ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kiran Upadhyay Column: ಮೌನಕ್ರಾಂತಿಯಲ್ಲಿ ತೊಡಗಿಸಿಕೊಂಡ ಡಬ್ಬಾವಾಲಾಗಳು

ಮನೆಯ ಊಟ ಬಯಸುವವರು, ಹೊರಗಿನ ತಿಂಡಿ ಅಥವಾ ಊಟವನ್ನು ತಿನ್ನಲು ಬಯಸದ ಜನರಿಗೆ ಮನೆಯ ತಯಾರಿಸಿದ ಮಧ್ಯಾಹ್ನದ ಊಟ ತಲುಪಿಸುವ ಉಪಾಯವನ್ನು ಹುಡುಕಿದವರು ಮಹಾದೇವ ಬಚ್ಚೆ. ಆ ದಿನಗಳಲ್ಲಿ ಕಚೇರಿಗಳಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಿದ್ದ ಬ್ರಿಟಿಷರು ಮತ್ತು ಪಾರ್ಸಿ ಜನರಿಗೆ ಅವರವರ ಮನೆಯಿಂದ ಊಟವನ್ನು ತೆಗೆದುಕೊಂಡು ಹೋಗಿ ಕಚೇರಿಗೆ ತಲುಪಿಸುವ ಕೆಲಸವನ್ನು ಬಚ್ಚೆ ಆರಂಭಿಸಿದರು.

ಮೌನಕ್ರಾಂತಿಯಲ್ಲಿ ತೊಡಗಿಸಿಕೊಂಡ ಡಬ್ಬಾವಾಲಾಗಳು

-

ವಿದೇಶವಾಸಿ

ಮೊನ್ನೆ ಭಾರತದಿಂದ ಬಹ್ರೈನ್‌ಗೆ ಹಿಂತಿರುಗಿ ಬರುವಾಗ ಮುಂಬೈನಲ್ಲಿ ಕೆಲವು ಗಂಟೆಗಳ ಕಾಲ ಉಳಿಯಬೇಕಾಗಿ ಬಂತು. ಅದಕ್ಕಾಗಿ ಏರ್‌ಪೋರ್ಟ್ ಹತ್ತಿರದಲ್ಲಿರುವ ಐಬಿಸ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದೆ. ಸಾಮಾನ್ಯವಾಗಿ ಹೋಟೆಲ್ ಕೋಣೆಯ ಗೋಡೆಗೆ ಒಂದು ಚಿತ್ರವನ್ನೋ, ಸಂದೇಶವನ್ನೋ, ಕಲಾಕೃತಿಯನ್ನೋ ತೂಗಿಹಾಕಿದ್ದಿರುತ್ತದೆ.

ಕೆಲವೊಮ್ಮೆ ಅದು ಆ ಪ್ರದೇಶದ, ಊರಿನ ಮಹತ್ವವನ್ನು ಹೇಳುವ ಅಥವಾ ಅಲ್ಲಿಯ ಪ್ರಸಿದ್ಧ ಸ್ಥಳಗಳನ್ನು ತೋರಿಸುವ ಚಿತ್ರವಾಗಿರುತ್ತದೆ. ಮುಂಬೈನ ಐಬಿಸ್ ಹೋಟೆಲ್‌ನ ಕೋಣೆಯಲ್ಲಿ ನನ್ನ ಗಮನ ಸೆಳೆದದ್ದು, ಗೋಡೆಗೆ ಇಡಿಯಾಗಿ ಅಂಟಿಸಿದ್ದ ಒಂದು ವಾಲ್ ಪೇಪರ್.

ಅದರಲ್ಲಿ, ರೈಲ್ವೆ ನಿಲ್ದಾಣದಲ್ಲಿ ಹೆಸರು ಬರೆಯುವಂತೆ, ‘ಮುಂಬೈ ಕಾ ಡಬ್ಬಾವಾಲಾ’ ಎಂದು ಬರೆದು, ಟಿಫಿನ್ ಕ್ಯಾರಿಯರ್ ಮತ್ತು ಒಂದಷ್ಟು ಟಿಫಿನ್ ಕ್ಯಾರಿಯರ್ (ತಿಂಡಿಯ ಡಬ್ಬಿ) ಹಿಡಿದು ಕೊಂಡಿರುವ ವ್ಯಕ್ತಿಯ ಚಿತ್ರವಿತ್ತು. ಮನಸ್ಸು ಮಾಡಿದ್ದರೆ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನ, ‌ಗೇಟ್ ವೇ ಆಫ್ ಇಂಡಿಯಾ, ತಾಜ್ ಹೋಟೆಲ್, ಮರಿನ್ ಡ್ರೈವ್, ವಿಕ್ಟೋರಿಯಾ ಟರ್ಮಿನಸ್, ಚರ್ಚ್‌ಗೇಟ್ ರೈಲ್ವೆ ನಿಲ್ದಾಣ, ಶಿವಾಜಿ ಮಹಾರಾಜ, ತಾನಾಜಿ, ಸಂಭಾಜಿ ಹೀಗೆ ಯಾವುದಾದರೂ, ಯಾರzದರೂ ಚಿತ್ರವನ್ನು ಹಾಕ ಬಹುದಾಗಿತ್ತು. ‌

