ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉದ್ಘಾಟನೆಗೂ ಮೊದಲೇ ಜನಸಾಗರ

ಪಶ್ಚಿಮ ಘಟ್ಟಗಳ ಹಸಿರು ಸಾಲು ಮತ್ತು ಭದ್ರಾ ನದಿಯ ಪ್ರಶಾಂತ ಹಿನ್ನೀರಿನ ಹಿನ್ನೋಟವು ಪ್ರವಾಸಿಗರಿಗೆ ಆಹ್ಲಾದಕರ ಅನುಭವ ನೀಡುತ್ತಿದೆ. ಕೆಲವೇ ದಿನಗಳ ಹಿಂದೆ ಅಪರಿಚಿತ ಎಂಬಂತಿದ್ದ ಈ ಪ್ರದೇಶ ಈಗ ಪ್ರವಾಸಿ ಚಟುವಟಿಕೆಗಳಿಂದ ಗಿಜಿಗುಟ್ಟುತ್ತಿದೆ. ಈ ಸೇತುವೆಯು ಕೇವಲ ಒಂದು ಪ್ರವಾಸಿ ತಾಣವಾಗಿ ಉಳಿಯದೆ, ಸ್ಥಳೀಯರಿಗೆ ಮತ್ತು ರೈತರಿಗೆ ವರದಾನವಾಗಿದೆ.

ಉದ್ಘಾಟನೆಗೂ ಮೊದಲೇ ಜನಸಾಗರ

-

Profile
Ashok Nayak Apr 12, 2026 2:07 PM

ಭದ್ರಾ ಹಿನ್ನೀರಿನಲ್ಲಿ ಸಿದ್ಧವಾಗಿ ಕರೆಯುತ್ತಿದೆ ಸಿದ್ದರಾಮಯ್ಯ ಸೇತುವೆ

ಕೆಎಸ್‌ʼಟಿಡಿಸಿಯಿಂದಲೂ ಮೂರು ಕಿಮೀ ಜಾಗದಲ್ಲಿ ರೆಸಾರ್ಟ್‌, ಅಮ್ಯೂಸ್‌ʼಮಂಟ್‌ ಪಾರ್ಕ್‌ ನಿರ್ಮಾಣಕ್ಕೆ ಸಿದ್ದತೆ

ಹಳ್ಳಿ-ಹಳ್ಳಿಗಳನ್ನು ಸಂಪರ್ಕಿಸಲು, ಭದ್ರೆ ಉಕ್ಕಿದಾಗ ಸಂಚಾರಕ್ಕೆ ಸಮಸ್ಯೆಯಾಗದಿರಲು ಹಾಗೂ ಸಂಚಾರದ ದೂರವನ್ನು ತಗ್ಗಿಸುವ ಉದ್ದೇಶದಿಂದ ಸೇತುವೆ ನಿರ್ಮಾಣವಾದರೂ, ಇದೀಗ ಉದ್ಘಾಟನೆಗೂ ಮೊದಲೇ ಈ ಸೇತುವೆ ಪ್ರವಾಸಿ ತಾಣವಾಗಿ ಬದಲಾಗಿದೆ.

ಎನ್.ಆರ್.ಪುರ ಮತ್ತು ಹೊನ್ನೆಕೊಡಿಗೆಯನ್ನು ಸಂಪರ್ಕಿಸಲು ಭದ್ರಾ ನದಿಯ ಹಿನ್ನೀರಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಹೊಸ ಸೇತುವೆ ಈಗ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಈ ಸ್ವರ್ಗ ಸದೃಶ ಸ್ಥಳ ನೋಡಲು ಈಗ ಪ್ರವಾಸಿಗರು ಮುಗಿ ಬಿದ್ದಿದ್ದಾರೆ. ಈ ಸೇತುವೆ ಈಗ ಚಿಕ್ಕಮಗಳೂರಿನ ಮತ್ತೊಂದು ಪ್ರಮುಖ ಪ್ರವಾಸಿ ತಾಣವಾಗಿ ರೂಪುಗೊಂಡಿದೆ. ಈ ಸೇತುವೆ ಯಿಂದಾಗಿ ರೈತರ ದಶಕಗಳ ಕನಸು ಕೂಡ ನನಸಾಗಿದೆ.

