ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rangaswamy Mookanahalli Column: ಸದ್ವಿಚಾರಗಳಿಗೆ ಸಮಯದ ಹಂಗಿಲ್ಲ!

ಕಂಡದ್ದೆಲ್ಲ ಬೇಕು ಎನ್ನುವುದು, ಕೈಯಲ್ಲಿ ಕೆಲಸ ಮಾಡುತ್ತಿರುವ ಫೋನ್ ಇದ್ದು ಕೂಡ ಹೊಸ ವರ್ಷನ್ ಫೋನ್ ಬಂದಿದೆ, ಅದು ಬೇಕು ಎನ್ನುವುದು ವಾಂಟ್ಸ್ ಲೆಕ್ಕಾಚಾರದಲ್ಲಿ ಬರುತ್ತದೆ. ಕೈಯಲ್ಲಿ ಫೋನ್ ಇಲ್ಲ ಹೀಗಾಗಿ ಫೊನ್ ಬೇಕು ಎನ್ನುವುದು ಇವತ್ತಿಗೆ ನೀಡ್, ಅವಶ್ಯಕತೆ ಎನ್ನಿಸಿ ಕೊಂಡಿದೆ. ಇದೇ ವಿಚಾರ ವನ್ನು ನಾವು ಎಲ್ಲದಕ್ಕೂಅಳವಡಿಸಿ ನೋಡಬೇಕು.

Rangaswamy Mookanahalli Column: ಸದ್ವಿಚಾರಗಳಿಗೆ ಸಮಯದ ಹಂಗಿಲ್ಲ!

-

ವಿಶ್ವರಂಗ

ಮಿಲೆನಿಯಲ್ಸ್ ಮತ್ತು ಜನರೇಷನ್ ಎಕ್ಸ್ ಸಮಯದಲ್ಲಿ ತಂತ್ರಜ್ಞಾನ ಬದುಕನ್ನು ಪೂರ್ಣ ಅವರಿಸಿಕೊಂಡಿರಲಿಲ್ಲ. ಇವತ್ತಿನ ಜೆನ್ ಝಿ ಮತ್ತು ಅಲಾ ಮೊಬೈಲ್ ಕೈಯಲ್ಲಿ ಹಿಡಿದು ಜನಿಸಿದ್ದಾರೆ ! ಅವರಿಗೆ ಎಐ ಕೂಡ ಸಾಥ್ ನೀಡುತ್ತಿದೆ. ಈ ಜನರೇಷನ್‌ನ ಮಕ್ಕಳಿಗೆ ಮನೆ ಯಿಂದ ಹೊರಗೆ ಹೋಗುವುದಕ್ಕೆ ಬೇಸರ. ಎಲ್ಲವೂ ಕೇವಲ ಒಂದು ಬಟನ್ ಒತ್ತುವು ದರಿಂದ ಆಗುತ್ತದೆ. ಮತ್ತೇಕೆ ಹೊರಹೋಗಬೇಕು? ಮತ್ತೇಕೆ ಇಲ್ಲದ ಕಷ್ಟ ಪಡಬೇಕು? ಎನ್ನುವ ಮಟ್ಟಕ್ಕೆ ಬಂದಿದ್ದಾರೆ.

ಇವತ್ತಿನ ಯುವ ಜನತೆ ಜೆನ್ ಝಿ ಚಿಂತಿಸುವ ರೀತಿಗೂ ಅದಕ್ಕಿಂತ ಒಂದು ತಲೆಮಾರು ಮಿಲೆನಿ ಯಲ್ಸ್ ಮತ್ತು ಜನರೇಷನ್ ಎಕ್ಸ್ ಚಿಂತಿಸುತ್ತಿದ್ದ ರೀತಿಗೂ ಅಜಗಜಾಂತರವಿದೆ. ಅವತ್ತಿನ ಸನ್ನಿವೇಶ ಕ್ಕೂ, ಇವತ್ತಿನ ಸನ್ನಿವೇಶಕ್ಕೂ ಸಹ ಭೂಮಿ ಮತ್ತು ಆಕಾಶದಷ್ಟು ಅಂತರವಿದೆ. ತಿನ್ನುವ ಆಹಾರ ದಿಂದ, ಹಾಕುವ ಬಟ್ಟೆಯವರೆಗೂ ಬದಲಾವಣೆಯಾಗಿದೆ. ಈ ಎಲ್ಲ ಬದಲಾವಣೆಗಳ ನಡುವೆ ಕೂಡ ಕೆಲವು ಮೂಲಭೂತ ವಿಚಾರಗಳಲ್ಲಿ ಬದಲಾವಣೆಯಾಗುವಂತಿಲ್ಲ! ಬದಲಾವಣೆ ಮಾಡಿಕೊಂಡರೆ ಅದು ಅದಕ್ಕೆ ತಕ್ಕ ಫಲಿತಾಂಶವನ್ನು ನೀಡುತ್ತದೆ.

