ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Leena Joshi Column: ಒಂದು ದೃಷ್ಟಿ, ಒಂದು ಭವಿಷ್ಯ: ಇದು ಸಾಧ್ಯವೇ ?

ಅಮೆರಿಕದ ಆರ್ಥಿಕ ನೀತಿಗಳು ಮತ್ತು ಅಲ್ಲಿನ ಹಣದುಬ್ಬರದಿಂದ ನಮ್ಮ ರುಪಾಯಿಯ ಮೌಲ್ಯ ಏರಿಳಿತಗೊಳ್ಳುತ್ತಲೇ ಇರುತ್ತದೆ. ಆದರೆ, ನಮ್ಮ ಒಕ್ಕೂಟದ ಒಳಗೆ ವ್ಯಾಪಾರ ನಡೆಸಿದರೆ, ನಾವು ನಮ್ಮ ಕರೆನ್ಸಿ ಅಥವಾ ಒಂದು common ಕರೆನ್ಸಿಯನ್ನು ಬಳಸಬಹುದು. ಇದರಿಂದ ವಿನಿಮಯ ದರದ ಅಪಾಯ ಕಡಿಮೆಯಾಗುತ್ತದೆ ಮತ್ತು ವ್ಯವಹಾರ ವೆಚ್ಚ ಸಹ ಕಡಿಮೆ ಯಾಗುತ್ತದೆ.

ಒಂದು ದೃಷ್ಟಿ, ಒಂದು ಭವಿಷ್ಯ: ಇದು ಸಾಧ್ಯವೇ ?

-

Ashok Nayak
Ashok Nayak Jan 24, 2026 8:36 AM

ಯಕ್ಷ ಪ್ರಶ್ನೆ

ಲೀನಾ ಜೋಶಿ

ದಶಕಗಳಿಂದ ಜಗತ್ತಿನ ಹಣಕಾಸು ವ್ಯವಸ್ಥೆಯ ರಾಜ ಅಮೆರಿಕದ ಡಾಲರ್. ಅಂತಾ ರಾಷ್ಟ್ರೀಯ ವ್ಯಾಪಾರದಿಂದ ಹಿಡಿದು ತೈಲ ಮಾರುಕಟ್ಟೆಯವರೆಗೆ, ಬಹುಪಾಲು ದೇಶಗಳ ವಿದೇಶಾಂಗ ವಿನಿಮಯ ಮೀಸಲು (Forex Reserve) ಡಾಲರ್ನಲ್ಲಿಯೇ ಇದೆ. ಈ ಪ್ರಾಬಲ್ಯ ವು ಅನೇಕ ಸಣ್ಣ ಮತ್ತು ಮಧ್ಯಮ ಆರ್ಥಿಕತೆಗಳನ್ನು ಏಕಪಕ್ಷೀಯ ಸಮಸ್ಯೆಗಳು ಹಾಗೂ ಆರ್ಥಿಕ ಒತ್ತಡಗಳಿಗೆ ಈಡುಮಾಡಿದೆ.

ಆದರೆ, ಈ ಏಕಧ್ರುವೀಯ ವ್ಯವಸ್ಥೆಗೆ ಸವಾಲು ಹಾಕಲು ಒಂದು ಹೊಸ ಆಲೋಚನೆ ಬಲವಾಗುತ್ತಿದೆ. ಅದೆಂದರೆ, ಭಾರತದ ‘ರುಪಾಯಿ’, ಚೀನಾದ ‘ರೆನ್ಮಿನ್ಬಿ’, ರಷ್ಯಾದ ‘ರೂಬಲ್’, ಬ್ರೆಜಿಲ್‌ನ ‘ರಿಯಲ್ ’ಮತ್ತು ದಕ್ಷಿಣ ಆಫ್ರಿಕಾದ ‘ರ‍್ಯಾಂಡ’- ಈ ಐದು ಪ್ರಮುಖ ಕರೆನ್ಸಿಗಳ ( RRRRR ) ಒಕ್ಕೂಟ. ಇವುಗಳು ಒಟ್ಟಾಗಿ ಒಂದು ಸಾಮಾನ್ಯ ವ್ಯಾಪಾರ ಕರೆನ್ಸಿಗೆ, ಒಗ್ಗಟ್ಟಿನ ಹಣಕಾಸು ವ್ಯವಸ್ಥೆಗೆ ಒಳಪಟ್ಟರೆ ಡಾಲರ್ ಆಧಿಪತ್ಯಕ್ಕೆ ‘ಬೈ’ ಅಂದಂತೆಯೇ!

