Vishweshwar Bhat Column: ಬಣ್ಣ, ಭಾವನೆಗಳ ಮೆರವಣಿಗೆಗಳ 'ಬ್ರಹ್ಮಾನಂದ' !
ಬ್ರಹ್ಮಾನಂದಂ ಎಂಬ ಆ ಶಕ್ತಿಯೇ ಹಾಗಿದೆ, ಒಮ್ಮೆ ಆ ‘ಪ್ರವಾಹ’ಕ್ಕೆ ಸಿಲುಕಿದರೆ ಅದರಿಂದ ಹೊರಬರು ವುದು ಅಸಾಧ್ಯ. ಅವರೊಬ್ಬ ಪದ್ಮಶ್ರೀ ಪುರಸ್ಕೃತ ನಟ ಎಂಬುವುದಕ್ಕಿಂತ ಹೆಚ್ಚಾಗಿ, ನಮ್ಮ ಮನೆಯ ಸದಸ್ಯನಂತೆ ಕಾಣುವ ಅದ್ಭುತ ಕಲಾವಿದ. ‘ಕ್ಷಣ ಕ್ಷಣಂ’ ಅಥವಾ ‘ಮನಿ’ ಸಿನಿಮಾಗಳಲ್ಲಿ ಅವರ ನಟನೆಯನ್ನು ನಾನು ಪದೇ ಪದೆ ನೋಡಿ ಖುಷಿ ಪಟ್ಟಿದ್ದೇನೆ.
-
ನೂರೆಂಟು ವಿಶ್ವ
ನಾನು ತೆಲುಗು ಮಾತಾಡಲಾರೆ. ಆದರೆ ಚೆನ್ನಾಗಿ ಅರ್ಥವಾಗುತ್ತದೆ. ಎನ್‌ಟಿಆರ್, ಚಿರಂಜೀವಿ ಸಿನಿಮಾಗಳ ಅಭಿಮಾನಿ. ರಾಮ್ ಗೋಪಾಲ ವರ್ಮ ಸಿನಿಮಾಗಳೆಂದರೆ ಹುಚ್ಚು. ಈ ‘ಪ್ರವಾಹ’ದಲ್ಲಿ ದಕ್ಕಿದವರು ಬ್ರಹ್ಮಾನಂದಂ. ನನಗರಿವಿಲ್ಲದಂತೆ ನಾನು ಬ್ರಹ್ಮಾನಂದಂ ಅಭಿಮಾನಿಯಾಗಿಬಿಟ್ಟೆ. ಅದೆಷ್ಟರ ಮಟ್ಟಿಗೆ ಅಂದ್ರೆ ಬ್ರಹ್ಮಾನಂದಂ ಇದ್ದ ಸಿನಿಮಾವನ್ನು ಬಿಡುತ್ತಿರಲಿಲ್ಲ.
ಅದರಲ್ಲೂ ರೇಸು ಗುರ್ರಂ, ದೂಕುಡು, ರೆಡಿ, ಅದುರ್ಸ್, ಮನ್ಮಥುಡು, ಬಾದ್ಷಾ, ಬಾಬಾಯಿ ಅಬ್ಬಾಯಿ, ಕಿಕ್, ಅತ್ತಾರಿಂಟಿಕಿ ದಾರೇದಿ, ಮನಸಂತ ನುವ್ವೇ, ಜಂಬಲಕಿಡಿ ಪಂಬ ಹಾಗೂ ಚಿತ್ತೆಮ್ಮ ಮೊಗುಡು ಸಿನಿಮಾಗಳನ್ನು ನಾನು ನಾಲ್ಕೈದು ಸಲ ನೋಡಿರಬಹುದು.
ತಾರಾಗಣದಲ್ಲಿ ಬ್ರಹ್ಮಾನಂದಂ ಇದ್ದಾರೆ ಎಂಬ ಒಂದೇ ಕಾರಣಕ್ಕೆ ಅನೇಕ ತೆಲುಗು ಸಿನಿಮಾಗಳನ್ನು ನೋಡಿದ್ದೇನೆ. ತೆಲುಗು ಚಿತ್ರ ನೋಡಲು ಮತ್ತು ನೋಡದಿರಲು ಅವರೇ ಕಾರಣ. ಆ ಸಿನಿಮಾದಲ್ಲಿ ಬ್ರಹ್ಮಾನಂದಂ ಇಲ್ಲ ಎಂಬ ಕಾರಣಕ್ಕೆ ಕೆಲವು ಉತ್ತಮ ಚಿತ್ರಗಳನ್ನು ನೋಡಿಲ್ಲ.
ಸಿನಿಮಾ ಕಥೆ ಚೆನ್ನಾಗಿಲ್ಲದಿದ್ದರೂ, ಕೇವಲ ಇವರ ಕಾಮಿಡಿ ಟ್ರ್ಯಾಕ್ʼಗಾಗಿಯೇ ಸಿನಿಮಾಗಳನ್ನು ನೋಡಿದ್ದಿದೆ. ಭಾಷೆ ಗೊತ್ತಿಲ್ಲದಿದ್ದರೂ ಒಬ್ಬ ಕಲಾವಿದನ ಮೇಲೆ ಇಷ್ಟೊಂದು ಪ್ರೀತಿ ಮೂಡಲು ಅವರ ನಟನೆಯೇ ಕಾರಣ.
ಬ್ರಹ್ಮಾನಂದಂ ಎಂಬ ಆ ಶಕ್ತಿಯೇ ಹಾಗಿದೆ, ಒಮ್ಮೆ ಆ ‘ಪ್ರವಾಹ’ಕ್ಕೆ ಸಿಲುಕಿದರೆ ಅದರಿಂದ ಹೊರಬರುವುದು ಅಸಾಧ್ಯ. ಅವರೊಬ್ಬ ಪದ್ಮಶ್ರೀ ಪುರಸ್ಕೃತ ನಟ ಎಂಬುವುದಕ್ಕಿಂತ ಹೆಚ್ಚಾಗಿ, ನಮ್ಮ ಮನೆಯ ಸದಸ್ಯನಂತೆ ಕಾಣುವ ಅದ್ಭುತ ಕಲಾವಿದ. ‘ಕ್ಷಣ ಕ್ಷಣಂ’ ಅಥವಾ ‘ಮನಿ’ ಸಿನಿಮಾಗಳಲ್ಲಿ ಅವರ ನಟನೆಯನ್ನು ನಾನು ಪದೇ ಪದೆ ನೋಡಿ ಖುಷಿ ಪಟ್ಟಿದ್ದೇನೆ.
