾವು ಮಾನವನ ಮೂಲ ಸ್ವರೂಪವನ್ನು ಅರ್ಥಮಾಡಿಕೊಳ್ಳಬೇಕು. ಮಾನವನು ಒಂದು ಸಂಕೀರ್ಣ ಜೀವಿ, ಅವನು ತನ್ನ ಸ್ವಾಭಾವಿಕ ಆಸೆ, ಆಕಾಂಕ್ಷೆಗಳು ತ್ತು ಸಮಾಜದ ನಿಯಮಗಳ ನಡುವೆ ಹೋರಾಡುತ್ತಾನೆ. ಈ ಹೋರಾಟವು ಮಾನವನ ನಡವಳಿಕೆಯನ್ನು ರೂಪಿಸುತ್ತದೆ ಮತ್ತು ಅದರ ಪರಿಣಾಮವಾಗಿ, ಸಮಾಜದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಅದರಲ್ಲಿ ಪ್ರಮುಖವಾಗಿರುವುದು, ವೇಶ್ಯಾವಾಟಿಕೆ.
ಇದನ್ನೂ ಓದಿ: Leena Joshi Column: ಒಂದು ದೃಷ್ಟಿ, ಒಂದು ಭವಿಷ್ಯ: ಇದು ಸಾಧ್ಯವೇ ?
ಇದು ಜಗತ್ತಿನ ಅತಿ ಪುರಾತನವಾದ ವೃತ್ತಿ. ಇದು ಸಾವಿರಾರು ವರ್ಷಗಳಿಂದ ನಡೆಯುತ್ತಿದೆ ಮತ್ತು ಇದನ್ನು ನಿವಾರಿಸಲು ಅನೇಕ ಪ್ರಯತ್ನಗಳನ್ನು ಮಾಡಲಾಗಿವೆ. ಆದರೆ ಇದು ಎಂದಿಗೂ ಕೊನೆ ಗೊಳ್ಳುವುದಿಲ್ಲ. ಇತ್ತೀಚೆಗೆ ಜಗತ್ತಿನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ ಜೆಫ್ರಿ ಎಪ್‌ಸ್ಟೀನ್ ಪ್ರಕರಣ ವು ಇದಕ್ಕೆ ಒಂದು ಉದಾಹರಣೆ.
ಎಪ್‌ಸ್ಟೀನ್ ಅಮೆರಿಕದ ಶ್ರೀಮಂತ ಕುಳ, ಅವನ ಸಂಪರ್ಕಗಳು ಜಗತ್ತಿನ ಪ್ರಮುಖ ನಾಯಕ ರೊಂದಿಗೆ ಇದ್ದವು. ಆದರೆ ಅವನ ಒಳಗಿನ ಪ್ರಪಂಚವು ಹೇಗಿತ್ತು ಎಂದು ನಾವು ಈಗ ತಿಳಿದಿದ್ದೇವೆ. ಅವನು ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಮತ್ತು ಅವನ ಸಂಪರ್ಕಗಳು ಅವನನ್ನು ರಕ್ಷಿಸಲು ಪ್ರಯತ್ನಿಸಿದ್ದವು.
ಎಪ್‌ಸ್ಟೀನ್ ಪ್ರಕರಣವು ನಮಗೆ ಒಂದು ಪಾಠ ಕಲಿಸುತ್ತದೆ. ಪ್ರಭಾವಶಾಲಿ ಜನರು ತಮ್ಮ ಅಪರಾಧ ಗಳನ್ನು ಮುಚ್ಚಿಡಲು ಶ್ರಮಿಸಿದರೂ, ಒಂದಲ್ಲ ಒಂದು ದಿನ ಅದು ಹೊರಬರುತ್ತದೆ ಮತ್ತು ಮನುಷ್ಯನ ಮುಖವಾಡವನ್ನು ಬೆತ್ತಲೆಗೊಳಿಸುತ್ತದೆ. ಅಂಥದ್ದರಲ್ಲಿ, ಯಶಸ್ವಿ ವ್ಯಕ್ತಿಗಳು, ಸಮಾಜ ದಲ್ಲಿ ಆದರ್ಶಪ್ರಾಯರಾಗಿದ್ದವರು, ಒಮ್ಮೆಗೇ ಈ ತರಹ ಬೆತ್ತಲೆಯಾದಾಗ, ಸಹಿಸಿಕೊಳ್ಳುವುದು ಅಸಾಧ್ಯ!