ಹೀಗಾಗಿ ಸಮಯ ಅದೆಷ್ಟೇ ಬದಲಾಗಿದೆ ಎಂದರೂ ಭೂಮಿಯ ಮೇಲೆ ಕೆಲವು ವಿಚಾರಗಳು ಬದಲಾಗುವುದಿಲ್ಲ. ನಾವು ಹೊಸ ತಲೆಮಾರಿನ ಜನ ಎನ್ನುವ ಹುಂಬತನದದಲ್ಲಿ ಈ ಬೇಸಿಕ್ಸ್ ವಿರುದ್ಧ ಹೋಗುತ್ತಿರುವ ಜೆನ್ ಝಿ ಮತ್ತು ಜೆನ್ ಅಲಾಗಳಿಗೆ ಈ ಲೇಖನ. ಈ ಲೇಖನವನ್ನು ಓದುತ್ತಿರುವ ಮಿಲೆನಿಯಲ್ಸ್ ಮತ್ತು ಜನರೇಷನ್ ಎಕ್ಸ್ ಇದನ್ನು ತಮ್ಮ ಮಕ್ಕಳಿಗೆ ತಲುಪಿಸ ಬಹುದು.

ಇವತ್ತಿನ ಹೊಸ ತಲೆಮಾರಿನ ಮಕ್ಕಳು ತಮಗೆ ಸಿಕ್ಕಿರುವ ಸೌಲಭ್ಯಕ್ಕೆ ನಾವು ಹಕ್ಕುದಾರರು ಎನ್ನು ವಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಅವಶ್ಯಕತೆ, ನೀಡ್ಸ್ ಮತ್ತು ಬೇಕುಗಳು ಅಂದರೆ ವಾಂಟ್ಸ್ ನಡುವಿನ ವ್ಯತ್ಯಾಸ ಗೊತ್ತಾಗುತ್ತಿಲ್ಲ. ಎಲ್ಲಕ್ಕೂ ಮೊದಲಿಗೆ ಜನರೇಷನ್ ಎಕ್ಸ್ ಮತ್ತು ಮಿಲೆನಿಯಲ್ಸ್ ತಮ್ಮ ಮಕ್ಕಳಿಗೆ ನೀಡ್ಸ್ ಮತ್ತು ವಾಂಟ್ಸ್ ನಡುವಿನ ಅಂತರವನ್ನು ಹೇಳಿಕೊಡಬೇಕಿದೆ.

ಕಂಡದ್ದೆಲ್ಲ ಬೇಕು ಎನ್ನುವುದು, ಕೈಯಲ್ಲಿ ಕೆಲಸ ಮಾಡುತ್ತಿರುವ ಫೋನ್ ಇದ್ದು ಕೂಡ ಹೊಸ ವರ್ಷನ್ ಫೋನ್ ಬಂದಿದೆ, ಅದು ಬೇಕು ಎನ್ನುವುದು ವಾಂಟ್ಸ್ ಲೆಕ್ಕಾಚಾರದಲ್ಲಿ ಬರುತ್ತದೆ. ಕೈಯಲ್ಲಿ ಫೋನ್ ಇಲ್ಲ ಹೀಗಾಗಿ ಫೊನ್ ಬೇಕು ಎನ್ನುವುದು ಇವತ್ತಿಗೆ ನೀಡ್, ಅವಶ್ಯಕತೆ ಎನ್ನಿಸಿ ಕೊಂಡಿದೆ. ಇದೇ ವಿಚಾರವನ್ನು ನಾವು ಎಲ್ಲದಕ್ಕೂಅಳವಡಿಸಿ ನೋಡಬೇಕು.

