Dr Rajendra Kumar Column: ಕನ್ನಡದ ಆತ್ಮ ಕಾಣೆಯಾಗಿದೆ ಹುಡುಕುವಿರಾ ?
ಕಿಲೋಮೀಟರ್ಗಳವರೆಗೆ ಕನ್ನಡದ ಬಾವುಟವನ್ನು ಹಿಡಿದರೆ ಕನ್ನಡ ಉಳಿಯಲು ಸಾಧ್ಯವೇ? ನವೆಂಬರ್ ಒಂದರಂದು ಕನ್ನಡಿಗರಾದ ನಾವು ಉಳಿದ ದಿನಗಳಲ್ಲಿ ಕನ್ನಡಿಗರಾಗಿ ಬದುಕುವುದಿಲ್ಲ ಏಕೆ ಎಂಬಿತ್ಯಾದಿ ಹಲವು ಪ್ರಶ್ನೆಗಳಿವೆ. ತೀ.ನಂ.ಶ್ರೀಕಂಠಯ್ಯನವರ ‘ಕನ್ನಡಿಗನ ಕೊರಗು’ ಕವಿತೆಯಲ್ಲಿನ ಆತಂಕದ ನುಡಿಗಳು ನಮ್ಮ ಎದೆಗೆ ಬೀಳಬೇಕಾಗಿದೆ.
-
ನುಡಿಮಾಸ
ಡಾ.ರಾಜೇಂದ್ರ ಕುಮಾರ್ ಕೆ.
ಕನ್ನಡ ರಾಜ್ಯೋತ್ಸವ ಮತ್ತೊಮ್ಮೆ ಬಂದಿದೆ. ಆದರೆ ಈ ಉತ್ಸವಕ್ಕೆ ಅಡೆತಡೆಗಳು ಏನಿದೆ ಎಂಬುದನ್ನು ನಾವು ಗ್ರಹಿಸಬೇಕಿದೆ. ಏಕೆಂದರೆ ಕನ್ನಡ ನುಡಿ ಕೃತಕ ಬುದ್ಧಿಮತ್ತೆ ಯುಗದಲ್ಲಿ ಎಷ್ಟರ ಮಟ್ಟಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಜೀವಂತವಾಗಿದೆ, ಹಾಗೆಯೇ ಪ್ರಸ್ತುತ ದಿನಮಾನಗಳಲ್ಲಿ ಕನ್ನಡದ ಮಹತ್ವ ಹೇಗೆ ಕಡೆಗಣಿಸಲ್ಪಟ್ಟಿದೆ, ಕನ್ನಡಕ್ಕೆ ಒದಗಿರುವ ಆಪತ್ತಿನಿಂದ ಕನ್ನಡವನ್ನು ಕಾಪಾಡುವುದು ಹೇಗೆ ಎಂಬ ಆಲೋಚನೆ ಬಂದರೆ ಕನ್ನಡ ರಾಜ್ಯೋತ್ಸವದ ಆಚರಣೆಗೆ ಸಾರ್ಥಕತೆ ಬರುವುದು.
ಕಿಲೋಮೀಟರ್ಗಳವರೆಗೆ ಕನ್ನಡದ ಬಾವುಟವನ್ನು ಹಿಡಿದರೆ ಕನ್ನಡ ಉಳಿಯಲು ಸಾಧ್ಯವೇ? ನವೆಂಬರ್ ಒಂದರಂದು ಕನ್ನಡಿಗರಾದ ನಾವು ಉಳಿದ ದಿನಗಳಲ್ಲಿ ಕನ್ನಡಿಗರಾಗಿ ಬದುಕುವುದಿಲ್ಲ ಏಕೆ ಎಂಬಿತ್ಯಾದಿ ಹಲವು ಪ್ರಶ್ನೆಗಳಿವೆ. ತೀ.ನಂ.ಶ್ರೀಕಂಠಯ್ಯನವರ ‘ಕನ್ನಡಿಗನ ಕೊರಗು’ ಕವಿತೆಯಲ್ಲಿನ ಆತಂಕದ ನುಡಿಗಳು ನಮ್ಮ ಎದೆಗೆ ಬೀಳಬೇಕಾಗಿದೆ.