ಮನುಷ್ಯ ತನ್ನ ಅನಾಚಾರಗಳನ್ನು ಕಾನೂನುಬದ್ಧವಾಗಿಸಲು, ಸಮಾಜದಲ್ಲಿ ಎಲ್ಲರೂ ಅದನ್ನು ಒಪ್ಪಿಕೊಳ್ಳುವಂತಾಗಲು ವಿವಿಧ ಮಾರ್ಗಗಳನ್ನು ಅನುಸರಿಸಿದ್ದಾನೆ. ಪುರಾಣಗಳಲ್ಲಿ, ಇಂದ್ರಲೋಕ ವನ್ನು ಸೃಷ್ಟಿಸಿ, ಇಂದ್ರನ ಆಸ್ಥಾನದಲ್ಲಿ ಅಪ್ಸರೆಯರಿದ್ದರು, ಅವರು ಇಂದ್ರನ ಆಸ್ಥಾನದಲ್ಲಿದ್ದ ಉಳಿದ ದೇವತೆಗಳನ್ನು ಕಾಲಕಾಲಕ್ಕೆ ನೃತ್ಯ, ಮಧುಪಾನಗಳಿಂದ ಸುಖದ ಸುಪ್ಪತ್ತಿಗೆಯಲ್ಲಿ, ಲೋಲುಪತೆಯಲ್ಲಿ ಮೀಯಿಸಿ ಎಲ್ಲರನ್ನೂ ಖುಷಿಪಡಿಸುತ್ತಿದ್ದರು ಎಂದು ಘಂಟಾಘೋಷವಾಗಿ ಹೇಳಲಾಗಿದೆ.
ಮುನಿಗಳ ತಪಸ್ಸನ್ನು ಭಂಗಪಡಿಸಲು ಕೂಡ ಇಂದ್ರನು ಈ ಅಪ್ಸರೆಯರನ್ನು ಉಪಯೋಗಿಸಿ ಕೊಂಡ ಅಂತ ಕಥೆಗಳಿವೆ. ಭಾರತ ಒಂದೇ ಅಲ್ಲ, ಪ್ರಾಚೀನ ಗ್ರೀಸ್, ರೋಮ್, ಚೀನಾ, ಮತ್ತು ಇತರ ದೇಶಗಳಲ್ಲಿ ವೇಶ್ಯಾವಾಟಿಕೆಯು ಸಾಮಾನ್ಯ ವಿದ್ಯಮಾನವಾಗಿತ್ತು. ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ಕೂಡ ವೇಶ್ಯಾವಾಟಿಕೆಯ ಬಗ್ಗೆ ಪ್ರಸ್ತಾಪವಿದೆ. ಇದು ಮುಂದುವರಿದಂತೆ ಮುಸ್ಲಿಂ ರಾಜರ ಆಕ್ರಮಣದಲ್ಲಿ ಒಂದು ಬಗೆಯ ವಿಭಿನ್ನ ತಿರುವನ್ನು ಪಡೆದುಕೊಂಡಿತು.
ಯುದ್ಧದಲ್ಲಿ ಸೋತ ರಾಜನ ಅರಮನೆಯ ಮಹಿಳೆಯರನ್ನು, ಉನ್ನತ ಹುದ್ದೆಯಲ್ಲಿದ್ದ ಆಸ್ಥಾನಿಕರ ಮನೆಯ ಕುಲೀನ ಮಹಿಳೆಯರನ್ನು, ಸೋತ ರಾಜ್ಯದ ಸುಂದರ ಹುಡುಗಿಯರನ್ನು ಸೆರೆ ಹಿಡಿದು ತಂದು ‘ಹರಂ’ ಅಂತ ಕರೆಯಲಾಗುತ್ತಿದ್ದ ದೊಡ್ಡ ದೊಡ್ಡ ಮನೆಗಳಲ್ಲಿ, ಅರಮನೆಗಳಲ್ಲಿ ಕೂಡಿ ಹಾಕುತ್ತಿದ್ದರೆಂದು ಇತಿಹಾಸದಲ್ಲಿ ದಾಖಲಾಗಿದೆ.