ಈ ಐಕ್ಯತೆಯಿಂದ ಆಗುವುದೇನೆಂದರೆ:

- ತೃತೀಯ ರಾಷ್ಟ್ರಗಳು ಡಾಲರ್‌ನ ಅತಿರೇಕದ ಆಶ್ರಯದಿಂದ ಮುಕ್ತಿ ಪಡೆಯಬಹುದು.

- ಪ್ರಾದೇಶಿಕ ವ್ಯಾಪಾರವು ಹೆಚ್ಚು ಸ್ಥಿರವಾಗಿ ಮತ್ತು ಶುಲ್ಕರಹಿತವಾಗಿರಬಹುದು.

- ಹಣಕಾಸು ವಂಚನೆ, ಅನಿಶ್ಚಿತತೆ ಮತ್ತು ರಾಜಕೀಯ ಒತ್ತಡಗಳಿಂದ ರಕ್ಷಣೆ ಲಭ್ಯವಾಗ ಬಹುದು.

- ಡಿಜಿಟಲ್ ಕರೆನ್ಸಿಗಳ ಮೂಲಕ CBDC (Central Bank Digital Currency) ಸೃಷ್ಟಿ.

ಇದನ್ನೂ ಓದಿ: Leena Joshi Column: ಜೋಶಿಯವರಿಗೆ ಕೆರೆತವಾದರೆ, ಉಳಿದವರು ಮುಲಾಮು ಹಚ್ಚಿಕೊಂಡಿದ್ದೇಕೆ ?

ವಿಶ್ವದ ಅರ್ಧದಷ್ಟು ಜನರ ಒಗ್ಗಟ್ಟು: ಭಾರತ, ಚೀನಾ, ರಷ್ಯಾ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ- ಈ ದೇಶಗಳಲ್ಲಿ ವಿಶ್ವದ ಸುಮಾರು ಶೇ.40ಕ್ಕೂ ಹೆಚ್ಚು ಜನ ವಾಸಿಸುತ್ತಾರೆ. ಇದು ಕೇವಲ ಸಂಖ್ಯೆಯಲ್ಲ, ಜತೆಗೆ ಅಪಾರ ಮಾರುಕಟ್ಟೆ, ಬೃಹತ್ ಉತ್ಪಾದನಾ ಸಾಮರ್ಥ್ಯ ಮತ್ತು ವಿಪುಲ ನೈಸರ್ಗಿಕ ಸಂಪನ್ಮೂಲಗಳ ಆಗರ. ಈ ದೇಶಗಳು ಒಟ್ಟಾಗಿ ನಿಂತರೆ, ಜಗತ್ತಿನ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬಹುದು.

ಈ ಒಕ್ಕೂಟದ ಹಿಂದೆ ಇರುವ ಮುಖ್ಯ ಉದ್ದೇಶವೇ ಡಾಲರ್‌ನ ಏಕಸ್ವಾಮ್ಯವನ್ನು ಮುರಿದು, ಬಹುಧ್ರುವೀಯ (multipolar) ಪ್ರಪಂಚವನ್ನು ನಿರ್ಮಿಸುವುದು.

ಭಾರತಕ್ಕಿರುವ ಪ್ರಯೋಜನಗಳು: ಈ ಹಣಕಾಸು ಒಕ್ಕೂಟದಿಂದ ಭಾರತಕ್ಕೆ ದೊರೆ ಯುವ ಲಾಭಗಳು ಅಪಾರ. ಮೊದಲನೆಯದು, ಡಾಲರ್ ಮೇಲಿನ ಅವಲಂಬನೆ ಕಡಿಮೆ ಯಾಗುತ್ತದೆ. ಇಂದು, ನಮ್ಮ ದೇಶವು ತೈಲ, ಚಿನ್ನ ಅಥವಾ ಇತರೆ ಅತ್ಯವಶ್ಯಕ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಡಾಲರ್‌ನ ಮೇಲೆ ಸಂಪೂರ್ಣವಾಗಿ ಅವಲಂಬಿತ ವಾಗಿದೆ.

