ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

G‌ururaj Gantihole Column: ಕರಾವಳಿ ಅಭಿವೃದ್ಧಿಯ ಹಲವು ಆಯಾಮ ತೆರೆದ ಬಜೆಟ್

ಒಟ್ಟಾರೆ, ಈ ಸಲದ ಬಜೆಟ್‌ನಲ್ಲಿ ರೈತರಿಗೆ ಹೆಚ್ಚಿನ ಒತ್ತು ನೀಡಿ ಹಲವು ಯೋಜನೆಗಳನ್ನು ಘೋಷಿಸಿದ್ದು, ಕೃಷಿ, ಡೇರಿ, ಮೀನುಗಾರಿಕೆ ವಲಯಕ್ಕೆ ಪ್ರಮುಖ ಆದ್ಯತೆ ನೀಡಿರುವುದು ಕಂಡುಬರುತ್ತದೆ. ರೈತರಿಗೂ ಹೆಚ್ಚಿನ ಅನುಕೂಲ ಮಾಡುವ ಉದ್ದೇಶದಿಂದ ತೆಂಗು, ಕೋಕೋ, ಗೋಡಂಬಿ, ಶ್ರೀಗಂಧ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಹೊಸ ಯೋಜನೆಗಳನ್ನು ಸಹ ಘೋಷಿಸಲಾಗಿದೆ.

ಕರಾವಳಿ ಅಭಿವೃದ್ಧಿಯ ಹಲವು ಆಯಾಮ ತೆರೆದ ಬಜೆಟ್

-

ಗಂಟಾಘೋಷ

ಪ್ರಸ್ತುತ ಅನ್ಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಯುದ್ಧದ ಸನ್ನಿವೇಶಗಳು, ಎಡಬಿಡಂಗಿ ಆರ್ಥಿಕ ನೀತಿ ನಿಯಮಗಳು, ಆಯಾ ದೇಶಗಳನ್ನು ಅಯೋಮಯಗೊಳಿಸಿದೆಯಲ್ಲದೇ, ಕಂಪನಿಗಳನ್ನೂ ಧೃತಿಗೆಡಿಸಿವೆ. ಜಗತ್ತಿನ ದೊಡ್ಡಣ್ಣ ಎಂದೆಲ್ಲ ಕರೆಸಿಕೊಳ್ಳುವ ಅಮೆರಿಕ ವೂ ತನ್ನ ಆರ್ಥಿಕ ಇತಿಮಿತಿಗಳನ್ನು ಅರಿಯದೆ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಭಾಸವಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಕರ್ನಾಟಕದ ಕರಾವಳಿ ಭಾಗದ ಅಭಿವೃದ್ಧಿಯ ಹಲವು ಆಯಾಮ ಗಳನ್ನು ತೆರೆದಿಟ್ಟಿದೆ.

ಪ್ರಸ್ತುತ ವರ್ಷದ ಕೇಂದ್ರ ಬಜೆಟ್ ಮಂಡನೆಯನ್ನು ರಾಜ್ಯದ ಜನತೆ ಅಷ್ಟೇನು ಹೆಚ್ಚಾಗಿ ಚರ್ಚೆಗೆ ಪರಿಗಣಿಸಲಿಲ್ಲ ಎಂದು ಕಾಣುತ್ತದೆ. ರಾಜ್ಯಕ್ಕೆ ಹೆಚ್ಚೇನೂ ಕೊಡುಗೆ ಈ ಸಲದ ಬಜೆಟ್‌ನಲ್ಲಿ ಘೋಷಿಸಿಲ್ಲ ಎಂದೇ ಹೇಳಿ ಸುಮ್ಮನಾದ ವಿಚಾರವನ್ನು ನಾವೆಲ್ಲ ಗಮನಿಸಿದೆವು. ಸಾಮಾನ್ಯವಾಗಿ ತೆರಿಗೆ ಕಟ್ಟುವವರೂ ಅಷ್ಟೇನೂ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ.