ಅವಶ್ಯಕತೆ ಪೂರೈಸಿಕೊಳ್ಳುವುದು ಸರಿ, ಬೇಕುಗಳ ಹಿಂದೆ ಬೀಳುವುದು ತಪ್ಪು. ಇದು ಅದೆಷ್ಟೇ ತಲೆಮಾರು ಬದಲಾದರೂ ಬದಲಾಗದೆ ಉಳಿದುಕೊಳ್ಳುವ ನಿಯಮ. ನಿಯಮ ಬದಲಿಸಿಕೊಂಡರೆ ಬದುಕು ಬದಲಾಗುತ್ತದೆ. ಹೀಗಾಗಿ ಎಚ್ಚರವಿರಲಿ.

ಇದನ್ನೂ ಓದಿ: Rangaswamy Mookanahalli Column: ನೈತಿಕತೆ ಬೇರೆಯವರಿಗೆ ನೀತಿಪಾಠವಾದರೆ ಸಾಕೆ ?

ಕಳೆದ ಎರಡು ತಲೆಮಾರು ವಿದ್ಯಾಭ್ಯಾಸವನ್ನು ಬಹಳ ಸೀರಿಯಸ್ಸಾಗಿ ತೆಗೆದುಕೊಂಡಿದ್ದರ ಫಲವಾಗಿ ಇಂದು ಜೆನ್ ಝಿ ಮತ್ತು ಅಲಾ ಉತ್ತಮ ಗುಣಮಟ್ಟದ ಜೀವನವನ್ನು ಆಸ್ವಾದಿಸಲು ಸಾಧ್ಯವಾಗಿದೆ. ಇವತ್ತಿನ ಈ ಎರಡು ತಲೆಮಾರಿನ ಮಕ್ಕಳು ತಮ್ಮದಲ್ಲದ ಪರಿಶ್ರಮದಿಂದ ಸಿಕ್ಕಿರುವ ಸೌಲಭ್ಯವನ್ನು ಬಳಸಿಕೊಂಡು ಅದನ್ನೇ ಬದುಕು, ಸ್ವಾತಂತ್ರ್ಯ ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.

ಎಲ್ಲಾ ಒಂದೆರಡು ಪ್ರತಿಶತ ಮಕ್ಕಳನ್ನು ಬಿಟ್ಟರೆ ಉಳಿದ ಮಕ್ಕಳಿಗೆ ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೆಟರ್ ಆಗಬೇಕು, ರಾತ್ರಿ ಕಳೆದು ಬೆಳಕಾಗುವುದರಲ್ಲಿ ಹಣವಂತರೂ, ಪ್ರಸಿದ್ಧರು ಆಗಬೇಕು ಎನ್ನುವ ತವಕ ಹೆಚ್ಚಾಗಿದೆ. ವಿದ್ಯಾಭ್ಯಾಸ ಬ್ಯಾಕ್ ಸೀಟು ಪಡೆದುಕೊಂಡಿದೆ. ಇನ್ನು ಮುಂದಕ್ಕೆ ನೂರು ತಲೆಮಾರು ಕಳೆದರೂ ಕಲಿಕೆ ಎನ್ನುವುದು ಹಳತಾಗುವುದಿಲ್ಲ. ಅದು ಎಂದಿಗೂ ಔಟ್‌ಡೇಟೆಡ್ ಆಗುವುದಿಲ್ಲ. ಕಲಿಕೆ ಎನ್ನುವುದು ನಿರಂತರ ಕ್ರಿಯೆ. ಇವತ್ತಿನ ಜೆನ್ ಝಿ ಮತ್ತು ಅಲಾ ಎಜುಕೇಶನ್ ಎನ್ನುವುದನ್ನು ಇನ್ನಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳಬೇಕಿದೆ.

ಇವತ್ತಿನ ತಲೆಮಾರಿನ ಯುವಕ, ಯುವತಿಯರು ಹೇಗೆ ಕಾಣುತ್ತೇವೆ ಎನ್ನುವುದರ ಬಗ್ಗೆ ಬಹಳ ಗಮನ ನೀಡುತ್ತಿದ್ದಾರೆ. ಅಂದರೆ ಜಿಮ್ ಇತ್ಯಾದಿ ದೈಹಿಕ ಕಸರತ್ತು ಮಾಡುತ್ತಿದ್ದಾರೆ. ಆದರೆ, ಆರೋಗ್ಯದ ಬಗ್ಗೆ ಹೆಚ್ಚು ಗಮನವಿಲ್ಲ. ಆ ಕ್ಷಣಕ್ಕೆ ದೇಹ ಸದೃಢವಾಗಿ ಕಾಣುವುದರಿಂದ ಯಾವ ಪ್ರಯೋಜನವೂ ಇಲ್ಲ. ಆ ಕ್ಷಣದಲ್ಲಿ ಹತ್ತಾರು ಜನ ಚಪ್ಪಾಳೆ ಹೊಡೆಯಬಹುದು.