ಆದರೆ ಒಂದು ಗೋಡೆಯ ತುಂಬಾ ಡಬ್ಬಿ ಕೊಡೊಯ್ಯುವ ವ್ಯಕ್ತಿಯ ಚಿತ್ರ ಹಾಕಿದ್ದಾರೆ ಎಂದರೆ, ಅದು ‘ಖಾಲಿ-ಪೀಲಿ’ ಅಲ್ಲ. ಮುಂಬೈನಲ್ಲಿ ಡಬ್ಬಾವಾಲಾಗಳು ಅಂದರೆ, ಅದೆಷ್ಟೋ ಜನರಿಗೆ ಅನ್ನದಾತರು. ಇವರ ಇತಿಹಾಸವನ್ನು ಕೆದುಕುವುದಾದರೆ, 18ನೇ ಶತಮಾನದ ಕೊನೆಯಿಂದ ಆರಂಭಿಸಬೇಕು.

1890ರ ಹೊತ್ತಿಗೆ, ಮಹಾದೇವ ಹಾವಾಜಿ ಬಚ್ಚೆ ಎನ್ನುವ ಹೆಸರಿನವರು ಈ ಕೆಲಸವನ್ನು ಮೊದಲ ಬಾರಿಗೆ ಆರಂಭಿಸಿದರಂತೆ. ಆಗ ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಇತ್ತು. ಆ ದಿನಗಳಲ್ಲಿ ಬಹುತೇಕರು ಮುಂಬೈ ನಗರಕ್ಕೆ ಉದ್ಯೋಗ ನಿಮಿತ್ತ ಬರುತ್ತಿದ್ದರು. ಪಟ್ಟಣ ಪ್ರದೇಶಗಳಲ್ಲಿ ಬದುಕಬೇಕು ಎಂದರೆ ಹೆಚ್ಚಿನ ಹಣ ನೀಡಬೇಕಾಗಿದ್ದುದರಿಂದ ಜನ ಊರಿಗೆ ಸ್ವಲ್ಪ ದೂರದಲ್ಲಿ ಮನೆ ಮಾಡಿಕೊಳ್ಳು ತ್ತಿದ್ದರು.

ಇದನ್ನೂ ಓದಿ: Kiran Upadhyay Column: ದಯಮಾಡಿ ಟ್ರೇಲರ್‌ ರಿಲೀಸ್‌ ಮಾಡಬೇಡಿ...

ಆದ್ದರಿಂದ ಕೆಲಸಕ್ಕೆ ಹೋಗುವವರು ಬೇಗ ಮನೆಯಿಂದ ಹೊರಡಬೇಕಾಗುತ್ತಿತ್ತು. ಆದರೆ ಅಷ್ಟು ಬೆಳ್ಳಂಬೆಳಗ್ಗೆ ಮನೆಯಲ್ಲಿ ಅಡುಗೆ ಮಾಡುವುದು ಹೆಂಗಸರಿಗೆ ಕಷ್ಟದ ಕೆಲಸವಾಗಿತ್ತು. ಒಂದು ವೇಳೆ ಅಡುಗೆ ಮಾಡಿ ಕೊಟ್ಟು ಕಳಿಸಿದರು ಅಂದುಕೊಳ್ಳಿ, ಮಧ್ಯಾಹ್ನದವರೆಗೆ ಊಟ ತಣ್ಣಗಾಗುತ್ತಿತ್ತು. ಬೇಸಗೆಯಲ್ಲಿ ಹಳಸುವ ಸಾಧ್ಯತೆಯೂ ಇತ್ತು.

ಮನೆಯ ಊಟ ಬಯಸುವವರು, ಹೊರಗಿನ ತಿಂಡಿ ಅಥವಾ ಊಟವನ್ನು ತಿನ್ನಲು ಬಯಸದ ಜನರಿಗೆ ಮನೆಯ ತಯಾರಿಸಿದ ಮಧ್ಯಾಹ್ನದ ಊಟ ತಲುಪಿಸುವ ಉಪಾಯವನ್ನು ಹುಡುಕಿದವರು ಮಹಾದೇವ ಬಚ್ಚೆ. ಆ ದಿನಗಳಲ್ಲಿ ಕಚೇರಿಗಳಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಿದ್ದ ಬ್ರಿಟಿಷರು ಮತ್ತು ಪಾರ್ಸಿ ಜನರಿಗೆ ಅವರವರ ಮನೆಯಿಂದ ಊಟವನ್ನು ತೆಗೆದುಕೊಂಡು ಹೋಗಿ ಕಚೇರಿಗೆ ತಲುಪಿಸುವ ಕೆಲಸವನ್ನು ಬಚ್ಚೆ ಆರಂಭಿಸಿದರು.

