Gururaj Gantihole Column: ಬೊಕ್ಕಸ ಬರಿದಾಗಿದ್ದಕ್ಕೆ ಪ್ರಗತಿಯ ಅಡಿಗಲ್ಲೇ ಮಾರಾಟ !
ಒಂದು ರಾಜ್ಯ ಸುಭಿಕ್ಷವಾದ ಬಂಗಲೆಯಾಗಿದ್ದರೆ ಮೂಲಭೂತ ಅಭಿವೃದ್ಧಿ ಆ ಮನೆಯ ಅಡಿಗಲ್ಲು ಎನ್ನಬಹುದು. ಪ್ರತಿ ಸರಕಾರ ಅಽಕಾರಕ್ಕೆ ಬಂದಾಗ ತನ್ನದೇ ಆದ ಒಂದು ಮನೆಯ ಪರಿಕಲ್ಪನೆ ಯೊಂದಿಗೆ ಬಂದಿರುತ್ತದೆ. ಈ ಕಾಂಗ್ರೆಸ್ ಸರಕಾರವು ಹೀಗೆಯೇ ಅಧಿಕಾರಕ್ಕೆ ಬಂದಿತ್ತು. ಆದರೆ ಅದರ ಆಡಳಿತದ ವೈಖರಿ ಹೇಗಿದೆ ಎಂದರೆ ಇಂದು ರಾಜ್ಯದ ಭವಿಷ್ಯಕ್ಕೆ ಆಧಾರವಾಗಬೇಕಿದ್ದ ಮೂಲಸೌಕರ್ಯ ಅಭಿವೃದ್ಧಿಯ ‘ಅಡಿಗಲ್ಲ’ನ್ನೇ ಮಾರಾಟಕ್ಕಿಟ್ಟು ಬರಿಗೈಲಿ ನಿಲ್ಲುವ ದುಃಸ್ಥಿತಿಗೆ ಬಂದು ತಲುಪಿದ್ದಾರೆ
-
ಗಂಟಾಘೋಷ
ಒಂದು ರಾಜ್ಯ ಸುಭಿಕ್ಷವಾದ ಬಂಗಲೆಯಾಗಿದ್ದರೆ ಮೂಲಭೂತ ಅಭಿವೃದ್ಧಿ ಆ ಮನೆಯ ಅಡಿಗಲ್ಲು ಎನ್ನಬಹುದು. ಪ್ರತಿ ಸರಕಾರ ಅಧಿಕಾರಕ್ಕೆ ಬಂದಾಗ ತನ್ನದೇ ಆದ ಒಂದು ಮನೆಯ ಪರಿಕಲ್ಪನೆ ಯೊಂದಿಗೆ ಬಂದಿರುತ್ತದೆ. ಈ ಕಾಂಗ್ರೆಸ್ ಸರಕಾರವು ಹೀಗೆಯೇ ಅಧಿಕಾರಕ್ಕೆ ಬಂದಿತ್ತು. ಆದರೆ ಅದರ ಆಡಳಿತದ ವೈಖರಿ ಹೇಗಿದೆ ಎಂದರೆ ಇಂದು ರಾಜ್ಯದ ಭವಿಷ್ಯಕ್ಕೆ ಆಧಾರವಾಗಬೇಕಿದ್ದ ಮೂಲ ಸೌಕರ್ಯ ಅಭಿವೃದ್ಧಿಯ ‘ಅಡಿಗಲ್ಲ’ನ್ನೇ ಮಾರಾಟಕ್ಕಿಟ್ಟು ಬರಿಗೈಲಿ ನಿಲ್ಲುವ ದುಃಸ್ಥಿತಿಗೆ ಬಂದು ತಲುಪಿದ್ದಾರೆ; ಅಂದರೆ, ಕರ್ನಾಟಕದ ಶಾಶ್ವತ ಮೂಲಸೌಕರ್ಯ ಮತ್ತು ದೂರದೃಷ್ಟಿಯ ಅಭಿವೃದ್ಧಿ ಯೋಜನೆಗಳನ್ನು ಸಂಪೂರ್ಣವಾಗಿ ಬಲಿಕೊಟ್ಟು, ಕೇವಲ ತಾತ್ಕಾಲಿಕ ಉಳಿವಿಗಾಗಿ ಇಡೀ ರಾಜ್ಯದ ಆರ್ಥಿಕ ಭವಿಷ್ಯವನ್ನೇ ಕತ್ತಲಿಗೆ ತಳ್ಳಲಾಗುತ್ತಿದೆ.