ಕಾರಣ, ಮತ್ತಷ್ಟು ತೆರಿಗೆ ವಿನಾಯ್ತಿ ಬೇಕೆಂಬ ಬೇಡಿಕೆ ಮತ್ತು ಮಾಡುತ್ತಾರೆಂಬ ನಿರೀಕ್ಷಿಸುವ ಸಮಯವೂ ಇದಾಗಿರಲಿಲ್ಲ. ಬಹುತೇಕ ಹಣಕಾಸು ವಿಶ್ಲೇಷಕರು, ಅಂತಾರಾಷ್ಟ್ರೀಯ ರಾಜಕೀಯ ಗಮನಿಸುವವರು, ಆರ್ಥಿಕ ತಜ್ಞರು ಮಾತ್ರ ಭಾರೀ ಕುತೂಹಲದಿಂದ ಕಾಯುತ್ತ ಕೂರುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ!

ಕಾರಣ, ಪ್ರಸ್ತುತ ಅನ್ಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಯುದ್ಧದ ಸನ್ನಿವೇಶಗಳು, ಆರ್ಥಿಕ ಏರುಪೇರುಗಳು, ಬಹುತೇಕ ನಾಯಕರ ಎಡಬಿಡಂಗಿ ಆರ್ಥಿಕ ನೀತಿ ನಿಯಮಗಳು, ಆಯಾ ದೇಶಗಳನ್ನು ಅಯೋಮಯಗೊಳಿಸಿದೆಯಲ್ಲದೇ, ಉದ್ಯೋಗ ಸೃಷ್ಟಿ, ಹೊಸ ಆರ್ಥಿಕ ಮೂಲ ಗಳನ್ನು ಸೃಷ್ಟಿಸುವ ಕಂಪನಿಗಳು ಬೆಳೆಯದೆ ಬಾಗಿಲು ಹಾಕುತ್ತಿರುವ ಮತ್ತು ಉದ್ಯೋಗದಾತರು ಮರಳಿ ತಮ್ಮ ದೇಶಕ್ಕೆ ಹಿಂದಿರುಗುವಂತೆ ಮಾಡುತ್ತಿರುವ ಕಠಿಣ ನಿರ್ಧಾರಗಳು ಸದ್ಯಕ್ಕಂತೂ, ಭೂಗೋಳವನ್ನು ಎತ್ತ ತಿರುಗಿಸಿದರೂ, ಬರೀ ಗೋಳು ಮಾತ್ರವೇ ತುಂಬಿದಂತೆ ಭಾಸವಾಗುತ್ತಿದೆ.

ಇದನ್ನೂ ಓದಿ: Gururaj Gantihole Column: ಟ್ರಂಪ್‌ʼಗೆ ಮೋದಿಯಿಂದ ʼಡೆಡ್‌ ಲಾಕ್‌ʼ ನಡೆ !

ಇಂತಹ ವಾಸ್ತವಿಕ ಸ್ಥಿತಿಯಲ್ಲಿ, ಅಮೆರಿಕದ ಆರ್ಥಿಕ ನೀತಿಗಳನ್ನು ಭಾರತವನ್ನು ಮುಳುಗಿಸಲೆಂದೇ ತೆರಿಗೆ ಹೆಚ್ಚಿಸುವ ಮೂಲಕ ಬದಲಾಯಿಸಲಾಯಿತು. ಸದ್ಯಕ್ಕೆ ಅವರ ನಿರ್ಧಾರಗಳು ಅಲ್ಲಿನ ಯುವ ಜನತೆಗೇ ವಿರುದ್ಧವಾಗಿ ನಿಲ್ಲುವಂತಾಗಿವೆ. ಆರ್ಥಿಕ ನೀತಿಗಳು ಹೇಳಹೆಸರಿಲ್ಲದಂತೆ ನೆಲಕಚ್ಚುತ್ತಿವೆ.