ಈ ಕೆಲಸಕ್ಕಾಗಿ ಸುಮಾರು ನೂರು ಜನರನ್ನು ಹುಡುಕಿ ತಮ್ಮ ಜತೆ ಸೇರಿಸಿಕೊಂಡರು. ತಮ್ಮ ತೋಳುಗಳಲ್ಲಿ ಶಕ್ತಿ ಇರುವವರೆಗೂ ಬಚ್ಚೆ ಈ ಕೆಲಸವನ್ನು ಮಾಡಿದರು. ಸುಮಾರು 65 ವರ್ಷ ನಿರಂತರವಾಗಿ ಈ ಕೆಲಸ ಮಾಡಿದ ನಂತರ ಇದನ್ನು ಒಂದು ಟ್ರಸ್ಟ್ ಎಂದು ನೋಂದಾಯಿಸಿ‌ ಕೊಳ್ಳಲಾಯಿತು.

ಸುಮಾರು 140 ವರ್ಷಗಳ ಹಿಂದೆ ಆರಂಭವಾದ, ಮನೆಯಿಂದ ಕಚೇರಿಗೆ, ಮಳಿಗೆಗೆ ಊಟ ತಲುಪಿ ಸುವ ಕೆಲಸ ಮುಂಬೈ ಮಹಾನಗರದಲ್ಲಿ ಇಂದಿಗೂ ಮುಂದುವರಿದಿದೆ. ಆದರೆ ನೂರು ಜನರಿಂದ ಆರಂಭವಾದ ಈ ಕಾರ್ಯದಲ್ಲಿ ಒಂದು ಕಾಲದಲ್ಲಿ 5000 ಜನ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಇತ್ತೀಚೆಗೆ ಸ್ವಿಗ್ಗಿ, ಝೊಮ್ಯಾಟೋದಂಥ ಕಂಪನಿಗಳು ಇದೇ ರೀತಿಯ ಕಾರ್ಯವನ್ನು ಮಾಡುತ್ತಿರುವು ದರಿಂದ ಡಬ್ಬಾವಾಲಗಳ ಸಂಖ್ಯೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿರಬಹುದು ಎಂಬ ವರದಿ ಇದೆ.

Dabbawala

ಹಾಗೆಯೇ, ಸ್ವಿಗ್ಗಿ, ಝೊಮ್ಯಾಟೋದಂಥ ಕಂಪನಿಗಳಿಗೆ ಇವರೇ ಮಾದರಿ ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಇಂದು ಆ ಕಂಪನಿಗಳು ಮಾಡುತ್ತಿರುವ ಕೆಲಸವನ್ನು ನೂರು ವರ್ಷಕ್ಕೂ ಹಿಂದೆ ಈ ಡಬ್ಬಾವಾಲಾಗಳು ಮಾಡಿ ತೋರಿಸಿದ್ದಾರೆ. ಇಂದಿಗೂ ಡಬ್ಬಾವಾಲಾಗಳು ತಮ್ಮ ಕೆಲಸಕ್ಕೆ ಇತರ ಕಂಪನಿಗಳಂತೆ ಕಾರು, ಬೈಕು ಅಥವಾ ರಿಕ್ಷಾಗಳನ್ನು ಬಳಸುವುದಿಲ್ಲ. ಅವರು ಬಳಸುವುದು ಸೈಕಲ್ ಅಥವಾ ಕೈಗಾಡಿ. ಜತೆಗೆ ಮುಂಬೈನ ಲೋಕಲ್ ಟ್ರೈನ್ (ಸ್ಥಳೀಯ ರೈಲ್ವೆ).

ಇಷ್ಟನ್ನೇ ಬಳಸಿಕೊಂಡು, ಕಚೇರಿಯಲ್ಲಿ ಕೆಲಸ ಮಾಡುವವರಿಗೆ, ಶಾಲೆ, ಕಾಲೇಜಿನಲ್ಲಿ ಓದುವ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಊಟ ತಲುಪಿಸುತ್ತಾರೆ. ಅದೂ ತಿಂಗಳಿಗೆ ಒಬ್ಬರಿಂದ 1500 ರಿಂದ 2000 ರೂಪಾಯಿಯ ಒಳಗೆ. ಅಂದಂತೆ ಇವರು ಮನೆಯಿಂದ ಊಟ ತಲುಪಿಸುವುದಷ್ಟೇ ಅಲ್ಲ ಊಟ ಮುಗಿದ ನಂತರ ಖಾಲಿ ಡಬ್ಬಿಯನ್ನು ಪುನಃ ಮನೆಗೆ ತಲುಪಿಸುತ್ತಾರೆ. ಆಗ ಮಾತ್ರ ಅವರ ದಿನದ ಕೆಲಸ ಪೂರ್ತಿ ಯಾದಂತೆ.