ಈ ಸೇತುವೆ ಮೂಲಕ ಮನಮೋಹಕ ನೈಸರ್ಗಿಕ ಸೌಂದರ್ಯ ಸವಿಯಲು ರಾಜ್ಯದ ನಾನಾ ಭಾಗಗಳಿಂದ ನಿತ್ಯ ಸಾವಿರಾರು ಜನ ಆಗಮಿಸುತ್ತಿದ್ದಾರೆ. ಹೀಗಾಗಿ ಈ ಭಾಗದಲ್ಲಿ ಇದ್ದಕ್ಕಿದ್ದಂತೆ ಪ್ರವಾಸೋದ್ಯಮ ಹೊಸ ಕಳೆ ಪಡೆದುಕೊಂಡಿದೆ. ಇನ್ನೊಂದೆಡೆ, ರೈತರಿಗೆ ಪಾಲಿಗೂ ಈ ಸೇತುವೆ ವರದಾನವಾಗಿದೆ.

ಪಶ್ಚಿಮ ಘಟ್ಟಗಳ ಹಸಿರು ಸಾಲು ಮತ್ತು ಭದ್ರಾ ನದಿಯ ಪ್ರಶಾಂತ ಹಿನ್ನೀರಿನ ಹಿನ್ನೋಟವು ಪ್ರವಾಸಿಗರಿಗೆ ಆಹ್ಲಾದಕರ ಅನುಭವ ನೀಡುತ್ತಿದೆ. ಕೆಲವೇ ದಿನಗಳ ಹಿಂದೆ ಅಪರಿಚಿತ ಎಂಬಂತಿದ್ದ ಈ ಪ್ರದೇಶ ಈಗ ಪ್ರವಾಸಿ ಚಟುವಟಿಕೆಗಳಿಂದ ಗಿಜಿಗುಟ್ಟುತ್ತಿದೆ. ಈ ಸೇತುವೆಯು ಕೇವಲ ಒಂದು ಪ್ರವಾಸಿ ತಾಣವಾಗಿ ಉಳಿಯದೆ, ಸ್ಥಳೀಯರಿಗೆ ಮತ್ತು ರೈತರಿಗೆ ವರದಾನವಾಗಿದೆ. ಹಿಂದೆ 30 ಕಿ.ಮೀ, ಈಗ 5 ಕಿ.ಮೀ ಭದ್ರಾ ಅಣೆಕಟ್ಟನ್ನು 1958ರಲ್ಲಿ ನಿರ್ಮಾಣವಾದಾಗ ಈ ಪ್ರದೇಶದ ಸಾವಿರಾರು ರೈತರು ತಮ್ಮ ಫಲವತ್ತಾದ ಜಮೀನನ್ನು ಕಳೆದುಕೊಂಡು ನಿರ್ಗತಿಕರಾಗಿದ್ದರು.