ಆರೋಗ್ಯ ಎನ್ನುವುದು ಬದುಕಿನಲ್ಲಿ ಎಂದಿಗೂ ಬದಲಾಗದ ನಿಯಮ. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು, ಅಂದರೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ಎಂದಿಗೂ ಔಟ್ ಆಫ್ ಫ್ಯಾಷನ್ ಆಗುವುದಿಲ್ಲ.

7ok

ಇವತ್ತಿನ ದಿನದಲ್ಲಿ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಲೈಫ್ ಸ್ಟೈಲ್ ಕಾರಣ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನಿದ್ದೆ ಮಾಡದೆ ಮಧ್ಯರಾತ್ರಿವರೆಗೂ ಎದ್ದಿರುವುದು, ಪಾರ್ಟಿ ಮಾಡುವುದು, ಅಶಿಸ್ತು, ಸಮಯವಲ್ಲದ ಸಮಯದಲ್ಲಿ ತಿನ್ನುವುದು, ಕುಡಿಯುವುದು ಇವೆಲ್ಲವನ್ನೂ ನಾರ್ಮಲೈಸ್ ಮಾಡಲಾಗಿದೆ. ಇವೆಲ್ಲವೂ ಸಹಜ ಎನ್ನುವಂತೆ ಈಗಿನ ತಲೆಮಾರು ಅಂದುಕೊಂಡಿದೆ. ಲಯ ತಪ್ಪಿದರೆ ಏನಾಗುತ್ತದೆ? ಅದಾಗುತ್ತಿದೆ.

ಹೀಗಾಗಿ ಎಚ್ಚರ, ಆರೋಗ್ಯವಿಲ್ಲದ ಯಾವ ಯಶಸ್ಸು ಕೂಡ ಯಶಸ್ಸಲ್ಲ. ಅದನ್ನು ಆಸ್ವಾದಿಸಲು ಕೂಡ ಆರೋಗ್ಯ ಬೇಕು.ಕಳೆದೆರಡು ತಲೆಮಾರಿನ ಜನ ಹಣಕಾಸಿನ ವಿಚಾರದಲ್ಲಿ ಬಹಳಷ್ಟು ಜಾಗರೂಕತೆಯಿಂದ ಇದ್ದರು. ಇಲ್ಲದ ಸಮಯದಲ್ಲಿ, ಅಭಾವದ ಕಾಲದಲ್ಲಿ ಹುಟ್ಟಿದ ಕಾರಣ ಅವರಿಗೆ ಹಣವನ್ನು ಕಂಡರೆ ಒಂದು ರೀತಿಯ ಭಯ, ಗೌರವ! ಆದರೆ ಈಗಿನ ಎರಡು ತಲೆಮಾರಿನ ಮಕ್ಕಳು ಹಣವಿರುವುದು ಕೇವಲ ಖರ್ಚು ಮಾಡುವುದಕ್ಕೆ ಎನ್ನುವ ಹುಚ್ಚಾಟಕ್ಕೆ ಬಿದ್ದಿದ್ದಾರೆ.

ಕಳೆದೆರಡು ತಲೆಮಾರಿನಲ್ಲಿ ಕೆಲಸ ಬಿಡುವುದು, ಹೆಚ್ಚು ಖರ್ಚು ಮಾಡುವುದು ತಪ್ಪು ಎನ್ನುವಂತೆ ನೋಡಲಾಗುತ್ತಿತ್ತು. ಇವತ್ತಿನ ಮಕ್ಕಳಿಗೆ ಯಾವುದೂ ಲೆಕ್ಕಕ್ಕಿಲ್ಲ. ಕೆಲಸ ಮಾಡುವ ಸ್ಥಳದಲ್ಲಿ ಸಣ್ಣ ಅಡಚಣೆ ಉಂಟಾದರೂ ಸಾಕು, ಆ ಕ್ಷಣದಲ್ಲಿ ಕೆಲಸ ಬಿಟ್ಟು ಬರುತ್ತಾರೆ. ಹಣವಂತೂ ಬಂದದ್ದಕ್ಕೂ, ಹೋದದ್ದಕ್ಕೂ ಲೆಕ್ಕವಿಲ್ಲ ಎನ್ನುವಂತಾಗಿದೆ.