ಜಗತ್ತಿನ ದೊಡ್ಡಣ್ಣ, ದೈತ್ಯಶಕ್ತಿ ಎಂದೆಲ್ಲ ಕರೆಸಿಕೊಳ್ಳುವ ದೇಶವೂ ತನ್ನ ಆರ್ಥಿಕ ಇತಿಮಿತಿಗಳನ್ನು ಅರಿಯದೆ, ಅಹಂಕಾರದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಇಡೀ ಜಗತ್ತಿಗೇ ಭಾಸವಾಗುತ್ತಿದೆ.

ಇಂತಹ ಸಮಯದಲ್ಲಿ, ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು 2019ರಿಂದ 2026ರವರೆಗೆ ಸತತ ಒಂಬತ್ತನೆ ಬಜೆಟ್ ಮಂಡನೆಯ ಐತಿಹಾಸಿಕ ದಾಖಲೆ ಜೊತೆಗೆ ಇನ್ನೂ ಹಲವು ವಿಶೇಷತೆಗಳನ್ನು ಸಾಧಿಸಿದ್ದಾರೆ. ಭಾರತದ ಪೂರ್ಣಕಾಲಿಕ ಮೊದಲ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆ ಅವರ ಹೆಸರಿಗೆ ಸೇರಿದೆ. 2019ರಲ್ಲಿ ಸೂಟ್‌ಕೇಸ್ ಬದಲಾಯಿಸಿ ಸಾಂಪ್ರದಾಯಿಕ ಲೆದರ್ ಚೀಲ ಬಳಸಿದ ದಾಖಲೆ.

2021ರಲ್ಲಿ ಕಾಗದರಹಿತ ಡಿಜಿಟಲ್ ಬಜೆಟ್ ಮಂಡಿಸಿದ ದಾಖಲೆ. ಒಬ್ಬರೇ ಪ್ರಧಾನಮಂತ್ರಿ ಅಡಿಯಲ್ಲಿ, ಅದೇ ವ್ಯಕ್ತಿ ಸತತ ಬಜೆಟ್ ಮಂಡಿಸಿದ ದಾಖಲೆ. ಕೋವಿಡ್ ಎಂಬ ಮಹಾಮಾರಿ ಪರಿಸ್ಥಿತಿಯಲ್ಲೂ, ಇಡೀ ಜಗತ್ತೇ ತಲ್ಲಣಿಸಿದರೂ ವಿಚಲಿತರಾಗದೆ ದೇಶದ ಆರ್ಥಿಕತೆಯನ್ನು ಸಮರ್ಥವಾಗಿ ಮುನ್ನಡೆಸಿದ ಜವಾಬ್ದಾರಿ. ಬೇರೆಬೇರೆ ಅವಧಿಯಲ್ಲಿ ಮಂಡಿಸಿದ್ದನ್ನು ಪರಿಗಣಿಸಿದರೆ, ಮೊರಾರ್ಜಿ ದೇಸಾಯಿ 10 ಬಾರಿ ಬಜೆಟ್ ಮಂಡಿಸಿದ್ದು, ಮುಂದಿನ ಬಜೆಟ್ ವೇಳೆಗೆ ಈ ದಾಖಲೆಯೂ ನಿರ್ಮಾಲಾ ಅವರಿಂದ ನಿರ್ಮಾಣವಾಗುತ್ತದೆ ಎಂದುಕೊಳ್ಳೋಣ.