ಇದನ್ನೂ ಓದಿ: Hari Paraak Column: ವೈಭವ್‌ ಸೂರ್ಯವಂಶಿ ನೀತಿ ಹೊಡೆದು ಆಳಬೇಕು

ನರಸಿಂಹರಾಜಪುರ ಮತ್ತು ಹೊನ್ನೆಕೊಡಿಗೆ ನಡುವಿನ ನೇರ ಸಂಪರ್ಕ ಕಡಿತಗೊಂಡಿತ್ತು. ಎನ್.ಆರ್.ಪುರದಿಂದ ಹೊನ್ನೆಕೊಡಿಗೆ ತಲುಪಬೇಕೆಂದರೆ ಸುಮಾರು 30 ಕಿ.ಮೀ ಪ್ರಯಾಣಿಸ ಬೇಕಿತ್ತು. ಆದರೆ ಇದೀಗ ಈ ಹೊಸ ಸೇತುವೆಯ ನಿರ್ಮಾಣದಿಂದಾಗಿ ಕೇವಲ 5 ಕಿ.ಮೀ ಕ್ರಮಿಸಿದರೆ ಸಾಕು. ಈ ಸೇತುವೆ ನಿರ್ಮಾಣದಿಂದಾಗಿ ಸಾರ್ವಜನಿಕರ ಮತ್ತು ರೈತರ ದೈನಂದಿನ ಪ್ರಯಾಣದ ಸಮಯದಲ್ಲಿ ಭಾರಿ ಉಳಿತಾಯ ಆಗಿದೆ. ಇದರಿಂದಾಗಿ ಸಾರಿಗೆ ವೆಚ್ಚ ಕೂಡ ಗಣನೀಯ ಪ್ರಮಾಣ ದಲ್ಲಿ ಕಡಿಮೆಯಾಗಿದೆ.

ಸುಮಾರು 800 ಮೀಟರ್ ಉದ್ದದ ಈ ಸೇತುವೆಯನ್ನು 36 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸ ಲಾಗಿದೆ. ಈ ಸೇತುವೆಗಾಗಿ ದಶಕಗಳಿಂದ ಇಲ್ಲಿಯ ಜನ ನಿರಂತರ ಹೋರಾಟ ನಡೆಸುತ್ತಿದ್ದರು. ಕೆ.ಎಸ್.ಟಿ.ಡಿ.ಸಿ ಅಧ್ಯಕ್ಷ ಎಂ.ಶ್ರೀನಿವಾಸ್ ಅವರು ಈ ಸೇತುವೆಯ ಅಗತ್ಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಸಿಎಂ ಸಿದ್ದರಾಮಯ್ಯ ಅವರು ಈ ಸೇತುವೆ ನಿರ್ಮಿಸಲು ವಿಶೇಷ ಆಸಕ್ತಿ ವಹಿಸಿದ್ದರು. ಮುಂದಿನ ದಿನಗಳಲ್ಲಿ ಇಲ್ಲಿ ವಾಟರ್ ಪಾರ್ಕ್ ಇತ್ಯಾದಿ ಆಧುನಿಕ ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸುವ ಯೋಜನೆ ಕಾರ್ಯಗತಗೊಳಿಸಲು ಸಿದ್ಧತೆ ನಡೆಸಿಕೊಳ್ಳಲಾಗಿದೆ.

ರಾಜ್ಯ ರಸ್ತೆ, ಸೇತುವೆ, ಕಾಲುಸಂಕಗಳ ಅಭಿವೃದ್ಧಿ, ದುರಸ್ತಿ ಕಾರ್ಯಕ್ಕೆ ಕರ್ನಾಟಕ ಸರಕಾರ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದ್ದು, ವರ್ಷದ ಅವಧಿಯಲ್ಲಿ ಎರಡು ಸಾವಿರ ಕೋಟಿ ರು.ಗಳ ಅನುದಾನವನ್ನು ಒದಗಿಸಲಾಗಿದೆ.

amuesement park 2 R

2025-26ನೇ ಸಾಲಿನಲ್ಲಿ 216 ಸೇತುವೆಗಳ ನಿರ್ಮಾಣ, 288 ಸೇತುವೆ ದುರಸ್ತಿ ಹಾಗೂ ೩೮೬ ಕಾಲು ಸಂಕಗಳ ನಿರ್ಮಾಣ ಕಾಮಗಾರಿಗಳನ್ನು 2000 ಕೋಟಿ ರು.ಗಳ ವೆಚ್ಚದಲ್ಲಿ ಕೈಗೊಳ್ಳಲು ಅನುಮೋ ದಿಸಲಾಗಿದೆ. ಈ ಕಾರ್ಯಕ್ರಮವನ್ನು ಮುಂದುವರೆಸಿ ಸೇತುವೆಗಳ ನಿರ್ಮಾಣಕ್ಕಾಗಿ ಮುಂದಿನ ಎರಡು ವರ್ಷಗಳಲ್ಲಿ 2000 ಕೋಟಿ ಮೊತ್ತವನ್ನು ಒದಗಿಸಲಾಗುವುದೆಂದು ಘೋಷಿಸಲಾಗಿದೆ.