ಅಕ್ಬರನ ‘ಹರಂ’ನಲ್ಲಿ 5000ಕ್ಕಿಂತ ಜಾಸ್ತಿ ಮಹಿಳೆಯರಿದ್ದರು ಅಂತ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಮಹಿಳೆಯರನ್ನು ಭೋಗದ ವಸ್ತು ಅಂತ ದೇವತೆಗಳೇ ಪ್ರಮಾಣಿಸಿರುವಾಗ, ಅದನ್ನು ಲೀಗಲ್ ಎನ್ನುವಾಗ, ಮನುಷ್ಯರು ಅದನ್ನು ನಂಬುವುದರಲ್ಲಿ, ಅನುಸರಿಸುವುದರಲ್ಲಿ ಅಪರಾಧ ವಿಲ್ಲ ಎಂದು ಗಂಡಸರೇ legitimize ಮಾಡಿದ್ದಾರೆ ಶತಮಾನಗಳ ಹಿಂದೆಯೇ! ದೇವದಾಸಿ ಪದ್ಧತಿ ಕೂಡ ವೇಶ್ಯಾವಾಟಿಕೆಯ ಇನ್ನೊಂದು ರೂಪ. ವೇಶ್ಯಾವಾಟಿಕೆಯು ವಿವಿಧ ಪ್ರಕಾರಗಳಲ್ಲಿ ಇಂದಿಗೂ ಅಸ್ತಿತ್ವದಲ್ಲಿದೆ.
ಬೀದಿಯ ವೇಶ್ಯಾವಾಟಿಕೆ, ಬಾರ್ ಮತ್ತು ಕ್ಲಬ್, ಮಸಾಜ್ ಪಾರ್ಲರ್‌ಗಳಲ್ಲಿನದು ಮಾತ್ರವಲ್ಲದೆ, ಆನ್‌ಲೈನ್ ವೇಶ್ಯಾವಾಟಿಕೆಯು ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ನಡೆಯುತ್ತದೆ. ಶ್ರೀಮಂತರಲ್ಲಿ, ಅಧಿಕಾರ ಇರುವವರ ಜೀವನದಲ್ಲಿ ಏನೋ ಒಂದು ಕೊರತೆ ಕಾಡು ತ್ತಿರುತ್ತದೆ.
ಜನಸಾಮಾನ್ಯರು ತಮ್ಮ ಜೀವನದಲ್ಲಿ ಕುಟುಂಬವನ್ನು ನೋಡಿಕೊಳ್ಳುವುದರಲ್ಲಿ, ದುಡ್ಡು ಹೊಂದಿಸುವುದರಲ್ಲಿ ವ್ಯಸ್ತರಾಗಿರುತ್ತಾರೆ. ಅವರಲ್ಲೂ ಕೊರತೆ ಇದ್ದರೂ, ಅದನ್ನುಪೂರೈಸಿಕೊಳ್ಳುವ ಶಕ್ತಿ ಮತ್ತು ಸಂಪನ್ಮೂಲ ಇರುವುದಿಲ್ಲ. ಅವಕಾಶ ಸಿಕ್ಕಿದರೆ, ಚಾ ಯಾರೂ ಬಿಟ್ಟು ಕೊಡಲ್ಲ!
ಆದರೆ ಈ ಅಗರ್ಭ ಶ್ರೀಮಂತರು, ಆಯಕಟ್ಟಿನ ಜಾಗದಲ್ಲಿ ಇರುವರು, ಅಧಿಕಾರದಲ್ಲಿ ಇರುವವರು, ತಮ್ಮ ವಾಂಛೆಯನ್ನು ತೀರಿಸಿಕೊಳ್ಳಲು ಬೇರೆ ಬೇರೆ ದಾರಿಯನ್ನು ಹುಡುಕುತ್ತಾರೆ. ಈ ಶ್ರೀಮಂತರ ಮತ್ತು ಅನುಕೂಲವಂತರ, ಪ್ರಭಾವಿ ಜನರ ಜೀವನವು ಮುಚ್ಚಿಟ್ಟರೆ ಚೆನ್ನ; ಗಟಾರ ಮುಚ್ಚಿದ್ದರೆ ಚೆಂದ, ತೆರೆದಲ್ಲಿ ಅಸಹನೀಯ ವಾಸನೆ! ಚರಂಡಿಗಳ ಮೇಲೆ ಚಪ್ಪಡಿ ಮುಚ್ಚಿದಾಗ, ನಮಗೆ ವಾಸನೆ ಬರುವುದಿಲ್ಲ.