ಕರ್ನಾಟಕದಲ್ಲಿ ಎಕ್ಸ್‌ಪ್ರೆಸ್‌ವೇಗಳು, ಸಂಚಾರ ದಟ್ಟಣೆ ನಿಯಂತ್ರಿಸುವ ರಿಂಗ್ ರೋಡ್‌ಗಳು ಮತ್ತು ಹಳ್ಳಿಗಳನ್ನು ಬೆಸೆಯುತ್ತಿದ್ದ ಅತ್ಯಾಧುನಿಕ ಹೆದ್ದಾರಿಗಳ ನಿರ್ಮಾಣದ ಭವ್ಯ ಇತಿಹಾಸವೇ ಇಂದು ಇತಿಹಾಸದ ಪುಟಗಳಿಗೆ ಸೇರಿ ಹೋಗುವಂತೆ ಮಾಡಲಾಗಿದೆ. ಕೇವಲ ರಾಜಕೀಯ ಉಳಿವಿಗಾಗಿ ಇಡೀ ರಾಜ್ಯದ ಕಣ್ಣೆದುರೇ ಅಭಿವೃದ್ಧಿ ವೆಚ್ಚಕ್ಕೆ ಕತ್ತರಿ ಹಾಕಲಾಗುತ್ತಿದ್ದು, ಭವಿಷ್ಯದ ತಲೆಮಾರಿನ ಬೆಳವಣಿಗೆಯನ್ನೇ ಬಲಿಗೊಡುತ್ತಿರುವ ಈ ಬೇಜವಾಬ್ದಾರಿ ಆಡಳಿತದ ವೈಖರಿಯು ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.
ಹಿಂದಿನ ಸರಕಾರದ ಸಮಯದಲ್ಲಿ ಕರ್ನಾಟಕವು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಇಡೀ ದೇಶದ ಮುಂಚೂಣಿಯಲ್ಲಿತ್ತು. ಈ ಅವಧಿಯಲ್ಲಿ ರಸ್ತೆಗಳ ಸುಧಾರಣೆ ಮತ್ತು ಹೆದ್ದಾರಿಗಳ ವಿಸ್ತರಣೆಗೆ ಅತ್ಯುನ್ನತ ಆದ್ಯತೆ ನೀಡಲಾಗಿತ್ತು. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಯೋಜನೆ; ಇದು ಎರಡು ಪ್ರಮುಖ ಆರ್ಥಿಕ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಿದ್ದಲ್ಲದೆ, ವ್ಯಾಪಾರ-ವಹಿವಾಟಿಗೆ ದೊಡ್ಡ ಶಕ್ತಿಯನ್ನು ನೀಡಿದ ಯೋಜನೆಯಾಗಿದೆ.
ಇದರೊಂದಿಗೆ, ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಸಂಪೂರ್ಣವಾಗಿ ನಿಯಂತ್ರಿಸ ಲು ಮತ್ತು ಬೈಪಾಸ್ ರಸ್ತೆಗಳ ಜಾಲವನ್ನು ವೃದ್ಧಿಸಲು ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ( STRR ) ಯೋಜನೆಗೆ ತೀವ್ರ ವೇಗ ನೀಡಲಾಯಿತು. ಹಳ್ಳಿಗಳ ಮಾರುಕಟ್ಟೆಗಳು ಹಾಗೂ ಗ್ರಾಮೀಣ ಭಾಗದ ಕೃಷಿ ಉತ್ಪನ್ನಗಳು ಯಾವುದೇ ಅಡೆತಡೆಯಿಲ್ಲದೆ ನಗರ ಪ್ರದೇಶಗಳಿಗೆ ಸುಲಭ ವಾಗಿ ಸಂಪರ್ಕ ಹೊಂದುವಂತೆ ಮಾಡಲು ಕಟ್ಟುನಿಟ್ಟಾದ ಯೋಜನೆಯಡಿ ಸಾವಿರಾರು ಕಿಲೋ ಮೀಟರ್ ಗ್ರಾಮೀಣ ಮತ್ತು ರಾಜ್ಯ ಹೆದ್ದಾರಿಗಳನ್ನು ಅತ್ಯಾಧುನಿಕ ಮಟ್ಟಕ್ಕೆ ಮೇಲ್ದರ್ಜೆಗೇರಿಸಿತ್ತು.