ಇದನ್ನೂ ಓದಿ:Vishweshwar Bhat Column: ಪ್ರಧಾನಿ ಯಾರೇ ಇರಲಿ, ಪತ್ರಿಕಾಗೋಷ್ಠಿ ನಡೆಯೋದೇ ಹೀಗೆ !
ಟಿವಿ, ಯೂಟ್ಯೂಬ್ ವೀಕ್ಷಿಸುವಾಗ ಅಚಾನಕ್ ಬ್ರಹ್ಮಾನಂದಂ ಬಂದರೆ, ನಾನು ಮುಂದೆ ಹೋಗಿದ್ದೇ ಇಲ್ಲ. ನನ್ನ ಫೋನ್ ಅಲ್ಗಾರಿದಂ ಪದೇ ಪದ ಬ್ರಹ್ಮಾನಂದಂ ಅವರನ್ನೇ ತೋರಿಸುತ್ತದೆ. ಹೀಗಾಗಿ ದಿನಾ ಅವರ ಹಾಸ್ಯ ನಟನೆಯನ್ನು ನೋಡದೇ ಇರುವ ದಿನಗಳೇ ಇಲ್ಲ. ತೆಲುಗು ಭಾಷೆ ಅರ್ಥವಾಗದವರಿಗೂ ಬ್ರಹ್ಮಾನಂದಂ ಇಷ್ಟವಾಗಲು ಮುಖ್ಯ ಕಾರಣ ಅವರ ’ facial gymnastics ’.
ಅವರು ಕಣ್ಣು ಮಿಟುಕಿಸುವ ರೀತಿ, ಹುಬ್ಬು ಏರಿಸುವ ಸ್ಟೈಲ್ ಅಥವಾ ಅವಮಾನವಾದಾಗ ಮುಖವನ್ನು ಸಣ್ಣಗೆ ಮಾಡಿಕೊಳ್ಳುವ ಪರಿಗೆ ಜಗತ್ತಿನ ಯಾವುದೇ ಭಾಷೆಯ ಹಂಗಿಲ್ಲ. ಪ್ರತಿ ಬಾರಿ ನೋಡಿದಾಗಲೂ ಅವರ ಯಾವುದೋ ಒಂದು ಹೊಸ ಎಕ್ಸ್ ಪ್ರೆಶನ್ ಮನಸ್ಸನ್ನು ತುಂಬಿಕೊಳ್ಳು ತ್ತದೆ. ಅನೇಕ ಸಿನಿಮಾಗಳಲ್ಲಿ ಹೀರೋಗಳಿಗಿಂತ ಹೆಚ್ಚು ಸ್ಕ್ರೀನ್ ಸ್ಪೇಸ್ ಮತ್ತು ಸಂಭಾವನೆ ಇವರಿಗಿರುತ್ತಿತ್ತು ಇಂದು ಕೇಳಿದ್ದೇನೆ. ಉದಾಹರಣೆಗೆ, ‘ದೂಕುಡು’ ಅಥವಾ ‘ಬಾದ್ಷಾ’ ಚಿತ್ರಗಳಲ್ಲಿ ಮಹೇಶ್ ಬಾಬು ಅಥವಾ ಜ್ಯೂನಿಯರ್ ಎನ್ಟಿಆರ್ ಅವರಿಗಿಂತ ಬ್ರಹ್ಮಾನಂದಂ ಅವರ ಕಾಮಿಡಿ ಟ್ರ್ಯಾಕ್ ನೋಡಲೆಂದೇ ಜನ ಥಿಯೇಟರ್‌ಗೆ ಹೋಗುತ್ತಿದ್ದರು. ಹೀರೋ ಎಷ್ಟೇ ದೊಡ್ಡವನಾಗಿದ್ದರೂ, ಬ್ರಹ್ಮಾನಂದಂ ಅವರ ಪಾತ್ರಕ್ಕೆ ಒಂದು ಪ್ರತ್ಯೇಕ ಗೌರವ ಮತ್ತು ತೂಕ!
ಇನ್ನೇನು ಸಂಜೆ ಆಯಿತು ಅನ್ನುವಾಗ ಆಕಾಶಕ್ಕೆ ಬಣ್ಣ ಬಳಿಯುವ ಸಂಜೆಯಂತೆಯೇ ಬ್ರಹ್ಮಾನಂದಂ ಅವರ ನಟನೆ. ಅವರ ಮುಖವಿದೆಯಲ್ಲ, ಅದು ಬರೀ ಸ್ನಾಯುಗಳ ಚಲನೆಯಲ್ಲ. ಅದು ಸಹಸ್ರಾರು ಕಥೆಗಳನ್ನು ಹೊತ್ತು ನಿಂತಿರುವ ಒಂದು ಹಳೆಯ ರೈಲ್ವೆ ಸ್ಟೇಷನ್ನ ಪ್ಲಾಟ್-ರ್ಮ್ ಇದ್ದಂತೆ. ಪ್ರತಿ ಕ್ಷಣವೂ ಅಲ್ಲಿಏನೋ ಒಂದು ಹೊಸ ಅಚ್ಚರಿ ಇಳಿಯುತ್ತಲೇ ಇರುತ್ತದೆ. ಅವರ ಮುಖದ ಮೇಲೆ ಮೂಡುವ ಆ ಸುಕ್ಕುಗಳು, ಹುಬ್ಬಿನ ಆ ಕುಣಿತಗಳು ಅಪ್ಪಟ ಒಂದು ‘ಭಾವಗಳ ಸಂತೆಯಂತೆ’.
ಅನಿವಾರ್ಯತೆಯಿಂದಲೋ ಅಥವಾ ಹತಾಶೆಯಿಂದಲೋ ಅವರು ಮುಖವನ್ನು ಚಿಕ್ಕದು ಮಾಡಿಕೊಂಡಾಗ, ನಮಗೆ ನಮ್ಮದೇ ಬದುಕಿನ ಯಾವುದೋ ಒಂದು ಕಳೆದು ಹೋದ ಅಸಹಾಯಕ ಕ್ಷಣ ನೆನಪಾಗಿ, ಅದು ನಗುವಾಗಿ ಹರಿದುಹೋಗುತ್ತದೆ. ಅವರು ಬರೀ ನಗಿಸುವುದಿಲ್ಲ, ಮನುಷ್ಯನ ಮುಜುಗರವನ್ನು ಅತ್ಯಂತ ಸುಂದರವಾಗಿ ಆಚರಿಸುತ್ತಾರೆ. ಅವರ ನಟನೆಯಲ್ಲಿ ಒಂದು ಬಗೆಯ ‘ಅನಾಮಿಕ ಆಪ್ತತೆ’ ಇದೆ.
