H S Manjunath Column: ಕಾಲೇಜು ಚುನಾವಣೆ ನಾಯಕರ ಸೃಷ್ಟಿವೇದಿಕೆ
ಮಕ್ಕಳಲ್ಲಿ ಚುನಾವಣೆ ಪ್ರe ಮೂಡಿಸಲು ಶಾಲಾ ಸಂಸತ್ ಕಾರ್ಯಕ್ರಮ ಹಿಂದಿನಿಂದಲೂ ನಡೆಸಲಾಗುತ್ತಿದೆ. ಭಾರತೀಯ ಚುನಾವಣಾ ಆಯೋಗವೇ 11ನೇ ತರಗತಿ ವಿದ್ಯಾರ್ಥಿಗಳಿಗೆ ‘ಮತದಾರ ಸಾಕ್ಷರತಾ ಸಂಘದ’ (ಇಎಲ್‌ಸಿ) ಮೂಲಕ ಚುನಾವಣಾ ತರಬೇತಿ, ಅರಿವು ಮೂಡಿ ಸುತ್ತದೆ. ಇದರ ಮುಂದುವರಿದ ಭಾಗವಾಗಿ ಈ ಕಾಲೇಜು ಚುನಾವಣೆಯನ್ನು ನೋಡಬೇಕಿದೆ.
-
ಪ್ರಸ್ತುತ
ಎಚ್.ಎಸ್.ಮಂಜುನಾಥ್
ಪ್ರಜಾಪ್ರಭುತ್ವ ವ್ಯವಸ್ಥೆ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆ ಮತದಾನದ ಒಂದು ದಿನಕ್ಕೆ ಸೀಮಿತವಾಗಿರುವುದಲ್ಲ. ನಾಗರಿಕರ ದೈನಂದಿನ ಬದುಕಿನಲ್ಲಿ ಪ್ರಜಾ ಪ್ರಭುತ್ವದ ಮೌಲ್ಯಗಳು ಆಳವಾಗಿ ಬೆರೆತಾಗ ಮಾತ್ರ ಪ್ರಜಾಪ್ರಭುತ್ವ ಬಲಿಷ್ಠ ವಾಗುತ್ತದೆ. ಈ ದೃಷ್ಟಿಯಿಂದ, ರಾಜ್ಯ ಸರ್ಕಾರವು ಕಾಲೇಜು ಮತ್ತು ವಿಶ್ವವಿದ್ಯಾಲಯ ಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸಲು ಹೊರಟಿರುವ ನಿರ್ಧಾರವು ಮಹತ್ವವಾದದ್ದು.
ಇದು ಭವಿಷ್ಯದ ಜವಾಬ್ದಾರಿಯುತ, ಪ್ರeವಂತ ನಾಗರಿಕರನ್ನು ರೂಪಿಸುವ ಸಾಮಾಜಿಕ ಹೂಡಿಕೆ. ರಾಜ್ಯ ಸರ್ಕಾರವು ಮೂರು ದಶಕಗಳ ಬಳಿಕ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸಲು ಮುಂದಾಗಿದೆ. ಈ ಕುರಿತು ಪ್ರಾಥಮಿಕ ಸಭೆ ನಡೆಸಿದ್ದು, ಅಂತಿಮ ವರದಿ ನೀಡಲು ವೈದ್ಯಕೀಯ ಶಿಕ್ಷಣ ಸಚಿವರ ನೇತೃತ್ವದ 9 ಮಂದಿ ಸದಸ್ಯರ ಸಮಿತಿ ಕೂಡ ರಚಿಸಿದೆ.
ರಾಜ್ಯ ಸರ್ಕಾರದ ಈ ಚುನಾವಣಾ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಕೆಲವೇ ವ್ಯಕ್ತಿಗಳಿಂದ ಟೀಕೆಗಳು ಸಹ ಕೇಳಿ ಬರುತ್ತಿವೆ. ಹೀಗಾಗಿ ವಿದ್ಯಾರ್ಥಿ ಚುನಾವಣೆಯ ಮಹತ್ವ, ಅನಿವಾರ್ಯತೆ ಹಾಗೂ ಅನುಕೂಲಗಳ ಬಗ್ಗೆ ಚರ್ಚೆಯಾಗಬೇಕಿದೆ.