ಅಮೆರಿಕದ ಆರ್ಥಿಕ ನೀತಿಗಳು ಮತ್ತು ಅಲ್ಲಿನ ಹಣದುಬ್ಬರದಿಂದ ನಮ್ಮ ರುಪಾಯಿಯ ಮೌಲ್ಯ ಏರಿಳಿತಗೊಳ್ಳುತ್ತಲೇ ಇರುತ್ತದೆ. ಆದರೆ, ನಮ್ಮ ಒಕ್ಕೂಟದ ಒಳಗೆ ವ್ಯಾಪಾರ ನಡೆಸಿದರೆ, ನಾವು ನಮ್ಮ ಕರೆನ್ಸಿ ಅಥವಾ ಒಂದು common ಕರೆನ್ಸಿಯನ್ನು ಬಳಸ ಬಹುದು. ಇದರಿಂದ ವಿನಿಮಯ ದರದ ಅಪಾಯ ಕಡಿಮೆಯಾಗುತ್ತದೆ ಮತ್ತು ವ್ಯವಹಾರ ವೆಚ್ಚ ಸಹ ಕಡಿಮೆಯಾಗುತ್ತದೆ.

BRICS

ಎರಡನೆಯದು, ರುಪಾಯಿಯ ಮೌಲ್ಯವರ್ಧನೆಯಾಗುತ್ತದೆ. ಪ್ರಪಂಚದ ಶೇ.40ಕ್ಕೂ ಹೆಚ್ಚು ಜನರು ವ್ಯವಹರಿಸುವ ಒಕ್ಕೂಟದಲ್ಲಿ ರುಪಾಯಿಗೆ ಪ್ರಮುಖ ಪಾತ್ರ ಸಿಕ್ಕರೆ, ಅದರ ಬೇಡಿಕೆ ಗಗನಕ್ಕೇರುತ್ತದೆ. ಇದು ಹಣದುಬ್ಬರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ನಮ್ಮ ಆಮದು ಬಿಲ್ಲುಗಳನ್ನು ಕಡಿಮೆ ಮಾಡುತ್ತದೆ. ಮೂರನೆಯದು, ಜಾಗತಿಕ ವ್ಯಾಪಾರ ದಲ್ಲಿ ಭಾರತದ ಪ್ರಭಾವ ಹೆಚ್ಚುತ್ತದೆ. ನಾವು ಕೇವಲ ಬೆಲೆ ಪಾವತಿಸುವವರಾಗಿ ಉಳಿಯದೇ, ವ್ಯಾಪಾರ ನಿಯಮಗಳನ್ನು ರೂಪಿಸುವ ನಿರ್ಣಾಯಕ ಶಕ್ತಿಯಾಗಿ ಮಾರ್ಪಡುತ್ತೇವೆ.

ಈ ಏಕೀಕರಣವು ಭಾರತಕ್ಕೆ ಮಾತ್ರವಲ್ಲದೆ, ಎಲ್ಲಾ ಏಷ್ಯಾ ದೇಶಗಳು ಮತ್ತು ಒಕ್ಕೂಟದ ಸದಸ್ಯರಿಗೂ ಬಲ ಒದಗಿಸುತ್ತದೆ. ಅಮೆರಿಕದ ಫೆಡರಲ್ ರಿಸರ್ವ್ ಹಣಕಾಸು ನೀತಿಗಳನ್ನು ಬದಲಾಯಿಸಿದಾಗ, ನಾವು ಪ್ರತಿ ಬಾರಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಈ ಹೊಸ ವ್ಯವಸ್ಥೆಯು ಅಂಥ ಬಾಹ್ಯ ಆಘಾತಗಳಿಂದ ಒಂದು ರಕ್ಷಾಕವಚವನ್ನು ನೀಡುತ್ತದೆ.