ಬ್ರಹ್ಮಾನಂದಂ ಹಾಸ್ಯದಲ್ಲಿ ‘ಕ್ರೌರ್ಯ’ ಇಲ್ಲ, ಬದಲಾಗಿ ಜೀವನದ ವಿಪರ್ಯಾಸಗಳನ್ನು ಅತ್ಯಂತ ಮೃದುವಾಗಿ ಮುಟ್ಟಿ ನೋಡುವ ‘ನವಿರು’ ಇದೆ. ಅವರು ತೆರೆಯ ಮೇಲೆ ಬಂದರೆ ಸಾಕು, ಸಿನಿಮಾ ಎಂಬ ಮಹಾಕಾವ್ಯದ ನಡುವೆ ಒಂದು ಪುಟ್ಟ ‘ಹನಿಗವನ’ ಮೂಡಿದಂತಾಗುತ್ತದೆ.
ಆಕ್ಷನ್, ಸಾಹಸ, ಸೆಂಟಿಮೆಂಟ್ ಎಂಬ ಬಿರುಗಾಳಿಯ ನಡುವೆ ಅವರು ತರುವ ನಗು, ಸಿಮೆಂಟ್ ಕಾಡಿನ ಮಧ್ಯೆ ಬೆಳೆದು ನಿಂತ ಒಂದು ಪುಟ್ಟ ಗಿಡದ ಹಾಗೆ... ಅದು ನಮಗೆ ಬದುಕಲು ಭರವಸೆ ನೀಡುತ್ತದೆ. ಬ್ರಹ್ಮಾನಂದಂ ಅವರದ್ದು ‘ಅನುಭವಗಳ ಮೆರವಣಿಗೆ’. ಭಾಷೆಯ ಗಡಿ ದಾಟಿ ಅವರು ನಮಗೆ ಯಾಕೆ ಇಷ್ಟವಾಗುತ್ತಾರೆ ಅಂದ್ರೆ, ಬದುಕಿನ ಸಣ್ಣಪುಟ್ಟ ನೋವುಗಳನ್ನು ನಗುವಾಗಿ ಪರಿವರ್ತಿಸುವ ಕಲೆ ಅವರಿಗೆ ಸಿದ್ಧಿಸಿದೆ. ಅವರ ಕಣ್ಣುಗಳಿವೆಯಲ್ಲ, ಅವು ಮಧ್ಯಾಹ್ನದ ನಿದ್ದೆಯಲ್ಲಿ ಕಂಡ ಕನಸಿನಿಂದ ತಟ್ಟನೆ ಎಚ್ಚರಗೊಂಡ ಮಗುವಿನ ಬೆರಗಿನಂತಿರುತ್ತವೆ.
ತೀರಾ ಅನಿವಾರ್ಯವೆನಿಸುವ ಹತಾಶೆಯಲ್ಲೂ ಅವರು ಮುಖವನ್ನು ಒಂದು ವಿಚಿತ್ರ ಕೋನಕ್ಕೆ ತಿರುಗಿಸಿದರೆ, ಅಲ್ಲಿಯವರೆಗೆ ಮಂಜಿನಂತಿದ್ದ ನಗು ಹನಿಹನಿಯಾಗಿ ಸುರಿಯತೊಡಗುತ್ತದೆ. ಇಡೀ ಸಿನಿಮಾದ ಗಂಭೀರತೆಯನ್ನು ಬ್ರಹ್ಮಾನಂದಂ ತಮ್ಮ ಒಂದೇ ಒಂದು ಸಣ್ಣ ಪ್ರತಿಕ್ರಿಯೆಯ ಮೂಲಕ ಕರಗಿಸಿಬಿಡುತ್ತಾರೆ. ಅವರ ನಗುವು ನಮಗೆ ಬದುಕಿನ ಜಟಿಲತೆಯನ್ನು ಮರೆಸಿ, ‘ಹೋಗಲಿ ಬಿಡು, ಇಷ್ಟೇ ಅಲ್ವಾ ಬದುಕು?’ ಎಂದು ಬೆನ್ನು ತಟ್ಟಿದಂತಾಗುತ್ತದೆ. ಅವರು ತೆರೆಯ ಮೇಲೆ ಬಂದಾಗಲೆಲ್ಲ ನಮಗೆ ಯಾವುದೋ ಹಳೆಯ ಪೋಸ್ಟ್ ಆಫೀಸಿನ ಗುಮಾಸ್ತನೋ ಅಥವಾ ಬಸ್ ನಿಲ್ದಾಣದಲ್ಲಿ ಛತ್ರಿಹಿಡಿದು ಬಸ್ಸಿಗೆ ಕಾಯುವ ಸಜ್ಜನನೋ ನೆನಪಾಗುತ್ತಾರೆ. ಈ ಲೋಕದಲ್ಲಿ ‘ಪೇಚಿಗೆ’ ಬಿದ್ದ ಮನುಷ್ಯ ಎಷ್ಟು ಮೋಹಕ ಮತ್ತು ಆಕರ್ಷಕವಾಗಿ ಕಾಣಬಲ್ಲ ಎಂಬುದನ್ನು ತೋರಿಸಿಕೊಟ್ಟ ಅಪ್ರತಿಮ ಮಾಂತ್ರಿಕ ಇವರು.
ಬ್ರಹ್ಮಾನಂದಂ ಅವರು ಸಂಭಾಷಣೆ ಇಲ್ಲದಿದ್ದಾಗಲೂ ಹೆಚ್ಚು ಸಂವಹನ ಮಾಡುತ್ತಾರೆ. ಅವರು ಸುಮ್ಮನೆ ಒಂದು ಕಡೆ ನಿಂತು ಆಕಾಶ ನೋಡಿದರೂ ಸಾಕು, ಅಲ್ಲಿ ನೂರಾರು ತಮಾಷೆಯ ಭಾವನೆ ಗಳು ಸಾಲುಗಟ್ಟಿ ನಿಲ್ಲುತ್ತವೆ. ಅವರ ನಟನೆಯಲ್ಲಿ ಒಂದು ಬಗೆಯ ‘ಸಾಂಕ್ರಾಮಿಕ ಮುಗ್ಧತೆ’ ಇದೆ.