Nirmala sitharam

ದೇಶದ ಕರ್ನಾಟಕ ಕರಾವಳಿ ಎಂಬುದು ಅಪರೂಪದ ಬಹುವಿಶೇಷ, ಸೂಕ್ಷ್ಮಪ್ರದೇಶವಾಗಿದ್ದು, ರಾಜ್ಯದ ಇತರೆ ಭಾಗಗಳನ್ನು ಪರಿಗಣಿಸುವಂತೆ ಈ ಭಾಗವನ್ನೂ ಹಾಗೇ ಪರಿಭಾವಿಸಿ, ಸಾಮಾನ್ಯ ಆಡಳಿತ-ಅಧಿಕಾರಗಳನ್ನು ಜಾರಿಗೆ ತರಲು ಯತ್ನಿಸಿದರೆ, ಇನ್ನೂ 50-100 ವರ್ಷ ಕಳೆದರೂ, ನಮ್ಮ ಕರಾವಳಿ ಮುಂದುವರಿದ, ಜನಾಕರ್ಷಣೆಯ ಹಾಗೂ ಸಂಪೂರ್ಣ ಅಭಿವೃದ್ಧಿ ಹೊಂದಿದ ಪ್ರವಾಸೋದ್ಯಮ ಭಾಗವಾಗಿ ಬೆಳೆಯಲಾರದು ಎಂಬುದನ್ನು ಅರಿಯಬೇಕಿದೆ.

ಇಲ್ಲಿನ ಕೃಷಿಪದ್ಧತಿ, ಮೀನುಗಾರಿಕೆ, ದೈನಂದಿನ ಜೀವನ ವಿಧಾನಗಳು ರಾಜ್ಯದ ಇತರೆ ಭಾಗಕ್ಕಿಂತ ಕೊಂಚ ಭಿನ್ನವಾಗಿರುತ್ತದೆ ಎಂಬುದು ಸಹಜ ವಿಚಾರವೇ ಆಗಿದೆ. ಇದಕ್ಕೆ ತಕ್ಕಂತೆ, ಪಾಲಿಸಿಗಳನ್ನು ರೂಪಿಸಿ, ಜನರಿಗೆ ಪೂರಕವಾಗುವಂತೆ ಜಾರಿಗೆ ತರಬೇಕಿರುವುದು ಅತ್ಯಗತ್ಯ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಅಷ್ಟೇನೂ ಆಸಕ್ತಿ - ಕಾಳಜಿ ತೋರಿಸದಿರುವುದು ಬಹಿರಂಗವಾಗಿಯೇ ಕಂಡು ಬರುತ್ತಿದೆ.

ಒಡಿಶಾದ ಪುಟ್ಟ ಕಿನಾರೆಯೊಂದು ‘ಬ್ಲೂ ಟ್ಯಾಗ್’, ‘ಗೋಲ್ಡನ್ ಟ್ಯಾಗ್’ ಪಡೆಯಲು ಅರ್ಹವಾದರೆ, ನಮ್ಮ ರಾಜ್ಯದಲ್ಲಿರುವ ಅನೇಕ ಕಡಲ ಕಿನಾರೆಗಳನ್ನು ಸಹ ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರೊಜೆಕ್ಷನ್ ಮಾಡಬೇಕಿರುವುದು ರಾಜ್ಯ ಸರ್ಕಾರದ ಜವಾಬ್ದಾರಿಯಲ್ಲವೇ?! ಕರಾವಳಿ ವಿಭಾಗಕ್ಕೆ ಇಂತಹ ಶಾಶ್ವತ ಪರಿಯೋಜನೆಗಳು ರೂಪುಗೊಳ್ಳುತ್ತಿಲ್ಲ. ಇಂತಹ ಸಮಯದ ಈ ಸಲದ ಕೇಂದ್ರ ಬಜೆಟ್ ಬಹು ಆಶಾದಾಯಕವಾಗಿ ನಮ್ಮ ಕರಾವಳಿ ಭಾಗಕ್ಕೆ ಕಂಡು ಬರುತ್ತಿದೆ ಎನ್ನಬಹುದು.