ಆದರೆ, 2023ರಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಇಡೀ ರಾಜ್ಯದ ಪ್ರಗತಿಯ ಚಕ್ರಕ್ಕೆ ಬ್ರೇಕ್ ಬಿತ್ತು. ಈ ಆಡಳಿತವು ಕೇವಲ ರಾಜಕೀಯ ಕಾರಣಗಳಿಗಾಗಿ, ಹಿಂದಿನ ಸರಕಾರವು ನಿಯಮಾ ನುಸಾರ ಮಂಜೂರು ಮಾಡಿದ್ದ ಬೃಹತ್ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ತಕ್ಷಣವೇ ಅನ್ವಯ ವಾಗುವಂತೆ ಒಟ್ಟಾರೆ ಕೆಲಸ ನಿಲ್ಲಿಸುವ ಮಾರಕ ‘ಸ್ಟಾಪ್ ವರ್ಕ್’ ಆದೇಶವನ್ನು ಹೊರಡಿಸಿತು. ಆದರೆ ಮುಂದೆ ಆ ಯೋಜನೆಗಳಿಗೆ ಏನಾಯಿತು ಎನ್ನುವುದು ಗೊತ್ತಾಗಲೇ ಇಲ್ಲ.
ಇದನ್ನೂ ಓದಿ: Gururaj Gantihole Column: ಗ್ಯಾರಂಟಿ: ಮನೆಯ ಮೇಲ್ಛಾವಣಿ ಮಾರಿ ಹಬ್ಬದ ಊಟ ಮಾಡಿದಂತೆ !
ಸುಮ್ಮನೇ ವಿಸ್ತೃತ ತನಿಖೆಯ ನೆಪದಲ್ಲಿ ಅಭಿವೃದ್ಧಿಯನ್ನು ನಿಲ್ಲಿಸಿದೆ ಅಷ್ಟೇ. ಪ್ರತಿಯೊಂದು ಮಂಜೂರಾದ ರಸ್ತೆ, ರೈಲ್ವೆ ಮತ್ತು ನೀರಾವರಿ ಯೋಜನೆಗಳ ಹಿಂದೆ ಯಾವುದೋ ದೊಡ್ಡ ಹಗರಣ ಅಡಗಿದೆ ಎಂಬಂತೆ ಬಿಂಬಿಸಿ, ತನಿಖೆಯ ಮಹಾ ಬೂಟಾಟಿಕೆಯನ್ನು ಆರಂಭಿಸಲಾಯಿತು.
ವಿಸ್ತೃತ ತನಿಖೆಯ ಈ ನೆಪದಲ್ಲಿ ಕಳೆದ ಮೂರು ವರ್ಷಗಳಿಂದ ಇಡೀ ರಾಜ್ಯದ ಕಣ್ಣೆದುರೇ ಮೂಲಸೌಕರ್ಯದ ಚಕ್ರಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ತನಿಖೆಯ ಫೈಲುಗಳು ಧೂಳು ತಿನ್ನುತ್ತಾ ಬಿದ್ದಿವೆ. ಹಳ್ಳಿ ಮತ್ತು ನಗರಗಳಲ್ಲಿ ಅರ್ಧಕ್ಕೇ ನಿಂತು ಹೋದ ರಸ್ತೆಗಳು ಹಾಗೂ ತುಕ್ಕು ಹಿಡಿಯುತ್ತಿರುವ ಕಬ್ಬಿಣದ ಕಂಬಗಳು ಮಾತ್ರ ಸರಕಾರದ ಈ ವಿಚಾರಣಾ ರಾಜಕಾರಣಕ್ಕೆ ಮೂಕಸಾಕ್ಷಿಯಾಗಿ ನಿಂತಿವೆ.