‘ಸೊಕ್ಕಿನಲಿ ಜೊತೆಯವರ ಕೂಟದಲಿ/ ನಾವು ಸಮ ನಿಮಗೊಂದು ನುಡಿವ ಬಲವಿಲ್ಲ!/ ಮಿಕ್ಕವರು ಕಡೆಗಣಿಸಿ ನೂಕಿದಾ ಕಡೆ ಬಿದ್ದು, ಯಾವ ಮಂಕೋ ಕವಿದು ಹುದುಗಿರುವೆವಲ್ಲ?’ ಈ ಮೇಲಿನ ಸಾಲುಗಳು ಕನ್ನಡದ ಹಲವು ಸಂಕೀರ್ಣತೆಗಳನ್ನು ತೋರ್ಪಡಿಸುತ್ತಿದೆ. ಕನ್ನಡ, ಕನ್ನಡಿಗ, ಕರ್ನಾಟಕ ವೆಂದು ಬೀಗುವ ಕಾಲ ಹೊರಟು ಹೋದಂತಿದೆ. ಏಕೆಂದರೆ ಕನ್ನಡತನಕ್ಕೆ ಬರಗಾಲ ಸೃಷ್ಟಿಯಾಗುತ್ತಿದೆ. ಕನ್ನಡ ಮಾತನಾಡುವ ಸ್ವಾತಂತ್ರ್ಯ ಸದ್ಯದಲ್ಲಿಯೇ ಜೈಲು ಸೇರಲಿದೆ.
ಇದನ್ನೂ ಓದಿ: Prof R G Hegde Column: ಎಐ ದಾಳಿ ಮತ್ತು ಉನ್ನತ ಶಿಕ್ಷಣದ ಆತಂಕಗಳು
ಕನ್ನಡ ನಾಡು ನುಡಿಗಾಗಿ ಹೋರಾಟ ಮಾಡಿದ ಮಹನೀಯರ ತ್ಯಾಗ ಬಲಿದಾನವನ್ನು ನಾವು ಅವಮಾನಿಸುತ್ತಿದ್ದೇವೆ. ಕಾರಣ ಕನ್ನಡ ನಮ್ಮ ಆತ್ಮದ ಭಾಷೆಯಾಗಿಲ್ಲ. ಅದು ಬಾಹ್ಯದ ಭಾಷೆಯಾಗಿ ಮಾರ್ಪಡುತ್ತಿದೆ. ಕನ್ನಡ ಆಯ್ಕೆ ಮಾಡುವ ಅಧಿಕಾರವು ನಮ್ಮದಲ್ಲ. ಏಕೆಂದರೆ ಬಂಡವಾಳ ಶಾಹಿಗಳ ಆಂಗ್ಲದ ವ್ಯಾಮೋಹಕ್ಕೆ ಕನ್ನಡ ಕಾಣೆಯಾಗುತ್ತಿದೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಗ್ರಹಿಸಿದಾಗ ಸಾ-ವೇರ್ ಕ್ಷೇತ್ರದಲ್ಲಿ ದುಡಿಯುವ ಕನ್ನಡಿಗರಿಗೆ ಇತರೆ ರಾಜ್ಯದವರು ಗೌರವ ಕೊಡುತ್ತಿಲ್ಲ. ಕನ್ನಡ ನೆಲದಲ್ಲಿ ಸ್ಥಾಪನೆಯಾದ ಕಂಪನಿಗಳು ಕನ್ನಡಿಗರಿಗೆ ಉದ್ಯೋಗವನ್ನು ಒದಗಿಸುವಲ್ಲಿ ಹಿಂದೇಟು ಹಾಕುತ್ತಿವೆ. ಅಲ್ಲಿ ಕನ್ನಡ ಮಾತಾಡುವ ಹಕ್ಕು ಇಲ್ಲ. ನಾವು ನಮ್ಮತನ ಕಳೆದುಕೊಂಡು ಗುಲಾಮರಾಗು ತ್ತಿದ್ದೇವೆಯೇ? ಎಂಬ ಸಂದೇಹ ಬರುತ್ತಿದೆ.