ಇಂದಿಗೂ ಮುಂಬೈನ ಬಹುತೇಕ ಜನರಿಗೆ ಡಬ್ಬಾವಾಲಾಗಳು ಎಂದರೆ ಭರವಸೆಯ ಅನ್ನದಾತರು. ಏಕೆಂದರೆ, ‘ಗಡಿಯಾರದ ಮುಳ್ಳು ಸಮಯವನ್ನು ತಪ್ಪಬಹುದು, ಡಬ್ಬಾವಾಲಾಗಳ ಸಮಯ ಯಾವತ್ತೂ ತಪ್ಪುವುದಿಲ್ಲ’ ಎಂಬ ಮಾತು ಮುಂಬೈ ಪ್ರದೇಶದಲ್ಲಿ ರೂಢಿಯಲ್ಲಿದೆ. ಹಾಗೆಯೇ ‘ಸಮಯ ಮತ್ತು ಡಬ್ಬಾವಾಲಾ ಯಾರಿಗೂ ಕಾಯುವುದಿಲ್ಲ’ ಎಂಬ ಮಾತೂ ಜಾರಿಯಲ್ಲಿದೆ.

ಇನ್ನೂ ಒಂದು ವಿಷಯ ಏನೆಂದರೆ, ಇಷ್ಟು ವರ್ಷಗಳ ಇತಿಹಾಸದಲ್ಲಿ ಅವರು ರಜೆ ಮಾಡಿದ್ದು ಕೇವಲ ಒಂದೇ ಒಂದು ದಿನ. ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಆಂದೋಲನ ಕೈಗೊಂಡಿದ್ದ ಸಮಯದಲ್ಲಿ. ಇದು ಆಶ್ಚರ್ಯ ಅನಿಸಬಹುದು, ಆದರೆ ಸತ್ಯ.

2005ರಲ್ಲಿ ಮುಂಬೈನಲ್ಲಿ ಮುಸಲಧಾರೆಯಂತೆ ಮಳೆ ಸುರಿದು, 12 ತಾಸಿನಲ್ಲಿಯೇ 25 ಇಂಚು ಮಳೆಯಾಗಿ, ಮುಂಬೈ ನಗರವೇ ನೀರಿನಿಂದ ತುಂಬಿ ಹೋದಾಗಲೂ, ನಿಲ್ಲದೇ ಕೆಲಸ ಮಾಡಿದವರು ಎಂದರೆ ಈ ಡಬ್ಬಾವಾಲಾಗಳು. ಇವರ ಕಾರ್ಯತತ್ಪರತೆ, ಪ್ರಾಮಾಣಿಕತೆ, ಸಮಯ ಪಾಲನೆ, ನಿಷ್ಕಲ್ಮಶ ಭಾವಕ್ಕೆ ಎಷ್ಟು ಕೋಟಿ ಬೆಲೆ ಕಟ್ಟಿದರೂ ಸಾಲದು.

ಸಂಘಟನಾಶಕ್ತಿಗೆ ಅತ್ಯುತ್ತಮ ಉದಾಹರಣೆ ಡಬ್ಬಾವಾಲಗಳು. ಅದಕ್ಕೇ ಇರಬೇಕು, ‘ಡಬ್ಬಾವಾಲಾ ಗಳು ಮಾಡುವ ಒಂದು ಕೋಟಿ ಅರವತ್ತು ಲಕ್ಷ ಕೆಲಸದಲ್ಲಿ ಒಂದು ತಪ್ಪು ಕಾಣಬಹುದು’ ಎಂದು ಜಾಗತಿಕ ಮಟ್ಟದ ಮಾಧ್ಯಮ ಸಂಸ್ಥೆ ‘ಫೋರ್ಬ್ಸ್’ ಹೇಳಿದೆ.