ಚರಂಡಿಗ ಮೇಲೆ ಎಷ್ಟೋ ಜನ ವ್ಯಾಪಾರ ಮಾಡುತ್ತಾರೆ. ಚರಂಡಿಗಳ ಮೇಲೆ ಬಟ್ಟೆ, ತಿನಿಸು ಮಾರಾಟ ಮಾಡುತ್ತಾರೆ. ಆ ದಾರಿಯ ಮೇಲೆ ಹಾದುಹೋಗುವವರಿಗೆ ಕೆಳಗಡೆ ಚರಂಡಿ ಇದೆ ಅನ್ನುವುದು ಗೊತ್ತಿರುವುದಿಲ್ಲ. ಅದೇ ರೀತಿ, ನಾವೂ ಈ ಪ್ರಭಾವಿ ವ್ಯಕ್ತಿಗಳ, ಆಯಕಟ್ಟಿನ ಜಾಗದಲ್ಲಿ ರುವ ಶ್ರೀಮಂತರ, ಕೇವಲ ಒಂದೇ ಮುಖವನ್ನು ನೋಡಿರುತ್ತೇವೆ.
ನಮಗೆ ಅನಿಸುತ್ತದೆ, ಅವರು ಜೀವನದಲ್ಲಿ ತುಂಬಾ ಸುಖಿಯಾಗಿದ್ದಾರೆ. ದಿನಕ್ಕೊಂದು ಬಟ್ಟೆ, ದಿನಕ್ಕೊಂದು ಕಾರಲ್ಲಿ ಓಡಾಡಿ ತುಂಬಾ ವೈಭವೋಪೇತ ಜೀವನವನ್ನು ಸಾಗಿಸುತ್ತಿದ್ದಾರೆ ಅಂತ. ಆದರೆ ಅವರ ಬದುಕಿನ ಮತ್ತೊಂದು ಮಜಲು ತುಂಬಾ ಗಲೀಜಾಗಿರುತ್ತದೆ. ಅದನ್ನ ಮುಚ್ಚಿಟ್ಟರೆ ಒಳ್ಳೆಯದು. ತೆರೆದಾಗ, ನಮ್ಮ ಭ್ರಮೆ ಕಳಚಿಬೀಳುತ್ತದೆ. ಈ ಜೆಫ್ರಿ ‘ಎಪ್‌ಸ್ಟೀನ್ ಫಲ’ ಓಪನ್ ಆದ ನಂತರ, ತುಂಬಾ ಜನರ ಮುಖವಾಡ ಕಳಚಿ ಬಿಚ್ಚಿದೆ.
ಈ ತರಹದ ಪಾರ್ಟಿಗಳು, ಈ ತರಹದ ವಾಂಛೆಗಳು, ಈ ತರಹದ ಪಶುಸದೃಶ ಆಸೆಗಳು ಮನುಷ್ಯ ನಿಗೆ ಹೊಸದಲ್ಲ. ಆದರೆ ಈ ಫೈಲ್ʼನಲ್ಲಿ ಇರುವಂಥ ಕೆಲವೊಂದು ವಿಷಯಗಳು ನಿಜಕ್ಕೂ ಅಸಹನೀಯ. ಚಿಕ್ಕ ಹೆಣ್ಣು ಮಕ್ಕಳನ್ನುಲೈಂಗಿಕ ತೃಷೆಗೆ ಉಪಯೋಗಿಸಿಕೊಳ್ಳುವುದು ಅತ್ಯಂತ ದುಃಖಕರ, ದುರದೃಷ್ಟಕರ. ಅದಕ್ಕೆ ಕ್ಷಮೆ ಇಲ್ಲ. ಚಿಕ್ಕ ಹುಡುಗಿಯರನ್ನು ವ್ಯಭಿಚಾರಕ್ಕೆ ಬಳಸು ವುದು ಕೇವಲ ಕಾನೂನು ಉಲ್ಲಂಘನೆಯಲ್ಲ, ಪಾಪ. ಈ ಪಾಪಕ್ಕೆ ಕ್ಷಮೆಯಿಲ್ಲ, ಪ್ರಾಯಶ್ಚಿತ್ತವಿಲ್ಲ.