ಒಕ್ಕೂಟದೊಳಗಿನ ವ್ಯಾಪಾರ ಸುಲಭ ಮತ್ತು ಅಗ್ಗವಾಗುತ್ತದೆ. ಉದಾಹರಣೆಗೆ, ಒಂದು ಚೈನೀಸ್ ಕಂಪನಿಯು ಭಾರತದಿಂದ ಸರಕು ಖರೀದಿಸಲು ಬಯಸಿದರೆ, ರೆನ್ಮಿನ್ಬಿ (ಯುವಾನ್) ಅನ್ನು ರುಪಾಯಿಗೆ ಪರಿವರ್ತಿಸಿ ಡಾಲರ್ ಮಾರ್ಗವನ್ನು ಅನುಸರಿಸುವ ಅಗತ್ಯವಿರುವುದಿಲ್ಲ. ಇದು ಸಮಯ ಮತ್ತು ಹಣ ಎರಡನ್ನೂ ಉಳಿಸುತ್ತದೆ.

ಜತೆಗೆ, ರಾಜಕೀಯವಾಗಿಯೂ ಈ ದೇಶಗಳು ಒಂದುಗೂಡಿದರೆ, ವಿಶ್ವಸಂಸ್ಥೆ (UN), ವಿಶ್ವ ವ್ಯಾಪಾರ ಸಂಸ್ಥೆ (WTO) ಮುಂತಾದ ವಿಶ್ವ ಮಟ್ಟದ ಸಂಘಟನೆಗಳಲ್ಲಿ ಪಶ್ಚಿಮ ದೇಶಗಳ ಪ್ರಭಾವವನ್ನು ಎದುರಿಸಲು ಒಂದು ಬಲಿಷ್ಠ ಧ್ವನಿ ಸಿಗುತ್ತದೆ.

ಎದುರಾಗುವ ಸವಾಲುಗಳು: ಇಷ್ಟೇ ಪ್ರಯೋಜನಗಳಿದ್ದರೂ, ಈ ಪರಿಕಲ್ಪನೆಯನ್ನು ಜಾರಿಗೆ ತರುವ ಮಾರ್ಗ ಸುಲಭವಲ್ಲ. ಪ್ರತಿಯೊಂದು ದೇಶವೂ ತನ್ನ ಹಣಕಾಸು ಸಾರ್ವ ಭೌಮತ್ವವನ್ನು ಬಿಡಲು ಸಿದ್ಧವಿರುವುದಿಲ್ಲ. ಚೀನಾ, ಭಾರತ ಮತ್ತು ರಷ್ಯಾದ ಆರ್ಥಿಕತೆಗಳ ನಡುವೆ ದೊಡ್ಡ ಅಂತರವಿದೆ. ಹೊಸ ಕರೆನ್ಸಿಯ ಮೌಲ್ಯವನ್ನು ಹೇಗೆ ನಿರ್ಧರಿಸುತ್ತಾರೆ? ಒಂದು ದೇಶದ ಆರ್ಥಿಕತೆ ಕುಸಿದರೆ, ಇತರ ದೇಶಗಳ ಮೇಲೆ ಅದರ ಪರಿಣಾಮ ಏನಾಗ ಬಹುದು? ಎಂಬ ಪ್ರಶ್ನೆಗಳಿವೆ. ಯುರೋಪ್‌ನ ‘ಯುರೋ’ ವಲಯದಲ್ಲಿ ಗ್ರೀಸ್‌ನಂಥ ದೇಶ ಗಳು ಎದುರಿಸಿದ ಸಮಸ್ಯೆಗಳು ಇಲ್ಲೂ ಪುನರಾವರ್ತನೆಯಾಗಬಹುದು. ಇದಕ್ಕೆ ಹೆಚ್ಚಿನ ರಾಜಕೀಯ ನಂಬಿಕೆ ಮತ್ತು ಪಾರದರ್ಶಕತೆ ಅತ್ಯಗತ್ಯ.