ಕನ್ನಡ ಮಾಧ್ಯಮಗಳ ಶಾಲೆ ಕ್ರಮೇಣ ಕಡಿಮೆಯಾಗುತ್ತಿವೆ. ಕನ್ನಡ ಕೇವಲ ಅಭಿಮಾನಕ್ಕೆ ಸೀಮಿತ ವಾಗಿ, ಆತ್ಮಹತ್ಯೆಗೆ ಸಿದ್ಧತೆ ನಡೆಸುತ್ತಿದೆ. ಕಾನ್ವೆಂಟ್ ಶಾಲೆಗಳಲ್ಲಿ ಕನ್ನಡ ಆಟಕ್ಕುಂಟು ಲೆಕ್ಕಕ್ಕಿಲ್ಲ, ಅಥವಾ ಪಠ್ಯವೇ ಇಲ್ಲ ಎಂಬಂತಾಗಿದೆ. ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಪ್ರಥಮ ಭಾಷೆಯಾಗಿ ಕನ್ನಡ ಇರಬೇಕೆಂಬ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಯ ಪ್ರಾಧಿಕಾರಗಳ ಆದೇಶ ವಿದ್ದರೂ ಪಾಲನೆಯಾಗುತ್ತಿಲ್ಲ. ಇದನ್ನು ನೋಡಿಯೂ ಕನ್ನಡಿಗರು ಕಣ್ಮುಚ್ಚಿ ಕುಳಿತಿದ್ದೆರೆನಿಸುತ್ತದೆ.
ಕುವೆಂಪು ಕನ್ನಡಿಗರ ಕನ್ನಡದ ಮನಸ್ಥಿತಿ ಪರಿಸ್ಥಿತಿಗಳ ಬಗ್ಗೆ, ‘ಸಾಯುತಿದೆ ನಿಮ್ಮ ನುಡಿ ಓ ಕನ್ನಡದ ಕಂದರಿರ’ ಕವಿತೆ ಪ್ರಸ್ತುತ ಸಮಸ್ಯೆಗಳ ಹೂರಣವನ್ನು ಪ್ರತಿಬಿಂಬಿಸುತ್ತದೆ. ಕೇವಲ ಕವಿ-ಕಾವ್ಯದ ಸಭೆ, ವಿಚಾರ ಸಂಕಿರಣ, ಸಮಾರಂಭಗಳಲ್ಲಿ ಕನ್ನಡ ಮೊಳಕೆ ಚಿಗುರಿ ನಶಿಸುತ್ತಿದೆ. ಅಕಾಡೆಮಿಗಳು ಬಲ್ಲವರ ದಾಳಗಳಾಗಿ ಕಾರ್ಯನಿರ್ವಹಿಸುತ್ತಿವೆ. ಕನ್ನಡ ಪ್ರೇಮ ತೋರಿಕೆಗಾಗಿ ಸಭೆಗಳು ಏರ್ಪಡುತ್ತಿವೆ. ಕನ್ನಡದ ಅಭಿಮಾನ ಲೆಕ್ಕಾಚಾರದಲ್ಲಿದೆ. ಹಣದ ವ್ಯಾಮೋಹದಲ್ಲಿದೆ.
ಕನ್ನಡ ನಾಡು ನುಡಿಗಾಗಿ ಹೋರಾಟ ಮಾಡಿದ ಸಾಹಿತಿಗಳನ್ನ ವಿಚಾರವಾದಿಗಳನ್ನ ಆಯ್ಕೆ ಮಾಡದ ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಈಗ ಕಂಗಾಲಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಮತ್ತೆ ಆಡಳಿತ ಅಧಿಕಾರಿಗಳ ಉಮೇದುವಾರಿಕೆ ಶುರುವಾಗಿದೆ. ನಿವೃತ್ತ ಅಧಿಕಾರಿಗಳು ಕನ್ನಡ ಸಾಹಿತ್ಯದ ಸೇವೆ ಮಾಡಲು ಸರ್ಕಾರದ ಅಂಗ ಸಂಸ್ಥೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇವರಿಂದ ಕನ್ನಡ ಸೇವೆ ಎಷ್ಟರಮಟ್ಟಿಗೆ ಗಟ್ಟಿಗೊಳ್ಳಲು ಸಾಧ್ಯ? ಕನ್ನಡವನ್ನು ಗಟ್ಟಿಗೊಳಿಸುವ ಸಾಹಿತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗುವ ಅವಕಾಶವನ್ನು ಸದಸ್ಯರು ಮತದಾನ ಮಾಡುವ ಮೂಲಕ ಕನ್ನಡತನವನ್ನು ಉಳಿಸಬೇಕು, ಬೆಳಸಬೇಕು.
ಕನ್ನಡ ಮನಸ್ಸಿನ ಹೃದಯ ಶ್ರೀಮಂತಿಕೆಯ ಸೃಜನಶೀಲ ವ್ಯಕ್ತಿಯನ್ನು ಆಯ್ಕೆ ಮಾಡುವುದು ಒಳಿತು. ಇಲ್ಲದಿದ್ದರೆ ಕನ್ನಡದ ಮಾನ ಹರಾಜಾಗುತ್ತದೆ. ‘ಕನಸಿನೊಳಗೊಂದು ಕಣಸು’ ಕವಿತೆಯಲ್ಲಿ ಬೇಂದ್ರೆ ‘ಹೆಸರಾಗಿಯೂ ಕೂಡ ಹೇಳ ಹೆಸರಿಲ್ಲ’ ಎಂಬ ಮಾತು ಅರಗಿಸಿಕೊಳ್ಳಲು ಸಾಧ್ಯವೇ? ಮುಂದಿನ ಕನ್ನಡ ಸಂಸ್ಕೃತಿಯ ಭವಿಷ್ಯ ಹೀಗಾಗಬಾರದು ಎಂಬ ಕಳಕಳಿಯ ಮಾತು ನೆನಪಾಗು ತ್ತದೆ.
ಇನ್ನು ಕನ್ನಡ ಚಲನಚಿತ್ರಗಳ ಶೀರ್ಷಿಕೆಗಳು ಆಂಗ್ಲಮಯ. ಕನ್ನಡ ನಟರ ಬಿರುದು ಬಾವಲಿಗಳು ಆಂಗ್ಲವಾಗಿವೆ. ಕನ್ನಡ ಚಲನಚಿತ್ರಗಳ ಹಾಡು, ಸಂಭಾಷಣೆ ಆಂಗ್ಲವಾಗಿ ಕನ್ನಡ ಕ್ಷೀಣಿಸುತ್ತಿದೆ. ಸದಭಿರುಚಿಯ ಕನ್ನಡ ಅಭಿಮಾನ ಉದ್ಯಮವಾಗತೊಡಗಿದೆ. ಕನ್ನಡ ಚಲನಚಿತ್ರ ಅಕಾಡೆಮಿ ಕನ್ನಡ ಪರವಾಗಿ ಧ್ವನಿಯತ್ತದೆ ಮಂಕಾಗಿದೆ.
ಕನ್ನಡದಲ್ಲಿ ಹೊಸ ಪದಗಳ ಟಂಕಸಾಲೆ ಬರಿದಾಗಿದೆಯೇ? ಜರ್ಮನಿಯಿಂದ ಬಂದ ಕಿಟ್ಟೆಲ್ ಕನ್ನಡ ಕಲಿತು ಕನ್ನಡ ಶಬ್ದಕೋಶವನ್ನು ರಚಿಸಿದ. ಇಂತಹ ಅಭಿಮಾನ ಹುಟ್ಟುವುದಕ್ಕೆ ನಾವು ಕಂಕಣ ಕಟ್ಟಿಕೊಳ್ಳಬೇಕಲ್ಲವೆ? ಸುದ್ದಿ ವಾಹಿನಿಗಳಲ್ಲಿ ಬಳಸುವ ಭಾಷೆ ಮೂಡುವ ಅಕ್ಷರಗಳು ಎಲ್ಲವೂ ಆಂಗ್ಲದ ಅಧಿಪತ್ಯದ ಪ್ರತಿಷ್ಠಾಪನೆಗೆ ನಾಂದಿ ಹಾಡುತ್ತಿದೆ. ಖಾಸಗಿ ಬಾನುಲಿಗಳು ಕನ್ನಡವನ್ನು ಕೊಲ್ಲುತ್ತಿವೆ.
ಕನ್ನಡದಲ್ಲಿ ಸಂಶೋಧನೆ ಮಾಡಿದ ಸಂಶೋಧಕರನ್ನು ಗುರುತಿಸುವ ಜಾಯಮಾನವು ನಮ್ಮ ವಿಶ್ವವಿದ್ಯಾಲಯಗಳಿಗೆ, ಕನ್ನಡ ಮನಸ್ಸುಗಳಿಗೆ ಇಲ್ಲ. ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡ ಹಿಂದಾಗಿ ಜಾತೀಯತೆ ಮುಂದಾಗಿದೆ. ಶಿ-ರಸು ಇರುವವರಿಗೆ ಮಾತ್ರ ಗೋಷ್ಠಿಗಳಲ್ಲಿ ಅವಕಾಶವನ್ನು ಕೊಡುವರು. ಪ್ರತಿಭೆಗಳನ್ನು ಇಲ್ಲಿ ಜಾತಿಯ ಲೆಕ್ಕದಲ್ಲಿ ಅಳೆಯಲಾಗುತ್ತಿದೆ. ಇನ್ನು ಸಾಹಿತಿಗಳ ಪ್ರತಿಷ್ಠಾನದ ಹೆಸರಲ್ಲಿ ಸಾಹಿತ್ಯ ಪರಿಸರ ಬೆಳೆಯುತ್ತಿದ್ದರೂ ಅದು ಕೂಡ ಗೌಣವಾಗಿದೆ.
ಹೊಸ ತಲೆಮಾರಿನ ವಿದ್ವಾಂಸರಿಗೆ ವೇದಿಕೆಯನ್ನು ಕಲ್ಪಿಸಿಕೊಡದ ಹಿರಿಯ ಸಾಹಿತಿಗಳ ವರ್ಗ. ಹಿರಿಯರಾದವರು ಕಿರಿಯರನ್ನು ಪಕ್ಕದಲ್ಲಿಟ್ಟು ತಿದ್ದಬೇಕಲ್ಲವೇ? ಈ ಮನಸ್ಥಿತಿಯವರು ಸ್ವ ವಿಮರ್ಶೆ ಮಾಡಿಕೊಳ್ಳಬೇಕಲ್ಲವೆ? ತಾಲೂಕು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಗಳಿಗೆ ಅನುದಾನದ ಕೊರತೆ, ಅನುಭವಿಗಳ ಕೊರತೆ.
ಎಲ್ಲಾ ಜನಾಂಗದವರಿಗೆ ಸರಿಸಮಾನವಾದ ಸ್ಥಾನಮಾನ ಹಂಚಿಕೆಯಾಗಿಲ್ಲ. ಇದು ಕನ್ನಡಕ್ಕೆ ಮಾಡುವ ಮಹಾದ್ರೋಹವೆಂದು ಕನ್ನಡಪರ ಹೋರಾಟಗಾರರು ಧ್ವನಿ ಎತ್ತಬಾರದೆ? ಪ್ರತಿ ಯೊಂದು ವ್ಯಾಪಾರ ವಹಿವಾಟುಗಳಲ್ಲಿ ಕನ್ನಡ ಭಾಷೆ ಮಾಯವಾಗಿದೆ. ಆಂಗ್ಲ ಅವತರಣಿಕೆಯಲ್ಲಿ ಅಂಗಡಿಗಳ ಹೆಸರು ನಮೂ ದಾಗಿರುತ್ತದೆ. ಯಾಂತ್ರಿಕ ಯುಗದಲ್ಲಿ ಇದು ಅನಿವಾರ್ಯವೆಂಬಂತೆ ಬಂಡವಾಳ ಶಾಹಿಗಳು ಮೊಂಡುತನ ತೋರಿಸುತ್ತಿದ್ದಾರೆ.
ಭೌತಿಕವಾಗಿ ದೇಹ ಮಾತ್ರ ಕನ್ನಡ. ಆದರೆ ಆತ್ಮ ಕನ್ನಡವಾಗಿ ಕಾಣಿಸುತ್ತಿಲ್ಲ. ಹೀಗೆ ಮುಂದುವರಿದರೆ ಕನ್ನಡದ ಅಸ್ಮಿತೆಯನ್ನು ನಮ್ಮ ಮಕ್ಕಳಿಗೆ ಹೇಳಲು ಅಸಾಧ್ಯ. ಕನ್ನಡ ಪರಿಸರವನ್ನು ನಾವು ವಿನಾಶದ ಅಂಚಿಗೆ ತಂದು ನಿಲ್ಲಿಸಿದ್ದೇವೆ. ಬ್ಯಾಂಕಿನ ವಹಿವಾಟುಗಳಲ್ಲಿ ಕನ್ನಡ ಕಾಣಿಸುವುದೇ ಇಲ್ಲ. ಮಾತನಾಡುವುದಂತು ದೂರದ ಮಾತು.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂಬ ಮಾತಿಗೆ ತೂಕವಿಲ್ಲ. ಅದರ ಸತ್ವ ಸ್ವರೂಪ ಹಳಸುತ್ತಿದೆ. ರಂ.ಶ್ರೀ ಮುಗುಳಿ ಅವರ ‘ಎಂಥ ನಾಡಿದು’ ಕವಿತೆಯಲ್ಲಿನ ಹುಲುಸಾಗಿ ಬೆಳೆ ಹೋಗಿ, ಹುಲ್ಲು ಕೊಳೆ ತುಂಬಿಹುದೋ ಎಂಬ ಸಾಲುಗಳು ನಿಜವಾಗುವ ಭಯ ಕಾಡುತ್ತಿದೆ. ನಮ್ಮ ನಾಡಿನ ಶ್ರೀಮಂತ ಇತಿಹಾಸವನ್ನು ಮರೆತು ಜೀವಿಸು ತ್ತಿದ್ದೇವೆಯೇ ಎಂಬ ನಾಚಿಕೆ ನಮಗೆ ಬರುತ್ತಿಲ್ಲವೆಂಬುದೇ ಸೋಜಿಗ. ‘ಕನ್ನಡ ನುಡಿ ನನ್ನ ಜೀವಿತದ ಅನ್ನ’ವಾಗಲಿ ಎಂಬ ಕವಿತೆಯ ಕೊನೆಯ ಸಾಲುಗಳು ಕನ್ನಡ ಮರೆತ ಮನಸುಗಳಿಗೆ ಸಂಜೀವಿನಿಯಾಗಲಿ. ಕನ್ನಡ ನಾಡಿಗಾಗಿ ದುಡಿಯುತ್ತಿರುವ ಕನ್ನಡ ವೇದಿಕೆಗಳು ಸಮಂಜಸವಾದ ರೀತಿಯಲ್ಲಿ ಕನ್ನಡವನ್ನು ಕಟ್ಟುವಲ್ಲಿ ಸೋಲುತ್ತಿವೆ.
ಕನ್ನಡಕ್ಕಾಗಿ ನೂರೊಂದು ಸಂಘ ಸಂಸ್ಥೆಗಳು ಒಡಕುಗೊಂಡಿವೆ. ಸ್ವ ಪ್ರತಿಷ್ಠೆಯಲ್ಲಿ ಆರ್ಭಟ ಹೆಚ್ಚಾಗಿ ಕನ್ನಡವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದಂತೆ ಭಾಸವಾಗುತ್ತಿದೆ. ಬೇರೆ ರಾಜ್ಯದವರು ಕರ್ನಾಟಕದಲ್ಲಿ ಖಾಸಗಿ ಶಾಲೆಗಳನ್ನು ನಡೆಸುತ್ತಿದ್ದಾರೆ.
ಬೇರೆ ರಾಜ್ಯದವರ ದರ್ಬಾರ್ ಶುರುವಾಗಿ ಬಹಳ ಕಾಲವಾಯಿತು. ಗಡಿಗಳಲ್ಲಿ ಕನ್ನಡ ಭಾಷೆ ಅನಾಥವಾಗಿದೆ. ಕನ್ನಡದ ಕಾನೂನುಗಳು ಅನ್ಯರಿಗೆ ಅನ್ವಯಿಸುವ ನಿಟ್ಟಿನಲ್ಲಿ ಕನ್ನಡ ಪ್ರೇಮವನ್ನು ಹುಟ್ಟು ಹಾಕಬೇಕಾಗಿದೆ. ‘ವಿಶ್ವ ಲಿಪಿಗಳ ರಾಣಿ’ ಇಂದು ಅನಾಥ ಪ್ರಜ್ಞೆಯಲ್ಲಿದೆ.
ಕನ್ನಡದ ಮೇಲೆ ಪ್ರೀತಿ ಅಭಿಮಾನ ಇದ್ದರೆ ಸಾಲದು. ಅದು ಕಾರ್ಯ ಪ್ರವೃತ್ತಿಯಲ್ಲಿ ಕಾಣಬೇಕು. ಕನ್ನಡಿಗರು ಎಲ್ಲಾ ಭಾಷೆ,ಧರ್ಮಗಳ ಸಹಿಷ್ಣುಗಳು. ಒಂದೇ ಶ್ರೇಷ್ಠವೆಂಬ ಪರಿಕಲ್ಪನೆಯಲ್ಲಿ ಕರ್ನಾಟಕವಿಲ್ಲ. ಕರ್ನಾಟಕ ಸಣ್ಣ ಭಾರತವೆಂದರೆ ತಪ್ಪಿಲ್ಲ. ವಿಶ್ವ ವಿನೂತನ ಕನ್ನಡ ಪ್ರಜ್ಞೆ ಜಗತ್ತಿನಾದ್ಯಂತ ಚದುರಿದೆ. ಆದರೆ ಕನ್ನಡ ಮನಸ್ಸುಗಳು ಸಂಕುಚಿತಗೊಂಡಿವೆ.
ಕನ್ನಡ ಅಂಕಿಗಳು ಬಳಸುವವರಿಲ್ಲದೆ ಅನಾಥವಾಗಿವೆ. ಅವುಗಳ ಅಸ್ತಿತ್ವಕ್ಕಾಗಿ ಹೋರಾಟ ಯಾರು ಮಾಡಬೇಕೆಂಬ ಪ್ರಶ್ನೆ ಎದುರಾಗಿದೆ. ಕರುನಾಡಿನಲ್ಲಿ ಕನ್ನಡ ಕಣ್ಮಣಿಯಾಗಿ ಪ್ರಕಾಶಿಸಬೇಕು