ಮಳೆಗಾಲದ ಸಂಜೆಯಲ್ಲಿ ಕಿಟಕಿಯ ಗಾಜಿನ ಮೇಲೆ ಕುಳಿತವರ ಆ ಒಂದು ವಿಶಿಷ್ಟ ನೋಟಕ್ಕೆ ಸೋಲಲೇಬೇಕು. ಅದು ಕಳೆದು ಹೋದ ಬಾಲ್ಯವನ್ನು ಮತ್ತೆ ತಂದು ಅಂಗೈಯಲ್ಲಿ ಇರಿಸಿದಂತೆಯೇ ಸರಿ. ಬದುಕಿನ ಧಾವಂತದಲ್ಲಿ ನಗುವುದನ್ನೇ ಮರೆತವರಿಗೆ, ಅವರು ಒಂದು ‘ಸಣ್ಣ ರಜೆ’ಯಂತೆ ಸಿಗುತ್ತಾರೆ.
ಮಳೆಗಾಲದ ಸಂಜೆಯಲ್ಲಿ ಕಿಟಕಿಯ ಗಾಜಿನ ಮೇಲೆ ಕುಳಿತ ನೀರಿನ ಹನಿಯೊಂದು ಮೆಲ್ಲನೆ ಜಾರಿ ಕೆಳಗೆ ಬೀಳುವಾಗ ನಮಗೆ ತಿಳಿಯದಂತೆ ಒಂದು ಸಣ್ಣ ಸಂಚಲನವಾಗುತ್ತದಲ್ಲವೇ? ಬ್ರಹ್ಮಾನಂದಂ ಅವರ ಮುಖಭಾವ ಕೂಡ ಹಾಗೆಯೇ, ಅತ್ಯಂತ ಸಹಜ, ಆದರೆ ಅದ್ಭುತವಾಗಿ ತಟ್ಟುವಂಥದ್ದು. ಅವರ ಮುಖ ಒಂದು ‘ಪೋಸ್ಟ್ ಆಫೀಸ್’ ಇದ್ದಂತೆ.
ಅಲ್ಲಿ ಹತಾಶೆ, ಮುಜುಗರ, ಮುಗ್ಧತೆ ಮತ್ತು ಅಸಹಾಯಕತೆಯ ಪತ್ರಗಳು ಯಾವಾಗಲೂ ವಿಳಾಸ ಹುಡುಕುತ್ತಿರುತ್ತವೆ. ಅವರು ಸುಮ್ಮನೆ ಕಣ್ಣು ಮಿಟುಕಿಸಿದರೆ ಸಾಕು, ಸಾವಿರಾರು ಕಿಲೋಮೀಟರ್ ದೂರವಿರುವ ಪ್ರೇಕ್ಷಕನಿಗೂ ಆ ಭಾವನೆಯ ಸಪ್ಲೈ ಆಗಿ ಬಿಡುತ್ತದೆ. ಇದು ಶಬ್ದಗಳ ಹಂಗಿಲ್ಲದ ಅಪ್ಪಟ ‘ಮೌನ ಸಂವಹನ’.
ತೆಲುಗು ಸಿನಿಮಾಗಳ ಆಕ್ಷನ್ ಅಬ್ಬರಗಳ ನಡುವೆ ಇವರು ಬಂದು ಹೋದರೆ, ಅದು ಟ್ರಾಫಿಕ್ಗ ದ್ದಲದ ಮಧ್ಯೆ ಕೇಳಿಸುವ ದೂರದ ಕೊಳಲಿನ ಧ್ವನಿಯಂತೆ. ಅವರ ಕಾಮಿಡಿ ದೊಡ್ಡ ಕ್ರಾಂತಿಯನ್ನೇನೂ ಮಾಡುವುದಿಲ್ಲ, ಆದರೆ ಬದುಕಿನ ಸಣ್ಣಪುಟ್ಟ ಸೋಲುಗಳನ್ನು ಅಪ್ಪಿಕೊಳ್ಳುವ ಶಕ್ತಿ ನೀಡುತ್ತದೆ.
ತೆಲುಗು ಚಿತ್ರರಂಗದಲ್ಲಿ ಎಷ್ಟೇ ಜನ ಹಿರಿಯ ನಟರಿದ್ದರೂ, ಬ್ರಹ್ಮಾನಂದಂ ಅವರ ಸ್ಥಾನವನ್ನು ಮತ್ತೊಬ್ಬನಿಂದ ಅಡಿಸಲು ಆಗಿಲ್ಲ. ಒಬ್ಬ ಹಾಸ್ಯ ನಟನಾಗಿ ಅವರು ಗಳಿಸಿದ ಜನಪ್ರಿಯತೆ, ಗೌರವ ಮತ್ತು ಮಾರುಕಟ್ಟೆ ಮೌಲ್ಯವು ಯಾವುದೇ ಒಬ್ಬ ಸ್ಟಾರ್ ನಟನಿಗಿಂತ ಕಡಿಮೆಯಿಲ್ಲ ಎನ್ನುವುದು ಅಕ್ಷರಶಃ ಸತ್ಯ.
ತೆಲುಗು ಸಿನಿಮಾಗಳಲ್ಲಿ ಚಿರಂಜೀವಿ, ಬಾಲಕೃಷ್ಣ ಅಥವಾ ನಾಗಾರ್ಜುನ ಅವರಂಥ ಘಟಾನುಘಟಿ ನಟರ ಚಿತ್ರಗಳಿದ್ದರೂ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿದ್ದದ್ದು ಬ್ರಹ್ಮಾನಂದಂ ಹಾಸ್ಯವನ್ನು ನೋಡಲು. ಒಂದು ಕಾಲದಲ್ಲಿ ಚಿರಂಜೀವಿ ಅವರಂಥ ಮೆಗಾಸ್ಟಾರ್ ಪಕ್ಕದ ಬ್ರಹ್ಮಾನಂದಂ ಅವರ ಬೃಹತ್ ಕಟೌಟ್ʼ ʼಗಳನ್ನು ಅಭಿಮಾನಿಗಳು ಹಾಕುತ್ತಿದ್ದರು.