ಎಲ್ಲಿಯವರೆಗೆ ಕೈಯಲ್ಲಿ ಹಣದ ಹರಿವಿರುತ್ತದೆ ಅಲ್ಲಿಯವರೆಗೆ ಇದ್ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಇಂದಿನ ತಲೆಮಾರಿನ ಮಕ್ಕಳು ಫೈನಾನ್ಷಿಯಲ್ ಲೈಫ್ ಬಗ್ಗೆ ಕೂಡ ಚೂರು ಎಚ್ಚರವಹಿಸಬೇಕಿದೆ. ಕಾಣದ ನಾಳೆಗಾಗಿ ಉಳಿಸುವುದೇಕೆ ಎನ್ನುವುದು ಬಹಳಷ್ಟು ಜೆನ್ ಝಿ ಮತ್ತು ಅಲಾಗಳ ವಿಚಾರ.

ಹೌದು. ಕಾಣದ ನಾಳೆಗಾಗಿ ಇಂದಿನ ಸುಖವನ್ನು ಖಂಡಿತ ಬಿಡಬೇಕು ಎಂದಿಲ್ಲ. ಪುಟಾಣಿ ಇರುವೆ ಕೂಡ ಮಳೆಗಾಲಕ್ಕೆ ಎಂದು ಕಾಳುಕಡ್ಡಿ ಸಂಗ್ರಹಿಸುತ್ತದೆ ಎನ್ನುವುದು ನೆನಪಿರಲಿ. ಹೆಚ್ಚು ಬೇಡ ದುಡಿದದ್ದರಲ್ಲಿ 20 ಪ್ರತಿಶತ ಕಾಣದ ನಾಳೆಗೆ ಉಳಿಸಿ. ಅದು ನಿಮ್ಮ ತಲೆ ಕಾಯುತ್ತೆ.

ಉಡಾಫೆ, ಉದಾಸೀನತೆ ಈಗಿನ ತಲೆಮಾರಿನ ಇನ್ನೊಂದು ಟ್ರೇಡ್ ಮಾರ್ಕ್! ವಿನಯ, ವಿಧೇಯತೆ, ಹಿರಿಯರಿಗೆ ಗೌರವ ನೀಡುವುದು, ಉತ್ತಮ ಭಾಷೆಯ ಬಳಕೆ, ಒಳ್ಳೆಯತನ ಎಂದಿಗೂ ಔಟ್‌ಡೇಟೆಡ್ ಆಗುವುದಿಲ್ಲ. ಯಾರೆಷ್ಟೇ ಇವತ್ತಿನ ಸಮಾಜದಲ್ಲಿ ಕೆಟ್ಟವರಿಗೆ ಬೆಲೆ ಹೆಚ್ಚು, ಒಳ್ಳೆಯವರಾಗಿದ್ದರೆ ಪ್ರಯೋಜನವಿಲ್ಲ ಎಂದು ಹೇಳಲಿ. ಅದು ಸುಳ್ಳು ಮತ್ತು ದೊಡ್ಡ ಸುಳ್ಳು. ಪ್ರಕೃತಿ ಒಳ್ಳೆಯತನಕ್ಕೆ ರಿವಾರ್ಡ್ ಕೊಡಲು ಕಾಯುತ್ತ ಕುಳಿತಿರುತ್ತದೆ.