ವಿಶ್ವದ ಅತಿದೊಡ್ಡ ತೆಂಗಿನಕಾಯಿ ಉತ್ಪಾದಕ ರಾಷ್ಟ್ರವಾದ ಭಾರತದಲ್ಲಿ ಸುಮಾರು 10 ಕೋಟಿ ರೈತರು ಒಳಗೊಂಡಂತೆ 3 ಕೋಟಿ ಜನರು ತಮ್ಮ ಜೀವನೋಪಾಯಕ್ಕಾಗಿ ತೆಂಗು ಕೃಷಿಯನ್ನು ಅವಲಂಬಿಸಿzರೆ. ಇಂತಹ ಕೃಷಿಯನ್ನು ಬಹುವಿಧದಲ್ಲಿ ಉತ್ತೇಜಿಸುವುದಾಗಿ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದಾರೆ.

ಇದರ ಜೊತೆಗೆ, ಗೋಡಂಬಿ, ಕೋಕೋ ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ಭಾರತವನ್ನು ಹೆಚ್ಚು ಸ್ವಾವಲಂಬನೆಗೊಳಿಸುವಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಿzರೆ. ಇದೂ ಸಹ ನಮ್ಮ ರೈತರಿಗೆ, ಕರಾವಳಿ ಭಾಗಕ್ಕೆ ಸಂತಸ ತರುವ ವಿಚಾರವೇ ಆಗಿದೆ.

ಬಹುಮುಖ್ಯ ಘೋಷಣೆಯೆಂದರೆ, ಕೃಷಿ ಕ್ಷೇತ್ರದಲ್ಲಿ ‘ಎಐ’ ಬಳಕೆ ಯೋಜನೆಗಳನ್ನು ಜಾರಿಗೆ ತರುವ ಕುರಿತು ಘೋಷಿಸಿದ್ದಾರೆ. ರೈತರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಎಐ ಬಳಸಿ ಕೊಳ್ಳುವ ವಿಚಾರವಾಗಿದೆ. ಇದಕ್ಕೆಂದೇ ಭಾರತ್ ವಿಸ್ತಾರ್ ಎಂಬ ಎಐ ಟೂಲ್ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಸದನದಲ್ಲಿ ಹೇಳಿದರು.

ಭಾರತ್ ವಿಸ್ತಾರ್ ಎನ್ನುವುದು ಕೃಷಿ ಸಂಪನ್ಮೂಲಗಳ ಬಗ್ಗೆ ರೈತರಿಗೆ ನೆರವಾಗುವ ಅವರ ಸ್ಥಳೀಯ ಭಾಷೆಯ ಎಲ್ಲ ಸಮಸ್ಯೆಗಳ ಮಾಹಿತಿ ಹಾಗೂ ಉತ್ತರ ಲಭ್ಯವಾಗಲಿದೆ. ಸಣ್ಣ ಮತ್ತು ಅತಿಸಣ್ಣ ರೈತರ ಉತ್ಪಾದಕತೆ ಮತ್ತು ಆದಾಯವನ್ನು ಹೆಚ್ಚಿಸುವುದು, ಉತ್ಪಾದಕತೆ ಮತ್ತು ಉದ್ಯಮ ಶೀಲತೆಯನ್ನು ವೃದ್ಧಿ ಮಾಡುವುದು ಮೋದಿ ಸರ್ಕಾರದ ಗುರಿ ಎಂದರು.

ಕೃಷಿ ಆದಾಯದ ಸುಮಾರು ಶೇ.16ರಷ್ಟು ಹಣ ಜಾನುವಾರು ಉದ್ಯಮದಿಂದ ಬರುತ್ತದೆ. ಇದೇರೀತಿ ಗುಣಮಟ್ಟದ ಆಯುರ್ವೇದ ಉತ್ಪನ್ನಗಳನ್ನ ರಫ್ತು ಮಾಡುವುದರಿಂದ, ಗಿಡಮೂಲಿಕೆಗಳನ್ನು ಬೆಳೆಸುವುದರಿಂದ ರೈತರಿಗೆ ಸಹಾಯವಾಗುತ್ತದೆ ಎಂದರು.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ವಿಸ್ತರಿಸುವುದಾಗಿ ಸಚಿವೆ ಹೇಳಿದರು. ಸಾಲ ಸೌಲಭ್ಯ ವನ್ನು ಸರಳಗೊಳಿಸಲು ಐದು ರಾಜ್ಯಗಳಲ್ಲಿ ಜನಸಮರ್ಥ್ ಆಧಾರಿತ ಕೆಸಿಸಿ ನೀಡಲಾಗುವುದು ಜೊತೆಗೆ ಮಿತಿಯನ್ನೂ ಹೆಚ್ಚಿಸಲಾಗುವುದು ಎಂದರು. ಇದೆಲ್ಲ ಕೃಷಿಗೆ ಸಂಬಂಧಿಸಿದ್ದಾದರೂ ನಮ್ಮ ರಾಜ್ಯದಲ್ಲಿ ಸೂಕ್ತವಾಗಿ ಚರ್ಚೆಯಾಗಬೇಕಿತ್ತು, ಆಗಲಿಲ್ಲ.