ಮಕ್ಕಳು ಸಮಾಜದ ಭವಿಷ್ಯ. ಅವರ ಸುರಕ್ಷತೆ, ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆದರೆ, ಮಕ್ಕಳನ್ನು ವೇಶ್ಯಾವೃತ್ತಿಗೆ ದೂಡುವ ಕ್ರೂರಪದ್ಧತಿ ಮಾನವೀಯತೆಯ ಮೇಲಿನ ಭೀಕರ ದಾಳಿ. ಇದು ಕೇವಲ ಅಪರಾಧವಲ್ಲ, ಇದು ಕ್ಷಮಿಸಲಾಗದ ಪಾಪ. ಇದರಲ್ಲಿ ಮಕ್ಕಳಿಗೆ ಯಾವುದೇ ಆಯ್ಕೆ ಇಲ್ಲ, ಯಾವುದೇ ಒಪ್ಪಿಗೆ ಇಲ್ಲ.
ಬಲವಂತ, ಬೆದರಿಕೆ, ಬಡತನ, ಮೋಸ ಮತ್ತು ಅಧಿಕಾರದ ದುರುಪಯೋಗ, ಇದರ ಮೂಲ ಕಾರಣಗಳು. ಇಂಥ ಕೃತ್ಯಗಳು ಮಕ್ಕಳ ಮನಸ್ಸನ್ನು, ದೇಹ ಮತ್ತು ಭವಿಷ್ಯವನ್ನು ಶಾಶ್ವತವಾಗಿ ಗಾಯಗೊಳಿಸುತ್ತವೆ. ಈ ಅಪರಾಧದ ಪರಿಣಾಮಗಳು ಜೀವನಪೂರ್ತಿ ಮಕ್ಕಳನ್ನು ಹಿಂಬಾಲಿಸು ತ್ತವೆ. ಮಕ್ಕಳಿಂದ ಕದ್ದುಕೊಳ್ಳಲ್ಪಡುವುದು ಕೇವಲ ಬಾಲ್ಯವಲ್ಲ; ಅವರ ಕನಸುಗಳು, ಆಸೆಗಳು ಮತು ಮಾನವೀಯ ಗೌರವವೂ ಕಸಿಯಲ್ಪಡುತ್ತದೆ.
ಮಕ್ಕಳ ವೇಶ್ಯಾವೃತ್ತಿಯನ್ನು ಯಾವುದೇ ಧರ್ಮ, ಸಂಸ್ಕೃತಿ ಅಥವಾ ಪರಿಸ್ಥಿತಿ ಸಮರ್ಥಿಸಿಕೊಳ್ಳ ಲಾರದು. ಇಂಥ ಕೃತ್ಯಗಳಲ್ಲಿ ತೊಡಗಿರುವವರು, ಅದರ ಹಿಂದೆ ನಿಂತಿರುವ ಜಾಲಗಳು, ದಲ್ಲಾಳಿಗಳು ಮತ್ತು ಲಾಭ ಪಡೆಯುವ ಎಲ್ಲರೂ ಕಠಿಣ ಶಿಕ್ಷೆಗೆ ಪಾತ್ರರಾಗಬೇಕು. ಅಪರಾಧಿಗಳಿಗೆ ಶಿಕ್ಷೆಯಲ್ಲಿ ಯಾವುದೇ ಸಡಿಲಿಕೆ ಇರಬಾರದು; ನ್ಯಾಯವು ಮಕ್ಕಳ ಪರವಾಗಿರಬೇಕು. ಸಮಾಜವಾಗಿ ನಾವು ಮೌನವಾಗಿರಬಾರದು. ಸಂಶಯಾಸ್ಪದ ಚಟುವಟಿಕೆಗಳನ್ನುಕಂಡರೆ, ವರದಿ ಮಾಡುವುದು ನಮ್ಮ ಹೊಣೆ. ಮಕ್ಕಳ ವೇಶ್ಯಾವೃತ್ತಿ ಮಾನವೀಯತೆಗೆ ವಿರುದ್ಧವಾದ ಪಾಪ.