ಹೊಸ ಆರ್ಥಿಕ ವ್ಯವಸ್ಥೆಯತ್ತ: ಡಾಲರ್‌ನ ಆಧಿಪತ್ಯವನ್ನು ಕೊನೆಗಾಣಿಸುವುದು ಒಂದು ದಿನದ ಕೆಲಸವಲ್ಲ. ಆದರೆ, ಭಾರತ, ಚೀನಾ, ರಷ್ಯಾ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಂಥ ಪ್ರಬಲ ದೇಶಗಳು ಒಟ್ಟಾಗಿ ಈ ಚರ್ಚೆಯನ್ನು ಶುರುಮಾಡಿರುವುದೇ ಒಂದು ದೊಡ್ಡ ಬದಲಾವಣೆಗೆ ಸಂಕೇತ. ಈ ಒಕ್ಕೂಟವು ಯಶಸ್ವಿಯಾದರೆ, ಅದು ಡಾಲರ್‌ನ ಆಧಿಪತ್ಯ ವನ್ನು ಅಂತ್ಯಗೊಳಿಸುವುದಲ್ಲದೆ, ಹೆಚ್ಚು ಸಮತೋಲಿತ, ನ್ಯಾಯಯುತ ಮತ್ತು ಬಹು ಧ್ರುವೀಯ ಹಣಕಾಸು ವ್ಯವಸ್ಥೆಯನ್ನು ರೂಪಿಸುತ್ತದೆ. ಅಂಥ ವ್ಯವಸ್ಥೆಯಲ್ಲಿ ಭಾರತವು ಕೇವಲ ಓರ್ವ ಸಹಭಾಗಿಯಾಗದೇ, ನಾಯಕತ್ವದ ಪಾತ್ರವನ್ನು ವಹಿಸಲು ಸಿದ್ಧವಾಗಿದೆ.

ಭವಿಷ್ಯದ ಆರ್ಥಿಕ ನಕ್ಷೆ ಬದಲಾಗುತ್ತಿದೆ ಮತ್ತು ಭಾರತ ಅದರ ಮಧ್ಯದಲ್ಲಿ ನಿಂತಿದೆ. ಇಂದು, ಡಾಲರ್ ಅಂತಾರಾಷ್ಟ್ರೀಯ ವ್ಯವಹಾರ, ಸಾಲ ಪೂರೈಕೆ, ಶಕ್ತಿ ಮತ್ತು ಸಂಪನ್ಮೂಲ ಗಳ ವ್ಯಾಪಾರವನ್ನು ನಿಯಂತ್ರಿಸುತ್ತದೆ. ಆದರೆ, ಈ ವ್ಯವಸ್ಥೆಯಿಂದ ಅನೇಕ ದೇಶಗಳಿಗೆ ಅನ್ಯಾಯವಾಗಿದೆ.

ಅಮೆರಿಕ ತನ್ನ ಆರ್ಥಿಕ ಶಕ್ತಿಯನ್ನು ಬಳಸಿ ಶಾಂತಿಯ ಸಮಯದಲ್ಲೂ ದಂಡ ಹಾಕುವ, ವ್ಯಾಪಾರ ನಿರ್ಬಂಧಗಳನ್ನು ಹೇರುವ ಮತ್ತು ಇತರ ರಾಷ್ಟ್ರಗಳ ಆರ್ಥಿಕತೆಯ ಮೇಲೆ ಹಿಡಿತ ಸಾಧಿಸುವ ಚಾಳಿಗೆ ಮುಂದಾಗಿದೆ. ಇದನ್ನು ತಡೆಗಟ್ಟಲು, BRICS ದೇಶಗಳು ಒಟ್ಟಾಗಿ ಒಂದು ಸ್ವತಂತ್ರ, ಸಮತೋಲಿತ ಹಣಕಾಸು ವ್ಯವಸ್ಥೆಯನ್ನು ರೂಪಿಸಬೇಕಾಗಿದೆ.

ಭಾರತದ ರುಪಾಯಿ ಈ ಹೊಸ ಆರ್ಥಿಕ ವಿಶ್ವದಲ್ಲಿ ಪ್ರಮುಖ ಪಾತ್ರವನ್ನು ವಹಿಸಬಲ್ಲದು. ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ. 140+ ಕೋಟಿ ಜನರ ಬಲವುಳ್ಳ ದೇಶವಾಗಿದ್ದು, ತನ್ನ ಯುವ ಜನಸಂಖ್ಯೆ, ತಂತ್ರಜ್ಞಾನದ ಬೆಳವಣಿಗೆ ಮತ್ತು ಮಧ್ಯಮ ವರ್ಗದ ಶಕ್ತಿಯಿಂದ ವಿಶ್ವದಲ್ಲಿ ಮಹತ್ವದ ಆರ್ಥಿಕ ಮುನ್ನಡೆಯನ್ನು ಪಡೆಯು ತ್ತಿದೆ.

ರುಪಾಯಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಕೆಯಾಗಲು ಪ್ರಾರಂಭವಾದರೆ, ಭಾರತವು ವಿದೇಶಿ ವಿನಿಮಯದ ಅಗತ್ಯವನ್ನು ಕಡಿಮೆ ಮಾಡಿ, ಆಮದು-ರಫ್ತುಗಳಲ್ಲಿ ಹೆಚ್ಚು ಸ್ವಾತಂತ್ರ್ಯವನ್ನು ಗಳಿಸುತ್ತದೆ. ಅದೇ ರೀತಿ, ರಷ್ಯಾದ ರೂಬಲ್ ಮತ್ತು ದಕ್ಷಿಣ ಆಫ್ರಿಕಾದ ‘ರ‍್ಯಾಂಡ’ ಕೂಡ ತಮ್ಮ ಪ್ರಾದೇಶಿಕ ಪ್ರಭಾವವನ್ನು ಹೆಚ್ಚಿಸಬಹುದು.

ರಷ್ಯಾ ದೇಶವು ಇಂಧನ, ಅಣುಶಕ್ತಿ ಮತ್ತು ಖನಿಜಗಳ ಪ್ರಮುಖ ಪೂರೈಕೆದಾರ; ಆಫ್ರಿಕಾ ದೇಶವು ಲೋಹಗಳು, ಕೃಷಿ ಉತ್ಪನ್ನಗಳು ಮತ್ತು ಪ್ರಕೃತಿ ಸಂಪನ್ಮೂಲಗಳ ಕಣಜ. ಇವುಗಳೆ ಒಂದು ಏಕೀಕೃತ ಹಣದಲ್ಲಿ ವ್ಯಾಪಾರವಾದರೆ, ಅಮೆರಿಕದ ಡಾಲರ್‌ನ ಮೇಲಿನ ಅವಲಂಬನೆ ಸೊನ್ನೆಯಾಗುತ್ತದೆ.

ಈ ಕಲ್ಪನೆಯಲ್ಲಿರುವ ದೊಡ್ಡ ಸವಾಲು: ಚೀನಾವು ಆಐಇಖ ಗುಂಪಿನಲ್ಲಿ ಅತ್ಯಂತ ಶಕ್ತಿಶಾಲಿ ಆರ್ಥಿಕತೆಯಾಗಿದೆ. ಅದು ಶೀಘ್ರವಾಗಿ ಪ್ರಪಂಚದ ಅತಿದೊಡ್ಡ ಜಿಡಿಪಿ ಹೊಂದಿದ ದೇಶವಾಗುವ ಸಂಭವವಿದೆ. ಅದು ತನ್ನ ಯುವಾನ್ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾರಿಗೆ ತರಲು ಪ್ರಯತ್ನಿಸುತ್ತಿದೆ.

ಇದು ಭಾರತದಂಥ ಇತರ ದೇಶಗಳಿಗೆ ಅಪಾಯವಾಗಬಹುದು. ಯಾಕೆಂದರೆ, ಚೀನಾವು ತನ್ನ ಆರ್ಥಿಕ ಶಕ್ತಿಯನ್ನು ಬಳಸಿ, ಇತರ ರಾಷ್ಟ್ರಗಳ ಮೇಲೆ ರಾಜಕೀಯ ಮತ್ತು ಆರ್ಥಿಕ ಒತ್ತಡ ಹೇರಲು ಪ್ರಯತ್ನಿಸಬಹುದು, ಅಮೆರಿಕದ ಡಾಲರ್ ಇಂದು ಮಾಡುತ್ತಿರುವುದನ್ನೇ ಚೀನಾ ನಾಳೆ ಮಾಡಬಹುದು. ಚೀನಾದ ವಿಶ್ವಾಸಾರ್ಹತೆಯ ಕುರಿತು ಸಂಶಯಗಳಿವೆ.