ಕ್ರೆಡಿಟ್ ಲಿಂಕ್ಡ್ ಎಂಬ ಕಾರ್ಯಕ್ರಮವನ್ನು ಪಶು ಸಂಗೋಪನೆ ವೃದ್ಧಿಗೆ ಕಾರ್ಯಕ್ರಮವನ್ನಾಗಿ ಘೋಷಿಸಿದ್ದಾರೆ. ಉದ್ಯಮಶೀಲತೆ ಅಭಿವೃದ್ಧಿಯಲ್ಲಿ ಪಶು ಸಂಗೋಪನಾ ವಲಯವನ್ನು ಪ್ರಮುಖ ಕ್ಷೇತ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಜಾನುವಾರು ಉತ್ಪಾದಕ ಸಂಸ್ಥೆಗಳಲ್ಲಿ ಉದ್ಯೋಗವಾಕಾಶಗಳನ್ನು ಉತ್ತೇಜಿಸಿ ಪ್ರೋತ್ಸಾಹಿಸಲು ಕ್ರೆಡಿಟ್ ಲಿಂಕ್ ಎಂಬ ಸಬ್ಸಿಡಿಯನ್ನೂ ಪ್ರಸ್ತಾಪಿಸಲಾಗಿದೆ.

ಜಲಚರ ಸಾಕಣೆ ಸಂಸ್ಥೆಗಳು ಪಶು ಸಂಗೋಪನಾ ಸಂಸ್ಥೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವ ಮೂಲಕ ಮಾರುಕಟ್ಟೆ ಸಂಪರ್ಕವನ್ನು ಸುಧಾರಿಸುತ್ತವೆಯಲ್ಲದೆ ನವೋದ್ಯಮಗಳು, ಮಹಿಳಾ ನೇತೃತ್ವದ ಗುಂಪುಗಳು ಮೀನು ಉತ್ಪಾದಕ ಸಂಸ್ಥೆಗಳನ್ನು ಬೆಂಬಲಿಸುತ್ತವೆಯಾದ್ದರಿಂದ ಈ ಮೂಲಕ ಕರಾವಳಿ ಮೀನುಗಾರರಿಗೆ ಇನ್ನಷ್ಟು ಸಬ್ಸಿಡಿಯನ್ನು ಕೂಡ ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದರು.

ದೇಶದ ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆ ಮೌಲ್ಯ ಸರಪಳಿಯನ್ನು ಬಲಪಡಿಸಲು ಮೀನು ಗಾರಿಕಾ ಸಂಸ್ಥೆಗಳನ್ನು, ನವೋದ್ಯಮ ಹಾಗೂ ಮಹಿಳಾ ನೇತೃತ್ವದ ಗುಂಪುಗಳನ್ನು ಒಳಗೊಂಡ ಮಾರುಕಟ್ಟೆಯನ್ನು ಸಕ್ರಿಯಗೊಳಿಸಲು 500 ಜಲಾಶಯಗಳು ಮತ್ತು ಅಮೃತ ಸರೋವರಗಳ ಸಮಗ್ರ ಅಭಿವೃದ್ಧಿಗೆ ಉಪಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.