ಮಕ್ಕಳಲ್ಲಿ ಚುನಾವಣೆ ಪ್ರe ಮೂಡಿಸಲು ಶಾಲಾ ಸಂಸತ್ ಕಾರ್ಯಕ್ರಮ ಹಿಂದಿನಿಂದಲೂ ನಡೆಸಲಾಗುತ್ತಿದೆ. ಭಾರತೀಯ ಚುನಾವಣಾ ಆಯೋಗವೇ 11ನೇ ತರಗತಿ ವಿದ್ಯಾರ್ಥಿಗಳಿಗೆ ‘ಮತದಾರ ಸಾಕ್ಷರತಾ ಸಂಘದ’ (ಇಎಲ್‌ಸಿ) ಮೂಲಕ ಚುನಾವಣಾ ತರಬೇತಿ, ಅರಿವು ಮೂಡಿಸುತ್ತದೆ. ಇದರ ಮುಂದುವರಿದ ಭಾಗವಾಗಿ ಈ ಕಾಲೇಜು ಚುನಾವಣೆಯನ್ನು ನೋಡಬೇಕಿದೆ.
ಇದನ್ನೂ ಓದಿ: K Prithvijit Column: ಫುಟ್‌ಬಾಲ್ʼಅನ್ನು ಬಿಸಿಸಿಐ ಕೈಯಲ್ಲಿಡಿ ಸಾಕು
ಸರ್ಕಾರದ ನಿರ್ಧಾರ ಶ್ಲಾಘನಾರ್ಹ: ಇಂದಿನ ಮಕ್ಕಳೇ ಮುಂದಿನ ನಾಯಕರು, ಆಡಳಿತಗಾರರು ಮತ್ತು ಸಮಾಜಕ್ಕೆ ದಿಕ್ಕು ತೋರಿಸುವ ಶಕ್ತಿಗಳು. ಅವರಿಗೆ ಬಾಲ್ಯದ ಪ್ರಜಾಪ್ರಭುತ್ವದ ಅಭ್ಯಾಸ ನೀಡುವುದು ದೂರದೃಷ್ಟಿಯ ಸರ್ಕಾರದ ಲಕ್ಷಣ. ಈ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ಚುನಾವಣೆ ನಡೆಸಲು ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ನಿರ್ಧಾರವು ಶಿಕ್ಷಣವನ್ನು ಅಂಕಗಳಿಗೆ ಸೀಮಿತಗೊಳಿಸದೆ ಸಂಪೂರ್ಣ ವ್ಯಕ್ತಿತ್ವ ವಿಕಸನದತ್ತ ಕೊಂಡೊ ಯ್ಯುವ ಶ್ಲಾಘನೀಯ ಪ್ರಯತ್ನ.
ಕಾಲೇಜು ಚುನಾವಣೆಗಳು ಮಕ್ಕಳಲ್ಲಿ ನಾಯಕತ್ವ, ಜವಾಬ್ದಾರಿ, ಪ್ರಜಾಪ್ರಭುತ್ವದ ಅರಿವು ಮತ್ತು ಸಾಮಾಜಿಕ ಸಂವೇದನೆಯನ್ನು ಬೆಳೆಸುವ ಶಕ್ತಿಶಾಲಿ ಸಾಧನವಾಗಲಿವೆ. ಇದು ದೇಶದ ಭವಿಷ್ಯವನ್ನು ಹೆಚ್ಚು ಜಾಗೃತ, ಶಿಸ್ತು, ಸಂಯಮ ಮತ್ತು ಮೌಲ್ಯಗಳನ್ನು ರೂಢಿಸಿಕೊಂಡ ಕೈಗಳಿಗೆ ಒಪ್ಪಿಸುವ ನಿಟ್ಟಿನಲ್ಲಿ ಪ್ರಥಮ ಹೆಜ್ಜೆ ಎಂದೇ ಭಾವಿಸಬೇಕು.
ಪ್ರಬುದ್ಧ ನಾಯಕತ್ವ ಶಿಕ್ಷಣಕ್ಕೆ ನಾಂದಿ: ಕಾಲೇಜು ಹಂತದ ಚುನಾವಣೆ ಪ್ರಕ್ರಿಯೆ ಪರಿಚಯಿಸುವುದು ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವ ಅತ್ಯುತ್ತಮ ಮಾರ್ಗ. ವಿದ್ಯಾರ್ಥಿಗಳು ಚುನಾವಣೆಗೆ ಸ್ಪರ್ಧಿಸುವುದು, ಪ್ರಚಾರ ನಡೆಸುವುದು, ತಮ್ಮ ಅಭಿಪ್ರಾಯ ಗಳನ್ನು ಶಾಂತವಾಗಿ ಮತ್ತು ಸ್ಪಷ್ಟವಾಗಿ ಮಂಡಿಸುವುದು. ಇವು ಪಠ್ಯಪುಸ್ತಕಗಳಲ್ಲಿ ಕಲಿಸಲು ಅಸಾಧ್ಯವಾದ ಪ್ರಬುದ್ಧ ಶಿಕ್ಷಣ, ಜೀವನ ಕೌಶಲ್ಯ. ಇದಕ್ಕೂ ಮಿಗಿಲಾಗಿ ಶಾಲಾ ಚುನಾವಣೆಗಳು ಪ್ರಜಾಪ್ರಭುತ್ವದ ಮೌಲ್ಯಗಳಾದ ಸಮಾನತೆ, ನ್ಯಾಯ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ನೈಜ ಅನುಭವ ನೀಡುತ್ತವೆ.
ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ, ಚುನಾವಣಾ ವ್ಯವಸ್ಥೆಯನ್ನು ಅನುಭವವಾಗಿ ಅರ್ಥಮಾಡಿಕೊಳ್ಳುತ್ತಾರೆ. ಇದು ಭವಿಷ್ಯದಲ್ಲಿ ಜವಾಬ್ದಾರಿಯುತ ಮತದಾರರಾಗಲು ನೆರವಾಗಲಿದೆ. ಚುನಾವಣೆಗಳು ಟೀಂ ವರ್ಕ್ ಮತ್ತು ಪರಸ್ಪರ ಗೌರವ, ಸೋಲು-ಗೆಲುವನ್ನು ಸಮಚಿತ್ತದಿಂದ ತೆಗೆದುಕೊಳ್ಳುವ ಸ್ಪೂರ್ತಿ ಮನೋಭಾವ ಬೆಳೆಸಲು ನೆರವಾಗುತ್ತದೆ. ಜತೆಗೆ ವಿವಿಧ ಹಿನ್ನೆಲೆ, ಭಾಷೆ, ಆರ್ಥಿಕ ಪರಿಸ್ಥಿತಿ ಹೊಂದಿರುವ ಮಕ್ಕಳು ಸಮಾನ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಪಡೆಯುತ್ತಾರೆ. ತನ್ಮೂಲಕ ಸಾಮಾಜಿಕ ಒಳಗೂಡಿಸುವಿಕೆ ಉತ್ತೇಜಿಸುತ್ತದೆ.
ರಾಜಕೀಯ ನಾಯಕತ್ವದ ಗರಡಿಮನೆ: ವಿದ್ಯಾರ್ಥಿ ಚುನಾವಣೆಗಳು ರಾಜ್ಯದಲ್ಲಿ ಪ್ರಮುಖ ನಾಯಕರನ್ನು ಹುಟ್ಟಿಹಾಕಿದ ಹಿನ್ನೆಲೆ ಹೊಂದಿವೆ. ಡಿ.ಕೆ.ಶಿವಕುಮಾರ್ ಅವರು ತಮ್ಮ 18ನೇ ವಯಸ್ಸಿನ ಎನ್‌ಎಸ್‌ಯುಐ ಮೂಲಕ ಮುನ್ನೆಲೆಗೆ ಬಂದವರು. ದಿವಂಗತ ಅನಂತಕುಮಾರ್ ಅವರು ಪಿಯುಸಿ ದಿನಗಳಿಂದಲೇ ನಾಯಕರಾಗಿ ಗುರುತಿಸಿಕೊಂಡವರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿ ಸಂಘಟನೆ ಮೂಲಕ ಅಲ್ಲದಿದ್ದರೂ ಕಾಲೇಜಿನಲ್ಲಿzಗಲೇ ಸಮಾಜವಾದಿ ಸಿದ್ಧಾಂತಗಳಿಂದ ಪ್ರೇರಿತರಾಗಿ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದರು. ಡಿ.ವಿ.ಸದಾನಂದಗೌಡ, ಪ್ರಿಯಾಂಕ್ ಖರ್ಗೆ, ಸಲೀಂ ಅಹಮದ್, ರಿಜ್ವಾನ್ ಅರ್ಷದ್, ಶೋಭಾ ಕರಂದ್ಲಾಜೆ ಹಲವರು ಈ ಸಾಲಿಗೆ ಬರುತ್ತಾರೆ. ಅಷ್ಟೇಕೆ ನಾನು ವಿದ್ಯಾರ್ಥಿ ಕಾಂಗ್ರೆಸ್‌ನಿಂದ ಗುರುತಿಸಿಕೊಂಡು ಚಿಕ್ಕ ವಯಸ್ಸಿನ ವಿಧಾನಸಭೆ ಚುನಾವಣೆ ಸ್ಪರ್ಧೆಗೆ ಅವಕಾಶ ಪಡೆದುಕೊಂಡೆ. ಹೀಗಾಗಿ ಇದನ್ನು ವಿರೋಧಿಸುವುದು ತರವಲ್ಲ.
ಇದು ಪಕ್ಷ ರಾಜಕೀಯವಲ್ಲ: ಕೆಲವರು ಕಾಲೇಜುಗಳಲ್ಲಿ ಚುನಾವಣೆ ನಡೆಸುವುದರಿಂದ ರಾಜಕೀಯಕರಣ ಆಗುತ್ತದೆ ಆತಂಕ ವ್ಯಕ್ತಪಡಿಸುತ್ತಾರೆ. ಆದರೆ ಇದು ಪಕ್ಷ ರಾಜಕೀಯ ವಲ್ಲ. ಇಲ್ಲಿ ಯಾವುದೇ ಪಕ್ಷದ ಚಿಹ್ನೆ, ಸಿದ್ಧಾಂತ ಅಥವಾ ಪ್ರಚಾರ ಇರುವುದಿಲ್ಲ. ಪ್ರಜಾ ಪ್ರಭುತ್ವದ ಶಿಕ್ಷಣ ನೀಡುವುದೇ ಅಪರಾಧ ಎಂಬಂತೆ ಆಗಬಾರದು. ಬದಲಿಗೆ ಮೌಲ್ಯಾ ಧಾರಿತ ನಾಗರಿಕ ಶಿಕ್ಷಣ. ಸರಿಯಾದ ಮಾರ್ಗಸೂಚಿ, ಶಿಕ್ಷಕರ ಮೇಲ್ವಿಚಾರಣೆ ಮತ್ತು ನೈತಿಕ ಮೌಲ್ಯಗಳೊಂದಿಗೆ ಈ ಪ್ರಕ್ರಿಯೆ ನಡೆಯುವುದಾದರೆ, ಯಾವುದೇ ರೀತಿಯ ದುಷ್ಪರಿಣಾಮ ಬೀರುವುದಿಲ್ಲ. ಬದಲಿಗೆ ಸಕಾರಾತ್ಮಕ ಫಲಿತಾಂಶವನ್ನೇ ನೀಡುತ್ತದೆ.
ಟೀಕೆಗಳು ಸಾಯುತ್ತವೆ, ಸಾಧನೆ ಉಳಿಯುತ್ತದೆ: ಸರ್ಕಾರದ ನಿರ್ಧಾರಕ್ಕೆ ಕೆಲವರಿಂದ ಟೀಕೆಗಳು ವ್ಯಕ್ತವಾಗುತ್ತಿವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳುವಂತೆ, ‘ಟೀಕೆಗಳು ಸಾಯುತ್ತವೆ, ಸಾಧನೆ ಉಳಿಯುತ್ತದೆ’. ಜತೆಗೆ ಟೀಕೆಗಳಿಗೆ ಉತ್ತರಿಸುವುದೂ ಸಹ ನಮ್ಮ ಜವಾಬ್ದಾರಿ. ಇದು ಮಕ್ಕಳಲ್ಲಿ ರಾಜಕೀಯ ಭಾವನೆ ಮೂಡಿಸುತ್ತದೆ, ಮಕ್ಕಳ ಮನಸ್ಸು ದುರ್ಬಳಕೆ ಮಾಡಿಕೊಳ್ಳಲು ಕಾರಣವಾಗಲಿದೆ. ಶಿಕ್ಷಣದ ಮೂಲ ಗುರಿಯಿಂದ ದೂರ ಮಾಡುತ್ತದೆ ಎಂಬೆ ಟೀಕೆ ವ್ಯಕ್ತವಾಗುತ್ತದೆ.
ಆದರೆ, ಇವು ಭಯದ ಆಧಾರದ ಮೇಲೆ ಹುಟ್ಟಿದವೇ ಹೊರತು ವಾಸ್ತವ ಆಧಾರಿತವಲ್ಲ. ಮೊದಲನೆಯದಾಗಿ, ಶಾಲೆಗಳಲ್ಲಿ ನಡೆಯುವ ವಿದ್ಯಾರ್ಥಿ ಚುನಾವಣೆಗಳನ್ನು ಪಕ್ಷ ರಾಜಕೀಯದೊಂದಿಗೆ ಹೋಲಿಸುವುದೇ ತಪ್ಪು. ಇಲ್ಲಿ ಯಾವುದೇ ಪಕ್ಷದ ಚಿಹ್ನೆ, ಸಿದ್ಧಾಂತ ಅಥವಾ ಪ್ರಚಾರ ಇರುವುದಿಲ್ಲ.
ಎರಡನೆಯದಾಗಿ, ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ ಎಂಬುದೂ ಸರಿಯಲ್ಲ. ಕಾಲೇಜು ಚುನಾ ವಣೆ ಕೆಲವೇ ದಿನಗಳ ಪ್ರಕ್ರಿಯೆ. ಅದರಿಂದ ಮಕ್ಕಳು ಕಲಿಯುವ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ಸಮಯ ನಿರ್ವಹಣೆ, ಟೀಂ ವರ್ಕ್ ಇವೆಲ್ಲವೂ ಅವರ ಶೈಕ್ಷಣಿಕ ಸಾಧನೆಗೂ ಸಹಾಯಕವಾಗುತ್ತವೆ.
ಶಿಕ್ಷಣ ಅಂದರೆ ಕೇವಲ ಅಂಕಗಳಲ್ಲ, ವ್ಯಕ್ತಿತ್ವ ವಿಕಾಸವೂ ಅದರ ಅವಿಭಾಜ್ಯ ಭಾಗ. ವಸ್ತುನಿಷ್ಠ ಚರ್ಚೆ ಅನಿವಾರ್ಯ: ಕಾಲೇಜುಗಳಲ್ಲಿ ಚುನಾವಣೆ ನಡೆಸುವ ನಿರ್ಧಾರವನ್ನು ವಿರೋಧಿಸುವುದಕ್ಕಿಂತ, ಅದನ್ನು ಮತ್ತಷ್ಟು ಪಾರದರ್ಶಕ, ಶಿಸ್ತಿನ ಮತ್ತು ಮೌಲ್ಯಾಧಾರಿತ ವಾಗಿ ನಡೆಸುವ ಬಗ್ಗೆ ಚರ್ಚೆ ನಡೆಯಬೇಕು.
ಭವಿಷ್ಯದ ನಾಗರಿಕರನ್ನು ತಯಾರಿಸುವ ಈ ಪ್ರಯತ್ನವನ್ನು ಅನುಮಾನದಿಂದ ನೋಡು ವುದಕ್ಕಿಂತ, ಜವಾಬ್ದಾರಿಯುತವಾಗಿ ಬೆಂಬಲಿಸುವುದು ಸಮಾಜದ ಕರ್ತವ್ಯ. ಒಟ್ಟಾರೆ, ಶಾಲಾ ಚುನಾವಣೆಗಳು ರಾಜಕೀಯ ಸಾಧನವಲ್ಲ, ಅದು ಪ್ರಜಾಪ್ರಭುತ್ವದ ಪಾಠ. ಅದನ್ನು ವಿರೋಧಿಸುವ ಬದಲು ಸುಧಾರಿಸಲು ಮುಂದಾಗೋಣ.
ಶಾಲಾ ಚುನಾವಣೆಗಳು ಮಕ್ಕಳನ್ನು ಪಾಠದಿಂದ ದೂರ ಮಾಡಲ್ಲ; ಬದುಕಿಗೆ ಹತ್ತಿರ ಮಾಡುತ್ತವೆ. ಇಂದಿನ ದಿನಗಳಲ್ಲಿ ನಾಯಕತ್ವದ ಕೊರತೆ’ ಇದೆ ಎಂದು ದೂರುವವರೇ, ನಾಯಕತ್ವ ಬೆಳೆಯುವ ವೇದಿಕೆಯನ್ನು ವಿರೋಧಿಸುವುದು ದ್ವಂದ್ವವಲ್ಲವೇ?
ನಾಯಕರನ್ನು ತಯಾರಿಸದೇ, ನಾಯಕತ್ವದ ಕೊರತೆ ಇದೆ ಎನ್ನುವುದರಲ್ಲಿ ಅರ್ಥವಿಲ್ಲ. ಕಾಲೇಜು ಚುನಾವಣೆಗಳು ಮಕ್ಕಳಲ್ಲಿ ಗೆಲುವಿನ ಅಹಂಕಾರವನ್ನಲ್ಲ, ಸೋಲಿನ ಸಹನೆ ಯನ್ನು ರೂಪಿಸುತ್ತವೆ. ಅಧಿಕಾರವನ್ನಲ್ಲ, ಹೊಣೆಗಾರಿಕೆಯನ್ನು ಕಲಿಸುತ್ತವೆ. ಸಮಾನ ಅವಕಾಶಗಳ ಬಗ್ಗೆ ಮಾತನಾಡುವವರು, ಪ್ರತಿಯೊಬ್ಬ ವಿದ್ಯಾರ್ಥಿಗೂ ನಾಯಕನಾಗುವ ಅವಕಾಶ ನೀಡುವ ಈ ವ್ಯವಸ್ಥೆಯನ್ನು ಏಕೆ ವಿರೋಧಿಸುತ್ತಾರೆ ಎಂಬುದಕ್ಕೆ ಉತ್ತರ ಕೊಡಬೇಕು.
ಕಾಲೇಜು ಚುನಾವಣೆಗಳು ರಾಜಕೀಯ ಆಟವಲ್ಲ. ಅದು ಪ್ರಜಾಪ್ರಭುತ್ವದ ತರಬೇತಿ ಶಿಬಿರ. ಅದನ್ನು ವಿರೋಧಿಸುವುದು ಎಂದರೆ, ಜಾಗೃತ ನಾಗರಿಕರನ್ನು ರೂಪಿಸುವುದನ್ನೇ ಪ್ರಶ್ನಿಸಿದಂತೆ.