ಎಲ್ಲರೂ ಮಾಡಿದರು ಎಂದು ನಾವೂ ಅದನ್ನು ಮಾಡಬೇಕಾಗಿಲ್ಲ. ಆಟಿಟ್ಯೂಡ್ ಬಹಳ ಮುಖ್ಯ. ಉತ್ತಮ ನಡವಳಿಕೆ ಉಳ್ಳವರಿಗೆ ನೂರಾರು ಬಾಗಿಲು ತೆರೆದುಕೊಳ್ಳುತ್ತದೆ. ತಕ್ಷಣದಲ್ಲಿ ಗೆದ್ದಂತೆ ಭಾಸವಾಗುವ ಉಡಾಫೆ, ಸೋಮಾರಿತನಗಳಿಗೆ ದೀರ್ಘಾವಧಿಯಲ್ಲಿ ಸಿಗುವುದು ಕೇವಲ ಹೀಯಾಳಿಕೆ ಎನ್ನುವುದು ಮರೆಯುವುದು ಬೇಡ. ಹೀಗಾಗಿ ಸನ್ನಡತೆಯ ಕಡೆಗೆ ಇವತ್ತಿನ ಜನತೆಗೆ ಹೆಚ್ಚಿನ ಒಲವು ಮೂಡಿಸುವುದು ಮತ್ತು ಒಳ್ಳೆಯ ಗುಣ, ನಡವಳಿಕೆಯನ್ನು ನಾರ್ಮಲೈಸ್ ಮಾಡುವ ಪ್ರಯತ್ನ ನಾವು ಮಾಡಬೇಕಿದೆ.

ದೊಡ್ಡ ದೊಡ್ಡ ವಿಚಾರಗಳಲ್ಲಿ ತೋರುವ ಆಸಕ್ತಿ, ಶ್ರದ್ಧೆಯನ್ನು ನಾವು ಸಣ್ಣ ವಿಚಾರದಲ್ಲಿ ಕೂಡ ತೋರಿಸುವುದು ಈಗಿನ ಮಕ್ಕಳಿಗೆ ಕಲಿಸಬೇಕಿದೆ. ಬದುಕಿಗೆ ಸಾಫ್ಟ್ ಸ್ಕಿಲ್ಸ್ ಅಗತ್ಯವನ್ನು ಕೂಡ ನಾವು ತಿಳಿಹೇಳಬೇಕಿದೆ. ಮಾತನಾಡುವ ರೀತಿ, ಕ್ಷಮೆ ಕೇಳುವುದು, ತಪ್ಪಿದ್ದರೆ ತಿದ್ದಿಕೊಳ್ಳುವುದು, ಟೀಮ್ ವರ್ಕ್, ವರ್ಕ್ ಎಥಿಕ್ಸ್, ಲೀಡರ್‌ಶಿಪ್ ಗುಣಗಳು ಇವೆಲ್ಲವೂ ಬದುಕಿಗೆ ಬಹಳ ಮುಖ್ಯ.

ಟೆಕ್ನಿಕಲ್ ಸ್ಕಿಲ್ಸ್‌ ನಮಗೆ ಕೆಲಸ ಕೊಡಿಸಬಹುದು. ಆದರೆ ಸಾಫ್ಟ್ ಸ್ಕಿಲ್ ಮೂಲಕ ನಾವು ಸಹೋ ದ್ಯೋಗಿಗಳ ಮನಸ್ಸು ಗೆಲ್ಲಬಹುದು. ನಿಜವಾದ ಜಯ ಬದುಕಿನಲ್ಲಿ ಸಿಗುವುದು ನಮ್ಮ ಗೆಲುವಿನಿಂದ ಮಾತ್ರವಲ್ಲ, ಅದು ನಮ್ಮ ಸುತ್ತಮುತ್ತಲಿನ ನಾಲ್ಕು ಜನರ ಮುಖದಲ್ಲಿ ಕೂಡ ನಗು ಸೃಷ್ಟಿಸಿದಾಗ ಸಿಗುವುದು ನಿಜವಾದ ಯಶಸ್ಸು, ಜಯ. ಮಿಲೆನಿಯಲ್ಸ್ ಮತ್ತು ಜನರೇಷನ್ ಎಕ್ಸ್ ಸಮಯದಲ್ಲಿ ತಂತ್ರಜ್ಞಾನ ಬದುಕನ್ನು ಪೂರ್ಣ ಅವರಿಸಿಕೊಂಡಿರಲಿಲ್ಲ. ಇವತ್ತಿನ ಜೆನ್ ಝಿ ಮತ್ತು ಅಲ್ಫಾ ಮೊಬೈಲ್ ಕೈಯಲ್ಲಿ ಹಿಡಿದು ಜನಿಸಿದ್ದಾರೆ ! ಅವರಿಗೆ ಎಐ ಕೂಡ ಸಾಥ್ ನೀಡುತ್ತಿದೆ.