ಭಾರತವು 80 ಲಕ್ಷ ಎಕರೆಗಳಷ್ಟು ಒಳನಾಡಿನ ಜಲಾಶಯಗಳನ್ನು ಹೊಂದಿರುವ ಮೂಲಕ ವಿಶ್ವದ ಅತಿದೊಡ್ಡ ಒಳನಾಡಿನ ಜಲಾಶಯಗಳಂದಾಗಿದೆ. ಮಿಷನ್ ಅಮೃತ್ ಸರೋವರದ ಅಡಿಯಲ್ಲಿ ಈಗಾಗಲೇ 68,830 ಸರೋವರಗಳನ್ನು ಅಭಿವೃದ್ಧಿಪಡಿಸಿದ್ದು, ಇವುಗಳಲ್ಲಿ 1250ಕ್ಕೂ ಹೆಚ್ಚು ಸರೋವರಗಳು ಮೀನುಗಾರಿಕೆಗೆ ಸಂಬಂಧಿಸಿದ್ದಾಗಿವೆ. ಮೀನುಗಾರಿಕೆ ವಲಯದಲ್ಲಿ 200 ಸ್ಟಾರ್ಟಪ್‌ ಗಳನ್ನು ಬೆಂಬಲಿಸಲಾಗುತ್ತಿದೆ.

ಒಟ್ಟಾರೆ, ಈ ಸಲದ ಬಜೆಟ್‌ನಲ್ಲಿ ರೈತರಿಗೆ ಹೆಚ್ಚಿನ ಒತ್ತು ನೀಡಿ ಹಲವು ಯೋಜನೆಗಳನ್ನು ಘೋಷಿಸಿದ್ದು, ಕೃಷಿ, ಡೇರಿ, ಮೀನುಗಾರಿಕೆ ವಲಯಕ್ಕೆ ಪ್ರಮುಖ ಆದ್ಯತೆ ನೀಡಿರುವುದು ಕಂಡು ಬರುತ್ತದೆ.

ರೈತರಿಗೂ ಹೆಚ್ಚಿನ ಅನುಕೂಲ ಮಾಡುವ ಉದ್ದೇಶದಿಂದ ತೆಂಗು, ಕೋಕೋ, ಗೋಡಂಬಿ, ಶ್ರೀಗಂಧ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಹೊಸ ಯೋಜನೆಗಳನ್ನು ಸಹ ಘೋಷಿಸಲಾಗಿದೆ.

2013ರಲ್ಲಿ 22 ಸಾವಿರ ಕೋಟಿ ಮಾತ್ರವೇ ಇದ್ದದ್ದು, ಮೋದಿ ಸರ್ಕಾರದಲ್ಲಿ ಇಂದು ಕೃಷಿ ಬಜೆಟ್ ಒಂದೂವರೆ ಲಕ್ಷ ಕೋಟಿ ಏರಿಕೆಯಾಗಿರುವುದು ಕೃಷಿಗೆ, ರೈತರಿಗೆ ಕೇಂದ್ರ ಸರ್ಕಾರ ತೋರುತ್ತಿರುವ ಕಾಳಜಿಯ ದ್ಯೋತಕವಾಗಿದೆ.

ಮನರೇಗಾ ಯೋಜನೆಯನ್ನು ಆಧುನಿಕಗೊಳಿಸಿದ ಬೆನ್ನ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆಯನ್ನು ಘೋಷಿಸಲಾಗಿದ್ದು, ಖಾದಿ ಉದ್ಯಮವನ್ನು ಉತ್ತೇಜಿಸಲು ಈ ಕ್ರಮಕೈಗೊಂಡಿದೆ. ದೇಶದ ಖಾದಿ, ಕೈಮಗ್ಗ, ಕರಕುಶಲ ಕಲೆ, ಉದ್ಯಮಗಳಿಗೆ ಜಾಗತಿಕ ಮಟ್ಟದ ಮಾರುಕಟ್ಟೆ ಪ್ರವೇಶ ಮತ್ತು ಬ್ರಾಂಡಿಂಗ್‌ಗೆ ನೆರವಾಗಲು ಈ ಯೋಜನೆ ಸಹಕಾರಿಯಾಗಲಿದೆ.

ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ವಿರೋಧದ ನಡುವೆಯೇ, ರಾಮ-ಜಿ ಯೋಜನೆಗೆ 95 ಸಾವಿರ ಕೋಟಿ ರು. ಅನುದಾನವನ್ನು ಮೀಸಲಿಡಲಾಗಿದ್ದು, ಯೋಜನೆಯನ್ನು ಇನ್ನಷ್ಟು ಬಲಗೊಳಿಸಲಿದೆ. ಇದರ ನಡುವೆ, ಗ್ರಾಮೀಣಾಭಿವೃದ್ಧಿ ಇಲಾಖೆಗೆ ಶೇ.21ರಷ್ಟು ಬಜೆಟ್ ಹೆಚ್ಚಳವಾಗಿದ್ದು, ಇದು ಗ್ರಾಮೀಣ ಭಾರತವನ್ನು ಬಲಿಷ್ಠಗೊಳಿಸಲು ಸಹಕಾರಿಯಾಗಲಿದೆ ಎಂದು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಇನ್ಮುಂದೆ ವಾಣಿಜ್ಯ ಬೆಳೆಗಳನ್ನು ರೈತಸ್ನೇಹಿಯಾಗಿ ರೂಪುಗೊಳಿಸಲು ಚಿಂತನೆ ನಡೆಸಿದ್ದು, ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಒಟ್ಟಾರೆ, 2026-27ರ ಹಣಕಾಸು ವರ್ಷದಲ್ಲಿ 53.47 ಲಕ್ಷಕೋಟಿ ಬಜೆಟ್ ಮಂಡಿಸಿರುವ ವಿತ್ಥ ಸಚಿವರು, ಎಲ್ಲ ಇಲಾಖೆಗಳಿಗೆ ಹಿಂದಿನದಕ್ಕಿಂತ ಹೆಚ್ಚಿಗೇ ಅನುದಾನ ಘೋಷಿಸಿದ್ದಾರೆ.

ಮಹಿಳಾವರ್ಗಕ್ಕೆ, ರೈತರಿಗೆ, ಗ್ರಾಮೀಣ ರೈತರಿಗೆ ಮತ್ತು ಮೀನುಗಾರಿಕೆಗೆ ವಿಶೇಷ ಒತ್ತು ಕೊಟ್ಟು ಯೋಜನೆಗಳನ್ನು - ಅನುದಾನಗಳನ್ನು ಗೋಷಿಸಿದ್ದು, ಇವುಗಳೆಲ್ಲವೂ ನಮ್ಮ ಕರ್ನಾಟಕಕ್ಕೆ, ಕರಾವಳಿ ಭಾಗಕ್ಕೂ ಸಂಬಂಧಿಸಿದ್ದಾಗಿವೆ ಎಂಬುದು ನಾವು ಸಂತಸ ಪಡಬೇಕಾದ ಸಂಗತಿಯಾಗಿದೆ.

ರಾಜ್ಯ ಸರ್ಕಾರದಿಂದ ಆಗಬೇಕಾದ ಅಭಿವೃದ್ಧಿ ಕಾರ್ಯಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮ ಬೆಳಸಬೇಕಾದ ಕರ್ತವ್ಯ-ಜವಾಬ್ದಾರಿಗಳು ಸಾಕಷ್ಟಿವೆ. ಅಗತ್ಯವಿರುವ ಯೋಜನೆ ಗಳನ್ನಾದರೂ ಸಮರ್ಪಕವಾಗಿ ಜಾರಿಗೆ ತರುವ ಪ್ರಯತ್ನ ಸಾಗಬೇಕಿದೆ.