ಒಬ್ಬ ಕಾಮಿಡಿಯನ್ʼಗೆ ಈ ಮಟ್ಟದ ಗೌರವ ಸಿಗುವುದು ಭಾರತೀಯ ಚಿತ್ರರಂಗದ ಅತ್ಯಂತ ಅಪರೂಪದ ಸಂಗತಿ. ಕೇವಲ ಪರದೆಯ ಮೇಲೆ ಅವರ ಮುಖ ಕಂಡರೆ ಸಾಕು, ಚಿತ್ರಮಂದಿರದಲ್ಲಿ ಶಿಳ್ಳೆ-ಚಪ್ಪಾಳೆಗಳ ಸುರಿಮಳೆ! ಅವರ ‘ಬಾಡಿ ಲಾಂಗ್ವೇಜ್’ ಮತ್ತು ಕಣ್ಣುಗಳ ಭಾವನೆಗಳನ್ನು ವ್ಯಕ್ತಪಡಿಸುವ ಕಲೆ ಅವರನ್ನು ಉಳಿದೆಲ್ಲ ನಟರಿಗಿಂತ ಭಿನ್ನವಾಗಿ ನಿಲ್ಲಿಸಿತು.
ಒಬ್ಬ ನಟನ ವೃತ್ತಿಜೀವನದಲ್ಲಿ ನೂರು ಸಿನಿಮಾಗಳು ದೊಡ್ಡ ಸಾಧನೆ. ಆದರೆ ಬ್ರಹ್ಮಾನಂದಂ ಅವರು 1300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವುದು ಕೇವಲ ಆಶ್ಚರ್ಯವಲ್ಲ, ಅದೊಂದು ಅದ್ಭುತ. ಒಂದೇ ಭಾಷೆಯಲ್ಲಿ ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ ನಟ ಎಂಬ ಹೆಗ್ಗಳಿಕೆಯೊಂದಿಗೆ ಅವರು ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. 1987ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ
ಇವರು, ದಶಕಗಳ ಕಾಲ ವಿಶ್ರಾಂತಿಯಿಲ್ಲದೇ ದುಡಿದ ಪರಿಣಾಮವಾಗಿ ಈ ಮೈಲಿಗಲ್ಲು ಸಾಧ್ಯ ವಾಯಿತು. ಬ್ರಹ್ಮಾನಂದಂ ಅವರ ಬೇಡಿಕೆ ಎಷ್ಟಿತ್ತೆಂದರೆ, ಕೆಲವು ಚಿತ್ರಗಳಲ್ಲಿ ನಾಯಕ ನಟರಿಗಿಂತ ಇವರ ಸಂಭಾವನೆಯೇ ಹೆಚ್ಚಿರುತ್ತಿತ್ತು. ದಿನದ ಲೆಕ್ಕದಲ್ಲಿ ಅಥವಾ ಚಿತ್ರದ ಅವಧಿಯ ಆಧಾರದ ಮೇಲೆ ಅವರು ಕೋಟಿಗಟ್ಟಲೆ ಹಣ ಪಡೆಯುತ್ತಿದ್ದರು.
ಸಿನಿಮಾ ಎಷ್ಟೇ ಗಂಭೀರವಾಗಿದ್ದರೂ, ಒಂದು ಹಾಸ್ಯದ ಎಳೆಯನ್ನು ಬ್ರಹ್ಮಾನಂದಂ ಅವರ ಮೂಲಕ ತಂದಲ್ಲಿ ಮಾತ್ರ ಸಿನಿಮಾ ಗೆಲ್ಲುತ್ತದೆ ಎಂಬ ನಂಬಿಕೆ ನಿರ್ಮಾಪಕರಲ್ಲಿತ್ತು. ಈ ಕಾರಣ ಕ್ಕಾಗಿಯೇ ಅವರು ಚಿತ್ರರಂಗದ ಅತಿ ಹೆಚ್ಚು ಸಂಭಾವನೆ ಪಡೆಯುವ ಪೋಷಕ ನಟರಾದರು.
ತೆಲುಗು ಚಿತ್ರರಂಗದಲ್ಲಿ ಬ್ರಹ್ಮಾನಂದಂ ಎನ್ನುವ ಹೆಸರು ಕೇವಲ ಒಬ್ಬ ಹಾಸ್ಯ ನಟನದ್ದಲ್ಲ, ಅದೊಂದು ‘ಸಿನಿಮಾದ ಯಶಸ್ಸಿ ಗ್ಯಾರಂಟಿ ಕಾರ್ಡ್’. ಒಂದು ಕಾಲದಲ್ಲಿ ತೆಲುಗು ಚಿತ್ರರಂಗದ ದೊಡ್ಡ ದೊಡ್ಡ ನಾಯಕ ನಟರು ತಮ್ಮ ಸಿನಿಮಾಗಳಲ್ಲಿ ಬ್ರಹ್ಮಾನಂದಂ ಇರಲೇಬೇಕು ಎಂದು ಪಟ್ಟು ಹಿಡಿಯುತ್ತಿದ್ದರು.
ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ ಮತ್ತು ವೆಂಕಟೇಶ್ಅವರಂಥ ದಿಗ್ಗಜ ನಟರ ಕಾಲದಲ್ಲಿ, ಬ್ರಹ್ಮಾನಂದಂ ಅವರ ಕಾಮಿಡಿ ಟ್ರ್ಯಾಕ್ ಇಲ್ಲದೇ ಸಿನಿಮಾ ಪೂರ್ಣಗೊಳ್ಳುತ್ತಿರಲಿಲ್ಲ. ನಾಯಕ ನಟರು ತಮ್ಮ ಚಿತ್ರಕಥೆಯನ್ನು ಕೇಳುವಾಗಲೇ, ‘ಇದರಲ್ಲಿ ಬ್ರಹ್ಮಾನಂದಂ ಅವರಿಗೆ ಜಾಗವಿದೆಯೇ?’ ಎಂದು ವಿಚಾರಿಸುತ್ತಿದ್ದರು.
ಸಿನಿಮಾ ಸೋಲುವ ಹಂತದಲ್ಲಿದ್ದರೂ, ಬ್ರಹ್ಮಾನಂದಂ ಅವರ ಹತ್ತು ನಿಮಿಷದ ಹಾಸ್ಯ ಪ್ರೇಕ್ಷಕ ರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿತ್ತು. ಇದರಿಂದಾಗಿ ದೊಡ್ಡ ಸ್ಟಾರ್‌ಗಳು ಸಹ ತಮ್ಮ ಇಮೇಜ್ ಗಿಂತ ಸಿನಿಮಾದ ಗೆಲುವಿಗಾಗಿ ಬ್ರಹ್ಮಾನಂದಂ ಅವರ ಉಪಸ್ಥಿತಿಯನ್ನು ಬಯಸುತ್ತಿದ್ದರು. ಸ್ಟಾರ್ ನಟರು ತಮ್ಮ ಚಿತ್ರದ ಶೂಟಿಂಗ್ ಅನ್ನು ಬ್ರಹ್ಮಾನಂದಂ ಅವರ ಬಿಡುವಿಲ್ಲದ ವೇಳಾಪಟ್ಟಿಗೆ ಅನುಗುಣವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರು. ಅವರ ಕಾಲ್‌ಶೀಟ್ ಸಿಗದಿದ್ದರೆ ಚಿತ್ರದ ಚಿತ್ರೀಕರಣವನ್ನೇ ಮುಂದೂಡಿದ ಉದಾಹರಣೆಗಳೂ ಉಂಟು.
ಶ್ರೀನು ವೈಟ್ಲ ಅಥವಾ ವಿ.ವಿ. ವಿನಾಯಕ್ ಅಂತಹ ನಿರ್ದೇಶಕರು ಬ್ರಹ್ಮಾನಂದಂ ಅವರಿಗಾಗಿಯೇ ವಿಶೇಷ ಪಾತ್ರಗಳನ್ನು ಸೃಷ್ಟಿಸುತ್ತಿದ್ದರು. ನಾಯಕನಿಗೆ ಬಿಲ್ಡಪ್ ಕೊಡುವುದಕ್ಕಿಂತ ಹೆಚ್ಚಾಗಿ, ಬ್ರಹ್ಮಾನಂದಂ ಅವರ ಪಾತ್ರಕ್ಕೆ ಹೆಚ್ಚ ಮಹತ್ವ ನೀಡಲಾಗುತ್ತಿತ್ತು.
‘ಅವರು ತೆರೆಯ ಮೇಲೆ ಬಂದರೆ ಸಾಕು, ಪ್ರೇಕ್ಷಕರು ನಗುತ್ತಾರೆ’ ಎಂಬ ಅಚಲವಾದ ನಂಬಿಕೆ ಚಿತ್ರ ತಂಡಕ್ಕೆ ಇರುತ್ತಿತ್ತು. ಬ್ರಹ್ಮಾನಂದಂ ಕೇವಲ ಹಾಸ್ಯನಟ ಅಥವಾ ಪೋಷಕ ನಟನಾಗಿ ಉಳಿಯ ಲಿಲ್ಲ. ಬದಲಿಗೆ, ನಾಯಕ ನಟನಷ್ಟೇ ಪ್ರಾಮುಖ್ಯ ಪಡೆದ ‘ಪ್ಯಾರಲಲ್ ಹೀರೋ’ ಆಗಿ ಬೆಳೆದರು.
ಅವರು ಸಿನಿಮಾದಲ್ಲಿದ್ದರೆ ಅದು ಕೇವಲ ಹಾಸ್ಯವಲ್ಲ, ಬದಲಿಗೆ ಚಿತ್ರದ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸುವ ಒಂದು ಬಲವಾದ ಶಕ್ತಿಯಾಗಿತ್ತು. ಅವರ ಈ ಸ್ಟಾರ್‌ಡಮ್ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಬೇರೆ ಯಾವುದೇ ಹಾಸ್ಯ ನಟನಿಗೆ ಸಿಗದಂಥದ್ದು. ಕೇವಲ ಒಬ್ಬ ಹಾಸ್ಯ ನಟನಿಗಾಗಿ ಕಥೆಯಲ್ಲಿ ಬದಲಾವಣೆ ಮಾಡಿಕೊಳ್ಳುವ ಅಥವಾ ಅವರನ್ನು ಕಡ್ಡಾಯವಾಗಿ ಸೇರಿಸಿ ಕೊಳ್ಳುವ ಷರತ್ತು ಹಾಕುವ ಮಟ್ಟಕ್ಕೆ ಅವರು ಬೆಳೆದಿದ್ದು ಅವರ ಸಾಧನೆಯ ಶಿಖರ.
ತೆಲುಗು ಚಿತ್ರರಂಗದಲ್ಲಿ ಒಂದು ಮಾತು ಪ್ರಚಲಿತದಲ್ಲಿತ್ತು - ‘ಹೀರೋ ಸಿನಿಮಾ ಗೆಲ್ಲಿಸದಿದ್ದರೆ, ಬ್ರಹ್ಮಾನಂದಂ ಸಿನಿಮಾವನ್ನು ಹೇಗೋ ಬಚಾವ್ ಮಾಡ್ತಾರೆ’. ಅಂದರೆ, ಕಥೆ ಸಾಧಾರಣ ವಾಗಿದ್ದರೂ ಸಹ, ಬ್ರಹ್ಮಾನಂದಂ ಅವರ ಹಾಸ್ಯದ ಎಳೆಯಿಂದಾಗಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಪಾರಾದ ನಿದರ್ಶನಗಳು ಸಾಕಷ್ಟಿವೆ.
ಬ್ರಹ್ಮಾನಂದಂ ಮತ್ತು ಸ್ಟಾರ್ ನಟರ ಕಾಂಬಿನೇಷನ್‌ಗೆ ಪ್ರತ್ಯೇಕ ಅಭಿಮಾನಿ ಬಳಗವಿತ್ತು. ಉದಾ ಹರಣೆಗೆ, ಮಹೇಶ್ ಬಾಬು ಜತೆಗಿನ ‘ದೂಕುಡು’, ಎನ್ಟಿಆರ್ ಜತೆಗಿನ ‘ಅದುರ್ಸ’ ಅಥವಾ ರವಿತೇಜ ಜತೆಗಿನ ‘ವೆಂಕೈ’ ಚಿತ್ರಗಳನ್ನು ಗಮನಿಸಿದರೆ, ಅಲ್ಲಿ ನಾಯಕನಿಗಿಂತ ಬ್ರಹ್ಮಾನಂದಂ ಅವರ ಪಾತ್ರಗಳೇ ಹೆಚ್ಚು ಹೈಲೈಟ್ ಆಗಿದ್ದವು. ಈ ಕಾರಣಕ್ಕಾಗಿಯೇ ನಟರು ಇವರನ್ನು ತಮ್ಮ ಸಿನಿಮಾ ದಲ್ಲಿ ಕಡ್ಡಾಯವಾಗಿ ಬಯಸುತ್ತಿದ್ದರು.
ಸಾಮಾನ್ಯವಾಗಿ ಸಿನಿಮಾದ ಪೋಸ್ಟರ್‌ಗಳಲ್ಲಿ ನಾಯಕ ಮತ್ತು ನಾಯಕಿಯ ಚಿತ್ರಗಳು ಮಾತ್ರ ಇರುತ್ತವೆ. ಆದರೆ ಬ್ರಹ್ಮಾನಂದಂ ಅವರ ಫೋಟೋ ಇಲ್ಲದ ಪೋಸ್ಟರ್‌ಗಳೇ ಅಂದು ಅಪರೂಪ ವಾಗಿದ್ದವು. ವಿತರಕರು ಕೂಡ ‘ಬ್ರಹ್ಮಾನಂದಂ ಇದ್ದಾರಲ್ಲವೇ?’ ಎಂದು ಖಚಿತಪಡಿಸಿಕೊಂಡೇ ಸಿನಿಮಾ ಕೊಳ್ಳುತ್ತಿದ್ದರು. ಚಿತ್ರದ ದ್ವಿತೀಯಾರ್ಧದಲ್ಲಿ ಕಥೆ ಎಲ್ಲಿಯಾದರೂ ಕುಸಿಯುತ್ತಿದೆ ಎನಿಸಿದಾಗ, ನಿರ್ದೇಶಕರು ಕೂಡಲೇ ಬ್ರಹ್ಮಾನಂದಂ ಅವರ ಎಂಟ್ರಿ ಕೊಡಿಸುತ್ತಿದ್ದರು. ಅವರು ಪರದೆಯ ಮೇಲೆ ಬಂದ ತಕ್ಷಣ ಚಿತ್ರಮಂದಿರದಲ್ಲಿ ಹೊಸ ಸಂಚಲನ ಮೂಡುತ್ತಿತ್ತು.
ಇದು ಅವರ ಮೇಲಿದ್ದ ನಂಬಿಕೆ. ಬ್ರಹ್ಮಾನಂದಂ ಅವರ ನಟನೆಯಲ್ಲಿರುವ ವಿಶೇಷತೆಯೆಂದರೆ ಅವರ ‘ರಿಯಾಕ್ಷನ್’. ನಾಯಕ ಎಷ್ಟೇ ಗಂಭೀರವಾಗಿ ಡೈಲಾಗ್ ಹೊಡೆದರೂ, ಪಕ್ಕದಲ್ಲಿ ನಿಂತ ಬ್ರಹ್ಮಾನಂದಂ ಕೇವಲ ಒಂದು ನೋಟ ಅಥವಾ ಮುಖದ ಸನ್ನೆ ಮಾಡಿದರೆ ಸಾಕು, ಇಡೀ ದೃಶ್ಯ ಹಾಸ್ಯಮಯ!
ತೆಲುಗಿನ ಬಹುತೇಕ ಅಗ್ರ ನಟರು ತಮ್ಮ ವೃತ್ತಿಜೀವನದ ಅತಿ ದೊಡ್ಡ ಹಿಟ್ ಚಿತ್ರಗಳನ್ನು ನೀಡಿದಾಗ, ಆ ಚಿತ್ರಗಳಲ್ಲಿ ಬ್ರಹ್ಮಾನಂದಂ ಪ್ರಮುಖ ಪಾತ್ರದಲ್ಲಿದ್ದರು ಎಂಬುದು ಕಾಕತಾಳೀಯ ವಲ್ಲ, ಅದು ಅವರ ಯಶಸ್ಸಿನ ಸೂತ್ರವಾಗಿತ್ತು. ಅವರು ಕೇವಲ ನಟರಾಗಿ ಉಳಿಯದೆ, ಒಂದು ಬ್ರ್ಯಾಂಡ್ ಆಗಿ ಬೆಳೆದರು.
ಇಂದಿಗೂ ಸೋಷಿಯಲ್ ಮೀಡಿಯಾದಲ್ಲಿ ಅವರ ಹಳೆಯ ದೃಶ್ಯಗಳು ವೈರಲ್ ಆಗುತ್ತಿರುವುದು ಅವರ ಸ್ಟಾರ್‌ಡಮ್'ಗೆ ಸಾಕ್ಷಿ. ಜನರು ಕೇವಲ ಬ್ರಹ್ಮಾನಂದಂ ಅವರ ಕಾಮಿಡಿ ದೃಶ್ಯಗಳನ್ನು ಮತ್ತೆ ಮತ್ತೆ ನೋಡಲು ಚಿತ್ರಮಂದಿರಕ್ಕೆ ಬರುತ್ತಿದ್ದರು. ಸ್ಟಾರ್ ನಟರ ಅಭಿಮಾನಿಗಳೂ ಸಹ ತಮ್ಮ ನಾಯಕನ ಆಕ್ಷನ್ ಜತೆಗೆ ಬ್ರಹ್ಮಾನಂದಂ ಅವರ ಹಾಸ್ಯದ ‘ಬೋನಸ್’ ಸಿಗಲಿ ಎಂದು ಹಂಬಲಿಸು ತ್ತಿದ್ದರು.
ಇಂದಿನ ಡಿಜಿಟಲ್ ಯುಗದಲ್ಲಿ ಬ್ರಹ್ಮಾನಂದಂ ಅವರ ಮುಖವಿಲ್ಲದ ಮೀಮ್‌ಗಳೇ ಇಲ್ಲ. ಇಂದಿನ ಯುವ ಪೀಳಿಗೆಗೆ ಅವರು ‘ಲಿವಿಂಗ್ ಲೆಜೆಂಡ್’. ಯಾವುದೇ ಸಂದರ್ಭಕ್ಕೂ ಹೊಂದುವಂಥ ಅವರ ಮುಖಭಾವಗಳು ಅವರನ್ನು ಸಾರ್ವಕಾಲಿಕ ಜನಪ್ರಿಯ ನಟನನ್ನಾಗಿ ಮಾಡಿದೆ. ದೊಡ್ಡ ನಿರ್ದೇಶಕರು ಬ್ರಹ್ಮಾನಂದಂ ಅವರಿಗೆ ಸ್ಕ್ರಿ ನೀಡುವಾಗ, ‘ಇದು ದೃಶ್ಯ, ನೀವು ನಿಮ್ಮ ಶೈಲಿಯಲ್ಲಿ ಇದನ್ನು ಅಭಿನಯಿಸಿ’ ಎಂದು ಮುಕ್ತ ಅವಕಾಶ ನೀಡುತ್ತಿದ್ದರು.