ಈ ಜನರೇಷನ್‌ನ ಮಕ್ಕಳಿಗೆ ಮನೆಯಿಂದ ಹೊರಗೆ ಹೋಗುವುದಕ್ಕೆ ಬೇಸರ. ಎಲ್ಲವೂ ಕೇವಲ ಒಂದು ಬಟನ್ ಒತ್ತುವುದರಿಂದ ಆಗುತ್ತದೆ. ಮತ್ತೇಕೆ ಹೊರಹೋಗಬೇಕು? ಮತ್ತೇಕೆ ಇಲ್ಲದ ಕಷ್ಟ ಪಡಬೇಕು? ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಈ ಕಾರಣದಿಂದ ಸಂಬಂಧಗಳು ಹಳಸಿಕೊಳ್ಳ ತೊಡಗಿವೆ.

ಹಿಂದೆಲ್ಲ ಯಾವುದು ಸಹಜವೂ, ಸರಳವೂ ಆಗಿತ್ತು, ಅವು ಇಂದಿಗೆ ಬಹಳ ಶ್ರಮ ಪಡುವುದರಿಂದ ಆಗುತ್ತಿದೆ. ನೆಟ್‌ವರ್ಕ್ ಎನ್ನುವುದು ರಿಯಲ್‌. ನಿಜವಾದ ಮನುಷ್ಯ ಸಂಪರ್ಕ ಬೇಕು. ಅದಿಲ್ಲದ ಕೇವಲ ಯಂತ್ರಗಳ ಒಡನಾಟದಿಂದ ಬದುಕು ಪರಿಪೂರ್ಣವಾಗುವುದಿಲ್ಲ. ಹೀಗಾಗಿ ಈಗಿನ ತಲೆಮಾರಿನ ಮಕ್ಕಳಿಗೆ ಮೊಬೈಲ್ ಪರದೆಯಿಂದ ಮುಖ ಎತ್ತುವಂತೆ, ಜನರೊಂದಿಗೆ ಬೆರೆತು ಮಾತಾಡುವಂತೆ ಮಾಡುವುದು ಕೂಡ ಇವತ್ತಿನ ಪ್ರಮುಖ ಕರ್ತವ್ಯವಾಗಿದೆ.

ಇವುಗಳ ಜತೆಗೆ ಈ ತಲೆಮಾರಿನ ಇನ್ನೊಂದು ವಿಚಾರ ಕೂಡ ನಾವು ಗಮನಿಸಬೇಕಿದೆ. ಈಗಿನ ತಲೆಮಾರಿನ ಮುಂದೆ ಆಯ್ಕೆಗಳು ಹೆಚ್ಚಾಗಿವೆ. ಆಯ್ಕೆ ಹೆಚ್ಚಾದಷ್ಟೂ ಮನುಷ್ಯನ ಡೌಟ್ಸ್ ಹೆಚ್ಚಾಗುತ್ತೆ. ಕಳೆದ ಎರಡು ತಲೆಮಾರಿನ ಮುಂದೆ ಆಯ್ಕೆಗಳು ಕಡಿಮೆ ಇದ್ದವು, ಅಷ್ಟರಮಟ್ಟಿಗೆ ನಿಖರತೆಯಿತ್ತು. ನೆಮ್ಮದಿಯಿತ್ತು.

ಇವತ್ತು ನೂರು ಕೋರ್ಸುಗಳು ಇವೆ. ನೂರಾರು ಚಾನಲ್‌ಗಳಿವೆ. ಯಾವ ಕೋರ್ಸ್ ತೆಗೆದುಕೊಳ್ಳು ವುದು? ಏನನ್ನು ಓದುವುದು? ಯಾವ ಚಾನಲ್ ನೋಡೋಣ? ಯಾವ ಪ್ರೋಗ್ರಾಮ್? ಆಯ್ಕೆ ಹೆಚ್ಚಾದಷ್ಟೂ ಸಂಶಯ ಹೆಚ್ಚು. ನಿಖರತೆಯಿಲ್ಲದೆ ಇದ್ದಾಗ ವೇಳೆ ಕೂಡ ಹೆಚ್ಚು ವ್ಯಯವಾಗುತ್ತದೆ. ಏನು ಮಾಡೋಣ ಎನ್ನುವ ಪ್ರಶ್ನೆಯ ಜತೆಗೆ ಸಮಯ ಕಳೆಯುವುದು ಹೆಚ್ಚಾಗಿದೆ.