ಕೇವಲ ಮುಂಬೈ ಮಹಾನಗರಕ್ಕಷ್ಟೇ ಸೀಮಿತವಾಗಿರುವ, ಅಲ್ಲಿಯೇ ತಮ್ಮ ಕಾರ್ಯವ್ಯಾಪ್ತಿಯನ್ನು ಇಟ್ಟುಕೊಂಡಿರುವ, ನೂರಕ್ಕೂ ಹೆಚ್ಚು ವರ್ಷಗಳಾದರೂ ಮುಂಬೈನಿಂದ ಹೊರಗೆ ಹೋಗದ ಇವರ ಕುರಿತಾಗಿ ಫೋರ್ಬ್ಸ್ ಸಂಸ್ಥೆಯವರು ಅಧ್ಯಯನ ಮಾಡುವುದಾಗಲಿ, ಬ್ರಿಟನ್‌ನ ಇಂದಿನ ರಾಜ, ಅಂದಿನ ರಾಜಕುಮಾರ ಚಾರ್ಲ್ಸ್ ಅವರು ಇವರೊಂದಿಗೆ ಗಂಟೆಗಟ್ಟಲೆ ಕಾಲ ಕಳೆಯುವುದಾಗಲಿ, ಹಾರ್ವರ್ಡ್, ಸ್ಟ್ಯಾನ್‌ ಫೋರ್ಡ್ ವಿಶ್ವವಿದ್ಯಾಲಯದವರು ವ್ಯಾಪಾರದ ಪಾಠ ಮಾಡುವಾಗ ಇವರ ಉದಾಹರಣೆಯನ್ನು ಕೊಡುವುದಾಗಲಿ ಏಕೆ ಎನ್ನುವುದು ಅರ್ಥವಾಗಬೇಕಾದರೆ ಡಬ್ಬಾವಾಲಾಗಳ ಕಾರ್ಯವೈಖರಿ ಹೇಗೆ ಎಂಬುದು ಗೊತ್ತಾಗಬೇಕು.

ಡಬ್ಬಾವಾಲಾಗಳು ಬೆಳಗ್ಗೆ 10 ಗಂಟೆಯ ಹೊತ್ತಿಗೆ ಮನೆಯಿಂದ ಊಟದ ಡಬ್ಬಿ ಸಂಗ್ರಹಿಸಿ, ಸೈಕಲ್ ಅಥವಾ ಕೈಗಾಡಿಯ ಮೂಲಕ ಹತ್ತಿರದ ರೈಲ್ವೆ ನಿಲ್ದಾಣಕ್ಕೆ ತರುತ್ತಾರೆ. ಬೇರೆ ಬೇರೆ ಕಡೆಗಳಿಂದ ಬಂದ ಡಬ್ಬಿಗಳನ್ನೆಲ್ಲ ಮುಂದಿನ ಪ್ರಯಾಣಕ್ಕೆ ಅನುಕೂಲವಾಗುವಂತೆ ಕಟ್ಟಿಗೆಯ ಟ್ರೇನಲ್ಲಿ ತುಂಬಿ, ಸ್ಥಳೀಯ ರೈಲ್ವೆಯಲ್ಲಿ ಕೊಂಡೊಯ್ಯುತ್ತಾರೆ.

ಪ್ರತಿ ನಿಲ್ದಾಣದಲ್ಲೂ ಇದಕ್ಕೆ ಅವರಿಗೆ ಸಿಗುವ ಸಮಯ 20 ರಿಂದ 30 ಸೆಕೆಂಡುಗಳು ಮಾತ್ರ. ಅಷ್ಟರಲ್ಲಿಯೇ ಒಂದು ಯಂತ್ರದಂತೆ ಅವರು ಕೆಲಸ ಮಾಡುತ್ತಾರೆ. ರೈಲ್ವೆ ಬೋಗಿಯ ಒಳಗೆ ಕೇವಲ 10 ನಿಮಿಷದಲ್ಲಿ ಈ ಡಬ್ಬಿಗಳನೆಲ್ಲ ಪುನಃ ವಿಂಗಡಿಸುತ್ತಾರೆ. ತಲುಪಿಸಬೇಕಾದ ಸ್ಥಳದ ಸಮೀಪದ ರೈಲ್ವೆ ನಿಲ್ದಾಣದಲ್ಲಿ ಡಬ್ಬಿಗಳನ್ನು ಇಳಿಸುತ್ತಾರೆ.

ಅಲ್ಲಿ ಇದಕ್ಕಾಗಿಯೇ ಕಾದಿರುವ ಇನ್ನೊಂದು ತಂಡದವರು ಡಬ್ಬಗಳನ್ನೆಲ್ಲ ಸಂಗ್ರಹಿಸಿ ಮಧ್ಯಾಹ್ನ ಹನ್ನೆರಡರಿಂದ ಒಂದು ಗಂಟೆಯ ಒಳಗೆ ಕಚೇರಿಗೋ, ಶಾಲೆಗೋ, ಕಾಲೇಜಿಗೋ ಅದನ್ನು ತಲುಪಿಸು ತ್ತಾರೆ. ಅದಾಗಿ ಒಂದು ಗಂಟೆಯ ನಂತರ ಖಾಲಿ ಡಬ್ಬಿಗಳನ್ನೆಲ್ಲ ಪುನಃ ಕಲೆ ಹಾಕಿ, ಸಾಯಂಕಾಲ ಐದು ಗಂಟೆಯ ಒಳಗೆ ತಲುಪಿಸಬೇಕಾದ ಮನೆಗಳಿಗೆ ತಲುಪಿಸುತ್ತಾರೆ.