ಕೇವಲ ತನಿಖೆಯ ಹೆಸರಿನಲ್ಲಿ ಅಭಿವೃದ್ಧಿಯ ಹಾದಿಗೆ ಕಲ್ಲು ಹಾಕುತ್ತಿರುವ ಈ ಆಡಳಿತ ವೈಖರಿ ಯು ರಾಜ್ಯದ ಭವಿಷ್ಯವನ್ನು ಕತ್ತಲೆಗೆ ನೂಕುತ್ತಿರುವಂತೆ ಭಾಸವಾಗುತ್ತಿದೆ. ದೇಶದ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯಾದ ಸಿಎಜಿ ತನ್ನ ವರದಿಯಲ್ಲಿ ಬಹಿರಂಗಪಡಿಸಿರುವ ಪ್ರಕಾರ, ಈ ಸರಕಾರವು ಅವೈಜ್ಞಾನಿಕ ಗ್ಯಾರಂಟಿ ವೆಚ್ಚಗಳನ್ನು ಸರಿದೂಗಿಸಲು ಮೂಲಸೌಕರ್ಯಗಳ ಮೇಲಿನ ಬಂಡವಾಳ ವೆಚ್ಚವನ್ನು ಒಂದೇ ವರ್ಷದಲ್ಲಿ ರೂ.5229 ಕೋಟಿ ಕಡಿತಗೊಳಿಸಿದೆ.
ಸರಕಾರದ ಈ ಆರ್ಥಿಕ ದಿವಾಳಿತನದಿಂದಾಗಿ ಗುತ್ತಿಗೆದಾರರಿಗೆ ಕೊಡಬೇಕಾದ ಸುಮಾರು ರೂ.37,370 ಕೋಟಿಯಷ್ಟು ಬೃಹತ್ ಬಾಕಿ ಹಣವನ್ನು ಸರಕಾರ ತಡೆ ಹಿಡಿದಿದೆ. ಸರಕಾರದ ಕೈಯಲ್ಲಿ ಹಣವಿಲ್ಲದ ಕಾರಣ ಇಂದು ನಗರದ ಪ್ರಮುಖ ರಸ್ತೆಗಳು, ರಾಜ್ಯ ಹೆದ್ದಾರಿಗಳು ಮತ್ತು ಹಳ್ಳಿಗಳ ಒಳಗಿನ ರಸ್ತೆ ಕಾಮಗಾರಿಗಳು ಸಂಪೂರ್ಣವಾಗಿ ನಿಂತು ಹೋಗಿವೆ. ಇದರ ಭೀಕರ ಫಲಿತಾಂಶ ಏನೆಂದರೆ, ರಾಜ್ಯದಲ್ಲಿ ಅರ್ಧಕ್ಕೆ ನಿಂತುಹೋದ ಯೋಜನೆಗಳ ಸಂಖ್ಯೆಯು ಬರೋಬ್ಬರಿ 68% ರಷ್ಟು ಭಾರಿ ಏರಿಕೆ ಕಂಡಿದೆ. ಇದೇ ರೀತಿ ಮುಂದುವರೆದರೆ ನೋಡನೋಡು ತ್ತಿದ್ದಂತೆ ಕರ್ನಾಟಕವು ಹಿಂದುಳಿದ ರಾಜ್ಯಗಳ ಪಟ್ಟಿಗೆಸೇರುವುದರಲ್ಲಿ ಸಂಶಯವಿಲ್ಲ.
ರೈಲ್ವೆ ಜಾಲ: ಕೈಕೊಟ್ಟ ರಾಜ್ಯ ಸರಕಾರ
ಕರ್ನಾಟಕದಲ್ಲಿ ರೈಲ್ವೆ ಲೈನ್‌ಗಳ ವಿಸ್ತರಣೆ ಮತ್ತು ಹೊಸ ಮಾರ್ಗಗಳ ನಿರ್ಮಾಣವು ಕೇವಲ ಕೇಂದ್ರದ ಮೇಲಷ್ಟೇ ನಿಂತಿರುವುದಿಲ್ಲ; ಇದು ಕೇಂದ್ರ ರೈಲ್ವೆ ಇಲಾಖೆ ಮತ್ತು ರಾಜ್ಯ ಸರಕಾರದ ಜಂಟಿ ಹಣಕಾಸು ನೆರವು ಹಾಗೂ ರಾಜ್ಯ ಸರಕಾರವು ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈಲ್ವೆಗೆ ಹಸ್ತಾಂತರಿಸುವ ಒಪ್ಪಂದದ ಮೇಲೆ ಸಂಪೂರ್ಣವಾಗಿ ನಿಂತಿರುತ್ತದೆ. ಹಿಂದಿನ ಸರಕಾರವು ರಾಜ್ಯದ ಹಿತದೃಷ್ಟಿಯಿಂದ ಈ ಎಲ್ಲಾ ಸಾಂಸ್ಥಿಕ ಬದ್ಧತೆಗಳನ್ನು ಚಾಚೂ ತಪ್ಪದೆ ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿತ್ತು.