ಅದು ಭಾರತದ ಅರುಣಾಚಲ ಪ್ರದೇಶ ಸೇರಿದಂತೆ ಗಡಿ ಪ್ರದೇಶಗಳಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದೆ, ಪಾಕಿಸ್ತಾನದ ಮೂಲಕ ಭಾರತದ ಮೇಲೆ ಒತ್ತಡ ಹೇರುತ್ತಿದೆ ಮತ್ತು ಹಿಮಾ ಲಯದಲ್ಲಿ ಸೀಮೆ ಗುರುತಿಸದ ಭಾಗಗಳಲ್ಲಿ ಸೈನ್ಯವನ್ನು ನೆಲೆಗೊಳಿಸಿದೆ.

ಹೀಗಿರುವಾಗ, ಚೀನಾದ ಮುಖಾಂತರ ಹೊಸ ಹಣಕಾಸು ವ್ಯವಸ್ಥೆಯನ್ನು ನಿರ್ವಹಿಸು ವುದು ಅಪಾಯಕಾರಿ. ಆದ್ದರಿಂದ, ಒಂದು ವೇಳೆ ರುಪಾಯಿ, ರಿಯಲ್, Rand, ರೂಬಲ್ ಮತ್ತು ರೆನ್ಮಿನ್ಬಿ ಐಕ್ಯವಾಗಬೇಕಾದರೆ, ಅದು ಭಾರತ ನೇತೃತ್ವದ ಸಮತೋಲಿತ ವ್ಯವಸ್ಥೆ ಯಾಗಿರಬೇಕು.

ಚೀನಾವನ್ನು ಒಳಗೊಳ್ಳಬೇಕೇ ಹೊರತು, ಅದರಡಿಯಲ್ಲಿ ವ್ಯವಹಾರ ನಡೆಯುವಂತಾಗ ಬಾರದು. ಹೊಸ ಹಣಕಾಸು ವ್ಯವಸ್ಥೆಯ ಉದಯದಿಂದಾಗಿ, ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ಅನೇಕ ದೇಶಗಳಿಗೆ ಆರ್ಥಿಕ ಸ್ವಾತಂತ್ರ್ಯ ಸಿಗುತ್ತದೆ. ಅವುಗಳ ಜನರು ಹೆಚ್ಚು ಉದ್ಯೋಗ, ಸ್ಥಿರ ಬೆಲೆಗಳು ಮತ್ತು ಸಮಾವೇಶಕಾರಿ (Inclusive) ಆರ್ಥಿಕತೆಯನ್ನು ನೋಡಬಹುದು.

ಭಾರತಕ್ಕೆ ಹೆಚ್ಚು ರಫ್ತು ಅವಕಾಶ, ತಂತ್ರಜ್ಞಾನದ ವಿನಿಮಯ ಮತ್ತು ಆಂತರಿಕ ಸ್ಥಿರತೆ ಲಭಿಸುತ್ತದೆ. ಭಾರತವು ಈ ಬದಲಾವಣೆಯ ನಾಯಕತ್ವ ವಹಿಸಬೇಕು. ಆದರೆ, ಚೀನಾದ ಸೆಳೆತಕ್ಕೆ ಸಿಲುಕದಂತೆ ಜಾಗೃತರಾಗಿರಬೇಕು.

ಐಕ್ಯತೆಯೇ ಶಕ್ತಿ, ಆದರೆ ನಾಯಕತ್ವವೇ ನಿಯಂತ್ರಣ. ಭಾರತವು ಈ ಹೊಸ ಯುಗದಲ್ಲಿ ತನ್ನ ಜನಸಂಖ್ಯೆ, ತಂತ್ರಜ್ಞಾನ ಮತ್ತು ನೈತಿಕತೆಯ ಬಲದಿಂದ ಏಷ್ಯಾವನ್ನು ಮುನ್ನಡೆಸ ಬೇಕು. ಡಾಲರ್ ಅಂತ್ಯವಲ್ಲ, ಆದರೆ ಅದರ ಏಕಾಧಿಪತ್ಯಕ್ಕೆ ಅಂತ್ಯ ಬರುವುದು! ರುಪಾಯಿ ತನ್ನ ಹೊಸ ಮೌಲ್ಯವನ್ನು ಲೋಕಕ್ಕೆ ಬಹು ಬೇಗ ತೋರಿಸಲಿ.

(ಲೇಖಕಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿ)