K Prithvijit Column: ಫುಟ್ಬಾಲ್ʼಅನ್ನು ಬಿಸಿಸಿಐ ಕೈಯಲ್ಲಿಡಿ ಸಾಕು
ಫುಟ್‌ಬಾಲ್ ನಲ್ಲಿ ಮೂಲೆಮೂಲೆಗಳಿಂದ ಪ್ರತಿಭೆಗಳನ್ನು ಹೆಕ್ಕುವ ಸಾಹಸಕ್ಕೆ ಎಐಎಫ್ಎಫ್ ಎಂದೂ ಕೈಹಾಕಿಲ್ಲ. ಆ ಬೇಸರ ಭಾರತದಲ್ಲಿನ ಪ್ರತಿ ಫುಟ್‌ಬಾಲಿಗನಿಗೂ ಇದೆ. ಅಲ್ಲಿ ಆಡುವುದರಿಂದ ಆರ್ಥಿಕವಾಗಿ ಅವರು ಸುಭದ್ರಗೊಳ್ಳುತ್ತಾರೆ ಎಂದಂತೂ ಹೇಳಲು ಸಾಧ್ಯವೇ ಇಲ್ಲ. ಭಾರತೀಯ ಫುಟ್‌ಬಾಲ್ ತಂಡವನ್ನು ಬಿಸಿಸಿಐಗೆ ಕೈಯಲ್ಲಿಡಲು ಸಾಧ್ಯವಿಲ್ಲವೇ?
-
ಮನೋಕಾಮ
ನಿರೂಪ (ಕೆ.ಪೃಥ್ವಿಜಿತ್)
ಜಗತ್ತಿನ ಜನಪ್ರಿಯ ಕ್ರೀಡೆಯಾದ ಫುಟ್‌ಬಾಲ್‌ನ ಆಡಳಿತ ಒಂದು ವೇಳೆ ಭಾರತದಲ್ಲಿ ಬಿಸಿಸಿಐ ಕೈಗೆ ಸಿಕ್ಕಿದರೆ? ಬಹುಶಃ ಈ ಯೋಚನೆ ಭಾರತೀಯ ಕ್ರೀಡಾಭಿಮಾನಿಗಳಿಗೆ ಬಂದಿರುತ್ತದೆ. ನಿಮಗೂ ಬಂದಿರಬಹುದು. ವಿಶ್ವದ ಬಲಿಷ್ಠ ಕ್ರೀಡಾಸಂಸ್ಥೆಗಳಿಗಂತೂ ಖಚಿತವಾಗಿ ಬಂದಿರುತ್ತದೆ.
ಅಕಸ್ಮಾತ್ ಭಾರತದಲ್ಲಿ ಫುಟ್ಬಾಲ್ ಆಟವನ್ನು ಬಿಸಿಸಿಐ ನಿಯಂತ್ರಿಸಿದರೆ ಇನ್ನು ಒಂದು ಹತ್ತು ವರ್ಷಗಳಲ್ಲಿ, ಭಾರತೀಯ ಫುಟ್‌ಬಾಲ್ ತಂಡ ಜಗತ್ತಿನಲ್ಲಿ ಮಾಡುವ ಮೋಡಿ ಯನ್ನೊಮ್ಮೆ ಹಾಗೆಯೇ ಯೋಚಿಸಿ ನೋಡಿ... ಯಾವುದೇ ಕ್ರೀಡೆಯನ್ನು ಭಾರತೀಯರು ಹಚ್ಚಿಕೊಂಡರೆ ಆಟಗಾರರು ಒಮ್ಮೆಲೇ ದೇವರ ಸ್ಥಾನಕ್ಕೇರುತ್ತಾರೆ.
ಹಣವಂತೂ ಹೊಳೆಯಂತೆ ಧಾರೆಧಾರೆಯಾಗಿ ಹರಿದು ಬರುತ್ತದೆ. ಅದರಲ್ಲೂ 211 ದೇಶ ಗಳಲ್ಲಿ ಜನಪ್ರಿಯವಾಗಿರುವ ಫುಟ್‌ಬಾಲ್‌ನಲ್ಲಿ ಭಾರತೀಯರು ಮಿನುಗಿದರೆ ಅಷ್ಟೂ ದೇಶ ಗಳಲ್ಲಿ ನಮ್ಮ ತಾರೆಯರು ದಂತಕಥೆಗಳಾಗಿರುತ್ತಾರೆ. ಲಯೋನೆಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೋ, ಹ್ಯಾರಿ ಬ್ರೂಕ್ ಬಗ್ಗೆ ಭಾರತದ ಪುಟ್ಟ ಮಕ್ಕಳಿಗೂ ಗೊತ್ತಿದೆ.
ಭಾರತೀಯ ಆಟಗಾರನೊಬ್ಬ ವಿಶ್ವದಲ್ಲಿ ಮನೆಮಾತಾಗುವ ಗಳಿಗೆಯನ್ನು ನಿಮ್ಮ ಮನಸ್ಸಿ ನಲ್ಲಿ ತಂದುಕೊಳ್ಳಿ. ಕ್ರಿಕೆಟ್‌ನಲ್ಲಿ ವಿಶ್ವದ ಅತ್ಯಂತ ಬಲಿಷ್ಠ ತಂಡವನ್ನು ಕಟ್ಟಿ ನಿಲ್ಲಿಸಿರುವ ಬಿಸಿಸಿಐಗೆ ಫುಟ್‌ಬಾಲ್‌ನಲ್ಲಿ ಅಂತಹದ್ದೊಂದು ವಿಸ್ಮಯವನ್ನು ಸೃಷ್ಟಿ ಮಾಡಲು ಸಾಧ್ಯ ವಿಲ್ಲವೇ? ಭಾರತದಲ್ಲಿರುವ ಜನಬಲ, ಹಣಬಲ, ಅಭಿಮಾನಬಲದಿಂದ ಒಂದು 10 ವರ್ಷದ ಯೋಜನೆ ಯಲ್ಲಿ ಅದನ್ನು ಮಾಡಲು ಸಾಧ್ಯವಿದೆ.
ಇದನ್ನೂ ಓದಿ: Ranjith H Ashwath Column: ಗೊಂದಲದ ಹೇಳಿಕೆ ನಡುವೆ ಗ್ಯಾರಂಟಿಗಳೇ ಮಾಯ !
ಹಾಗೇನಾದರೂ ಆದರೆ ಕ್ರಿಕೆಟ್‌ನ ಪರಿಸ್ಥಿತಿ ಏನಾಗಬಹುದು? ಇಲ್ಲೀಗ ದೇವರ ಸ್ಥಾನದಲ್ಲಿ ಭದ್ರವಾಗಿ ಕುಳಿತಿರುವ ಕ್ರಿಕೆಟಿಗರು ಸಹಜವಾಗಿ 2ನೇ ಸ್ಥಾನಕ್ಕಿಳಿಯುತ್ತಾರೆ. ಬಹುಶಃ ಪ್ರಸ್ತುತ ಭಾರತದಲ್ಲಿ ಮಹಿಳಾ ಕ್ರಿಕೆಟಿಗರಿಗೆ ಯಾವ ಸ್ಥಾನಮಾನವಿದೆಯೋ, ಅದು ಪುರುಷ ಕ್ರಿಕೆಟಿಗರಿಗೆ ಸಿಕ್ಕಬಹುದು.
Puಟ್‌ಬಾಲ್ ಆಟಗಾರರ ವಿಶ್ವಪ್ರಕಾಶ ಕ್ರಿಕೆಟಿಗರಿಗೆ ಮಂಕು ಹಿಡಿಸುತ್ತದೆ.ಈಗ ವಿಶ್ವದ ಪ್ರಬಲ ಕ್ರಿಕೆಟ್ ತಂಡ ಭಾರತ. ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ. ಭಾರತ ನೀಡುವ ಆದಾಯವೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಮೂಲಶಕ್ತಿ. ಇಲ್ಲಿಂದ ಹರಿಯುವಿಕೆ ನಿಂತರೆ ಐಸಿಸಿಯ ‘ಕಾಲಚಕ್ರ’ವೇ ಸ್ಥಗಿತಗೊಳ್ಳುತ್ತದೆ! ಐಸಿಸಿಯಲ್ಲಿರುವ ಒಟ್ಟು ಸದಸ್ಯ ರಾಷ್ಟ್ರಗಳ ಸಂಖ್ಯೆ 110. ಇದರಲ್ಲಿ ಪೂರ್ಣ ಸದಸ್ಯ ರಾಷ್ಟ್ರಗಳು 12. ಬಾಕಿ 98 ಸಹ ಸದಸ್ಯ ರಾಷ್ಟ್ರಗಳು.
ಪೂರ್ಣ ಸದಸ್ಯ ರಾಷ್ಟ್ರಗಳಲ್ಲಿ ಈಗ ಗುಣಮಟ್ಟದ ಕ್ರಿಕೆಟ್ ಆಡುತ್ತಿರುವುದು ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದ.ಆಫ್ರಿಕಾ ಮಾತ್ರ. ಪಾಕಿಸ್ತಾನ ನಿಧಾನಕ್ಕೆ ವೆಸ್ಟ್ ಇಂಡೀಸ್ ಮಾದರಿಯಲ್ಲಿ ಇತಿಹಾಸವನ್ನೇ ಪದೇಪದೇ ಮೆಲುಕು ಸ್ಥಿತಿಗೆ ತಲುಪುತ್ತಿದೆ. ಶ್ರೀಲಂಕಾ ಈಗಾಗಲೇ ಬಾಂಗ್ಲಾ ಮಟ್ಟಕ್ಕಿಳಿದಿದೆ. ಅರ್ಥಾತ್ ಈ ತಂಡಗಳೆಲ್ಲ ಪೂರ್ಣ ದುರ್ಬಲಗೊಂಡಿವೆ.
ಅಫ್ಘಾನಿಸ್ತಾನ, ಬಾಂಗ್ಲಾ, ಜಿಂಬಾಬ್ವೆ, ಐರ್ಲೆಂಡ್ ತಂಡಗಳನ್ನು ಕರ್ನಾಟಕ ರಣಜಿ ತಂಡ ಕ್ಕೂ ಹೋಲಿಸಲು ಸಾಧ್ಯವಿಲ್ಲ. ಫುಟ್‌ಬಾಲ್ ವಿಶ್ವಕಪ್‌ಗೆ ಬಂದರೆ ಇಂತಹ ತಂಡಗಳು ಅರ್ಹತಾ ಸುತ್ತಿನಲ್ಲೂ ಆಡುವುದು ಅನುಮಾನ. ಈ ವೈರುಧ್ಯವನ್ನೊಮ್ಮೆ ಗಮನಿಸಿ... 1999, 2003, 2007ರಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಸತತ 3 ವಿಶ್ವಕಪ್ʼಗಳನ್ನು ಗೆದ್ದಿತ್ತು. ಆಗದಕ್ಕೆ ಎಂತಹ ಹುಮ್ಮಸ್ಸಿತ್ತೆಂದರೆ ತನ್ನ ದೇಶದಲ್ಲಿ ನಾಲ್ಕು ಅಂತಾರಾಷ್ಟ್ರೀಯ ಗುಣಮಟ್ಟದ ತಂಡಗಳನ್ನು ಏಕಕಾಲಕ್ಕೆ ಆಡಿಸಬಲ್ಲ ಸಾಮರ್ಥ್ಯವಿದೆ ಎಂದು ಬೀಗು ವಷ್ಟರ ಮಟ್ಟಿಗೆ. ಆಗಿನ ಆಸೀಸ್ ಕ್ರಿಕೆಟಿಗರು ಮೈದಾನದಲ್ಲಿ ಗೂಳಿಗಳಂತೆ ವರ್ತಿಸುತ್ತಿದ್ದರು.
ಭಾರತೀಯ ಕ್ರಿಕೆಟಿಗರನ್ನು ಕಂಡರೆ ಅದೊಂದು ರೀತಿಯ ಅಣಕವಾಡುವ ಛಾಯೆ ಅವರಲ್ಲಿ ಕಾಣುತ್ತಿತ್ತು. ಈಗ ಭಾರತೀಯ ಕ್ರಿಕೆಟ್‌ಗೆ ದಕ್ಕಿದ ಹಣಬಲ, ಗುಣಬಲ, ಅಭಿಮಾನ ಬಲದಿಂದ ಆಸೀಸಿಗರು ಬಹುತೇಕ ಸ್ಲೆಜಿಂಗ್ ಅನ್ನೇ ನಿಲ್ಲಿಸಿದ್ದಾರೆ ಎಂದು ಅನಿಸುತ್ತದೆ.
ಐಪಿಎಲ್‌ನಲ್ಲಿ ಭಾರತೀಯ ಆಟಗಾರರ ಜೊತೆಗೆ ಆಡಬೇಕಾದ ಅವರು, ಅಲ್ಲಿ ಅಣಕ ವಾಡಿದರೆ ಇಲ್ಲಿ ನಿಭಾಯಿಸುವುದು ಹೇಗೆ? ಇವತ್ತು ಭಾರತೀಯ ತಂಡದ ಶಕ್ತಿ ಹೇಗಿದೆ ಯೆಂದರೆ ಟೆಸ್ಟ್, ಏಕದಿನ, ಟಿ೨೦ಗೆ ಸಂಪೂರ್ಣ ಪ್ರತ್ಯೇಕ ತಂಡಗಳನ್ನು ಮಾಡಲೇಬೇಕಾದ ಅನಿವಾರ್ಯತೆಯಿದೆ.
ಬೇಡಬೇಡವೆಂದು ಎಲ್ಲರೂ ಹೇಳುತ್ತಿದ್ದರೂ ಮೂರೂ ಮಾದರಿಗೆ ಬಹುತೇಕ ಭಿನ್ನ ಆಟಗಾರರೇ ಆಡುತ್ತಿದ್ದಾರೆ. ಈ ಹಿಂದೆ ಕೊಹ್ಲಿ, ರೋಹಿತ್, ಜಡೇಜ, ಬುಮ್ರಾ ಅಷ್ಟೇ ಎಲ್ಲ ಮಾದರಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದದ್ದು. ಮುಂದಿನ ದಿನಗಳಲ್ಲಿ ಅವೆಲ್ಲ ದಂತಕಥೆಗಳಾಗ ಬಹುದು!
ವಿಶ್ವ ಫುಟ್‌ಬಾಲ್ ಅನ್ನು ನಿಭಾಯಿಸುವ ಫಿಫಾವನ್ನು ಗಮನಿಸಿ. ಅದು ಜಗತ್ತಿನ ಶ್ರೀಮಂತ ಕ್ರೀಡಾಮಂಡಳಿ. ಅದರ ಅಂಕಿಅಂಶಗಳನ್ನೆಲ್ಲ ಇಲ್ಲಿ ನೀಡುವ ಅಗತ್ಯವಿಲ್ಲ. ಫಿಫಾದ ಒಟ್ಟು ಸದಸ್ಯ ರಾಷ್ಟ್ರಗಳು 211. ವಿಶ್ವಕಪ್‌ನಲ್ಲಿ 48 ತಂಡಗಳು ಆಡುತ್ತವೆ. ಈ ವಿಶ್ವಕಪ್‌ನ ಅರ್ಹತಾಸುತ್ತಿನಲ್ಲೂ ಭಾರತ ಗೆಲ್ಲುವುದು ಕಷ್ಟ.
ಅದೂ ಅಫ್ಘಾನಿಸ್ತಾನ, ಕತಾರ್, ಕುವೈತ್‌ನಂತಹ ತಂಡಗಳೆದುರು ಗೆಲ್ಲಲು ಉಬ್ಬಸ ಪಟ್ಟುಕೊಳ್ಳುತ್ತದೆ. 2026 ಫುಟ್‌ಬಾಲ್ ವಿಶ್ವಕಪ್ ಇರಲಿ, 2027ರಲ್ಲಿ ನಡೆಯುವ ಎಎ-ಸಿ ಏಷ್ಯಾ ಕಪ್ʼಗೂ ಭಾರತಕ್ಕೆ ಅರ್ಹತೆ ಸಿಕ್ಕಿಲ್ಲ!
ಕ್ರಿಕೆಟ್‌ನಲ್ಲಿ ಸುನೀಲ್ ಗಾವಸ್ಕರ್, ಕಪಿಲ್ ದೇವ್, ಚಂದ್ರಶೇಖರ್, ಎರ್ರಪಳ್ಳಿ ಪ್ರಸನ್ನ, ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ, ವಿವಿವಿಸ್ ಲಕ್ಷ್ಮಣ್, ವೀರೇಂದ್ರ ಸೆಹವಾಗ್, ಯುವರಾಜ್ ಸಿಂಗ್, ಎಂ.ಎಸ್.ದೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಆರ್.ಅಶ್ವಿನ್, ಜಸ್‌ಪ್ರೀತ್ ಬುಮ್ರಾರಂತಹ ಸಾರ್ವಕಾಲಿಕ ಶ್ರೇಷ್ಠರನ್ನು ಭಾರತ ಸೃಷ್ಟಿಸಬಲ್ಲುದಾದರೇ ಫುಟ್‌ಬಾಲ್‌ನಲ್ಲಿ ಸಾಧ್ಯವಿಲ್ಲವೇ? ಈ ಮೇಲಿನ ಆಟಗಾರರೆಲ್ಲ ತಮ್ಮದೇ ಕಾರಣಕ್ಕೆ ಶ್ರೇಷ್ಠರು.
ಇವರನ್ನು ವಿಶ್ವದ ಯಾವುದೇ ಇತರೆ ಕ್ರೀಡೆಯ ದಂತಕಥೆಗಳಿಗೆ ಹೋಲಿಸಬಹುದು. ಸಚಿನ್ ತೆಂಡುಲ್ಕರ್ ರನ್ನು ಕ್ರಿಕೆಟ್ ದೇವರು ಎಂದು ಕರೆದಿರುವುದರಲ್ಲಿ ನನಗೆ ಯಾವುದೇ ಉತ್ಪ್ರೇಕ್ಷೆಯೂ ಕಾಣಿಸುವುದಿಲ್ಲ. 24 ವರ್ಷಗಳ ಕಾಲ ಕ್ರಿಕೆಟ್ ಮೈದಾನದಲ್ಲಿ ಉತ್ಕೃಷ್ಟ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಕಡಿಮೆ ಸಾಧನೆಯಾ? ರಾಹುಲ್ ದ್ರಾವಿಡ್ ಮೈದಾನದಲ್ಲಿದ್ದಾಗ ಬಾರಿಸುತ್ತಿದ್ದ ಹೊಡೆತಗಳನ್ನು ಹೊಸ ತಲೆಮಾರು ವಿಡಿಯೋದಲ್ಲಿ ಪರಿಶೀಲಿಸಿದರೆ, ಅದರ ಕಲಾತ್ಮಕತೆಯು ಸಂಗೀತದಂತೆ ಕೇಳಿಸಿ ಮೈಜುಮ್ಮೆನ್ನಿಸಬಹುದು.
ಯಾವುದೇ ಬೌಲರ್ ಬಂದರೂ ಮುಲಾಜಿಲ್ಲದೇ ಸಿಕ್ಸರ್ ಗೆರೆ ದಾಟಿಸುತ್ತಿದ್ದ ಸೆಹ್ವಾಗ್, ವಿಶ್ವ ಕ್ರಿಕೆಟ್‌ನಲ್ಲೇ ಅತಿ ಬಲಿಷ್ಠ ಬೌಲಿಂಗ್ ಬಲದೊಂದಿಗೆ ದಾಳಿಗಿಳಿದಿದ್ದ ಆಸ್ಟ್ರೇಲಿಯಾದೆದುರು ಲಕ್ಷ್ಮಣ್ ದಾಖಲಿಸಿದ 281 ರನ್‌ಗಳನ್ನು ಕ್ರಿಕೆಟ್ ಪ್ರೇಮಿಗಳು ಎಂದಾದರೂ ಮರೆಯಲು ಸಾಧ್ಯವೇ? ಅನಿಲ್ ಕುಂಬ್ಳೆಯ 10 ವಿಕೆಟ್, ಸೌರವ್ ಗಂಗೂಲಿಯ ಎಡಗೈ ಬ್ಯಾಟಿಂಗ್, ಪ್ರತಿಭೆಗಳ ಬೆನ್ನಬಲವಾಗಿ ನಿಂತ ನಾಯಕತ್ವ, ಎಂ.ಎಸ್.ಧೋನಿಯ ಊಹಿಸಲೇ ಆಗದ ನಿರ್ಧಾರಗಳು, ಎಂತಹ ಬೌಲಿಂಗ್ ಬಲಕ್ಕೆ ಆದರೂ ಎದೆಕೊಟ್ಟು ನಿಲ್ಲುವ ಕೊಹ್ಲಿ, ರೋಹಿತ್ ಸಾಮರ್ಥ್ಯ ವಿಶ್ವದ ಇತರೆ ಯಾವ ಕ್ರೀಡಾ ತಾರೆಗಳಿಗೆ ಕಡಿಮೆಯಿದ್ದಾರೆ?
ಇಂತಹ ವಿಶ್ವ ದಿಗ್ಗಜರನ್ನು ಸೃಷ್ಟಿಸಲು ಬಿಸಿಸಿಐಗೆ ಸಾಧ್ಯವಾದರೆ -ಟ್‌ಬಾಲ್‌ನಲ್ಲಿ ಏಕೆ ಸಾಧ್ಯವಿಲ್ಲ? ಇದನ್ನು ಸಾಧ್ಯ ಮಾಡಬಾರದೆಂದು ಕಾಣದ ಕೈಗಳು ನಿಯಂತ್ರಿಸು ತ್ತಿರಬಹುದೆಂದೇ ಹಲವು ಬಾರಿ ನನಗೆ ಸಂಶಯ ಬರುತ್ತದೆ.
ಒಂದು ವೇಳೆ ಹಾಗೆ ಫುಟ್‌ಬಾಲ್ ಅನ್ನು ಬೆಳೆಯಲು ಬಿಟ್ಟಿದ್ದರೆ, ತೆಂಡುಲ್ಕರ್, ಗಂಗೂಲಿ, ಕೊಹ್ಲಿ, ರೋಹಿತ್ ಫುಟ್‌ಬಾಲ್ ಮೈದಾನದಲ್ಲಿರುತ್ತಿದ್ದರು. ಭಾರತ ಮತ್ತು ವಿಶ್ವದ ಮೂಲೆಮೂಲೆಗಳಲ್ಲಿ ಅವರು ಹೋದ ಜಾಗದಲ್ಲಿ ಜನರನ್ನು ನಿಯಂತ್ರಿಸುವುದು ಕಷ್ಟವಾಗುತ್ತಿತ್ತು.
ಭಾರತದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುವುದನ್ನು ತಡೆದುಕೊಳ್ಳಲಾಗದೇ ವಿರಾಟ್ ಕೊಹ್ಲಿ ಇಂಗ್ಲೆಂಡ್‌ನಲ್ಲಿ ಮನೆ ಮಾಡಿದ್ದಾರೆ. ಅಲ್ಲಿ ಅವರು ರಸ್ತೆಗಿಳಿದರೆ ನಿರಾಳವಾಗಿರ ಬಹುದಂತೆ. ಅದೇ ಭಾರತದಲ್ಲಾದರೆ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಗರ್ಭಿಣಿಯಾದರೆ ಸಾಕು, ಅದನ್ನು ಸರಣಿಸರಣಿಯಾಗಿ ವರದಿ ಮಾಡಲು ಪತ್ರಕರ್ತರು ಬೆನ್ನುಬೆನ್ನಿಗೆ ಬೀಳುತ್ತಾರೆ.
ದಯವಿಟ್ಟು ಇವನ್ನೆಲ್ಲ ಸುದ್ದಿ ಮಾಡಬೇಡಿ ಎಂದು ಅವರು ಗೋಗರೆದು, ಕಡೆಗೆ ಸಿಟ್ಟಾಗುವ ಮಟ್ಟಕ್ಕೆ ಇಲ್ಲಿನ ಪರಿಸ್ಥಿತಿಯಿದೆ. ಬಹಳ ಕ್ರಿಕೆಟಿಗರು ತಾವು ಪತ್ರಿಕೆ ಓದುವುದಿಲ್ಲ, ಟಿವಿ ನೋಡುವುದಿಲ್ಲ ಎಂದೇ ಹೇಳಿದ್ದಾರೆ. ಕೆಲವೇ ಕೆಲವು ದೇಶಗಳಲ್ಲಿ ಜನಪ್ರಿಯವಿರುವ ಕ್ರಿಕೆಟ್‌ನಿಂದಲೇ ಈ ತಾರೆಗಳು ಇಂತಹ ದ್ದೊಂದು ಅಭಿಮಾನದ ಹೊಳೆಗೆ ಸಿಲುಕುವಂತಾದರೆ, ಫುಟ್‌ಬಾಲ್‌ನಲ್ಲಿ ಏನಾಗಬಹುದು? ಭಾರತದಲ್ಲಿ ಫುಟ್‌ಬಾಲ್ ಅನ್ನು ಬೆಳೆಸಲು ಎಐಎಫ್ಎಫ್ ಎಂದೂ ಗಂಭೀರವಾಗಿ ಶ್ರಮ ಹಾಕಿಲ್ಲ. ಅದರ ಬಗ್ಗೆ ಯಾರೆಷ್ಟೇ ಕೂಗಾಡಿದರೂ ಪ್ರಯೋಜನವಿಲ್ಲ.