ಬೆಂಗಳೂರಿನ ಸಂಚಾರ ದಟ್ಟಣೆಗೆ ಬಹುದೊಡ್ಡ ಪರಿಹಾರ ನೀಡಬಲ್ಲ ಕೋಟ್ಯಂತರ ರೂಪಾಯಿ ವೆಚ್ಚದ ಬೆಂಗಳೂರು ಉಪನಗರ ರೈಲು ಯೋಜನೆಗೆ ದಶಕಗಳಿಂದ ಇದ್ದ ಎಲ್ಲಾ ತಾಂತ್ರಿಕ ಮತ್ತು ಆಡಳಿತಾತ್ಮಕ ಅಡೆತಡೆಗಳನ್ನು ನಿವಾರಿಸಿ ಮುಂದಿನ ಹಂತದ ಕಾಮಗಾರಿಗಳನ್ನು ಆರಂಭಿಸಿತ್ತು.
ಆದರೆ ಅಕ್ಟೋಬರ್ 2026ಕ್ಕೆ ಮುಗಿಯಬೇಕಿದ್ದ ಈ ಬೃಹತ್ಯೋ ಜನೆಯ ಗಡುವನ್ನು ಈಗ ನೇರವಾಗಿ ಮಾರ್ಚ್ 2030ರವರೆಗೆ ಮುಂದೂಡಲಾಗಿದೆ. ರಾಜ್ಯ ಸರಕಾರವು ಒಪ್ಪಂದದ ಪ್ರಕಾರ ಎನ್ಕಂಬರೆ ಮುಕ್ತ ಭೂಮಿಯನ್ನು ಮತ್ತು ಸೂಕ್ತ ಅನುಮತಿಗಳನ್ನು ನೀಡದ ಕಾರಣ ಬೇಸತ್ತ ಕಂಟ್ರಾಕ್ಟ್ ಪಡೆದಿದ್ದ ಎಲ್‌ಟಿ ಕಂಪನಿಯು ತನ್ನ ಅಧಿಕೃತ ಕರಾರಿನಿಂದಲೇ ಸಂಪೂರ್ಣವಾಗಿ ಹೊರನಡೆದಿದೆ ಮತ್ತು ಸರಕಾರದ ವಿಳಂಬ ನೀತಿಯ ವಿರುದ್ಧ ರೂ.505 ಕೋಟಿ ಭಾರಿ ಪರಿಹಾರಕ್ಕೆ ನ್ಯಾಯಾಲಯ ದಲ್ಲಿ ಬೇಡಿಕೆ ಇಟ್ಟಿದೆ.
ಇದರಿಂದಾಗಿ ಈ ಸರಕಾರ ಈಗ ಅದೇ ಕಾಮಗಾರಿಗೆ ಮೂರನೇ ಬಾರಿ ಮರು-ಟೆಂಡರ್ ಕರೆಯುವ ದುಃಸ್ಥಿತಿಗೆ ಬಂದು ತಲುಪಿದೆ. ಕೇವಲ ಬೆಂಗಳೂರಷ್ಟೇ ಅಲ್ಲದೆ, ಪ್ರಾದೇಶಿಕ ಸಮತೋಲನ ಕಾಪಾಡಲು ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಂತಹ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳನ್ನು ದೇಶದ ಪ್ರಮುಖ ನಗರಗಳೊಂದಿಗೆ ಜೋಡಿಸುವ ಮಹತ್ವಾಕಾಂಕ್ಷೆಯ ಪ್ರಮುಖ ರೈಲ್ವೆ ಯೋಜನೆಗಳಿಗೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ತಡೆ ಉಂಟಾಗಿದೆ. ರೈಲ್ವೆ ಯೋಜನೆಗಳಿಗೆ ರಾಜ್ಯ ಸರಕಾರದ ಪಾಲಿನಿಂದ ಕೊಡಬೇಕಾದ ನಿಗದಿತ ಹಣವನ್ನು ನೀಡಲಾಗದೆ ದಿನದಿಂದ ದಿನಕ್ಕೆ ವಿಳಂಬ ಮಾಡುತ್ತಿದೆ. ಈ ತೀವ್ರ ಬಜೆಟ್ ಕಡಿತದಿಂದಾಗಿ ರೈತರಿಗೆ ಮತ್ತು ಭೂಮಾಲೀಕರಿಗೆ ನಿಯಮಾನುಸಾರ ನೀಡಬೇಕಾದ ಜಮೀನಿನ ಪರಿಹಾರದ ಹಣವನ್ನು ಬಿಡುಗಡೆಮಾಡಲು ಕಂದಾಯ ಇಲಾಖೆ ವಿಳಂಬ ಮಾಡುತ್ತಿದೆ; ಇದರ ಫಲವಾಗಿ ಇಡೀ ರಾಜ್ಯದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ದೊಡ್ಡ ಅಡಚಣೆ ಉಂಟಾಗಿದ್ದು, ಹೊಸ ರೈಲ್ವೆ ಮಾರ್ಗಗಳ ಕಾಮಗಾರಿ ಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.
ಮಧ್ಯ ಮತ್ತು ಉತ್ತರ ಕರ್ನಾಟಕವನ್ನು ಜೋಡಿಸುವ ಮಹತ್ವಾಕಾಂಕ್ಷೆಯ 96 ಕಿಲೋಮೀಟರ್ ಉದ್ದದ ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ರೈಲ್ವೆ ಲೈನ್ ಯೋಜನೆಗೆ ರಾಜ್ಯ ಸರಕಾರವು ರೈತರಿಗೆ ಪರಿಹಾರದ ಹಣ ನೀಡದ ಕಾರಣ ಭೂಸ್ವಾಧೀನ ಪ್ರಕ್ರಿಯೆ ತೀವ್ರ ತಡೆ ಅನುಭವಿಸುತ್ತಿದೆ. ಈ ಯೋಜನೆಗೆ ಬೇಕಾಗಿರುವ ಇನ್ನು 50%ಕ್ಕಿಂತ ಹೆಚ್ಚು ಎಕರೆ ಭೂಮಿಯನ್ನು ಸರಕಾರ ಇನ್ನೂ ಸ್ವಾಧೀನಪಡಿಸಿಕೊಂಡಿಲ್ಲ.
ಇದೇ ರೀತಿ, ಉತ್ತರ ಕರ್ನಾಟಕದ ಪ್ರಮುಖ ಕೈಗಾರಿಕಾ ಹಬ್‌ಗಳನ್ನು ಬೆಸೆಯುವ ಬೆಳಗಾವಿ-ಕಿತ್ತೂರು-ಧಾರವಾಡ ರೈಲ್ವೆ ಮಾರ್ಗದ ಸ್ಥಿತಿಯಂತೂ ಕಣ್ಣು ತೆರೆಯಲು ಹಾತೊರೆಯುತ್ತಿದೆ. ಈ ರೈಲ್ವೆ ಲೈನ್ಗಾಗಿ ಕೇಂದ್ರ ಸರಕಾರವು ತನ್ನ ಪಾಲಿನ ಸಾವಿರಾರು ಕೋಟಿ ಹಣ ನೀಡಲು ಸಿದ್ಧವಿದ್ದರೂ, ರಾಜ್ಯ ಸರಕಾರವು ಭೂಮಿಯನ್ನೂ ಹಸ್ತಾಂತರಿಸಲುವಿಳಂಬ ನೀತಿ ಅನಿಸರಿಸುತ್ತಿದೆ.
ಇವಿಷ್ಟೇ ಅಲ್ಲದೆ ಬೇರೆ ಯಾವುದೇ ರಾಜ್ಯ ಸರಕಾರದ ಅಧೀನದ ಕಾರ್ಯವಾಗಲಿ, ಎಲ್ಲವು ಅಂದು ಕೊಂಡ ಸಮಯಕ್ಕೆ ಸರಿಯಾಗಿ ಮುಗಿಯುತ್ತಿಲ್ಲ. ಯಾವುದೇ ಯೋಜನೆಯಾಗಿರಲಿ ಅದು ಸಲೀಸಾಗಿ ಮುಗಿಯುವುದು ರಾಜ್ಯ ಜನತೆಗೆ ಕನಸಾಗಿದೆ ಅಷ್ಟೇ. ಜನರು ದೂರು ನೀಡಿದರೂ ಕೇಳುವವರು ಇಲ್ಲದಾಗಿದೆ.
ಕೊನೆಗೆ ದಂಗೆ ಏಳುವ ಪರಿಸ್ಥಿತಿ ಬಂದಿದೆ ಎಂದಾಗ ಮಾತ್ರ ರಾಜ್ಯ ಸರಕಾರವು ಮುಂದಿನ ಕಾಮಗಾರಿ ಶುರು ಮಾಡುತ್ತಿರುವಂತೆ ಭಾಸವಾಗುತ್ತಿದೆ. ಇದೆಲ್ಲವನ್ನು ನೋಡಿದ ಮೇಲೆ ರಾಜ್ಯ ಖಜಾನೆಯಲ್ಲಿ ಮೂಲಭೂತ ಅಭಿವೃದ್ದಿಗೆ ಹಣವಿದೆಯೋ ಎಂಬ ಪ್ರಶ್ನೆ ಮೂಡುವಂತಾಗಿದೆ. ಈ ರೀತಿ ಮುಂದೂಡುವಿಕೆಯಿಂದ ಯೋಜನೆಯ ಬಜೆಟ್ ದಿನದಿಂದ ದಿನಕ್ಕೆ ಹೆಚ್ಚಾಗಿ ಕೊನೆಗೆ ತೆರಿಗೆ ಕಟ್ಟುವವರ ಮೇಲೆಯೇ ಭಾರವಾಗುತ್ತದೆ. ಜಿಲ್ಲವಾರು ಯೋಜನೆಗಳ ವಿಳಂಬದ ಕಟು ವಾಸ್ತವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಪ್ರಮುಖ ಮೂಲಸೌಕರ್ಯ ಕಾಮಗಾರಿಗಳ ವಿಳಂಬದ ವಾಸ್ತವ ಸ್ಥಿತಿಯನ್ನು ನೋಡಿದರೆ ಈ ಸರಕಾರದ ಆಡಳಿತ ವೈಫಲ್ಯ ಎದ್ದು ಕಾಣುತ್ತದೆ.
ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾದ ಹುಬ್ಬಳ್ಳಿಯ ಚೆನ್ನಮ್ಮ ವೃತ್ತ ಮತ್ತು ಕೆಸಿ ವೃತ್ತದ ಬಳಿ ನಿರ್ಮಾಣವಾಗುತ್ತಿರುವ ಐತಿಹಾಸಿಕ ಹುಬ್ಬಳ್ಳಿ - ಓವರ್ ಯೋಜನೆ ಇಂದಿಗೂ ಮುಗಿಯದೆ ನಿರಂತರವಾಗಿ ಹಾಗೆ ಉಳಿದದೆ. ಅಲ್ಲಿ ಇರುವ ಪೊಲೀಸ್ ಕಚೇರಿಯನ್ನು ಬದಲಿಸುವ ಬದಲು ಸರಕಾರ ಸುಮ್ಮನೇ ಕುಳಿತಿದ್ದು ಜನರ ಆಕ್ರೋಶದ ನಂತರ ಕ್ರಮ ಕೈಗೊಂಡಿದೆ.
ಇದರಿಂದಾಗಿ ವರ್ಷಗಟ್ಟಲೇ ಕಾಮಗಾರಿ ನಿಂತಿದ್ದು ಪ್ರತಿದಿನ ಲಕ್ಷಾಂತರ ಸಾರ್ವಜನಿಕರು ಮತ್ತು ವಾಹನ ಸವಾರರು ಭಾರಿ ಧೂಳು, ಮಾಲಿನ್ಯ ಹಾಗೂ ಗಂಟೆಗಟ್ಟಲೆ ಉಂಟಾಗುವ ಟ್ರಾಫಿಕ್ ಜಾಮ್‌ನಿಂದ ರಸ್ತೆಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಇದು ಒಂದು ಉದಾಹರಣೆ ಅಷ್ಟೇ. ಈ ಸರಕಾರದಿಂದ ಪ್ರತಿ ಜಿಲ್ಲೆಯಲ್ಲೂ ಕಾಮಗಾರಿಗಳು ಹಾಗೆಯೇ ನಿಂತಿವೆ. ಒಂದೋ ಯೋಜನೆಗಳು ಶುರುವಾಗುತ್ತಿಲ್ಲ. ಒಂದು ವೇಳೆ ಚಾಲನೆ ಸಿಕ್ಕರೂ ರಾಜ್ಯ ಸರಕಾರ ದುಡ್ಡು ಹೊಂದಿಸುವಷ್ಟರಲ್ಲಿಯೇ ಕಾಮಗಾರಿ ಮೊತ್ತ ಮೂರು ಪಟ್ಟು ಏರುತ್ತಿದೆ.