ಕೆಆರ್‌ಡಿಸಿಎಲ್ ರಾಜ್ಯದ ರಸ್ತೆ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. 1999ರ ಜುಲೈ 21ರಂದು ಕಂಪನಿಗಳ ಕಾಯಿದೆ 1956ರಲ್ಲಿ ಕರ್ನಾಟಕ ಸರಕಾರದ ಸಂಪೂರ್ಣ ಮಾಲೀಕತ್ವದ ಸಂಸ್ಥೆಯಾಗಿದ್ದು, ಸಾರ್ವಜನಿಕ ಕಾಮಗಾರಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಈ ನಿಗಮ, ರಸ್ತೆ ನಿರ್ಮಾಣ, ವಿಸ್ತರಣೆ, ಬಲಪಡಿಸುವುದು ಹಾಗೂ ಸೇತುವೆಗಳ ನಿರ್ಮಾಣದಲ್ಲಿ ತೊಡಗಿದೆ.

ಸಂಸ್ಥೆಯ ಪ್ರಾರಂಭಿಕ ಷೇರು ಬಂಡವಾಳ 510 ಕೋಟಿ ರು.ಗಳಾಗಿದ್ದು, ಸರಕಾರದ ಅನುದಾನ, ರಸ್ತೆ ಬಳಕೆದಾರ ಶುಲ್ಕ, ಠೇವಣಿ ಕೊಡುಗೆಗಳ ಬಡ್ಡಿ ಹಾಗೂ ರಸ್ತೆ ನಿಧಿ ರಚನೆ ಮೂಲಕ ಹಣಕಾಸು ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, 2001-04ರಲ್ಲಿ 7327 ಕಿ.ಮೀ ಮತ್ತು 2005-08ರಲ್ಲಿ 14500 ಕಿ.ಮೀ ರಾಜ್ಯ ಹೆದ್ದಾರಿ ನಿರ್ವಹಣೆ ನಡೆಸಲಾಗಿದೆ. ಹಂತ ಹಂತವಾಗಿ 642 ಸೇತುವೆಗಳು ಹಾಗೂ 33 ಪ್ರಮುಖ ಸೇತುವೆಗಳುನಿರ್ಮಾಣಗೊಂಡಿವೆ.