ಸಮಯವನ್ನು ನಮ್ಮ ಅನುಕೂಲಕ್ಕೆ ದುಡಿಸಿಕೊಳ್ಳುವುದರ ಬದಲು, ವೇಳೆಯನ್ನು ಪೋಲು ಮಾಡುವುದರಲ್ಲಿ ಈ ತಲೆಮಾರು ವ್ಯಸ್ತರಾಗಿದ್ದಾರೆ. ಮೇಲಿನ ಎಲ್ಲ ವಿಚಾರಗಳಲ್ಲಿ ನಮ್ಮ ಪಾತ್ರವೂ ಉಂಟು! ಎಲ್ಲವನ್ನೂ ನಾವು ಸಮಯದ ಹೆಸರು ಹೇಳಿ, ಜನರೇಷನ್ ಹೆಸರು ಹೇಳಿ ಬಿಟ್ಟ ಪರಿಣಾಮ ಇವತ್ತಿನ ದಿನವನ್ನು ನಾವು ನೋಡುತ್ತಿದ್ದೇವೆ. ನಾವು ಸಂಕಷ್ಟಗಳನ್ನು ಎದುರಿಸಿ ಬದುಕನ್ನು ಕಟ್ಟಿಕೊಂಡೆವು.

ನಮ್ಮ ಮಕ್ಕಳಿಗೆ ಸಂಕಷ್ಟದ ಅರಿವು ಕೂಡ ಇಲ್ಲದಂತೆ ಬೆಳೆಸಿದ್ದೇವೆ, ಬೆಳೆಸುತ್ತಿದ್ದೇವೆ. ಇದು ಯಾರ ತಪ್ಪು? ಅವರು ಕೇಳುವುದಕ್ಕೆ ಮುಂಚೆ, ಕೇಳುವುದಕ್ಕಿಂತ ಹೆಚ್ಚು ಅವರಿಗೆ ನೀಡಿದ್ದೇವೆ. ಅಭಾವ ಎಂದರೇನು ಎನ್ನುವುದು ಅವರಿಗೆ ಗೊತ್ತಾಗದಂತೆ ಮಾಡಿದ್ದೇವೆ. ಆಮೇಲೆ ಮಕ್ಕಳಿಗೆ ವಸ್ತುವಿನ ಮೌಲ್ಯ ಗೊತ್ತಿಲ್ಲ ಎಂದು ಹೇಳುತ್ತೇವೆ.

ಇದು ಯಾರ ತಪ್ಪು? ಮಕ್ಕಳಿಗೆ ಋಣಾತ್ಮಕ ಅಂಶವನ್ನು ಹೇಳಬಾರದು ಎನ್ನುವ ಜಿದ್ದಿಗೆ ಬಿದ್ದು, ಯಸ್ ಅಪ್ಪಗಳು, ಅಮ್ಮಗಳು ಆಗಿದ್ದೇವೆ. ನೋ ಎನ್ನಬೇಕಾದಾಗ ನೋ ಅನ್ನದೆ ಇದ್ದುದರ ಫಲ ಇನ್ನೇನಾಗಲು ಸಾಧ್ಯ? ಈಗಲೂ ಕಾಲ ಮಿಂಚಿಲ್ಲ. ಎಲ್ಲವನ್ನೂ ಕಾಲದ ಮಹಿಮೆ, ಈಗಿನ ಮಕ್ಕಳೇ ಹೀಗೆ ಎನ್ನುವುದರ ಬದಲು ಎದ್ದು ನಿಂತು ಮಕ್ಕಳಿಗೆ ‘ಕೆಲವು ವಿಚಾರಗಳು ಎವರ್‌ಗ್ರೀನ್ ಮಕ್ಕಳೇ, ಅವು ಎಂದಿಗೂ ಬದಲಾಗುವುದಿಲ್ಲ. ಅವುಗಳನ್ನು ಪಾಲಿಸುವುದರಲ್ಲಿ ನಮ್ಮೆಲ್ಲರ ಒಳಿತೂ ಅಡಗಿದೆ’ ಎಂದು ನೋಡಿ. ಅವು ಈಗಿನ ಕಾಲದ ಮಕ್ಕಳು ಬೇಗ ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವ ನಂಬಿಕೆ ನನ್ನದು.