ಸರಕಾರದ ಈ ಆರ್ಥಿಕ ದಿವಾಳಿತನ ಮತ್ತು ನಯಾಪೈಸೆ ಅನುದಾನವಿಲ್ಲದ ದುಸ್ಥಿತಿಯು ಕೇವಲ ಸಾರ್ವಜನಿಕರನ್ನು ಮಾತ್ರವಲ್ಲ, ಸ್ವತಃ ಆಡಳಿತ ಪಕ್ಷದ ಶಾಸಕರನ್ನೇ ಬೀದಿಗೆ ತಂದು ನಿಲ್ಲಿಸಿದೆ. ಕೇವಲ ಅವ್ಯವಸ್ಥಿತ ಉಚಿತ ಕೊಡುಗೆಗಳಿಗೆ ಹಣ ಹೊಂದಿಸಲು ಹೋಗಿ ಕ್ಷೇತ್ರಗಳ ಮೂಲಭೂತ ಅಭಿವೃದ್ಧಿ ಕಾಮಗಾರಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವುದರ ವಿರುದ್ಧ ಸ್ವತಃ ಕಾಂಗ್ರೆಸ್ ಶಾಸಕರೇ ಈಗ ಬಹಿರಂಗವಾಗಿ ಬಂಡಾಯವೆದ್ದಿದ್ದಾರೆ.
ತಮ್ಮ ಕ್ಷೇತ್ರಗಳಲ್ಲಿ ಸಣ್ಣ ರಸ್ತೆ ದುರಸ್ತಿ ಅಥವಾ ಗುಂಡಿ ಮುಚ್ಚುವ ಕೆಲಸಕ್ಕೂ ನಯಾಪೈಸೆ ಹಣವಿಲ್ಲದ ಕಾರಣ ತಾವೂ ಜನರಿಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ ಎಂದು ಹಲವು ಕಾಂಗ್ರೆಸ್ ಶಾಸಕರು ತಮ್ಮದೇ ಸರಕಾರದ ವಿರುದ್ಧವೇ ಅಸಮಾಧಾನ ಹೊರ ಹಾಕಿದ್ದಾರೆ; ಅಷ್ಟೇ ಅಲ್ಲದೆ, ಅಭಿವೃದ್ಧಿ ಕಾರ್ಯಗಳ ಈ ಆಮೆಗತಿಯ ನಡಿಗೆಯಿಂದ ಬೇಸತ್ತು ಹಲವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಕಠಿಣ ನಿರ್ಧಾರಕ್ಕೂ ಮುಂದಾಗುತ್ತಿರುವುದು ಈ ಆಡಳಿತದ ಸಂಪೂರ್ಣ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಈ ಮೇಲಿನ ಪ್ರತಿಯೊಂದು ಉದಾಹರಣೆಗಳು ಮತ್ತು ಅಧಿಕೃತ ದತ್ತಾಂಶಗಳು ಒಂದು ಕಟು ಸತ್ಯ ವನ್ನು ಸಾರುತ್ತಿವೆ; ಈ ಕಾಂಗ್ರೆಸ್ ಸರಕಾರವು ಕೇವಲ ತಾತ್ಕಾಲಿಕ ರಾಜಕೀಯ ಅಧಿಕಾರವನ್ನು ಹಿಡಿಯಲು ಮತ್ತು ತಕ್ಷಣದ ಚುನಾವಣಾ ಲಾಭಕ್ಕಾಗಿ ನಮ್ಮ ಇಡೀ ಕರ್ನಾಟಕ ರಾಜ್ಯದ ದೀರ್ಘ ಕಾಲದ ಭವಿಷ್ಯವನ್ನೇ ಆರ್ಥಿಕವಾಗಿ ಬಲಿಗೊಟ್ಟಿದೆ. ಹ್ಯಾಂಡ್‌ಬ್ರೇಕ್ ಹಾಕಿದ ವೇಗದ ಗಾಡಿಯಂತೆ ಇಡೀ ದೇಶದ ನಂಬರ್ ಒನ್ ಆಗಿದ್ದ ನಮ್ಮ ಕರ್ನಾಟಕದ ಒಟ್ಟಾರೆ ಅಭಿವೃದ್ಧಿಯ ಎಂಜಿನ್ ಈಗ ಸಂಪೂರ್ಣವಾಗಿ ನಿಂತುಹೋಗಿದೆ.