ಹೀಗೆ ಪ್ರತಿನಿತ್ಯ ಒಟ್ಟೂ ಒಂದೂ ಮುಕ್ಕಾಲರಿಂದ ಎರಡು ಲಕ್ಷ ಡಬ್ಬಿಗಳನ್ನು ನಿಯಂತ್ರಿಸುತ್ತಾರೆ. ಇದಕ್ಕಾಗಿ ಸುಮಾರು 200 ತಂಡಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಒಂದು ತಂಡದಲ್ಲಿ 20 ರಿಂದ 30 ಸದಸ್ಯರು, ಅದಕ್ಕೆ ಒಬ್ಬರು ಅಥವಾ ಇಬ್ಬರು ಮೇಲ್ವಿಚಾರಕರು ಇರುತ್ತಾರೆ. ಅಪಘಾತ, ನಾರೋಗ್ಯ ಅಥವಾ ಇನ್ಯಾವುದೋ ಅನಿವಾರ್ಯ ಕಾರಣದಿಂದ ಯಾರಿಗಾದರೂ ಕೆಲಸಕ್ಕೆ ಬರಲಾಗದಿದ್ದರೆ ಅಂಥವರ ಸ್ಥಳ ತುಂಬಲು ಒಂದಿಬ್ಬರನ್ನು ಮೀಸಲಿಟ್ಟಿರುತ್ತಾರೆ.

ಇವರೆಲ್ಲ ಬಹುತೇಕ ಒಬ್ಬರಿಗೊಬ್ಬರು ಸಂಬಂಧಿಗಳೇ ಆಗಿರುತ್ತಾರೆ. ಹೊಸದಾಗಿ ಯಾರಾದರೂ ಈ ತಂಡವನ್ನು ಸೇರಿಕೊಂಡರೆ ಅವರಿಗೆ ಆರು ತಿಂಗಳು ತರಬೇತಿ ನೀಡುತ್ತಾರೆ. ತಂಡದಲ್ಲಿರುವ ಪ್ರತಿ ಯೊಬ್ಬರೂ ಅವರ ಸುತ್ತಮುತ್ತಲಿನ ಜಾಗದ ಪರಿಚಯವನ್ನು ತಿಳಿದವರಾಗಿರುತ್ತಾರೆ.

ಇತ್ತೀಚಿಗೆ ಮೊಬೈಲ್‌, ಜಿಪಿಎಸ್, ಗೂಗಲ್ ಮ್ಯಾಪ್ ಇತ್ಯಾದಿ ವ್ಯವಸ್ಥೆಗಳೆಲ್ಲ ಬಂದಿವೆ ಅಂದು ಕೊಳ್ಳೋಣ. ಆದರೆ ಮೊಬೈಲ್ ಬರುವುದಕ್ಕಿಂತ ದಶಕಗಳ ಮೊದಲಿನಿಂದಲೂ ಅವರು ಈ ಕೆಲಸ ವನ್ನು ಮಾಡಿಕೊಂಡು ಬಂದಿದ್ದಾರೆ. ಈಗಲೂ ಬಹುತೇಕ ವಯಸ್ಕ ಡಬ್ಬಾವಾಲಾಗಳ ಬಳಿ ಮೊಬೈಲ್ ಫೋನ್ ಇಲ್ಲ.

ಇದ್ದರೂ ಹಳೆಯ ಕೀ-ಪ್ಯಾಡ್ ಇರುವ ಮೊಬೈಲ. ಹಳೆಯ ಜನರಿಗೆ ಆಧುನಿಕ ‘ಐಫೋನ್’ ಆಗಲಿ, ಆಂಡ್ರಾಯ್ಡ್ ಫೋನ್ ಬಳಸುವುದಾಗಲಿ ಇಂದಿಗೂ ಗೊತ್ತಿಲ್ಲ. ಈ ವಿಷಯದಲ್ಲಿ ಕೆಲವು ಡಬ್ಬಾ ವಾಲಾಗಳು ಇಂದಿಗೂ ಅನಕ್ಷರಸ್ಥರು. ಆದರೆ ಮೊಬೈಲ್ ಇಲ್ಲದೇ ಅದಕ್ಕಿಂತ ನಿಖರವಾಗಿ, ಖಚಿತ ವಾಗಿ ಕೆಲಸವನ್ನು ಮಾಡಬಲ್ಲ ಶಕ್ತಿ ಉಳ್ಳವರು ಇವರಾಗಿದ್ದಾರೆ.