ಶತಮಾನದ ಬಳಿಕ ರಸ್ತೆ ಅಗಲೀಕರಣ

ಸಿದ್ದರಾಮಯ್ಯ ಅವರು ಕೇವಲ ಈ ಸೇತುವೆ ಮಾತ್ರವಲ್ಲದೇ, ಎನ್.ಆರ್ ಪುರದ ರಸ್ತೆಗಳೂ ಅಗಲೀ ಕರಣವಾಗಿರಲಿಲ್ಲ. ಆದ್ದರಿಂದ ಇದೀಗ ಸುಮಾರು 38.50 ಕೋಟಿ ವೆಚ್ಚದಲ್ಲಿ ಬೃಹತ್ ಸೇತುವೆ ನಿರ್ಮಾಣದೊಂದಿಗೆ, ಸೇತುವೆಗೆ ಹೋಗುವ ರಸ್ತೆಯನ್ನು ಸುಮಾರು ಆರು ಕೋಟಿ ರುಪಾಯಿ ವೆಚ್ಚದಲ್ಲಿ ಗುಣಮಟ್ಟದಲ್ಲಿ ನಿರ್ಮಾಣ ಮಾಡಲಾಗಿದೆ. 130 ವರ್ಷಗಳಿಂದ ಎನ್.ಆರ್.ಪುರ ಪಟ್ಟಣದ ರಸ್ತೆ ಅಗಲೀಕರಣವಾಗಿರಲಿಲ್ಲ. ರಸ್ತೆ ಕಿರಿದಾಗಿದ್ದು ವಾಹನಗಳ ಓಡಾಟವೇ ಕಷ್ಟವಾಗಿತ್ತು. ರಸ್ತೆ ಅಗಲೀಕರಣ ಮಾಡಿ ಮನೆ ಮಾಲೀಕರಿಗೆ ಪರಿಹಾರ ಕೊಡಿಸಬೇಕು ಎಂದು 60 ಕೋಟಿ ರುಪಾಯಿಗಳನ್ನು ಮಂಜೂರು ಮಾಡಿಸಲಾಗಿದೆ. ಈ ಅನುದಾನದಲ್ಲಿ ರಸ್ತೆ ಅಗಲೀಕರಣಕ್ಕೆ 20 ಕೋಟಿ ರುಪಾಯಿಗಳನ್ನು ಬಳಸಿಕೊಂಡು, ಉಳಿದ 40 ಕೋಟಿ ರುಪಾಯಿಯನ್ನು ನಿವೇಶನ, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಲಾಗಿದೆ. ಈ ಯೋಜನೆಗೆ ಹಲವು ಶಾಸಕರು, ಸಚಿವರು ವಿರೋಧಿಸಿದರೂ ಎಂ.ಶ್ರೀನಿವಾಸ್ ಅವರ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 60 ಕೋಟಿ ರುಪಾಯಿ ಮಂಜೂರು ಮಾಡಿದ್ದರು. ಈ ರಸ್ತೆ ಅಗಲೀಕರಣದಿಂದ ಎನ್.ಆರ್.ಪುರ ಪಟ್ಟಣ ಅಭಿವೃದ್ದಿ ಕಾಣಲಿದೆ. ಪಟ್ಟಣದ ಚಿತ್ರವೇ ಬದಲಾಗಲಿದೆ ಎನ್ನುವುದು ಸ್ಥಳೀಯರ ವಿಶ್ವಾಸವಾಗಿದೆ.

ಮೂರು ಎಕರೆ ಜಾಗದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್

ಇನ್ನು ಈ ಸೇತುವೆ ಉದ್ಘಾಟಿಸುವುದಷ್ಟೇ ಅಲ್ಲದೇ, ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಇನ್ನಷ್ಟು ಒತ್ತು ನೀಡಬೇಕು ಎನ್ನುವ ಕಾರಣಕ್ಕೆ ಕೆಎಸ್‌ಟಿಡಿಸಿ ವತಿಯಿಂದ ಈಗಾಗಲೇ ಹಿನ್ನೀರಿನ ಸುತ್ತಮುತ್ತಲಿನ ಭಾಗದಲ್ಲಿ ಮೂರು ಎಕರೆ ಜಾಗದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್, ಥೀಮ್ ಪಾರ್ಕ್, ವಾಟರ್ ಪಾರ್ಕ್ ಮಾಡುವ ಚಿಂತನೆಯಿದೆ. ಇದರೊಂದಿಗೆ ಕೆಎಸ್‌ಟಿಡಿಸಿ ವತಿಯಿಂದ ರೆಸಾರ್ಟ್ ಮಾಡಿದರೆ, ಪ್ರವಾಸಿಗರಿಗೆ ಮಲೆನಾಡ ಸೌಂದರ್ಯ ಹಾಗೂ ಹಿನ್ನೀರಿನ ತಂಪನ್ನು ಸವಿಯಲು ಸಾಧ್ಯವಾಗುತ್ತದೆ. ಈ ಸೇತುವೆಯ ಸುತ್ತಮುತ್ತ ಇನ್ನೂ ಕೆಲವು ಪ್ರೇಕ್ಷಣೀಯ ಸ್ಥಳಗಳಿವೆ. ಮುಖ್ಯವಾಗಿ, ಸಿಂಹನಗದ್ದೆ ಜೈನ ಬಸದಿ. ಇದು ಎನ್.ಆರ್. ಪುರದಲ್ಲಿರುವ ಐತಿಹಾಸಿಕ ಮತ್ತು ಧಾರ್ಮಿಕ ತಾಣವಾಗಿದೆ. ಇಲ್ಲಿಂದ ಸುಮಾರು 40 ಕಿ.ಮೀ ದೂರದ ಕುಪ್ಪಳಿಯಲ್ಲಿ ಕುವೆಂಪು ಸ್ಮಾರಕವಿದೆ. ಲಕ್ಕವಳ್ಳಿ ಭದ್ರಾ ಅಣೆಕಟ್ಟು ನೋಡಲು ಸೊಗಸಾಗಿದೆ.

image

1958ರಲ್ಲಿ ಭದ್ರಾ ಅಣೆಕಟ್ಟು ನಿರ್ಮಾಣವಾದಾಗ ನರಸಿಂಹರಾಜಪುರ ಹಾಗೂ ಹೊನ್ನೆಕೊಡಿಗೆ ನಡುವಿನ ಗ್ರಾಮಗಳ ನೇರ ಸಂಪರ್ಕ ಕಡಿತಗೊಂಡಿತ್ತು. ಎರಡೂ ಗ್ರಾಮಗಳನ್ನು ಸಂಪರ್ಕಿಸಲು ಸುಮಾರು 30 ಕಿ.ಮೀ. ಅಧಿಕವಾಗಿ ಪ್ರಯಾಣಿಸಬೇಕಾಗಿತ್ತು. ಈ ಹೊಸ ಸೇತುವೆ ನಿರ್ಮಾಣದಿಂದ ಕೇವಲ 3 ರಿಂದ 4 ಕ್ರಮಿಸಿದರೆ ಸದರಿ ಗ್ರಾಮಗಳಿಗೆ ಸಂಪರ್ಕ ಹೊಂದಬಹುದಾಗಿದೆ. ಸದರಿ ಸೇತುವೆಯ ನಿರ್ಮಾಣದಿಂದ ಸುತ್ತಮುತ್ತಲಿನ ಸುಮಾರು 3000 ಜನಸಂಖ್ಯೆಗೆ ಅನುಕೂಲವಾಗುವು ದಲ್ಲದೇ, ಪ್ರವಾಸೋದ್ಯಮದ ಅಭಿವೃದ್ಧಿಗೂ ಸಹಕಾರಿಯಾಗಿದೆ. ಸದರಿ ಹಾಂದೂರು - ನರಸಿಂಹ ರಾಜಪುರ ಸೇತುವೆ ಕಾಮಗಾರಿ ಕೈಗೊಳ್ಳಲು 2017-18ನೇ ಸಾಲಿನಲ್ಲಿ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತಾದರೂ ಹಲವಾರು ಕಾರಣಗಳಿಂದಾಗಿ ಕಾಮಗಾರಿ ವಿಳಂಬವಾಗಿತ್ತು. ಪ್ರಸ್ತುತ ಸ್ಥಳೀಯ ಎಲ್ಲಾ ಜನಪ್ರತಿನಿಧಿಗಳು ಹಾಗೂ ನಮ್ಮ ಸರ್ಕಾರದ ಸಹಕಾರದೊಂದಿಗೆ ಸತತ ಪ್ರಯತ್ನಗಳಿಂದ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಕಾಮಗಾರಿಗೆ ಅನುಮೋದನೆ ನೀಡಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರಿಂದಲೇ ಕಾಮಗಾರಿ ಉದ್ಘಾಟನೆ ಮಾಡಿ ಲೋಕಾರ್ಪಣೆ ಮಾಡುತ್ತಿರುವುದು ವಿಶೇಷವಾಗಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಕಾಮಗಾರಿ ಯಶಸ್ವಿಯಾಗಿ ನಿರ್ಮಾಣ ಮಾಡಿದ್ದು ಸಂತಸ ತಂದಿದೆ.

-ಎಚ್.ಸಿ. ಬಾಲಕೃಷ್ಣ, ಅಧ್ಯಕ್ಷರು, ಕೆ.ಆರ್.ಡಿ .ಸಿ.ಎಲ್