ಅವರು ನೀಡುತ್ತಿದ್ದ ಇಂಪ್ರೊವೈಸೇಶನ್ ಮೂಲ ಸ್ಕ್ರಿಪ್ಟ್‌ಗಿಂತಲೂ ಹತ್ತು ಪಟ್ಟು ಹೆಚ್ಚು ನಗು ತರಿಸುತ್ತಿತ್ತು. ಸಾಮಾನ್ಯವಾಗಿ ದೊಡ್ಡ ನಟರು ತಮ್ಮ ಪಕ್ಕದಲ್ಲಿ ಬೇರೆ ಯಾರಾದರೂ ಹೆಚ್ಚು ಹೈಲೈಟ್ ಆಗುವುದನ್ನು ಇಷ್ಟಪಡುವುದಿಲ್ಲ. ಆದರೆ ಬ್ರಹ್ಮಾನಂದಂ ವಿಷಯದಲ್ಲಿ ಇದು ಉಲ್ಟಾ ಆಗಿತ್ತು. ಚಿರಂಜೀವಿ ಅಂಥ ನಟರು ಬ್ರಹ್ಮಾನಂದಂ ಜತೆ ನಟಿಸುವಾಗ ತಮ್ಮ ಕಾಮಿಡಿ ಟೈಮಿಂಗ್ ಅನ್ನು ಇನ್ನೂ ಉತ್ತಮ ಗೊಳಿಸಿಕೊಳ್ಳುತ್ತಿದ್ದರಂತೆ.
ನಾಯಕ ಮತ್ತು ಹಾಸ್ಯ ನಟನ ನಡುವಿನ ಈ ‘ಜುಗಲ್ಬಂದಿ’ ಚಿತ್ರದ ಯಶಸ್ಸಿಗೆ ಮುಖ್ಯ ಕಾರಣ ವಾಗುತ್ತಿತ್ತು. ಬ್ರಹ್ಮಾನಂದಂ ಅವರು ಕೇವಲ ಹಾಸ್ಯಕ್ಕಷ್ಟೇ ಅಲ್ಲ, ಎಮೋಷನಲ್ ದೃಶ್ಯ ಗಳಿಗೂ ಸೈ ಎನಿಸಿಕೊಂಡವರು. ‘ಬಾಬಾಯಿ ಅಬ್ಬಾಯಿ’ ಅಥವಾ ‘ಮಾತೃದೇವೋಭವ’ ಚಿತ್ರಗಳಲ್ಲಿ ಅವರ ನಟನೆ ಕಣ್ಣಾಲಿಗಳನ್ನು ತೇವಗೊಳಿಸುತ್ತವೆ.
ಸುಮಾರು ಒಂದು ವರ್ಷದ ಹಿಂದೆ, ನನ್ನ ಅಚ್ಚುಮೆಚ್ಚಿನ ನಟ ಬ್ರಹ್ಮಾನಂದಂ ಅವರ ಆತ್ಮಕಥೆಯ ಇಂಗ್ಲಿಷ್ ಅವತರಣಿಕೆ ಕಣ್ಣಿಗೆ ಬಿತ್ತು. ಎರಡು ದಿನಗಳಲ್ಲಿ ಓದಿ ಮುಗಿಸಿದೆ. ಅವರ ಬದುಕಿನ ಕಥೆ ನನ್ನನ್ನು ಆರ್ದ್ರನನ್ನಾಗಿಸಿತು. ಅವರ ಹಿನ್ನೆಲೆ, ಬಡತನ, ಪಟ್ಟ ಪಾಡು, ಅನುಭವಿಸಿದ ಅವಮಾನ, ಕೋಟಲೆ, ಅವನ್ನೆಲ್ಲ ಮೆಟ್ಟಿ ನಿಂತ ಛಲ ಅವರ ಬಗ್ಗೆ ವಿಶೇಷ ಅಭಿಮಾನವನ್ನು ಮೂಡಿಸಿತು.
ಇಂದು ಹತ್ತು ಸಿನಿಮಾಗಳಲ್ಲಿ ನಟಿಸುವುದೇ ದೊಡ್ಡದು. ಹಾಗಿರುವಾಗ ಸಾವಿರದ ಮುನ್ನೂರು ಸಿನಿಮಾಗಳಲ್ಲಿ ನಟಿಸುವುದು ತಮಾಷೆ ಅಲ್ಲ. ಅಷ್ಟು ದೀರ್ಘ ಕಾಲ ಜನಪ್ರಿಯತೆ ಹಿಡಿದಿಟ್ಟು ಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ತಕ್ಷಣ ನನ್ನ ಆಪ್ತರೊಬ್ಬರ ಮೂಲಕ ಅವರ ಮೊಬೈಲ್ ನಂಬರ್ ಪಡೆದು, ಅವರಿಗೆ ಫೋನ್ ಮಾಡಿದೆ. ನನ್ನ ಪರಿಚಯ ಮಾಡಿಕೊಂಡ ಬಳಿಕ, ‘ನಿಮ್ಮ ಜೀವನಯಾತ್ರೆಯನ್ನು ಕನ್ನಡಲ್ಲಿ ಅಕ್ಷರಕ್ಕಿಳಿಸುವೆ, ಸಮ್ಮತಿಸುವಿರಾ?’ ಎಂದು ಕೇಳಿದೆ.
‘ನೀವೇ ಅನುವಾದಿಸುವುದಾದರೆ, ಅದಕ್ಕಿಂತ ಸಂತೋಷ ಇನ್ನೇನಿದೆ?’ ಎಂದು ಅಲ್ಲಿಯೇ ಅನುಮತಿ ನೀಡಿದರು. ಅಲ್ಲಿಗೆ ನನ್ನ ಮತ್ತು ಅವರ ಸಂಬಂಧ ಶುರುವಾಯಿತು. ಅದರ ಫಲವೇ - ‘ನಾನು ನಿಮ್ಮ ಬ್ರಹ್ಮಾನಂದಂ’ ಮೊನ್ನೆ ಈ ಕೃತಿಯನ್ನು ಹೈದರಾಬಾದ್‌ನಲ್ಲಿರುವ ಅವರ ಮನೆಗೆ ಹೋಗಿ ಕೈಗಿಟ್ಟು ಬಂದೆ. ನಮ್ಮಿಬ್ಬರಿಗೂ ‘ಬ್ರಹ್ಮಾನಂದ’! ಆ ಕುರಿತು ನಿಮಗೆ ಹೇಳಲೇಬೇಕು.