‘ಜೆಫ್ರಿ ಎಪ್‌ಸ್ಟೀನ್’ ಎಂಬ ಹೆಸರು ಜಗತ್ತಿನಾದ್ಯಂತ ಸಮಾಜವನ್ನು ಬೆಚ್ಚಿಬೀಳಿಸಿದ ಒಂದು ಕತ್ತಲೆಯ ಅಧ್ಯಾಯಕ್ಕೆ ಸಂಕೇತವಾಗಿದೆ. ಅಪ್ರಾಪ್ತ ಮಕ್ಕಳ ಲೈಂಗಿಕ ಶೋಷಣೆ, ಶ್ರೀಮಂತರು ಮತ್ತು ಪ್ರಭಾವಶಾಲಿಗಳ ಭಾಗವಹಿಸುವಿಕೆ ಮತ್ತು ನ್ಯಾಯವ್ಯವಸ್ಥೆಯ ಮೇಲೆ ಉಂಟಾದ ಗಂಭೀರ ಪ್ರಶ್ನೆಗಳು, ಇವೆಲ್ಲವೂ ‘ಎಪ್‌ಸ್ಟೀನ್’ ಪ್ರಕರಣವನ್ನು ಕೇವಲ ಒಂದು ಅಪರಾಧ ಪ್ರಕರಣವಲ್ಲದೆ ಒಂದು ಸಾಮಾಜಿಕ ಎಚ್ಚರಿಕೆಯಾಗಿ ಪರಿವರ್ತಿಸಿದೆ. ಈ ದಾಖಲೆಗಳು ಮಕ್ಕಳ ಲೈಂಗಿಕ ಶೋಷಣೆಯು ಹೇಗೆ ಸದ್ದಿಲ್ಲದೆ, ಆದರೆ ವ್ಯಾಪಕವಾಗಿ ನಡೆಯುತ್ತಿದೆ ಎಂಬ ಭಯಾನಕ ಸತ್ಯವನ್ನು ಸಮಾಜದ ಮುಂದೆ ತಂದಿವೆ.
ನ್ಯಾಯ, ಪಾರದರ್ಶಕತೆ ಮತ್ತು ಮಕ್ಕಳ ಸುರಕ್ಷತೆ, ಇವು ಕೇವಲ ಮಾತುಗಳಾಗದೆ, ಕಾರ್ಯರೂಪಕ್ಕೆ ಬರಬೇಕಾದ ಸಮಯ ಇದು. ‘ಎಪ್‌ಸ್ಟೀನ್’ ಪ್ರಕರಣ ಸಮಾಜಕ್ಕೆ ಕೊಟ್ಟ ಗಾಯ ಆಳವಾದದ್ದು, ಆದರೆ ಅದರಿಂದ ನಾವು ಪಾಠ ಕಲಿತರೆ ಮಾತ್ರ ನೋವಿಗೆ ಅರ್ಥ ಸಿಗುತ್ತದೆ, ಪರಿಹಾರ ಸಿಗುತ್ತದೆ.
ಮನುಷ್ಯ ಎಲ್ಲವನ್ನು ಗಳಿಸಿಯೂ ಸುಖವಾಗಿಲ್ಲ ಅಂದರೆ, ಪ್ರಾಣಿಯ ತತ್ವಗಳು ಅವನಲ್ಲಿ ಇನ್ನೂ ಜೀವಂತವಾಗಿವೆ ಎಂದರ್ಥ. ಆದರೆ ಕೆಲವೊಮ್ಮೆ ಅನಿಸುತ್ತದೆ, ಪ್ರಾಣಿಗಳು ಕೂಡ ಈ ತರಹದ ಲೈಂಗಿಕ ತೃಷೆಯನ್ನು ಬಹುಶಃ ಇಟ್ಟುಕೊಳ್ಳುವುದಿಲ್ಲ.
(ಲೇಖಕಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ
ಉದ್ಯೋಗಿ)