ಆದಾಗ್ಯೂ, ಅಷ್ಟು ಕರಾರುವಾಕ್ಕಾಗಿ ಡಬ್ಬಿಯನ್ನು ಯಾವುದೇ ತಪ್ಪಿಲ್ಲದೆ ತಲುಪಿಸುವುದಕ್ಕೆ ಕಾರಣ ಅವರು ಮಾಡಿಕೊಂಡಿರುವಂಥ ಸಂಕೇತ ಅಥವಾ ಗುರುತಿನ ಪದ್ಧತಿ. ಅನಕ್ಷರಸ್ಥರು ಸುಲಭವಾಗಿ ಅರ್ಥಮಾಡಿಕೊಳ್ಳಲು ಇದು ಸಹಕರಿಸುತ್ತದೆ. ಡಬ್ಬದ ಮುಚ್ಚಳದ ಮೇಲೆ ಹಸಿರು, ಹಳದಿ, ಕೆಂಪು, ನೀಲಿ ಬಣ್ಣದ ಗುರುತು ಹಾಕಿಕೊಂಡು, ಡಬ್ಬದ ಮೇಲೆ ಸಂಗ್ರಹಿಸಿದ ಮತ್ತು ಹಿಂತಿರುಗಿಸಬೇಕಾದ ಸ್ಥಳ, ನಡುವೆ ಸಿಗುವ ಪ್ರಮುಖ ರೈಲ್ವೆ ನಿಲ್ದಾಣಗಳು, ಇಳಿಯಬೇಕಾದ ನಿಲ್ದಾಣ, ವಿತರಿಸಬೇಕಾದ ವಿಳಾಸ ಇತ್ಯಾದಿಗಳನ್ನೆಲ್ಲ ಸಂಕೇತದ ಮುಖಾಂತರವೇ ಗುರುತು ಮಾಡಿಕೊಳ್ಳುತ್ತಾರೆ.

ಇವರು ಸಮಯ ಪಾಲನೆಯಲ್ಲಿ ತುಂಬಾ ಕಟ್ಟುನಿಟ್ಟಿನ ಜನ. ಊಟದ ಡಬ್ಬ ಸಂಗ್ರಹಿಸುವಾಗ ಒಂದು ಮನೆಯ ಮುಂದೆ ಒಂದು ನಿಮಿಷಕ್ಕಿಂತ ಹೆಚ್ಚು ಕಾಯುವುದಿಲ್ಲ. ಯಾವತ್ತಾದರೂ ಒಂದು ನಿಮಿಷಕ್ಕಿಂತ ಹೆಚ್ಚು ಕಾಯಬೇಕಾದ ಪರಿಸ್ಥಿತಿ ಬಂದರೆ ಮನೆಯವರಿಗೆ ಎಚ್ಚರಿಕೆ ಕೊಟ್ಟು ಬರು ತ್ತಾರೆ. ಎರಡನೇ ಬಾರಿಯೂ ಹಾಗೆಯೇ ಆದರೆ, ಆ ಮನೆಯನ್ನು ಬಿಟ್ಟು ಮುಂದಕ್ಕೆ ನಡೆಯುತ್ತಾರೆ. ಒಬ್ಬರಿಂದಾಗಿ ಉಳಿದವರಿಗೆಲ್ಲ ತೊಂದರೆಯಾಗಬಾರದು ಎಂಬ ಕಾರಣದಿಂದ ಅವರು ಈ ನೀತಿ ಯನ್ನು ಅನುಸರಿಸುತ್ತಾರೆ.

‘ಅನ್ನದಾನ ಮಹಾದಾನ’ ಎಂಬ ಮಾತನ್ನೇ ಧ್ಯೇಯವಾಕ್ಯವನ್ನಾಗಿಸಿಕೊಂಡ ಇವರ ಆದಾಯ ಎಷ್ಟು ಎಂದು ಕೇಳಿದರೆ ನೀವು ಆಶ್ಚರ್ಯಪಡುತ್ತೀರಿ. ಒಬ್ಬ ಡಬ್ಬಾವಾಲಾನಿಗೆ ತಿಂಗಳಿಗೆ ಎಂಟರಿಂದ ಹನ್ನೆರಡು ಸಾವಿರ ರುಪಾಯಿ ಸಂಬಳವಿರುತ್ತದೆ. ಆರರಿಂದ ಎಂಟು ತಿಂಗಳು ಕೆಲಸ ಮಾಡಿದ ನಂತರ, ಮೂಲಧನಕ್ಕೆ ತಮ್ಮ ಹಣವನ್ನು ಜೋಡಿಸಿದರೆ, ಅಂಥವರು ಆ ಸಂಘಟನೆ ಯಲ್ಲಿ ಹೂಡಿಕೆದಾರರಾಗುತ್ತಾರೆ.