1937ರಲ್ಲಿ ಶುರುವಾದ ಎಐಎಫ್ಎಫ್ ಸಂಸ್ಥೆಯಡಿ ಫುಟ್‌ಬಾಲ್‌ನಲ್ಲಿ ಆಡುತ್ತಿರುವ ಆಟಗಾರರಲ್ಲಿ ಬಹುತೇಕರು ಈಶಾನ್ಯ ಭಾರತ, ಕೇರಳದಿಂದ ಬಂದಿರುತ್ತಾರೆ. ಇತರೆ ಭಾಗಗಳ ಆಟಗಾರರ ಸಂಖ್ಯೆ ಬಹಳ ಕಡಿಮೆಯಿರುತ್ತದೆ. ಬಿಸಿಸಿಐನ ವ್ಯವಸ್ಥೆ ಹೇಗಿದೆ ಎಂದರೆ ಇಲ್ಲಿ ರಣಜಿ ನಡೆದರೆ ದೇಶದ 38 ತಂಡಗಳು ಆಡುತ್ತವೆ. ಜಮ್ಮುಕಾಶ್ಮೀರವೂ ಸೇರಿ ದೇಶದ ಎಲ್ಲ ತಂಡಗಳು ಇಲ್ಲಿ ಆಡುತ್ತವೆ.
ಭಾರತ ಕ್ರಿಕೆಟ್ ತಂಡವೆಂದರೆ ಈ ಎಲ್ಲ ಅಗಣಿತ ಪ್ರತಿಭೆಗಳ ಮಹಾಸಂಗಮ. ಒಂದೊಂದು ಸ್ಥಾನಕ್ಕೂ ಇಲ್ಲಿ ಹತ್ತಾರು ಆಯ್ಕೆಗಳಿವೆ. ಪ್ರತಿ ಪಂದ್ಯಕ್ಕೂ ಆಟಗಾರರನ್ನು ಆಯ್ಕೆ ಮಾಡುವಾಗ ವ್ಯವಸ್ಥಾಪಕರು ಹೆಣಗಾಡುತ್ತಾರೆ.
ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿರುವ ಇಶಾನ್ ಕಿಶನ್, ಶುಭಮನ್ ಗಿಲ್, ಟೆಸ್ಟ್ ನಲ್ಲಿ ತ್ರಿಶತಕ ಬಾರಿಸಿರುವ ಕರುಣ್ ನಾಯರ್‌ಗೂ ಇಲ್ಲಿ ಸ್ಥಾನದ ಭದ್ರತೆಯಿಲ್ಲ. ಫುಟ್‌ಬಾಲ್ ನಲ್ಲಿ ಮೂಲೆಮೂಲೆಗಳಿಂದ ಪ್ರತಿಭೆಗಳನ್ನು ಹೆಕ್ಕುವ ಸಾಹಸಕ್ಕೆ ಎಐಎಫ್ಎಫ್ ಎಂದೂ ಕೈಹಾಕಿಲ್ಲ. ಆ ಬೇಸರ ಭಾರತದಲ್ಲಿನ ಪ್ರತಿ ಫುಟ್‌ಬಾಲಿಗನಿಗೂ ಇದೆ. ಅಲ್ಲಿ ಆಡುವುದರಿಂದ ಆರ್ಥಿಕವಾಗಿ ಅವರು ಸುಭದ್ರಗೊಳ್ಳುತ್ತಾರೆ ಎಂದಂತೂ ಹೇಳಲು ಸಾಧ್ಯವೇ ಇಲ್ಲ. ಭಾರತೀಯ ಫುಟ್‌ಬಾಲ್ ತಂಡವನ್ನು ಬಿಸಿಸಿಐಗೆ ಕೈಯಲ್ಲಿಡಲು ಸಾಧ್ಯವಿಲ್ಲವೇ?