ವರ್ಷಾಂತ್ಯದಲ್ಲಿ ಬರುವ ಲಾಭಕ್ಕೆ ಅವರು ಪಾಲುದಾರರಾಗುತ್ತಾರೆ. ಜತೆಗೆ, ಪ್ರತಿನಿತ್ಯ ಮನೆಯಿಂದ ಅಮ್ಮನೋ, ಹೆಂಡತಿಯೋ ತಯಾರಿಸಿದ ಊಟ-ತಿಂಡಿ ತಲುಪಿಸಿದಾಗ ಆ ಮನೆಯವರಿಂದ ಸಿಗುವ ಹಾರೈಕೆ, ಇವೇ ಡಬಾವಾಲಾಗಳ ಆದಾಯ. ಮುಂಬೈನ ರೈಲ್ವೆ ನಿಲ್ದಾಣದಲ್ಲಿ ಬೆಳಗ್ಗೆ ಹತ್ತು ಗಂಟೆ ಯ ಹೊತ್ತಿಗೆ ಬಿಳಿ ಅಂಗಿ, ಬಿಳಿ ಪೈಜಾಮಾ, ಬಿಳಿ ಟೊಪ್ಪಿ ಧರಿಸಿ, ಹಣೆಯಲ್ಲಿ ತಿಲಕ, ಕೊರಳಲ್ಲಿ ತುಳಸಿಮಾಲೆ ತೊಟ್ಟು, ಟ್ರೇನ್ ಬಂದು ನಿಲ್ಲುತ್ತಿದ್ದಂತೆ, ಮಿಂಚಿನ ವೇಗದಲ್ಲಿ ತಿಂಡಿಯ ಡಬ್ಬಿಗಳ ನ್ನೆಲ್ಲ ರೈಲ್ವೆ ಡಬ್ಬಿಯೊಳಗೆ ತುಂಬಿ, ಪಾಂಡುರಂಗ ವಿಠಲನ ಭಜನೆ ಆರಂಭ ಮಾಡಿದರು ಎಂದರೆ, ಅವರು ಡಬ್ಬಾವಾಲಾಗಳು ಎಂದೇ ಅರ್ಥ.

ಹೀಗಿರುವಾಗ, ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಇವರೆಲ್ಲ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಲಾಕ್‌ಡೌನ್‌ನಿಂದಾಗಿ ಇವರೆಲ್ಲ ಕೆಲಸವಿಲ್ಲದೆ ಮನೆಯ ಉಳಿಯುವಂತಾಗಿತ್ತು. ಯಾರೂ ಕೆಲಸಕ್ಕೆ ಹೋಗದಿದ್ದಾಗ, ಕೆಲಸ ಆರಂಭವಾದ ಮೇಲೂ ಮನೆಯಿಂದಲೇ ಕೆಲಸ ಮಾಡು ವಂತಾದಾಗ (ವರ್ಕ್ ಫ್ರಮ್ ಹೋಮ) ಊಟ ತಲುಪಿಸುವ ಕೆಲಸವೇ ಇರಲಿಲ್ಲ. ಈಗ ಕೋವಿಡ್ ಇಲ್ಲದಿದ್ದರೂ ಮನೆಯಿಂದ ಕೆಲಸ ಮಾಡುವ ಪರಿಪಾಠ ಮುಂದುವರಿದಿದೆ.

ಕೋವಿಡ್ ಸಂದರ್ಭದಲ್ಲಿ ನಾಲ್ಕು ಸಾವಿರ ಜನ ಡಬ್ಬಾವಾಲಾಗಳು ಕೆಲಸವಿಲ್ಲದೆ ಮನೆಯಲ್ಲಿ ಕುಳಿತುಕೊಂಡಿದ್ದರು ಎಂದು ಒಂದು ವರದಿ ಹೇಳುತ್ತದೆ. ಆ ಸಂದರ್ಭದಲ್ಲಿ ತಮ್ಮ ಹೊಟ್ಟೆಪಾಡಿ ಗಾಗಿ ಡ್ರೈವರ್ ಕೆಲಸವನ್ನೋ, ವಾಚ್‌ಮನ್ ಕೆಲಸವನ್ನೋ, ಬೀದಿಬದಿಯಲ್ಲಿಯ ವ್ಯಾಪಾರವನ್ನೋ ಆರಂಭಿಸಿಕೊಂಡ ಡಬ್ಬಾವಾಲಾಗಳೂ ಸಾಕಷ್ಟು ಇದ್ದಾರೆ.

ಈಗ ಮುಂಬೈನಲ್ಲಿ ಡಬ್ಬಾವಾಲಾಗಳು ಇದ್ದರೂ, ಮೊದಲಿನಂತೆ ಜನ ತಮ್ಮನ್ನು ಅದರಲ್ಲಿ ತೊಡಗಿಸಿಕೊಳ್ಳುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಏನೇ ಇದ್ದರೂ, ಅಂಥವ ರನ್ನು ನೆನಪಿಸಿಕೊಳ್ಳುವ ದೃಷ್ಟಿಯಿಂದ, ಅಂಥವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಐಬಿಸ್ ಹೋಟೆಲ್ ತನ್ನ ಕೊಠಡಿಯ ಗೋಡೆಗೆ ಅವರ ಚಿತ್ರ ಬರೆದಿದ್ದು ಕಂಡು ನಿಜಕ್ಕೂ ಮನಸ್ಸು ಆರ್ದ್ರವಾಯಿತು.